ಮತ್ತೆ ನೆನಪಾಯಿತು ಕಮಲಶಿಲೆ ಹಬ್ಬ…

Posted: ಏಪ್ರಿಲ್ 11, 2008 in ಕುಂದಾಪ್ರ, ನೆನಪುಗಳ ಮಾತು ಮಧುರ.., ಹರಟೆ, ಹಾಗೆ ಸುಮ್ಮನೆ
ಟ್ಯಾಗ್ ಗಳು:, , , , , , , , ,

ನೆನಪಿನ ಸುರುಳಿಯೆಂದರೆ ಹಾಗೇ ಅಲ್ಲವೇ? ಅಕಾರಣವಾಗಿಯೋ ಸಕಾರಣವಾಗಿಯೋ ಒಮ್ಮೆ ಬಿಚ್ಚಿಕೊಂಡಿತೆಂದರೆ ತನ್ನ ಸುಳಿಯೊಳಗೆಳೆದುಕೊಂಡು ನಮ್ಮನ್ನು ಸುತ್ತಿಸಿ, ಗಿರಗಿಟ್ಲೆಯಾಡಿಸಿ ಒಂದು ಘಳಿಗೆ ಈ ಲೋಕದ ಕೊಂಡಿಯೇ ಕಳಚಿದಂತಾಗಿ ನಾವು ಕಳೆದುಹೋಗುವಂತೆ ಮಾಡುತ್ತದೆ. ಅಂತೆಯೇ ಎಪ್ರಿಲ್ ತಿಂಗಳು ಬಂತೆಂದರೆ ಸಾಕು… ನೆನಪಿನ ಕೋಶದೊಳಗೊಂದು ಪುಟ್ಟ ಕದಲಿಕೆ. ಅದಕ್ಕೆ ಕಾರಣ ಈ ತಿಂಗಳ ಅಖೈರಿಗೆ ಬರುವ ಕಮಲಶಿಲೆ ಜಾತ್ರೆ… ಮೊಗೆದಷ್ಟೂ ಸವಿನೆನಪುಗಳು ಉಕ್ಕಿ ಬರುವ ಅಕ್ಷಯ ಪಾತ್ರೆ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಮಡಿಲಿನಲ್ಲಿ ನಿದ್ರಿಸಿದಂತೆ ಕಾಣುವ ನಮ್ಮೂರು ಹಳ್ಳಿಹೊಳೆ(ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು). ಸುತ್ತಮುತ್ತಲಿನ ಊರುಗಳಾದ ಹಳ್ಳಿಹೊಳೆ, ಎಡಮೊಗೆ, ಸಿದ್ಧಾಪುರ, ಚಕ್ರಮೈದಾನ…ಹೀಗೆ ಈ ಎಲ್ಲ ಊರುಗಳ ನಡುವೆ ತೊಟ್ಟಿಲಿನಂತಿರುವ ಊರೇ ಕಮಲಶಿಲೆ. ಎಲ್ಲರ ಆರಾಧ್ಯದೈವವಾಗಿ ಕುಬ್ಜಾ ನದಿಯ ತಟದಲ್ಲಿ ನೆಲೆಯಾದವಳು ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ. ಎಪ್ರಿಲ್ ತಿಂಗಳ ಕೊನೆಯಲ್ಲಿ ಬರುವುದೇ ಈಕೆಯ ಜಾತ್ರಾ ಮಹೋತ್ಸವ…ಯಾನೆ ಕಮಲಶಿಲೆ ಹಬ್ಬ.

