Archive for ಮಾರ್ಚ್, 2008

ಕನಸು ಕಾಣೋಣ ಬನ್ನಿ…

Posted: ಮಾರ್ಚ್ 26, 2008 in ವಿಚಾರ
ಟ್ಯಾಗ್ ಗಳು:,

ಕನಸುಗಳನ್ನು ಕಾಣದವರು ಯಾರಾದರು ಈ ಭೂಮಿಯ ಮೇಲೆ ಇದ್ದಾರೆಯೇ? ಅರಿವು ಮೂಡಿದಂದಿನಿಂದ ಅರಿವಿಲ್ಲದ ಲೋಕಕ್ಕೆ ತೆರಳುವ ತನಕ ಕನಸುಗಳ ಕಟ್ಟಿ, ಕಟ್ಟಿದ ಕನಸುಗಳ ಬೆನ್ನಟ್ಟಿ -ಬೇಟೆಯಾಡುತ, ಕೈಗೂಡಿದರೆ ಹಿಗ್ಗುತ, ಕೈ ಜಾರಿದರೂ ಮುನ್ನುಗ್ಗುತ ಸಾಗುವುದೀ ಸ್ವಪ್ನಲೋಕದ ಪಯಣ. ಕನಸುಗಳು ಕೈಗೂಡದೆ ಬದುಕಲ್ಲಿ ಬೇಸರ ಮೂಡಿ ಆಶಾವಾದದ ಸೆಲೆ ಇಂಗಿ ಹೋದಾಗ, ಹೊಸ ಹೊಸ ಕನಸುಗಳು ನವ ಚೈತನ್ಯವ ಮೂಡಿಸಿ ಜೀವನೋತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತವೆ. ಬದುಕೆಂಬ ಕ್ಯಾನ್‌ವಾಸ್ ಮೇಲೆ ಬಣ್ಣಬಣ್ಣದ ಕನಸುಗಳು ಮೂಡಿಸುವ ಚಿತ್ತಾರಗಳು ಭವಿಷ್ಯದ ಬಗೆಗೆ ಉತ್ಸಾಹ ಮೂಡಿಸಿ, ತನ್ಮೂಲಕ ಬಾಳಿಗೆ ಒಂದು ಹೊಸ ಆಯಾಮ ಒದಗಿಸುವ ಟಾನಿಕ್ ಅಂದ್ರೂ ತಪ್ಪೇನಿಲ್ಲ.

ಕನಸುಗಳನ್ನು ನಾವು ನೀವೆಲ್ಲರೂ ಕಂಡಿರುತ್ತೇವೆ. ನಮ್ಮ ಸ್ಥಿತಿ- ಗತಿ, ಮನೋಗತಿ, ರುಚಿ-ಅಭಿರುಚಿ, ಆಸೆ-ಆಕಾಂಕ್ಷೆಗಳ ತಳಪಾಯದ ಮೇಲೆ ವಿವಿಧ ವಿನ್ಯಾಸಗಳ ಸ್ವಪ್ನ ಸೌಧದ ನಕಾಶೆ ಮನಸಲ್ಲಿ ಮೂಡಿರುತ್ತದೆ. ಹೀಗೆ ಕಂಡ ಕನಸಿನ ಸಾರ್ಥಕತೆ – ಔಚಿತ್ಯ ಅಡಗಿರುವುದು- ಕನಸನ್ನು ಕೈಗೂಡಿಸಿಕೊಳ್ಳುವಲ್ಲಿ ನಾವು ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎನ್ನುವುದರಲ್ಲಿ. ಬರೇ ಕನಸು ಕಂಡರಷ್ಟೇ ಸಾಲದು; ಅದು ನಮ್ಮ ಇತಿಮಿತಿಯ ಪರಿಧಿಯೊಳಗೆ ನಮ್ಮ ಪ್ರಯತ್ನದ ವ್ಯಾಪ್ತಿಯೊಳಗೆ ಫಲ ಕೊಡುವುದೇ ಎಂದು ಯೋಚಿಸಬೇಕಾದದ್ದು ತೀರಾ ಅಗತ್ಯ. ಒಂದೊಮ್ಮೆ ಅದು ನಮ್ಮ ನಿಲುಕಿಗೆ ಹೊರತಾದುದಾದರೂ..ನಮ್ಮ ಸಾಮರ್ಥ್ಯದ ಮೇರೆಗಳನ್ನು ಹಿಗ್ಗಿಸಿಕೊಂಡಾದರೂ ಕನಸನ್ನು ಕೈವಶ ಮಾಡಿಕೊಳ್ಳುವ ಹುಮ್ಮಸ್ಸು-ಛಲ ನಮ್ಮದಾಗಬೇಕು. ಆಗ ಮಾತ್ರ ಆಶಾಭಂಗವಾಗುವುದು ತಪ್ಪಿ, ಕನಸು ಮರೀಚಿಕೆಯಾಗದೆ ನಮ್ಮ ಜೀವನದ ಯಶಸ್ಸಿಗೆ ಮುನ್ನುಡಿ ಬರೆಯಬಲ್ಲುದು.

