ಹೊರಗೆ ಹುಚ್ಚು ಹಿಡಿದಂತೆ ಮಳೆ ಸುರಿದಿದ್ದು ಹೌದಾದರೂ..ತಂಪಾಗಿದ್ದು ಒಳಗೆ ರಸಧಾರೆಯಲಿ ಮಿಂದ ಮನಸು. ದೃಶ್ಯಕಾವ್ಯ ಅನ್ನೋ ಪದದ ನಿಜವಾದ ಅರ್ಥ ನನಗಾಗಿದ್ದೇ ಆವತ್ತು – ಆ ಹೊತ್ತು. ಸರಿಸುಮಾರು ಎರಡು ಘಂಟೆಗಳ ಕಾಲ ಮನಸ್ಸು ತುಂಬಿ ಬಂದು ಮೂಕವಾಯ್ತು. ಯುಗವೊಂದು ಕ್ಷಣವಾದಂತೆ ಹೊತ್ತು ಜಾರಿಯೇ ಹೋಯ್ತು. ಹೊರಗೆ ಬಂದರೆ ಮಳೆ ನಿಂತ ಮೇಲಿನ ಮರದ ಹನಿ ಸೋಕಿ ಮೈ ಪುಳಕ – ಮನಸಿನ ತುಂಬೆಲ್ಲಾ ಮುಗಿದೇ ಹೋದ ಆ ಕ್ಷಣಗಳ ನೆನಪಿನ ಪಲುಕು-ಮೆಲುಕು. ಹೌದು.. ಮೊನ್ನೆ ಶನಿವಾರ (15 ಮಾರ್ಚ್) ಸಂಜೆ ರಂಗಶಂಕರದಲ್ಲಿ ಕಂಡ ನಾಟಕವೇ ಮೂಕಜ್ಜಿಯ ಕನಸುಗಳು‘…

 ರಾಜಾರಾಂ ನಿರ್ದೇನಿರ್ದೆಶನದಲ್ಲಿ ಕಲಾಗಂಗೋತ್ರಿ ತಂಡದವರ ಮೂಲಕ ಮನಸ್ಸನ್ನು ತಟ್ಟಿ-ಮುಟ್ಟಿ, ಎಲ್ಲರನ್ನೂ ಯಾವುದೋ ಲೋಕಕ್ಕೆ ಕರೆದೊಯ್ದಳು ಈ  ಮೂಕಜ್ಜಿ. ಜ್ಞಾನಪೀಠ ಪುರಸ್ಕೃತ ಕೃತಿಯಾದ ಕಾರಂತರ ಮೂಕಜ್ಜಿಯ ಕನಸುಗಳುರಂಗರೂಪಕ್ಕೆ ಒಗ್ಗುತ್ತದಾ ಎನ್ನುವ ಕುರಿತು ಅಲ್ಲಿದ್ದವರಲ್ಲಿ ಯಾರಿಗಾದರೂ ಶಂಕೆಯಿದ್ದಿದ್ದಲ್ಲಿ ಅದು ಆವತ್ತು ಪರಿಹಾರವಾಗಿರಬೇಕು. ಅಷ್ಟು ಕ್ಲಿಷ್ಟಕರವಾದ ವಿಷಯವನ್ನು ಎಷ್ಟು ಸರಳವಾಗಿ, ಸರಾಗವಾಗಿ ನವಿರಾದ ಹಾಸ್ಯದೊಂದಿಗೆ ಮನಮುಟ್ಟಿಸುವಲ್ಲಿ ನಿರ್ದೇಶಕರ ಹಾಗು ಕಲಾವಿದರ ಶ್ರಮ ನಿಜಕ್ಕೂ ಸಾರ್ಥಕ. ಆ ರಂಗವೈಭವಕ್ಕೆ ತಮ್ಮ ಪಾಲಿನ ದೇಣಿಗೆಯನ್ನು ಸಮರ್ಥವಾಗಿ ಸಲ್ಲಿಸಿದ ಹಿರಿಮೆ – ಮಂದ್ರಸ್ಥಾಯಿಯ ಸಂಗೀತದ ಸುಧೆ, ಅದಕ್ಕೆ ಸರಿಮಿಗಿಲೆನಿಸುವ ರಂಗಸಜ್ಜಿಕೆ ಮತ್ತು ಬೆಳಕಿನ ಚಿತ್ತಾರಕ್ಕೆ ಸಲ್ಲಬೇಕು.  

