Archive for ಮೇ, 2008

ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರುವು ತರುವ ಪ್ರಯಾಣ ಆಗಲಿದೆ ಅಂತಾ ಗೊತ್ತಿರಲಿಲ್ಲ. ತನ್ನ ನಗೆಚಟಾಕಿಗಳಿಂದ ಸಹ ಪ್ರಯಾಣಿಕರನ್ನು ನಗಿಸುತ್ತಾ ಇರುವಾಗ ಹೂಬಳ್ಳಿಯಂತಹ ಹುಬ್ಬಳ್ಳಿ ಹುಡುಗಿ ಕಣ್ಣಿಗೆ ಬೀಳ್ತಾಳೆ. ಸರಿ ಇನ್ನೇನು ಪ್ರೇಮ ಕಥೆ ಶುರು ಅಂತೀರಾ..? ಆದ್ರೆ ಕಥೆ ಬೇರೇನೆ ಇದೆ. ಮುಸ್ಸಂಜೆಯಲ್ಲಿ ನಿಧಾನವಾಗಿ ಆವರಿಸುವ ಕತ್ತಲೆಯ ತೆರೆಯಂತೆ ಹುಡುಗಿಯ ಮೊಗದಲಿ ಮ್ಲಾನತೆಯ ಮುಸುಕು… ಆಗ ಆತ್ಮವಿಶ್ವಾಸ ಮೂಡಿಸಲು ಪ್ರದೀಪ್ ಹಾಡ ತೊಡಗುತ್ತಾನೆ… ಏನಾಗಲಿ ಮುಂದೆ ಸಾಗು ನೀ…ಇಲ್ಲಿಂದ ಮುಂದಕ್ಕೆ ಕಥೆಯ ಜೊತೆ ಜೊತೆಗೆ ಸಾಗುವ ಹಾಡಿನ ಪಯಣ ಸುಮಧುರವಾಗಿದೆ.

 

ಇದು ರೇಡಿಯೋ ಮಿರ್ಚಿ ೯೮.೩ ಎಫ್.ಎಂ ಸಕ್ಕತ್ ಹಾಟ್…. ಈಗ ನಿಮ್ಮ ಮನೆಯ ಹುಡುಗ ಪ್ರದೀಪ್ ನಡೆಸಿ ಕೊಡುವ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಮುಸ್ಸಂಜೆ ಮಾತು…

 

ನಿಮ್ಮ ಊಹೆ ಸರಿ. ಪ್ರದೀಪ್ ಒಬ್ಬ ಆರ್.ಜೆ( ರೇಡಿಯೋ ಜಾಕಿ). ನೊಂದ ಹೃದಯಗಳಿಗೆ ಸಾಂತ್ವನ ನೀಡುವ, ಅವರಲ್ಲಿ ಭರವಸೆಯ ಪುಟ್ಟದೊಂದು ಕಿಡಿ ಹೊತ್ತಿಸುವ, ತನ್ನ ಮೆದು ಮಾತಲ್ಲೇ ಎಲ್ಲರ ಅರ್ಧ ನೋವು ಮರೆಸುವ ಮುಸ್ಸಂಜೆಮಾತು ಎಂಬ ಕಾರ್ಯಕ್ರಮ ನಡೆಸುವವನು ಇವನೇ.

 

ಇತ್ತ ನಾಯಕಿ ತನು (ರಮ್ಯ) ಕೂಡಾ ಬೆಂಗಳೂರಿಗೆ ಬಂದಿರ್ತಾಳೆ. ಅವಳು ತನ್ನ ಗೆಳತಿ ಶ್ವೇತಾಳ( ಅನು ಪ್ರಭಾಕರ್)  ಜೊತೆ ಇರಲು ಬಂದಿರುತ್ತಾಳೆ. ಸದಾ ತಾಯಿಯ ಫೋಟೋ ಮುಂದೆ ಮಂಕಾಗಿ ಕೂರುವ ತನು ಗೆಳತಿಯ ಬಲವಂತಕ್ಕೆ ಮುಸ್ಸಂಜೆ ಮಾತಿಗೆ ಕರೆ ಮಾಡುತ್ತಾಳೆ. ದುಃಖ ತಡೆಯಲಾಗದೆ ಮಾತು ನಿಲ್ಲಿಸುತ್ತಾಳೆ. ಮುಂದೊಂದು ದಿನ ತಾನೆ ಕರೆ ಮಾಡಿ ತನ್ನ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

 

ನೊಂದವರ ಕಷ್ಟಕ್ಕೆ ಮರುಗುವ ಪ್ರದೀಪ್ ಫೋನ್ ಮಾಡಿದ ಹುಡುಗನೊಬ್ಬನ ಗೆಳೆಯನ ಪ್ರಾಣ ಉಳಿಸಲು ತಾನೇ ಬೀದಿ ಬೀದಿ ತಿರುಗಿ ಚಂದಾ ಎತ್ತಿ ಬದುಕಿಸುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾಗುವ ನಾಯಕಿ ತನುಗೆ ಆವತ್ತು ರೈಲಿನಲ್ಲಿ ಸಿಕ್ಕಿದ ಆ ಹುಡುಗನೇ ಈ ಪ್ರದೀಪ ಅಂತ ಗೊತ್ತಾಗುತ್ತೆ. ಮುಂದೆ ಅವರಿಬ್ಬರಲ್ಲಿ ಸ್ನೇಹ ತಿರುಗಾಟ, ಹಾಡು-ಪಾಡು…ಇತ್ಯಾದಿ ಇತ್ಯಾದಿ. ಜೊತೆಗೆ ಪ್ರದೀಪನ ಕಾರ್ಯಕ್ರಮದ ಮೋಡಿ

 

ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ರಿಗೆ ಇಷ್ಟ. ಅದ್ರೆ ಸ್ನೇಹಾನೂ ಹಾಳಾದ್ರೆ ಅನ್ನೋ ಭೀತೀನೆ ಕಷ್ಟ. ಈ ನಡುವೆ ಬೇರೆಯಾಗಿದ್ದ ತಂದೆ- ಮಗಳ ಮಿಲನವಾಗುತ್ತೆ. ತನುವಿನ ಮದುವೆ ನಿಕ್ಕಿಯಾಗುತ್ತೆ. ಸುದ್ದಿ ಕೇಳಿದ ಪ್ರದೀಪನ ತಲೆ ಕೆಡುತ್ತೆ. ಮುಂದಿನ ಮುಸ್ಸಂಜೆಮಾತು…….. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡಿ ಕೇಳಿ ಆನಂದಿಸಿ

