ಆರಂಭ ಶೂರತ್ವ ಅಲ್ಲವೇ ಅಲ್ಲ ಅನ್ನುವ ಭರವಸೆ ಕೊಡುತ್ತಾ…

28 11 2008

ಮೊದಲನೆಯದಾಗಿ ಮುಂಬೈನಲ್ಲಿ ಮಡಿದ ಆತ್ಮಗಳಿಗೊಂದು ಮೌನ ನಮನ. ಯಾರ ಮೇಲಿನದೋ ಜಿದ್ದಿಗೆ, ಯಾವುದೋ ಹತಾಶೆಗೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳುವ ಭಯೋತ್ಪಾದಕನೆಂಬ ಹುಂಬನೆ ನಿನಗೊಂದು ದೊಡ್ಡ ನಮಸ್ಕಾರ… ದೂರದಿಂದಲೇ…

 

ಯಾಕೋ ಈ ತಿಂಗಳು ಲೇಖನಿ ಅಷ್ಟಾಗಿ ಓಡಲೇ ಇಲ್ಲ. ತೆಂಡುಲ್ಕರ್ ತರಹ ನಂಗೂ ವಯಸ್ಸಾಗ್ತಾ ಬಂತಾ ಅಂತ

ಆದ್ರೆ ಒಂದು ಸಮಾಧಾನ ಅಂದ್ರೆ ಅವನ ತರಹ ನೀನು ರೆಟೈರಾಗು ಸಾಕು ಅಂತ ಉಪದೇಶ ಮಾಡೋರು ಯಾರೂ ಇಲ್ಲ ಬಿಡಿ.

 

ಈ ತಿಂಗಳು ಬರೆದದ್ದು ಕಡಿಮೆ ಆದ್ರೂ ಓದಿದ್ದು ಸ್ವಲ್ಪ ಜಾಸ್ತೀನೆ… ಪುಸ್ತಕ ಸಂತೆಯಲ್ಲಿ, ಅಂಕಿತದಲ್ಲಿ ಕೊಂಡ ಪುಸ್ತಕಗಳೆಲ್ಲ ಮುಗಿದು, ಅಗ್ನಿ ಶ್ರೀಧರ್, ಬೆಳಗೆರೆಯ ಕೆಲವು ಪುಸ್ತಕಗಳ ಮರು ಓದೂ ಮುಗಿತು. ಅದ್ರಲ್ಲಿ ಬೆಳಗೆರೆ ಕನ್ನಡಾನುವಾದ ಮಾಡಿರೋ ಟೈಮ್ಪಾಸ್ ಅನ್ನೋ ಪ್ರೋತಿಮಾ ಬೇಡಿಯ ಜೀವನ ಚರಿತ್ರೆಯ ಪುಸ್ತಕ ಪರಿಚಯ.., ಮತ್ತೊಂದೆರಡು ಹನಿಗಳು, ಇನ್ನೊಂದು ಸರ್ಪ್ರೈಸ್ ಲೇಖನ ಇವೆಲ್ಲ ಡಿಸೆಂಬರ್ ಮೊದಲಲ್ಲಿ ಬರೀಲೇ ಬೇಕು ಅಂದ್ಕೊಂಡಿರೋ ಕೆಲ ಲೇಖನಗಳ ಪಟ್ಟಿ… ಅದಕ್ಕೆ ಹೊಸದಾಗಿ ಪಟ್ಟಿಯ ಮೊದಲಲ್ಲಿ ಸೇರಿಕೊಂಡಿದೆ ಭಯೋತ್ಪಾದನೆಯ ಕರಿನೆರಳಿನ ಕುರಿತು ಒಂದು ಮನಸ್ಸಿನ ದುಗುಡಗಳನ್ನು ಹೊರಚೆಲ್ಲುವ ಒಂದು ಬರಹ. ಇವತ್ತೇ ಬರೀಬೇಕು ಅಂದ್ಕೊಂಡೆ.. ಆದ್ರೆ ಬರೆಯೋಕೆ ಕೂತ್ರೆ ಟಿ.ವಿ. ಯ ದೃಶ್ಯಗಳೇ ಕಣ್ಮುಂದೆ ಬಂದಂತಾಗಿ ಬರೆಯೋಕೆ, ಮನಸ್ಸಿನಲ್ಲಿರೋದನ್ನೆಲ್ಲಾ ಹೊರಗೆಳೆಯೋಕೆ ಸಾಧ್ಯವಾಗ್ತಾ ಇಲ್ಲ.

