ತಾಳಮದ್ದಳೆ..ಯಕ್ಷಗಾನಗಳ ರಸದೌತಣ

10 11 2008

ಕರಾವಳಿಯ ಗಾನಕೋಗಿಲೆ ಎಂದೇ ಖ್ಯಾತರಾಗಿರುವ ಸುಬ್ರಹ್ಮಣ್ಯ ಧಾರೇಶ್ವರ-50 ಆಚರಣೆಯ ನಿಮಿತ್ತ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಬ್ಬದ ಸಡಗರ ಸಂಭ್ರಮ. ಯಕ್ಷಕಲಾ ರಂಜಿನಿ ವತಿಯಿಂದ ದಿನಪೂರ್ತಿ ಯಕ್ಷಗಾನ ಪ್ರೇಮಿಗಳಿಗೆ ರಸದೌತಣ ಬಡಿಸಿದಂತಾಗಿತ್ತು. ಯಕ್ಷಗಾನದ ಗೀತೆಗಳ ಗಾಯನದ ಕಾರ್ಯಕ್ರಮದ ಮೊದಲಿಗೆ ಇದ್ದುದರಿಂದ ಹೋಗಲಾಗಿರಲಿಲ್ಲ. ನಾ ಹೋಗುವ ವೇಳೆಗೆ ಸರಿಯಾಗಿ ಕೃಷ್ಣ ಸಂಧಾನ ತಾಳಮದ್ದಳೆ ಇನ್ನೇನು ಶುರುವಾಗಿತ್ತಷ್ಟೇ.

ಕೌರವನಾಗಿ ಪ್ರಭಾಕರ ಜೋಶಿಯವರ ಮಾತು ಕೇಳ್ತಾ ಇದ್ರೆ ಈ ತಾಳಮದ್ದಲೆ ಮುಗಿಯುವುದೇ ಬೇಡ ಅನಿಸುತ್ತಿತ್ತು. ಅವರಿಗೆದುರಾಗಿ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ರು ಕೃಷ್ಣನಾಗಿ ಜೋಶಿಯವರಿಗಿಂತ ತಾವೇನು ಕಡಿಮೆ ಇಲ್ಲ ಅನ್ನುವುದನ್ನು ನಿರೂಪಿಸುತ್ತಿದ್ದರು. ಶುದ್ಧ ರೂಪದ ಕನ್ನಡವನ್ನು ಮಾತನಾಡುವವರು ಈಗೀಗ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸುವವರು ಇಂತಹ ಯಕ್ಷಗಾನ, ತಾಳಮದ್ದಲೆಗಳ ಅರ್ಥಗಾರಿಕೆಯಲ್ಲಿ ಬಳಕೆಯಾಗುವ ಕನ್ನಡ ಕೇಳಿಲ್ಲವೆಂದೇ ಹೇಳಬೇಕು. ಅದರಲ್ಲೂ ಜೋಶಿ ಮತ್ತು ಸಿದ್ಧಕಟ್ಟೆ ಇಬ್ಬರೂ ಕೂಡಾ ಸುಸ್ಪಷ್ಟ ಉಚ್ಛಾರಣೆಯೊಂದಿಗೆ ತಮ್ಮ ಪಾಂಡಿತ್ಯಪೂರ್ಣ ವಾಕ್ಯಗಳನ್ನು ಮಂಡಿಸುತ್ತ ಇದ್ದರೆ..ವಿಜಕ್ಕೂ ಕರ್ಣರಸಾಯನ.

 

ತಾಳಮದ್ದಲೆ ಮುಗಿಯುವಷ್ಟರಲ್ಲಿ ಮೂರೂವರೆಯಾಗಿತ್ತು. ಅದಕ್ಕೆ ಸರಿಯಾಗಿ ಹೊಟ್ಟೆಯೂ ತಾಳ ಹಾಕ್ತಾ ಇತ್ತು. ನಿನ್ನ ಪೂಜೆಗೆ ಬಂದೇ ಮಹದೇಶ್ವರ ಅನ್ನುತ್ತ ಕಲಾಕ್ಷೇತ್ರದ ಪಕ್ಕದ ಕ್ಯಾಂಟೀನಿನಲ್ಲಿ ಹೊಟ್ಟೆಗೆ ನೈವೇದ್ಯ ಮಾಡಿದ್ದಾಯಿತು. ಮತ್ತೆ ಕಲಾಕ್ಷೇತ್ರದೊಳಗೆ ಬರುವಷ್ಟರಲ್ಲಿ ಬಡಗಿನ ಅತಿಥಿ ಕಲಾವಿದರ ಸಮ್ಮಿಲನದೊಂದಿಗೆ ಬ್ರಹ್ಮ ಕಪಾಲಇನ್ನೇನು ಶುರುವಾಗಲಿತ್ತು. ಬ್ರಹ್ಮನಾಗಿ ತೀರ್ಥಳ್ಳಿ, ಈಶ್ವರನಾಗಿ ಯಾಜಿ, ಶಾರದೆಯಾಗಿ ನೀಲ್ಕೋಡು, ಮನ್ಮಥನಾಗಿ ಕಣ್ಣಿಮನೆ…. ಹೀಗೆ ಘಟಾನುಘಟಿಗಳೆಲ್ಲ ಒಟ್ಟಾಗಿದ್ದರು. ಹಿಮ್ಮೇಳದಲ್ಲಂತೂ ಆವತ್ತಿನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಧಾರೇಶ್ವರರು….

ಒಟ್ಟಿನಲ್ಲಿ ಯಕ್ಷರಸಿಕರಿಗೆ ಹಬ್ಬದೂಟ. ಸಮಯದ ಅಭಾವದ ಕಾರಣ ಸ್ವಲ್ಪ ಓಡಿಸಿದಂತೆ ಭಾಸವಾಯ್ತಾದರೂ ಒಟ್ಟಾರೆಯಾಗಿ ಪ್ರದರ್ಶನ ತೃಪ್ತಿಕರವಾಗಿತ್ತು.