 

ಮೊತ್ತ ಮೊದಲನೆಯದಾಗಿ ಚಿತ್ರದ ಹಾಡುಗಳು ಅದ್ಭುತವಾಗಿದೆ. ವಿ.ಶ್ರೀಧರ್ ಅವರ ಸಂಗೀತ ಬಿಸಿಲುಗಾಲದಲ್ಲಿ ಮುಸ್ಸಂಜೆಹೂತ್ತು ಬೀಸಿ ಬರುವ ತಂಗಾಳಿಯಂತೆ ಹಿತಕರವಾಗಿದೆ. ಕೆಲವು ಟ್ಯೂನ್ಸ್ ಎಲ್ಲೋ ಕೇಳಿದ ಹಾಗಿದ್ಯಲ್ಲ ಅಂತಾ ಅನ್ಸಿದ್ರೂ ಕೂಡಾ ಸಂಗಿತಕ್ಕೆ ಡಿಸ್ಟಿಂಕ್ಷನ್ ಸಿಗಲೇ ಬೇಕು. ಹಾಗೆ ಇನ್ನಿಬ್ಬರು ಡಿಸ್ಟಿಂಕ್ಷನ್ ಅಭ್ಯರ್ಥಿಗಳು ಅಂದ್ರೆ ಕಿಚ್ಚ ಸುದೀಪ್ ಮತ್ತು ಮೋಹಕ ತಾರೆ ರಮ್ಯ ( ಇದು ನನ್ನ ಕಮೆಂಟ್ ಅಂತ ತಿಳೀಬೇಡಿ. ಹಾಗಂತ ಟೈಟಲ್ ನಲ್ಲಿ ಹಾಕಿದ್ದಾರೆ !) ಸುದೀಪ್ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಬಂದಿರುವುದು ಅದರಲ್ಲೂ ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿನ ಸುದೀಪ್ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾರೆ. ನಾಯಕ ಸುದೀಪ್ ಗಿಂತ ಕಲಾವಿದ ಸುದೀಪ್ ಇಲ್ಲಿ ಮೆಚ್ಚುಗೆಗಳಿಸುತ್ತಾರೆ. ರಮ್ಯ ಕೂಡಾ ಸ್ವಲ್ಪ ದಪ್ಪ ಆಗಿರೋದು ಬಿಟ್ರೆ ಅಭಿನಯ, ಕುಣಿತ ಎಲ್ಲಾದ್ರಲ್ಲೂ ಸೈ. ಅನು ಪ್ರಭಾಕರ್ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ಮಿಕ್ಕಂತೆ ಮಂಡ್ಯ ರಮೇಶ್ ಪ್ರತಿಭೆಗೆ ಇದಕ್ಕಿಂತ ಒಳ್ಳೆ ಪಾತ್ರ ಬೇಕು.  ಪ್ರಾಣೇಶ್ ಮತ್ತು ಕೃಷ್ಣೇಗೌಡರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಸ್ಯಕ್ಕೆ ಬಳಸಿಕೊಳ್ಳಬಹುದಿತ್ತು ಅನ್ಸುತ್ತೆ.

 

ಸೋನು ಶ್ರೇಯಾ ಹಾಡಿರುವ ನಿನ್ನ ನೋಡಲೆಂತೋ…, ಶ್ರೇಯಾ ಹಾಡಿರುವ ಆಕಾಶ ಭೂಮಿ, ಸೋನು ಹಾಡಿರುವ ಏನಾಗಲಿ ಮುಂದೆ ಸಾಗು ನೀ..ಹೇಮಂತ್ ಹಾಡಿರುವ ಟೈಟಲ್ ಟ್ರ್ಯಾಕ್ ಎಲ್ಲಾನು ಒಂದಕ್ಕಿಂತ ಒಂದು ಚೆನ್ನಾಗಿದೆ.

 

ಒಂದು ಸಣ್ಣ ಕಥೆಯ ಎಳೆಯನ್ನು ಹಾಡುಗಳ ಬಲೆಯಲಿ ನೇಯ್ದು, ಒಂದು ಸುಂದರ ಭಾವನಾತ್ಮಕ ಚಿತ್ರವನ್ನು ನಿರ್ದೇಶಕ ಮಹೇಶ್ ನೀಡಿದ್ದಾರೆ. ಆದರೆ ಇತ್ತೀಚಿನ ಅನೇಕ ಚಿತ್ರಗಳಲ್ಲಿ ಆಗುತ್ತಿರುವಂತೆ ಮೊದಲಾರ್ಧದ ನಿರೂಪಣೆಯ ಅಚ್ಚುಕಟ್ಟು ಎರಡನೇ ಭಾಗಕ್ಕೆ ಬರುವಲ್ಲಿ ಕಾಣೆಯಾಗಿದ್ದು ಚಿತ್ರದ ಒಟ್ಟಾರೆ ಪರಿಣಾಮದ ಮೇಲೆ ನೇರವಾಗಿ ಆಗಿದೆ. ಅಲ್ಲದೆ ಭಾವನಾತ್ಮಕ ಚಿತ್ರಗಳ ಬಹು ಮುಖ್ಯ ಅಂಶವಾದ ಸಂಭಾಷಣೆ ಇನ್ನಷ್ಟು ಗರಿಗರಿಯಾಗಿದ್ರೆ ಚೆನಾಗಿತ್ತೇನೋ. ಕೊನೇ ಪಕ್ಷ ಕ್ಲೀಷೆ ಅನ್ನಿಸುವ ಕೆಲವು ಡೈಲಾಗ್ ಕೈಬಿಟ್ಟಿದ್ರೂ ಸಾಕಿತ್ತೇನೋ! ಕಿಚ್ಚನ ಅಭಿಮಾನಿಗಳಿಗೆ ನಿರಾಶೆ ಅಗದಿರಲಿ ಅಂತಾ ಅಳವಡಿಸಿದ ಚಿತ್ರದ ಏಕೈಕ ಹೊಡೆದಾಟದ ದೃಶ್ಯದಲ್ಲಿ ಫೈಟಿಂಗ್ ಹಿನ್ನಲೆಯಲ್ಲಿ ಮ್ಯೂಸಿಕ್ ಬೀಟ್ಸ್ ನುಡಿಸಿದ್ದು ಒಂಥರಾ ಚೆನ್ನಗಿತ್ತು ಬಿಟ್ರೆ ಕಥೆಗೆ ಒಂಚೂರೂ ಬೇಕಿರಲಿಲ್ಲ. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಒಂದು ಸರಳ ಸುಂದರ ಚಿತ್ರ ಮುಸ್ಸಂಜೆ ಮಾತು.

