Archive for ಏಪ್ರಿಲ್ 1, 2008

ಕಾಲಚಕ್ರವೊಂದು ಸುತ್ತು
ತಿರುಗಿ ಮತ್ತೆ ಕಾದಿದೆ
ಬರಲಿರುವ ಹೊಸ ಹರುಷದ
ಹೊಸ ವರ್ಷ ಯುಗಾದಿಗೆ
ಕೊಳೆಯ ತೊಳೆದು ಕಹಿಯ ಮರೆತು
ಬೆಲ್ಲದ ಸಿಹಿ ಬರಲಿ ಬಾಳಿಗೆ
ನಾಡು ನುಡಿಯ ಪ್ರೀತಿಯ ಜೊತೆಗೆ
ಹಾರೈಸೋಣ ಎಲ್ಲರ ಏಳಿಗೆ
ಅರಳಿ ನಗಲಿ ಸೌರಭ ಸೂಸುತ
ಮೊಗದಲಿ ನಗೆಯ ಕೇದಿಗೆ

ಮತ್ತೆ ಬಂದಿದೆ ಯುಗದ ಆದಿ ಯುಗಾದಿ. ಹೊಸ ವರುಷದ ಹೊಸತೇ ಆದೊಂದು ಹರುಷದ ಭರವಸೆಯ ಹರಿಕಾರನೆಂಬಂತೆ. ಕಾಲಪುರುಷನ ಸಂದೇಶ ಹೊತ್ತ ಪ್ರವರ್ತಕ – ನಾಳೆಗೆಲ್ಲಾ ಬದಲಾದೀತು ಎಂಬ ಆಶಯ ಹೊತ್ತ ಪರಿವರ್ತಕನಂತೆ. ಸೃಷ್ಟಿಯ ನಿರಂತರತೆಯ ಪ್ರತೀಕವಾಗಿ. ಹಬ್ಬಗಳ ಆಚರಣೆಗಳ ಉದ್ಧೇಶವೇ ಅಷ್ಟು. ನಮ್ಮ ದೈನಂದಿನ ಯಾಂತ್ರಿಕ ಬದುಕಿನ ತಿರುಗಣೆಯ ಕೀಲಿನಂತಾದ ದಿನಚರಿಗೆ ಒಂದಷ್ಟು ಪುರುಸೊತ್ತು ಕೊಟ್ಟು, ಹೊಸ ಸಂಭ್ರಮ ಹುರುಪುಗಳ ಕೀಲೆಣ್ಣೆ ಸುರುವಿ, ನವಚೈತನ್ಯದಿಂದ ಮತ್ತೆ ಪುಟಿದೇಳುವಂತೆ ಮಾಡುವುದು. ಕೆಲಸ-ಕಾರ್ಯ, ವ್ಯಾಸಂಗ ಹೀಗೆ ಬೇರೆ ಬೇರೆ ಕಾರಣಗಳಿಂದ ದೂರವಾಗಿರುವ ಬಂಧು-ಬಳಗ, ಸ್ನೇಹಿತರು ಒಟ್ಟಿಗೆ ಸೇರಿ ಖುಷಿಯಾಗಿ ಬಿಡುವಿನ ವೇಳೆ ಕಳೆಯುವಂತೆ-ಕಲೆಯುವಂತೆ ಮಾಡುವುದು. ತನ್ಮೂಲಕ ಸಡಿಲವಾದ ಸಂಬಂಧ – ಸ್ನೇಹ ತಂತುಗಳ ಮತ್ತೆ ಬಿಗಿಯಾಗಿಸಿ, ಮನಸ್ಸಿನ ದುಗುಡ-ಬೇಸರಗಳ ದೂರಾಗಿಸಿ ಮನಸ್ಸು ಆನಂದೋಲ್ಲಾಸದಿಂದ ಇರುವಂತೆ ಮಾಡುವಲ್ಲಿ ಹಬ್ಬ-ಆಚರಣೆಗಳ ಪಾಲು ದೊಡ್ಡದು. ಬದಲಾಗುತ್ತಿರುವ ಜೀವನಶೈಲಿಯ ನಾಗಾಲೋಟದ ಮಧ್ಯೆ, ತಪ್ಪಾಗುತ್ತಿರುವ ಸಂಬಂಧಗಳ ಸಮೀಕರಣಗಳ ನಡುವೆ, ಆರುತ್ತಿರುವ ಆತ್ಮೀಯತೆಯ ಪ್ರಣತಿಗೆ ಎಣ್ಣೆ ಸುರುವಿ, ನಂದದ ದೀಪ ಹಚ್ಚುವ ಶ್ರೇಯಸ್ಸೇನಾದ್ರು ಇದ್ದರೆ ಅದು ಇಂತಹ ಆಚರಣೆಗಳಿಗೆ ಸಂಭ್ರಮಗಳಿಗೆ ಸಲ್ಲಬೇಕು. ಹಬ್ಬಗಳ ಸಾಲಿನಲ್ಲೆಲ್ಲಾ ವಿಶಿಷ್ಟವಾದುದು ಈ ಯುಗಾದಿ. ಹಿಂದೂ ಪುರಾಣದ ಪ್ರಕಾರ ಈ ದಿನ ಬ್ರಹ್ಮ ತನ್ನ ಸೃಷ್ಟಿಕಾರ್ಯ ಆರಂಭಿಸಿದ್ದು. ಚೈತ್ರ ಶುದ್ಧ ಪಾಡ್ಯಮಿಯ ಈ ದಿನವೇ ನೂತನ ವರ್ಷದಾರಂಭ. ಬಾಳಿನಲ್ಲಿ ಕಹಿ-ಸಿಹಿಗಳನ್ನು ಸಮಭಾವದಿಂದ ಸ್ವೀಕರಿಸಬೇಕೆಂಬ ಉನ್ನತ ಆಶಯವನ್ನು ಸಾಂಕೇತಿಕವಾಗಿ ಪ್ರತಿಪಾದಿಸುವ ಬೇವು-ಬೆಲ್ಲ ಮೆಲ್ಲುವ ಅನನ್ಯ ಆಚರಣೆ. ರಂಗು-ರಂಗಿನ ರಂಗೋಲಿ, ಹಸಿರು ತಳಿರು-ತೋರಣಗಳಿಂದ ಮನೆಯನ್ನೆಲ್ಲಾ ಸಿಂಗರಿಸಿ ಹೊಸಬಟ್ಟೆಗಳನ್ನು ಧರಿಸಿ ಸಿಹಿಯಡುಗೆ ಉಂಡು ಸಂಭ್ರಮಿಸುವ ಹಬ್ಬ. ಹಳೆಯ ಕಹಿಯ ಮರೆತು ಹೊಸ ಸ್ನೇಹದ ಹಸ್ತಚಾಚಲು-ಅದರ ಸವಿಯುಣ್ಣಲು ಸಕಾಲ.