ಕನಸುಗಳಿಲ್ಲದ ಜೀವನ ರಸಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಂತೆ ಎನ್ನುವ ಮಾತಿದ್ದರೂ ಕೂಡಾ, ಸ್ವಪ್ನಸಾಮ್ರಾಜ್ಯದಲ್ಲೇ ವಿಹರಿಸುತ್ತಾ, ಜೀವನ ನಿಮಿತ್ತ ಕರ್ತವ್ಯಗಳನ್ನು ಕೂಡಾ ಮರೆತು, ಹಗಲುಗನಸುಗಳಲ್ಲಿ ಮೈಮರೆಯುವುದು ಸರಿಯಲ್ಲ. ಕನಸು ಸಾಕಾರಗೊಂಡಾಗ ದೊರಕುವ ಅಮಿತಾನಂದದ ನಿರೀಕ್ಷೆಯಲ್ಲೇ ನಮ್ಮ ಕರ್ತವ್ಯ ಪ್ರಜ್ಞೆ ಮರೆತು ಕುಳಿತರೆ ಬದುಕು ಹಳಿ ತಪ್ಪುವುದು ಖಂಡಿತ. ನಮ್ಮ ಕನಸುಗಳ ಬಗ್ಗೆ, ಸಾಧಿಸಬೇಕೆಂದುಕೊಂಡಿರುವುದರ ಬಗ್ಗೆ ಇಲ್ಲದ ಬಡಾಯಿಕೊಚ್ಚುವ ಬದಲು, ಎಲೆ ಮರೆಯ ಕಾಯಿಯಂತೆ ಇದ್ದು ನಮ್ಮ ಕನಸಿನ ಜೈತ ಯಾತ್ರೆ ಮುನ್ನಡೆಸಿದರೆ, ನಾವು ಬಯಸುವ ಮನ್ನಣೆ, ಪ್ರಸಿದ್ಧಿಗಳನ್ನೆಲ್ಲ ನಮ್ಮ ಸಾಧನೆಗಳ ಮೂಲಕ ಪಡೆದರೇನೆ ಸಮಂಜಸ ಅಲ್ಲವೇ?

ಕನಸುಗಳು ನಮ್ಮ ಸುಂದರ ಭವಿತವ್ಯದ ತಳಹದಿಗಳೇ ಆದರೂ, ನಮ್ಮ ಆಸೆ ಕೈಗೂಡದಾದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಎಲ್ಲಾ ಮುಗಿದೇಹೋಯಿತು ಎಂಬಂತಾಡುವುದು ಕೂಡ ಸರಿಯೆನಿಸಲಾರದು. ಸ್ವಪ್ನವು ವಾಸ್ತವವಾಗುವಲ್ಲಿ ನಮ್ಮ ಪ್ರಯತ್ನಗಳೆಷ್ಟೇ ಪರಿಪೂರ್ಣವಾಗಿದ್ದರೂ ಸಹಾ ಕೆಲವೊಮ್ಮೆ ಪ್ರತಿಕೂಲ ಸನ್ನಿವೇಶಗಳೋ ಅಥವಾ ಅದೃಷ್ಟವು ನಮ್ಮ ಪರವಾಗಿ ಇಲ್ಲದಿರುವುದರಿಂದಲೋ ಕನಸು ಮುರಿದುಬೀಳಬಹುದು; ತತ್‌ಪರಿಣಾಮವಾಗಿ ಕೀಳರಿಮೆ , ಹಿಂಜರಿಕೆ ಮನಸಲ್ಲಿ ಉದ್ಭವಿಸಿ ಖಿನ್ನತೆ ಆವರಿಸಲೂಬಹುದು. ಹೀಗಾಗದಂತೆ ಮನಸಿನ ಮೇಲೆ ಹತೋಟಿ ಸಾಧಿಸಿ ಕಡಿವಾಣ ಹಾಕಬೇಕಾದುದು ತೀರಾ ಅವಶ್ಯ. ಕನಸ್ಸಿನ ಸೌಧವೊಂದು ಕುಸಿದಾಗ ಅದಕ್ಕಾಗಿ ಪರಿತಪಿಸದೆ, ನಮ್ಮ ಪ್ರಯತ್ನ ಎಡವಿದ್ದೆಲ್ಲಿ ಎಂದು ಪರಾಮರ್ಶಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ನಮ್ಮ ಕನಸಿನ ಪಯಣದ ದಾರಿ ಸಾಗಬೇಕು. ಕನಸು ಕಾಣುವುದು, ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವುದು ಮಾತ್ರ ನಮ್ಮ ಕೆಲಸ; ಮಿಕ್ಕಿದ್ದೆಲ್ಲಾ ನಮ್ಮ ಅದೃಷ್ಟಕ್ಕೆ ಬಿಟ್ಟಿದ್ದು ಎಂಬ ನಿರಾತಂಕ- ನಿರ್ಲಿಪ್ತ ಮನಸ್ಥಿತಿ ನಮ್ಮದಾಗಿದ್ದಲ್ಲಿ ಖಿನ್ನತೆಯಿಂದ ವೃಥಾ ಬಳಲುವುದು ತಪ್ಪುತ್ತದೆ. ಅಲ್ಲದೆ ಹೊಸ ಕನಸು ಕಾಣಲು ಹುಮ್ಮಸ್ಸು ಮೂಡುತ್ತದೆ.