                                                                   ವಿಜಯ್ ರಾಜ್ ಕನ್ನಂತ್

ಅಂಕಗಳು  (***)

 

* ತೀರ ಕಳಪೆ

** ಕಳಪೆ

*** ಸಾಧಾರಣ

**** ಉತ್ತಮ

***** ಅತ್ಯುತ್ತಮ

ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಯಾರೋ ಕಿಡಿಗೇಡಿಗಳು ರಾಜ್ ಕುಮಾರ್ ಪ್ರತಿಮೆಯನ್ನು ಭಗ್ನಗೊಳಿಸೋಕೆ ಯತ್ನಿಸಿದರು ಅಂತ. ಈ ಕೃತ್ಯದಿಂದ ಅಸಲು ಯಾರಿಗೆ ಏನು ಲಾಭ ಸಿಕ್ಕಿತೋ ಗೊತ್ತಿಲ್ಲ. ಯಾವುದೋ ಅನಾರೋಗ್ಯಕರ ಮನಸ್ಸಿನ ವಿಕೃತಾನಂದಕ್ಕಾಗೇ ನಡೆಸುವ ಇಂತಹ ಕ್ಷುಲ್ಲಕ ಕೆಲಸಗಳಿಂದ ರಾಜ್ ಕುಮಾರ್ ಅವರಂತಹ ಮಹಾನ್ ಚೇತನಕ್ಕೆ , ಅವರ ವ್ಯಕ್ತಿತ್ವದ ಘನತೆಗೆ ಮಸಿಬಳಿಯಲೆತ್ನಿಸುತ್ತೇವೆ ಅನ್ನುವ ಅವರ ಬಾಲಿಶ ತರ್ಕಕ್ಕೆ ಪಕ್ಕೆ ಹಿಡಿದು ನಗುವಂತಾಗುತ್ತದೆ.

 

ಕನ್ನಡದ ಪಾಲಿಗೆ ಡಾ| ರಾಜ್ ಒಂದು ಚೈತನ್ಯದ ಚಿಲುಮೆಯಂತಿದ್ದರು. ಅಪರೂಪದ ಶಕ್ತಿಯಾಗಿದ್ರು. ರಾಜಣ್ಣ, ಅಣ್ಣಾವ್ರು ಎಂದೆಲ್ಲಾ ಅಭಿಮಾನಿಗಳ ಗೌರವಾದರ ಪ್ರೀತಿ ಸಂಪಾದಿಸಿದ ರಾಜ್ ಕುಮಾರ್ ಭಾರತೀಯ ಚಿತ್ರರಂಗ ಕಂಡ ಬಹು ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭಿನಯ , ಹಾಡುಗಳು ಅವರಿಗೆ ಎಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿದೆಯೋ ಅದಕ್ಕಿಂತ ಒಂದು ಕೈ ಮೇಲು ಅವರ ವಿನಯ, ಸರಳತೆ ಮತ್ತು ಅವರ ಮಗುವಿನಂತಹ ಮುಗ್ಧತೆಯಿಂದ ಅವರ ಅಭಿಮಾನಿಗಳಾದವರ ಸಂಖ್ಯೆ. ಕನ್ನಡ ಜನತೆಯ ಪ್ರೀತಿ, ವಿಶ್ವಾಸಗಳು ಅದಕ್ಕಾಗಿಯೇ ಅವರನ್ನು ಆ ಎತ್ತರದ ಸ್ಥಾನದಲ್ಲಿರಿಸಿದೆ. ನಮ್ಮಿಂದ ಮರೆಯಾಗಿ ಹೋದರೂ ಸದಾ ಜನಮಾನಸದಲ್ಲಿ ರಾಜ್ ನೆನಪಾಗಿ ಬಹುಕಾಲ ಕಾಡಲಿದ್ದಾರೆ ; ಕಾಡುತ್ತಿದ್ದಾರೆ. ಅವರಲ್ಲಿದ್ದ ಶೃದ್ಧೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ನಿಷ್ಪಕ್ಷಪಾತ ನಡೆ-ನುಡಿ, ಸಮಯ ಪಾಲನೆ ಕುರಿತು ಅವರಿಗಿದ್ದ ಕಟ್ಟುನಿಟ್ಟು, ಪಾತ್ರದಲ್ಲಿ ತಲ್ಲೀನವಾಗಿ ಪಾತ್ರವೇ ತಾವಾಗುತ್ತಿದ್ದ ಪರಿ, ಹಾಡಿನ ಮೂಲಕ ಮನಸ್ಸನ್ನು ತಟ್ಟುತ್ತಿದ್ದ ಪರಿ…. ರಾಜಣ್ಣಗೆ ರಾಜಣ್ಣನೇ ಸಾಟಿ. ಮುತ್ತುರಾಜ್ ಎಂಬ ಚಿಕ್ಕ ಬಾಲಕನು ರಾಜಕುಮಾರ್ ಆಗಿ ಬಂದು ಕನ್ನಡ ಜನರ ಹೃದಯ ಸಿಂಹಾಸನದ ಅನಭಿಷಿಕ್ತ ಸಾರ್ವಭೌಮನಾಗಿ ಬೆಳೆದ ಪರಿಯೇ ಅನನ್ಯ. ಕನ್ನಡದ ಬಗೆಗಿದ್ದ ಅವರ ಪ್ರೀತಿ, ಭಾಷಾ ಶುದ್ಧಿಗೆ ಅವರು ನೀಡುತ್ತಿದ್ದ ಮಹತ್ವ, ಭಾವಾಭಿವ್ಯಕ್ತಿಯಲ್ಲಿ ಅವರ ಮುಖದ ಕದಲಿಕೆಗಳು…ಇವೆಲ್ಲವನ್ನು ಯಾವತ್ತಿಗಾದರೂ ಮರೆಯಲಾದೀತೇ? ಇಂತಹ ಅನರ್ಘ್ಯ ರತ್ನ ನಮ್ಮ ಕಾಲದಲ್ಲಿ ನಮಗೆ ಸಿಕ್ಕಿದ್ದೇ ನಮ್ಮ ಅದೃಷ್ಟ. ಇಷ್ಟೆಲ್ಲಾ ಹೇಳಿದರೂ ಅವರ ಮೇರು ಸದೃಶ ವ್ಯಕ್ತಿತ್ವದ ಒಂದು ಕಣವನ್ನಷ್ಟೇ ಹೇಳಿದಂತಾಗುತ್ತದೆ.