 

ಕಮಲಶಿಲೆಈ ಹೆಸರೇ ಒಂದು ಬೆರಗು..ಪುಳಕ. ಊರಿಗೆ ಈ ಹೆಸರು ಬಂದಿದ್ದಾದರೂ ಹೇಗೆಂದು ಹುಡುಕಹೊರಟರೆ ಭಿನ್ನವಾದ ಅಭಿಪ್ರಾಯಗಳು ಸಿಗುತ್ತವೆ. ಅಲ್ಲಿರುವ ಕಮ್ಮಾರ ಸಾಲೆಯಿಂದಾಗಿ ಬಂದ ಹೆಸರೇ ಕಾಲಾಂತರದಲ್ಲಿ ಹಲವರ ನಾಲಿಗೆಯ ಮೇಲಾಡಿ ಬದಲಾವಣೆಗೊಂಡು ಕಮಲಶಿಲೆ ಆಯಿತೆಂದು ಒಂದು ಐತಿಹ್ಯವಾದರೆ, ಕಮಲದಲ್ಲಿ ಉದ್ಭವವಾದ ಶಿಲೆಯೇ ಕಮಲಶಿಲೆಎಂಬುದು ಸ್ಥಳಪುರಾಣದಲ್ಲಿರುವ ಪ್ರತೀತಿ. ಹೆಸರಿನ ಕಥೆ ಏನೇ ಇದ್ರೂ ಇಲ್ಲಿನ ಜಾತ್ರಾ ಮಹೋತ್ಸವ ಅರ್ಥಾತ್ ಊರವರ ಬಾಯಲ್ಲಿ ಹಬ್ಬಎಂದು ಕರೆಸಿಕೊಳ್ಳುವ ಆ ಸಂಭ್ರಮ ಸಡಗರಗಳಿಗೆ ಶಬ್ದರೂಪ ಕೊಡೋಕೆ ನನ್ನ ಬರವಣಿಗೆಯ ತಾಕತ್ತು ಕಮ್ಮಿಯೆಂದೇ ನನ್ನ ಅನಿಸಿಕೆ. ಆದರೂ ಬಾಲ್ಯಕಾಲದಲ್ಲಿ ಕಂಡು ಭಾಗಿಯಾದ ಆ ಖುಷಿಯ ಒಂದು ಝಲಕ್ ಇಲ್ಲಿದೆ.

 