ಸುಮ್ಮನೆ ಅರ್ಥಹೀನ ಕನಸುಗಳನ್ನು ಕಟ್ಟಿ, ವ್ಯರ್ಥ ಆಸೆಗಳನ್ನುಇಟ್ಟುಕೊಂಡು ಗಗನ ಕುಸುಮವನ್ನು ಬಯಸುವುದಕ್ಕಿಂತ, ಕೈಗೆಟುಕುವ ಸ್ವಪ್ನಗಳನ್ನು ಕಟ್ಟಿ, ಬದುಕಿಗೆ ಸ್ಪಷ್ಟ ರೂಪು ಕೊಟ್ಟು, ಹಂತ ಹಂತವಾಗಿ ಮುನ್ನೆಡೆಯುವ ಹಾದಿ ಒಳಿತು. ಕನಸುಗಾರರಾಗುವ ಜೊತೆಗೇ, ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಬೇಕಾದ ತಾಳ್ಮೆ, ಪ್ರಯತ್ನಶೀಲತೆ,ದೃಢನಿಶ್ಚಯ, ಪ್ರಸಂಗಾವಧಾನತೆ ನಮ್ಮಲ್ಲಿರಬೇಕು. ನಮ್ಮ ಮಿತಿಗಳನ್ನೇ ನಮ್ಮ ಅವಕಾಶಗಳನ್ನಾಗಿಸಿಕೊಳ್ಳುವ ಚಾತುರ್ಯ, ಆಡಿಕೊಳ್ಳುವವರೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ನಮ್ಮ ಪರಿಮಿತಿಯೊಳಗೇ ಸಾಧಿಸಿ ತೋರಿಸಿದರೆ..ಗಗನ ಕುಸುಮವೂ ಧರೆಗಿಳಿದೀತು. ಜೀವನೋತ್ಸಾಹವ ತೊರೆದು ವಿರಾಗಿಯಂತೆ ಬಾಳುವುದರ ಬದಲು ಕನಸುಗಳ ರಂಗು ತುಂಬಿ ಜೀವನ ಸಾರ್ಥಕತೆಯತ್ತ ಮುಂದಡಿಯಿಡುವ ಧನಾತ್ಮಕ ಚಿಂತನೆ ಮತ್ತು ಆಶಾವಾದಿ ಮನಸ್ಸು ನಮ್ಮ-ನಿಮ್ಮೆಲ್ಲರದ್ದೂ ಆಗಲಿ ಎಂದು ಹಾರೈಸೋಣವೇ?

ಮನಸ್ಸಿಗೆ ತುಂಬ ಬೇಜಾರಾದಾಗ ಹಳೆಯ ಫೋಟೋ ಆಲ್ಬಮ್ ಇಲ್ಲವೇ ಕಾಲೇಜ್ ಮ್ಯಾಗಜೀನ್ ಅಥವಾ ಸ್ಕೂಲು- ಕಾಲೇಜಿನ ಆಟೋಗ್ರಾಫ್ ಎಂಬ ನೆನಪಿನ ಸಂಪುಟವನ್ನೊಮ್ಮೆ ಬಿಚ್ಚಿನೋಡಿ. ನಿಮಗೇ ಗೊತ್ತಾಗದಂತೆ ಯಾವುದೋ ಲೋಕದೊಳಗೆ ಕಳೆದುಹೋದಂತೆ ಅನ್ನಿಸದಿದ್ರೆ ಮತ್ತೆ ಹೇಳಿ. ನೆನಪಿನ ಪದರುಗಳ ನಡುವೆ ಎಲ್ಲೋ ಪುಟ್ಟ ಕದಲಿಕೆ. ಕಾಡುವ ಬೇಸರವನ್ನು ಹೊಡೆದೋಡಿಸಿ, ನೆನಪುಗಳ ಜಡಿಮಳೆಯಲ್ಲಿ ಮಿಂದಂತಹ ಆಹ್ಲಾದ ನಿಮ್ಮನ್ನು ಆವರಿಸುತ್ತದೆ. ಯಾವುದೋ ಕಾಲದ ಕೋಳಿ ಜಗಳ ನೆನಪಾಗಿ ತುಟಿಯಂಚಿನಲ್ಲಿ ಕಿರುನಗು ಮೂಡುತ್ತದೆ. ಇನ್ಯಾವುದೋ ಪೋಲಿ ಗೆಳೆಯರ ನೆನಪಾಗಿ ಮುಸಿ ಮುಸಿ ನಗು ತುಟಿ ಮೀರಿ ಹೊರಬರುತ್ತದೆ.

