ಇತ್ತೀಚೆಗೆ ಒಂದು ಒಳ್ಳೆಯ ಪುಸ್ತಕ ಓದಲು ಸಿಕ್ಕಿತ್ತು. ಪೇರೂರು ಜಾರು ಅವರು ಬರೆದಿರುವ ‘ನಿಜಗನ್ನಡ’ ಅನ್ನುವ ಕೃತಿ. ನಮ್ಮ ಬರಹಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಎಷ್ಟು ತಪ್ಪುಗಳು ನುಸುಳಿರುತ್ತವೆ (ಬೆರಳಚ್ಚು ದೋಷಗಳನ್ನು ಹೊರತುಪಡಿಸಿ) ಅನ್ನುವುದು ಇದನ್ನು ಓದಿದ ಮೇಲೆ ಗೊತ್ತಾಯ್ತು. ಯಾವ ಶಬ್ದ ಸರಿ, ಅದು ಯಾಕೆ ಸರಿ, ಯಾವ ಪ್ರಭಾವದಿಂದ ಅಥವ ಕಾರಣದಿಂದ ತಪ್ಪಾದ ರೂಪ ಹುಟ್ಟಿಕೊಂಡಿದೆ… ಇವೆಲ್ಲವನ್ನು ಸೂಕ್ತ ಉದಾಹರಣೆಗಳೊಂದಿಗೆ ಸೊಗಸಾಗಿ ತಿಳಿಸಿದ್ದಾರೆ. ಕನ್ನಡದಲ್ಲಿ ಬರೆಯುವವರೆಲ್ಲರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ. ಆದರೆ ಇದು ಪ್ರಕಟವಾಗಿ ಬಹಳ ಕಾಲ ಆಗಿರುವುದರಿಂದ ಪುಸ್ತಕ ಮಳಿಗೆಗಳಲ್ಲಿ ಇನ್ನೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದರೆ ಖಂಡಿತ ಕೊಂಡು ಓದಿ.
ಕೆಲವು ಸರಿ-ತಪ್ಪು ಪ್ರಯೋಗಗಳ ಬಗ್ಗೆ ಮಾಹಿತಿಯನ್ನು ಆ ಪುಸ್ತಕದಿಂದ ಹೆಕ್ಕಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ….ನಿಮಗಾಗಿ…ಮತ್ತು ನನಗಾಗಿ ಕೂಡ! ಇನ್ನು ಮುಂದೆ ನನ್ನ ಬರಹಗಳಲ್ಲಿ ಈ ತಪ್ಪುಗಳು ಆದಷ್ಟು ಕಡಿಮೆ ಆಗಲಿವೆ ಅನ್ನುವ ಭರವಸೆಯೊಂದಿಗೆ….
ತಪ್ಪು ಪ್ರಯೋಗ ಸರಿಯಾದ ರೂಪ
ನೆನೆಗುದಿಗೆ ಬಿದ್ದಿದೆ ನನೆಗುದಿಗೆ ಬಿದ್ದಿದೆ
ಉಚ್ಛ ಉಚ್ಚ
ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ
ಅಂತರ್ಜಾಲ ಅಂತರಜಾಲ
ಜನರು ಜನ
ಮೆಟ್ಟಲು ಮೆಟ್ಟಿಲು
ಗಿಡಗಂಟೆ ಗಿಡಗಂಟಿ ( ಗಿಡ + ಕಂಟಿ )
ಬಂದ್ಲು ಬಂದ್ಳು / ಬಂದಳು
ಹಠ ಹಟ
ಭತ್ತ ಬತ್ತ
ಗಾಭರಿ ಗಾಬರಿ
ಒಂಭತ್ತು ಒಂಬತ್ತು
ನೋಡುತ್ತಾ * ನೋಡುತ್ತ
ಎಲ್ಲಾ * ಎಲ್ಲ
ಕೂಡಾ * ಕೂಡ
ಮೊಟ್ಟ ಮೊದಲು * ಮೊತ್ತ ಮೊದಲು
ವಿನಃ , ವಿನಹ * ವಿನಾ
ಜತೆ ಜೊತೆ
ಉಡಿಗೆ ಉಡುಗೆ
ಅಡಿಗೆ ಅಡುಗೆ
ಯೌವ್ವನ ಯವ್ವನ / ಯೌವನ
ಬರ್ತಾಯಿದೆ ಬರ್ತಿದೆ / ಬರುತ್ತಿದೆ
ಘಂಟೆ ಗಂಟೆ
ನಡುಗೆ ನಡಿಗೆ
ಒಂಥರ * ಒಂತರ
ನಿಶ್ಯಬ್ಧ ನಿಶ್ಶಬ್ಧ / ನಿಶಬ್ಧ
ನಿಶ್ಯಕ್ತಿ ನಿಶ್ಶಕ್ತಿ / ನಿಶಕ್ತಿ
ಧಾಳಿ ದಾಳಿ
ಬ್ರಹ್ಮಾಚಾರಿ ಬ್ರಹ್ಮಚಾರಿ
ನೆನ್ನೆ ನಿನ್ನೆ
ಹಿಂದೂಸ್ಥಾನ ಹಿಂದೂಸ್ತಾನ
ಆಶೆ ಆಸೆ
ಇಂಥಾ * ಇಂಥ
(* – ಈ ತಪ್ಪು ನಾನು ಅನೇಕ ಬಾರಿ ಮಾಡಿದ್ದೇನೆ L)
ಇದರ ಜೊತೆಯಲ್ಲಿ ನನ್ನದೊಂದು ಸಂಶಯವಿದೆ. ‘ಪೂರ್ವಗ್ರಹ’ ಪದ ಸರಿಯೆ ಅಥವ ‘ಪೂರ್ವಾಗ್ರಹ’ ಸರಿಯೆ? ಗೊತ್ತಿರುವವರು ಸಮರ್ಪಕ ವಿವರಣೆ ಸಹಿತ ತಿಳಿಸುವಿರಾ?

ಇವ್ರೆಲ್ಲಾ ಏನ್ ಹೇಳ್ತಾರೆ ಕೇಳಿ...