Archive for ಏಪ್ರಿಲ್, 2008

ಸಹ್ಯಾದ್ರಿಯ ಮಳೆಕಾಡಿನ ನಡುವೆ

ಕಳೆದುಹೋಗಬೇಕಿದೆ ಜರೂರು ಈಗ,

ಜನಾರಣ್ಯ ಗೌಜಿ-ಗದ್ದಲಗಳಿಂದ

ದೂರವಾಗಬೇಕು ಆದಷ್ಟು ಬೇಗ

 

ಸದ್ದುಗದ್ದಲದ ಕಲರವಗಳಿಗೆ

          ಹೊಂದಿಕೊಂಡಿರುವ ಕಿವಿಗೆ

          ತೆರೆದುಕೊಳ್ಳುವ ಆಸೆಯಾಗಿದೆ

          ಮೌನರಾಗದ ಸವಿಗೆ

 

ಕೃತ್ರಿಮ ಬಣ್ಣ-ಬೆಡಗಿನ ಥಳುಕಿಗೆ

ಮಾರು ಹೋದ ಕಣ್ಣು

ನೋಡಬೇಕಿದೆ ನೈಜ ವರ್ಣದ

ಗಿಡ-ಮರ ಹಕ್ಕಿ ಹಣ್ಣು

 

          ಸುಗಂಧ ದ್ರವ್ಯದ ಮತ್ತೇರೋ ವಾಸನೆಗೆ

          ಜಡ್ಡುಗಟ್ಟಿರುವ ಮೂಗಿಗೆ

          ಆಘ್ರಾಣಿಸಿ ಅರಳೋದ ಕಲಿಸಬೇಕಿದೆ

          ಕಾನನ ಕುಸುಮ ಸೌರಭಕೆ

 

ಪಿಜ್ಜಾ-ಬರ್ಗರ್ ಪೆಪ್ಸಿ-ಕೋಕಿಗೆ

ಜೊಲ್ಲು ಸುರಿಸೋ ನಾಲಗೆಗೆ

ಹಲಸು-ಮಾವಿನ ಸವಿ ತೋರಿಸಿ

ತಿನ್ನಿಸಬೇಕು ಶ್ಯಾವಿಗೆ

 

          ಹೇಳಬೇಕಿದೆ ಅಂತಿಮ ವಿದಾಯ

          ರಸಹೀನ ಬದುಕಿನ ಬೀಡಿಗೆ

          ಮರಳಬೇಕಿದೆ ಸ್ವಚ್ಛಂದ ಬದುಕಿನ

          ಮಳೆಯ ಕಾಡಿಗೆ – ಮಲೆನಾಡಿಗೆ

 

ಎಲ್ಲಾ ಹಾಡುಗಳನ್ನು ಕೇಳಿದಾಗ ಹೀಗಾಗುವುದಿಲ್ಲ. ಕೆಲವೇ ಕೆಲವು ನಿರ್ದಿಷ್ಟ ಹಾಡುಗಳಿಗೆ ಮಾತ್ರ ಒಂದು ವಿಲಕ್ಷಣ ಶಕ್ತಿಯಿರುತ್ತದೆ. ನಮ್ಮನ್ನು ಪದೇ ಪದೇ ಕಾಡಿಸುವ ತಾಕತ್ತಿರುತ್ತದೆ. ಭಾವನೆಗಳನ್ನು ಬಡಿದೆಬ್ಬಿಸುತ್ತವೆ. ಈ ಜಗತ್ತೆಲ್ಲಾ ಸುಳ್ಳು, ಬೇರೇನೂ ಬೇಕಿಲ್ಲ…ಈ ಹಾಡೊಂದೆ ಈ ಕ್ಷಣದ ಸತ್ಯ…ಇರಲಿ ಇದು ನಿತ್ಯ ಅನ್ನಿಸಿಬಿಡುತ್ತದೆ. ಜೋಗುಳ ಹಾಡಿ, ತನ್ನ ಮಡಿಲಲ್ಲಿ ಮಲಗಿಸಿಕೊಂಡು ಚುಕ್ಕು ತಟ್ಟಿ ತೂಗುತ್ತದೆ. ಮತ್ತೆ ಮತ್ತೆ ಕೇಳುವಂತೆ ಪ್ರೇರೇಪಿಸುತ್ತದೆ. ಸಂಗೀತದ ಸುಧೆಯಲಿ  ಮಿಂದ ಮನಸ್ಸು ತಾನೇ ಹಾಡಾಗಿ ಉಲಿಯುತ್ತದೆ. ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂ, ಎಂತಹಾ ಪರಿಸ್ಥಿತಿಯಲ್ಲಿದ್ದರೂ ನಿಮ್ಮನ್ನು ಕೈಬೀಸಿ ಕರೆದು ತೆಕ್ಕೆಯೊಳಗೆಳೆಯುತ್ತದೆ. ಹಾಡಿನ ಮೋಡಿಗೆ ಸಿಲುಕಿ ಬಂಧಿಯಾದರೂ ವಿಮುಕ್ತ…ಹಾಡಿನ ಅಲೆಗಳಲಿ ತೇಲಿ ಉನ್ಮತ್ತ. ಎಲ್ಲ ಬೇಸರ, ದುಗುಡ, ದುಮ್ಮಾನಗಳ ಮರೆಸಿ ಸಂಗಾತಿಯಂತೆ ಕೈ ಹಿಡಿಯುತ್ತದೆ. ನಿಮಗೂ ಇಂತಹ ಅನುಭವ ಮೂಡಿಸಿದ ಹಾಡುಗಳ್ಯಾವುದಾದರೂ ಇವೆಯಾ?

 

ಬದುಕಿನ ವಿವಿಧ ಹಂತಗಳಲ್ಲಿ ನೂರಾರು-ಸಾವಿರಾರು ಹಾಡುಗಳನ್ನು ಕೇಳಿರುತ್ತೇವೆ. ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆ, ರಾಪ್-ಪಾಪ್‌ನಂತಹ ವಿಚಿತ್ರಗೀತೆ, ಗಝಲ್‌ಗಳು…ಹೀಗೆ ಅಸಂಖ್ಯಾತ ಹಾಡುಗಳು ನಮ್ಮ ಕರ್ಣಪಟಲಕ್ಕೆ ತಾಕುತ್ತವೆ. ಈ ಸಾವಿರಾರು ಹಾಡುಗಳಲ್ಲಿ ಕೆಲವಕ್ಕೆ ಮಾತ್ರ ಮನಸ್ಸನ್ನು ಮುಟ್ಟುವ ತಟ್ಟುವ ತಾಕತ್ತಿರುತ್ತದೆ. ಹಾಗೆ ನಮ್ಮನ್ನು ತಲುಪಿದ ಹಾಡುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಆಪ್ತವಾಗಿ ಕೈ ಹಿಡಿಯುತ್ತವೆ…ನಮ್ಮದೇ ಇದು ಎಂದೆನಿಸುತ್ತವೆ. ಸಾಹಿತ್ಯ ಬರೆದವರು, ಸಂಗೀತ ನೀಡಿದವರು, ಅದಕ್ಕೆ ಭಾವ ತುಂಬಿ ಹಾಡಿದವರು ನಮಗಾಗಿಯೇ ರಚಿಸಿದ್ದಾರೋ ಅನ್ನಿಸುವಷ್ಟು ನಮ್ಮ ಬದುಕಿನಲ್ಲಿ ಮಹತ್ವ ಪಡೆಯುವ ಆ ಹಾಡುಗಳು..ಆಹಾ…..ಅಸೀಮ..ಅನುಪಮ..ಅದ್ಭುತ. ನಿಜಕ್ಕೂ ಬಣ್ಣನೆಗೆ ನಿಲುಕದ ಸಂಗೀತ. ಹಾಡು ಇಷ್ಟವಾಗುವುದೆಂದರೆ ಏನು? ಅದರ ಸುಮಧುರ ಸಂಗೀತವೇ, ಹಾಡಿದ ಗಾಯಕರ ಸ್ವರ ಮಾಧುರ್ಯವೇ, ಹಾಡಿನಲ್ಲಡಗಿರುವ ಭಾವದ ಸೆಳಕೇ, ಹಾಡಿನ ಪದಗಳ ಚಮತ್ಕಾರವೇ…ಅಥವಾ ಇವೆಲ್ಲ ಮೆಳೈಸಿದ ಒಟ್ಟು ಮೊತ್ತವೇ..? ಈ ಪ್ರಶ್ನೆಗೂ ನಿಲುಕದ ಇನ್ಯಾವ ವಿಶೇಷವಿದೆ ಹಾಡೆಂಬ ಗಾರುಡಿಯಲ್ಲಿ? ಉಳಿದ ಸಾವಿರಾರು ಹಾಡುಗಳಿಗಿರದ ಆ ಮಾಂತ್ರಿಕ ಶಕ್ತಿ ಒಂದು ನಿರ್ದಿಷ್ಟ ಹಾಡಿಗೇ ಒಲಿದುದಾದರೂ ಹೇಗೆ?

