ಉಡುಪಿಯಲ್ಲಿ ಈ ಬಾರಿ ಗೆಲ್ಲೋದು ಯಾರು?

15 04 2009

ಲೋಕಸಭೆ ಚುನಾವಣೆ ಹತ್ತಿರವಾಗಿದೆ. ಎಲ್ಲಿನೋಡಿದರಲ್ಲಿ ಚುನಾವಣೆಯದ್ದೇ ಮಾತು. ಪ್ರಸಾರ ಮಾಧ್ಯಮಗಳು ಸಮೀಕ್ಷೆ, ಕ್ಷೇತ್ರ ಪರಿಚಯ, ಚುನಾವಣಾ ಅಕ್ರಮಗಳ ಕುರಿತು ಗಂಟೆಗಟ್ಟಲೆ ಕೊರೆಯಲಾರಂಭಿಸಿವೆ. ರೀಮುಗಟ್ಟಲೆ ಕಾಗದದ ತುಂಬೆಲ್ಲಾ ಇಲೆಕ್ಷನ್ನ ರಂಗು ರಂಗಿನ ಸುದ್ದಿ ಪ್ರಕಟಿಸಿ ಸುದ್ದಿ ಮಾಧ್ಯಮಗಳು ಕೃತಾರ್ಥವಾಗುತ್ತಿವೆ. ಬಸ್ಸುಗಳಲ್ಲಿ, ಕಛೇರಿಗಳಲ್ಲಿ, ಹೋಟೆಲುಗಳಲ್ಲಿ ಕೊನೆಗೆ ಇಂಟರ್ನೆಟ್ನಲ್ಲೂ ಚುನಾವಣೆಯದ್ದೇ ಬಿಸಿಬಿಸಿ ಚರ್ಚೆಯಾರು ಗೆಲ್ಲುವ ಕುದುರೆ ಅನ್ನೋ ಬಗ್ಗೆ ಬೆಟ್ಟಿಂಗ್ ಆಯಾ ಕ್ಷೇತ್ರಗಳಲ್ಲಿ ಬಿರುಸುಗೊಡಿದೆ. ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟ, ತಮ್ಮ-ತಮ್ಮ ಪಕ್ಷದ ಸಾಧನೆಗಳ ತುತ್ತೂರಿ ಊದುತ್ತಾ ಬಿರುಸಿನ ಪ್ರಚಾರ ಕಾರ್ಯಗಳಲ್ಲಿ, ಜನರ ಮನವೊಲಿಸುವ ಸಲುವಾಗಿ ಭರವಸೆಗಳ ಮಹಾಪೂರ ಹರಿಸುವುದರಲ್ಲಿ, ಹಣ-ಹೆಂಡ-ಸೀರೆಯ ಆಮಿಷಗಳ ಬಲೆ ಬೀಸುವುದರಲ್ಲಿ ಮಗ್ನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಉಡುಪಿ ಕ್ಷೇತ್ರದಲ್ಲಿ ಈ ಬಾರಿ ವಿಜಯಲಕ್ಷ್ಮಿ ಯಾರಿಗೆ ಮಾಲೆ ಹಾಕ್ತಾಳೆ ಅನ್ನುವ ಕುರಿತು ಒಂದಿಷ್ಟು ಅವಲೋಕನ ನಡೆಸಿದರೆ ಹೇಗೆ?

 

ಉಡುಪಿ ಕ್ಷೇತ್ರದ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ ಸ್ಪಷ್ಟವಾಗಿ ಅರ್ಥವಾಗುವುವ ಸಂಗತಿಯೆಂದರೆ ಇಲ್ಲಿ ಗೆಲುವು ಯಾವಾಗಲೂ ಅತ್ತಿಂದಿತ್ತ ತೂಗೂಯ್ಯಾಲೆ ಆಡುತ್ತಲೇ ಬಂದಿದೆ. ಆಸ್ಕರ್ ಫೆರ್ನಾಂಡೀಸ್ರ ಗೆಲುವಿನ ಸರಮಾಲೆಯನ್ನು ಮೊಟ್ಟ ಮೊದಲ ಬಾರಿಗೆ ಮುರಿದ ಶ್ರೇಯಸ್ಸು ಆಗ ಬಿ.ಜೆ.ಪಿ. ಯಲ್ಲಿದ್ದ ಐ.ಎಂ.ಜಯರಾಮ ಶೆಟ್ಟರಿಗೆ ಸಲ್ಲುತ್ತದೆ (ಈಗ ಅವರು ಯಾವ ಪಕ್ಷದಲ್ಲಿ ಇದ್ದಾರೆಂಬುದು ನನಗೆ ಗೊತ್ತಿಲ್ಲ ಅಂತ ಆಣೆ ಮಾಡಿ ಹೇಳ್ತೇನೆ ಬೇಕಿದ್ರೆ). ಆ ಬಳಿಕ ಮತ್ತೊಮ್ಮೆ ಕಾಂಗ್ರೆಸ್ ಮಡಿಲಿಗೆ ಈ ಕ್ಷೇತ್ರ ಬಿದ್ದಿದ್ದು ವಿನಯ ಕುಮಾರ್ ಸೊರಕೆಯಿಂದಾಗಿ.  ಕಳೆದ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾಗಿ ಬಂದ ಬಿ.ಜೆ.ಪಿಯ ಮನೋರಮಾ ಮಧ್ವರಾಜ್ ಈಗ ಮತ್ತೆ ತಮ್ಮ ಮಾತೃ ಪಕ್ಷ ಕಾಂಗ್ರೆಸ್ನ ಗೂಡಿಗೆ ಮರಳಿದ್ದಾರೆ. ಮೇಲಾಗಿ ಈ ಬಾರಿ ಕ್ಷೇತ್ರ ಪುನರ್ವಿಂಗಡನೆಯ ಪರಿಣಾಮವಾಗಿ ಚಿಕ್ಕಮಗಳೂರು ಕ್ಷೇತ್ರ ಮಾಯವಾಗಿ ಆ ಕ್ಷೇತ್ರದ ಬಹುಭಾಗ ಉಡುಪಿ ಕ್ಷೇತ್ರದಲ್ಲಿ ವಿಲೀನವಾಗಿದೆ. ಉಡುಪಿಯ ತೆಕ್ಕೆಯಲ್ಲಿದ್ದ ಬೈಂದೂರು ಕ್ಷೇತ್ರದ ಬಹುಭಾಗ ಶಿವಮೊಗ್ಗದ ಪಾಲಾಗಿದೆ. (ನಮ್ಮ ಊರು ಹಳ್ಳಿಹೊಳೆ ಕೂಡಾ ಈಗ ಶಿವಮೊಗ್ಗ ಕ್ಷೇತ್ರದಲ್ಲಿದೆ. ಶಿವಮೊಗ್ಗ ಕ್ಷೇತ್ರದ ಸಮೀಕರಣಗಳು-ಲೆಕ್ಕಾಚಾರಗಳು ನನ್ನ ಪಾಲಿಗೆ ಅಪರಿಚಿತವಾದ ಕಾರಣ ಆ ಕುರಿತು ವಿಷ್ಲೇಷಿಸುವ ಸಾಮರ್ಥ್ಯ ನನಗಿಲ್ಲ). ಅಲ್ಲದೆ ಇತ್ತೀಚಿನ ಕೆಲದಿನಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯು ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿದ್ದು ಕ್ಷೇತ್ರದ ರಾಜಕೀಯದಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಉಡುಪಿಯ ಶಾಸಕರ ವರ್ಚಸ್ಸು ಪದ್ಮಪ್ರಿಯಾ ಪ್ರಕರಣದ ನಂತರ ಕುಸಿದಿದೆ ಅಂತ ಹೇಳಲಾಗುತ್ತಿದೆಯಾದರೂ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕವಷ್ಟೇ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಕಾಂಗ್ರೆಸ್ನಿಂದ ಈ ಬಾರಿ ನಿಂತಿರುವುದು ಮಾಜಿ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಜಯಪ್ರಕಾಶ್ ಹೆಗ್ಡೆಯವರು. ಬಿ.ಜೆ.ಪಿಯು ತನ್ನ ರಾಜ್ಯಾಧ್ಯಕ್ಷರಾದ ಸದಾನಂದ ಗೌಡರನ್ನು ಕಣಕ್ಕಿಳಿಸುವುದರ ಮೂಲಕ ತನ್ನ ಪ್ರತಿಷ್ಟೆಯನ್ನು ಪಣಕ್ಕಿಟ್ಟಿದೆ.

