‘ದಂಗೆಯ ದಿನಗಳು’ ಓದಿದ್ರಾ?

27 04 2008

ಇತಿಹಾಸವೆಂದರೆ ನಮ್ಮ ಪಾಲಿಗೆ ಬರೀ ರಾಜರುಗಳು ಸತ್ತ, ಹುಟ್ಟಿದ ಇಸವಿಗಳನ್ನು, ಯುದ್ಧ ನಡೆದ ದಿನಾಂಕಗಳನ್ನು ಬಾಯಿಪಾಠ ಮಾಡುವ ನೀರಸ ಪ್ರಕ್ರಿಯೆ. ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಓದಿರುವುದು - ಉರು ಹೊಡೆದು ಪರೀಕ್ಷೆಗಳಲ್ಲಿ ಕಾರಿಕೊಂಡಿದ್ದೂ ಇದನ್ನೇ. ಆದರೆ ಇತಿಹಾಸವೆಂದರೆ ಬರೀ ಇಷ್ಟೇ ಅಲ್ಲ. ಸ್ವಾರಸ್ಯಕರವಾಗಿ, ಯಥಾವತ್ತಾಗಿ ಘಟನೆಗಳನ್ನು ಮಂಡಿಸಿದರೆ ಓದುವವರ ಪಾಲಿಗೆ ರಸಗವಳವಾಗಬಲ್ಲುದು ಅಂತ ರವಿ ಬೆಳಗೆರೆ ನಿರೂಪಿಸಿದ್ದಾರೆ. ಮನೋಹರ್ ಮಳಗಾಂವಕರ್ ಕೃತಿಯನ್ನು ಸೊಗಸಾಗಿ ಅನುವಾದಿಸಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ ದಂಗೆಯ ದಿನಗಳು ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

 

ನಾನಾ ಸಾಹೇಬನ ನಿರೂಪಣೆಯ ಮಾತಿನಲ್ಲಿ ೧೮೫೭ರ ಮಹಾದಂಗೆಯ ಕಾಲದ ಘಟನೆಗಳನ್ನು, ಆವತ್ತಿನ ಕ್ಷೋಭೆ, ತಳಮಳ, ವಿದ್ರೋಹ, ಬ್ರಿಟೀಷರ ಅನಾಚಾರ ಇವನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತದೆ ಈ ಕೃತಿ. ಎರಡನೆ ಬಾಜೀರಾಯ, ಅವನ ದತ್ತು ಮಗ ನಾನಾ ಸಾಹೇಬ, ತಾಂತ್ಯಾ ಭಟ್ಟ, ಅಜೀಮ, ಚಂಪಾ, ಅಜೀಜಾನ್, ಜಯಾಜಿ ಸಿಂಧಿಯಾ, ಬೇಗಮ್ ಹಜರತ್ ಮಹಲ್, ವೀಲರ್, ಎಲೀಜಾ, ಮೈಕೆಲ್ ಪಾಮರ್.. ಹೀಗೆ ಆ ದಿನಗಳು ಪಾತ್ರಗಳ ರೂಪದಲ್ಲಿ ಒಂದೊಂದಾಗಿ ನಿಮ್ಮ ಕಣ್ಮುಂದೆ ಸುಳಿದಾಡುತ್ತವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಮನಸ್ಸೇ ಬಾರದಿರುವಷ್ಟು … ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡುವಷ್ಟು ಸೊಗಸಾಗಿ ಬಂದಿದೆ ದಂಗೆಯ ದಿನಗಳು. ದೇಶಪ್ರೇಮದ ಕುರಿತು, ಇತಿಹಾಸದ ಕುರಿತು ಬರೆಯುವಾಗ ಬೆಳಗೆರೆ ಲೇಖನಿಯಲ್ಲಿ ಮೂಡುವ ಒಂದು ಅದ್ಭುತ ಶೈಲಿ ಪುಸ್ತಕಕ್ಕೆ ಇನ್ನಷ್ಟು ಮೆರುಗು ತಂದಿದೆ.

