Archive for ಏಪ್ರಿಲ್ 25, 2008

ಕಳೆದ ತಿಂಗಳು ಸರಿಸುಮಾರು ೮-೧೦ ದಿನಗಳ ಕಾಲ ಬಂದ ಮಿನಿ ಮಳೆಗಾಲ ಯಾವುದರ ಮುನ್ಸೂಚನೆಯೋ ಗೊತ್ತಿಲ್ಲ. ಏರುತ್ತಿರುವ ಭೂಮಂಡಲದ ಬಿಸಿ, ಹವಾಮಾನ ತಜ್ಞರಲ್ಲಿ ಕಸಿವಿಸಿ, ಬೆಳೆದ ಬೆಳೆ ಕೈಗೆ ಬರದೆ ರೈತನ ಮಂಡೆಯಂತೂ ಬಿಸಿಯೋ ಬಿಸಿ.

 

ಹೀಗೆ ಸುರಿದ ಅಡ್ಡಮಳೆಯೊಂದು ಮೊದಲು ಹನಿ ಹನಿಯಾಗಿ ಜಿನುಗಿ …ನಿಧಾನಕ್ಕೆ ಧಾರೆಧಾರೆಯಾಗುತ್ತಾ ರಸ್ತೆಯ ಮೇಲೆಲ್ಲಾ ಹರಿದು ಚರಂಡಿ ಸೇರಿ ರಾಡಿಯಾಗೋ ಒಂದು ಇಳಿಸಂಜೆಯ ಹೊತ್ತಿನಲ್ಲಿ ಮನಸ್ಸಿನ ಮೂಲೆಯಿಂದ ಮಳೆಯೊಂದಿಗೆ ಬೆಸೆದು ಕೊಂಡ ಚಿತ್ರಗಳು ಮೆಲ್ಲನೆ ಅನಾವರಣಗೊಳ್ಳುತ್ತಿತ್ತು. ಊರಿನಲ್ಲಿದ್ದಾಗ ಧೋ ಎಂದು ಮೂರ್‍ಹೊತ್ತೊ ಸುರಿಯುತ್ತಿದ್ದ ಮಳೆಯಲ್ಲಿ ಒಲೆಯ ಮುಂದೆ ಕೂತು ಚಳಿ ಕಾಯಿಸುತ್ತಾ ಬಿಸಿ ಬಿಸಿ ಹಪ್ಪಳ ಸುಟ್ಟು ತಿಂದಿದ್ದು, ಜೋರು ಮಳೆ ಬಂದರೆ ಶಾಲೆಗೆ ರಜಾ ಸಿಗುವ ಖುಷಿ, ಹೊಳೆಯಲ್ಲಿ ಬಂದ ನೆರೆ ನೋಡುವ ಸಂಭ್ರಮ….ಹೀಗೆ ಇವೆಲ್ಲಾನೆನಪಾಯ್ತು. ಆದರೆ ಮಳೆ ಅಂದಾಕ್ಷಣ ನನ್ನ ಚಿತ್ತ ಭಿತ್ತಿಯಲ್ಲಿ ಇನ್ನೂ ಒಂದು ಸುಂದರ ದೃಶ್ಯಕಾವ್ಯದಂತಹ ಚಿತ್ರ ತೇಲಿ ಬರುತ್ತಿದೆ. ಈ ಹಳೆಯ ನೆನಪಿನ ಚಿತ್ರಗಳ ಸಂಪುಟದಲ್ಲಿ ಮನೆಮಾಡಿರುವುದೇ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸಿನೆಮಾ ದ್ವೀಪ.

 

ಸೌಂದರ್ಯ ಅಂದಾಕ್ಷಣ ನಿಮ್ಮಲ್ಲಿ ಬಹುತೇಕರಿಗೆ ನೆನಪಾಗುವುದು ನಾಗವಲ್ಲಿಯ ನರ್ತನ.. ಆವೇಶ…ರಾ ರಾ ಹಾಡು.. ಅದು ಸೌಂದರ್ಯ ನಟಿಸಿದ ಕೊನೆಯ ಚಿತ್ರ. ಆದರೆ ನನಗೆ ಮಾತ್ರ ನೆನಪಾಗುವುದು ಮಾವಯ್ಯನ ಹೆಣ ಸುಟ್ಟಾಗ ಸುರಿವ ಮಳೆಯ ಪರಿವೆಯೇ ಇಲ್ಲದೆ ಬಿಕ್ಕುವ ನಾಗಿಯ ಅಳಲು; ಕಟ್ಟೆ ಕೋಡಿ ಹರಿದಾಗ ಇದೆಲ್ಲ ದೈವದ ಕಾರಣಿಕ ಅಲ್ದಾ ಅನ್ನುವ ಪತಿಯ ಮಾತಿಗೆ ಅಷ್ಟೆಲ್ಲಾ ಪಾಡುಪಟ್ಟ ನಾಗಿಯ ಮುಖದಲ್ಲಿ ಅಚ್ಚೊತ್ತಿದಂತೆ ಭಾಸವಾಗುವ ಹಂಗಾರೆ ನಾ ಮಾಡಿದ್ದೆಲ್ಲ ಎಂತದೂ ಅಲ್ದಾ ಎಂಬ ಉತ್ತರವೇ ಇಲ್ಲದ ಪ್ರಶ್ನಾರ್ಥಕ ಚಿಹ್ನೆ !