 

ಇಂತಹ ವ್ಯಕ್ತಿತ್ವವನ್ನು ಪ್ರತಿಮೆಯೊಂದನ್ನು ಭಗ್ನಗೊಳಿಸುವ ಮೂಲಕ ಅವಮಾನಿಸಲೆತ್ನಿಸುವವರು ಯಾವ ಸೀಮೆಯ ಮೂರ್ಖರೋ ಅರ್ಥವಾಗುತ್ತಿಲ್ಲ. ಈ ರೀತಿಯ ಕ್ರಿಮಿಗಳೇ ಇಂದು ಭಾಷೆ, ಜಾತಿಯ ಮೂಲಕ ಜನರನ್ನು ಒಡೆಯಲು ಯತ್ನಿಸುತ್ತಿರುವುದು. ರಾಜಣ್ಣನ ವ್ಯಕ್ತಿತ್ವದ ಪರಿಧಿ ಇಂತಹ ಎಲ್ಲಾ ಗಡಿಗಳ ಪರಿಧಿಯನ್ನು ಮೀರಿ ಬೆಳೆದಿದೆ. ಆ ಮಹತ್ತನ್ನು ಅವಮಾನಿಸಿದರೆ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ ಅನ್ನುವುದು ಇವರಿಗ್ಯಾಕೆ ಅರ್ಥವಾಗೋಲ್ಲವೋ? 

ಇಂಥಾ ನೂರಲ್ಲ ಸಾವಿರ ಪ್ರಯತ್ನ ಮಾಡಿದರೂ ರಾಜ್ ಘನತೆಯ ಕೂದಲು ಕೊಂಕಿಸಲೂ ಇವರಿಗಾಗದು. ಇದಕ್ಕೆ ಪ್ರತಿಕ್ರಿಯೆ ನೀಡುವುದು , ಪ್ರತಿಭಟನೆ ಮಾಡುವುದು ಕೂಡಾ ಇಂತಹ ಅವಿವೇಕಿಗಳಿಗೆ ಮತ್ತೆ ಮತ್ತೆ ಈ ರೀತಿಯ ಕೃತ್ಯಕ್ಕೆ ಪ್ರಚೋದಿಸಬಹುದು. ರಾಜ್ ಎಂಬ ಚೈತನ್ಯದ ನವಿರಾದ ನೆನಪುಗಳು ನಮ್ಮೆಲ್ಲರ ಮನದಲ್ಲಿ ಪುತ್ಠಳಿಯಾಗಿ ಭದ್ರವಾಗಿ ನೆಲೆಯೂರಿರುವಾಗ, ಕಲ್ಲು ಪ್ರತಿಮೆಗೆ ಹಾನಿ ಮಾಡಿ ಅವರಿಗೆ ವಿಕೃತಾನಂದ ಸಿಗೋದಾದ್ರೆ ಹಾಗೇ ಮಾಡಿಕೊಂಡು ಹಾಳಾಗಿಹೋಗಲಿ ಬಿಡಿ. ನಮ್ಮ ಮನಸ್ಸಿನಲ್ಲಿನ ರಾಜ್ ಪ್ರತಿಮೆ … ಅಯ್ಯೋ..ಹುಚ್ಚಪ್ಪಾ.. ನಾನು ಅಲ್ಲಿಲ್ಲ ಕಣೋ.. ಇಲ್ಲಿದಿನಿ.. ಅಭಿಮಾನಿ ದೇವರುಗಳ ಹೃದಯಸಿಂಹಾಸನದಲ್ಲಿ ನೀವೆಂದೂ ಹಾನಿ ಮಾಡದಷ್ಟು ಸುರಕ್ಷಿತವಾಗಿ.. ಎಂದು ಸದಾ ನಗುತ್ತಿರಲಿ.

ನಿ.ಮ.ಮ.ಕ.ಮ.ಕ….. ಏನೂಂತ ಯೋಚಿಸ್ತಿದ್ದಿರಾ? ಈ ಅಕ್ಷರಗುಚ್ಛಗಳನ್ನು ಎಲ್ಲಾದರು ನೋಡಿದ್ದು ನೆನಪಿದೆಯಾ? ಹೈಸ್ಕೂಲ್ ದಿನಗಳನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಹತ್ತನೇ ತರಗತಿಯ ಕೊನೆಯ ದಿನಗಳು ಬಂದಾಗ ಎಲ್ಲರ ಕೈಲೂ ರಾರಾಜಿಸುವ ಆಟೋಗ್ರಾಫ್ ಹೆಸರಿನ ಪುಟ್ಟ ಪುಸ್ತಕವೇನಾದ್ರೂ ಇನ್ನೂ ನಿಮ್ಮ ಹಳೆಯ ಸಂಗ್ರಹದಲ್ಲಿ ಇದ್ದರೆ ಅದನ್ನೊಮ್ಮೆ ಮಗುಚಿ ಹಾಕಿ ಬಿಡಿ. ಅದರ ಯಾವುದಾದರೂ ಪುಟದಲ್ಲಿ ನಿಮಗೆ ಮೇಲಿನ ಅಕ್ಷರಗುಚ್ಛ ಸಿಕ್ಕೇ ಸಿಗುತ್ತೆ. ನಿಮ್ಮ ಮದುವೆಯ ಮಮತೆಯ ಕರೆಯೋಲೆ ಮರೆಯದೆ ಕಳುಹಿಸಿ ಎನ್ನುವುದರ ಹ್ರಸ್ವ ರೂಪವೇ ಇದು. ನೆನಪಾಯ್ತಾ? ಅತ್ತ ಕಿಶೋರಾವಸ್ಥೆಯೂ ಅಲ್ಲದ ಇತ್ತ ಪ್ರಬುದ್ಧ ವಯಸ್ಕರೂ ಅಲ್ಲದ ಅದೊಂತರದ ಸ್ಥಿತಿ. ನಿಮ್ಮಲ್ಲಿ ಎಷ್ಟು ಜನ ಆ ದಿನಗಳ ಸ್ನೇಹಿತರ ಜೊತೆ ಇನ್ನೂ ಸಂಪರ್ಕದಲ್ಲಿದ್ದೀರಾ ಲೆಕ್ಕ ಹಾಕಿ.