 ನೆನಪುಗಳ ಶಕ್ತಿಯೇ ಅಂಥದ್ದು. ಕಾಲ-ದೇಶ-ವರ್ತಮಾನವನ್ನೆಲ್ಲ ಒಂದರೆಕ್ಷಣ ಮರೆಮಾಡಿ ಗತಬದುಕಿನ ಬೀದಿಯ ಸಂದಿಗೊಂದುಗಳಲ್ಲಿ ಸುತ್ತಾಡಿಸುತ್ತದೆ. ಅದರಲ್ಲೂ ಬಾಲ್ಯಕಾಲದ ಆಟ-ಹುಡುಗಾಟ, ಕಾಲೇಜಿನ ದಿನಗಳ ಜೋಶ್, ತರಲೆ , ಕಿಡಿಗೇಡಿತನವೆಲ್ಲ ಮತ್ತೆ ನೆನಪಾದಾಗ ದೈನಂದಿನ ಜಂಜಡ – ದುಗುಡಗಳಿಂದ ಅರೆಗಳಿಗೆ ಮುಕ್ತಿ ಸಿಗುತ್ತದೆ. ಯಾವ ವಯೋಮಾನವರನ್ನೇ ಕೇಳಿದರೂ ಬಾಲ್ಯ-ಯೌವ್ವನ ಕಾಲದ ಸ್ಮರಣೆಯಿಂದ ಮನಸ್ಸಿಗೆ ಸಿಗುವ ಆಪ್ಯಾಯ ಇನ್ನ್ಯಾವುದರಲ್ಲೂ ಇಲ್ಲ ಎಂದೇ ಹೇಳುತ್ತಾರೆ. 

ಆ ದಿನಗಳ ನೆನಪು ಅಷ್ಟು ಆಪ್ತವಾಗಲು ಕಾರಣವೇನು? ಬದುಕಿನ ಕ್ರೂರವಾಸ್ತವದ ಅರಿವಿರದ, ಎಲ್ಲವನ್ನೂ ಬೆರಗಿನಿಂದ ನೋಡುವ ಉತ್ಸಾಹದ, ಕೃತ್ರಿಮತೆಯ ಲೇಪವಿರದ, ಸಹಜ ಜೀವನೋತ್ಸಾಹದ ಗುಂಗಿನಲ್ಲಿ ಎಲ್ಲವೂ ಆಪ್ತವೆನಿಸಿ ಚಿತ್ತಭಿತ್ತಿಯಲ್ಲಿ ಅಚ್ಚಳಿಯದಂತೆ ಉಳಿದುಬಿಡುವುದೇ ಇದಕ್ಕೆ ಕಾರಣ. ಮುಂದೆ ಯಾವಾಗಲಾದರೂ ಮತ್ತೆ ನೆನಪಿನ ತಿಜೋರಿಯ ಕೀಲಿಕೈ ತಿರುವಿದಾಗ ನೆನಪುಗಳು ಇಂಪಾದ ಜೋಗುಳ ಹಾಡಿ, ನಮ್ಮನ್ನು ಮತ್ತೆ ಆ ಮುಗ್ಧತೆಯ ಮಡಿಲಲ್ಲಿ ಮಲಗಿಸುತ್ತವೆ. ಆ ಬೆಚ್ಚನೆಯ ಭಾವದ ತಂತು ಮನಸ್ಸಿನ ಮೂಲೆಯಲ್ಲಿ ನಿದ್ರಿಸುವ ಭಾವನೆಗಳ ಬಡಿದೆಬ್ಬಿಸುತ್ತದೆ. ನಾವು ನಾಸ್ಟಾಲ್ಜಿಯಾದಲ್ಲಿ ಕಳೆದು ಹೋಗುತ್ತೇವೆ. 