 

ದಂಗೆಯ ದಿನಗಳನ್ನು ಪ್ರತ್ಯಕ್ಷ ಕಂಡಂತಹ ಅನುಭವದ ಜೊತೆಗೆ, ಅನಾಚಾರಗಳಿಗೆ ಬಲಿಯಾದ ಮುಗ್ಧ-ನಿಷ್ಪಾಪಿಗಳ ಆಕ್ರಂಧನ ಕೇಳಿ ಕಣ್ಣು ಹನಿಗೂಡುತ್ತದೆ; ಕರುಳು ಕತ್ತರಿಸಿದಂತಾಗುತ್ತದೆ. ಮರೆತೇ ಹೋದಂತಾಗಿದ್ದ ಇತಿಹಾಸದ ಮಹಾನ್ ಘಟನೆಯೊಂದನ್ನು ನೆನಪಿಸಿಕೊಟ್ಟು, ದಂಗೆಯ ಸಂದರ್ಭದ ಎಷ್ಟೋ ಅರಿವಿಲ್ಲದ ಸಂಗತಿಗಳು, ಪೇಶ್ವೆಗಳು, ನಾನಾ ಸಾಹೇಬನ ಬದುಕಿನ ಸುತ್ತಮುತ್ತಲಿನ ನಾನಾ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ಮುಟ್ಟುವಂತೆ ತಿಳಿಸುತ್ತಾ ಹೋಗುತ್ತದೆ.

 

ಈ ಬೇಸಗೆಯ ಬಿಸಿಯೊಳಗೆ ದಂಗೆಯ ದಿನಗಳ ಕಾವು ನಿಮ್ಮನ್ನು ತಟ್ಟಲಿ. ಆ ಮೂಲಕ ದಂಗೆಯಲ್ಲಿ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಭಾಗಿಯಾದ ಎಲ್ಲಾ ಧೀರ ಚೇತನಗಳ ನೆನಪಾಗಿ ನಮ್ಮ-ನಿಮ್ಮ ಕಣ್ಣಿಂದ ಒಂದು ತೊಟ್ಟು ಜಾರಿದರೆ.. ಅದೇ ನಾವು-ನೀವು ಸಲ್ಲಿಸಬಹುದಾದ ಮಹಾನ್ ಗೌರವ.


ಮೂಲ                                 :         ಮನೋಹರ್ ಮಳಗಾಂವಕರ್

ಕನ್ನಡಕ್ಕೆ                               :         ರವಿ ಬೆಳಗೆರೆ

ಪುಟಗಳು                             :         ೨೯೮ + ೬

ಬೆಲೆ                                   :         ೧೫೦

ಪ್ರಕಾಶನ                             :         ಭಾವನ ಪ್ರಕಾಶನ

 

 

 





ಮೊದಲಾರ್ಧ ಅರಮನೆ – ದ್ವಿತೀಯಾರ್ಧ ಟಾಕೀಸೇ ಸೆರೆಮನೆ

27 04 2008

 CAPÀUÀ¼ÀÄ 3

( 5 – CvÀÄåvÀÛªÀÄ , 4 – GvÀÛªÀÄ , 3 – ¸ÁzsÁgÀt, 2 PÀ¼À¥É , 1 wÃgÁ PÀ¼À¥É )

ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಚಿತ್ರ ನೋಡಿ ಬಂದ ಮೇಲೆ ಅದರಲ್ಲಿ ಅರ್ಧದಷ್ಟು ಮಾತ್ರ ತೃಪ್ತಿ ಸಿಕ್ಕ ಸಮಾಧಾನ - ಇನ್ನರ್ಧ ಅಸಮಾಧಾನ. ಹಾಗಂತ ಚಿತ್ರ ತೀರಾ ಕಳಪೆಯಾಗೇನೂ ಇಲ್ಲ. ಆದರೆ ಪ್ರಥಮಾರ್ಧ ನೋಡಿದ ಮೇಲೆ ಮನಸ್ಸಿನಲ್ಲಿರುವ ಖುಷಿ ಚಿತ್ರ ಮುಗಿದ ಮೇಲೆ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಮಧ್ಯಂತರದ ನಂತರದ ಎಳೆತವನ್ನು ಸಹಿಸುವ ತಾಳ್ಮೆ ಇದ್ದರೆ ಒಮ್ಮೆ ನೋಡಲು ಅಡ್ಡಿಯಿಲ್ಲ.