 

ಬಹುಶಃ ಆ ವಯಸ್ಸೇ ಹಾಗಿರಬೇಕು. ಜಗತ್ತೆಲ್ಲಾ ಸುಂದರವಾಗಿ ಕಾಣುತ್ತೆ. ಎಲ್ಲದರೆಡೆಗೂ ಕುತೂಹಲ; ಎಲ್ಲದರಲ್ಲೂ ಆಸಕ್ತಿ. ಸ್ನೇಹಕ್ಕೆ ಹಾತೊರೆಯುವ ಮನಸ್ಸು. ಕನಸುಗಳು ಮೊಟ್ಟೆಯಿಡುವ ವಯಸ್ಸು. ಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು, ಎಲ್ಲರೂ ನನ್ನನ್ನು ಗುರುತಿಸಬೇಕೆಂಬ ಹುಮ್ಮಸ್ಸು. ಭಾವ ತೀವ್ರತೆಯು ಪರಾಕಾಷ್ಠೆ ಮುಟ್ಟುವ ಕಾಲ.

 

ಹುಚ್ಚು ಕೋಡಿ ಮನಸು…

ಅದು ಹದಿನಾರರ ವಯಸು…

ಮಾತು ಮಾತಿಗೇಕೋ ನಗು…

ಮರುಗಳಿಗೆಯೆ ಮೌನ…..

 

ಆ ವಯಸ್ಸಿನಲ್ಲಿ ಏನೇ ಮಾಡಿದರೂ ಅದರಲ್ಲೊಂದು ತೀವ್ರತೆ, ಪ್ಯಾಷನ್ ಇರುತ್ತಿತ್ತು. ಬಹುಶಃ ನಾನು ಅತಿ ಹೆಚ್ಚು ಸ್ನೇಹಿತರನ್ನು ಬದುಕಿನ ಯಾವ ಘಟ್ಟದಲ್ಲಾದರೂ ಹೊಂದಿದ್ದರೆ ಅದು ಆ ದಿನಗಳಲ್ಲೇ ಇರಬೇಕು. ಆ ಸ್ನೇಹದ ಗಟ್ಟಿತನದ ಮಾತು ಎಂತೋ ಗೊತ್ತಿಲ್ಲ. ಆದರೂ ಆ ಕ್ಷಣದ ಸತ್ಯ ಎನ್ನುವ ಹಾಗೆ ಆ ಹೊತ್ತಿಗೆ ಏನೇ ಬಂದರೂ ಬಿಡಿಸಲಾಗದ, ಯಾರಿಂದಲೂ ಅಗಲಿಸಲಾಗದ ಬಂಧವಾಗಿರುತ್ತೆ.

 

ಈಗ ನೀವೆ ಒಮ್ಮೆ ಎಣಿಸಿನೋಡಿ. ಹೈಸ್ಕೂಲ್ ದಿನಗಳ ನಿಮ್ಮ ಜಿಗ್ರಿದೋಸ್ತಿಗಳಲ್ಲಿ ಎಷ್ಟು ಜನ ಇನ್ನೂ ನಿಮ್ಮ ಸ್ನೇಹಿತರಾಗಿದ್ದಾರೆ; ಕಡೇ ಪಕ್ಷ ಸಂಪರ್ಕದಲ್ಲಿದ್ದಾರೆ? ನೀವು ಬೌದ್ಧಿಕವಾಗಿ, ಸಾಮಾಜಿಕವಾಗಿ, ಆರ್ಥಿಕ ನೆಲೆಗಟ್ಟಿನಲ್ಲಿ ಬಲಿಯುತ್ತಾ ಬೆಳೆಯುತ್ತಾ ಹೋದಂತೆಲ್ಲಾ ಬದುಕಿನ ನಮ್ಮ ಪ್ರಯಾರಿಟಿಗಳೇ ಬೇರೆಯಾದಂತೆಲ್ಲಾ, ಬಾಳ ಪಯಣದಲ್ಲಿ ನಮ್ಮ ದಿಕ್ಕು ಗುರಿಗಳೆಲ್ಲಾ ಬೇರೆ ಬೇರೆಯಾಗಿ ಮುಂದೆ ಮುಂದೆ ಸಾಗಿದಂತೆಲ್ಲಾ ಒಂದು ಕಾಲದ ಜೀವದ ಗೆಳೆಯರೆಲ್ಲ ಎಲ್ಲಿದ್ದಾರೋ ಎಂದು ಗೊತ್ತಿಲ್ಲದಷ್ಟು, ಒಂದು ವೇಳೆ ಗೊತ್ತಿದ್ದರೂ ಪರಸ್ಪರ ಸಂಪರ್ಕಿಸಲಾಗದಷ್ಟು ದೂರಾಗಿಬಿಡುತ್ತೇವೆ. ಎಲ್ಲಾ ಗೆಳೆತನದ ಗತಿ ಹಾಗಾಗದೇ ಇರಬಹುದು. ಆದರೆ ಬಹುತೇಕ ಗೆಳೆಯ/ಗೆಳತಿಯರು ಎಲ್ಲೋ ಕಳೆದುಹೋಗಿರುತ್ತಾರೆ…. ಅವರ ಪಾಲಿಗೆ ನಾವು ಕಳೆದುಹೋದ ಹಾಗೆ…!! ನಾವು ಹೆಚ್ಚುಪ್ರಬುದ್ಧ(?)ರಾದಂತೆಲ್ಲಾ ಸಂಕುಚಿತರಾಗುತ್ತಾ ಹೋಗುತ್ತೇವೆಯೇ? ಸ್ವಾರ್ಥಿಗಳಾಗುತ್ತಾ ನಮ್ಮ ಪರಿಧಿ ಕಿರಿದಾಗುತ್ತಾ ಹೋಗುತ್ತದೆಯೇ? ಏನೋ ಗೊತ್ತಿಲ್ಲಪ್ಪ. ಆ ಹುಮ್ಮಸ್ಸು ಉತ್ಸಾಹಗಳೆಲ್ಲಾ ಬತ್ತಿ ಹೋಗಿ, ದಿನದ ಕೆಲಸ ಮುಗಿಸಿ…ಅಬ್ಬಾ ಸಧ್ಯ ಒಂದು ದಿನ ಕಳೀತಪ್ಪಾ ಎಂದು ಉಸ್ಸೆನ್ನುವುದರಲ್ಲಿಯೇ ನಾವು ಕಳೆದುಹೋಗಿ ಬಿಡುತ್ತೇವೆಯೇ? ಎಲ್ಲಾ ಬರೀ ಪ್ರಶ್ನೆಗಳು..