 

ಅಭ್ಯರ್ಥಿಗಳ ಬಲಾಬಲ, ಜಾತಿ-ವರ್ಗಗಳ ಲೆಕ್ಕಾಚಾರ ( ಎಲ್ಲಾ ಪಕ್ಷಗಳು ಎಷ್ಟೇ ನಿರಾಕರಿಸಿದರೂ ಅಂತಿಮವಾಗಿ ಚುನಾವಣೆಯಲ್ಲಿ ಜಾತಿ ವರ್ಗಗಳೇ ಪ್ರಮುಖ ವಿಷಯವಾಗುವುದು ದುರಂತವಾದರೂ ಸತ್ಯ), ಕ್ಷೇತ್ರ ಪುನರ್ ವಿಂಗಡನೆಯ ಪರಿಣಾಮಗಳನ್ನು ಒಂದಿಷ್ಟು ಗಮನಿಸೋಣ ಬನ್ನಿ. ಬಿ.ಜೆ.ಪಿ.ಯ ಮಾತಿನ ಮಲ್ಲ ಸದಾನಂದ ಗೌಡರು ಈ ಬಾರಿ ಉಡುಪಿಯಲ್ಲಿ ಸ್ಪರ್ಧಿಸುವುದರ ಮೂಲಕ ಉಡುಪಿ ಕ್ಷೇತ್ರದ ರಾಜಕೀಯಕ್ಕೆ ರಂಗು ತುಂಬಿದ್ದಾರೆ. ತಮ್ಮ ಚಿತ್ರವಿಚಿತ್ರ ಹೇಳಿಕೆಗಳ ಮೂಲಕ ಸದಾ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಮೂಲಕ ಬಿ.ಜೆ.ಪಿ.ಯ ಜನಾರ್ಧನ ಪೂಜಾರಿ ಎನ್ನುವ ಖ್ಯಾತಿ(?)ಗೆ ಭಾಜನರಾಗಿರುವ ಈ ಖಡಕ್ ಮಾತುಗಾರನ ವರ್ಚಸ್ಸು ಎಷ್ಟು ಖಡಕ್ಕಾಗಿದೆ ಅನ್ನೋದು ಫಲಿತಾಂಶ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಮನೋರಮಾ ಮಧ್ವರಾಜ್ ಈ ಬಾರಿ ಮರಳಿ ಗೂಡಿಗೆ ಸೇರಿರುವುದರಿಂದ ಬಿ.ಜೆ.ಪಿ ಈ ಬಾರಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿತ್ತು. ಕೊನೆಗೂ ಆ ಅದೃಷ್ಟ ಸಿಕ್ಕಿದ್ದು ಸದಾನಂದ ಗೌಡರಿಗೆ. ಗೌಡರು ಉಡುಪಿ ಕ್ಷೇತ್ರಕ್ಕೆ ಹೊರಗಿನವರೇ ಅನ್ನಿಸಿದರೂ ಕೂಡಾ ಬಿ.ಜೆ.ಪಿ.ಯ ರಾಜ್ಯಾಧ್ಯಕ್ಷರು ಅನ್ನುವ ವರ್ಚಸ್ಸು ಮತ್ತು ಈ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಬಿ.ಜೆ.ಪಿ.ಯತ್ತ ಒಲವು ತೋರಿರುವ ಜನರ ಬೆಂಬಲ ಸಿಕ್ಕಿದ್ರೆ ಮಂತ್ರಿಯಾಗೋದು ಗ್ಯಾರಂಟಿ ಅನ್ನುವ ಲೆಕ್ಕಾಚಾರದಲ್ಲಿ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ. ಕಳೆದ ಬಾರಿ ಮನೋರಮಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೊಗವೀರರ ಒಲವು ಯಾವ ಕಡೆಗಿದೆ ಅನ್ನುವ ವಿಚಾರ ನಿರ್ಣಾಯಕವಾಗಲಿದೆ ಅನ್ನುವ ಮಾತುಗಳು ಉಡುಪಿ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಚಿಕ್ಕ ಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ.ಜೆ.ಪಿಯ ಪ್ರಾಬಲ್ಯವಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆಯಾದರೂ ವಿಧಾನ ಸಭೆಯ ಚುನಾವಣೆಯಲ್ಲಿ ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ಕುಮಾರ್ ಕಾಂಗ್ರೆಸ್ನ ಗೋಪಾಲ ಭಂಡಾರಿಯೆದುರು ಸೋಲು ಕಂಡಿರುವ ಸಂಗತಿ ಗೌಡರಿಗೆ ಒಳಗೊಳಗೇ ಆತಂಕಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಅಲ್ಲದೆ ಬಿಜೆಪಿ ಶಾಸಕರಿರುವ ಬೈಂದೂರು ಕ್ಷೇತ್ರ ಈಗ ಶಿವಮೊಗ್ಗಾ ಪಾಲಾಗಿರುವುದು ಕೂಡಾ ಇನ್ನೊಂದು ಮಹತ್ವದ ಅಂಶವಾಗಲಿದೆ. ಉಡುಪಿಯ ವಿಧಾನ ಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಹಾಗೂ ಗೃಹಸಚಿವರಾಗಿರುವ ವಿ.ಎಸ್.ಆಚಾರ್ಯರ ವರ್ಚಸ್ಸು ಗೌಡರ ಪಾಲಿಗೆ ಮತ ತಂದುಕೊಡುವ ನಿರೀಕ್ಷೆ ಇಟ್ಟುಕೊಳ್ಳೋದು ತುಂಬಾ ರಿಸ್ಕಿ. ಗೌಡರ ಪಾಲಿಗೆ ಸಮಾಧಾನ ತಂದುಕೊಡುವ ಅಂಶ ಅಂದ್ರೆ ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರನ್ನು ಕುಂದಾಪುರದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ವಿಧಾನ ಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿರುವುದು.