 

ಚಿತ್ರದ ಹೆಸರೇ ಹೇಳುವಂತೆ ಅದೊಂದು ಅರಮನೆಯಂತಹ ಮನೆಯ ಸುತ್ತ ಹೆಣೆದ ಕಥೆ. ಇಡೀ ಅರಮನೆಯಲ್ಲಿ ಇರೋದು ಅರಮನೆಯ ರಾಜ  ರಾಜಶೇಖರ್ ಅರಸ್(ಅನಂತ್ ನಾಗ್) ಮತ್ತು ಅವರ ಸೇವಕ ಬಸಯ್ಯ(ಕರಿಬಸವಯ್ಯ). ಗತಿಸಿ ಹೋದ ಹೆಂಡತಿಯ ನೆನಪಲ್ಲೇ ಕೊರಗುತ್ತಾ, ಮೂರು ಹೊತ್ತೂ ಮದಿರೆಯ ಮತ್ತಲ್ಲೇ ತೇಲುತ್ತಾ ಇರುವ ಅರಸ. ಅಲ್ಲಿಗೆ ಫೋಟೋ ತೆಗೆಯೋಕೆ ಬರೋದು ಅರುಣ ಅನ್ನೋ ಹೆಸರಿನ ಗಣೇಶ. ತಾತ.. ತಾತ.. ಅಂತ ಕರೆಯುವ, ಚಿನುಕುರುಳಿಯಂತೆ ಮಾತಾಡುತ್ತ ಕತ್ತಲೆ ತುಂಬಿದ ಅರಮನೆಗೆ ಅರುಣನಿಂದ ನವ ಅರುಣೋದಯ. ತಮ್ಮ ಎಂದಿನ ಲವಲವಿಕೆಯಿಂದ ಪಂಚಿಂಗ್ ಮಾತುಗಳಿಂದ ಅರಸ್‌ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅರುಣ ಇಷ್ಟವಾಗುತ್ತಾನೆ. ತಾತನ ನೋವಿಗೆ ಕಿವಿಯಾಗುತ್ತಾನೆ. ನಗು ನಗು ಅಂತ ನಗೆಯ ಮಂತ್ರ ಹೇಳುತ್ತಾ ಚಾರ್ಲಿ ಚಾಪ್ಲಿನ್ , ರಾಜ್ ಕಪೂರ್ ಏನೆಲ್ಲಾ ಆಗಿ ಬಿಡುತ್ತಾನೆ.

 

ಮರಣಶಯ್ಯೆಯಲ್ಲಿದ್ದ ಪತ್ನಿಯ ಮಾತಿನಂತೆ ಮದುವೆಯಾಗಲು ಹೊರಟ ಅರಸ್ ಮಕ್ಕಳೆಲ್ಲಾ ಇದೇ ಕಾರಣಕ್ಕೆ ದೂರಾಗಿ…ಅರಮನೆಯಲ್ಲಿ ಅರಸ್ ಏಕಾಂಗಿ. ಅವರನ್ನೆಲ್ಲಾ ಅರಮನೆಯಲ್ಲಿ ಒಂದಾಗಿಸಿ ಫ್ಯಾಮಿಲಿ ಫೋಟೋ ತೆಗೆಯಬೇಕೆನ್ನೋ ತಾತನ ಆಸೆಗೆ ಅರುಣ ಒತ್ತಾಸೆಯಾಗುತ್ತಾನೆ..ಭರವಸೆ ತುಂಬುತ್ತಾನೆ. ಈ ಭರವಸೆ ಈಡೇರಿಸಲು ಅರುಣನ ಹುಡುಕಾಟ, ನಡು-ನಡುವಲ್ಲಿ ಸ್ವಲ್ಪ ಹುಡುಗಾಟ, ಅರಸ್ ಹಿರೀ ಮಗಳು ಭಾವೀ ಡಾಕ್ಟರ್ ಜೊತೆ ಅಲೆದಾಟ-ಚೆಲ್ಲಾಟ, ಆಕೆ ಬೇರೆಯವನ ಪ್ರೇಮದಲ್ಲಿ ಮುಳುಗಿದವಳೆಂದು ತಿಳಿದಾಗ ಪರದಾಟ, ಆಮೇಲೆಲ್ಲಾ ಬರೀ ದೊಂಬರಾಟ !! ಇದಿಷ್ಟು ಚಿತ್ರದಲ್ಲಿರೋ ಕಥೆಯ ಇಣುಕು ನೋಟ. ಮುಂದೆ……??