ಇಡೀ ನಾಟಕದ ಕೇಂದ್ರಸ್ಥಾನದಲ್ಲಿರುವ ಪಾತ್ರಗಳು ಮೂಕಜ್ಜಿ ಮತ್ತು ಸುಬ್ರಾಯ ಮಾಣಿಯೇ ಆದರೂ ಸೀತೆ, ರಾಮಯ್ಯ, ನಾಗಿ, ಮಂಜುನಾಥ, ಅನಂತಯ್ಯ, ನಾಣಿ…ಹೀಗೆ ಕಥಾ ಹಂದರದ ಸುತ್ತಮುತ್ತ ಅನೇಕ ಪಾತ್ರಗಳು ಸುತ್ತುತ್ತವೆ. ಕೋಟ ಕುಂದಾಪುರದ ಕಡೆಯ ಕುಂದಗನ್ನಡದ ಸವಿಗೆ ಕಲಶವಿಟ್ಟಂತೆ ಇರುವ ಕಾರಂತರ ವಿಶಿಷ್ಟವಾದ ಸಂಭಾಷಣಾ ವಾಕ್ಯಗಳ ಹದ ಎಲ್ಲರ ಬಾಯಲ್ಲ್ಲೂ ಸುರಳೀತ ಸಹಜವಾಗಿ ಹೊರಹೊಮ್ಮಿದ್ದು ಪ್ರದರ್ಶನದ ಹೆಗ್ಗಳಿಕೆ. ನಾಟಕ ನೋಡುತ್ತಿರುವಾಗ ಇದೊಂದು ಪ್ರದರ್ಶನ ಎನ್ನಿಸದೆ, ನಮ್ಮ ಮುಂದೆಯೇ ನಡೆಯುತ್ತಿರುವ ಸಹಜ ಘಟನೆಯೋ ಅನ್ನಿಸುವಂತೆ ನಮ್ಮನ್ನು ಅವರ ಲೋಕಕ್ಕೆ ಕರೆದೊಯ್ಯುವಲ್ಲಿ ರಾಜಾರಾಂ ಅವರ ಶ್ರಮ, ಕಲಾವಿದರ ಪರಿಶ್ರಮ ಎದ್ದು ತೋರುತ್ತದೆ. ವಾಜಿಮಿ‘, ‘ಜಂಬರಇಂತಹ ಅಪರೂಪದ ಶಬ್ಧಗಳನ್ನು ಯಥಾವತ್ತಾಗಿ ಸಹಜ ಸಂಭಾಷಣೆಯಲ್ಲಿ ಬಳಸಿದ್ದು, ಮೂಕಜ್ಜಿಯ ಕನಸಿನಲ್ಲೆಂಬಂತೆ ಮೂಡುವ ದೃಶ್ಯಗಳನ್ನು ರಂಗದ ಹಿಂಭಾಗದಲ್ಲಿ ಆಕರ್ಷಕ ಬೆಳಕು-ವಿನ್ಯಾಸಗಳ ಮಿಳಿತದೊಂದಿಗೆ ಮೂಡಿಸಿದ್ದು, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ತನ್ನ ಚುರುಕು ಮಾತು, ಉತ್ಕೃಷ್ಟ ಅಭಿನಯ ಮತ್ತು ನವಿರು ಹಾಸ್ಯದಿಂದ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ ರಾಜೇಂದ್ರ ಕಾರಂತ್ ಎಂಬ ದೈತ್ಯ ಪ್ರತಿಭೆ..ಪ್ರದರ್ಶನದ ಹೈಲೈಟ್ಸ್. ಮೂಕಜ್ಜಿಯ ಪಾತ್ರದ ಸವಾಲನ್ನು ಶೈಲ ಅವರು ನಿಭಾಯಿಸಿದ ರೀತಿ, ಸೀತೆಯ ಪಾತ್ರಧಾರಿ ವಿದ್ಯಾರ ಲವಲವಿಕೆ, ಗಂಡ ಸುಬ್ರಾಯನೊಂದಿಗೆ ಸರಸ-ಜಗಳ, ರಾಮಯ್ಯ-ನಾಗಿ ಇವರ ಪಾತ್ರದ ಅಚ್ಚುಕಟ್ಟು..ಹೀಗೆ ಒಂದಕ್ಕಿಂತ ಒಂದು ಮಿಗಿಲೆನ್ನಿಸುತ್ತದೆ. ಪ್ರತೀ ದೃಶ್ಯ-ಮಾತು-ಅಭಿನಯಗಳಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದ ಪ್ರೇಕ್ಷಕರ ಉತ್ಸಾಹಕ್ಕಿಂತ ಬೇರೆ ಸಾಕ್ಷಿ ಬೇಕೆ 