 

ಸ್ನೇಹಿತರು ಈಗಲೂ ಇರಬಹುದು. ಆದರೆ ಮುಂಚಿನ ಭಾವ ತೀವ್ರತೆಯಿಂದ ಯಾರನ್ನಾದರೂ ಹಚ್ಚಿಕೊಳ್ಳಬೇಕೆಂದರೆ ಮನಸ್ಸು ಯಾಕೋ ಹಿಂದೇಟು ಹೊಡೆಯುತ್ತದೆ. ನಮ್ಮ ಕೆಲಸ, ಸಂಸಾರ, ಮನೆ ಕಟ್ಟೋದು, ಸೈಟು ಕೊಳ್ಳೋದು ಹೀಗೆ ಬದುಕಿನ ಭದ್ರ ನೆಲೆಗಾಗಿನ ಜೂಟಾಟದಲ್ಲಿ ನಮ್ಮೊಳಗಿನ ಮಗು ಮನಸ್ಸಿನ ಆ ನಾವು ಕಳೆದುಹೋಗಿಬಿಟ್ಟಿರುತ್ತೇವೆ. ಎಲ್ಲಾ ಬೆರಗುಗಳನ್ನು, ಅಚ್ಚರಿಗೊಳ್ಳುವುದನ್ನು ಮರೆತೇಬಿಟ್ಟಿರುತ್ತೇವೆ. ಬದುಕು ನಿಂತ ನೀರಿನ ರಾಡಿ ಹೊಂಡದಂತಾಗುತ್ತದೆ. ಹಳೆಯ ಆಟೋಗ್ರಾಫ್ ಹಾಳೆ ತಿರುವಿದರೆ ಅಲ್ಲೇನಿದೆ? ಬರೀ ಖಾಲಿ ಹಾಳೆಗಳು ನಮ್ಮನ್ನು ಅಣಕಿಸಿ ನಕ್ಕಂತಾಗುತ್ತದೆ….ನಿಮ್ಮ ಅನುಭವ ಇದಕ್ಕಿಂತ ಭಿನ್ನವಾಗಿದ್ದರೆ ನಿಜವಾಗಿಯೂ ನೀವು ಅದೃಷ್ಟವಂತರು….ಬೇರೆಯಾಗಿದೆಯಾ… ನೀವೇ ಹೇಳ್ಬೇಕು..

ಕುಂದಾಪ್ರ ಕನ್ನಡದಗೆ ಒಂದು ಬ್ಲಾಗ್ ಮಾಡ್ಕ್ ಮಾಡ್ಕ್ ಅಂದೇಳಿ ಸುಮಾರ್ ದಿವ್ಸದಿಂದ ಎಣ್ಸಕಂಡಿದ್ದೆ. ಅದನ್ನ್ ಇವತ್ ಶುರು ಮಾಡಿದೆ…ಒಂದ್ಸಲ ಕಾಣಿ ಬನ್ನಿ

http://kundaaprakannada.wordpress.com

ಮಲೆನಾಡು ಅಂದಾಕ್ಷಣ ಮನಸು ಗೊತ್ತಿಲ್ಲದಂತೆ ಅರಳಿ ನಿಲ್ಲುತ್ತೆ. ನಾಸ್ಟಾಲ್ಜಿಯಾನೋ, ಪ್ರಕೃತಿಯ ಮಡಿಲಿನ ಆಹ್ಲಾದದ ನೆನಪೋ, ಇಲ್ಲಾ ಎಲ್ಲರಿಗೂ ಇರುವಂತೆ ನಮ್ಮ ನಮ್ಮ ಊರಿನ ಕುರಿತು ಇರುವ ವಿಚಿತ್ರ ವಿಶಿಷ್ಟ ಎಳೆತ ಸೆಳೆತಗಳೋ…ಒಟ್ಟಿನಲ್ಲಿ ಮಲೆನಾಡು ಶಬ್ದ ಕಿವಿ ತಮ್ಮಟೆಯ ಮೇಲೆ ಜೇನು ಸುರಿದಂತಾ ಅನುಭವ ಕೊಡೋದು ಸುಳ್ಳಲ್ಲ. ನಾ ಏನೇ ವರ್ಣಿಸಿದರೂ ಆ ಅನುಭೂತಿ ಎಲ್ಲ ಉಪಮೆ, ಸಾಮತಿ, ದೃಷ್ಟಾಂತಗಳ ಎಲ್ಲೆ ಮೀರಿದ್ದೆನ್ನುವುದಂತೂ ಸತ್ಯ. ಇಂತಹ ಮನಸಿನ ಕೈಗೇನಾದ್ರೂ ಕುವೆಂಪು ಕಾದಂಬರಿಗಳು ಸಿಕ್ಕಿದ್ರೆ ಹಬ್ಬದ ಹೋಳಿಗೆ-ತುಪ್ಪ ಇದರ ಮುಂದೆ ಯಾವ ಲೆಕ್ಕ? ( ಮತ್ತೆ ಉಪಮೆ ಬಂತು ಕ್ಷಮೆಯಿರಲಿ J)

 

ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು ಎರಡೂ ಕೂಡಾ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು  ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳ ಅಕ್ಷರರೂಪ ಅಂತ ನನಗನ್ನಿಸಿದೆ. ಕುವೆಂಪುರವರೇ ತಮ್ಮ ಅರಿಕೆಯಲ್ಲಿ ಹೇಳಿಕೊಂಡಂತೆ, ಇದನ್ನು ಬರಿಯ ಕಥೆಯ ಕುತೂಹಲಕ್ಕಾಗಿ ಓದದೆ, ಕಥೆಯ ಮೂಲಕ ತೆರೆದುಕೊಳ್ಳುವ ಮಲೆನಾಡಿನ ಜೀವಂತ ಪರಿಸರದಲ್ಲಿ ಒಮ್ಮೆ ನಡೆದಾಡಿ ಬಂದು ಬಿಡಿ. ಆಗ ಸಿಗುವ ಖುಷಿ ಬರೀ ಕಥೆಯನ್ನು ಕೇಂದ್ರವಾಗಿರಿಸಿಕೊಂಡು ಓದುವ ಓದಿನ ನೂರ್ಮಡಿಯಷ್ಟಾಗುವುದರಲ್ಲಿ ಅನುಮಾನವೇ ಇಲ್ಲ.

