ನಿನ್ನೆದೆಯಲಿ ಊಟೆಯೊಡೆದು
ಚಿಮ್ಮಿದ ಪ್ರೀತಿಯ ಜಿನುಗು ಭಾವಪ್ರವಾಹವಾಗಿ
ನನ್ನೆದೆಯ ನಡುಗುಡ್ಡೆಯ ಸುತ್ತುವರಿದಾಗ
ಮನದಲ್ಲೇನೋ ಅರಿಯದ ಪುಳಕವಿಂದು
ಆಗ ನನಗೆ ಗೊತ್ತಿರದೇ ಹೋಗಿದ್ದೆಂದರೆ
ಏರಿದ ನೀರೂ ಇಂದಲ್ಲ ನಾಳೆ
ಇಳಿಯಲೇಬೇಕೆಂದು….
ನಿನ್ನ ಗಮ್ಯದ ಕಡಲು ನಾನಲ್ಲವೆಂದು
J L J L J L J L J
ಎದೆಯ ಕಣಿವೆಯೊಳಗೆ
ಧುಮ್ಮಿಕ್ಕುವ ನೆನಪುಗಳ
ಜಲಪಾತಕೆ ಕಟ್ಟಬೇಕೆಂದು ಕಟ್ಟೆ
ಕಹಿ ಸಿಹಿ ನೆನಪುಗಳ ಜೊತೆಗೆ
ಒಲವಿನ ಒರತೆಯನೂ
ಎದೆಯೊಳಗೇ ಅದುಮಿಟ್ಟೆ
ಈಗ ಬದುಕು ನಿಂತ ಹಿನ್ನೀರು
ಆದರೂ ಹಿಂದೊಮ್ಮೆ
ನಿನ್ನ ನೆನಪುಗಳ ಮಳೆಯಾದಾಗ
ಭಾವಪ್ರವಾಹ ಉಕ್ಕಿ ಹರಿದಿದ್ದಕ್ಕೆ ಸಾಕ್ಷಿ
ಕೆನ್ನೆ ಮೇಲಿನ ಕರೆಗಟ್ಟಿದ ಕಣ್ಣೀರು
J L J L J L J L J
ನಿನ್ನ ಪ್ರೀತಿ ಮಳೆ ನಿಂತ ಮೇಲೆ
ಹೇಗೆ ಹೆಚ್ಚೀತು ಒಲವಿನ ಒಳಹರಿವು?
ಸದ್ದಿಲ್ಲದೆ ಸೋರಿಹೋಗಿದೆ
ಎದೆ ಕಟ್ಟೆಯೊಳಗಿನ ಪ್ರೀತಿ ಕೂಡಾ
ಇನ್ನೆಲ್ಲೋ ಸಮೃದ್ಧಿ…!!
ನನ್ನ ಎದೆಯಷ್ಟೇ ಬರಡು
J L J L J L J L J


ninna viraha geeteya saalige innu ondu… post nalli iruva chitra chennagide.