 

ಲಕ್ಷ್ಮೀನಾರಯಣ ಭಟ್ಟರ ಕೆಲವು ಭಾವಗೀತೆಗಳು, ಗುಲಾಮ್ ಅಲಿ ಮತ್ತು ಅಬೀದ ಪರ್ವೀನ್‌ಳ ಕೆಲವು ಗಝಲುಗಳು, ಕಿಶೋರ್ ಕುಮಾರನ ಒಂದೆರಡು ಅದ್ಭುತ ಹಾಡುಗಳು, ಕುಮಾರ್ ಸಾನು ಮೆಲೋಡಿಗಳು, ಸೋನು ನಿಗಂ ಧ್ವನಿಯಲ್ಲಿ ಮೂಡಿರುವ ಒಂದೆರಡು ಭಾವ ತೀವ್ರತೆಯ ಪದ್ಯ…ನನಗೆ ಇಂತಹಾ ಅನುಭೂತಿ ಕೊಟ್ಟಿವೆ. ಮನಸ್ಸಿಗೆ ಬೇಸರವಾದಾಗಲೆಲ್ಲಾ ಈ ಹಾಡುಗಳನ್ನು ಕೇಳಿ ಮನಸ್ಸು ಲಹರಿಗೆ ಬರುವಂತೆ ಮಾಡಬಲ್ಲ ಈ ಹಾಡುಗಳು…ಬದುಕಿನ ಸ್ವರಗಳೇನೋ ಎನ್ನುವಷ್ಟು ಆಪ್ಯಾಯಮಾನ. ಮನಸಿನ ಸುಪ್ತಸ್ವರಗಳಿಗೆ ದನಿಯಾಗುವ ಆಪ್ತಸ್ವರಗಳು. ಅಂತದ್ದೇನಿದೆ ಈ ಹಾಡುಗಳಲ್ಲಿ ಅಂತ ಎಷ್ಟೋ ಬಾರಿ ಯೋಚಿಸಿದರೂ ಉತ್ತರ ಇಂದಿಗೂ ಹೊಳೆದಿಲ್ಲ…ಬಹುಶಃ ಎಲ್ಲವೂ ಇರಬೇಕು.

 

ಹಾಗಂತ ಎಲ್ಲರ ಇಷ್ಟದ ಹಾಡುಗಳೂ ಒಂದೇ ಆಗಿರಬೇಕು..ಅಥವಾ ಒಂದೇ ರೀತಿಯದಾಗಿರಬೇಕು ಅಂತೇನಿಲ್ಲ. ನಮ್ಮ ನಮ್ಮ ಮನಸಿನ ಭಾವ, ರುಚಿ-ಅಭಿರುಚಿ, ಇಷ್ಟಾನಿಷ್ಟ, ಆಸಕ್ತಿ, ಸ್ವಭಾವ, ಹಿನ್ನೆಲೆಗಳಿಗೆ ಅನುರೂಪವಾಗಿ ಬೇರೆ ಬೇರೆ ವ್ಯಕ್ತಿಗಳಿಗೆ-ವ್ಯಕ್ತಿತ್ವದವರಿಗೆ ಬೇರೆಯದೇ ಹಾಡುಗಳು ರುಚಿಸಬಹುದು. ಆ ಹಾಡಿನೊಂದಿಗೆ ಉದ್ದೀಪನಗೊಳ್ಳುವ ಸುಪ್ತಮನಸ್ಸಿನ ಯಾವುದೋ ಭಾವಕ್ಕೆ, ನೆನಪಿಗೆ, ಆ ಹಾಡು ಹೊರಹೊಮ್ಮಿಸುವ ಅಂತರ್ಯದ ನುಡಿಗಳಿಗೆ ತಕ್ಕಂತೆ ಹಾಡು ಮನಸ್ಸನ್ನು ಸೆಳೆಯುತ್ತದೆ. ಹಾಡಿನ ಜನಪ್ರೀಯತೆಗೂ ಅದು ಆಪ್ತವಾಗುವ ಪರಿಗೂ ಸಂಬಂಧವಿರಬೇಕೆಂದೇನಿಲ್ಲ. ಗುಂಪಿನಲ್ಲಿದ್ದಾಗ ಕೇಳಿ ಖುಶಿಪಡುವ ಹಾಡು ಎಷ್ಟೋ ಬಾರಿ ಏಕಾಂತದಲ್ಲಿ ಕಿರಿಕಿರಿ ಹುಟ್ಟಿಸುವುದೂ ಇದೆ. ಆದರೆ ನಮ್ಮ ಚಿತ್ತಭಿತ್ತಿಯೊಳಗೆ ಅಚ್ಚೊತ್ತಿ ಕುಳಿತ ಹಾಡುಗಳಿಗೆ ಕರೆದಾಗಲೆಲ್ಲಾ ಕೈಹಿಡಿದು ಸಂತೈಸುವ ಅನನ್ಯ ಗುಣವಿರುತ್ತದೆ. ಯಾವ ಹೊತ್ತಿನಲ್ಲಿ ಕೇಳಿದರೂ..ಮನಸ್ಸು ಹಾಡಾಗುತ್ತದೆ…ಭಾವ ಲಹರಿ ಹರಿಯುತ್ತದೆ.

