ಮುಸ್ಸಂಜೆಮಾತಲಿ ಹಾಡಿನ ಮೋಡಿ… ಎದೆಯ ತಂತುಗಳ ಮಿಡಿದಿದೆ ನೋಡಿ….

17 05 2008

ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರುವು ತರುವ ಪ್ರಯಾಣ ಆಗಲಿದೆ ಅಂತಾ ಗೊತ್ತಿರಲಿಲ್ಲ. ತನ್ನ ನಗೆಚಟಾಕಿಗಳಿಂದ ಸಹ ಪ್ರಯಾಣಿಕರನ್ನು ನಗಿಸುತ್ತಾ ಇರುವಾಗ ಹೂಬಳ್ಳಿಯಂತಹ ಹುಬ್ಬಳ್ಳಿ ಹುಡುಗಿ ಕಣ್ಣಿಗೆ ಬೀಳ್ತಾಳೆ. ಸರಿ ಇನ್ನೇನು ಪ್ರೇಮ ಕಥೆ ಶುರು ಅಂತೀರಾ..? ಆದ್ರೆ ಕಥೆ ಬೇರೇನೆ ಇದೆ. ಮುಸ್ಸಂಜೆಯಲ್ಲಿ ನಿಧಾನವಾಗಿ ಆವರಿಸುವ ಕತ್ತಲೆಯ ತೆರೆಯಂತೆ ಹುಡುಗಿಯ ಮೊಗದಲಿ ಮ್ಲಾನತೆಯ ಮುಸುಕು… ಆಗ ಆತ್ಮವಿಶ್ವಾಸ ಮೂಡಿಸಲು ಪ್ರದೀಪ್ ಹಾಡ ತೊಡಗುತ್ತಾನೆ… ಏನಾಗಲಿ ಮುಂದೆ ಸಾಗು ನೀ…ಇಲ್ಲಿಂದ ಮುಂದಕ್ಕೆ ಕಥೆಯ ಜೊತೆ ಜೊತೆಗೆ ಸಾಗುವ ಹಾಡಿನ ಪಯಣ ಸುಮಧುರವಾಗಿದೆ.

 

ಇದು ರೇಡಿಯೋ ಮಿರ್ಚಿ ೯೮.೩ ಎಫ್.ಎಂ ಸಕ್ಕತ್ ಹಾಟ್…. ಈಗ ನಿಮ್ಮ ಮನೆಯ ಹುಡುಗ ಪ್ರದೀಪ್ ನಡೆಸಿ ಕೊಡುವ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಮುಸ್ಸಂಜೆ ಮಾತು…

 

ನಿಮ್ಮ ಊಹೆ ಸರಿ. ಪ್ರದೀಪ್ ಒಬ್ಬ ಆರ್.ಜೆ( ರೇಡಿಯೋ ಜಾಕಿ). ನೊಂದ ಹೃದಯಗಳಿಗೆ ಸಾಂತ್ವನ ನೀಡುವ, ಅವರಲ್ಲಿ ಭರವಸೆಯ ಪುಟ್ಟದೊಂದು ಕಿಡಿ ಹೊತ್ತಿಸುವ, ತನ್ನ ಮೆದು ಮಾತಲ್ಲೇ ಎಲ್ಲರ ಅರ್ಧ ನೋವು ಮರೆಸುವ ಮುಸ್ಸಂಜೆಮಾತು ಎಂಬ ಕಾರ್ಯಕ್ರಮ ನಡೆಸುವವನು ಇವನೇ.

 

ಇತ್ತ ನಾಯಕಿ ತನು (ರಮ್ಯ) ಕೂಡಾ ಬೆಂಗಳೂರಿಗೆ ಬಂದಿರ್ತಾಳೆ. ಅವಳು ತನ್ನ ಗೆಳತಿ ಶ್ವೇತಾಳ( ಅನು ಪ್ರಭಾಕರ್)  ಜೊತೆ ಇರಲು ಬಂದಿರುತ್ತಾಳೆ. ಸದಾ ತಾಯಿಯ ಫೋಟೋ ಮುಂದೆ ಮಂಕಾಗಿ ಕೂರುವ ತನು ಗೆಳತಿಯ ಬಲವಂತಕ್ಕೆ ಮುಸ್ಸಂಜೆ ಮಾತಿಗೆ ಕರೆ ಮಾಡುತ್ತಾಳೆ. ದುಃಖ ತಡೆಯಲಾಗದೆ ಮಾತು ನಿಲ್ಲಿಸುತ್ತಾಳೆ. ಮುಂದೊಂದು ದಿನ ತಾನೆ ಕರೆ ಮಾಡಿ ತನ್ನ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

 