ಮಾರ್ಚ್ ತಿಂಗಳು ಬಂತೆಂದರೆ ಸಾಕು ವಾರ್ಷಿಕ ಪರೀಕ್ಷೆಯ ಗಡಿಬಿಡಿ. ಪರೀಕ್ಷೆಯ ರಗಳೆ ಏನೇ ಇದ್ರೂ ಮನಸ್ಸು ಆಗಲೇ ಮುಂದೆ ಬರುವ ಬೇಸಿಗೆ ರಜೆಯ ನೆನಪಿನಲ್ಲಿ ಮಂಡಿಗೆ ತಿನ್ನಲು ಶುರುವಿಟ್ಟಿರುತ್ತದೆ. ಪರೀಕ್ಷೆ ಮುಗಿದು ಎಪ್ರಿಲ್ ೧೦ರ ಪಾಸ್-ಫೈಲ್ನಾಮಾಂಕಿತ ಫಲಿತಾಂಶ ಪ್ರಕಟಣೆ ಮುಗಿಯುವಷ್ಟರಲ್ಲಿ ಊರಿನಲ್ಲಿರುವ ಅಷ್ಟೂ ಗೇರುಮರ, ಕಾಟುಮಾವಿನಮರಗಳು ನಮ್ಮ ಕೈಲಿರುವ ಕಲ್ಲಿಗೆ ಕಾದು ಕುಳಿತಿರುತ್ತವೆ. ಯಾವ ಮರದ ಹಣ್ಣು ಸಿಹಿ, ಯಾವುದು ಹುಳಿ, ಯಾವುದರಲ್ಲಿ ಸೊನೆ ಜಾಸ್ತಿ ಎಂಬೆಲ್ಲಾ ಲೆಕ್ಕಾಚಾರ ಗಣಿತದ ಸೂತ್ರಗಳಂತೆ ಬಾಯಿಪಾಠವಾಗಿರೋದ್ರಿಂದ ನಮ್ಮ ಪ್ಲಾನ್ ಆಫ್ ಆಕ್ಷನ್ಎಲ್ಲಾ ಪೂರ್ವನಿರ್ಧಾರಿತ. ಅಷ್ಟರಲ್ಲೇ ಬಂದಾಗಿರುತ್ತೆ ಕಮಲಶಿಲೆ ಹಬ್ಬ. ಮಕ್ಕಳಾದ ನಮಗೆಲ್ಲಾ ಹಬ್ಬಕ್ಕೆ ಯಾರು ಜಾಸ್ತಿ ದುಡ್ಡು ಒಟ್ಟುಮಾಡುತ್ತಾರೆಂಬ ಸ್ಪರ್ಧಾತ್ಮಕ ಪೈಪೋಟಿ. ನಂದು ಹೆಚ್ಚೋ ನಿಂದು ಹೆಚ್ಚೋ ಎಂದು ಗಳಿಗೆಗೊಮ್ಮೆ ಲೆಕ್ಕ ಮಾಡಿ, ಚಡ್ಡಿಕಿಸೆಯಲ್ಲಿರುವ ರೂಪಾಯಿ ಪಾವಲಿ, ಮಡಿಸಿದ ನೋಟು ಮುಟ್ಟಿನೋಡಿಕೊಳ್ಳುವುದರಲ್ಲೇ ಅವ್ಯಕ್ತ ಆನಂದ. ಮನೆಯವರು, ಮನೆಗೆ ಬಂದವರು ಎಂದು ಎಲ್ಲರ ಬಳಿ ಬೇಡಿಕೆ ಪಟ್ಟಿ ಸಲ್ಲಿಸಿ ಹಬ್ಬಕ್ಕೆ ಮುಂಚೆ ಹೇಗಾದರೂ ಮಾಡಿ ಎಲ್ಲರಿಗಿಂತ ಜಾಸ್ತಿ ದುಡ್ಡು ಸೇರಿಸಬೇಕೆಂಬುದೇ ಆಗಿನ ಒನ್ ಲೈನ್ ಅಜೆಂಡಾ. ಇವೆಲ್ಲದರ ನಡುವೆ ಈ ಸಲ ಹಬ್ಬದಲ್ಲಿ ಏನೆಲ್ಲಾ ತಗೋಬೇಕು… ಎಷ್ಟು ಐಸ್‌ಕ್ಯಾಂಡಿ ತಿನ್ನಬೇಕು..ಎಷ್ಟು ಸಲ ತೊಟ್ಟಿಲು (ಜೈಂಟ್ ವೀಲ್‌ನ ಮಿನಿಯೇಚರ್) ಹತ್ತಿ ಇಳಿಬೇಕು ಅದಕ್ಕೆಷ್ಟು ದುಡ್ಡು..ಇದಕ್ಕೆಷ್ಟು ಅಂತ ಚಾಣಕ್ಯನ ಅರ್ಥಶಾಸ್ತ್ರಕ್ಕಿಂತಲೂ ಒಂದು ಕೈ ಮೇಲು ನಮ್ಮ ಈ ಲೆಕ್ಕಾಚಾರ.