 

ವೋಡಾಫೊನ್ ಜಾಹೀರಾತಿನಲ್ಲಿ ಬರುವ ಕಭೀ ಕಭೀ..ಮೆರೆ ದಿಲ್ ಮೆ..ಖಯಾಲ್ ಆತಾ ಹೈ ಹಾಡು ವ್ಯಕ್ತಿಯೊಬ್ಬನ ಬದುಕಿನುದ್ದಕ್ಕೂ ಪಸರಿಸುವ ಪರಿಯನ್ನು ಕಂಡಾಗ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹೇಳಲು…ಇಷ್ಟೆಲ್ಲಾ ಬರೆಯಬೇಕಾಯ್ತು.ಆ ಜಾಹಿರಾತಿನ ಕಾನ್ಸೆಪ್ಟ್, ಉದ್ಧೇಶ ಬೇರೆಯದೇ ಆದರೂ….ಒಂದು ಹಾಡು ಬದುಕಿನಲ್ಲಿ ಹೇಗೆಲ್ಲಾ ಹಾಸುಹೊಕ್ಕಾಗಬಹುದು ಅಂತ ಯೋಚಿಸಿದಾಗ..ಹೌದಲ್ಲ..ಎಷ್ಟು ಸತ್ಯ ಅನ್ನಿಸಿತು. ಈ ಬರಹ ಓದಿದ ಮೇಲೆ, ನಿಮ್ಮನ್ನು ಕಾಡಿದ ಇಂತಹಾ ಹಾಡುಗಳ ಸ್ಮೃತಿ ನಿಮ್ಮನ್ನಾವರಿಸಲಿ….ತನ್ಮೂಲಕ ನಿಮ್ಮ ಬದುಕು ಹಾಡಾಗಲಿ ಎಂಬ ಹಾರೈಕೆಗಳೊಂದಿಗೆ

                                                ವಿಜಯರಾಜ್ ಕನ್ನಂತ್

ನೆನಪಿನ ಸುರುಳಿಯೆಂದರೆ ಹಾಗೇ ಅಲ್ಲವೇ? ಅಕಾರಣವಾಗಿಯೋ ಸಕಾರಣವಾಗಿಯೋ ಒಮ್ಮೆ ಬಿಚ್ಚಿಕೊಂಡಿತೆಂದರೆ ತನ್ನ ಸುಳಿಯೊಳಗೆಳೆದುಕೊಂಡು ನಮ್ಮನ್ನು ಸುತ್ತಿಸಿ, ಗಿರಗಿಟ್ಲೆಯಾಡಿಸಿ ಒಂದು ಘಳಿಗೆ ಈ ಲೋಕದ ಕೊಂಡಿಯೇ ಕಳಚಿದಂತಾಗಿ ನಾವು ಕಳೆದುಹೋಗುವಂತೆ ಮಾಡುತ್ತದೆ. ಅಂತೆಯೇ ಎಪ್ರಿಲ್ ತಿಂಗಳು ಬಂತೆಂದರೆ ಸಾಕು… ನೆನಪಿನ ಕೋಶದೊಳಗೊಂದು ಪುಟ್ಟ ಕದಲಿಕೆ. ಅದಕ್ಕೆ ಕಾರಣ ಈ ತಿಂಗಳ ಅಖೈರಿಗೆ ಬರುವ ಕಮಲಶಿಲೆ ಜಾತ್ರೆ… ಮೊಗೆದಷ್ಟೂ ಸವಿನೆನಪುಗಳು ಉಕ್ಕಿ ಬರುವ ಅಕ್ಷಯ ಪಾತ್ರೆ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಮಡಿಲಿನಲ್ಲಿ ನಿದ್ರಿಸಿದಂತೆ ಕಾಣುವ ನಮ್ಮೂರು ಹಳ್ಳಿಹೊಳೆ(ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು). ಸುತ್ತಮುತ್ತಲಿನ ಊರುಗಳಾದ ಹಳ್ಳಿಹೊಳೆ, ಎಡಮೊಗೆ, ಸಿದ್ಧಾಪುರ, ಚಕ್ರಮೈದಾನ…ಹೀಗೆ ಈ ಎಲ್ಲ ಊರುಗಳ ನಡುವೆ ತೊಟ್ಟಿಲಿನಂತಿರುವ ಊರೇ ಕಮಲಶಿಲೆ. ಎಲ್ಲರ ಆರಾಧ್ಯದೈವವಾಗಿ ಕುಬ್ಜಾ ನದಿಯ ತಟದಲ್ಲಿ ನೆಲೆಯಾದವಳು ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ. ಎಪ್ರಿಲ್ ತಿಂಗಳ ಕೊನೆಯಲ್ಲಿ ಬರುವುದೇ ಈಕೆಯ ಜಾತ್ರಾ ಮಹೋತ್ಸವ…ಯಾನೆ ಕಮಲಶಿಲೆ ಹಬ್ಬ.

 

ಕಮಲಶಿಲೆಈ ಹೆಸರೇ ಒಂದು ಬೆರಗು..ಪುಳಕ. ಊರಿಗೆ ಈ ಹೆಸರು ಬಂದಿದ್ದಾದರೂ ಹೇಗೆಂದು ಹುಡುಕಹೊರಟರೆ ಭಿನ್ನವಾದ ಅಭಿಪ್ರಾಯಗಳು ಸಿಗುತ್ತವೆ. ಅಲ್ಲಿರುವ ಕಮ್ಮಾರ ಸಾಲೆಯಿಂದಾಗಿ ಬಂದ ಹೆಸರೇ ಕಾಲಾಂತರದಲ್ಲಿ ಹಲವರ ನಾಲಿಗೆಯ ಮೇಲಾಡಿ ಬದಲಾವಣೆಗೊಂಡು ಕಮಲಶಿಲೆ ಆಯಿತೆಂದು ಒಂದು ಐತಿಹ್ಯವಾದರೆ, ಕಮಲದಲ್ಲಿ ಉದ್ಭವವಾದ ಶಿಲೆಯೇ ಕಮಲಶಿಲೆಎಂಬುದು ಸ್ಥಳಪುರಾಣದಲ್ಲಿರುವ ಪ್ರತೀತಿ. ಹೆಸರಿನ ಕಥೆ ಏನೇ ಇದ್ರೂ ಇಲ್ಲಿನ ಜಾತ್ರಾ ಮಹೋತ್ಸವ ಅರ್ಥಾತ್ ಊರವರ ಬಾಯಲ್ಲಿ ಹಬ್ಬಎಂದು ಕರೆಸಿಕೊಳ್ಳುವ ಆ ಸಂಭ್ರಮ ಸಡಗರಗಳಿಗೆ ಶಬ್ದರೂಪ ಕೊಡೋಕೆ ನನ್ನ ಬರವಣಿಗೆಯ ತಾಕತ್ತು ಕಮ್ಮಿಯೆಂದೇ ನನ್ನ ಅನಿಸಿಕೆ. ಆದರೂ ಬಾಲ್ಯಕಾಲದಲ್ಲಿ ಕಂಡು ಭಾಗಿಯಾದ ಆ ಖುಷಿಯ ಒಂದು ಝಲಕ್ ಇಲ್ಲಿದೆ.