ನೊಂದವರ ಕಷ್ಟಕ್ಕೆ ಮರುಗುವ ಪ್ರದೀಪ್ ಫೋನ್ ಮಾಡಿದ ಹುಡುಗನೊಬ್ಬನ ಗೆಳೆಯನ ಪ್ರಾಣ ಉಳಿಸಲು ತಾನೇ ಬೀದಿ ಬೀದಿ ತಿರುಗಿ ಚಂದಾ ಎತ್ತಿ ಬದುಕಿಸುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾಗುವ ನಾಯಕಿ ತನುಗೆ ಆವತ್ತು ರೈಲಿನಲ್ಲಿ ಸಿಕ್ಕಿದ ಆ ಹುಡುಗನೇ ಈ ಪ್ರದೀಪ ಅಂತ ಗೊತ್ತಾಗುತ್ತೆ. ಮುಂದೆ ಅವರಿಬ್ಬರಲ್ಲಿ ಸ್ನೇಹ - ತಿರುಗಾಟ, ಹಾಡು-ಪಾಡು…ಇತ್ಯಾದಿ ಇತ್ಯಾದಿ. ಜೊತೆಗೆ ಪ್ರದೀಪನ ಕಾರ್ಯಕ್ರಮದ ಮೋಡಿ

 

ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ರಿಗೆ ಇಷ್ಟ. ಅದ್ರೆ ಸ್ನೇಹಾನೂ ಹಾಳಾದ್ರೆ ಅನ್ನೋ ಭೀತೀನೆ ಕಷ್ಟ. ಈ ನಡುವೆ ಬೇರೆಯಾಗಿದ್ದ ತಂದೆ- ಮಗಳ ಮಿಲನವಾಗುತ್ತೆ. ತನುವಿನ ಮದುವೆ ನಿಕ್ಕಿಯಾಗುತ್ತೆ. ಸುದ್ದಿ ಕೇಳಿದ ಪ್ರದೀಪನ ತಲೆ ಕೆಡುತ್ತೆ. ಮುಂದಿನ ಮುಸ್ಸಂಜೆಮಾತು…….. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡಿ ಕೇಳಿ ಆನಂದಿಸಿ

 

ಮೊತ್ತ ಮೊದಲನೆಯದಾಗಿ ಚಿತ್ರದ ಹಾಡುಗಳು ಅದ್ಭುತವಾಗಿದೆ. ವಿ.ಶ್ರೀಧರ್ ಅವರ ಸಂಗೀತ ಬಿಸಿಲುಗಾಲದಲ್ಲಿ ಮುಸ್ಸಂಜೆಹೂತ್ತು ಬೀಸಿ ಬರುವ ತಂಗಾಳಿಯಂತೆ ಹಿತಕರವಾಗಿದೆ. ಕೆಲವು ಟ್ಯೂನ್ಸ್ ಎಲ್ಲೋ ಕೇಳಿದ ಹಾಗಿದ್ಯಲ್ಲ ಅಂತಾ ಅನ್ಸಿದ್ರೂ ಕೂಡಾ ಸಂಗಿತಕ್ಕೆ ಡಿಸ್ಟಿಂಕ್ಷನ್ ಸಿಗಲೇ ಬೇಕು. ಹಾಗೆ ಇನ್ನಿಬ್ಬರು ಡಿಸ್ಟಿಂಕ್ಷನ್ ಅಭ್ಯರ್ಥಿಗಳು ಅಂದ್ರೆ ಕಿಚ್ಚ ಸುದೀಪ್ ಮತ್ತು ಮೋಹಕ ತಾರೆ ರಮ್ಯ ( ಇದು ನನ್ನ ಕಮೆಂಟ್ ಅಂತ ತಿಳೀಬೇಡಿ. ಹಾಗಂತ ಟೈಟಲ್ ನಲ್ಲಿ ಹಾಕಿದ್ದಾರೆ !) ಸುದೀಪ್ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಬಂದಿರುವುದು ಅದರಲ್ಲೂ ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿನ ಸುದೀಪ್ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾರೆ. ನಾಯಕ ಸುದೀಪ್ ಗಿಂತ ಕಲಾವಿದ ಸುದೀಪ್ ಇಲ್ಲಿ ಮೆಚ್ಚುಗೆಗಳಿಸುತ್ತಾರೆ. ರಮ್ಯ ಕೂಡಾ ಸ್ವಲ್ಪ ದಪ್ಪ ಆಗಿರೋದು ಬಿಟ್ರೆ ಅಭಿನಯ, ಕುಣಿತ ಎಲ್ಲಾದ್ರಲ್ಲೂ ಸೈ. ಅನು ಪ್ರಭಾಕರ್ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ಮಿಕ್ಕಂತೆ ಮಂಡ್ಯ ರಮೇಶ್ ಪ್ರತಿಭೆಗೆ ಇದಕ್ಕಿಂತ ಒಳ್ಳೆ ಪಾತ್ರ ಬೇಕು.  ಪ್ರಾಣೇಶ್ ಮತ್ತು ಕೃಷ್ಣೇಗೌಡರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಸ್ಯಕ್ಕೆ ಬಳಸಿಕೊಳ್ಳಬಹುದಿತ್ತು ಅನ್ಸುತ್ತೆ.