 

ಆಮೇಲೆ ಶುರುವಾಗಿದ್ದು ತೆಂಕುತಿಟ್ಟಿನವರ ಮಾಯಶೂರ್ಪನಕಿ-ಇಂದ್ರಜಿತು ಕಾಳಗ. ಈ ಪ್ರದರ್ಶನ ನಡೆಯುತ್ತಿರುವಾಗ ಮಧ್ಯದಲ್ಲಿ ಪ್ರದರ್ಶನ ನಿಂತು ಸಭಾ ಕಾರ್ಯಕ್ರಮಗಳು ಮೊದಲ್ಗೊಂಡವು. ರಾಮಚಂದ್ರಾಪುರ ಮಠದ ರಾಘವೇಶ್ವರರ ಉಪಸ್ಥಿತಿಯಲ್ಲಿ, ಹಿರಣ್ಣಯ್ಯ, ಚಿಟ್ಟಾಣಿ, ಜೋಶಿ, ಹೊಸ್ತೋಟ ಮಂಜುನಾಥ ಭಾಗವತರು ಮೊದಲಾದವರ ಸಮ್ಮುಖದಲ್ಲಿ ಧಾರೇಶ್ವರರು, ಕೊಳಗಿಯವರು ಮತ್ತು ದಿನೇಶ್ ಅಮ್ಮಣ್ಣಾಯರಿಗೆ ಬಿರುದು-ಸನ್ಮಾನ, ಅಭಿಮಾನ ಧನ ಸಮರ್ಪಣೆ. ರಾಘವೇಶ್ವರಿಂದ ನುಡಿ ಅರ್ಚನೆ. ಜೋಶಿ, ಚಿಟ್ಟಾಣಿ, ಹಿರಣ್ಣಯ್ಯ, ಹೊಸ್ತೋಟರಿಂದ ಯಕ್ಷಗಾನ ಕಲೆ, ಇತ್ತೀಚಿನ ಬದಲಾವಣೆಗಳು, ಪೌರಾಣಿಕ-ಸಾಮಾಜಿಕ ಯಕ್ಷಗಾನಗಳು, ಧಾರೇಶ್ವರರ ಸಾಧನೆ, ಬೆಳೆದು ಬಂದ ದಾರಿ ಹೀಗೆ ಕಲಾರಾಧಕರ-ಸಾಧಕರ ಸಮ್ಮೇಳನ. ಆಮೇಲೆ ಮಾತನಾಡಿದ ಧಾರೇಶ್ವರರು ಸುಮಾರು ಇಪ್ಪತ್ತು ನಿಮಿಷಗಳ ಕಾಲ ತಮ್ಮ ಗುರುಗಳು, ತಮ್ಮನ್ನು ಪ್ರೋತ್ಸಾಹಿಸಿದವರು, ಕಾಳಿಂಗ ನಾವುಡರು, ಯಖ್ಷಗಾನದ ಪ್ರಸ್ತುತ ಸ್ಥಿತಿ-ಗತಿ… ಹೀಗೆ ನಿರರ್ಗಳವಾಗಿ ಮಾತನಾಡಿದರು.

 

ಸಭಾ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ಒಂಬತ್ತೂವರೆ. ಇನ್ನೂ ಇಂದ್ರಜಿತು ಕಾಳಗವೇ ಮುಗಿದಿಲ್ಲ. ಇನ್ನೂ ಒಂದು ಪ್ರಸಂಗ ಆಡಲು ಬಾಕಿ. ಆದರೆ ಸಮಯದ ಅಭಾವದ ಕಾರಣದಿಂದ ಅದನ್ನು ಎಲ್ಲಿ ರದ್ದು ಮಾಡುತ್ತಾರೋ ಅನ್ನುವ ದಿಗಿಲು ಎಲ್ಲರ ಮುಖದಲ್ಲೂ. ಕಾರಣ ಎಲ್ಲರೂ ಬಹು ಹೊತ್ತಿನಿಂದ ಕಾದು ಕುಳಿತಿದ್ದು ಗದಾಯುದ್ಧದ ಚಿಟ್ಟಾಣಿಯವರ ಕೌರವನನ್ನು ನೋಡಲು. ನಮ್ಮ ಆತಂಕವನ್ನೆಲ್ಲ ಪರಿಹರಿಸುವಂತೆ ಗದಾಯುದ್ಧ ಆಟ ಸಂಕ್ಷಿಪ್ತವಾಗಿ ಆಡುವಾರೆಂದು ಪ್ರಕಟನೆ ಹೊರಬಿತ್ತು.ಅಂತೂ ಕಾದು ಕುಳಿತದ್ದೂ ವ್ಯರ್ಥವಾಗಲಿಲ್ಲ. ತ್ವರಿತವಾಗಿ ಇಂದ್ರಜಿತು ಕಾಳಗ ಮುಗಿಸಿದರು. ಅಂತೂ ಹತ್ತು ಗಂಟೆ ಹತ್ತು ನಿಮಿಷಕ್ಕೆ ಗದಾಯುದ್ಧ ಶುರುವಾಯಿತು. ಸುಮಾರು ಹತ್ತೂವರೆಯ ಹೊತ್ತಿಗೆ ಚಿಟ್ಟಾಣಿಯವರ ರಂಗಪ್ರವೇಶವಾಯ್ತು ಇಡೀ ಸಭಾಂಗಣದಲ್ಲಿ ಉತ್ಸಾಹ ಕೇಕೆ, ಚಪ್ಪಾಳೆ, ಶಿಳ್ಳೆ.ತುಂಬಿ ಹೋಗಿತ್ತು. 70 ವರ್ಷಕ್ಕೂ ಮಿಕ್ಕಿದ ಪ್ರಾಯದ ಚಿಟ್ಟಾಣಿಯವರ ಕೌರವನನ್ನು ಕಂಡ ಮೇಲೆ ಅಬ್ಭಾ ಅನ್ನಿಸಿದ್ದು ಸುಳ್ಳಲ್ಲ. ಈ ವಯಸ್ಸಿನಲ್ಲೇ ಇಂತಹ ಕುಣಿತ ನರ್ತನ ಮಾಡುತ್ತಾರಾದರೆ ಅವರ ಪ್ರಾಯದ ಕಾಲದ ಅಬ್ಬರ ಹೇಗಿದ್ದಿರಬಹುದು ಅಂತ ಕಲ್ಪನೆ ಮಾಡಿಕೊಂಡು, ಆ ಕಲಾ ಸ್ವರ್ಗಲೋಕದಿಂದ ಧರೆಗಿಳಿದು ಬಂದು ಇನ್ನು ತಡ ಮಾಡಿದ್ರೆ ಮನೆಗೆ ಹೋಗೋಕೆ ಆಟೋ ಸಿಕ್ಕೋಲ್ಲ ಅನ್ನುವ ವಿಷಯ ನೆನಪಾಗಿ ಹೊರಟು ಬಂದೆ. ಮನಸಿನ ತುಂಬ ಮನೆ ತಲುಪಿದ ಮೇಲೂ ಸಾರ್ಥಕವಾಗಿ ಕಳೆದ ದಿನವೊಂದರ ಯಕ್ಷರಸಾಸ್ವಾದದ ರುಚಿ ಸದಾ ನೆನಪಾಗಿ ಉಳಿದುಬಿಟ್ಟಿತ್ತು. ಧಾರೇಶ್ವರ ಸುವರ್ಣ ಸಂಭ್ರಮ ಸಾರ್ಥಕವೆನಿಸಿತ್ತು





ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ

1 09 2008

ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು ಮೈಗೂಡಿಸಿಕೊಂಡು ಯಕ್ಷಗಾನ ರಸಿಕರ ಮನರಂಜಿಸುತ್ತಿದ್ದಾರೆ. ಅವರೇ ಹೊಸಂಗಡಿಯ ರವೀಂದ್ರ ಶೆಟ್ಟಿಯವರು. ಇಂತಹ ಹಾಡಿನ ಮೋಡಿಗಾರನೊಂದಿಗೆ ಕೆಲಹೊತ್ತು ಕಳೆಯುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಅವರೊಂದಿಗೆ ನಡೆಸಿದ ಪುಟ್ಟ ಸಂವಾದದ ಬಳಿಕ ಅವರ ಸ್ವರಮಾಧುರ್ಯದಷ್ಟೇ ಶ್ರೀಮಂತವಾದ ಅವರ ಸಂಸ್ಕಾರವನ್ನು ಕಂಡು ಹಾಗೂ ವಿನಯವಂತಿಕೆಯ ಪ್ರತಿಮೂರ್ತಿಯಂತಿದ್ದ ಅವರ ಮಾತುಗಳನ್ನು ಕೇಳಿ ತುಂಬಿದ ಕೊಡ ತುಳುಕದು ಅನ್ನುವ ಮಾತಿಗೆ ಪ್ರತ್ಯಕ್ಷ ನಿದರ್ಶನ ಸಿಕ್ಕಂತಾಗಿತ್ತು. ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರ ನಿಮಗಾಗಿ-

 

ಪ್ರಶ್ನೆ - ಯಕ್ಷಗಾನ ಕ್ಷೇತ್ರದತ್ತ ನೀವು ಆಕರ್ಷಿತರಾಗಿದ್ದು ಹೇಗೆ?

ರವೀಂದ್ರ ಶೆಟ್ಟಿ- ಯಕ್ಷಗಾನ ಕ್ಷೇತ್ರದಲ್ಲಿ ನನ್ನ ಅಣ್ಣ ಕರುಣಾಕರ ಶೆಟ್ಟಿಯವರು ಹೆಸರುವಾಸಿಯಾಗಿದ್ದರು. ಹಾಗಾಗಿ ತೀರಾ ಎಳೇ ಪ್ರಾಯದಲ್ಲೇ ಯಕ್ಷರಂಗವು ನನ್ನನ್ನು ಚುಂಬಕದಂತೆ ಸೆಳೆಯುತ್ತಿತ್ತು. ಕಾಳಿಂಗ ನಾವುಡರ ಹಾಡುಗಾರಿಕೆಯು ನನ್ನ ಮನಸ್ಸಿನ ಮೇಲೆ ತನ್ನ ಮಾಯಜಾಲವನ್ನು ಬೀಸಿತ್ತು. ಆಗ ಮನಸ್ಸಿನಲ್ಲಿ ಮೊಳೆತ ಭಾಗವತನಾಗುವ ಬಯಕೆ ನನ್ನನ್ನು ಈ ರಂಗದತ್ತ ಎಳೆದು ತಂದಿತು.

 

ಪ್ರಶ್ನೆ - ಯಕ್ಷರಂಗದಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ? ನಿಮ್ಮ ಕಲಿಕೆ, ಗುರುಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ - ಕಳೆದ 23 ವರ್ಷಗಳಿಂದ ಯಕ್ಷಗಾನ ಮಾತೆಯ ಸೇವಾಕೈಂಕರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಕಲಿಕೆ ಆರ್ಗೋಡು ಗೋವಿಂದರಾಯ ಶೆಣೈಯವರ ಸಮರ್ಥ ಮಾರ್ಗದರ್ಶನದಲ್ಲಿ ಮೊದಲ್ಗೊಂಡು, ಆ ಬಳಿಕ ಕೋಟದ ಕಲಿಕಾ ಕೇಂದ್ರದಲ್ಲಿ ಮುಂದುವರಿಯಿತು. ಕೆ.ಪಿ. ಹೆಗಡೆಯವರ ಗರಡಿಯಲ್ಲಿ ನನ್ನ ಕಲಿಕೆಗೊಂದು ಸ್ಪಷ್ಟ ರೂಪು ಬಂದಿತ್ತು. ತದನಂತರ ಹಾಲಾಡಿ ರಾಘವೇಂದ್ರ ಮಯ್ಯರ ಒಡನಾಟದಲ್ಲಿ ಅವರಿಂದ ಭಾಗವತಿಕೆಯ ಪಟ್ಟುಗಳನ್ನು ಹಂತ ಹಂತವಾಗಿ ತಿಳಿಯುತ್ತಾ ಬಂದೆ. ನಾನಿಂದು ಏನಾದರೂ ಕಿಂಚಿತ್ ಯಶಸ್ಸು ಕಂಡಿದ್ದೇನೆ ಅನ್ನುವುದಾದರೆ ಅದರ ಬಹುಪಾಲು ಶ್ರೇಯ ಮಯ್ಯರ ಸಮರ್ಥ ಮಾರ್ಗದರ್ಶನಕ್ಕೆ ಸಲ್ಲಬೇಕು.