ಜಾಗತೀಕರಣದ ಪಾಶ್ಚಾತ್ಯ ಅನುಕರಣೆಯ ಕಬಂಧ ಬಾಹುವಿನ ಅಪ್ಪುಗೆಯಲ್ಲಿ ಮೈಮರೆತು ಸುಖದ ಭ್ರಮೆಯಲ್ಲಿ ಮಾಯಾಜಿಂಕೆಯ ಬೆನ್ನು ಹತ್ತುತ್ತಿರುವ , ಹಳತೆಲ್ಲಾ ನಿರುಪಯೋಗಿ ಎಂದು ತಿರಸ್ಕರಿಸಿ ಕಣ್ಣಿಗೆ ಆಧುನಿಕತೆಯ ಕಪ್ಪುಪಟ್ಟಿ ಕಟ್ಟಿಕೊಂಡು ತಿರುಗಾಡುವ ನಮ್ಮ ನಿಮ್ಮ ನಡುವೆ ಇಂತಹಾ ಆಚರಣೆಗಳು ನಿಧಾನವಾಗಿಯಾದರೂ ಅರ್ಥಕಳೆದುಕೊಳ್ಳುತ್ತಿರುವಂತೆ ಗೋಚರಿಸುತ್ತಿದೆ. ಹಬ್ಬವೆಂದರೆ ಎಲ್ಲರೂ ಒಟ್ಟಾಗುವ ಖುಶಿಗೆ ಬದಲಾಗಿ ಶಾಪಿಂಗ್ ಮಾಲ್‌ಗಳಲ್ಲೋ, ಮಲ್ಟಿಪ್ಲೆಕ್ಸ್ ಥಿಯೇಟರುಗಳ ಅಬ್ಬರದ ನಡುವೆಯೆಲ್ಲೋ ನಾವು ಮುಳುಗಿ ಹೋಗುತ್ತಿದ್ದೇವೆ. ಮನೆಮಂದಿಯೆಲ್ಲಾ ಒಟ್ಟಾಗೋದು ಕೂಡಾ ಇಂದಿನ ನ್ಯುಕ್ಲಿಯರ್ ಕುಟುಂಬಗಳಲ್ಲಿ ದೂರದ ಮಾತೇ ಬಿಡಿ. ಆ ದಿನವೇನಿದ್ರೂ ದಿನನಿತ್ಯದ ಗಡಿಬಿಡಿಯಿಂದ ದೂರ ಉಳಿದು ಆರಾಮವಾಗಿ ಉಪಹಾರ ಮಂದಿರಗಳಿಗೆ ಹೋಗಿ ತಿಂದುಣ್ಣುವ ನಮಗೆಲ್ಲಿ ಗೊತ್ತಾದೀತು ಸಹಭೋಜನದಿ ಹರಟುತ್ತಾ ಉಣ್ಣುವ ಸುಖ ಅಂತೀರಾ?