 

ಮಾರ್ಚ್ ತಿಂಗಳು ಬಂತೆಂದರೆ ಸಾಕು ವಾರ್ಷಿಕ ಪರೀಕ್ಷೆಯ ಗಡಿಬಿಡಿ. ಪರೀಕ್ಷೆಯ ರಗಳೆ ಏನೇ ಇದ್ರೂ ಮನಸ್ಸು ಆಗಲೇ ಮುಂದೆ ಬರುವ ಬೇಸಿಗೆ ರಜೆಯ ನೆನಪಿನಲ್ಲಿ ಮಂಡಿಗೆ ತಿನ್ನಲು ಶುರುವಿಟ್ಟಿರುತ್ತದೆ. ಪರೀಕ್ಷೆ ಮುಗಿದು ಎಪ್ರಿಲ್ ೧೦ರ ಪಾಸ್-ಫೈಲ್ನಾಮಾಂಕಿತ ಫಲಿತಾಂಶ ಪ್ರಕಟಣೆ ಮುಗಿಯುವಷ್ಟರಲ್ಲಿ ಊರಿನಲ್ಲಿರುವ ಅಷ್ಟೂ ಗೇರುಮರ, ಕಾಟುಮಾವಿನಮರಗಳು ನಮ್ಮ ಕೈಲಿರುವ ಕಲ್ಲಿಗೆ ಕಾದು ಕುಳಿತಿರುತ್ತವೆ. ಯಾವ ಮರದ ಹಣ್ಣು ಸಿಹಿ, ಯಾವುದು ಹುಳಿ, ಯಾವುದರಲ್ಲಿ ಸೊನೆ ಜಾಸ್ತಿ ಎಂಬೆಲ್ಲಾ ಲೆಕ್ಕಾಚಾರ ಗಣಿತದ ಸೂತ್ರಗಳಂತೆ ಬಾಯಿಪಾಠವಾಗಿರೋದ್ರಿಂದ ನಮ್ಮ ಪ್ಲಾನ್ ಆಫ್ ಆಕ್ಷನ್ಎಲ್ಲಾ ಪೂರ್ವನಿರ್ಧಾರಿತ. ಅಷ್ಟರಲ್ಲೇ ಬಂದಾಗಿರುತ್ತೆ ಕಮಲಶಿಲೆ ಹಬ್ಬ. ಮಕ್ಕಳಾದ ನಮಗೆಲ್ಲಾ ಹಬ್ಬಕ್ಕೆ ಯಾರು ಜಾಸ್ತಿ ದುಡ್ಡು ಒಟ್ಟುಮಾಡುತ್ತಾರೆಂಬ ಸ್ಪರ್ಧಾತ್ಮಕ ಪೈಪೋಟಿ. ನಂದು ಹೆಚ್ಚೋ ನಿಂದು ಹೆಚ್ಚೋ ಎಂದು ಗಳಿಗೆಗೊಮ್ಮೆ ಲೆಕ್ಕ ಮಾಡಿ, ಚಡ್ಡಿಕಿಸೆಯಲ್ಲಿರುವ ರೂಪಾಯಿ ಪಾವಲಿ, ಮಡಿಸಿದ ನೋಟು ಮುಟ್ಟಿನೋಡಿಕೊಳ್ಳುವುದರಲ್ಲೇ ಅವ್ಯಕ್ತ ಆನಂದ. ಮನೆಯವರು, ಮನೆಗೆ ಬಂದವರು ಎಂದು ಎಲ್ಲರ ಬಳಿ ಬೇಡಿಕೆ ಪಟ್ಟಿ ಸಲ್ಲಿಸಿ ಹಬ್ಬಕ್ಕೆ ಮುಂಚೆ ಹೇಗಾದರೂ ಮಾಡಿ ಎಲ್ಲರಿಗಿಂತ ಜಾಸ್ತಿ ದುಡ್ಡು ಸೇರಿಸಬೇಕೆಂಬುದೇ ಆಗಿನ ಒನ್ ಲೈನ್ ಅಜೆಂಡಾ. ಇವೆಲ್ಲದರ ನಡುವೆ ಈ ಸಲ ಹಬ್ಬದಲ್ಲಿ ಏನೆಲ್ಲಾ ತಗೋಬೇಕು… ಎಷ್ಟು ಐಸ್‌ಕ್ಯಾಂಡಿ ತಿನ್ನಬೇಕು..ಎಷ್ಟು ಸಲ ತೊಟ್ಟಿಲು (ಜೈಂಟ್ ವೀಲ್‌ನ ಮಿನಿಯೇಚರ್) ಹತ್ತಿ ಇಳಿಬೇಕು ಅದಕ್ಕೆಷ್ಟು ದುಡ್ಡು..ಇದಕ್ಕೆಷ್ಟು ಅಂತ ಚಾಣಕ್ಯನ ಅರ್ಥಶಾಸ್ತ್ರಕ್ಕಿಂತಲೂ ಒಂದು ಕೈ ಮೇಲು ನಮ್ಮ ಈ ಲೆಕ್ಕಾಚಾರ.

ಇದೆಲ್ಲಾ ಆಗಿ ಹಬ್ಬದ ದಿನ ಬಂತೆಂದರೆ ಅಲ್ಲಿಗೆ ಹೋಗೋದು ಹೇಗಪ್ಪಾ ಅನ್ನೋದು ಇನ್ನೊಂದು ತಲೆನೋವು. ಬಸ್ಸಿನಲ್ಲಿ ಹೋಗೋಣವೆಂದರೆ ಈಗಾಗಲೆ ೧೫೦ ಜನರನ್ನು ತುಂಬಿಸಿಕೊಂಡು ಆಮೇಲೆ ಕೊಸರಿಗೆಂಬಂತೆ ಟಾಪ್ನಲ್ಲೂ ೨೫ ಜನರನ್ನು ತುಂಬಿಸಿಕೊಂಡ ಬಸ್ಸು ಅನ್ನೋ ಆ ಟೈಟಾನಿಕ್ಏರೋಕೆ ಯಮ ಧೈರ್ಯವೇ ಬೇಕು. ನಡೆದುಕೊಂಡೋ ಇಲ್ಲಾ ಯಾವ್ದಾದ್ರೂ ವ್ಯಾನು, ಲಾರಿ, ಜೀಪು ಹತ್ತಿ ಅಂತೂ ಹಬ್ಬದಗುಡಿ ಮುಟ್ಟೋ ಹೊತ್ತಿಗೆ ಸೂರ್ಯ ನೆತ್ತಿ ಸುಡುತ್ತಿರುತ್ತಾನೆ. ಆದ್ರೆ ಆ ಹುರುಪಿನಲ್ಲಿ ಬಿಸಿಲು-ಮಳೆ ಇದೆಲ್ಲಾ ಯಾರಿಗೆ ಗೋಚರವಾಗುತ್ತೆ. ಮೊದಲು ದೇವಸ್ಥಾನದ ಒಳಗೆ ಹೋಗಿ ಆಮೇಲೆ ಬಜಾರ್ (ಎಲ್ಲಾ ಮಾರಾಟ ನಡೆಯೋ ಸ್ಥಳ) ಸುತ್ತಿದ್ರಾಯ್ತು ಎಂದು ಕೈಹಿಡಿದುಕೊಂಡ ಮನೆಯವರ ಕಣ್ಣುತಪ್ಪಿಸಿ ಅದ್ಯಾವ ಮಾಯಕದಲ್ಲೋ ಪರಾರಿ. ಕೈಬೀಸಿ ಕರೆಯುತ್ತಿರುತ್ತೆ ಬಜಾರ್ಎಂಬ ಮಾಯಾಬಜಾರ್.