 

ಪ್ರಶ್ನೆ - ನಿಮ್ಮ ಇಲ್ಲಿಯವರೆಗಿನ ತಿರುಗಾಟದ ಕುರಿತು ಹೇಳ್ತೀರಾ?

ರ.ಶೆ - ನನ್ನ 23 ವರ್ಷಗಳ ಈ ಸುದೀರ್ಘ ತಿರುಗಾಟದಲ್ಲಿ ಅನೇಕ ಮೇಳಗಳಲ್ಲಿ ಕಲಾಸೇವೆ ಗೈಯುವ ಅವಕಾಶ ನನಗೆ ಲಭಿಸಿದೆ. ಕಮಲಶಿಲೆ ಮೇಳದಲ್ಲಿ ಒಂದು ವರ್ಷ, ಮಾರಣಕಟ್ಟೆ ಮೇಳದಲ್ಲಿ ನಾಲ್ಕು ವರ್ಷ, ಶಿರಸಿ ಮೇಳದಲ್ಲಿ ಎರಡು ವರ್ಷ, ಸಾಲಿಗ್ರಾಮ ಮೇಳದಲ್ಲಿ ನಾಲ್ಕು ವರ್ಷ ಅಲ್ಲದೇ ಸ್ವ-ಆಸಕ್ತಿಯಿಂದ ತುಳು ಕಲಿತು, ತೆಂಕಿನ ಮೇಳಗಳಾದ ಪುತ್ತೂರು, ಮಂಗಳಾದೇವಿ ಹಾಗೂ ಕುಂಟಾರು ಮೇಳಗಳಲ್ಲಿ ಒಟ್ಟಾಗಿ ಆರು ವರ್ಷ ತಿರುಗಾಟ ಮಾಡಿದ್ದೇನೆ.

 

ಪ್ರಶ್ನೆ - ನಿಮ್ಮ ವೃತ್ತಿಬದುಕಿನಲ್ಲಿ ತಿರುವು ನೀಡಿದ ಘಟನೆಯನ್ನು ಹಂಚಿಕೊಳ್ತೀರಾ? ಹಾಗೆಯೇ ನಿಮ್ಮ ತಿರುಗಾಟದ ಅವಧಿಯಲ್ಲಿ ಘಟಿಸಿದ ಯಾವುದಾದರೂ ಸ್ವಾರಸ್ಯಕರ-ಅವಿಸ್ಮರಣೀಯ ಘಟನೆಗಳಿದ್ರೆ ಅದನ್ನು ತಿಳಿಸುವಿರಾ?

ರ.ಶೆ - ಯಕ್ಷಗಾನ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ವಾರಸ್ಯಕರ ಘಟನೆ ನಡೆಯುತ್ತಲೇ ಇರುತ್ತದೆ. ಹೇಳಹೊರಟರೆ ಅಂತಹ ಸಾವಿರಾರು ಘಟನೆಗಳಿವೆ. ಪ್ರತೀ ಪ್ರದರ್ಶನದಲ್ಲೂ ಏನಾದರೊಂದು ಸ್ವಾರಸ್ಯ, ಹೊಸ ಅನುಭವ, ವಿನೂತನವಾದುದೇನನ್ನಾದರೂ ಕಂಡು-ಕೇಳಿ ಕಲಿಯುವ ಅವಕಾಶ ಇದ್ದೇ ಇದೆ.

ನನ್ನ ವೃತ್ತಿ ಬದುಕಿಗೆ ಹೊಸ ಮೆರುಗನ್ನು ತಂದಿತ್ತಿದ್ದು ನಾನು ಸಾಲಿಗ್ರಾಮ ಮೇಳಕ್ಕೆ ಭಾಗವತನಾಗಿ ಬಂದಂತಹ ಸಂದರ್ಭ. ಇದಕ್ಕಾಗಿ ಕಿಶನ್ ಹೆಗ್ಡೆಯವರಿಗೆ ನಾನು ಸದಾ ಆಭಾರಿ. ನನ್ನನ್ನು ಒಬ್ಬ ಭಾಗವತ ಅಂತ ಜನರು ಗುರುತಿಸುವಂತಾದದ್ದು ಆಗಲೇ. ಅಪಾರ ಜನಪ್ರಿಯತೆ ತಂದುಕೊಟ್ಟ ಮೇಘ-ಮಾರ್ತಾಂಡ ಪ್ರಸಂಗ ನನ್ನ ಬದುಕಿನಲ್ಲಿ ಸದಾ ನೆನಪಲ್ಲಿ ಉಳಿಯುವಂತಹ ಪ್ರಸಂಗ. ತದನಂತರ ಬಂದ ಸಪ್ತಪದಿ ಪ್ರಸಂಗ ಕೂಡಾ ನನ್ನ ಭಾಗವತಿಕೆಯ ಹಾದಿಯಲ್ಲೊಂದು ಮೈಲಿಗಲ್ಲು. ಆ ಬೆಳಕೇ ನನ್ನ ವೃತ್ತಿ ಬದುಕಿನ ಹಾದಿಯಲ್ಲಿ ದಾರಿದೀಪದಂತಾಗಿದೆ.

 

ಪ್ರಶ್ನೆ - ನೀವು ನಿಮ್ಮ ಹಾಡುಗಾರಿಕೆಗೆ ಯಾರನ್ನಾದರೂ ಸ್ಫೂರ್ತಿ-ಆದರ್ಶ ಎಂದು ನಂಬಿಕೊಂಡಿದ್ದೀರಾ? ಗುರು ಸಮಾನರೆಂದು ನೀವು ಆದರಿಸುವ ವ್ಯಕ್ತಿ ಯಾರು?

