Archive for ಮೇ 13, 2008

ನಿ.ಮ.ಮ.ಕ.ಮ.ಕ….. ಏನೂಂತ ಯೋಚಿಸ್ತಿದ್ದಿರಾ? ಈ ಅಕ್ಷರಗುಚ್ಛಗಳನ್ನು ಎಲ್ಲಾದರು ನೋಡಿದ್ದು ನೆನಪಿದೆಯಾ? ಹೈಸ್ಕೂಲ್ ದಿನಗಳನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಹತ್ತನೇ ತರಗತಿಯ ಕೊನೆಯ ದಿನಗಳು ಬಂದಾಗ ಎಲ್ಲರ ಕೈಲೂ ರಾರಾಜಿಸುವ ಆಟೋಗ್ರಾಫ್ ಹೆಸರಿನ ಪುಟ್ಟ ಪುಸ್ತಕವೇನಾದ್ರೂ ಇನ್ನೂ ನಿಮ್ಮ ಹಳೆಯ ಸಂಗ್ರಹದಲ್ಲಿ ಇದ್ದರೆ ಅದನ್ನೊಮ್ಮೆ ಮಗುಚಿ ಹಾಕಿ ಬಿಡಿ. ಅದರ ಯಾವುದಾದರೂ ಪುಟದಲ್ಲಿ ನಿಮಗೆ ಮೇಲಿನ ಅಕ್ಷರಗುಚ್ಛ ಸಿಕ್ಕೇ ಸಿಗುತ್ತೆ. ನಿಮ್ಮ ಮದುವೆಯ ಮಮತೆಯ ಕರೆಯೋಲೆ ಮರೆಯದೆ ಕಳುಹಿಸಿ ಎನ್ನುವುದರ ಹ್ರಸ್ವ ರೂಪವೇ ಇದು. ನೆನಪಾಯ್ತಾ? ಅತ್ತ ಕಿಶೋರಾವಸ್ಥೆಯೂ ಅಲ್ಲದ ಇತ್ತ ಪ್ರಬುದ್ಧ ವಯಸ್ಕರೂ ಅಲ್ಲದ ಅದೊಂತರದ ಸ್ಥಿತಿ. ನಿಮ್ಮಲ್ಲಿ ಎಷ್ಟು ಜನ ಆ ದಿನಗಳ ಸ್ನೇಹಿತರ ಜೊತೆ ಇನ್ನೂ ಸಂಪರ್ಕದಲ್ಲಿದ್ದೀರಾ ಲೆಕ್ಕ ಹಾಕಿ.

 

ಬಹುಶಃ ಆ ವಯಸ್ಸೇ ಹಾಗಿರಬೇಕು. ಜಗತ್ತೆಲ್ಲಾ ಸುಂದರವಾಗಿ ಕಾಣುತ್ತೆ. ಎಲ್ಲದರೆಡೆಗೂ ಕುತೂಹಲ; ಎಲ್ಲದರಲ್ಲೂ ಆಸಕ್ತಿ. ಸ್ನೇಹಕ್ಕೆ ಹಾತೊರೆಯುವ ಮನಸ್ಸು. ಕನಸುಗಳು ಮೊಟ್ಟೆಯಿಡುವ ವಯಸ್ಸು. ಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು, ಎಲ್ಲರೂ ನನ್ನನ್ನು ಗುರುತಿಸಬೇಕೆಂಬ ಹುಮ್ಮಸ್ಸು. ಭಾವ ತೀವ್ರತೆಯು ಪರಾಕಾಷ್ಠೆ ಮುಟ್ಟುವ ಕಾಲ.

 

ಹುಚ್ಚು ಕೋಡಿ ಮನಸು…

ಅದು ಹದಿನಾರರ ವಯಸು…

ಮಾತು ಮಾತಿಗೇಕೋ ನಗು…

ಮರುಗಳಿಗೆಯೆ ಮೌನ…..

 

ಆ ವಯಸ್ಸಿನಲ್ಲಿ ಏನೇ ಮಾಡಿದರೂ ಅದರಲ್ಲೊಂದು ತೀವ್ರತೆ, ಪ್ಯಾಷನ್ ಇರುತ್ತಿತ್ತು. ಬಹುಶಃ ನಾನು ಅತಿ ಹೆಚ್ಚು ಸ್ನೇಹಿತರನ್ನು ಬದುಕಿನ ಯಾವ ಘಟ್ಟದಲ್ಲಾದರೂ ಹೊಂದಿದ್ದರೆ ಅದು ಆ ದಿನಗಳಲ್ಲೇ ಇರಬೇಕು. ಆ ಸ್ನೇಹದ ಗಟ್ಟಿತನದ ಮಾತು ಎಂತೋ ಗೊತ್ತಿಲ್ಲ. ಆದರೂ ಆ ಕ್ಷಣದ ಸತ್ಯ ಎನ್ನುವ ಹಾಗೆ ಆ ಹೊತ್ತಿಗೆ ಏನೇ ಬಂದರೂ ಬಿಡಿಸಲಾಗದ, ಯಾರಿಂದಲೂ ಅಗಲಿಸಲಾಗದ ಬಂಧವಾಗಿರುತ್ತೆ.