ನೆನಪುಗಳೆಂದ ಮೇಲೆ ಸಿಹಿಯ ಜೊತೆಗೆ ಕಹಿಯೂ ಇರುವುದು ಸಹಜ. ಆದರೆ, ಸಿಹಿ ನೆನಪುಗಳು ಕಾಡಿದಷ್ಟು ತೀವ್ರವಾಗಿ ಕಹಿನೆನಪುಗಳು ನಮ್ಮನ್ನು ತಟ್ಟುವುದಿಲ್ಲ, ಕಾಡುವುದಿಲ್ಲ. ಕಾರಣ, ಕಹಿನೆನಪುಗಳು ಚರಿತ್ರೆಯ ಭಾಗವಾಗಿರುತ್ತವೆ ಅಥವಾ ಕಾಲದ ಜರಡಿ ಯೊಳಗೆ ಹಾದು ಬಂದ ಬದುಕಿನ ಪ್ರಬುದ್ಧತೆ ಯಿಂದಾಗಿ, ಹಿಂದೊಮ್ಮೆ ಕಹಿ ಅನಿಸಿದ ಘಟನೆಗಳೇ ಪ್ರಸ್ತುತದಲ್ಲಿ ಸಿಲ್ಲಿ ಅನ್ನಿಸಬಹುದು. ಈ ಕಾರಣದಿಂದಲೇ ಅಂಥ ನೆನಪುಗಳು ತೀವ್ರತೆಯನ್ನು ಕಳೆದು ಕೊಂಡು ಬರೀ ಒಂದು ಮುಗುಳ್ನಗು ಮೂಡಿಸಿ ಮನಸ್ಸಿನಿಂದ ಮರೆಯಾಗಿಬಿಡುತ್ತವೆ. ಆದರೆ ಸವಿನೆನಪುಗಳು ಹಾಗಲ್ಲ. ಮಳೆ ನಿಂತ ಮೇಲೂ ಉದುರುವ ಹನಿಯಂತೆ ಮತ್ತೆ ಮತ್ತೆ ನಮ್ಮನ್ನು ಮುತ್ತಿಕ್ಕಿ ನವಚೈತನ್ಯ ತುಂಬುತ್ತವೆ ಅದಕ್ಕೇ ಹೇಳಿರೋದು… ಸವಿನೆನಪುಗಳು ಬೇಕು… ಸವಿಯಲೀ ಬದುಕು

ಹೊರಗೆ ಹುಚ್ಚು ಹಿಡಿದಂತೆ ಮಳೆ ಸುರಿದಿದ್ದು ಹೌದಾದರೂ..ತಂಪಾಗಿದ್ದು ಒಳಗೆ ರಸಧಾರೆಯಲಿ ಮಿಂದ ಮನಸು. ದೃಶ್ಯಕಾವ್ಯ ಅನ್ನೋ ಪದದ ನಿಜವಾದ ಅರ್ಥ ನನಗಾಗಿದ್ದೇ ಆವತ್ತು – ಆ ಹೊತ್ತು. ಸರಿಸುಮಾರು ಎರಡು ಘಂಟೆಗಳ ಕಾಲ ಮನಸ್ಸು ತುಂಬಿ ಬಂದು ಮೂಕವಾಯ್ತು. ಯುಗವೊಂದು ಕ್ಷಣವಾದಂತೆ ಹೊತ್ತು ಜಾರಿಯೇ ಹೋಯ್ತು. ಹೊರಗೆ ಬಂದರೆ ಮಳೆ ನಿಂತ ಮೇಲಿನ ಮರದ ಹನಿ ಸೋಕಿ ಮೈ ಪುಳಕ – ಮನಸಿನ ತುಂಬೆಲ್ಲಾ ಮುಗಿದೇ ಹೋದ ಆ ಕ್ಷಣಗಳ ನೆನಪಿನ ಪಲುಕು-ಮೆಲುಕು. ಹೌದು.. ಮೊನ್ನೆ ಶನಿವಾರ (15 ಮಾರ್ಚ್) ಸಂಜೆ ರಂಗಶಂಕರದಲ್ಲಿ ಕಂಡ ನಾಟಕವೇ ಮೂಕಜ್ಜಿಯ ಕನಸುಗಳು‘…