ರ.ಶೆ – ನನಗೆ ಗುಂಡ್ಮಿ ಕಾಳಿಂಗ ನಾವುಡರೇ ಸದಾ ಸ್ಫೂರ್ತಿಯ ಸೆಲೆ. ಅವರ ಸ್ವರಕ್ಕಿದ್ದ ಗತ್ತು-ಗಾಂಭೀರ್ಯ, ಲಯ, ಗಡಸುತನ, ಮಾಧುರ್ಯ ಇವೆಲ್ಲವುಗಳಿಂದಾಗಿ ಸದಾ ನನಗೆ ಆದರ್ಶಪ್ರಾಯರಾಗಿದ್ದರು. ನನ್ನದೇನಿದ್ದರೂ ಅವರು ರಚಿಸಿಟ್ಟುಹೋದ ಸಮರ್ಥ ಪರಂಪರೆಯ ಹೆಜ್ಜೆಜಾಡಿನಲ್ಲಿ ಕಿಂಚಿತ್ತು ದೂರವನ್ನಾದರೂ ಕ್ರಮಿಸಬೇಕೆನ್ನುವ ನಮ್ರ ಪ್ರಯತ್ನ.

 

ನನ್ನ ಗುರುವೆಂಬ ಅಭಿದಾನಕ್ಕೆ ಪಾತ್ರರಾಗುವಂತವರು ಯಾರಾದರೂ ಇದ್ದರೆ ಅದು ಹಾಲಾಡಿ ರಾಘವೇಂದ್ರ ಮಯ್ಯರು. ಅವರ ಸಹಕಾರ, ಮಾರ್ಗದರ್ಶನವನ್ನು ನಾನು ಎಷ್ಟು ನೆನೆದರೂ ಅದು ಕಡಿಮೆಯೇ ಸರಿ. ಅವರ ಒಡನಾಟದಲ್ಲಿ ನನ್ನ ವೃತ್ತಿ ಬದುಕಿಗೆ ಹೊಸ ಭಾಷ್ಯ ಬರೆಯಲ್ಪಟ್ಟಿತು ಅಂತ ಹೇಳಿದರೂ ಅದು ಅತಿಶಯೋಕ್ತಿಯಲ್ಲ.

 

ಪ್ರಶ್ನೆ - ಹೊಸ ಪ್ರಸಂಗಗಳು ಹಾಗೂ ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯ ತುಲನೆಯಲ್ಲಿ ನೀವು ಮೆಚ್ಚುವುದು ಯಾವುದು?

ರ.ಶೆ – ಸತ್ಯ ಹೇಳಬೇಕೆಂದರೆ ಯಾವತ್ತಿಗೂ ಪೌರಾಣಿಕ ಪ್ರಸಂಗಗಳೇ ನನ್ನ ಮೊದಲ ಆದ್ಯತೆ. ಪೌರಾಣಿಕ ಪ್ರಸಂಗಗಳಿಗಿರುವ ಪಾರಂಪರಿಕ ಚೌಕಟ್ಟಿನ ಸೊಗಸು ಹೊಸಪ್ರಸಂಗಗಳಲ್ಲಿ ತೀರಾ ದುರ್ಲಭ. ಹಾಗಾಗಿಯೇ ಎಲ್ಲಾ ರಸ-ಭಾವಗಳ ಪೋಷಣೆಯಿರುವ ಪೌರಾಣಿಕ ಪ್ರಸಂಗಗಳಲ್ಲಿ ಹಾಡುವುದು ಅತ್ಯಂತ ತೃಪ್ತಿ ನೀಡುತ್ತದೆ. ಹಾಗಂತ ಹೊಸ ಪ್ರಸಂಗಗಳಿಗೆ ಹಾಡುವುದು ಕಳಪೆಯೆಂದೇನರ್ಥವಲ್ಲ. ಅದಕ್ಕೂ ಅದರದ್ದೇ ಆದ ಸೊಬಗಿದ್ದೇ ಇರುತ್ತದೆ. ಆದರೆ ಇವೆರಡರ ತುಲನೆಯಲ್ಲಿ ನನ್ನ ಪ್ರಾಶಸ್ತ್ಯ ಮಾತ್ರ ಪೌರಾಣಿಕ ಪ್ರಸಂಗಗಳಿಗೇ.

 

ಪ್ರಶ್ನೆ - ಇತ್ತೀಚೆಗೆ ರಂಜನೆಯ ಹೆಸರಿನಲ್ಲಿ ವಿವಿಧ ಜನಾಕರ್ಷಣೆಯ ತಂತ್ರಗಳೊಂದಿಗೆ ಬರುತ್ತಿರುವ ಹೊಸ ಪ್ರಸಂಗಗಳು ಹೆಚ್ಚುತ್ತಿವೆಯಲ್ಲ. ಈ ಬಗ್ಗೆ ನಿಮ್ಮ ನಿಲುವೇನು?

ರ.ಶೆ - ಬದಲಾವಣೆ, ಹೊಸತನ ಎಲ್ಲಾ ರಂಗಗಳಲ್ಲಿ ಸಹಜ ಹಾಗೂ ಅನಿವಾರ್ಯ ಕೂಡಾ. ಕಲೆ ಯಾವತ್ತಿಗೂ ನಿಂತ ನೀರಾಗಬಾರದು. ಅದರೆ ಎಲ್ಲವೂ ಹಿತಮಿತವಾಗಿದ್ದರೆ ಮಾತ್ರ ಅದಕ್ಕೊಂದು ಚಂದ-ಘನತೆ. ಪ್ರೇಕ್ಷಕರ ಬದಲಾಗುವ ಅಭಿರುಚಿಗೆ ತಕ್ಕಂತೆ ಒಂದಿಷ್ಟು ರಂಜನೆಗಾಗಿ ಯಕ್ಷಗಾನದ ಪಾರಂಪರಿಕ ಚೌಕಟ್ಟಿಗೆ, ರೀತಿ-ನೀತಿಗೆ ಅಪಚಾರವಾಗದಂತೆ ಆಕರ್ಷಣೆಯ ತಂತ್ರಗಳುಗಳು ಇದ್ದರೆ ಅದು ಪ್ರಸಂಗದ ಯಶಸ್ಸಿಗೆ ಪೂರಕವಾಗುತ್ತದೆ. ಕಾಲಕಾಲಕ್ಕೆ ಹೊಸತನವನ್ನು ಮೈಗೂಡಿಸಿಕೊಳ್ಳದಿದ್ದರೆ ಕಲೆ ನಿಂತ ನೀರಂತಾಗಿಬಿಡುವ ಅಪಾಯವಿದೆ. ಅಲ್ಲದೇ ಯಾವುದೇ ಕಲಾಪ್ರಕಾರ ಉಳಿಯಬೇಕಿದ್ದರೆ ಅದಕ್ಕೆ ಜನಾಕರ್ಷಣೆ, ಬೆಂಬಲ ತೀರಾ ಅವಶ್ಯ. ಹಾಗಾಗಿ ಈ ಬದಲಾವಣೆಗಳೆಲ್ಲವೂ ಕಲೆಕ್ಷನ್ ನಂಬಿಕೊಂಡು ಬದುಕುವ ವೃತ್ತಿ ಮೇಳಗಳ ಉಳಿವಿಗೆ ಅನಿವಾರ್ಯ ಕೂಡಾ. ಆದರೆ ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಬರೀ ಅಗ್ಗದ ತಂತ್ರಗಳನ್ನೇ ತುಂಬಿಸಿಟ್ಟರೆ ಅದು ಕಲೆಗೆ ಮಾಡುವ ಅಪಚಾರ. ಉಪ್ಪಿನಕಾಯಿ ಊಟದ ಒಂದು ಭಾಗವಾಗಿದ್ದರೆ ಊಟ ರುಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನೇ ಊಟ ಅಂತ ಕರೆಯಲಾಗದಷ್ಟೇ. ಹಾಗಾಗಿ ಎಲ್ಲವೂ ಹಿತಮಿತವಾಗಿದ್ದರೆ ಸಹ್ಯ. ಆ ಅರಿವು ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಇರಬೇಕಾದುದು ತೀರಾ ಅಗತ್ಯ.