ಮನುಷ್ಯ ಉಳಿದು-ಅಳಿದು-ಬೆಳೆದು ಬಂದ ಕಥನ, ಅವನು ನಂಬಿದ ದೇವರು – ದೇವರ ಅಸ್ತಿತ್ವ ಹಾಗು ಅದರ ಸುತ್ತ ಹಬ್ಬಿರುವ ವೇದಾಂತ-ದೃಷ್ಟಾಂತ, ಕಾಲಚಕ್ರದ ಉರುಳುವಿಕೆಯೊಂದಿಗೆ ಅಳಿದ-ಬದಲಾದ ಸಂಪ್ರದಾಯ, ಆಚರಣೆ, ನಂಬಿಕೆ..ಈ ರೀತಿ ಎಲ್ಲದರ ಕುರಿತೂ ಮೂಕಜ್ಜಿಗೆ ಜಿಜ್ಞಾಸೆ. ಮೂಕಜ್ಜಿಯ ಬಾಯಿಂದ ಹೊರಬೀಳುವ ಅನುಭವದ ಮಾತುಗಳೆಲ್ಲಾ ವಾಸ್ತವವಾಗಿ ಕಾರಂತರ ಮನದ ಅಂತರ್ಮಥನದ ಮಾತುಗಳೇ ಅನ್ನಿಸುತ್ತವೆ. ಎಲ್ಲವನ್ನೂ ನಿರ್ಲಿಪ್ತತೆಯಿಂದ, ವಿವೇಚನೆಯಿಂದ ಅನುಭವದ ಮೂಸೆಯಲ್ಲಿ ಪುಟವಿಟ್ಟು ಪರೀಕ್ಷಿಸಿ, ಸಂಕೀರ್ಣ ಸತ್ಯ, ಸೂತ್ರ, ತತ್ವಗಳನ್ನು ಸರಳೀಕರಿಸಿ ಹೇಳುವ ಪರಿ ಅನನ್ಯ. ಹೀಗೂ ಒಂದು ಚಿಂತನೆ- ಯೋಚನಾಕ್ರಮ ಇರಬಹುದಲ್ಲ ಎಂದು ಎಲ್ಲರೂ ಒಂದರೆಘಳಿಗೆಯಾದರೂ ಯೋಚಿಸುವಂತೆ ಮಾಡಬಲ್ಲುದು-ಕಾರಂತರ ಬರಹದ ತಾರ್ಕಿಕತೆಯ ತಾಕತ್ತು. ಅದನ್ನು ದೃಶ್ಯೀಕರಿಸಿದ ರಾಜಾರಾಂ ಮತ್ತು ಕಲಾಗಂಗೋತ್ರಿ ನಟನಾವರ್ಗದ ಸಾಮರ್ಥ್ಯಕ್ಕೆ ಮೆಚ್ಚಿ ತಲೆಬಾಗಲೇಬೇಕು.  ಬಸ್ರೀಕಟ್ಟೆ ಬೂದಿಕಟ್ಟೆಯ ನಡುವಿನ ಬಾಳ್ ಕಟ್ಟೆ ಈ ಬದುಕುಎಂಬ ತತ್ವ ಇಡೀ ಜೀವನದ ಸಾರವನ್ನೇ ಹೇಳುತ್ತದೆ. ದುಷ್ಟಶಿಕ್ಷಣವೇ ಅವತಾರಗಳ ಗುರಿಯಾದರೆ, ಸರ್ವಶಕ್ತನಾದವನಿಗೆ ಈ ಬೃಹನ್ನಾಟಕದ ಗೊಡವೆ ಏಕೆ ಬೇಕು ಎಂಬ ಮೂಕಿಯ ಪ್ರಶ್ನೆ ಚಿಂತನೆಗೆ ದೂಡುತ್ತದೆ. 