ಇದೆಲ್ಲಾ ಆಗಿ ಹಬ್ಬದ ದಿನ ಬಂತೆಂದರೆ ಅಲ್ಲಿಗೆ ಹೋಗೋದು ಹೇಗಪ್ಪಾ ಅನ್ನೋದು ಇನ್ನೊಂದು ತಲೆನೋವು. ಬಸ್ಸಿನಲ್ಲಿ ಹೋಗೋಣವೆಂದರೆ ಈಗಾಗಲೆ ೧೫೦ ಜನರನ್ನು ತುಂಬಿಸಿಕೊಂಡು ಆಮೇಲೆ ಕೊಸರಿಗೆಂಬಂತೆ ಟಾಪ್ನಲ್ಲೂ ೨೫ ಜನರನ್ನು ತುಂಬಿಸಿಕೊಂಡ ಬಸ್ಸು ಅನ್ನೋ ಆ ಟೈಟಾನಿಕ್ಏರೋಕೆ ಯಮ ಧೈರ್ಯವೇ ಬೇಕು. ನಡೆದುಕೊಂಡೋ ಇಲ್ಲಾ ಯಾವ್ದಾದ್ರೂ ವ್ಯಾನು, ಲಾರಿ, ಜೀಪು ಹತ್ತಿ ಅಂತೂ ಹಬ್ಬದಗುಡಿ ಮುಟ್ಟೋ ಹೊತ್ತಿಗೆ ಸೂರ್ಯ ನೆತ್ತಿ ಸುಡುತ್ತಿರುತ್ತಾನೆ. ಆದ್ರೆ ಆ ಹುರುಪಿನಲ್ಲಿ ಬಿಸಿಲು-ಮಳೆ ಇದೆಲ್ಲಾ ಯಾರಿಗೆ ಗೋಚರವಾಗುತ್ತೆ. ಮೊದಲು ದೇವಸ್ಥಾನದ ಒಳಗೆ ಹೋಗಿ ಆಮೇಲೆ ಬಜಾರ್ (ಎಲ್ಲಾ ಮಾರಾಟ ನಡೆಯೋ ಸ್ಥಳ) ಸುತ್ತಿದ್ರಾಯ್ತು ಎಂದು ಕೈಹಿಡಿದುಕೊಂಡ ಮನೆಯವರ ಕಣ್ಣುತಪ್ಪಿಸಿ ಅದ್ಯಾವ ಮಾಯಕದಲ್ಲೋ ಪರಾರಿ. ಕೈಬೀಸಿ ಕರೆಯುತ್ತಿರುತ್ತೆ ಬಜಾರ್ಎಂಬ ಮಾಯಾಬಜಾರ್.

 