 

ಅಭಿನಯದ ವಿಷಯಕ್ಕೆ ಬಂದ್ರೆ ಗಣೇಶ್, ಅನಂತ್ ನಾಗ್‌ಗೆ ಪರಸ್ಪರ ಜಿದ್ದಾಜಿದ್ದಿ ಸ್ಪರ್ಧೆಗೆ ಬಿದ್ದವರಂತೆ ಅಭಿನಯಿಸಿ ಸೈ ಅನ್ನಿಸಿಕೊಂಡರೆ, ರೋಮಾ ಅಭಿನಯ ಅಷ್ಟೇನೂ ರೋಮಾಂಚಕಾರಿಯಾಗಿಲ್ಲ. ಕರಿಬಸವಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದರೆ, ತಾರಾ, ಅವಿನಾಶ್‌ಗೆ ಹೆಚ್ಚು ಸ್ಕೋಪ್ ಇರ್ಲಿಲ್ಲ. ಚಿತ್ರದ ಮೊದಲಾರ್ಧದ ಯಶಸ್ಸಿನ ಸಿಂಹಪಾಲು ತುಷಾರ್ ರಂಗನಾಥ್ ಸಂಭಾಷಣೆಗೆ ಸಲ್ಲುತ್ತದೆ; ಕೆಲವು ಡೈಲಾಗುಗಳು ಪಂಚ್‌ನಿಂದಾಗಿ ಮನಸ್ಸಲ್ಲಿ ನಿಲ್ಲುತ್ತವೆ. ಕವಿರಾಜ್ ಬರೆದ ಕವಿತೆಯಂತಹ ಹಾಡು ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ…ಚಿತ್ರ ಮುಗಿಸಿ ಬಂದ ಮೇಲೂ ಮನಸ್ಸಿನಲ್ಲಿ ಉಳಿಯುತ್ತದೆ. ನಗೆ ನಗೆ ಹಾಡು ಕೂಡಾ ಪರವಾಗಿಲ್ಲ. ಕೊಲ್ಲೇ ನನ್ನನ್ನು.. ಹಾಡಲ್ಲಿ ಹಾಡುಗಾರ-ಸಂಗೀತಗಾರ ಗುರುಕಿರಣ್ ಇಷ್ಟವಾಗುತ್ತಾರೆ. ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? ಮೊದಲನೆಯದಾಗಿ ಗಟ್ಟಿ ಚಿತ್ರ ಕಥೆ ಆಯ್ಕೆ ಮಾಡದೆ ಇರುವಲ್ಲಿ. ಎರಡನೆಯದಾಗಿ ಭಾವನಾತ್ಮಕ ಸನ್ನಿವೇಶಗಳು ತೀರಾ ಪ್ರೇಕ್ಷಕರ ಸಹನೆ ಮೀರುವಷ್ಟು ಎಳೆದಾಡಿರುವಲ್ಲಿ. ಅಲ್ಲದೆ ದ್ವಿತೀಯಾರ್ಧದ ಕಥೆಯ ಜಾಡು ಮಾಮೂಲಿಯಾಗಿದ್ದು ಎಲ್ಲರೂ ಊಹಿಸಿದಂತೆ ನಡೆಯುವುದು ಕೂಡಾ ಚಿತ್ರವನ್ನು ಸಾಮಾನ್ಯವಾಗಿಸಿದೆ ಅಂತ ನನ್ನ ಅನಿಸಿಕೆ. ಡೈಲಾಗು, ಹಾಡು ಎಷ್ಟೇ ಚೆನ್ನಾಗಿದ್ರೂ ಕೂಡಾ ಗಟ್ಟಿ ಕಥೆಯ ತಳಪಾಯ ಇದ್ದರೆ ಮಾತ್ರ ಅರಮನೆ ಕಟ್ಟಬಹುದೇ ಹೊರತು ಮಾತಿನಲ್ಲೇ ಮನೆ ಕಟ್ಟೋಕಾಗುತ್ತಾ ಹೇಳಿ?