 

ಇನ್ನು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಬಲಾಬಲಗಳತ್ತ ಕಣ್ಣು ಹಾಯಿಸಿದರೆ ಎದ್ದು ಕಾಣುವುದು ಅವರು ಮೀನುಗಾರಿಕಾ ಸಚಿವರಾಗಿದ್ದಾಗ ಅವರು ಗಳಿಸಿದ್ದ ಒಳ್ಳೆಯ ಹೆಸರು. ಜೆಡಿಎಸ್ ತೊರೆದ ಬಳಿಕವೂ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಸ್ವಂತ ಬಲದ ಮೇಲೆಯೇ ಪಕ್ಷೇತರರಾಗಿ ಆಯ್ಕೆಯಾದ ಖ್ಯಾತಿ ಅವರಿಗಿದೆ. ಮೀನುಗಾರಿಕಾ ಸಚಿವರಾಗಿದ್ದಾಗ ನಡೆಸಿದ ಕಾಮಗಾರಿಗಳ ಕುರಿತು ಅವರ ವಿರೋಧಿಗಳೂ ಒಳ್ಳೆಯ ಮಾತನ್ನಾಡುತ್ತಾರೆ. ಕಳೆದ ಬಾರಿ ಬಿ.ಜೆ.ಪಿ.ಯತ್ತ ಮುಖ ಮಾಡಿದ್ದ ಬಂಟರ ವೋಟುಗಳಲ್ಲಿ ಎಷ್ಟನ್ನು ಹೆಗ್ಡೆಯವರು ಸೆಳೆಯಬಲ್ಲರು ಅನ್ನುವುದರ ಮೇಲೆ ಹೆಗ್ಡೆಯವರ ಯಶಸ್ಸು ನಿರ್ಧಾರವಾಗಲಿದೆ. ಮನೋರಮಾ ಕಾಂಗ್ರೆಸ್ಗೆ ಮರಳಿದ್ದರೂ ಅವರಿಗಾಗಲಿ ಅವರ ಮಗ ಪ್ರಮೋದ್ ಮಧ್ವರಾಜ್ಗಾಗಲಿ ಕಾಂಗ್ರೆಸ್ ಮಣೆ ಹಾಕಲಿಲ್ಲ ಅನ್ನುವ ಸಿಟ್ಟು ಮೋಗವೀರರಲ್ಲಿದ್ದರೆ ಹೆಗ್ಡೆಯವರಿಗೆ ಕಷ್ಟವಾಗಲಿದೆ. ಹೆಗ್ಡೆಯವರ ಪ್ರತಿಸ್ಪರ್ಧಿ ಸದಾನಂದ ಗೌಡರು ಎಷ್ಟೇ ಪ್ರಭಾವಿಯಾದರೂ ವೈಯುಕ್ತಿಕ ವರ್ಚಸ್ಸನ್ನು ಗಮನಿಸಿದರೆ ಹೆಗ್ಡೆಯವರದ್ದೇ ಒಂದಿಂಚಿನಷ್ಟು ಮುಂದಿದ್ದಾರೆ. ಮೇಲಾಗಿ ಕಾಂಗ್ರೆಸ್ನ ಮತಬ್ಯಾಂಕ್ನ ಮತಗಳು ಹೆಗ್ಡೆಯವರ ಪಾಲಿಗೆ ಬೋನಸ್ ಎನಿಸಲಿವೆ.  ಆದರೂ ಉಡುಪಿಯ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಚಿಕ್ಕಮಗಳೂರು ಕ್ಷೇತ್ರದ ಪ್ರದೇಶಗಳಲ್ಲಿ ವ್ಯಕ್ತಿಗಿಂತ ಪಕ್ಷದ ಮತಗಳೇ ನಿರ್ಣಾಯಕವೆನಿಸಲಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ತಮಗೆ ನೀರು ಕುಡಿಸಿದ ಹಾಲಾಡಿ ಶೆಟ್ಟರ ವರ್ಚಸ್ಸು ಕುಂದಾಪುರ ಭಾಗದಲ್ಲಿ ಜೋರಾಗಿರುವುದು ಹೆಗ್ಡೆಯವರ ನಿದ್ದೆ ಕೆಡಿಸಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಸೇರಿದ ಶಂಕರ ಪೂಜಾರಿಯವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆನ್ನಿಗಿರುವ ಬಿಲ್ಲವರ ಎಷ್ಟು ಮತಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಶಕ್ಯರಾಗಬಹುದು ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

 

ಉಡುಪಿ ಕ್ಷೇತ್ರದ ಒಟ್ಟಾರೆ ಚಿತ್ರಣ ಸಾಕಷ್ಟು ಗೊಂದಲಗಳಿಂದ ಕೂಡಿದ್ದರೂ, ಮೇಲ್ನೊಟಕ್ಕೆ ಬಿ.ಜೆ.ಪಿ ಕೂದಲೆಳೆಯಷ್ಟು ಮುಂದಿರುವಂತೆ ಕಂಡುಬಂದರೂ ಕಳೆದ ಚುನಾವಣೆಯ ಬಳಿಕ ಸಾಕಷ್ಟು ನೀರು ಹೊಳೆಯಲ್ಲಿ ಹರಿದು ಹೋಗಿ ಕಡಲು ಸೇರಿರುವುದು ಎಷ್ಟು ಸತ್ಯವೋ ಉಡುಪಿಯ ರಾಜಕೀಯ ಚಿತ್ರಣದಲಿ ಅನೇಕ ಸ್ಥಿತ್ಯಂತರಗಳಾಗಿರುವುದು ಅಷ್ಟೇ ಸತ್ಯ. ಹಾಗಾಗಿ ಹೆಗ್ಡೆಯವರಿಗೆ ಈ ಬಾರಿ ಅದೃಷ್ಟ ಕುದುರಿದರೂ ಕುದುರಬಹುದು ಅನ್ನುವ ಪಿಸು ಮಾತು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ, ಒಟ್ಟಾರೆಯಾಗಿ ಹೇಳುವುದಿದ್ದರೆ ಉಡುಪಿಯಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.





ಈದಿ ಅಮಿನ್ – ನರಹಂತಕನೊಬ್ಬನ ವಿಲಕ್ಷಣ ಗಾಥೆ – ಭಾಗ 4

5 02 2009

ದೊರೆತನ ಅಳಿದ ಮೇಲೆ

ಸೌದಿ ಅರೇಬಿಯಾಕ್ಕೆ ಬಂದ ಅಮಿನ್‌ಗೆ ರಾಜಾತಿಥ್ಯವೇ ಸಿಗುತ್ತದೆ. ತನ್ನ ಪರಿವಾರದ ಸಮೇತ ಉಳಿದುಕೊಳ್ಳಲು ಅರಮನೆಯಂತಹ ಬಂಗಲೆ, ಆಳು-ಕಾಳು, ಅಡುಗೆಯವರು,ಕಾರುಗಳು.. ಇವೆಲ್ಲ ಸೌಲಬ್ಯದ ಜೊತೆಗೆ ಪ್ರತಿ ತಿಂಗಳು 1400 ಅಮೇರಿಕನ್ ಡಾಲರ್‌ಗಳ ವೇತನ… ಯಾರಿಗುಂಟು ಯಾರಿಗಿಲ್ಲ. ಆದರೆ ಅತ್ತ ಅವನು ಬಿಟ್ಟು ಬಂದ ಉಗಾಂಡಾದ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಾಗಿತ್ತು. 320 ಮಿಲಿಯನ್ ಅಮೇರಿಕನ್ ಡಾಲರುಗಳ ಸಾಲ, 200%ನಷ್ಟು ಹಣದುಬ್ಬರ, ಪಾಳುಬಿದ್ದ ಕೃಷಿಭೂಮಿ, ಬಾಗಿಲು ಮುಚ್ಚಿದ ಕಾರ್ಖಾನೆಗಳು, ದಿವಾಳಿಯಾದ ಉದ್ಯಮಗಳು… ಉಗಾಂಡಾವನ್ನು ಎತ್ತರೆತ್ತರಕ್ಕೆ ಕ್ಕೊಂಡೊಯ್ಯುವ ಕನಸು ಕಂಡ ಅಮಿನ್ ಅಕ್ಷರಶಃ ಅವನತಿಯ ಪ್ರಪಾತಕ್ಕೆ ತಳ್ಳಿಬಿಟ್ಟಿದ್ದ. 1980ರಲ್ಲಿ ಒಬೋಟೆ ಪುನಃ ಅಧಿಕಾರದ ಚುಕ್ಕಾಣಿ ಹಿಡಿದನು. ಆದರೆ ಅವನ ಆಡಳಿತವು ಕೂಡಾ ಅಮಿನ್ ಆಡಲಿತಕ್ಕಿಂತ ಭಿನ್ನವಾಗೇನು ಇರಲಿಲ್ಲ. ಅವನ ಆಳ್ವಿಕೆಯಲ್ಲೂ ಸಾಕಷ್ಟು ಅಮಿನ್ ಬೆಂಬಲಿಗರ ಮಾರಣಹೋಮ ನಡೆಯಿತು. ಅಮಿನ್ ಬಿಟ್ಟುಹೋದ ಪರಂಪರೆಯನ್ನೇ ಯಥಾವತ್ತಾಗಿ ಮುಂದುವರಿಸಿದ ಒಬೋಟೆ, ಮೊದಲೇ ಪಾಳುಬಿದ್ದ ಸ್ಮಶಾನದಂತಾಗಿದ್ದ ಉಗಾಂಡಾವನ್ನು ಇನ್ನಷ್ಟು ಹಾಳುಸುರಿವಂತೆ ಮಾಡಿದ್ದೆ ಮಹತ್ಸಾಧನೆಯಾಯ್ತು. 1989ರಲ್ಲಿ ಅಮಿನ್ ಪುನಹ ಗದ್ದುಗೆಯನ್ನೇರುವ ಕನಸಿನ ಬೆನ್ನೇರಿ ಉಗಾಂಡಾಕ್ಕೆ ಮರಳುವ ಪ್ರಯತ್ನ ಮಾಡಿದ. ಆದರೆ ಕಾಂಗೋದ ಜೈರೆಯಲ್ಲಿ ಅವನನ್ನು ಗುರುತು ಹಿಡಿಯಲಾಗಿ, ಅವನ ಕನಸಿನ ರೆಕ್ಕೆ ಕತ್ತರಿಸಿ ಬಿತ್ತು. ಬಂದದಾರಿಗೆ ಸುಂಕವಿಲ್ಲ ಎಂದು ಮತ್ತೆ ಮತ್ತೆ ಸೌದಿಗೆ ಮರಳಿದ. ಅಮಿನ್ ಸೌದಿ ಅರೇಬಿಯಾದಲ್ಲಿ ಇರತೊಡಗಿದ ಬಳಿಕ ಸಾರ್ವಜನಿಕ ಜೀವನದಿಂದ ಸಾಕಷ್ಟು ದೂರವೇ ಉಳಿದ. ಮಾಧ್ಯಮಗಳಿಗೆ ಮುಖ ತೋರಿಸಲೂ ಇಲ್ಲ. ಆದರೂ 1999ರಲ್ಲಿ ಉಗಾಂಡಾದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿನ್ ಹೇಳಿದ್ದು ಇಷ್ಟು… ನಾನು ಈಗ ತುಂಬಾ ಸುಖಿಯಾಗಿ ನೆಮ್ಮದಿಯಿಂದ ಇದ್ದೇನೆ. ನನ್ನ ಅಧಿಕಾರಾವಧಿಗಿಂತ ಹೆಚ್ಚು ಸಂತೃಪ್ತಿಯಿಂದ ಇದ್ದೇನೆ. ಲಕ್ಷಾಂತರ ಜನರ ನೆಮ್ಮದಿಯ ಸಮಾಧಿಯ ಮೇಲೆ ತನ್ನ ಐಷಾರಾಮದ ಸೌಧ ಕಟ್ಟಿಕೊಂಡ ಅಮಿನ್‌ಗೆ ಸಕಲ ಸಂತಸ…. ಅವನ ದುರಾಡಳಿತಕ್ಕೆ ಸಿಕ್ಕಿ ನಲುಗಿದವರ ಪಾಲಿಗೆ ನಿತ್ಯ ಸೂತಕ. 2001ರಲ್ಲಿ ಅಮಿನ್ ಪುನಃ ಉಗಾಂಡಾಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದ. ಆದರೆ ಉಗಾಂಡಾದ ಸರ್ಕಾರ ಅವನ ಈ ಇಚ್ಛೆಯನ್ನು ಖಂಡತುಂಡವಾಗಿ ಖಂಡಿಸಿತು ಮಾತ್ರವಲ್ಲ ಒಂದು ವೇಳೆ ಅವನು ಉಗಾಂಡಾಕ್ಕೆ ಮರಳಿ ಬಂದರೆ ಅವನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯನ್ನೊಡ್ಡಿತು. ಹೀಗಾಗಿ ಉಗಾಂಡಾಕ್ಕೆ ತೆರೆಳಿ ಮತ್ತೆ ಮೆರೆಯುವ ಅಮಿನ್ ಹಂಬಲದ ಬಳ್ಳಿ ಚಿಗುರುವ ಮುನ್ನವೇ ಕಮರಿಹೋಯಿತು. ದೇವರು ದೊಡ್ಡವನು ಎಂದು ಉಗಾಂಡಾದ ಜನತೆ ನಿಟ್ಟುಸಿರಾಯಿತು!

 

