ಹನಿ + ಹನಿ = ಕಂಬನಿ ?

24 09 2009

(ಮೊದಲಿನ 7 ಹನಿಗಳು ಇವತ್ತಿನ ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಇಣುಕಿವೆ..)

 ಸಣ್ಣಗೆ ಮಳೆ ಜಿನುಗುತ್ತಿತ್ತು

ತಣ್ಣಗೆ ನಿನ್ನ ನೆನಪಿನ ಸೋನೆಯಂತೆ

ತಂಪಾದ ನೆಲವು ಮಿದುವಾಗುತ್ತಿತ್ತು

ನಿನ್ನ ಒಲವುಕ್ಕಿ ಹರಿದ ಎದೆಯಂತೆ

——————————–

ನಿನ್ನ ನೆನಪಿನ ಮಳೆಯಲಿ ನಿನ್ನೆ ನಾ ನೆನೆದು

ರಾತ್ರಿ ಪೂರ್ತಿ ಒದ್ದೆಮುದ್ದೆ

ಎದೆಯ ಬೆಚ್ಚನೆ ಕವಾಟದೊಳಗೆ ನಿನಗೆ

ಬಂತೇನೆ ಸುಖವಾಗಿ ನಿದ್ದೆ?

——————————–

ದಾರಿ ಕವಲಾಗುವ ಮುನ್ನ ಜೊತೆಯಾಗಿ ನಡೆದೆವು

ಮೂಡಿಲ್ಲವೇನೆ ಹೆಜ್ಜೆ ಗುರುತು?

ಅರಸಿ ಅಲೆದು ದಾರಿ ತಪ್ಪಿರುವೆ ಎನ್ನರಸಿ

ಯಾರು ನೆರವಾದಾರು ನಿನ್ನ ಹೊರತು?

——————————–

ಕುಡಿ ನೋಟದಲೆ

ಕುಡಿಯೊಡೆದ ಒಲವು ಕವಲಾಯಿತು;

ನೋಟ ಕಿಡಿಯಾಯಿತು..

ಕನಸು ಪುಡಿಯಾಯಿತು..

ಮನಸು ಒಡೆದ ಕನ್ನಡಿಯಾಯಿತು..

——————————–

ನನಸಾಗುವ ಮೊದಲೇ ಕೈಜಾರಿಹೋದ

ಅಪೂರ್ಣ ಕನಸಿನದೊಂದು  ಮೆಲುಕು…

ಹಸಿವೆ ತೀರುವ ಮುನ್ನವೇ ಮುಗಿದ

ಅನಾಥ ಕೂಸಿನ ಕೈಯ್ಯ ರೊಟ್ಟಿ ತುಣುಕು…

——————————–

ಹೆಜ್ಜೆ ಮೂಡದ ಹಾದಿಯಲ್ಲಿ

ನಿನ್ನ ಗೆಜ್ಜೆ ದನಿಯ ಕೇಳಲೆಂದೇ

ಹೊರಟಿರುವೆ ನಿನ್ನ ಅರಸಿ

ಲಜ್ಜೆ ಮರೆತು ಬಿಗುಮಾನ ತೊರೆದು

ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತಾ

ಬರಲಾರೆಯಾ ಎನ್ನರಸಿ?

——————————–

ಬೊಗಸೆ ಕಂಗಳ ಹುಡುಗಿ ಅಂದು

ಮೊಗೆಮೊಗೆದು ಕೊಟ್ಟಳು

ಬೊಗಸೆ ತುಂಬಾ ಕನಸುಗಳ ಸುರಿದು..

ಭರವಸೆಯ ಪಾತ್ರೆಯಲಿ ಕೂಡಿಟ್ಟ ಕನಸೆಲ್ಲ

ಆವಿಯಾಗುತ್ತಿವೆ ಕಣ್ಣಿಂದ ಹೊರ ಹರಿದು

 ——————————–

 ನಿನ್ನ ಬಿಟ್ಟು ನಾನಿರಲಾರೆ ಅಂದವಳು

ನನ್ನ ಬಿಟ್ಟು ಹೋಗುವಾಗ

ಬಿಟ್ಟು ಹೋದ ನೆನಪುಗಳೇ ಯಾಕೆ

ಬಿಟ್ಟೂ ಬಿಡದೆ ಕಾಡುತಾವೆ?

——————————–

ಓ ತರಳೆ… ನಿನ್ನ ಪ್ರೇಮ ಸುಳಿಗಾಳಿ

ನಾನದಕೆ ಸಿಕ್ಕಿಬಿದ್ದ ತರಗೆಲೆ…

ಎಲ್ಲಿಗೊಯ್ಯುವುದೋ ಅರಿಯೆ ನೆನಪಿನ ಚಕ್ರಸುಳಿ

ಇನ್ನೆಷ್ಟು ಹೊತ್ತು ತಿರುಗಲೇ?


Actions

Information

3 responses

24 09 2009
ಶೆಟ್ಟರು (Shettaru)

ಸಖತ್ ಸರ್…

-ಶೆಟ್ಟರು

24 09 2009
ಆಸು ಹೆಗ್ಡೆ, ಬೆಂಗಳೂರು.

ಅಬ್ಬಬ್ಬಾ…!!!

ಹನಿ ಹನಿಯಾಗಿ ಮನತುಂಬಿದವು
ಮನ ತುಂಬಿಬಂದಾಗ ಕಣ್ತುಂಬಿದವು
ಅದಕೇ ಹನಿ+ಹನಿ=ಕಂಬನಿಯವು….!

24 09 2009
Shrinidhi hande

Congrats

Leave a comment