 ರಾಜಾರಾಂ ನಿರ್ದೇನಿರ್ದೆಶನದಲ್ಲಿ ಕಲಾಗಂಗೋತ್ರಿ ತಂಡದವರ ಮೂಲಕ ಮನಸ್ಸನ್ನು ತಟ್ಟಿ-ಮುಟ್ಟಿ, ಎಲ್ಲರನ್ನೂ ಯಾವುದೋ ಲೋಕಕ್ಕೆ ಕರೆದೊಯ್ದಳು ಈ  ಮೂಕಜ್ಜಿ. ಜ್ಞಾನಪೀಠ ಪುರಸ್ಕೃತ ಕೃತಿಯಾದ ಕಾರಂತರ ಮೂಕಜ್ಜಿಯ ಕನಸುಗಳುರಂಗರೂಪಕ್ಕೆ ಒಗ್ಗುತ್ತದಾ ಎನ್ನುವ ಕುರಿತು ಅಲ್ಲಿದ್ದವರಲ್ಲಿ ಯಾರಿಗಾದರೂ ಶಂಕೆಯಿದ್ದಿದ್ದಲ್ಲಿ ಅದು ಆವತ್ತು ಪರಿಹಾರವಾಗಿರಬೇಕು. ಅಷ್ಟು ಕ್ಲಿಷ್ಟಕರವಾದ ವಿಷಯವನ್ನು ಎಷ್ಟು ಸರಳವಾಗಿ, ಸರಾಗವಾಗಿ ನವಿರಾದ ಹಾಸ್ಯದೊಂದಿಗೆ ಮನಮುಟ್ಟಿಸುವಲ್ಲಿ ನಿರ್ದೇಶಕರ ಹಾಗು ಕಲಾವಿದರ ಶ್ರಮ ನಿಜಕ್ಕೂ ಸಾರ್ಥಕ. ಆ ರಂಗವೈಭವಕ್ಕೆ ತಮ್ಮ ಪಾಲಿನ ದೇಣಿಗೆಯನ್ನು ಸಮರ್ಥವಾಗಿ ಸಲ್ಲಿಸಿದ ಹಿರಿಮೆ – ಮಂದ್ರಸ್ಥಾಯಿಯ ಸಂಗೀತದ ಸುಧೆ, ಅದಕ್ಕೆ ಸರಿಮಿಗಿಲೆನಿಸುವ ರಂಗಸಜ್ಜಿಕೆ ಮತ್ತು ಬೆಳಕಿನ ಚಿತ್ತಾರಕ್ಕೆ ಸಲ್ಲಬೇಕು.  

ಇಡೀ ನಾಟಕದ ಕೇಂದ್ರಸ್ಥಾನದಲ್ಲಿರುವ ಪಾತ್ರಗಳು ಮೂಕಜ್ಜಿ ಮತ್ತು ಸುಬ್ರಾಯ ಮಾಣಿಯೇ ಆದರೂ ಸೀತೆ, ರಾಮಯ್ಯ, ನಾಗಿ, ಮಂಜುನಾಥ, ಅನಂತಯ್ಯ, ನಾಣಿ…ಹೀಗೆ ಕಥಾ ಹಂದರದ ಸುತ್ತಮುತ್ತ ಅನೇಕ ಪಾತ್ರಗಳು ಸುತ್ತುತ್ತವೆ. ಕೋಟ ಕುಂದಾಪುರದ ಕಡೆಯ ಕುಂದಗನ್ನಡದ ಸವಿಗೆ ಕಲಶವಿಟ್ಟಂತೆ ಇರುವ ಕಾರಂತರ ವಿಶಿಷ್ಟವಾದ ಸಂಭಾಷಣಾ ವಾಕ್ಯಗಳ ಹದ ಎಲ್ಲರ ಬಾಯಲ್ಲ್ಲೂ ಸುರಳೀತ ಸಹಜವಾಗಿ ಹೊರಹೊಮ್ಮಿದ್ದು ಪ್ರದರ್ಶನದ ಹೆಗ್ಗಳಿಕೆ. ನಾಟಕ ನೋಡುತ್ತಿರುವಾಗ ಇದೊಂದು ಪ್ರದರ್ಶನ ಎನ್ನಿಸದೆ, ನಮ್ಮ ಮುಂದೆಯೇ ನಡೆಯುತ್ತಿರುವ ಸಹಜ ಘಟನೆಯೋ ಅನ್ನಿಸುವಂತೆ ನಮ್ಮನ್ನು ಅವರ ಲೋಕಕ್ಕೆ ಕರೆದೊಯ್ಯುವಲ್ಲಿ ರಾಜಾರಾಂ ಅವರ ಶ್ರಮ, ಕಲಾವಿದರ ಪರಿಶ್ರಮ ಎದ್ದು ತೋರುತ್ತದೆ. ವಾಜಿಮಿ‘, ‘ಜಂಬರಇಂತಹ ಅಪರೂಪದ ಶಬ್ಧಗಳನ್ನು ಯಥಾವತ್ತಾಗಿ ಸಹಜ ಸಂಭಾಷಣೆಯಲ್ಲಿ ಬಳಸಿದ್ದು, ಮೂಕಜ್ಜಿಯ ಕನಸಿನಲ್ಲೆಂಬಂತೆ ಮೂಡುವ ದೃಶ್ಯಗಳನ್ನು ರಂಗದ ಹಿಂಭಾಗದಲ್ಲಿ ಆಕರ್ಷಕ ಬೆಳಕು-ವಿನ್ಯಾಸಗಳ ಮಿಳಿತದೊಂದಿಗೆ ಮೂಡಿಸಿದ್ದು, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ತನ್ನ ಚುರುಕು ಮಾತು, ಉತ್ಕೃಷ್ಟ ಅಭಿನಯ ಮತ್ತು ನವಿರು ಹಾಸ್ಯದಿಂದ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ ರಾಜೇಂದ್ರ ಕಾರಂತ್ ಎಂಬ ದೈತ್ಯ ಪ್ರತಿಭೆ..ಪ್ರದರ್ಶನದ ಹೈಲೈಟ್ಸ್. ಮೂಕಜ್ಜಿಯ ಪಾತ್ರದ ಸವಾಲನ್ನು ಶೈಲ ಅವರು ನಿಭಾಯಿಸಿದ ರೀತಿ, ಸೀತೆಯ ಪಾತ್ರಧಾರಿ ವಿದ್ಯಾರ ಲವಲವಿಕೆ, ಗಂಡ ಸುಬ್ರಾಯನೊಂದಿಗೆ ಸರಸ-ಜಗಳ, ರಾಮಯ್ಯ-ನಾಗಿ ಇವರ ಪಾತ್ರದ ಅಚ್ಚುಕಟ್ಟು..ಹೀಗೆ ಒಂದಕ್ಕಿಂತ ಒಂದು ಮಿಗಿಲೆನ್ನಿಸುತ್ತದೆ. ಪ್ರತೀ ದೃಶ್ಯ-ಮಾತು-ಅಭಿನಯಗಳಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದ ಪ್ರೇಕ್ಷಕರ ಉತ್ಸಾಹಕ್ಕಿಂತ ಬೇರೆ ಸಾಕ್ಷಿ ಬೇಕೆ 

