ಚಿಕ್ಕಂದಿನಲ್ಲಿ ಮನೆಯವರಿಂದ ಹಿಡಿದು, ಬಂಧು ಮಿತ್ರರು, ಮನೆಗೆ ಬಂದ ಅತಿಥಿ ಅಭ್ಯಾಗತರಾದಿಯಾಗಿ ಎಲ್ಲರೂ ಕೇಳುವ ಪ್ರಶ್ನೆ - ‘ನೀನು ದೊಡ್ಡವನಾದ ಮೇಲೆ ಏನಾಗ್ತೀಯಾ?’ ಅಂತ. ಆ ವಯಸ್ಸಿನಲ್ ಇರುವ ಕಲ್ಪನೆ, ದೊಡ್ಡವರು ಹೇಳಿದ್ದು-ಕೇಳಿದ್ದು, ಟಿ.ವಿ. ಸಿನೆಮಾಗಳಲ್ಲಿ ನೋಡಿದ್ದು ಎಲ್ಲಾ ಸೇರಿ ಮನಸ್ಸಿಗೆ ಹೊಳೆದಂತಹ ಒಂದು ಉತ್ತರವನ್ನು ಕೊಟ್ಟಿರುತ್ತೇವೆ. ‘ನಾನು ಪೈಲಟ್ ಆಗ್ತೀನಿ, ಸಿನೆಮಾ ಹೀರೋ ಆಗ್ತೀನಿ, ಡಾಕ್ಟರ್, ಸೈನಿಕ, ಮೇಷ್ಟ್ರು ಆಗ್ತೀನಿ, ಅಮೇರಿಕಾಕ್ಕೆ ಹೋಗ್ತೀನಿ… ಹೀಗೆ ತರಹೇವಾರಿ ಉತ್ತರಗಳನ್ನು ನಾವು ನೀವೆಲ್ಲಾ ಕೊಟ್ಟಿರುತ್ತೀವಿ. ಯಾವ ಆಧಾರವೂ ಇಲ್ಲದ ಆ ಬಾಲಿಶ ಮನಸ್ಸಿನ ಕಲ್ಪನೆಗೆ ತಕ್ಕುದಾದ ಆ ಉತ್ತರವನ್ನು ಗಂಭೀರವಾಗೇನೂ ಪರಿಗಣಿಸದೆ ಎಲ್ಲರೂ ನಕ್ಕು ಸುಮ್ಮನಾಗುತ್ತಾರೆ. ಆದರೆ ಬುದ್ಧಿ ಬೆಳೆದಂತೆಲ್ಲಾ ಬದುಕಿನ ಕುರಿತು ನಮ್ಮ ಪರಿಕಲ್ಪನೆಗಳು ಸ್ಪಷ್ಟವಾದಂತೆಲ್ಲಾ, ನಾನೇನು ಆಗಬೇಕು ಎಂಬ ಕನಸೊಂದು ಸದ್ದಿಲ್ಲದೆ ಮನಸಿನ ಗೂಡಿನೊಳಗೆ ನುಸುಳಿ ಬಂದಿರುತ್ತದೆ. ಅದು ಯಾರೆಲ್ಲರ ಬದುಕಿನಲ್ಲಿ ಕೈಗೂಡಿ ತಾವು ಬಯಸಿದ ಕ್ಷೇತ್ರದಲ್ಲೇ ಮುಂದುವರಿಯುವ ಅವಕಾಶ ಸಿಗುತ್ತದೋ ಗೊತ್ತಿಲ್ಲವಾದರೂ ಕನಸಂತೂ ಎಲ್ಲರಲ್ಲೂ ಮೊಳಕೆಯೊಡೆದಿರುತ್ತದೆ.