 

ಇನ್ನು ಕುಂದಾಪ್ರ ಬ್ಲಾಗಲ್ಲೂ ಮುಂಚೆ ಭರವಸೆ ನೀಡಿದಂತೆ ಕನಿಷ್ಟ ವಾರಕ್ಕೊಂದು ಪೋಸ್ಟ್ ಮಾಡೋ ನಿರ್ಧಾರ ಮಾಡಿದೀನಿ…

ಯಾಕಂದ್ರೆ ನಂದು ಆರಂಭಶೂರತ್ವವಾಯ್ತಾ ಅನ್ನೋ ಸಂಶಯ ನಂಗೇ ಬಂದ್ರೆ ಕಷ್ಟ ನೋಡಿ… ಹಾಗಾಗದು ಅನ್ನುವುದು ಭರವಸೆ.





ಹನಿ…ಕಣ್ಣಿಂದ ಉದುರಿದ್ದು…

18 11 2008

ಮುಗಿಲು ಮೌನದಲಿ ರೋಧಿಸುತ್ತಿತ್ತು…

ಅಂತ್ಯವೇ ಇಲ್ಲದ ದುಃಖಕೆ ಮುನ್ನುಡಿಯೋ ಎಂಬಂತೆ

ವಸುಧೆಯಾದರೋ ತಣ್ಣಗೆ ನಿದ್ರಿಸುತ್ತಿಹಳು

ಕಾರಣವೇ ಹೇಳದೆ ಹೋದ ಹುಡುಗಿಯಂತೆ

 ——————————–

ಜಗತ್ತಿನ ಮೊತ್ತ ಮೊದಲ ವಂಚನೆಯೇನಲ್ಲ ಇದು

ಆದರೂ ನನ್ನ ಪಾಲಿಗಿದು ಮೊದಲನೆಯದು ಅಲ್ವಾ?

ಜಗತ್ತಿನ ಕಟ್ಟ ಕಡೆಯವಳೇನು ನೀನಲ್ಲ

ಆದರೂ ಅವರ್‍ಯಾರೂ ನೀನಾಗಲಾರರು ಅಲ್ವಾ?

——————————————–

ಎರಡು ನಿರೀಕ್ಷೆ.. ಎರಡು ಮೌನ..

ಮತ್ತೆರಡು ದಿವ್ಯ ಏಕಾಂತಗಳ

ನಡುವೆ ಬಂದು ಹೋದ

ಎರಡು ಕನಸುಗಳ ನೆನಪುಗಳೇ

ಸಾಕಲ್ಲವೆ…

ಹೊಸ ಕನಸುಗಳೆರಡರ

ಬೀಜಾಂಕುರಕ್ಕೆ





ಒಂದಿಷ್ಟು ಹೊಸ ಪುಸ್ತಕಗಳು…ಒಮರ್ಟಾ,ಒಂದು ಫೋಟೋದ ನೆಗೆಟಿವ್,ರಾಯಭಾಗದ ರಹಸ್ಯ ರಾತ್ರಿ,ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ

17 11 2008

ಕಳೆದ ಹತ್ತು ದಿನಗಳಲ್ಲಿ ಒಂದಿಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೆ. ಶ್ರೀಧರ ಬಳೆಗಾರ ಅವರ ಕಥಾ ಸಂಕಲನ ಒಂದು ಫೋಟೋದ ನೆಗೆಟಿವ್, ಜೋಗಿಯ ರಾಯಭಾಗದ ರಹಸ್ಯ ರಾತ್ರಿ, ಬೆಳಗೆರೆಯ ಒಮರ್ಟಾ ಸುಮಿತ್ರಾ ಅವರ ಕಥಾಸಂಕಲನ ಗುಬ್ಬಿ ಹಳ್ಳದ ಸಾಕ್ಷಿಯಲ್ಲಿವುಗಳಲ್ಲಿ ಮುಖ್ಯವಾದ ಕೆಲವು ಪುಸ್ತಕಗಳು.

 

ನನಗೆ ತುಂಬಾ ಹಿಡಿಸಿದ್ದು ಒಂದು ಫೋಟೋದ ನೆಗೆಟಿವ್. ವಿಮರ್ಶೆ ಮಣ್ಣು ಮಸಿ ಅಂತ ಮಾಡೋಕೆ ನಂಗಂತೂ ಬರೊಲ್ಲ… ಕಥೆಯ ವಸ್ತು ಧ್ವನಿ, ಒಳನೋಟ, ರೂಪಕ, ತಂತ್ರಗಾರಿಕೆ ಮಂತ್ರಗಾರಿಕೆ ಅಂತೆಲ್ಲ ಬರೆದು-ಕೊರೆದು ನಿಮ್ಮ ತಲೆಗೆ ತ್ರಾಸ ಕೋಡುವಷ್ಟು ಸಾಮರ್ಥ್ಯ ದೇವರಾಣೆಗೂ ನನಗಿಲ್ಲ. ಹಾಗಾಗಿ ನೀವು ಬಚಾವ್!! ಆದ್ರೆ ಇಲ್ಲಿನ ಕಥೆಗಳು ಸೊಗಸಾಗಿದ್ದು ಸಲೀಸಾಗಿ ಓದಿಸಿಕೊಂಡು ಹೊಗುತ್ತವೆ, ಖುಶಿ ಕೋಡುತ್ತವೆ