ಮನುಷ್ಯ ಉಳಿದು-ಅಳಿದು-ಬೆಳೆದು ಬಂದ ಕಥನ, ಅವನು ನಂಬಿದ ದೇವರು – ದೇವರ ಅಸ್ತಿತ್ವ ಹಾಗು ಅದರ ಸುತ್ತ ಹಬ್ಬಿರುವ ವೇದಾಂತ-ದೃಷ್ಟಾಂತ, ಕಾಲಚಕ್ರದ ಉರುಳುವಿಕೆಯೊಂದಿಗೆ ಅಳಿದ-ಬದಲಾದ ಸಂಪ್ರದಾಯ, ಆಚರಣೆ, ನಂಬಿಕೆ..ಈ ರೀತಿ ಎಲ್ಲದರ ಕುರಿತೂ ಮೂಕಜ್ಜಿಗೆ ಜಿಜ್ಞಾಸೆ. ಮೂಕಜ್ಜಿಯ ಬಾಯಿಂದ ಹೊರಬೀಳುವ ಅನುಭವದ ಮಾತುಗಳೆಲ್ಲಾ ವಾಸ್ತವವಾಗಿ ಕಾರಂತರ ಮನದ ಅಂತರ್ಮಥನದ ಮಾತುಗಳೇ ಅನ್ನಿಸುತ್ತವೆ. ಎಲ್ಲವನ್ನೂ ನಿರ್ಲಿಪ್ತತೆಯಿಂದ, ವಿವೇಚನೆಯಿಂದ ಅನುಭವದ ಮೂಸೆಯಲ್ಲಿ ಪುಟವಿಟ್ಟು ಪರೀಕ್ಷಿಸಿ, ಸಂಕೀರ್ಣ ಸತ್ಯ, ಸೂತ್ರ, ತತ್ವಗಳನ್ನು ಸರಳೀಕರಿಸಿ ಹೇಳುವ ಪರಿ ಅನನ್ಯ. ಹೀಗೂ ಒಂದು ಚಿಂತನೆ- ಯೋಚನಾಕ್ರಮ ಇರಬಹುದಲ್ಲ ಎಂದು ಎಲ್ಲರೂ ಒಂದರೆಘಳಿಗೆಯಾದರೂ ಯೋಚಿಸುವಂತೆ ಮಾಡಬಲ್ಲುದು-ಕಾರಂತರ ಬರಹದ ತಾರ್ಕಿಕತೆಯ ತಾಕತ್ತು. ಅದನ್ನು ದೃಶ್ಯೀಕರಿಸಿದ ರಾಜಾರಾಂ ಮತ್ತು ಕಲಾಗಂಗೋತ್ರಿ ನಟನಾವರ್ಗದ ಸಾಮರ್ಥ್ಯಕ್ಕೆ ಮೆಚ್ಚಿ ತಲೆಬಾಗಲೇಬೇಕು.  ಬಸ್ರೀಕಟ್ಟೆ ಬೂದಿಕಟ್ಟೆಯ ನಡುವಿನ ಬಾಳ್ ಕಟ್ಟೆ ಈ ಬದುಕುಎಂಬ ತತ್ವ ಇಡೀ ಜೀವನದ ಸಾರವನ್ನೇ ಹೇಳುತ್ತದೆ. ದುಷ್ಟಶಿಕ್ಷಣವೇ ಅವತಾರಗಳ ಗುರಿಯಾದರೆ, ಸರ್ವಶಕ್ತನಾದವನಿಗೆ ಈ ಬೃಹನ್ನಾಟಕದ ಗೊಡವೆ ಏಕೆ ಬೇಕು ಎಂಬ ಮೂಕಿಯ ಪ್ರಶ್ನೆ ಚಿಂತನೆಗೆ ದೂಡುತ್ತದೆ. 