೨೦೦೩ರಲ್ಲಿ ಅಮಿನ್ ದೇಹಸ್ಥಿತಿ ಬಿಗಡಾಯಿಸಲಾರಂಭಿಸಿತು. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅಮಿನ್ ಸಂಪೂರ್ಣ ಜರ್ಜರಿತನಾಗಿದ್ದ. ಸರಿ ಸುಮಾರು ಮೂರು ತಿಂಗಳುಗಳ ಕಾಲ ಅಸ್ಪತ್ರೆವಾಸವನ್ನು ಮಾಡಿ ತನ್ನ ಕಾಯಿಲೆಯೆ ವಿರುದ್ಧ ಸೆಣಸಿದ ಅಮಿನ್ ಕೊನೆಗೂ ಸೋತು ಕೈಚೆಲ್ಲಿದ. ಎಂಬತ್ತರ ಹೊಸ್ತಿಲಿನಲ್ಲಿದ್ದ ಅಮಿನ್ 2003ನೇ ಇಸವಿಯ ಆಗ್‌ಸ್ಟ್ 16ರಂದು ತನ್ನ ಇಹಲೋಕದ ವ್ಯಾಪಾರವನ್ನು ಮುಗಿಸಿದ. ಈ ಮೂಲಕ ಆಫ್ರಿಕಾದ ಬಹುಸಂಸ್ಕೃತಿಯ ಪರಿಣಾಮವಾಗಿ ಹುಟ್ಟಿಕೊಂಡ ಪರಮ ವಿಲಕ್ಷಣ, ಪರಮಕ್ರೂರಿ, ಆದರೆ ಅಷ್ಟೇ ದೊಡ್ಡ ಕನಸುಗಾರ ನಾಯಕನೊಬ್ಬನ ಯುಗಾಂತ್ಯವಾಯಿತು. ಅವನ ಸಂಬಂಧಿಕರು ಅಮಿನ್ ಶವವನ್ನು ಉಗಾಂಡಾದಲ್ಲಿ ಮಣ್ಣುಮಾಡಲು ಬಯಸಿದ್ದರು. ಆದರೆ ಅಮಿನ್ ಉಗಾಂಡಾಕ್ಕೆ ಮಾಡಿದ ದೊಡ್ಡ ಉಪಕಾರದ(!) ಫಲವನ್ನು ಇನ್ನೂ ಉಣ್ಣುತ್ತಿದ್ದ ಉಗಾಂಡಾದ ಸರ್ಕಾರ ಮತ್ತು ಜನತೆಗೆ ಅಮಿನ್ ತಮ್ಮ ನೆಲದಲ್ಲಿ ಮಣ್ಣಾಗುವುದು ಸುತರಾಂ ಇಷ್ಟವಿರಲಿಲ್ಲ. ಇದರಿಂದಲೇ ಅಮಿನ್ ಕುರಿತು ಅವರಿಗಿದ್ದ ಅಸಮಾಧಾನ ಅಸಹ್ಯ ಭಾವನೆಗಳು ಎಷ್ಟಿದ್ದವೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಒಂದು ವೇಳೆ ಅಮಿನ್ ಶವವನ್ನು ಉಗಾಂಡಾದಲ್ಲೇ ಮಣ್ಣು ಮಾಡಲು ಬಂದರೂ ಅವನಿಗೆ ಯಾವ ವಿಶೇಷ ಮರ್ಯಾದೆಯನ್ನೂ ಕೊಡಮಾಡುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಅವನ ಅಂತ್ಯಸಂಸ್ಕಾರ ಮಾಡೋದಾದ್ರೆ ಮಾಡಿಕೊಳ್ಳಿ ಅಂದಿತು ಅಂದಿನ ಉಗಾಂಡಾದ ಸರ್ಕಾರ. ಹಾಗಾಗಿ ಅನಿವಾರ್ಯವಾಗಿ ಸೌದಿ ಅರೇಬಿಯಾದ ಜೆಡ್ಡಾದ ರುವಾಯಿ ಚಿತಾಗಾರದಲ್ಲಿ ಅಮಿನ್ ದೇಹ ಪಂಚಭೂತಗಳಲ್ಲಿ ಲೀನವಾಯ್ತು.

 

ಆಗಸ್ಟ್ 18ರ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಪ್ರಕಟವಾದ ಅಮಿನ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಲೇಖನವೊಂದು ಹೀಗೆ ಹೇಳಿತ್ತು…  ವಸಾಹತುಶಾಹಿಯ ಪ್ರಭಾವಕ್ಕೆ ಒಳಗಾಗಿ ಬಹುಸಂಸ್ಕೃತಿಯ ಮೂಸೆಯಿಂದ ಹುಟ್ಟಿಬಂದ ಆಫ್ರಿಕಾದ ಬಹುತೇಕ ನಾಯಕರುಗಳಂತೆ ಅಮಿನ್ ಪರಮ ಹುಂಬನಾಗಿದ್ದ. ಅವನ ಮಹತ್ವಾಕಾಂಕ್ಷೆಗೆ ಇಂಬುಕೊಡುವಂತಹ ಯಾವ ಒಳನೋಟಗಳೂ ಇರಲಿಲ್ಲ. ಅದಕ್ಕೆ ಬೇಕಾದ ಶಿಕ್ಷಣವಾಗಲಿ, ದಾರಿ ತೋರಿಸಬಲ್ಲಂತಹ ಮೇಧಾವಿಗಳ ನೆರವಾಗಲಿ ಇಲ್ಲದೇ, ತನ್ನ ಸುತ್ತಲೂ ತನ್ನಂತವರದೇ ಕೋಟೆ ಕಟ್ಟಿಕೊಂಡ ಅಮಿನ್ ಆ ಕೂಪದೊಳಗೇ ಉಳಿದುಬಿಟ್ಟ. ಆ ಮೂಲಕ ಹೊಸಬೆಳಕಿನತ್ತ ಹೊರಳಬೇಕಾಗಿದ್ದ ಉಗಾಂಡಾದ ಭವಿಷ್ಯವನ್ನು ಅಂಧಕಾರದ ಹೊಂಡಕ್ಕಿಳಿಸಿ ತಾನೂ ಅದರಲ್ಲಿ ಬಿದ್ದು ಬಿಟ್ಟ’. ತನ್ನ ಜೋಕರ್‌ನಂತಹ ವರ್ತನೆ ಹಾಗೂ ಹಿಟ್ಲರ್ ಕೃತ್ಯವನ್ನು ಸಮರ್ಥಿಸುವಂತಹ ಅಸಂಬದ್ಧ ಹೇಳಿಕೆಗಳ ಮೂಲಕ ಅಮಿನ್ ಹೊರ ಜಗತ್ತಿನ ಕಣ್ಣಲ್ಲಿಯೂ ಹಗುರಾಗಿಬಿಟ್ಟ. ಸಾಲದ್ದಕ್ಕೆ ಪರಮ ಹುಂಬನಾಗಿದ್ದ ಅಮಿನ್ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸಿದ್ದು ಕೂಡಾ ಅವನ ತನ್ಮೂಲಕ ಉಗಾಂಡಾದ ದುರಂತಕ್ಕೆ ಹೇತುವಯ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ತನಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿ, ಉಗಾಂಡಾದ ಉದ್ಧಾರದ ಮೂಲಕರ್ತೃ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ತನ್ನ ವಿಚಿತ್ರ ವಿಲಕ್ಷಣ ವ್ಯಕ್ತಿತ್ವದ ದೆಸೆಯಿಂದ ದುರಂತ ನಾಯಕನಾಗಿಬಿಟ್ಟ ಅವನ ಬದುಕು ಗೊಂದಲಗಳ ಮೇರುಕೃತಿಯಂತಾಗಿದ್ದು ಮಾತ್ರ ಆಫ್ರಿಕಾದ ಚರಿತ್ರೆಯ ದುರಂತವೇ ಸರಿ.