 

ಸೋನು ಶ್ರೇಯಾ ಹಾಡಿರುವ ನಿನ್ನ ನೋಡಲೆಂತೋ…, ಶ್ರೇಯಾ ಹಾಡಿರುವ ಆಕಾಶ ಭೂಮಿ, ಸೋನು ಹಾಡಿರುವ ಏನಾಗಲಿ ಮುಂದೆ ಸಾಗು ನೀ..ಹೇಮಂತ್ ಹಾಡಿರುವ ಟೈಟಲ್ ಟ್ರ್ಯಾಕ್ ಎಲ್ಲಾನು ಒಂದಕ್ಕಿಂತ ಒಂದು ಚೆನ್ನಾಗಿದೆ.

 

ಒಂದು ಸಣ್ಣ ಕಥೆಯ ಎಳೆಯನ್ನು ಹಾಡುಗಳ ಬಲೆಯಲಿ ನೇಯ್ದು, ಒಂದು ಸುಂದರ ಭಾವನಾತ್ಮಕ ಚಿತ್ರವನ್ನು ನಿರ್ದೇಶಕ ಮಹೇಶ್ ನೀಡಿದ್ದಾರೆ. ಆದರೆ ಇತ್ತೀಚಿನ ಅನೇಕ ಚಿತ್ರಗಳಲ್ಲಿ ಆಗುತ್ತಿರುವಂತೆ ಮೊದಲಾರ್ಧದ ನಿರೂಪಣೆಯ ಅಚ್ಚುಕಟ್ಟು ಎರಡನೇ ಭಾಗಕ್ಕೆ ಬರುವಲ್ಲಿ ಕಾಣೆಯಾಗಿದ್ದು ಚಿತ್ರದ ಒಟ್ಟಾರೆ ಪರಿಣಾಮದ ಮೇಲೆ ನೇರವಾಗಿ ಆಗಿದೆ. ಅಲ್ಲದೆ ಭಾವನಾತ್ಮಕ ಚಿತ್ರಗಳ ಬಹು ಮುಖ್ಯ ಅಂಶವಾದ ಸಂಭಾಷಣೆ ಇನ್ನಷ್ಟು ಗರಿಗರಿಯಾಗಿದ್ರೆ ಚೆನಾಗಿತ್ತೇನೋ. ಕೊನೇ ಪಕ್ಷ ಕ್ಲೀಷೆ ಅನ್ನಿಸುವ ಕೆಲವು ಡೈಲಾಗ್ ಕೈಬಿಟ್ಟಿದ್ರೂ ಸಾಕಿತ್ತೇನೋ! ಕಿಚ್ಚನ ಅಭಿಮಾನಿಗಳಿಗೆ ನಿರಾಶೆ ಅಗದಿರಲಿ ಅಂತಾ ಅಳವಡಿಸಿದ ಚಿತ್ರದ ಏಕೈಕ ಹೊಡೆದಾಟದ ದೃಶ್ಯದಲ್ಲಿ ಫೈಟಿಂಗ್ ಹಿನ್ನಲೆಯಲ್ಲಿ ಮ್ಯೂಸಿಕ್ ಬೀಟ್ಸ್ ನುಡಿಸಿದ್ದು ಒಂಥರಾ ಚೆನ್ನಗಿತ್ತು ಬಿಟ್ರೆ ಕಥೆಗೆ ಒಂಚೂರೂ ಬೇಕಿರಲಿಲ್ಲ. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಒಂದು ಸರಳ ಸುಂದರ ಚಿತ್ರ ಮುಸ್ಸಂಜೆ ಮಾತು.

                                                                   - ವಿಜಯ್ ರಾಜ್ ಕನ್ನಂತ್

ಅಂಕಗಳು  (***)

 

* ತೀರ ಕಳಪೆ

** ಕಳಪೆ

*** ಸಾಧಾರಣ

**** ಉತ್ತಮ

***** ಅತ್ಯುತ್ತಮ


Actions

Information

One response

20 05 2008
chetana chaitanya

kannantarE,
nimagyAke dwiteeyArdhagaLa mEle bEsara? athavA prati chitradalliyU hAgAgtirOdu nijavA?
tiLidukoLLalu nAnE myssanje mAtu nODi bartEne!!
thanx
- Chetana

Leave a comment