 

ಈಗ ನೀವೆ ಒಮ್ಮೆ ಎಣಿಸಿನೋಡಿ. ಹೈಸ್ಕೂಲ್ ದಿನಗಳ ನಿಮ್ಮ ಜಿಗ್ರಿದೋಸ್ತಿಗಳಲ್ಲಿ ಎಷ್ಟು ಜನ ಇನ್ನೂ ನಿಮ್ಮ ಸ್ನೇಹಿತರಾಗಿದ್ದಾರೆ; ಕಡೇ ಪಕ್ಷ ಸಂಪರ್ಕದಲ್ಲಿದ್ದಾರೆ? ನೀವು ಬೌದ್ಧಿಕವಾಗಿ, ಸಾಮಾಜಿಕವಾಗಿ, ಆರ್ಥಿಕ ನೆಲೆಗಟ್ಟಿನಲ್ಲಿ ಬಲಿಯುತ್ತಾ ಬೆಳೆಯುತ್ತಾ ಹೋದಂತೆಲ್ಲಾ ಬದುಕಿನ ನಮ್ಮ ಪ್ರಯಾರಿಟಿಗಳೇ ಬೇರೆಯಾದಂತೆಲ್ಲಾ, ಬಾಳ ಪಯಣದಲ್ಲಿ ನಮ್ಮ ದಿಕ್ಕು ಗುರಿಗಳೆಲ್ಲಾ ಬೇರೆ ಬೇರೆಯಾಗಿ ಮುಂದೆ ಮುಂದೆ ಸಾಗಿದಂತೆಲ್ಲಾ ಒಂದು ಕಾಲದ ಜೀವದ ಗೆಳೆಯರೆಲ್ಲ ಎಲ್ಲಿದ್ದಾರೋ ಎಂದು ಗೊತ್ತಿಲ್ಲದಷ್ಟು, ಒಂದು ವೇಳೆ ಗೊತ್ತಿದ್ದರೂ ಪರಸ್ಪರ ಸಂಪರ್ಕಿಸಲಾಗದಷ್ಟು ದೂರಾಗಿಬಿಡುತ್ತೇವೆ. ಎಲ್ಲಾ ಗೆಳೆತನದ ಗತಿ ಹಾಗಾಗದೇ ಇರಬಹುದು. ಆದರೆ ಬಹುತೇಕ ಗೆಳೆಯ/ಗೆಳತಿಯರು ಎಲ್ಲೋ ಕಳೆದುಹೋಗಿರುತ್ತಾರೆ…. ಅವರ ಪಾಲಿಗೆ ನಾವು ಕಳೆದುಹೋದ ಹಾಗೆ…!! ನಾವು ಹೆಚ್ಚುಪ್ರಬುದ್ಧ(?)ರಾದಂತೆಲ್ಲಾ ಸಂಕುಚಿತರಾಗುತ್ತಾ ಹೋಗುತ್ತೇವೆಯೇ? ಸ್ವಾರ್ಥಿಗಳಾಗುತ್ತಾ ನಮ್ಮ ಪರಿಧಿ ಕಿರಿದಾಗುತ್ತಾ ಹೋಗುತ್ತದೆಯೇ? ಏನೋ ಗೊತ್ತಿಲ್ಲಪ್ಪ. ಆ ಹುಮ್ಮಸ್ಸು ಉತ್ಸಾಹಗಳೆಲ್ಲಾ ಬತ್ತಿ ಹೋಗಿ, ದಿನದ ಕೆಲಸ ಮುಗಿಸಿ…ಅಬ್ಬಾ ಸಧ್ಯ ಒಂದು ದಿನ ಕಳೀತಪ್ಪಾ ಎಂದು ಉಸ್ಸೆನ್ನುವುದರಲ್ಲಿಯೇ ನಾವು ಕಳೆದುಹೋಗಿ ಬಿಡುತ್ತೇವೆಯೇ? ಎಲ್ಲಾ ಬರೀ ಪ್ರಶ್ನೆಗಳು..

 

ಸ್ನೇಹಿತರು ಈಗಲೂ ಇರಬಹುದು. ಆದರೆ ಮುಂಚಿನ ಭಾವ ತೀವ್ರತೆಯಿಂದ ಯಾರನ್ನಾದರೂ ಹಚ್ಚಿಕೊಳ್ಳಬೇಕೆಂದರೆ ಮನಸ್ಸು ಯಾಕೋ ಹಿಂದೇಟು ಹೊಡೆಯುತ್ತದೆ. ನಮ್ಮ ಕೆಲಸ, ಸಂಸಾರ, ಮನೆ ಕಟ್ಟೋದು, ಸೈಟು ಕೊಳ್ಳೋದು ಹೀಗೆ ಬದುಕಿನ ಭದ್ರ ನೆಲೆಗಾಗಿನ ಜೂಟಾಟದಲ್ಲಿ ನಮ್ಮೊಳಗಿನ ಮಗು ಮನಸ್ಸಿನ ಆ ನಾವು ಕಳೆದುಹೋಗಿಬಿಟ್ಟಿರುತ್ತೇವೆ. ಎಲ್ಲಾ ಬೆರಗುಗಳನ್ನು, ಅಚ್ಚರಿಗೊಳ್ಳುವುದನ್ನು ಮರೆತೇಬಿಟ್ಟಿರುತ್ತೇವೆ. ಬದುಕು ನಿಂತ ನೀರಿನ ರಾಡಿ ಹೊಂಡದಂತಾಗುತ್ತದೆ. ಹಳೆಯ ಆಟೋಗ್ರಾಫ್ ಹಾಳೆ ತಿರುವಿದರೆ ಅಲ್ಲೇನಿದೆ? ಬರೀ ಖಾಲಿ ಹಾಳೆಗಳು ನಮ್ಮನ್ನು ಅಣಕಿಸಿ ನಕ್ಕಂತಾಗುತ್ತದೆ….ನಿಮ್ಮ ಅನುಭವ ಇದಕ್ಕಿಂತ ಭಿನ್ನವಾಗಿದ್ದರೆ ನಿಜವಾಗಿಯೂ ನೀವು ಅದೃಷ್ಟವಂತರು….ಬೇರೆಯಾಗಿದೆಯಾ… ನೀವೇ ಹೇಳ್ಬೇಕು..