 

ಸುಮಿತ್ರ ಅವರ ಗುಬ್ಬಿ ಹಳ್ಳದ ಸಾಕ್ಷಿ ಯಲ್ಲಿ ನನಗೆ ಹಿಡಿಸಿದ್ದು ಎರಡು-ಮೂರು ಕಥೆಗಳು ಮಾತ್ರ. ಕೆಲವೊಂದು ಕಥೆಗಳು ಮುಗಿದ ಮೇಲೆ ಇದರಲ್ಲಿ ಹೇಳೋಕೆ ಹೊರಟಿದ್ದು ಹಾಗು ಹೇಳಿರುವುದರ ಮಧ್ಯೆ ಏನೋ ಕೋಂಡಿ ಕಳಿಚಿದಂತೆ ಭಾಸವಾಗ್ತಾ ಇತ್ತು ಅಂತ ನನ್ನ ಅನಿಸಿಕೆ. ಹಾಗಂತ ಅದನ್ನು ನೀವು ನಂಬಬೇಕಾಗಿಲ್ಲ. ಯಾಕಂದ್ರೆ ನಾನು ಮೊದಲೇ ಹೇಳಿದ ಹಾಗೆ ವಿಮರ್ಶಕ ಅಲ್ಲ ಬರೇ ಓದುಗ ಅಷ್ಟೇ..

 

ರಾಯಭಾಗದ ರಹಸ್ಯ ರಾತ್ರಿಯ ಕಥೆಗಳಲ್ಲಿ ಹೆಚ್ಚಿನವು ಮೊದಲೇ ಓದಿದ್ದೆ. ಕೆಲವು ಹಳೆಯ ಕಥೆಗಳು ನಾ ಓದಿಲ್ಲದೆ ಇರುವಂತವುಗಳು ಖುಶಿ ಕೊಟ್ಟವು. ಎಡಕು ಮೇರಿಯ ರೈಲ್ವೇ ಸುರಂಗದ ಕಥೆ ತೇಜಸ್ವಿಯವರ ಬರಹದಂತೆ ರಸವತ್ತಾಗಿತ್ತು. ಆಗುಂಬೆಯ ಕಥೆ ಕೂಡಾ ಚೆನ್ನಾಗಿತ್ತು( ಕಥೆಯ ಹೆಸರುಗಳು ನೆನಪಿಲ್ಲ. ಇದನ್ನು ಬರೆಯುವಾಗ ಆ ಪುಸ್ತಕ ನನ್ನೆದುರಿಗಿಲ್ಲ. ಕ್ಷಮೆ ಇರಲಿ). ಇದೇ ಮಾತನ್ನು ಇಲ್ಲಿನ ಎಲ್ಲಾ ಕತೆಗಳ ಬಗ್ಗೆ ಹೇಳಲು ಬರುವಂತಿದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು

 

ಇನ್ನು ಪ್ರತಿಗಳು ಮುಗಿದು ಬಹು ಕಾಲದ ನಂತರ ಮರುಮುದ್ರಣದ ಸೌಭಾಗ್ಯ ಕಂಡ ಬೆಳಗೆರೆಯ ಒಮರ್ಟಾ ಅರ್ಧ ಓದಿ ಆಯ್ತು. ಇಡೀ ಕತೆ ಬೆಂಗಳೂರಿನ ಭೂಗತ ಲೋಕದ ಸುತ್ತ ಗಿರಕಿ ಹೊಡೆಯುತ್ತದೆ. ಓದೋಕಂತೂ ತುಂಬಾ ರುಚಿಕಟ್ಟಾಗಿದೆ. ಪೂರ್ತಿ ಓದಿದ ಮೇಲೆ ಇದರ ಬಗ್ಗೆ ಇನ್ನೂ ಸವಿಸ್ತಾರವಾಗಿ ಬರೆದೇನು.

 

ಮತ್ತೆ ನೀವು ಹೊಸತಾಗಿ ಏನೇನು ಓದಿದ್ರ್ರಿ?