ಈದಿ ಅಮಿನ್ – ನರಹಂತಕನೊಬ್ಬನ ವಿಲಕ್ಷಣ ಗಾಥೆ – ಭಾಗ 3

2 02 2009

ನರಹಂತಕನ ನರಭಕ್ಷಣೆಯ ಕಥೆ… ಟಾಂಜಾನಿಯಾ ಯುದ್ಧದಲ್ಲಿ ಮುಗಿಯಿತು ದರ್ಬಾರಿ ದಿನಗಳು…

idi_amin_frozen_heads

ಅಮಿನ್ ಕುರಿತು ಹರಡಿಕೊಂಡಿರುವ ನೂರಾರು ಕಥೆ-ಉಪಕಥೆ ಊಹಾಪೋಹಗಳದ್ದೇ ಒಂದು ತೂಕವಾದರೆ, ನರಹಂತಕನ ನರಭಕ್ಷಣೆಯ ಬಗ್ಗೆ ಹುಟ್ಟಿಕೊಂಡಿರುವ ಭೀಭತ್ಸ ಕಥಾನಕಗಳದ್ದೇ ಇನ್ನೊಂದು ವಜನು. ಈ ಕತೆಗಳನ್ನು ಕೇಳುತ್ತಿದ್ದರೆ ಕೇಳುಗರ ನರನಾಡಿಗಳಲ್ಲಿ ಭೀತಿಯ ಸೆಳುಕೊಂದು ಪ್ರವಹಿಸಿ ಅಸಹ್ಯದ ಭಾವವೊಂದನ್ನು ಹುಟ್ಟುಹಾಕುತ್ತದೆ. ಆಫ್ರಿಕಾದ ಕಸಾಯಿ ಎಂಬ ಕುಖ್ಯಾತಿಯನ್ನು ಗಳಿಸಿದ ಈದಿ ಅಮಿನ್ ನರಭಕ್ಷಣೆಯ ಕತೆಗಳನ್ನು ಕೇಳಿದಾಗ ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆ ಒಂದೇ… ಹೀಗೂ ಉಂಟೇ..?

 

ತಾನು ಕೊಲ್ಲಿಸಿದ ಗಣ್ಯರ ರುಂಡ, ಹೃದಯ, ಲಿವರ್ ಮೊದಲಾದ ಅಂಗಾಗಗಳನ್ನು ಅತ್ಯಂತ ಜತನದಿಂದ ತನ್ನ ಅಡುಗೆಮನೆಯ ಫ್ರಿಜ್‌ನಲ್ಲಿ ಇರಿಸುತ್ತಿದ್ದನಂತೆ. ಅತ್ಯಂತ ಮಹತ್ವದ ಮಾತುಕತೆಗಳ ಸಂದರ್ಭದಲ್ಲಿ ರುಂಡಗಳನ್ನು ಪ್ಲೇಟಿನಲ್ಲಿರಿಸಿ ತಂದು ಎದುರಾಳಿಯ ಬಾಯಿ ಕಟ್ಟಿಹಾಕಿಸುತ್ತಿದ್ದನಂತೆ. ತಾನು ಕೊಲ್ಲಿಸಿದವರ ಲಿವರ್, ಹೃದಯಗಳನ್ನು ಹುರಿದು ಸ್ವಾಹಾ ಮಾಡುತ್ತಿದ್ದನಂತೆ. ಸತ್ತವರ ಗುಂಡಿಗೆ ಕೀಳಿಸಿ ಡ್ರಾಕುಲಾದ ತರಹ ರಕ್ತಪಾನ ಮಾಡುತ್ತಿದ್ದನಂತೆ. ಕೊನೆಗೆ ತನ್ನ ಹೆಂದತಿಯನ್ನು ಕೊಂದಾಗಲೂ ಹೀಗೇ ಮಾಡಿದ್ದನಂತೆ. ಶವಗಳ ಮಾಂಸವನ್ನು ಹಸಿಹಸಿಯಾಗಿಯೇ ಕಚ್ಚಿ ನರಭಕ್ಷಕ ಪ್ರಾಣಿಯಂತೆ ನರಮಾಂಸ ತಿಂದು ತೇಗಿದ್ದಾನಂತೆ… ಹೀಗೆ ಒಂದಕ್ಕಿಂತ ಒಂದು ವಿಲಕ್ಷಣ ಕತೆಗಳು… ಅಸಹ್ಯ-ವಿಕೃತಿಗಳ ಪರಮಾವಧಿ ಎನ್ನಿಸುವ ಗಾಥೆಗಳು. ಈ ಕಥೆಗಳೆಲ್ಲವೂ ನಂಬಲರ್ಹವೆನಿಸಿದಲ್ಲಿ ಆತ ನಿಜಕ್ಕೂ ನರರೂಪಿ ರಾಕ್ಷಸನೇ ಸರಿ. ಈ ಕತೆಗಳೆಲ್ಲ ತನ್ನಪ್ಪನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅವನ ವಿರೋಧಿಗಳು ಹುಟ್ಟುಹಾಕಿದಂತವುಗಳು… ಇವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕುತ್ತಾನೆ ಈದಿ ಅಮಿನ್ ಪುತ್ರ ಜಾಫರ್ ಅಮಿನ್. ಇದು ಬರೀ ಕಪೋಲಕಲ್ಪಿತ ಸುಳ್ಳಿನ ಕಂತೆ… ಅಮಿನ್ ವ್ಯಕ್ತಿತ್ವವನ್ನು ಅತಿರಂಜಕವಾಗಿಸಲು ಸ್ವತಃ ಅವನೇ ಈ ರೀತಿಯ ಕತೆಗಳನ್ನು ಹುಟ್ಟು ಹಾಕಿದ್ದಾನೆ ಎಂಬುದು ಈ ಕುರಿತು ಸಾಕಷ್ಟು ಅಧ್ಯಯನ ನಡೆಸಿದವರ ಅಂಬೋಣ. ಅಮಿನ್ ಗತಿಸಿದ ಐದು ವರ್ಷಗಳ ಬಳಿಕ ಇಂದಿಗೂ ಈ ಕತೆಗಳ ಸತ್ಯಾಸತ್ಯತೆಯ ಕುರಿತು ವಾದವಿವಾದಗಳು ಜೀವಂತವಾಗಿವೆ. ಈ ಘಟನೆಗಳಿಗೆ ರೆಕ್ಕೆ-ಪುಕ್ಕ-ಬಾಲ ಸೇರಿಕೊಂಡಿರಬಹುದು… ಕತೆಗಳು ಹದಿನಾರಾಣೆ ಸತ್ಯವಾಗಿಲ್ಲದೇ ಇರಬಹುದು… ಆದರೂ ಒಂದು ಗಾದೆ ಮಾತೇ ಇದೆಯಲ್ಲ… ಬೆಂಕಿಯೇ ಇಲ್ಲದೆ ಹೊಗೆ ಏಳೋದಾದ್ರೂ ಹೇಗೆ? ಅಂತ. ಈ ಕತೆಗಳ ಹುಟ್ಟಿಕೊಂಡಿದ್ದಾದ್ರೂ ಹೇಗೆ? ತನ್ನ ವಿಲಕ್ಷಣ ನಡವಳಿಕೆ, ಬಫೂನ್ ತರಹದ ವ್ಯಕ್ತಿತ್ವದಿಂದ ಅಮಿನ್ ಸಂಪಾದಿಸಿದ್ದ ಅಸಡ್ಡಾಳತನದ ಇಮೇಜ್ನ್ನು ಗಮನಿಸಿದರೆ ಅಮಿನ್ ಈ ರೀತಿ ನಡೆದುಕೊಂಡಿದ್ದರೂ ಆಶ್ಚರ್ಯವಿಲ್ಲ ಅನ್ನುವ ಭಾವನೆಯೇ ಎಲ್ಲರಲ್ಲೂ ಇರುವುದರಿಂದ ಈ ಕತೆಗಳು ಹೆಚ್ಚು ಹೆಚ್ಚು ಪ್ರಚುರಗೊಂಡಿರಬಹುದು. ಇಲಿ ಹೋಯ್ತು ಅಂದರೆ ಹುಲಿ ಹೋಯ್ತು ಅನ್ನುವ ಸ್ವಭಾವದ ಜನರಿಂದಾಗಿ ವಾಸ್ತವದಲ್ಲಿ ಅಮಿನ್ ಎಸಗಿರಬಹುದಾದ ಯಾವೋದು ಒಂದು ವಿಲಕ್ಷಣ ಕೃತ್ಯವೇ ಈ ಎಲ್ಲಾ ಕತೆಗಳ ಹುಟ್ಟಿನ ಮೂಲವಾಗಿರಬಹುದು. ಆದರೂ ಆಫ್ರಿಕಾದ ಕೆಲವು ಬುಡಕಟ್ಟುಗಳಲ್ಲಿ ಇಂದಿಗೂ ನರಭಕ್ಷಣೆ ಚಾಲ್ತಿಯಲ್ಲಿರುವುದನ್ನು ಗಮನಿಸಿದರೆ ಅಮಿನ್ ಕೂಡಾ ನರಭಕ್ಷಣೆ ಮಾಡಿರಬಹುದೇನೋ ಅನ್ನುವ ಅನುಮಾನವನ್ನು ತಳ್ಳಿಹಾಕಲು ಸಾಧ್ಯವಿಲ್ಲ.