ಮೊಟ್ಟಮೊದಲು ಐಸ್‌ಕ್ಯಾಂಡಿ ಸಮಾರಾಧನೆ. ಈ ಐಸ್‌ಕ್ಯಾಂಡಿಯಲ್ಲಿ ಇರುತ್ತಿದ್ದ ಆಯ್ಕೆಗಳಾದ್ರೂ ಎಷ್ಟು? ಬೆಲ್ಲದಕ್ಯಾಂಡಿ, ಕ್ರೀಮ್, ಬಣ್ಣದಕ್ಯಾಂಡಿ. ಅದರಲ್ಲೇ ಸ್ವಲ್ಪ ವೆರೈಟಿಯದ್ದಂದ್ರೆ ಪ್ಲಾಸ್ಟಿಕ್ ಕೊಳವೆಯೊಳಗೆ ಬರುತ್ತಿದ್ದ ಉದ್ದನೆಯ ಪೆಪ್ಸಿ ( ಕೋಕ್-ಪೆಪ್ಸಿ ಅಲ್ಲ!). ಅಲ್ಲದೆ ಹಬ್ಬದ ಪ್ರಯುಕ್ತ ಎಲ್ಲದ್ದಕ್ಕೂ ಡಬ್ಬಲ್ ರೇಟು ಬೇರೆ. ಹಾಗಂತ ಐಸ್‌ಕ್ಯಾಂಡಿ ಬಿಟ್ಟವರುಂಟೇ? ಆಮೇಲೆ ಮನೆಗೆ ಹೋಗಿ ನಾನೆಷ್ಟು ಪೆಪ್ಸಿ ತಿಂದೆ, ನಿಂದೆಷ್ಟು ಅಂತ ಮಕ್ಕಳೊಳಗೆ ಸ್ಪರ್ಧೆ ಬೇರೆ ಇರುವಾಗ. ಈಗೆಲ್ಲಾ ಬಗೆಬಗೆಯ ಮಾಲ್‌ಗಳಲ್ಲಿ, ‘ಪಾರ್ಲರ್’ಗಳಲ್ಲಿ ಕೂತು, ಇರುವ ನೂರಾರು ತರದ ಸ್ಪೆಷಲ್ ಐಸ್‌ಕ್ರೀಮ್ ತಿಂದ್ರೂ ಹಬ್ಬದ ಗರದಲ್ಲಿ ನಾಲಿಗೆಯ ಮೇಲೆ ಕುಳಿತ ಬೆಲ್ಲದಕ್ಯಾಂಡಿ, ಪೆಪ್ಸಿಯ ಸವಿಯನ್ನು ಓಡಿಸೋಕೆ ಯಾವುದರಿಂದಲೂ ಸಾಧ್ಯವಿಲ್ಲ. ಇದೆಲ್ಲಾ ಮುಗಿದು ಮುಂದೆ ಬಂದ್ರೆ ಬಣ್ಣಬಣ್ಣದ ಆಟಿಕೆಗಳು, ಬೈನಾಕ್ಯುಲರ್, ರೀಲ್ ಹಾಕಿ ಚಿತ್ರ ನೋಡುವ ಕೆಮರಾ, ಕನ್ನಡಕ , ಪುಗ್ಗ, ಪೀಪಿ, ರಬ್ಬರ್‌ಹಾವು…ಹೆಸರೇ ಗೊತ್ತಿಲ್ಲದ ಹಬ್ಬದಗುಡಿಯ ತರಹೇವಾರಿ ಆಟಿಕೆಗಳ ಆಕರ್ಷಣೆ. ಅಷ್ಟರಲ್ಲಿ ಹುಡುಕಿಕೊಂಡು ಬಂದ ಹಿರಿಯರ ಒತ್ತಾಯಕ್ಕೋ ಎಂಬಂತೆ ಜನಜಂಗುಳಿಯ ನಡುವೆಯೇ ದೇವರಿಗೆ ಒಂದು ಸುತ್ತು ಬಂದ ಶಾಸ್ತ್ರ ಮುಗಿಸಿ ನಮಸ್ಕಾರ ಮಾಡಿ, ಘಮ್ಮೆನ್ನುವ ಗಂಧ ಹಣೆಗೆ ಹಚ್ಚಿಕೊಂಡು ಹೊರಬಂದರೆ ಇನ್ನೊಂದು ಸುತ್ತಿನ ತಿರುಗಾಟಕ್ಕೆ ತಯಾರಾದಂತೆ. ಎಲ್ಲರಿಗೂ ಪ್ರಸಾದ ರೂಪದಲ್ಲಿ ಊಟದ ವ್ಯವಸ್ಥೆ ಇರುತ್ತದಾದ್ರೂ ಹೊರಗಿನ ಸೆಳೆತದ ಮುಂದೆ ಊಟ-ತಿಂಡಿಯ ಗೊಡವೆ-ರಗಳೆ ಯಾರಿಗೆ ಬೇಕು ಅಲ್ವಾ?

 