ಮನಸ್ಸು ಸ್ಥಿಮಿತದಲ್ಲಿಲ್ಲದಂತೆ ಬೇರೆಯವರಿಗೆ ಕಾಣಿಸುವ ªಮೂಕಜ್ಜಿ ಸುಬ್ರಾಯನ ಜೊತೆ ಮಾತನ್ನಾಡುವಾಗ ಅವಧೂತಳಂತೆ ಕಾಣಿಸುತ್ತಾಳೆ. ಲೋಕದ ರೀತಿಗಿಂತ ಭಿನ್ನವಾಗಿ ಚಿಂತಿಸುವ ಮೂಕಿಯ ಮನದಾಳದ ಮಾತುಗಳು, ಸ್ತ್ರೀ ದಿಟ್ಟತನದ ಪ್ರತೀಕವೋ ಎಂಬಂತೆ ಕೆಚ್ಚಿನಿಂದಲೇ ಬದುಕುವ ನಾಗಿ, ಪ್ರಕೃತಿಯ ಎದುರು ಕುಬ್ಜವೆನಿಸುವ ಮಂಜುನಾಥನ ಅಹಂಕಾರ, ಅನಂತಯ್ಯನ ಆಷಾಡಭೂತಿ ಸೋಗು… ಈ ಎಲ್ಲದರ ಹಿಂದಿರುವ ಕಾದಂಬರಿಯ ಆಶಯಕ್ಕೆ ತಕ್ಕಂತೆ ಪಾತ್ರಗಳಾಗಿ ಪಡಿಮೂಡಿ ನಮ್ಮನ್ನು ಮೆಲ್ಲನೆ ತಾಕುತ್ತವೆ; ಹೊರ ಬಂದ ಮೇಲೂ ಎಡತಾಕುತ್ತವೆ.  

ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನವನ್ನು ತೋರಿಸುವ ಏಕಮಾತ್ರ ಕಾರಣಕ್ಕೆ ತುರುಕಿದಂತೆ ಭಾಸವಾಗುವ ಭೀಷ್ಮ ಮತ್ತು ಅಂಬೆಯರ ದೃಶ್ಯ ಚೆನ್ನಾಗಿದ್ದರೂ ಕೂಡಾ ಕತೆಯ ಹರಿವು ಮತ್ತು ಭಾವಕ್ಕೆ ಇದು ಅಗತ್ಯವಿತ್ತೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಮಿಕ್ಕಂತೆ ಯಾರೂ ಬೆರಳೆತ್ತಿ ತೋರಿಸುವಂತಹ ಒಂದೇ ಒಂದು ಲೋಪವೂ ಇರದೆ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಅದ್ಭುತವಾಗಿ ಮೂಡಿಬಂದಿತ್ತು. ನಮ್ಮನ್ನು ಬೇರೆಯದೇ ಒಂದು ಲೋಕದಲ್ಲಿ ಸುತ್ತಾಡಿಸಿದಂತಹ ಮೂಕಜ್ಜಿಯ ಕನಸುಗಳುನೋಡಿ ಹೊರಬಂದಾಗ ಯಾವುದೋ ದಿವ್ಯ ಕನಸೊಂದು ನನಸಾದ ಅನುಭೂತಿ ಬಹುತೇಕರನ್ನು ಕಾಡಿದ್ದು, ನಾಟಕದ ಯಶಸ್ಸಿಗೆ ಹಿಡಿದ ಕನ್ನಡಿ. ರಾಜೇಂದ್ರ ಕಾರಂತರ ಪಾತ್ರ ಪರಿಚಯ ಮಾಡುವಾಗ ನಿರಂತರ 3 ನಿಮಿಷಗಳ ಕಾಲ ಅನುರಣಿಸಿದ ಚಪ್ಪಾಳೆಯ ಸದ್ದು- ಯಾವ ಪ್ರಶಸ್ತಿಗೂ ಕಡಿಮೆಯಲ್ಲ ಅಂತ ನನ್ನ ಭಾವನೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಸ್ವತಃ ಕಾರಂತರೇ ಒಂದು ವೇಳೆ ಪ್ರದರ್ಶನಕ್ಕೆ ಬಂದಿದ್ದರೂ ಆನಂದದ ಒಂದೆರಡು ಹನಿ ಅವರ ಕಣ್ಣಿಂದ ಖಂಡಿತವಾಗಿಯೂ ಹೊರಬರುತ್ತಿತ್ತು. ಇದಕ್ಕಿಂತ ಬೇರಿನ್ನೇನು ಬೇಕು ಒಂದು ಪ್ರದರ್ಶನ ಸಾರ್ಥಕ- ಯಶಸ್ವಿ ಅನ್ನಿಸಿಕೊಳ್ಳಲು..ಅಲ್ವೇ

ಟಿಪ್ಪಣಿಗಳು
 1. thimmappa joladarasi ಹೇಳುತ್ತಾರೆ:

  ಬರವಣಿಗೆ ಬಹಳ ಅದ್ಬುತವಾಗಿ ಮೊಡಿ ಬಂದಿದೆ ಹಾಗು ಪದಗಳ ಬಳಕೆ ಬಹಳ ಚೆನ್ನಾಗಿದೆ

 2. ವಾಣಿ ಶೆಟ್ಟಿ ಹೇಳುತ್ತಾರೆ:

  ಮೂಕಜ್ಜಿ, ಮದುಮಗಳು, ಹೆಗ್ಗಡತಿ ಇದೆಲ್ಲ ನಾನಿನ್ನೂ ಓದಿಯೇ ಇಲ್ಲ..ಓದಬೇಕೆಂದು ಕೊಂಡಿರಲೂ ಇಲ್ಲ..ಬಹುಶಃ ನೀವು ನಾ ಓದುವಂತೆ ಮಾಡ್ತಿರೆನೋ…ಬರೆದ ಶೈಲಿ ಸಕತ್ 🙂

 3. Tejaswini Hegde ಹೇಳುತ್ತಾರೆ:

  Nice write up…ಮೂಕಜ್ಜಿಯ ಕನಸುಗಳು ನನ್ನ ಅಚ್ಚುಮೆಚ್ಚಿನ ಪುಸ್ತಕಗಳಲ್ಲೊಂದು… ಅಗ್ರಸ್ಥಾನದಲ್ಲಿದೆ. ಅಂತೆಯೇ ಕುವೆಂಪು ಅವರ ಮಲೆಯಲ್ಲಿ ಮದುಮಗಳು ಕೂಡ ವಿಶಿಷ್ಟ ಹಾಗೂ ವಿಭಿನ್ನ ಕಾದಂಬರಿ. ಓದಿದಷ್ಟೂ ಹೊಸ ಭಾವಗಳನ್ನು ಸ್ಪೂರಿಸುವ ಇಂತಹ ಪುಸ್ತಕಗಳು ಇತ್ತೀಚಿಗೆ ತೀರಾ ಅಲ್ಪವಾಗುತ್ತಿವೆ.