 

ಅಮಿನ್‌ನ ಕೌಟುಂಬಿಕ ಜೀವನದತ್ತ ಕಣ್ಣು ಹಾಯಿಸಿದರೆ 1966ರಿಂದ ಮೊದಲ್ಗೊಂಡು ಸಾಯುವ ಕೆಲ ತಿಂಗಳ ಮುಂಚಿನವರೆಗೆ ಅಧಿಕೃತವಾಗಿ ಒಟ್ಟು ಆರು ಮಂದಿಯನ್ನು ಮದುವೆಯಾಗಿದ್ದ. ಆದರೆ ಅನಧಿಕೃತವಾಗಿ ಅವನ ಅಂತರಂಗದ ಸಖಿಯರಾಗಿದ್ದವರ ಲೆಕ್ಕ ಯಾರಿಗೂ ಸಿಕ್ಕಿಲ್ಲ. ಅಲ್ಲದೇ ಅವನ ಮಕ್ಕಳ ಸಂಖ್ಯೆಯ ಕುರಿತಾಗಿಯೂ ಕೂಡಾ ಸಾಕಷ್ಟು ಗೊಂದಲಗಳಿವೆಯಾದರೂ ಕೆಲವು ನಂಬಲರ್ಹ ಮೂಲಗಳ ಪ್ರಕಾರ ಅದು ೪೦ನ್ನು ಮೀರುತ್ತದೆ. ಅವನ ಅಚ್ಚುಮೆಚ್ಚಿನ ಪತ್ನಿಯಾಗಿದ್ದ ಕೇ ಎನ್ನುವಾಕೆ 1974ರ ಆಗಸ್ಟ್ 13ರಂದು ತೀರಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದಾಗ ಎಲ್ಲರ ಅನುಮಾನದ ದೃಷ್ಟಿ ಅಮಿನ್ ಸುತ್ತಲೇ ಸುಳಿಯುತ್ತಿತ್ತು. ಅಲ್ಲದೆ ಆಕೆಯ ಅಕ್ರಮ ಸಂಬಂಧದ ಮೂಲಕ ಆಕೆ ಗರ್ಭ ಧರಿಸಿದ್ದು ಕೂಡಾ ಅನೇಕ ಊಹಾಪೋಹಗಳಿಗೆ ದಾರಿಮಾಡಿಕೊಟ್ಟಿತ್ತು. ಆಕೆಯ ಪ್ರಿಯಕರನೆನ್ನಲಾಗಿದ್ದ ಡಾಕ್ಟರ್ ಘಟನೆ ಸಂಭವಿಸಿದ ಕೆಲ ದಿನಗಳಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಾ ಈ ಊಹಾಪೋಹಗಳಿಗೆ ಪುಷ್ಟಿ ನೀಡಿತ್ತು. ಒಟ್ಟಿನಲ್ಲಿ ಅಮಿನ್ ಎಂದರೆ ವಿವಾದಗಳು ಅನ್ನುವಷ್ಟರ ಮಟ್ಟಿಗೆ ಅವನ ಬದುಕಿನ ಸುತ್ತ ಅವು ಸುತ್ತಿಕೊಂಡಿದ್ದವು.

 

ಈ ನಡುವೆ 1976ರಲ್ಲಿ ಅಮಿನ್ ತನ್ನ ಅಧಿಕಾರಾವಧಿಯಲ್ಲೇ ತೀವ್ರವೆನ್ನಿಸುವ ಮುಜುಗರಕ್ಕೊಳಗಾಗಿ ಮುಖಭಂಗವನ್ನನುಭವಿಸಬೇಕಾಯ್ತು. ಆಪರೇಷನ್ ಎಂಟೆಬೆ ಎಂದೇ ಹೆಸರುವಾಸಿಯಾದ ಕಾರ್ಯಾಚರಣೆಯ ಮೂಲಕ ಪ್ಯಾಲಸ್ತೀನ್ ವಿಮೋಚನಾ ಪಡೆಯ ಉಗ್ರರು ಹೈಜಾಕ್ ಮಾಡಿದ್ದ ಏರ್ ಫ್ರಾನ್ಸ್ ವಿಮಾನದಲ್ಲಿದ್ದ ಒತ್ತೆಯಾಳುಗಳನ್ನು ಇಸ್ರೇಲಿ ಡಿಫೆನ್ಸ್ ಫೋರ್ಸ್ ಪಾರುಮಾಡುವಲ್ಲಿ ಯಶ ಕಂಡಿತು. ಪ್ಯಾಲಸ್ತೀನ್ ಉಗ್ರರಿಗೆ ಬೆಂಬಲ ನೀಡಿ ತನ್ನ ಸೈನ್ಯವನ್ನೇ ಅವರ ನೆರವಿಗೆ ಬಳಸಿದ್ದ ಅಮಿನ್‌ಗೆ ಈ ಪ್ರಸಂಗದಿಂದ ತೀರಾ ಅವಮಾನವಾಯಿತು. ಉಗಾಂಡಾದ ನಲವತ್ತೈದು ಜನ ಸೈನಿಕರು ಈ ಕಾರ್ಯಾಚಾರಣೆಯಲ್ಲಿ ಇಸ್ರೇಲಿ ಡಿಫೆನ್ಸ್ ಫೋರ್ಸ್ ಕೈಯಲ್ಲಿ ಹತರಾದರು. ಗಾಯದ ಮೇಲೆ ಬರೆ ಎಳೆದಂತೆ ಉಗಾಂಡಾದ ವಾಯುಪಡೆಯ ಹನ್ನೊಂದು ಮಿಗ್-17 ಯುದ್ಧ ವಿಮಾನಗಳು ಪುಡಿಪುಡಿಯಾದವು. ಈ ಕಾರ್ಯಾಚರಣೆಯ ಸೋಲಿನಿಂದ ಕುಂಡೆಸುಟ್ಟ ಬೆಕ್ಕಿನಂತಾದ ಅಮಿನ್, ಕೀನ್ಯಾ ಕೂಡಾ ಇಸ್ರೆಲ್ ಜೊತೆ ಕೈ ಜೋಡಿಸಿದೆ ಅನ್ನುವ ಅನುಮಾನದ ಹಿನ್ನೆಲೆಯಲ್ಲಿ ಉಗಾಂಡದಲ್ಲಿ ನೆಲೆಸಿದ್ದ ನೂರಾರು ಜನ ಕೀನ್ಯನ್ನರನ್ನು ತರಿದುಹಾಕಿದ.