 

ಮೊಟ್ಟಮೊದಲು ಐಸ್‌ಕ್ಯಾಂಡಿ ಸಮಾರಾಧನೆ. ಈ ಐಸ್‌ಕ್ಯಾಂಡಿಯಲ್ಲಿ ಇರುತ್ತಿದ್ದ ಆಯ್ಕೆಗಳಾದ್ರೂ ಎಷ್ಟು? ಬೆಲ್ಲದಕ್ಯಾಂಡಿ, ಕ್ರೀಮ್, ಬಣ್ಣದಕ್ಯಾಂಡಿ. ಅದರಲ್ಲೇ ಸ್ವಲ್ಪ ವೆರೈಟಿಯದ್ದಂದ್ರೆ ಪ್ಲಾಸ್ಟಿಕ್ ಕೊಳವೆಯೊಳಗೆ ಬರುತ್ತಿದ್ದ ಉದ್ದನೆಯ ಪೆಪ್ಸಿ ( ಕೋಕ್-ಪೆಪ್ಸಿ ಅಲ್ಲ!). ಅಲ್ಲದೆ ಹಬ್ಬದ ಪ್ರಯುಕ್ತ ಎಲ್ಲದ್ದಕ್ಕೂ ಡಬ್ಬಲ್ ರೇಟು ಬೇರೆ. ಹಾಗಂತ ಐಸ್‌ಕ್ಯಾಂಡಿ ಬಿಟ್ಟವರುಂಟೇ? ಆಮೇಲೆ ಮನೆಗೆ ಹೋಗಿ ನಾನೆಷ್ಟು ಪೆಪ್ಸಿ ತಿಂದೆ, ನಿಂದೆಷ್ಟು ಅಂತ ಮಕ್ಕಳೊಳಗೆ ಸ್ಪರ್ಧೆ ಬೇರೆ ಇರುವಾಗ. ಈಗೆಲ್ಲಾ ಬಗೆಬಗೆಯ ಮಾಲ್‌ಗಳಲ್ಲಿ, ‘ಪಾರ್ಲರ್’ಗಳಲ್ಲಿ ಕೂತು, ಇರುವ ನೂರಾರು ತರದ ಸ್ಪೆಷಲ್ ಐಸ್‌ಕ್ರೀಮ್ ತಿಂದ್ರೂ ಹಬ್ಬದ ಗರದಲ್ಲಿ ನಾಲಿಗೆಯ ಮೇಲೆ ಕುಳಿತ ಬೆಲ್ಲದಕ್ಯಾಂಡಿ, ಪೆಪ್ಸಿಯ ಸವಿಯನ್ನು ಓಡಿಸೋಕೆ ಯಾವುದರಿಂದಲೂ ಸಾಧ್ಯವಿಲ್ಲ. ಇದೆಲ್ಲಾ ಮುಗಿದು ಮುಂದೆ ಬಂದ್ರೆ ಬಣ್ಣಬಣ್ಣದ ಆಟಿಕೆಗಳು, ಬೈನಾಕ್ಯುಲರ್, ರೀಲ್ ಹಾಕಿ ಚಿತ್ರ ನೋಡುವ ಕೆಮರಾ, ಕನ್ನಡಕ , ಪುಗ್ಗ, ಪೀಪಿ, ರಬ್ಬರ್‌ಹಾವು…ಹೆಸರೇ ಗೊತ್ತಿಲ್ಲದ ಹಬ್ಬದಗುಡಿಯ ತರಹೇವಾರಿ ಆಟಿಕೆಗಳ ಆಕರ್ಷಣೆ. ಅಷ್ಟರಲ್ಲಿ ಹುಡುಕಿಕೊಂಡು ಬಂದ ಹಿರಿಯರ ಒತ್ತಾಯಕ್ಕೋ ಎಂಬಂತೆ ಜನಜಂಗುಳಿಯ ನಡುವೆಯೇ ದೇವರಿಗೆ ಒಂದು ಸುತ್ತು ಬಂದ ಶಾಸ್ತ್ರ ಮುಗಿಸಿ ನಮಸ್ಕಾರ ಮಾಡಿ, ಘಮ್ಮೆನ್ನುವ ಗಂಧ ಹಣೆಗೆ ಹಚ್ಚಿಕೊಂಡು ಹೊರಬಂದರೆ ಇನ್ನೊಂದು ಸುತ್ತಿನ ತಿರುಗಾಟಕ್ಕೆ ತಯಾರಾದಂತೆ. ಎಲ್ಲರಿಗೂ ಪ್ರಸಾದ ರೂಪದಲ್ಲಿ ಊಟದ ವ್ಯವಸ್ಥೆ ಇರುತ್ತದಾದ್ರೂ ಹೊರಗಿನ ಸೆಳೆತದ ಮುಂದೆ ಊಟ-ತಿಂಡಿಯ ಗೊಡವೆ-ರಗಳೆ ಯಾರಿಗೆ ಬೇಕು ಅಲ್ವಾ?

 

ದೊಡ್ಡ ವ್ಯಾಪಾರಸ್ಥರ ಶೈಲಿಯಲ್ಲಿ ಆಟಿಕೆಗಳ ಅಂಗಡಿಯಲ್ಲಿ ಅದಕ್ಕೆಷ್ಟು, ಇದಕ್ಕೆಷ್ಟು ಅಂತ ವಿಚಾರಿಸುತ್ತಾ, ಕಿಸೆಯಲ್ಲಿ ಉಳಿದ ಕಾಸನ್ನು ಮನಸ್ಸಲ್ಲೇ ಲೆಕ್ಕ ಹಾಕಿ, ಆಮೇಲೆ ತೊಟ್ಟಿಲು-ಕುದುರೆ ಮೇಲೆ ಕುಳಿತುಕೊಳ್ಳಲು ಸಾಕಷ್ಟು ಮಿಗಿಸಿಕೊಂಡು, ಚೌಕಾಸಿಮಾಡಿ ಒಂದಿಷ್ಟು ಆಟಿಕೆಕೊಂಡುಕೊಂಡು ಹಬ್ಬದ ಗರದಲ್ಲಿ ಗಿರಗಿರನೆ ಸುತ್ತಿದ್ದಾಯ್ತು. ಹೆಣ್ಣು ಮಕ್ಕಳಿಗೇ ಮೀಸಲಾದ ಬಳೆ-ಕ್ಲಿಪ್ಪು-ರಿಬ್ಬನ್ ಅಂಗಡಿಗಳನ್ನು ಬಿಟ್ಟು, ಮಿಠಾಯಿ ಹೇಗೂ ಮನೆಯವರು ಕೊಂಡುಕೊಳ್ತಾರೆ ಎನ್ನುವ ಧೈರ್ಯದಲ್ಲಿ ಆ ಅಂಗಡಿಗಳನ್ನೂ ಬದಿಗೆ ಹಾಕಿ ಮುಂದೆ ಸಾಗಿದ್ರೆ ತೆರೆದುಕೊಳ್ಳುತ್ತೆ ಇನ್ನೊಂದೇ ಮಾಯಾಲೋಕ. ತೊಟ್ಟಿಲು ಅನ್ನೋ ಮಿನಿ ಜೈಂಟ್ ವ್ಹೀಲ್ ಹತ್ತಿ ಕುಳಿತರೆ ಅದು ಸುತ್ತುವ ಭರದಲ್ಲಿ ಅರ್ಧ ಭಯ, ಅರ್ಧ ಖುಷಿ, ಜೊತೆಗೊಂದಿಷ್ಟು ಉದ್ವೇಗ-ಥ್ರಿಲ್. ಜಗತ್ತಿನ ತುತ್ತತುದಿಯಲ್ಲಿದ್ದೇವೋ ಅನ್ನುವ ಅನುಭವ. ೨೫ ಸುತ್ತು ಅಂತ ಹೇಳಿ ಬರೀ ೨೦ ಸುತ್ತಿಗೆ ಸುತ್ತಿಸುವವನು ನಿಲ್ಲಿಸಿದಾಗ ಬೇಜಾರಾದ್ರೂ, ಕೆಳಗಿಳಿದು ಮತ್ತೊಮ್ಮೆ ಕಿಸೆಮುಟ್ಟಿನೋಡಿಕೊಂಡು ಇನ್ನೊಂದು ಸುತ್ತು ಸುತ್ತುವ ಆಸೆಯಲ್ಲಿ ಮೀನಮೇಷ ಎಣಿಸುತ್ತಿರುವಾಗಲೇ ಕೇಳಿಸುತ್ತೆ ಮೈಕಿನಲ್ಲಿ ಕೂಗಿ ಕರೆವ ಜಾದೂ ಪ್ರದರ್ಶನದ ಪ್ರಚಾರ. ಸಣ್ಣಪುಟ್ಟ ಟ್ರಿಕ್ಗಳನ್ನೇ ಬಾಯಿಬಿಟ್ಟುಕೊಂಡು ನೋಡಿ ಹೊರಬಂದಾಗ ಮುಕ್ಕಾಲು ಪಾಲು ಹಬ್ಬ ಮುಗಿದಂತೆ! ತೊಟ್ಟಿಲು ಏರೋಕೆ ಹೆದರಿಕೆ ಇರೋರಿಗೆ ಬೇಕಿದ್ರೆ ಗೋಲಾಕಾರದಲ್ಲಿ ಸುತ್ತುವ ಕುದುರೆ ಸವಾರಿನೂ ಇದೆ.