ದೊಡ್ಡ ವ್ಯಾಪಾರಸ್ಥರ ಶೈಲಿಯಲ್ಲಿ ಆಟಿಕೆಗಳ ಅಂಗಡಿಯಲ್ಲಿ ಅದಕ್ಕೆಷ್ಟು, ಇದಕ್ಕೆಷ್ಟು ಅಂತ ವಿಚಾರಿಸುತ್ತಾ, ಕಿಸೆಯಲ್ಲಿ ಉಳಿದ ಕಾಸನ್ನು ಮನಸ್ಸಲ್ಲೇ ಲೆಕ್ಕ ಹಾಕಿ, ಆಮೇಲೆ ತೊಟ್ಟಿಲು-ಕುದುರೆ ಮೇಲೆ ಕುಳಿತುಕೊಳ್ಳಲು ಸಾಕಷ್ಟು ಮಿಗಿಸಿಕೊಂಡು, ಚೌಕಾಸಿಮಾಡಿ ಒಂದಿಷ್ಟು ಆಟಿಕೆಕೊಂಡುಕೊಂಡು ಹಬ್ಬದ ಗರದಲ್ಲಿ ಗಿರಗಿರನೆ ಸುತ್ತಿದ್ದಾಯ್ತು. ಹೆಣ್ಣು ಮಕ್ಕಳಿಗೇ ಮೀಸಲಾದ ಬಳೆ-ಕ್ಲಿಪ್ಪು-ರಿಬ್ಬನ್ ಅಂಗಡಿಗಳನ್ನು ಬಿಟ್ಟು, ಮಿಠಾಯಿ ಹೇಗೂ ಮನೆಯವರು ಕೊಂಡುಕೊಳ್ತಾರೆ ಎನ್ನುವ ಧೈರ್ಯದಲ್ಲಿ ಆ ಅಂಗಡಿಗಳನ್ನೂ ಬದಿಗೆ ಹಾಕಿ ಮುಂದೆ ಸಾಗಿದ್ರೆ ತೆರೆದುಕೊಳ್ಳುತ್ತೆ ಇನ್ನೊಂದೇ ಮಾಯಾಲೋಕ. ತೊಟ್ಟಿಲು ಅನ್ನೋ ಮಿನಿ ಜೈಂಟ್ ವ್ಹೀಲ್ ಹತ್ತಿ ಕುಳಿತರೆ ಅದು ಸುತ್ತುವ ಭರದಲ್ಲಿ ಅರ್ಧ ಭಯ, ಅರ್ಧ ಖುಷಿ, ಜೊತೆಗೊಂದಿಷ್ಟು ಉದ್ವೇಗ-ಥ್ರಿಲ್. ಜಗತ್ತಿನ ತುತ್ತತುದಿಯಲ್ಲಿದ್ದೇವೋ ಅನ್ನುವ ಅನುಭವ. ೨೫ ಸುತ್ತು ಅಂತ ಹೇಳಿ ಬರೀ ೨೦ ಸುತ್ತಿಗೆ ಸುತ್ತಿಸುವವನು ನಿಲ್ಲಿಸಿದಾಗ ಬೇಜಾರಾದ್ರೂ, ಕೆಳಗಿಳಿದು ಮತ್ತೊಮ್ಮೆ ಕಿಸೆಮುಟ್ಟಿನೋಡಿಕೊಂಡು ಇನ್ನೊಂದು ಸುತ್ತು ಸುತ್ತುವ ಆಸೆಯಲ್ಲಿ ಮೀನಮೇಷ ಎಣಿಸುತ್ತಿರುವಾಗಲೇ ಕೇಳಿಸುತ್ತೆ ಮೈಕಿನಲ್ಲಿ ಕೂಗಿ ಕರೆವ ಜಾದೂ ಪ್ರದರ್ಶನದ ಪ್ರಚಾರ. ಸಣ್ಣಪುಟ್ಟ ಟ್ರಿಕ್ಗಳನ್ನೇ ಬಾಯಿಬಿಟ್ಟುಕೊಂಡು ನೋಡಿ ಹೊರಬಂದಾಗ ಮುಕ್ಕಾಲು ಪಾಲು ಹಬ್ಬ ಮುಗಿದಂತೆ! ತೊಟ್ಟಿಲು ಏರೋಕೆ ಹೆದರಿಕೆ ಇರೋರಿಗೆ ಬೇಕಿದ್ರೆ ಗೋಲಾಕಾರದಲ್ಲಿ ಸುತ್ತುವ ಕುದುರೆ ಸವಾರಿನೂ ಇದೆ.