 

ಒಟ್ಟಾರೆಯಾಗಿ ನಾಗಶೇಖರ್ ಪ್ರಥಮ ನಿರ್ದೇಶನದ ಚಿತ್ರ ಸಾಕಷ್ಟು ನ್ಯೂನ್ಯತೆಯ ಹೊರತಾಗಿಯೂ ಉತ್ತಮ ಪ್ರಯತ್ನ ಅಂತ ಹೇಳಲಡ್ಡಿಯಿಲ್ಲ. ಗಣೇಶ್, ಅನಂತ್ ಅಭಿನಯ ನೋಡೋಕೆ, ಗುರುಕಿರಣ್ ಸಂಗೀತ, ಕವಿರಾಜ್, ಕಾಯ್ಕಿಣಿ ಪದಗಳ ಮಾಧುರ್ಯ ಸವಿಯೋಕೆ ಅಂತ ಟೈಂಪಾಸ್ಗಾಗಿ ಒಂದ್ಸಲ ನೋಡಬಹುದು. ಆದ್ರೆ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಬಗ್ಗೆ ಇಲ್ಲದ ನಿರೀಕ್ಷೆ ಮಾತ್ರ ಇಟ್ಕೋಬೇಡಿ ಅನ್ನೋ ಎಚ್ಚರಿಕೆಯನ್ನು ಮಾತ್ರ ಮರೆಯಬೇಡಿ.

                                                           - ವಿಜಯ್ ರಾಜ್ ಕನ್ನಂತ್





ಸುರಿದ ಅಡ್ಡ ಮಳೆ ಮತ್ತು ದ್ವೀಪವಾದ ಮನಸ್ಸು…

25 04 2008

ಕಳೆದ ತಿಂಗಳು ಸರಿಸುಮಾರು ೮-೧೦ ದಿನಗಳ ಕಾಲ ಬಂದ ಮಿನಿ ಮಳೆಗಾಲ ಯಾವುದರ ಮುನ್ಸೂಚನೆಯೋ ಗೊತ್ತಿಲ್ಲ. ಏರುತ್ತಿರುವ ಭೂಮಂಡಲದ ಬಿಸಿ, ಹವಾಮಾನ ತಜ್ಞರಲ್ಲಿ ಕಸಿವಿಸಿ, ಬೆಳೆದ ಬೆಳೆ ಕೈಗೆ ಬರದೆ ರೈತನ ಮಂಡೆಯಂತೂ ಬಿಸಿಯೋ ಬಿಸಿ.

 

ಹೀಗೆ ಸುರಿದ ಅಡ್ಡಮಳೆಯೊಂದು ಮೊದಲು ಹನಿ ಹನಿಯಾಗಿ ಜಿನುಗಿ …ನಿಧಾನಕ್ಕೆ ಧಾರೆಧಾರೆಯಾಗುತ್ತಾ ರಸ್ತೆಯ ಮೇಲೆಲ್ಲಾ ಹರಿದು ಚರಂಡಿ ಸೇರಿ ರಾಡಿಯಾಗೋ ಒಂದು ಇಳಿಸಂಜೆಯ ಹೊತ್ತಿನಲ್ಲಿ ಮನಸ್ಸಿನ ಮೂಲೆಯಿಂದ ಮಳೆಯೊಂದಿಗೆ ಬೆಸೆದು ಕೊಂಡ ಚಿತ್ರಗಳು ಮೆಲ್ಲನೆ ಅನಾವರಣಗೊಳ್ಳುತ್ತಿತ್ತು. ಊರಿನಲ್ಲಿದ್ದಾಗ ಧೋ ಎಂದು ಮೂರ್‍ಹೊತ್ತೊ ಸುರಿಯುತ್ತಿದ್ದ ಮಳೆಯಲ್ಲಿ ಒಲೆಯ ಮುಂದೆ ಕೂತು ಚಳಿ ಕಾಯಿಸುತ್ತಾ ಬಿಸಿ ಬಿಸಿ ಹಪ್ಪಳ ಸುಟ್ಟು ತಿಂದಿದ್ದು, ಜೋರು ಮಳೆ ಬಂದರೆ ಶಾಲೆಗೆ ರಜಾ ಸಿಗುವ ಖುಷಿ, ಹೊಳೆಯಲ್ಲಿ ಬಂದ ನೆರೆ ನೋಡುವ ಸಂಭ್ರಮ….ಹೀಗೆ ಇವೆಲ್ಲಾನೆನಪಾಯ್ತು. ಆದರೆ ಮಳೆ ಅಂದಾಕ್ಷಣ ನನ್ನ ಚಿತ್ತ ಭಿತ್ತಿಯಲ್ಲಿ ಇನ್ನೂ ಒಂದು ಸುಂದರ ದೃಶ್ಯಕಾವ್ಯದಂತಹ ಚಿತ್ರ ತೇಲಿ ಬರುತ್ತಿದೆ. ಈ ಹಳೆಯ ನೆನಪಿನ ಚಿತ್ರಗಳ ಸಂಪುಟದಲ್ಲಿ ಮನೆಮಾಡಿರುವುದೇ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸಿನೆಮಾ ದ್ವೀಪ.