  • ವಿಜಯರಾಜ್ ಕನ್ನಂತ ಹೇಳುತ್ತಾರೆ:

   ಕಡಿಮೆ ಅಂದ್ರೂ ನಾಲ್ಕ್ ನಾಲ್ಕ್ ಸಲ ಓದಿದ್ದೀನಿ ಮೂಕಜ್ಜಿ, ಮದುಮಗಳು, ಹೆಗ್ಗಡತಿ ಎಲ್ಲ..ಪ್ರತಿ ಬಾರಿ ಓದಿದಾಗಲೂ ಅದೇ ಖುಷಿ ಕೊಟ್ಟಿದೆ…ನಿಮ್ಮ ಓದಿಗೆ..ಪ್ರತಿಕ್ರಿಯೆಗೆ ಧನ್ಯವಾದಗಳು

 4. ವಿಕಾಸ್ ಹೇಳುತ್ತಾರೆ:

  ಓಹ್.. ನಾನೂ ನೋಡಬೇಕಾಯ್ತು ಹಾಗಾದರೆ.

  ಬರೆದದ್ದು ಚೆನ್ನಾಗಿ ಆಗಿದೆ.

  ಥ್ಯಾಂಕ್ಸ್..

 5. pratibha ಹೇಳುತ್ತಾರೆ:

  It is nice&useful

 6. Ravindra Bhat K ಹೇಳುತ್ತಾರೆ:

  ”Kamalashile habba”…Awesome…….Paticularly money collection!!!!!..superb…

 7. ಯೋಗೀಶ ಅಡಿಗ ಹೇಳುತ್ತಾರೆ:

  ಸಕ್ಕತ್ reivew… ಭಾಷಾ ಶೈಲಿ ಮೆಚ್ಚಲೇ ಬೇಕು… ನಾಟಕ ನೊಡಿ ಖುಷಿ ಆಗಿದ್ರೂ ಸಹ reivew ಓದಿದ ಮೇಲೆ ಇನ್ನೊಮ್ಮೆ ನೋಡಿದ ಅನುಭವ ಆದಂತೆ ಆಯ್ತು… ಹ್ವಾ.. ಈ ಶೈಲಿಯನ್ನೇ ಮುಂದಿನ ಬರವಣಿಗೆಯಲ್ಲೂ ನಿರೀಕ್ಷಿಸುತ್ತೇವೆ.

 8. Vijaya Kumar ಹೇಳುತ್ತಾರೆ:

  Very nice review about mookajji kanasugalu.

 9. Jagadish G N ಹೇಳುತ್ತಾರೆ:

  ತುಂಬ ಚೆನ್ನಾಗಿದೆ ವಿಮರ್ಶೆ. ಬರವಣಿಗೆ ಶೈಲಿ ಅದ್ಭುತವಾಗಿ ಮೂಡಿ ಬಂದಿದೆ. ಆ ಕಾದಂಬರಿ ಓದಿರುವ ನಾನು ನೀವು ಹೇಳಿದ ಹಾಗೆ ಶಂಕೆಯಿಟ್ಟುಕೊಂಡೆ ನಾಟಕ ನೋಡಲಿಕ್ಕೆ ಬಂದದ್ದು. ಕೊನೆಯಲ್ಲಿ ಸಂತುಷ್ಟನಾಗಿ ಹೊರಬಂದೆ.

  ರಾಜೇಂದ್ರ ಕಾರಂತರ ಅಭಿನಯ, ಹಾಸ್ಯದ ಟೈಮಿಂಗ್ ಸೂಪರ್ರ್…

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s