 

ಪ್ರಶ್ನೆ -ನೀವು ರಚಿಸಿರುವ ಪ್ರಸಂಗಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ – ಹಿಂದೆ ಬಯಲಾಟದ ಮೇಳಗಳಲ್ಲಿದ್ದಾಗ ಅನೇಕ ಪ್ರಸಂಗಗಳನ್ನು ರಚಿಸಿದ್ದೇನೆ. ದೈವಲೀಲೆ, ಸ್ವಪ್ನದ ಸಿರಿ, ಸ್ವಪ್ನ ಕನ್ಯೆ..ಇನ್ನೂ ಮುಂತಾದುವುಗಳು. ವೃತ್ತಿ ಮೇಳಕ್ಕೆ ಬಂದ ಮೇಲೆ ನಾನು ರಚಿಸಿದ ಮೊಟ್ಟ ಮೊದಲ ಕೃತಿ ಸ್ವಪ್ನ ಸಾಮ್ರಾಟ. ಎಲ್ಲಿಂದಲೋ ಸ್ಫೂರ್ತಿ ಪಡೆದು ಪ್ರಸಂಗವನ್ನು ರಚಿಸುವುದು ತಪ್ಪೋ ಸರಿಯೋ, ಆದರೆ ನನಗೆ ಮಾತ್ರ ಹಾಗೆ ಮಾಡಬೇಕೆನ್ನಿಸಲಿಲ್ಲ. ಸ್ವಂತ ಕಲ್ಪನೆಯಿಂದಲೇ ನನ್ನ ಅನುಭವದ ಸಾರವನ್ನೆಲ್ಲ ಕ್ರೊಢೀಕರಿಸಿ ಅದನ್ನೊಂದು ಸವಾಲೆಂಬಂತೆ ಸ್ವೀಕರಿಸಿ ರಚಿಸಿದ ಕೃತಿಯೇ ಈ ಸ್ವಪ್ನ ಸಾಮ್ರಾಟ. ಇದರಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸಲು ಅನೇಕ ರಂಜನೀಯ ಅಂಶಗಳು ಸೇರಿವೆಯಾದರೂ, ಗಟ್ಟಿ ಕಥೆಯೊಂದರ ಹಿನ್ನೆಲೆಯಿದೆ. ಮೊನ್ನೆ ಬೆಂಗಳೂರಿನಲ್ಲಿ ಕಿಕ್ಕಿರಿದ ಸಭಾಂಗಣದಲ್ಲಿ ಪ್ರದರ್ಶಿತವಾಗಿ ಎಲ್ಲರ ಮೆಚ್ಚುಗೆಗೂ ಪಾತ್ರವಾಯ್ತು. ಮುಂದಿನ ತಿರುಗಾಟದ ಅವಧಿಯಲ್ಲಿ ಇದು ಜನಮನ ಗೆಲ್ಲಲಿದೆ ಎನ್ನುವ ವಿಶ್ವಾಸ ಕೂಡಾ ಇದೆ.

 

ಪ್ರಶ್ನೆ - ಪ್ರಸ್ತುತ ವರ್ಷದಿಂದ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ನಿಮ್ಮ ತಿರುಗಾಟ ಶುರುವಾಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆ, ನಿರೀಕ್ಷೆ ಏನಾದ್ರೂ ಇದೆಯೇ? ಪೆರ್ಡೂರು ಮೇಳವನ್ನು ಆರಿಸಲು ಕಾರಣವೇನು?