 

ಈ ಮಾಯಾಬಜಾರಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ದಣಿದ ಹೊಟ್ಟೆ ತಾಳಹಾಕುತ್ತಿರುತ್ತದೆ. ಬಣ್ಣಹಾಕಿದ ಶರಬತ್ತೊಂದನ್ನು ಕುಡಿದು, ಮನೆಯವರು ಹಣ್ಣು-ಕಾಯಿ ಮಾಡಿಸಿ ತಂದ ಬಾಳೆಹಣ್ಣುಗಳೆರಡು ಹೊಟ್ಟೆ ಸೇರಿದ ಮೇಲೆ ಬೇಕಾದ್ರೆ ಮನೆಯವರ ಜೊತೆ ಇನ್ನೊಂದು ರೌಂಡ್ ಹೋಗೋಕೆ ಸಿದ್ಧ. ಜೊತೆಗೆ ಅವರೇ ಕಾಸುಕೊಟ್ಟು ಏನನ್ನಾದ್ರೂ ಕೊಡಿಸಲಿ ಎಂಬ ಗುಪ್ತ ನಿರೀಕ್ಷೆ ಬೇರೆ. ಇಷ್ಟೆಲ್ಲಾ ಮುಗಿಯೋ ಹೊತ್ತಿಗೆ ಬಯ್ಯಿನ ತೇರು(ಸಂಜೆ ಹೊತ್ತಿಗೆ ಎಳೆಯುವ ರಥ) ಎಳೆಯುವ ಹೊತ್ತಾಗಿರುತ್ತೆ. ಬೃಹದಾಕಾರದ ತೇರನ್ನು ಕಟ್ಟಿದ ಹಗ್ಗದ ಸಹಾಯದಿಂದ ಎಳೆಯುತ್ತಾ ಭಕ್ತಿ-ಆವೇಶಗಳಿಂದ ಜಯಕಾರಗೈಯ್ಯುವ ಜನರ ಘೋಷದ ನಡುವೆ ಮಂದಗಮನೆಯಂತೆ ಸರಿದುಬರುವ ತೇರೆಂಬೋ ತೇರನ್ನೇ ಬಿಟ್ಟಗಣ್ಣುಗಳಿಂದ ನೋಡುತ್ತಾ ಮನೆಕಡೆ ಹೊರಟರೆ ದಣಿದ ಕಾಲುಗಳೇಕೋ ಮುಷ್ಕರ ಹೂಡುತ್ತವೆ. ಆದರೆ ಈ ಸಂಭ್ರಮದಿ ಭಾಗಿಯಾಗಿ ನಲಿದಾಡಿದ ಮನಸ್ಸು ಅರ್ಧ ಖುಷಿಯಿಂದಿದ್ರೆ-ಹಬ್ಬ ಮುಗಿದೇ ಹೋಗಿದ್ದಕ್ಕೆ ಅರ್ಧ ಬೇಜಾರು. ಮುಂದಿನ ಹಬ್ಬಕ್ಕೆ ಇನ್ನೂ ಒಂದು ವರ್ಷ ಕಾಯಬೇಕಲ್ಲಾ ಅಂತ ಸಂಕಟ.

ಹಬ್ಬ ಮುಗಿದ ಮೇಲೆ ಆ ಜಾತ್ರೆ ನಡೆದ ಬಯಲಿಗೆ ಹೋಗಿ ನೋಡಿದ್ರೆ ಅಲ್ಲೇನಿದೆ…ಜಾತ್ರೆ ಮುಗಿದ ಮೇಲೆ ನಡೆದ ಸಂಭ್ರಮಕ್ಕೆ ಸಾಕ್ಷಿ ಹೇಳುವ ಅಳಿದುಳಿದ ಕಸಕಡ್ಡಿ-ಶೇಷವನ್ನು ಬಿಟ್ಟು. ಬದುಕಿನ ಜಾತ್ರೆಯೂ ಹೀಗೆಯೇ ಅಲ್ಲವೆ? ನಿಮ್ಮ ಬಾಲ್ಯಕಾಲದ ಹಬ್ಬದ ನೆನಪು ಕೂಡಾ ಹೀಗೆ ಇದೆಯೇ?

                               -ವಿಜಯ್ ರಾಜ್ ಕನ್ನಂತ್

ಬಹುಶಃ ಇದನ್ನು ಬರೆಯಲು ಹೊರಟರೆ ಒಂದು ಖಂಡಕಾವ್ಯಕ್ಕೆ ಆಗಿ ಮಿಕ್ಕುವಷ್ಟು ಬರೆಯಬಹುದೇನೋ ಅನ್ನಿಸುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ! ಹಾಗಾಗಿ ನಾನು ಅತಿಯಾಗಿ ಇಷ್ಟಪಡುವ ಅತ್ಯಂತ ಅಚ್ಚುಮೆಚ್ಚಿನ ಲೇಖಕ/ಲೇಖಕಿಯರ ಬಗ್ಗೆ ಅವರ ಬರಹ-ಪುಸ್ತಕಗಳು ನಂಗೆ ಯಾಕೆ ಇಷ್ಟ ಆಯ್ತು ಅನ್ನೋದನ್ನು ಹೀಗೆ ಹೇಳುತ್ತಾ ಹೋಗ್ತಿನಿ…ಒಂದು ಸಲ ಒಬ್ಬೊಬ್ಬರ ಬಗ್ಗೆ ಬರೆದ್ರೆ ನಾನು ಕೂಡ ಸ್ವಲ್ಪ ವಿಸ್ತೃತವಾಗಿ ಬರೀಬಹುದು. ಓದಿ ಖುಷಿಯಾದ್ರೆ ಆಗಲೇ ನನ್ನ ಈ ಬರಹಕ್ಕೂ ಒಂದು ಅರ್ಥ… ಓದಿ ನಿಮಗೂ ಈ ಎಲ್ಲಾ ಬರಹಗಾರರ ಪುಸ್ತಕ ಓದಬೇಕು ಅನ್ನಿಸಿ ಅವರನ್ನೆಲ್ಲಾ ಓದಲು ಹೊರಟೀರಂದ್ರೆ ನಾನು ಧನ್ಯ.