 

ಈ ಮಾಯಾಬಜಾರಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ದಣಿದ ಹೊಟ್ಟೆ ತಾಳಹಾಕುತ್ತಿರುತ್ತದೆ. ಬಣ್ಣಹಾಕಿದ ಶರಬತ್ತೊಂದನ್ನು ಕುಡಿದು, ಮನೆಯವರು ಹಣ್ಣು-ಕಾಯಿ ಮಾಡಿಸಿ ತಂದ ಬಾಳೆಹಣ್ಣುಗಳೆರಡು ಹೊಟ್ಟೆ ಸೇರಿದ ಮೇಲೆ ಬೇಕಾದ್ರೆ ಮನೆಯವರ ಜೊತೆ ಇನ್ನೊಂದು ರೌಂಡ್ ಹೋಗೋಕೆ ಸಿದ್ಧ. ಜೊತೆಗೆ ಅವರೇ ಕಾಸುಕೊಟ್ಟು ಏನನ್ನಾದ್ರೂ ಕೊಡಿಸಲಿ ಎಂಬ ಗುಪ್ತ ನಿರೀಕ್ಷೆ ಬೇರೆ. ಇಷ್ಟೆಲ್ಲಾ ಮುಗಿಯೋ ಹೊತ್ತಿಗೆ ಬಯ್ಯಿನ ತೇರು(ಸಂಜೆ ಹೊತ್ತಿಗೆ ಎಳೆಯುವ ರಥ) ಎಳೆಯುವ ಹೊತ್ತಾಗಿರುತ್ತೆ. ಬೃಹದಾಕಾರದ ತೇರನ್ನು ಕಟ್ಟಿದ ಹಗ್ಗದ ಸಹಾಯದಿಂದ ಎಳೆಯುತ್ತಾ ಭಕ್ತಿ-ಆವೇಶಗಳಿಂದ ಜಯಕಾರಗೈಯ್ಯುವ ಜನರ ಘೋಷದ ನಡುವೆ ಮಂದಗಮನೆಯಂತೆ ಸರಿದುಬರುವ ತೇರೆಂಬೋ ತೇರನ್ನೇ ಬಿಟ್ಟಗಣ್ಣುಗಳಿಂದ ನೋಡುತ್ತಾ ಮನೆಕಡೆ ಹೊರಟರೆ ದಣಿದ ಕಾಲುಗಳೇಕೋ ಮುಷ್ಕರ ಹೂಡುತ್ತವೆ. ಆದರೆ ಈ ಸಂಭ್ರಮದಿ ಭಾಗಿಯಾಗಿ ನಲಿದಾಡಿದ ಮನಸ್ಸು ಅರ್ಧ ಖುಷಿಯಿಂದಿದ್ರೆ-ಹಬ್ಬ ಮುಗಿದೇ ಹೋಗಿದ್ದಕ್ಕೆ ಅರ್ಧ ಬೇಜಾರು. ಮುಂದಿನ ಹಬ್ಬಕ್ಕೆ ಇನ್ನೂ ಒಂದು ವರ್ಷ ಕಾಯಬೇಕಲ್ಲಾ ಅಂತ ಸಂಕಟ.

ಹಬ್ಬ ಮುಗಿದ ಮೇಲೆ ಆ ಜಾತ್ರೆ ನಡೆದ ಬಯಲಿಗೆ ಹೋಗಿ ನೋಡಿದ್ರೆ ಅಲ್ಲೇನಿದೆ…ಜಾತ್ರೆ ಮುಗಿದ ಮೇಲೆ ನಡೆದ ಸಂಭ್ರಮಕ್ಕೆ ಸಾಕ್ಷಿ ಹೇಳುವ ಅಳಿದುಳಿದ ಕಸಕಡ್ಡಿ-ಶೇಷವನ್ನು ಬಿಟ್ಟು. ಬದುಕಿನ ಜಾತ್ರೆಯೂ ಹೀಗೆಯೇ ಅಲ್ಲವೆ? ನಿಮ್ಮ ಬಾಲ್ಯಕಾಲದ ಹಬ್ಬದ ನೆನಪು ಕೂಡಾ ಹೀಗೆ ಇದೆಯೇ?