ರ.ಶೆ - ಮೊಟ್ಟ ಮೊದಲನೆಯದಾಗಿ ಹೆಸರಾಂತ ವೃತ್ತಿಮೇಳವಾದ ಪೆರ್ಡೂರಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು ನನಗೆ ಬಹಳ ಖುಶಿ ತಂದು ಕೊಟ್ಟ ಸಂಗತಿ. ಅದೂ ಅಲ್ಲದೇ ಕರಾವಳಿಯ ಗಾನಕೋಗಿಲೆ ಎಂದೇ ಹೆಸರಾಗಿರುವ ಧಾರೇಶ್ವರರಂತಹ ಮೇರು ಸದೃಶ ಪ್ರತಿಭೆಯ ಜೊತೆ ಕೆಲಸ ಮಾಡುವ ಸೌಭಾಗ್ಯ. ಇದಕ್ಕಿಂತ ಉತ್ತಮ ಅವಕಾಶ ಸಿಕ್ಕೀತೇ? ಧಾರೇಶ್ವರರ ಸಲಹೆ, ಸಮರ್ಥ ಮಾರ್ಗದರ್ಶನದಲ್ಲಿ ನನ್ನ ಕಲಿಕೆ-ಸಾಧನೆಗಳ ಹಾದಿ ಇನ್ನಷ್ಟು ಸಲೀಸಾಗಲಿದೆ. ನನ್ನ ಹಾಡುಗಾರಿಕೆಯಲ್ಲಿ ಲೋಪ-ದೋಷಗಳು ಕಂಡು ಬಂದಾಗ ಅದನ್ನು ತಿದ್ದಿ ಸರಿಪಡಿಸಲು ಸೂಕ್ತ ಸಲಹೆ ನೀಡುವ ಅವರ ಒಡನಾಟ ನಿಜಕ್ಕೂ ನನ್ನ ಪಾಲಿಗೆ ಸುವರ್ಣಾವಕಾಶ. ಜೊತೆಗೆ ತೀರ್ಥಳ್ಳಿ, ಆರ್ಗೋಡು, ಥಂಡಿಮನೆ ಇಂತಹ ಮಹಾನ್ ಕಲಾವಿದರಿಗೆ ಪದ್ಯ ಹೇಳುವ ಸದವಕಾಶ. ಹಾಗಾಗಿ ಇದು ನನ್ನ ವೃತ್ತಿ ಬದುಕಿನ ಇನ್ನೊಂದು ಮಹತ್ತರ ತಿರುವಾಗಲಿದೆ ಅನ್ನುವ ನಿರೀಕ್ಷೆ, ನಂಬಿಕೆ ನನ್ನದು.

 

ಪ್ರಶ್ನೆ - ನಿಮ್ಮ ಕಂಠಸಿರಿ, ನಿಮ್ಮ ಹಾಡುಗಾರಿಕೆಯ ಶೈಲಿ ನಾವುಡರ ಭಾಗವತಿಕೆಯನ್ನು ನೆನಪಿಸುತ್ತದೆ ಅನ್ನುವ ಮಾತು ಕೇಳಿ ಬರುತ್ತಿದೆಯಲ್ಲ?

ರ.ಶೆ - ಅದೆಲ್ಲ ಯಕ್ಷಗಾನ ಕಲಾಭಿಮಾನಿಗಳ ಅಭಿಮಾನದ ಮಾತು ಅಷ್ಟೇ. ಅವರಿಂದ ಸ್ಫೂರ್ತಿ ಪಡೆದ ನನ್ನ ಶೈಲಿ, ಧ್ವನಿ ನಾವುಡರನ್ನು ಹೋಲುತ್ತದೆ ಅಂದ ಮಾತ್ರಕ್ಕೇ ಆ ಯೋಗ್ಯತೆ ನನಗೆ ಬರಲಾರದು ಬಿಡಿ. ನನ್ನ ವೃತ್ತಿ ಬದುಕಿನ ಕೊನೆಯೊಳಗೆ ನಾವುಡರ, ಧಾರೇಶ್ವರರ ಯೋಗ್ಯತೆಯಲ್ಲಿ ಹತ್ತರಲ್ಲೊಂದು ಭಾಗದಷ್ಟು ಸಾಧಿಸಲು ನಾನು ಶಕ್ಯನಾದರೆ ನಾನು ಧನ್ಯ. ಹಾಗಾದಲ್ಲಿ ಅದರ ಶ್ರೇಯವೆಲ್ಲಾ ಭಗವಂತನ ದಯೆ, ಯಕ್ಷಗಾನ ಪ್ರೇಮಿಗಳ ಪ್ರೀತ್ಯಾದರದ ಹರಕೆಯ ಫಲ ಹಾಗೂ ಗುರುಸದೃಶರಾದ ಮಯ್ಯ, ಧಾರೇಶ್ವರ್‌ರಂತವರ ಕೃಪಾಶೀರ್ವಾದಕ್ಕೇ ಸಲ್ಲಬೇಕು.

ಪ್ರಶ್ನೆ - ಮಾತುಕತೆ ಮುಗಿಸುವ ಮುನ್ನ ಒಂದೇ ಒಂದು ಪ್ರಶ್ನೆ. ಯಕ್ಷಗಾನವೆಂದರೆ ನವರಸ-ಭಾವಗಳ ಅಮೃತಧಾರೆ. ಎಲ್ಲಾ ಭಾವ-ರಸಗಳ ಹಾಡುಗಳೂ ಸಮ್ಮಿಳಿತವಾಗಿರುವ ರಸಾಯನ. ಇದರಲ್ಲಿ ನಿಮ್ಮ ಮೆಚ್ಚಿನ ರಸ/ಭಾವ ಯಾವುದು?

ರ.ಶೆ - ಎಲ್ಲಾ ರಸಗಳಿಗೂ ಅದರದ್ದೇ ಆದ ಸೊಗಸಿದೆ. ಆದರೆ ಅದರಲ್ಲಿ ನನಗಿಷ್ಟವಾಗಿದ್ದು ಕರುಣಾರಸ. ಈ ರಸದ ಹಾಡುಗಳಲ್ಲಿ ಸ್ವರದ ಏರಿಳಿತಗಳಲ್ಲೇ ಭಾವಸ್ಫುರಣಕ್ಕೆ ಅವಕಾಶ ಹೆಚ್ಚು. ಹಾಗಾಗಿ ಅದು ನನ್ನ ಅಚ್ಚುಮೆಚ್ಚು.

 