 

ಶರಾವತಿ ಕೊಳ್ಳದಲ್ಲಿ ಅಣೆಕಟ್ಟಿನ ಹಿನ್ನೀರಿನಲಿ ಮುಳುಗಿ ಹೋದ ಬದುಕನ್ನು ಬೇರಿನ್ನೆಲ್ಲೋ ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ಬೇರುಗಳನ್ನು ಮರೆತು ಅಸಹಾಯಕತೆಯ ಕಣ್ಣೇರ ಮಿಡಿಯುತ್ತಾ ಇನ್ನೆಲ್ಲಿಗೋ ವಲಸೆ ಹೋದ ಜನರ ಬವಣೆಯನ್ನು ಬಲು ಹತ್ತಿರದಿಂದ ಕಂಡ ನಾ.ಡಿಸೋಜ ಅವರ ಅತ್ಯುತ್ತಮ ಕಾದಂಬರಿ ದ್ವೀಪ. ಈ ಸುಂದರ ಕೃತಿಯಾನ್ನು ತಮ್ಮ ಕುಸುರಿ ಕಲೆಯಲ್ಲಿ ಅದ್ಭುತ ಕಲಾಕೃತಿಯಾಗಿಸಿದ್ದು ಕಾಸರವಳ್ಳಿಯವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ನಿನ್ನೆಯವರೆಗೆ ನಮ್ಮದಾಗಿದ್ದ ಮನೆ, ತೋಟ, ಹಾಡಿ, ಗದ್ದೆ ಎಲ್ಲವನ್ನು ನುಂಗುವ ಕಪ್ಪು ನೀರನ್ನೇ ಹತಾಶೆಯಿಂದ ನೋಡುತ್ತಾ, ಇಲ್ಲಿಯೂ ಇರಲಾರೆ ಅಲ್ಲಿಗೂ ಹೋಗಲಾರೆ ಎಂಬ ದ್ವಂದ್ವದ ತೂಗುಯ್ಯಾಲೆಯಲಿ ಕುಳಿತು ಎಲ್ಲಿಯೂ ಸಲ್ಲದಂತೆ ನಡುಗುಡ್ಡೆಯಾಗುವ ಮನಸ್ಸು – ನೈಸರ್ಗಿಕವಾಗಿ ಸುರಿವ ಮಳೆಗಾಗಿ ದಿನಗಟ್ಟಲೆ ತಿಂಗಳುಗಟ್ಟಲೆ ಕಾದು ಕುಳಿತು ಮಳೇಯನ್ನೇ ಒಂದು ಪಾತ್ರವನ್ನಾಗಿಸಿದ ಛಾಯಾಗ್ರಾಹಕ ರಾಮಚಂದ್ರರ ಯಶಸ್ಸು ಇವೆಲ್ಲಕ್ಕೆ ಕಳಶವಿಟ್ಟಂತೆ ಪರಕಾಯ ಪ್ರವೇಶಮಾಡಿದ ಸೌಂದರ್ಯ ಅಭಿನಯದ ತೇಜಸ್ಸು.

 

ಮಳೆ-ಮುಳುಗಡೆ, ಜಡಭರತನಂತ ಗಂಡ, ಮಾತಾಡೋಕೆ ಬೇಕೂ ಅಂದ್ರೂ ಜನರೇ ಸಿಗದ ಏಕಾಕಿತನದ ನಡುವೆ ಸಿಕ್ಕಿ ನಲುಗುವ ಹೆಣ್ಣೊಬ್ಬಳ ನೋವಿನ, ಹೋರಾಟದ ಕಥೆ. ಕಾದಂಬರಿಯಲ್ಲಿ ನಾಗಿಯ ಪಾತ್ರ ಒಂದು ಕಡೆ ಹಾದಿ ತಪ್ಪುವಂತೆ ಇದ್ದರೂ ಕೂಡಾ ಚಿತ್ರ ಕಥೆಯಲ್ಲಿ ಅದನ್ನು ಬದಲಾಯಿಸಿದ್ದು ಒಂದು ಉತ್ತಮ ಬದಲಾವಣೆ. ಮಲೆನಾಡಿನ ಸುಂದರ ದೃಶ್ಯಗಳ ಜೊತೆಗೆ ಹೊಸನಗರ ಕಡೆ ಮಾತನಾಡುವ ಘಟ್ಟದ ಮೇಲಿನ ಕನ್ನಡ ಕೂಡ ಚಿತ್ರ ಕೃತಕವಾಗದಂತೆ ನೋಡಿಕೊಳ್ಳುತ್ತದೆ. ಸೌಂದರ್ಯ ಅಂತೂ ತನ್ನೆಲ್ಲಾ ಪ್ರತಿಭೆಯನ್ನೇ ಧಾರೆಯೆರೆದು ಪಾತ್ರವೇ ತಾವಾಗಿದ್ದಾರೆ. ನೀವಿನ್ನೂ ನೋಡಿಲ್ಲವಾದರೆ ಈಗಲೇ ಹೋಗಿ ಚಿತ್ರದ ಸಿ.ಡಿ ತಂದು ನೋಡಿ. ಬೇಸಿಗೆಯಲ್ಲಿ ಮಳೆಯಲ್ಲಿ ಮಿಂದಂತ ತಂಪನ್ನು ಅನುಭವಿಸುವ ಭಾಗ್ಯ ನಿಮ್ಮದಾಗಲಿ