 

ಕಾನೂರು ಹೆಗ್ಗಡತಿಯ ಪುಟ ತೆರೆದಂತೆಲ್ಲಾ ಪದರ ಪದರವಾಗಿ ಮಲೆನಾಡಿನ ಬದುಕು ಅನಾವರಣಗೊಳ್ಳುತ್ತಾ ಹೋಗುತ್ತದೆ. ಮೀನುಷಿಕಾರಿ, ದೆಯ್ಯದ ಹರಕೆ, ಕಾಡು ಹಂದಿಯ ಬೇಟೆ, ಜಾತಿ ವ್ಯವಸ್ಥೆ, ಮಂತ್ರಿಸಿದ ತೆಂಗಿನಕಾಯಿಯ ಮಹಿಮೆ, ಕೋಳಿಯಂಕ, ಪಾಲು ಪಂಚಾಯ್ತಿ, ಕಳ್ಳಂಗಡಿ, ಹೋತದ ಬಲಿ… ಹೀಗೆ ಮಲೆನಾಡಿನ ಸಹಜ ಜೀವನದಲ್ಲಿ ಮಿಳಿತವಾಗಿರುವ ಸಂಗತಿಗಳು ಘಟಿಸುತ್ತಾ ಹೋಗುತ್ತದೆ ( ಕುವೆಂಪು ಅವರ ಕಾಲದ ಮಾತು ಬಿಡಿ. ಈಗ ಈ ಚಿತ್ರಣ ಬಹುತೇಕ ನಿಧಾನವಾಗಿ ಮರೆಯಾಗುತ್ತಾ ಬಂದಿದೆ… ಕುವೆಂಪುರವರ ವಿಶ್ವಮಾನವನಾಗು ಅನ್ನೋ ವಿಶ್ ಅನ್ನು ಅನುಸರಿಸುವ ಬದಲು ಜಾಗತೀಕರಣಕ್ಕೆ ಬಲಿಯಾಗಿ, ಅನುಕರಿಸುವ ಹಪಹಪಿಯ ದೆಸೆಯಿಂದ ಎಲ್ಲಾ ವೈವಿಧ್ಯಗಳನ್ನು ನಿಧಾನಕ್ಕೆ ಮರೆಯಾಗುತ್ತಿವೆ. ಮಲೆನಾಡು ಕೂಡಾ ಬದಲಾಗುತ್ತಿದೆ. ಆ ಕುರಿತ ವಾದ-ಪ್ರತಿವಾದದ ಮಾತು ಒತ್ತಟ್ಟಿಗಿರಲಿ)

 

ಹೂವಯ್ಯನ ಭಾವುಕ ಜಗತ್ತಿನ ಉದಾತ್ತ ಭಾವಗಳು, ಅವನ ಚಿಕ್ಕಪ್ಪಯ್ಯ ಚಂದ್ರಯ್ಯ ಗೌಡರ ದರ್ಬಾರು-ದರ್ಪ, ಅವರ ಮಗ ರಾಮಯ್ಯನ ದ್ವಂದ್ವ, ಹೂವಯ್ಯನ ಅಮ್ಮ ನಾಗಮ್ಮನ ವರಾತ, ಸೀತೆಯ ಮುಗ್ಧತೆ, ಓಬಯ್ಯನ ಬೋಳೇತನ, ಅಣ್ಣಯ್ಯ ಗೌಡರ ಅಧ್ವಾನ, ಪುಟ್ಟಣ್ಣ, ಬೇಲರ ಬೈರ, ಅವನ ಮಗ ಗಂಗ ಹುಡುಗ, ಹಳೇಪೈಕದ ತಿಮ್ಮ, ಘಟ್ಟದ ಕೆಳಗಿನ ಸೇರಿಗಾರರ ಕಾರುಬಾರು, ಅವರು ಹಾರಿಸಿಕೊಂಡು ಬಂದ ಗಂಗಿಯ ಹಾದರ…ಹೀಗೆ ಇವೆಲ್ಲದರ ಸುತ್ತ ಹೆಣೆದ ಘಟನಾವಳಿಯಲ್ಲಿ ಚಂದ್ರಯ್ಯಗೌಡರ ಮೂರನೇ ಹೆಂಡತಿಯಾಗಿ ಬರುವವಳೇ ನೆಲ್ಲುಹಳ್ಳಿಯ ಸುಬ್ಬಿ ಯಾನೆ ಸುಬ್ಬಮ್ಮ ಹೆಗ್ಗಡತಿ.

 

ಈ ಕಥೆಯಲ್ಲಿ ಹೂವಯ್ಯನೇ ಕಥಾನಾಯಕನ ಹಾಗೆ ಕಂಡರೂ ಕೂಡಾ ವಾಸ್ತವದಲ್ಲಿ ಇಲ್ಲಿ ಎಲ್ಲಾ ಪಾತ್ರಗಳು ತಮ್ಮದೇ ಆದ ಮಹತ್ತನ್ನು ಹೊಂದಿವೆ. ಕಾದಂಬರಿಯ ಹೆಸರು ಕಾನೂರು ಹೆಗ್ಗಡತಿ ಅಂತ ಇದ್ದರೂ ಕೂಡಾ ಇದು ಬರೀ ಸುಬ್ಬಮ್ಮನ ಕಥೆ ಮಾತ್ರವಷ್ಟೇ ಅಲ್ಲ; ಅಮಾಯಕತೆಗೆ ಕ್ಷುದ್ರತೆಯ ಲೇಪವಿದ್ದುಬಿಟ್ಟರೆ ಅದಕ್ಕೆ ಸರಿಯಾದ ಅಕಾರದ ದರ್ಪ ಸಿಕ್ಕಿಬಿಟ್ಟರೆ ಮಂಗನಿಗೆ ಕಳ್ಳು ಕುಡಿಸಿದಷ್ಟೇ ಅನಾಹುತಕಾರಿಯಾಗಬಲ್ಲುದು ಅನ್ನುವುದರ ದ್ಯೋತಕವಾಗಿ ಕಥೆಯಲ್ಲಿ ಸುಬ್ಬಮ್ಮನ ಪಾತ್ರವಿದೆ.