ಸಾಧಕನಾದವನಿಗೆ ಪ್ರತಿದಿನ, ಪ್ರತಿ ಸಂದರ್ಭಗಳೂ ಹೊಸ ಕಲಿಕೆಗೆ ತೆರೆದ ಮುಕ್ತದ್ವಾರಗಳು. ಸದಾ ಹೊಸತನ್ನು ಕಲಿಯುವ ತುಡಿತದ ಜೊತೆಗೆ ತನ್ನ ಪ್ರತಿಭೆಯ ಬಗ್ಗೆ ಗರ್ವವಿಲ್ಲದ ವಿನಯವಂತಿಕೆಯೇ ಮಹಾನ ಸಾಧಕನ ದ್ಯೋತಕ. ಗಿರಿ-ಬೆಟ್ಟದಷ್ಟು ಸಾಧನೆ ಮಾಡಿದರೂ ತಾನು ಸಾಧಿಸಿದ್ದು ಕಿರುಬೆಟ್ಟಿನಷ್ಟು ಅನ್ನುವ ವಿನಯದ ಜೊತೆಗೆ, ತಾನು ಸಾಗಿ ಬಂದ ಹಾದಿಯನ್ನು ಮರೆತಿಲ್ಲ ರವೀಂದ್ರ ಶೆಟ್ಟಿಯವರು. ತನ್ನ ಸಾಧನೆಗೆ ಇಂಬಾದವರನ್ನೆಲ್ಲ ಸ್ಮರಿಸುವ ಕೃತಜ್ಞತೆಯಿರುವ ಇವರು ಇನ್ನಷ್ಟು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಧಾರೇಶ್ವರರಂತಹ ದಿಗ್ಗಜರ ಸಹವಾಸದಲ್ಲಿ ರವೀಂದ್ರ ಶೆಟ್ಟರ ಪ್ರತಿಭೆ ಪುಟವಿಟ್ಟ ಬಂಗಾರವಾಗಲಿ ಅನ್ನುವುದು ಯಕ್ಷಾಭಿಮಾನಿಗಳ ಹಾರೈಕೆ ಮಾತ್ರವಲ್ಲ ಆಶಯವೂ ಕೂಡಾ. ಸಾಧನೆಯ ಮೇರುಶಿಖರವನ್ನೇರಿ ಈ ಪ್ರತಿಭೆಯು ಕಲಾಸೌರಭವನ್ನು ಎಲ್ಲೆಡೆಗೂ ಪಸರಿಸಲಿ ಎನ್ನುವ ಹಾರೈಕೆಗಳೊಂದಿಗೆ ರವೀಂದ್ರ ಶೆಟ್ಟಿ ಹೊಸಂಗಡಿಯವರೊಂದಿಗಿನ ಈ ಪುಟ್ಟ ಸಂವಾದಕ್ಕೆ ತೆರೆಯೆಳೆಯುತ್ತೇನೆ.

 

ಯಕ್ಷಗಾನಂ ಗೆಲ್ಗೆ

 

 

 





ಪೌರಾಣಿಕ ಪ್ರಸಂಗಗಳ ರಸದೌತಣ…

29 08 2008

ಇವತ್ತು ಅಂದ್ರೆ 29 ಆಗಸ್ಟ್ ಶುಕ್ರವಾರ ರಾತ್ರಿ 10:30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪೌರಾಣಿಕ ಯಕ್ಷಗಾನ ಪ್ರಿಯರಿಗೆ ಹಬ್ಬದೂಟವಿದೆ. ಮೂರು ಪೌರಾಣಿಕ ಪ್ರಸಂಗಗಳನ್ನು ರಂಗವೈಭವದಲ್ಲಿ ಸಾಕ್ಷಾತ್ಕರಿಸಲಿರುವರು. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು-

            ಬಬ್ರುವಾಹನ

            ಕಾರ್ತವೀರ್ಯಾರ್ಜುನ

            ಮಾಯಾಬಜಾರ್

 

ಇವತ್ತಿನ ಪ್ರದರ್ಶನದ ವಿಶೇಷ ಆಕರ್ಷಣೆಗಳು ಇಂತಿವೆ -

 

ಬಬ್ರುವಾಹನನಾಗಿ - ತೀರ್ಥಳ್ಳಿ ಗೋಪಾಲಾಚಾರಿ

ಚಿತ್ರಾಂಗದೆ – ನೀಲ್ಕೋಡು ಶಂಕರ ಹೆಗಡೆ

ಕಾರ್ತವೀರ್ಯ – ವಿದ್ಯಾಧರ ಜಲವಳ್ಳಿ

ರಾವಣ – ಥಂಡಿಮನೆ ಶ್ರೀಪಾದ್ ಭಟ್

ಬಲರಾಮ – ಆರ್ಗೋಡು ಮೋಹನದಾಸ ಶೆಣೈ

ಘಟೋತ್ಕಜ – ಜನಾರ್ಧನ ಗುಡಿಗಾರ್

ಅಭಿಮನ್ಯು – ಕೊಳಲಿ ಕೃಷ್ಣ ಶೆಟ್ಟಿ

ಕೃಷ್ಣ – ತೀರ್ಥಳ್ಳಿ ಗೋಪಾಲಾಚಾರಿ

 

ಜೊತೆಗೆ ನೀಲಗಗನ… ಪದ್ಯಕ್ಕೆ ಧಾರೇಶ್ವರ್-ಸುರೇಶ್ ಶೆಟ್ಟಿ ದ್ವಂದ್ವ ಹಾಡುಗಾರಿಕೆಯ ಪೈಪೋಟಿ ಇದೆ.

 

ಇದಲ್ಲದೆ, ಪೆರ್ಡೂರು ಮೇಳದಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಶೆಟ್ಟಿಯವರ ಅಭಿನಂದನಾ ಸಮಾರಂಭದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಭಾನುವಾರ ಆಗಸ್ಟ್ 31ರಂದು ಮಧ್ಯಾಹ್ನ 3 ಗಂಟೆಯಿಂದ ಮತ್ತೆರಡು ಪೌರಾಣಿಕ ಪ್ರಸಂಗಗಳು ರಂಗದ ಮೇಲೆ ವಿಜೃಂಭಿಸಲಿವೆ. ಪ್ರಸಂಗಗಳು -

            ಶ್ರೀ ರಾಮಾಂಜನೇಯ

            ಚಂದ್ರಾವಳಿ ವಿಲಾಸ

ನಾನಂತೂ ಈಗಲೇ ಹೊರಡಲು ತುದಿಗಾಲಲ್ಲಿ ನಿಂತಿದ್ದೇನೆ. ನಿಮಗೂ ಆಸಕ್ತಿಯಿದ್ದಲ್ಲಿ ನೀವೂ ಬಂದು ನೋಡಿ ಆನಂದಿಸಿ ಅಂತ ಈ ಸುದ್ದಿ ಹೇಳುತ್ತಿದ್ದೇನೆ. ನಮ್ಮ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ನಾವೆಲ್ಲರೂ ಆಸ್ವಾದಿಸೋಣ-ಪ್ರೋತ್ಸಾಹಿಸೋಣ