ಇಂತಹ ಕನಸೊಂದನ್ನು ನಾನೂ ಕಟ್ಟಿಕೊಂಡಿದ್ದೆ. ನಾನು ಪತ್ರಕರ್ತನಾಗಬೇಕೆಂಬುದೇ ಆ ಹೆಬ್ಬಯಕೆ. ಆದರೆ ಪಿಯೂಸಿ ಮುಗಿದಾಕ್ಷಣ ಮುಂದೇನು ಎಂದು ಎಲ್ಲಾ ಹೆತ್ತವರು ಚಿಂತಿಸುವಂತೆಯೇ ನನ್ನ ಮನೆಯವರೂ ಚಿಂತಿಸಿ ತಳೆದ ನಿರ್ಧಾರದ ಫಲವಾಗಿ, ಬಂಧು ಮಿತ್ರರ ಒತ್ತಾಸೆ ( ಒತ್ತಾಯದ ಆಸೆ? )ಗೆ ಅನುಗುಣವಾಗಿ ನಾನು ಇಂಜಿನಿಯರಿಂಗ್‌ಗೆ ಸೇರಬೇಕಾಗಿ ಬಂತು. ಇಂಜಿನಿಯರಿಂಗ್ ಸೇರುವ ಮೊದಲು ಸಿಕ್ಕಿದ ೪ ತಿಂಗಳ ಬಿಡುವಿನ ಅವಧಿಯಲ್ಲಿ ನನ್ನಾಸೆಗೆ ಇಂಬುಕೊಡುವ ಅವಕಾಶವೊಂದು ಒದಗಿ ಬಂತು. ನನ್ನ ಮಾವ ಆಗ ಉಡುಪಿಯಿಂದ ಹೊರಡಿಸುತ್ತಿದ್ದ ‘ಕ್ಷಿತಿಜ’ ಅನ್ನುವ ಪಾಕ್ಷಿಕ ಪತ್ರಿಕೆಯಲ್ಲಿ ನನ್ನ ಬರವಣಿಗೆಯ ಆಸೆಗೆ ನೀರೆರೆಯುವಂತಹ ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಸಿನೆಮಾ, ಕ್ರೀಡೆ, ರಾಜಕೀಯ, ಚಿಂತನೆ, ಅನುವಾದ, ಪದಬಂಧ, ವಿಶಿಷ್ಠ-ವಿಚಿತ್ರ ಅನ್ನುವ ಪುಟ್ಟದೊಂದು ಅಂಕಣ.. ಇವೆಲ್ಲದನ್ನು ಬರೆಯುವ ಸದಾವಕಾಶ ನನ್ನದಾಗಿತ್ತು. ಪತ್ರಕರ್ತನಾಗದೇ ಹೋದರೂ ನಾನೂ ಒಬ್ಬ ಬರಹಗಾರನಾದೆನಲ್ಲ ಅನ್ನುವ ಸಮಾಧಾನ ಸಿಕ್ಕಿತ್ತು.
ಮುಂದೆ ಇಂಜಿನಿಯರಿಂಗ್‌ನ ತಿರುಗಣೆಯಲ್ಲಿ ಬರೆಯುವ ಅವಕಾಶ ಸಿಗಲೇ ಇಲ್ಲ. ಈ ನಡುವೆ ‘ಉದಯವಾಣಿ’ಯಲ್ಲೊಮ್ಮೆ ನನ್ನ ಕ್ರೀಡಾ ಬರಹ ಪ್ರಕಟವಾದದ್ದೇ ಈ ನಿಟ್ಟಿನಲ್ಲಿ ನಡೆದ ಏಕೈಕ ಪ್ರಯತ್ನ. ಮುಂದೆ ಪದವಿಯ ನಂತರ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಇಂಜಿನಿಯರ್ ಅನ್ನಿಸಿಕೊಂಡು ಈಗಾಗಲೇ ಸುಮಾರು ಐದೂವರೆ ವರ್ಷ ಕಳೆದುಹೋಗುತ್ತಿರುವ ಈ ವೇಳೆಯಲ್ಲಿ ನನ್ನ ಕನಸಿನ ಕುರಿತು ಹಿಂದಿರುಗಿ ನೋಡಿದರೆ ನಿರಾಸೆಯ ನಡುವೆಯೂ ಸಮಾಧಾನದ ಒಂದು ಎಳೆ ಕಾಣಸಿಗುತ್ತದೆ. ನನ್ನದಲ್ಲದ ಮಾಧ್ಯಮವಾದ ಹನಿಗವನ, ಅಣಕವಾಡು ಇತ್ಯಾದಿಗಳನ್ನು ಆಗೊಮ್ಮೆ ಈಗೊಮ್ಮೆ ಬರೆದು ನನ್ನ ಮಿತ್ರ ‘ಮಣಿಕಾಂತ’ನಿಗೆ ಮೊಬೈಲ್‌ನಲ್ಲೇ ಬರೆದು ಕಳಿಸುತ್ತಲಿದ್ದೆ. ಅದು ಆಗೀಗ ‘ವಿಜಯ ಕರ್ನಾಟಕ’ದಲ್ಲೂ ಅಚ್ಚಾಗುತ್ತಲೂ ಇತ್ತು. ಅವನ್ನೆಲ್ಲಾ ಒಟ್ಟಾಗಿಸಿ ‘ಅಂತರಂಗದ ಆಪ್ತಸ್ವರ’ ಅನ್ನುವ ಹೆಸರಿನಲ್ಲಿ ಬಿಡುಗಡೆ ಮಾಡಿದ್ದೂ ಆಯ್ತು. ಅದೂ ಕೂಡಾ ನನ್ನ ಇಷ್ಟದ ಲೇಖಕರಾದ ವಸುಧೇಂದ್ರ ಮತ್ತು ಆಲೂರರ ಸಮ್ಮುಖದಲ್ಲಿ. ಈ ಸಂಕಲನ ಅಚ್ಚಾಗಿ ಹೊರಬಂದ ಹೊತ್ತಿನಲ್ಲ್ರಿ - ‘ನನ್ನ ಇಷ್ಟದ ಪ್ರಕಾರವಾದ ಗದ್ಯದಲ್ಲಿ ಯಾಕೆ ಕೈ ಆಡಿಸಬಾರದು’ ಅಂತ ಅನ್ನಿಸತೊಡಗಿತ್ತು. ಆದರೆ ಅದನ್ನು ಬರೆದರೆ ಪ್ರಕಿಟಿಸೋದು ಹೇಗೆ ಅಂತ ಎಣಿಸುತ್ತಿರುವಾಗಲೇ, ಕನ್ನಡದಲ್ಲಿ ಇರುವ ಬ್ಲಾಗ್‌ಗಳ ಪಟ್ಟಿಯೊಂದು ‘ಈ-ಮೇಲ್’ ಮೂಲಕ ಬಂದಿತ್ತು. ಹುಡುಕುತ್ತಿದ್ದ ಬಳ್ಳಿಯೇ ಬಂದು ಕಾಲಿಗೆ ತೊಡರಿದಂತಾಯಿತು. ಸರಿ ಶುರುವಾಯ್ತು ನನ್ನ ಬ್ಲಾಗಿನ ಬರವಣಿಗೆ. ಮೊಟ್ಟ ಮೊದಲನೇ ಬರಹವಾಗಿ ರಂಗಶಂಕರದಲ್ಲಿ ನೋಡಿದ ‘ಮೂಕಜ್ಜಿಯ ಕನಸುಗಳು’ ನಾಟಕದ ವಿಮರ್ಶಾರೂಪದ ಲೇಖನ ಬರೆದೆ. ಹತ್ತು ವರ್ಷದ ಬರಹ ಸನ್ಯಾಸದ ವ್ರತ ಕೊನೆಗೂ ಮುರಿಯಿತು. ಈ ಬ್ಲಾಗಿನ ಪಯಣ ೩ ತಿಂಗಳಿನಲ್ಲೇ ಅನೇಕ ಹೊಸ-ಹೊಸ ಗೆಳೆಯರನ್ನು ತಂದು ಕೊಟ್ಟಿತು. ಈ ಸ್ಫೂರ್ತಿಯಲ್ಲೇ ‘ನಮ್ ಕುಂದಾಪ್ರ ಕನ್ನಡಕ್ಕೆ ಎಂತಾರೂ ಬರೀದಿದ್ರೆ ಹ್ಯಾಂಗೆ’ ಅಂತೇಳಿ ‘ಕುಂದಾಪ್ರ ಕನ್ನಡ ’http://kundaaprakannada.wordpress.com ಅನ್ನೋ ಬ್ಲಾಗ್ ಕೂಡಾ ಶುರುವಿಟ್ಟುಕೊಂಡೆ.
ಅಂತೂ ಇಂತೂ ಕಂಡ ಕನಸೊಂದು ಈ ರೂಪದಲ್ಲಿ ಕೈಗೂಡುತ್ತಿರುವ ಸಮಾಧಾನವಿದೆ. ನೀವು ಓದಿ ಮೆಚ್ಚುಗೆಯ ನಾಲ್ಕು ಮಾತು ಹೇಳಿದ್ರೆ ಹೆಚ್ಚು ಉತ್ಸಾಹದಲ್ಲಿ ಬರೆದೇನು. ತಪ್ಪಿದ್ದರೆ ತೋರಿಸಿದರೆ ತಿದ್ದಿಕೊಂಡೇನು.. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಾ..
ವಿಜಯ್‌ರಾಜ್ ಕನ್ನಂತ್

ವಿಜಯ,
ನಿಮ್ಮ ಕನಸು ಕೈಗೂಡಲೆಂದು ನನ್ನ ಹಾರೈಕೆ.
ಸೊಗಸಾದ, ವಿಚಾರಪರ ಬರವಣಿಗೆಗಳು ನಿಮ್ಮಿಂದ ಕನ್ನಡಿಗರಿಗೆ ಸಿಗಲೆಂಬ ನಮ್ಮ ಬಯಕೆ ಈಡೇರಲಿ ಜೊತೆಗೆ ನೀವು ಒಳ್ಳೆಯ ಬರಹಗಾರನಾಗಿ.
ಸ್ವಾಮಿ
ಪುಣೆ
Vijaya avare , nimma baraha thumba chennagide.
nimminda innasstu barahagallanu naanu apesksitene.
haage samaya sikkare namma blogina kadegu ondu payana belesi. nanna blog:
http://neelimegha.blogspot.com/