ಮನೆಯಿಂದ ಉದ್ಯೊಗನಿಮಿತ್ತ ಬಹುದೂರದಲ್ಲಿರುವವರಿಗೆ ಮತ್ತೆ ಹೇಗೆ ಆಚರಿಸೋಕಾಗುತ್ತೆ ಅಂತ ಕೇಳ್ತೀರಾ? ಇದು ನಿಜವೇ ಇರಬಹುದಾದರೂ ಅರ್ಧಸತ್ಯ ಮಾತ್ರ. ಆ ಆಚರಣೆಗಳ ಹಿಂದಿನ ಆಶಯವನ್ನು ನಾವು ಅರಿತೆವಾದರೆ, ನಮ್ಮ ನಮ್ಮ ಅನುಕೂಲಗಳಿಗೆ ಅನುಸಾರವಾಗಿ ಹಬ್ಬಗಳನ್ನು ಸಾರ್ಥಕವಾಗುವಂತೆ ಆಚರಿಸಲು ಸಾಧ್ಯ. ಬಿಡುವಾದರೆ ಊರಿಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾದಲ್ಲಿ ಅದನ್ನು ಖಂಡಿತಾ ಮಾಡಿ. ಈ ಅನುಕೂಲ ಇಲ್ಲದವರು ಒಂದು ವಿಶಿಷ್ಟವಾದ ರೀತಿಯಲ್ಲಿ ಹಬ್ಬದ ಆಶಯವನ್ನು ಸಾರ್ಥಕಗೊಳಿಸಬಹುದು. ಅನಾಥಾಶ್ರಮ, ಅಬಲಾಶ್ರಮ, ವೃದ್ಧಾಶ್ರಮಗಳಂತಹ ಸ್ಥಳಗಳಿಗೆ ಭೇಟಿ ನೀಡಿ ಅವರೊಂದಿಗೆ ಹಬ್ಬ ಆಚರಿಸಿ ನೋಡಿ. ಬೇವಿನಂತಹ ಅವರ ಬಾಳಿನಲ್ಲಿ,ಆ ಹಿರಿ-ಕಿರಿಯ ಮುಖದಲ್ಲಿ ಖುಶಿ ಸಂತೃಪ್ತಿಯ ಬೆಲ್ಲವನ್ನು ಅರೆಗಳಿಗೆಯನ್ನಾದರೂ ಮೂಡಿಸಿದ ಕೃತಾರ್ಥಭಾವ ನಿಮ್ಮನ್ನು ಆವರಿಸಿ ನಿಜ ಅರ್ಥದಲ್ಲಿ ಆಚರಣೆಗಳ ಆಶಯ ಈಡೇರಿದಂತಾಗುತ್ತದೆ. ಯುಗದ ಆದಿಯೊಂದರ ಸ್ವಾಗತ ಇದಕ್ಕಿಂತ ಅರ್ಥಪೂರ್ಣವಾಗಿರಲು ಸಾಧ್ಯವೇ? ಬರಲಿರುವ ಹೊಸ ಸಂವತ್ಸರದಲ್ಲಿ ಎಲ್ಲರ ಬಾಳಿನಲ್ಲೂ ಬೇವಿನ ಕಹಿ ಮರೆಯಾಗಿ ಬೆಲ್ಲದ ಸವಿ ನೆಲೆಸಲಿ ಎಂದು ಹಾರೈಸೋಣವೆ?

 – ವಿಜಯ್ ರಾಜ್ ಕನ್ನಂತ್