 

ಸೌಂದರ್ಯ ಅಂದಾಕ್ಷಣ ನಿಮ್ಮಲ್ಲಿ ಬಹುತೇಕರಿಗೆ ನೆನಪಾಗುವುದು ನಾಗವಲ್ಲಿಯ ನರ್ತನ.. ಆವೇಶ…ರಾ ರಾ ಹಾಡು.. ಅದು ಸೌಂದರ್ಯ ನಟಿಸಿದ ಕೊನೆಯ ಚಿತ್ರ. ಆದರೆ ನನಗೆ ಮಾತ್ರ ನೆನಪಾಗುವುದು ಮಾವಯ್ಯನ ಹೆಣ ಸುಟ್ಟಾಗ ಸುರಿವ ಮಳೆಯ ಪರಿವೆಯೇ ಇಲ್ಲದೆ ಬಿಕ್ಕುವ ನಾಗಿಯ ಅಳಲು; ಕಟ್ಟೆ ಕೋಡಿ ಹರಿದಾಗ ಇದೆಲ್ಲ ದೈವದ ಕಾರಣಿಕ ಅಲ್ದಾ ಅನ್ನುವ ಪತಿಯ ಮಾತಿಗೆ ಅಷ್ಟೆಲ್ಲಾ ಪಾಡುಪಟ್ಟ ನಾಗಿಯ ಮುಖದಲ್ಲಿ ಅಚ್ಚೊತ್ತಿದಂತೆ ಭಾಸವಾಗುವ ಹಂಗಾರೆ ನಾ ಮಾಡಿದ್ದೆಲ್ಲ ಎಂತದೂ ಅಲ್ದಾ ಎಂಬ ಉತ್ತರವೇ ಇಲ್ಲದ ಪ್ರಶ್ನಾರ್ಥಕ ಚಿಹ್ನೆ !

 