                               -ವಿಜಯ್ ರಾಜ್ ಕನ್ನಂತ್

ಟಿಪ್ಪಣಿಗಳು
 1. Manjunatha maravanthe ಹೇಳುತ್ತಾರೆ:

  Naave habbakke hoyi bandangaith.

 2. ಈಶ್ವರ ಕಿರಣ ಹೇಳುತ್ತಾರೆ:

  ತುಂಬಾ ಚೆನ್ನಾಗಿ ಬರೀತೀರ ಸರ್ . ಖುಷಿಯಾಯ್ತು ಓದಿ ..

 3. ಅರೇಹಳ್ಳಿ ರವೀ... ಹೇಳುತ್ತಾರೆ:

  ವಿಜಯ್,

  ಅದೇನ್ರೀ ಇಡೀ ಜಾತ್ರೆಯನ್ನೇ ಕಣ್ಣುಮುಂದೆ ತರ್ತೀರಲ್ಲ! ಜಾತ್ರೆಗೆ ಹೋಗೋದೆಂದರೆ ಸಾಂಸ್ಕೃತಿಕ ಯಾತ್ರೆ ಮಾಡಿದಂತೆ. ಅಲ್ಲಿ ಏನಿರೋಲ್ಲ…ಏನಿರುತ್ತೆ ಅನ್ನೋದಕ್ಕಿಂತ ಜಾತ್ರೆ ಬದುಕಿನ ಎಲ್ಲ ಮಗ್ಗುಲುಗಳ ಆನಂದವನ್ನು ತೆರೆದಿಡೋಕೆ ಪ್ರಯತ್ನ ಪಡುತ್ತೆ. ಜಾತ್ರೆ ಅನ್ನೋದು ನೂರು ಮನಸುಗಳ ಹುಚ್ಚು ಜಲಪಾತ. ಎಲ್ಲರೂ ಅದರಲ್ಲಿ ತೋಯ್ತಾರೆ. ಆದರೆ ಮಾಲ್ ಅನ್ನೋದು ಯಾವತ್ತೂ ಜಾತ್ರೆಯಾಗೋಲ್ಲ. ಬಡತನ-ಶ್ರೀಮ್ಮಂತಿಕೆಯ ಹೊಸ ವ್ಯಾಖ್ಯಾನ ಅನ್ನೋ ರೀತಿಯಲ್ಲಿ ಮಾಲ್‍ಗಳ ಬೆಳವಣಿಗೆ ಆಗ್ತಿದೆ. ಇರಲಿ-ಹಳ್ಳಿಗಳ ಜಾತ್ರೆಗಳು ಈಗಲೂ ತಮ್ಮ ಆಕರ್ಷಣೆ ಕಳೆದುಕೊಂಡಿಲ್ಲ. ಕಳಚಿಕೊಂಡೀರೋದು ನಾವೇ ಹೊಸ ಪೀಳಿಗೆಯ ನಿರಾಶಾವಾದಿಗಳು.
  ಅಂದ ಹಾಗೆ ವೈದೇಹಿ ಕುರಿತಂತೆ ಬರೆದದ್ದು ಎಲ್ಲರಿಗೂ ಇಷ್ಟವಾಗುತ್ತೆ. ಅವರು ಒಂದು ತಲೆಮಾರಿನ ಭಾವನೆ-ಅಭಿರುಚಿಗಳಿಗೆ ವೇದಿಕೆ ಕೊಟ್ಟವರು.
  ರವೀ…
  ಮನಸು ಹಕ್ಕಿ

 4. vignesh ಹೇಳುತ್ತಾರೆ:

  Superb vijay…….it made me to recall my good gold olden days…..i remember Vaddarse(near to kota) habba, Kodi habba…etc etc …..such wonderful time we had !!!

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s