ಮನಸ್ಸು ಸ್ಥಿಮಿತದಲ್ಲಿಲ್ಲದಂತೆ ಬೇರೆಯವರಿಗೆ ಕಾಣಿಸುವ ªಮೂಕಜ್ಜಿ ಸುಬ್ರಾಯನ ಜೊತೆ ಮಾತನ್ನಾಡುವಾಗ ಅವಧೂತಳಂತೆ ಕಾಣಿಸುತ್ತಾಳೆ. ಲೋಕದ ರೀತಿಗಿಂತ ಭಿನ್ನವಾಗಿ ಚಿಂತಿಸುವ ಮೂಕಿಯ ಮನದಾಳದ ಮಾತುಗಳು, ಸ್ತ್ರೀ ದಿಟ್ಟತನದ ಪ್ರತೀಕವೋ ಎಂಬಂತೆ ಕೆಚ್ಚಿನಿಂದಲೇ ಬದುಕುವ ನಾಗಿ, ಪ್ರಕೃತಿಯ ಎದುರು ಕುಬ್ಜವೆನಿಸುವ ಮಂಜುನಾಥನ ಅಹಂಕಾರ, ಅನಂತಯ್ಯನ ಆಷಾಡಭೂತಿ ಸೋಗು… ಈ ಎಲ್ಲದರ ಹಿಂದಿರುವ ಕಾದಂಬರಿಯ ಆಶಯಕ್ಕೆ ತಕ್ಕಂತೆ ಪಾತ್ರಗಳಾಗಿ ಪಡಿಮೂಡಿ ನಮ್ಮನ್ನು ಮೆಲ್ಲನೆ ತಾಕುತ್ತವೆ; ಹೊರ ಬಂದ ಮೇಲೂ ಎಡತಾಕುತ್ತವೆ.  

ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನವನ್ನು ತೋರಿಸುವ ಏಕಮಾತ್ರ ಕಾರಣಕ್ಕೆ ತುರುಕಿದಂತೆ ಭಾಸವಾಗುವ ಭೀಷ್ಮ ಮತ್ತು ಅಂಬೆಯರ ದೃಶ್ಯ ಚೆನ್ನಾಗಿದ್ದರೂ ಕೂಡಾ ಕತೆಯ ಹರಿವು ಮತ್ತು ಭಾವಕ್ಕೆ ಇದು ಅಗತ್ಯವಿತ್ತೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಮಿಕ್ಕಂತೆ ಯಾರೂ ಬೆರಳೆತ್ತಿ ತೋರಿಸುವಂತಹ ಒಂದೇ ಒಂದು ಲೋಪವೂ ಇರದೆ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಅದ್ಭುತವಾಗಿ ಮೂಡಿಬಂದಿತ್ತು. ನಮ್ಮನ್ನು ಬೇರೆಯದೇ ಒಂದು ಲೋಕದಲ್ಲಿ ಸುತ್ತಾಡಿಸಿದಂತಹ ಮೂಕಜ್ಜಿಯ ಕನಸುಗಳುನೋಡಿ ಹೊರಬಂದಾಗ ಯಾವುದೋ ದಿವ್ಯ ಕನಸೊಂದು ನನಸಾದ ಅನುಭೂತಿ ಬಹುತೇಕರನ್ನು ಕಾಡಿದ್ದು, ನಾಟಕದ ಯಶಸ್ಸಿಗೆ ಹಿಡಿದ ಕನ್ನಡಿ. ರಾಜೇಂದ್ರ ಕಾರಂತರ ಪಾತ್ರ ಪರಿಚಯ ಮಾಡುವಾಗ ನಿರಂತರ 3 ನಿಮಿಷಗಳ ಕಾಲ ಅನುರಣಿಸಿದ ಚಪ್ಪಾಳೆಯ ಸದ್ದು- ಯಾವ ಪ್ರಶಸ್ತಿಗೂ ಕಡಿಮೆಯಲ್ಲ ಅಂತ ನನ್ನ ಭಾವನೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಸ್ವತಃ ಕಾರಂತರೇ ಒಂದು ವೇಳೆ ಪ್ರದರ್ಶನಕ್ಕೆ ಬಂದಿದ್ದರೂ ಆನಂದದ ಒಂದೆರಡು ಹನಿ ಅವರ ಕಣ್ಣಿಂದ ಖಂಡಿತವಾಗಿಯೂ ಹೊರಬರುತ್ತಿತ್ತು. ಇದಕ್ಕಿಂತ ಬೇರಿನ್ನೇನು ಬೇಕು ಒಂದು ಪ್ರದರ್ಶನ ಸಾರ್ಥಕ- ಯಶಸ್ವಿ ಅನ್ನಿಸಿಕೊಳ್ಳಲು..ಅಲ್ವೇ