ನನ್ನ ಅತ್ಯಂತ ಪ್ರೀತಿಪಾತ್ರರು ಯಾರ್ಯಾರೆಂದು ಮೊದಲು ಹೇಳಿ ಬಿಡ್ತೀನಿ. ವೈದೇಹಿ, ಪೂಚಂತೇ, ಕುವೆಂಪು, ಶಿವರಾಮ ಕಾರಂತ್, ರವಿ ಬೆಳಗೆರೆ, ಜಯಂತ್ ಕಾಯ್ಕಿಣಿ, ವಿವೇಕ್ ಶ್ಯಾನುಭಾಗ್,  ವಸುಧೇಂದ್ರ, ಜೋಗಿ, ಚಂದ್ರಶೇಖರ್ ಆಲೂರು, ಶಾಂತಾರಾಮ ಸೋಮಯಾಜಿ, ನೇಮಿಚಂದ್ರ, ಬಿ.ಜಿ.ಎಲ್. ಸ್ವಾಮಿ, ಶ್ರೀವತ್ಸ ಜೋಶಿ, ಸುನಂದಾ ಪ್ರಕಾಶ್, ಅಲಕಾ ತೀರ್ಥಹಳ್ಳಿ , ನಾ.ಡಿಸೋಜ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ ಬಿಡಿ. ಇವರಲ್ಲಿ ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟ. ಇವರಲ್ಲಿ ಕೆಲವರ ಕುರಿತು ನನಗನ್ನಿಸಿದ್ದನ್ನು ಹೀಗೆ ಹೇಳುತ್ತಾ ಹೋಗುತ್ತೇನೆ. ಓದಿ ನಿಮಗನ್ನಿಸಿದ್ದನ್ನು ಹಂಚಿಕೊಂಡರೆ ಅಥವಾ ಈ ಲೇಖಕರ ಬಗ್ಗೆ ಇನ್ನೇನಾದರೂ ಅಭಿಪ್ರಾಯ ಇದ್ದರೂ ತಿಳಿಸಿ.

 

ಶುರುವಿಗೆ ನನ್ನ ಅಚ್ಚುಮೆಚ್ಚಿನ ಲೇಖಕಿ ವೈದೇಹಿಯವರ ಕುರಿತು ಮುಂದಿನ ಲೇಖನದಲ್ಲಿ ಬರೆಯಲು ಶುರು ಮಾಡ್ತೀನಿ…ಸರಿ ತಾನೆ?    – ವಿಜಯ್ ರಾಜ್ ಕನ್ನಂತ್

 

ಅಂತೂ ಇಂತೂ….. ವೋಟು ಬಂತು…

Posted: ಏಪ್ರಿಲ್ 8, 2008 in ವಿಚಾರ
ಟ್ಯಾಗ್ ಗಳು:,

ಮೊನ್ನೆ ಮೊನ್ನೆಯವರೆಗೆ ಚುನಾವಣೆ ಯಾವಾಗ ಮಾರಾಯ್ರೆ ಅಂತ ಕೇಳಿದ್ರೆ ಮೇ ಬಿ ಇನ್ ಮೇ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಎಲ್ಲರೂ ಉತ್ರಾ ಕೊಡ್ತಾ ಇದ್ರು. ಅದ್ರೆ ಈಗ ಎಲ್ಲಾ ಅನಿಶ್ಚಿತತೆ-ಗೊಂದಲಗಳಿಗೆ ತೆರೆ ಬಿದ್ದು ಮೂರು ಹಂತಗಳಲ್ಲಿ ಮತದಾನ ನಡೆಯುವ ಸುದ್ದಿ ಹೊರಬಿದ್ದಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಕ್ಷೇತ್ರ ಪುನರ್ವಿಂಗಡನೆ ಎಲ್ಲಾ ಮುಗಿದು ಕೊನೆಗೂ ಮತದಾನ ನಡೆಸೋಕೆ ಹಸಿರು ನಿಶಾನೆ ಸಿಕ್ಕಿದೆ. ಟಿಕೇಟ್ ಆಕಾಂಕ್ಷಿಗಳ ನೂಕು-ನುಗ್ಗಲು, ಲಾಬಿ, ಒತ್ತಡದ ತಂತ್ರಗಳೆಲ್ಲಾ ಆಯಾ ಪಕ್ಷಗಳ ಕಚೇರಿ ಮುಂದೆ ಆಗಲೇ ನಡೆದು ಇದೀಗ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಇನ್ನೇನು ಹೊರಬೀಳಲಿದೆ. ಮುಂದಿನ ೫ ವರ್ಷವಾದರೂ ನಾಟಕ-ಪ್ರಹಸನಗಳಿಲ್ಲದ ಸುಭದ್ರ ಸರ್ಕಾರ ಚುನಾಯಿಸಲು ಪ್ರಜೆಗಳೆಂಬೋ ಪ್ರಭುಗಳು ಸಿದ್ಧರಾಗಬೇಕಿದೆ.

ಇನ್ನು ಶುರುವಾಗುತ್ತೆ ಪ್ರಚಾರದ ಸುಗ್ಗಿ; ಭರವಸೆಗಳ ಸುರಿಮಳೆ; ಹೊಗಳಿಕೆ ತೆಗಳಿಕೆಗಳ ಪರ್ವಕಾಲ. ತಕ್ಕಡಿಯ ಮೇಲೆ ಕಪ್ಪೆ ತೂಗಿದಂತೆ ಭಾಸವಾಗುವ ಹಾಗೆ ನಾಯಕರ ವಲಸೆ ಹಾರಾಟ…ಆ ಪಕ್ಷದಿಂದ ಈ ಪಕ್ಷಕ್ಕೆ; ಇಲ್ಲಿಂದ ಇನ್ನೆಲ್ಲಿಗೋ. ಹಿಂದೆ ನೀಡಿದ ಹಳೇ ಭರವಸೆಯೆಂಬ ಮದ್ಯವನ್ನೇ ಹೊಸ ಪ್ರನಾಳಿಕೆಯೆಂಬ (ಪ್ರನಾಳ) ಬಾಟಲಿಯಲಿಟ್ಟು, ಮತದಾರರಿಗೆ ಕುಡಿಸುತ್ತಾರೆ. ವರ್ಷಾನುಗಟ್ಟಲೆ ಕಾಣಬಯಸಿದರೂ ಕೈಗೆ ಸಿಗದವರು ಈಗ ನಿಮ್ಮ ಕೈ ಹಿಡಿದು ಬೇಡುವರು. ನಿಮ್ಮನ್ನು ಕಾಲಕಸದಂತೆ ಕಂಡವರೇ ಈಗ ನಿಮ್ಮ ಕಾಲು ಹಿಡಿಯಲೂ ಹೇಸುವುದಿಲ್ಲ. ಆದರೂ ಒಂದೇ ಒಂದು ಸಮಾಧಾನ. ಬಿಹಾರ ಮಾದರಿಯಂತೆ ಹೇಗಾದರೂ ಗೆಲ್ಲಬೇಕೆಂದು…ಬೂಥ್ ಕ್ಯಾಪ್ಚರಿಂಗ್‌ನಂತಹ ಅನಿಷ್ಟ ಇನ್ನೂ ದೊಡ್ಡ ಪ್ರಮಾಣದಲ್ಲಿ ನಮ್ಮಲ್ಲಿಗೆ ಬಂದಿಲ್ಲ. ಹೆದರಿಸಿ ಬೆದರಿಸಿ ವೋಟು ಪಡೆಯೋ ಉದಾಹರಣೆ ಅಲ್ಲೊಂದು ಇಲ್ಲೊಂದು ಇರಬಹುದಾದರೂ ಬಹುತೇಕ ಮನವೊಲಿಕೆ-ಆಮಿಷಗಳ ಹಂತಕ್ಕೇ ಸೀಮಿತವಾಗಿದೆ. ಈ ರೀತಿ ಕಡಿಮೆ ಅನ್ಯಾಯ ಕಂಡು ಸಧ್ಯ..ಇಷ್ಟೇ ಅಲ್ವಾ ಅನ್ನಬೇಕಾದ ದುರ್ಗತಿ…ನಮ್ಮ ಪ್ರಜಾಪ್ರಭುತ್ವದ ದುರಂತ.