ಶರಾವತಿ ಕೊಳ್ಳದಲ್ಲಿ ಅಣೆಕಟ್ಟಿನ ಹಿನ್ನೀರಿನಲಿ ಮುಳುಗಿ ಹೋದ ಬದುಕನ್ನು ಬೇರಿನ್ನೆಲ್ಲೋ ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ಬೇರುಗಳನ್ನು ಮರೆತು ಅಸಹಾಯಕತೆಯ ಕಣ್ಣೇರ ಮಿಡಿಯುತ್ತಾ ಇನ್ನೆಲ್ಲಿಗೋ ವಲಸೆ ಹೋದ ಜನರ ಬವಣೆಯನ್ನು ಬಲು ಹತ್ತಿರದಿಂದ ಕಂಡ ನಾ.ಡಿಸೋಜ ಅವರ ಅತ್ಯುತ್ತಮ ಕಾದಂಬರಿ ದ್ವೀಪ. ಈ ಸುಂದರ ಕೃತಿಯಾನ್ನು ತಮ್ಮ ಕುಸುರಿ ಕಲೆಯಲ್ಲಿ ಅದ್ಭುತ ಕಲಾಕೃತಿಯಾಗಿಸಿದ್ದು ಕಾಸರವಳ್ಳಿಯವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ನಿನ್ನೆಯವರೆಗೆ ನಮ್ಮದಾಗಿದ್ದ ಮನೆ, ತೋಟ, ಹಾಡಿ, ಗದ್ದೆ ಎಲ್ಲವನ್ನು ನುಂಗುವ ಕಪ್ಪು ನೀರನ್ನೇ ಹತಾಶೆಯಿಂದ ನೋಡುತ್ತಾ, ಇಲ್ಲಿಯೂ ಇರಲಾರೆ ಅಲ್ಲಿಗೂ ಹೋಗಲಾರೆ ಎಂಬ ದ್ವಂದ್ವದ ತೂಗುಯ್ಯಾಲೆಯಲಿ ಕುಳಿತು ಎಲ್ಲಿಯೂ ಸಲ್ಲದಂತೆ ನಡುಗುಡ್ಡೆಯಾಗುವ ಮನಸ್ಸು – ನೈಸರ್ಗಿಕವಾಗಿ ಸುರಿವ ಮಳೆಗಾಗಿ ದಿನಗಟ್ಟಲೆ ತಿಂಗಳುಗಟ್ಟಲೆ ಕಾದು ಕುಳಿತು ಮಳೇಯನ್ನೇ ಒಂದು ಪಾತ್ರವನ್ನಾಗಿಸಿದ ಛಾಯಾಗ್ರಾಹಕ ರಾಮಚಂದ್ರರ ಯಶಸ್ಸು - ಇವೆಲ್ಲಕ್ಕೆ ಕಳಶವಿಟ್ಟಂತೆ ಪರಕಾಯ ಪ್ರವೇಶಮಾಡಿದ ಸೌಂದರ್ಯ ಅಭಿನಯದ ತೇಜಸ್ಸು.

 

ಮಳೆ-ಮುಳುಗಡೆ, ಜಡಭರತನಂತ ಗಂಡ, ಮಾತಾಡೋಕೆ ಬೇಕೂ ಅಂದ್ರೂ ಜನರೇ ಸಿಗದ ಏಕಾಕಿತನದ ನಡುವೆ ಸಿಕ್ಕಿ ನಲುಗುವ ಹೆಣ್ಣೊಬ್ಬಳ ನೋವಿನ, ಹೋರಾಟದ ಕಥೆ. ಕಾದಂಬರಿಯಲ್ಲಿ ನಾಗಿಯ ಪಾತ್ರ ಒಂದು ಕಡೆ ಹಾದಿ ತಪ್ಪುವಂತೆ ಇದ್ದರೂ ಕೂಡಾ ಚಿತ್ರ ಕಥೆಯಲ್ಲಿ ಅದನ್ನು ಬದಲಾಯಿಸಿದ್ದು ಒಂದು ಉತ್ತಮ ಬದಲಾವಣೆ. ಮಲೆನಾಡಿನ ಸುಂದರ ದೃಶ್ಯಗಳ ಜೊತೆಗೆ ಹೊಸನಗರ ಕಡೆ ಮಾತನಾಡುವ ಘಟ್ಟದ ಮೇಲಿನ ಕನ್ನಡ ಕೂಡ ಚಿತ್ರ ಕೃತಕವಾಗದಂತೆ ನೋಡಿಕೊಳ್ಳುತ್ತದೆ. ಸೌಂದರ್ಯ ಅಂತೂ ತನ್ನೆಲ್ಲಾ ಪ್ರತಿಭೆಯನ್ನೇ ಧಾರೆಯೆರೆದು ಪಾತ್ರವೇ ತಾವಾಗಿದ್ದಾರೆ. ನೀವಿನ್ನೂ ನೋಡಿಲ್ಲವಾದರೆ ಈಗಲೇ ಹೋಗಿ ಚಿತ್ರದ ಸಿ.ಡಿ ತಂದು ನೋಡಿ. ಬೇಸಿಗೆಯಲ್ಲಿ ಮಳೆಯಲ್ಲಿ ಮಿಂದಂತ ತಂಪನ್ನು ಅನುಭವಿಸುವ ಭಾಗ್ಯ ನಿಮ್ಮದಾಗಲಿ