 

ಎಲ್ಲದಕ್ಕೂ ಒಂದು ಅಂತ್ಯವೆಂಬುದು ಇರಲೇಬೇಕಲ್ಲ. ಈದಿ ಅಮಿನ್‌ನ ದರ್ಬಾರಿ ದಿನಗಳು ಕೂಡ ಇದಕ್ಕೆ ಹೊರತಾಗುವುದು ಹೇಗೆ ಸಾಧ್ಯ? ಉಗಾಂಡಾದ ರಫ್ತು ವ್ಯವಹಾರದ ಪ್ರಮುಖ ಬೆಳೆ ಕಾಫಿಯ ಬೆಲೆ 1978ರ ಸುಮಾರಿಗೆ ಸಂಪೂರ್ಣವಾಗಿ ಕುಸಿದು ನೆಲಕಚ್ಚಿತ್ತು. ಮೊದಲೇ ಬರಗೆಟ್ಟುಹೋಗಿದ್ದ ಉಗಾಂಡಾದ ಆರ್ಥಿಕತೆಯ ಮೇಲೆ ಇದು ಮಾರಣಾಂತಿಕ ಪ್ರಹಾರವಾಗಿ ಪರಿಣಮಿಸಿತು. ಕಂಗಾಲಾದ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲೋಸುಗ ನೆರೆರಾಷ್ಟ್ರವಾದ ಟಾಂಜಾನಿಯಾದೊಂದಿಗೆ ಕ್ಯಾತೆ ತೆಗೆಯಲು ಅಮಿನ್ ಮುಂದಾಗಿಬಿಟ್ಟ. ಟಾಂಜಾನಿಯಾದ ಕಗೇರಾ ಪ್ರದೇಶ ಉಗಾಂಡಾಕ್ಕೆ ಸೇರಿದ್ದು ಎಂದು ಘೋಷಿಸಿ, ಅದರ ವಿಮೋಚನೆಗಾಗಿ ಟಾಂಜಾನಿಯಾದೊಂದಿಗೆ ಯುದ್ಧ ಘೋಷಣೆ ಮಾಡುವುದರ ಮೂಲಕ ತನ್ನ ಅಧಿಕಾರದ ಅಂತ್ಯಕ್ಕೆ ತಾನೆ ಗೋರಿ ತೆಗೆಯಲು ಮುಂದಾದ. ಈ ದಾಳಿಯ ಹಿಂದೆ ತಾನು ಪದಚ್ಯುತಗೊಳಿಸಿದ ಒಬೋಟೆಗೆ ಟಾಂಜಾನಿಯಾ ಆಶ್ರಯ ನೀಡಿದ್ದ ಕುರಿತು ಅಮಿನ್‌ಗೆ ಇದ್ದ ಅಸಹನೆ ಕೂಡಾ ಹಿರಿದಾದ ಪಾತ್ರ ವಹಿಸಿತ್ತು. 1978ನೇ ಇಸವಿಯ ಅಕ್ಟೋಬರ್ 30ರಂದು ಈ ಐತಿಹಾಸಿಕ ಯುದ್ಧದ ಕಹಳೆ ಮೊಳಗಲಾರಂಭಿಸಿತು. ಸರಿಸುಮಾರು 70,000ದಷ್ಟಿದ್ದ ಉಗಾಂಡಾದ ಸೈನ್ಯಕ್ಕೆ ಲಿಬಿಯಾದ ಅಧ್ಯಕ್ಷ ಗಡ್ಡಾಫಿ ನೀಡಿದ್ದ 3000 ಸೈನಿಕರ ಮತ್ತು ಟಿ-54 ಟಿ-55 ಯುದ್ಧ ಟ್ಯಾಂಕರ್‌ಗಳ ಸಹಾಯ ಲಭಿಸಿತ್ತು. ಆದರೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ್ದ ಟಾಂಜಾನಿಯಾದ ಸೈನಿಕರು ಹಾಗು ಒಬೋಟೆ ನೇತೃತ್ವದ ಸುಮಾರು 6000 ಉಗಾಂಡಾದ ಬಂಡುಕೋರರ ಪಡೆಯ ಎದುರು ಅಮಿನ್ ಪಡೆಯ ಆಟ ಸಾಗಲಿಲ್ಲ. ತನ್ನ ನೆಲೆಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಾ ಬಂದ ಉಗಾಂಡಾದ ಸೈನ್ಯ 1979ರ ಏಪ್ರಿಲ್ 10 ರಂದು ಸಂಪೂರ್ಣವಾಗಿ ಸೋತು ಶರಣಾಯಿತು. ಕೊನೆಗೂ ಅಮಿನ್ ಕಪಿಮುಷ್ಟಿಯ ಹಿಡಿತದಿಂದ ಕಂಪಾಲಾದ ವಿಮೋಚನೆಯಾಯ್ತು… ಇಡೀ ಉಗಾಂಡಾ ನೆಮ್ಮದಿಯ ನಿಟ್ಟುಸಿರೆಳೆಯಿತು. ಎಂಟು ವರ್ಷಗಳ ಹಿಂದೆ ಅಮಿನ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದಿದ್ದ ಸಂಭ್ರಮಾಚರಣೆಯಲ್ಲಿ ಕುಣಿದು ಕುಪ್ಪಳಿಸಿದ್ದ ಅದೇ ಉಗಾಂಡಾದ ಜನತೆ ಇಂದು ಅವನ ಪದಚ್ಯುತಿಯನ್ನು ರಾಷ್ಟ್ರೀಯ ಹಬ್ಬವೆಂಬಂತೆ ಆಚರಿಸಿ ಖುಷಿಪಟ್ಟಿದ್ದು ಅವನ ಆಡಲಿತದಲ್ಲಿ ಅವರ ಬದುಕು ಎಷ್ಟು ನಲುಗಿತು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಎಂಟು ವರ್ಷಗಳ ನಿರಂತರ ರಕ್ತತರ್ಪಣದಿಂದ ತೋಯ್ದು ಹೋಗಿದ್ದ ಉಗಾಂಡಾದ ಚರಿತ್ರೆಯು ತನ್ನ ಮಗ್ಗುಲು ಬದಲಿಸಿತ್ತು… ತನ್ನ ಪತ್ನಿಯರು, ಗೆಳತಿಯರು, ಮಕ್ಕಳು ಹಾಗೂ ಆಪ್ತ ಸಚಿವರೊಂದಿಗೆ ಲಿಬಿಯಾಕ್ಕೆ ಪರಾರಿಯಾದ ಅಮಿನ್ ಮುಂದೆ ಅಲ್ಲಿಂದ ಕಾಲ್ತೆಗೆದು ಸೌದಿ ಅರೇಬಿಯಾಕ್ಕೆ ಪಲಾಯನಗೈದ. ಅಲ್ಲಿಂದ ಮುಂದೆ ಏನೇನಾಯ್ತು ಅನ್ನೋದನ್ನು ನೋಡೋದಕ್ಕೆ ಮುಂಚೆ ಒಂದು ಪುಟ್ಟ ವಿರಾಮ….