 

ಸ್ಟಾರ್ಸ್ ಎಲ್ಲಾ ಬೆಗ್ಗರ್ಸು ಆದ್ರಲಾ…

ತಿರುಬೋಕಿ ಪೊರ್ಕೀನೂ ಸ್ಟಾರ್..ಲಾ….

ಈ ಮ್ಯಾಜಿಕ್ ೫ ವರ್ಷಕ್ಕೊಂದ್ಸಲಾ…..

 

ಈ ಬಾರಿಯ ಕರ್ನಾಟಕದ ಚುನಾವಣಾ ರಂಗ ಹಿಂದೆಂದಿಗಿಂತಲೂ ಸಂಕೀರ್ಣವಾಗಿ ಕಾಣುತ್ತಿದೆ. ಬಾಜಪಾ’ (ಬಿ.ಜೆ.ಪಿ) ಯವರಿಗೆ ಸದಾ ಅನುಕಂಪದ ಅಲೆಯ ಜಪವೇ ಆಗಿದೆ. ಕುಮಾರನ ಪೌರುಷವು ಉತ್ತರನ ಪೌರುಷದ ತರಹ ಬರೀ ಹೇಳುವುದರಲ್ಲೇ ಉಳಿದರೂ ಕೂಡಾ, ಅವರು ಹುಟ್ಟಿಸಿದ ಭರವಸೆ, ಅವರ ಭಿನ್ನ ಯೋಚನಾಕ್ರಮ ಜನರಲ್ಲಿ ಹುಟ್ಟಿಸಿದ ವರ್ಚಸ್ಸಿನಲ್ಲಿ ಎಷ್ಟು ಭಾಗ ಮತವಾಗಿ ಪರಿವರ್ತನೆಗೊಳ್ಳುತ್ತದೆ ಎಂಬ ಆಧಾರದ ಮೇಲೆ ಜೆಡಿಎಸ್ ಭವಿಷ್ಯ ನಿರ್ಧಾರವಾಗುವುದು. ಜೊತೆಗೆ ಮುರಿದ ಮನೆಯಂತಾಗಿರುವ ಜಾತ್ಯತೀತ ದಳ ಹಿಂದಿನ ಸಾಧನೆ ಉಳಿಸಿಕೊಂಡರೆ ಅದೇ ಮಹತ್ಸಾಧನೆ ಎನ್ನಿಸಲಿದೆ. ಕೃಷ್ಣಾಗಮನದಿಂದ ಸಧ್ಯಕ್ಕೆ ಗೊಂದಲದ ಗೂಡಿನಂತಾಗಿರುವ ಕಾಂಗ್ರೆಸ್ ಮೂಲಮಂತ್ರ ಸ್ಥಿರತೆ ಆಗಲಿದೆ. ಬಂಗಾರಪ್ಪನವರ ಸೈಕಲ್ ಓಟ ಮತ್ತು ಮತ್ತು ಕುಮಾರಿ ಮಾಯವತಿಯವರ ಆನೆಯ ನಡಿಗೆ ಅವರ ಚಿಹ್ನೆಗೆ ಅನ್ವರ್ಥವಾಗಿರುವಂತೆ ಇದ್ರೆ ಹೆಚ್ಚು ಸಮಾಧಾನ ಕಾಂಗ್ರೆಸ್‌ನವರಿಗೆ ಅಂದ್ರೆ ತಪ್ಪಿಲ್ಲ.

ಇವೆಲ್ಲದಕ್ಕೆ ಕಳಶವಿಟ್ಟಂತೆ ಕ್ಷೇತ್ರಪುನರ್ವಿಂಗಡನೆಯಿಂದ ಯಾವ ಯಾವ ಮತ್ತು ಯಾರ ಯಾರ ಲೆಕ್ಕಾಚಾರ ಸಮೀಕರಣಗಳು ಅಡಿಮೇಲಾಗಲಿವೆ ಎಂದು ಕಾದು ನೋಡಬೇಕಾಗಿದೆ. ಮಿಕ್ಕಂತೆ ಅದೇ ಜಾತಿ ಮತ ಪಂಗಡ ಕೋಮು ಲೆಕ್ಕಾಚಾರ; ಕಾಟಾಚಾರಕ್ಕೆ ಚುನಾವಣಾ ಸಂಹಿತೆಯೆಂಬುದು ಯಾವತ್ತಿಗೂ ಲೆಕ್ಕಕ್ಕೇ ಬಾರ; ಇದೆಲ್ಲದರ ನಡುವೆ ಈ ಬಾರಿಯಾದರೂ ಬುದ್ಧಿವಂತ ಎಂದೇ ಕರೆಸಿಕೊಳ್ಳುವ ಮತದಾರ ತನ್ನ ಬುದ್ಧಿವಂತಿಕೆ ತೋರಿಸುತ್ತಾನಾ ಅಥವಾ ಹೊಸದೇ ಒಂದು ನಾಟಕಕ್ಕೆ ಮುನ್ನುಡಿ ಬರೀತಾನಾ…ಅನ್ನೋದು ಮೇ ೨೫ರ ತನಕ ಯಕ್ಷಪ್ರಶ್ನೆ. ಇನ್ನಾದರೂ ಒಂದು ಉತ್ತಮ ಜನಪರ ಸುಭದ್ರ ಸರಕಾರ ಬರಲಿ ಎಂಬುದು ಎಲ್ಲರ ಆಶಯ. ಪಕ್ಷ ಯಾವುದೇ ಇರಲಿ..ಉತ್ತಮ ಅಭ್ಯರ್ಥಿಗಳೇ ಆರಿಸಿ ಬರಲಿ ಎಂಬುದು ಹಾರೈಕೆ.

                    ವಿಜಯ್‌ರಾಜ್ ಕನ್ನಂತ್