 

ಸ್ಟೂಲವಾಗಿ ಕಥೆಯ ಹಂದರ ಹೇಳುವುದಾದರೆ , ಸೀತೆ ಹೂವಯ್ಯನ ನಡುವೆ ಅಂಕುರಿಸುವ ನಿಷ್ಕಲ್ಮಷ ಪ್ರೇಮ, ದೊಡ್ಡವರ ಸಣ್ಣತನಗಳಿಂದಾಗಿ ಅದು ಮುದುಡಿಹೋಗಿ ಆಕೆ ಅವನ ತಮ್ಮ ರಾಮಯ್ಯನ ಕೈಹಿಡಿಯಬೇಕಾಗಿ ಬರುತ್ತದೆ. ಚಂದ್ರಯ್ಯ ಗೌಡರ ಮೂರನೆ ಹೆಂಡತಿಯಾಗಿ ಬರುವ ನೆಲ್ಲುಹಳ್ಳಿಯ ಪೆದ್ದೇಗೌಡನ ಮಗಳು ಸುಬ್ಬಿ ಹೂವಯ್ಯನ ಸಮವಯಸ್ಕಳು. ಈ ಕಾರಣಕ್ಕೆ ಹೂವಯ್ಯ ಸುಬ್ಬಮ್ಮರ ನಡುವೆ ಸಂಬಂಧ ಕಲ್ಪಿಸುತ್ತದೆ ಗೌಡರ ಕಾಮಾಲೆ ಕಣ್ಣು. ಈ ಕಾರಣದಿಂದಾಗಿ ಅಲ್ಲದೆ ಅವರ ದರ್ಪ ದಬ್ಬಾಳಿಕೆಗೆ ರೋಸಿಹೋಗಿ ಕಾನೂರು ಮನೆ ತೊರೆಯುವ ಹೂವಯ್ಯ, ಉದಾತ್ತತೆಯ ಮೇಲಿನ ಒಲವು-ಅಪ್ಪಯ್ಯನ ಅಬ್ಬರದ ಮಧ್ಯೆ ಸಿಲುಕಿದಂತಾಗಿ ನಲುಗಿ ಮನೋವಿಕಾರದ ಸ್ಥಿತಿಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುವ ರಾಮಯ್ಯ, ಚಂದ್ರೇಗೌಡರ ದೌರ್ಜನ್ಯಕ್ಕೆ ನೆಲ್ಲುಹಳ್ಳಿಗೆ ಒಡವೇ ಗಂಟಿನೊಂದಿಗೆ ಓಡಿಹೋಗುವ ಸುಬ್ಬಮ್ಮ, ಇವೆಲ್ಲದರ ನಡುವೆ ಸಿಕ್ಕಿ ತೊಳಲಾಡುವ ಸೀತೆಯ ಗೋಳು… ಹೀಗೆ ಸಾಗುವ ಕಥೆ ಚಂದ್ರೇಗೌಡರ ಅವಸಾನದೊಂದಿಗೆ ಸುಬ್ಬಮ್ಮನ ದರ್ಬಾರಿಗೆ ನಾಂದಿ ಹಾಡುತ್ತದೆ. ಅಂತ್ಯದಲ್ಲಿ ಸೇರಿಗಾರರೊಂದಿಗೆ ಗುಟ್ಟಾದ ಪ್ರಣಯಲೀಲೆ ನಡೆಸುವ ಸುಬ್ಬಮ್ಮ ಕದ್ದು ಬಸಿರಾಗಿ ಕೊನೆಗೆ ಗರ್ಭಪಾತವಾಗಿ ಸಾಯುವುದರಲ್ಲಿ ಪರ್ಯಾವಸಾನಗೊಳ್ಳುತ್ತದೆ.

 

ಈ ಕಥೆಯಲ್ಲಿ ನಡುನಡುವೆ ಮಲೆನಾಡಿನ ವೈವಿಧ್ಯ, ಸೊಗಡು ಸೊಬಗನ್ನು ತೆರೆದಿಡುವ ಅನೇಕ ಸ್ವಾರಸ್ಯಕರ ಉಪಕಥೆಗಳು ಬರುತ್ತವೆ. ಬಾಡುಗಳ್ಳ ಸೋಮ ಗೊಬ್ಬರದ ಗುಂಡಿಗೆ ಬಿದ್ದ ಕಥೆ, ಅವನ ಬಾಡಿನಾಸೆಯಿಂದಾಗಿ ಉಸಿರು ಕಟ್ಟಿ ಒದ್ದಾಡಿದ ಪ್ರಸಂಗ, ಕಳ್ಳಿನ ಮರಕ್ಕೆ ನಾಮ ಹಾಕುವ ಮಾರ್ಕನಿಗೆ ಬೈರ ಕೈ ಕೊಡುವ ಘಟನೆ, ಕಳ್ಳಂಗಡಿ ಸಾಲಕ್ಕಾಗಿ ಹಳೆಪೈಕದ ತಿಮ್ಮನ ಕೋಳಿಹುಂಜ ಕದ್ದು ಸಿಕ್ಕಿ ಬೀಳುವ ಸೋಮ, ಕಿಲಿಸ್ತರ( ಕ್ರಿಶ್ಚಿಯನ್) ಜಾಕಿ ಮತ್ತು ಟೈಗರ್ ನಾಯಿಯ ಜಟಾಪಟಿ, ಸುಬ್ಬಮ್ಮ ಮತ್ತು ಗಂಗೆಯರ ನಡುವಿನ ಕುಸ್ತಿ, ಕೋಳಿಯಂಕದಲ್ಲಿನ ಕಾಳಗ, ಓಬಯ್ಯನ ಭೂತಚೇಷ್ಟೆ ಮತ್ತು ೧೦೦ ರೂಪಾಯಿಯ ತುಂಡಾದ ನೋಟಿನ ಪ್ರಸಂಗ.. ಹೀಗೆ ಕುವೆಂಪು ಅವರ ಹಾಸ್ಯಪ್ರಜ್ಞೆಯಿಂದಾಗಿ ಅವರು ನೀಡುತ್ತಾ ಹೋಗುವ ಘಟನೆಗಳು ಓದಲು ಬಲು ಮಜವಾಗಿದೆ.

ಹೀಗೆ ಕಥೆಯ ಜಾಡಿನೊಂದಿಗೆ ಮಲೆನಾಡಿನ ನಿತ್ಯವ್ಯಾಪಾರಗಳು, ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಇಚ್ಛೆಯಿದ್ದಲ್ಲಿ ಈ ಬೃಹತ್ ಕಾದಂಬರಿ ಕೈಗೆತ್ತಿಕೊಳ್ಳಿಮಲೆನಾಡಿನಲ್ಲಿ ಒಂದು ಸುತ್ತು ತಿರುಗಿ ಬನ್ನಿ. ಮುಂದೆ ಎಂದಾದರೂ ಮಲೆಗಳಲ್ಲಿ ಮದುಮಗಳ ನ್ನು ಮಾತಾಡಿಸೋಣ