Archive for ಜೂನ್, 2008

ಕಳೆದೊಂದು ದಶಕದಲ್ಲಿ ಮನೋರಂಜನಾ ಮಾಧ್ಯಮವಾಗಿ ಟಿ.ವಿ. ಬೆಳೆದ ಪರಿ ಯಾರಿಗೇ ಆಗಲಿ ಅಚ್ಛರಿ ಮೂಡಿಸುವಂತದ್ದು. ರಿಮೋಟಿನ ಗುಂಡಿಯೊತ್ತುತ್ತಿದ್ದಂತೆ ಸಂಗೀತ, ಸುದ್ದಿ, ಚಲನಚಿತ್ರ, ಕ್ರೀಡೆ, ಫ್ಯಾಷನ್, ಭಕ್ತಿ..ಹೀಗೆ ನಿರ್ದಿಷ್ಟ ವಿಷಯಕ್ಕೇ ಮೀಸಲಾದ ನೂರಾರು ವಾಹಿನಿಗಳು ಸಿಗುತ್ತವೆ. ನಿಮಗೆ ಬೇಕಿರಲಿ ಬೇಡದಿರಲಿ, ಅವ್ಯಾಹತವಾಗಿ ೨೪X7  ಬಿತ್ತರಗೊಳ್ಳುತ್ತಿರುತ್ತವೆ. ಮೊಟ್ಟ ಮೊದಲು ಟಿ.ವಿ. ಬಂದಾಗ ನಮಗಿದ್ದ ಏಕೈಕ ಆಯ್ಕೆಯೆಂದರೆ ದೂರದರ್ಶನ… ಅದೂ ಡಿ.ಡಿ. ಯ ರಾಷ್ಟ್ರೀಯ ವಾಹಿನಿ.

 

ಇಂದು ಕನ್ನಡಕ್ಕೆಂದೇ ಮೀಸಲಾದ ಈ ಟಿ.ವಿ, ಜೀ ಟಿ.ವಿ, ಸುವರ್ಣ, ಕಸ್ತೂರಿ, ಚಂದನ, ಉದಯ, ಉದಯ ಮೂವೀಸ್, ಯು೨, ಟಿ.ವಿ. 9, ಉದಯ ವಾರ್ತೆ, ಸುವರ್ಣ ವಾರ್ತೆ.. ಹೀಗೆ ಹತ್ತಾರು ಚ್ಯಾನೆಲ್‌ಗಳು ಇವೆ. ೧೯೯೧ರಲ್ಲಿ ಡಿಡಿ9 ತನ್ನ ಪ್ರಸಾರವನ್ನು ರಾಜ್ಯವ್ಯಾಪಿ ವಿಸ್ತರಿಸುವ ಮೊದಲು ನಮ್ಗೆ ಕನ್ನಡ ಕಾರ್ಯಕ್ರಮ ನೋಡಬೇಕೆಂದರೆ ಇದ್ದಿದ್ದು ಎರಡೇ ಎರಡು ಅವಕಾಶ. ಒಂದು ಭಾನುವಾರ ಮಧ್ಯಾಹ್ನ ಬರುತ್ತಿದ್ದ ಪ್ರಾದೇಶಿಕ ಭಾಷಾ ಚಲನಚಿತ್ರದಲ್ಲಿ ನಾಲ್ಕಾರು ತಿಂಗಳಿಗೊಮ್ಮೆ ಬರುತ್ತಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ. ಇನ್ನೊಂದು ಸೋಮವಾರ ರಾತ್ರಿ ೮:೦೫ಕ್ಕೆ ಪ್ರಸಾರವಾಗುತ್ತಿದ್ದ ಚಿತ್ರಮಾಲಾ.

 

ಭಾನುವಾರ ಮಧ್ಯಾಹ್ನದ ಚಲನಚಿತ್ರ ಭಾಷೆಯ ಹೆಸರಿನ ಅನುಕ್ರಮಣಿಕೆಯಲ್ಲಿ ಬರ್ತಾ ಇತ್ತು. ಅಂದ್ರೆ ಅಸ್ಸಾಮೀ ಈ ವಾರ ಬಂದರೆ ಮುಂದಿನ ವಾರ ಬೆಂಗಾಳಿ. ಹೀಗೆ ಕನ್ನಡದ ಕೆ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದದ್ದು ಈಗ ನೆನಪಾದ್ರೆ ನಗು ಬರುತ್ತೆ. ಆದ್ರೆ ಆ ಕಾಯುವಿಕೆಯಲ್ಲಿ ಕೂಡಾ ಒಂಥರಾ ಮಜಾ ಇತ್ತು. ಎಲ್ಲಾದ್ರೂ ಒಮ್ಮೊಮ್ಮೆ ಯಾವುದೋ ಕಾರಣಕ್ಕಾಗಿ ಕನ್ನಡದ ಚಿತ್ರ ಬರದೇ ಹೋದ್ರೆ ಮತ್ತೆ ೪ ತಿಂಗಳು ಕಾಯಬೇಕಾದ ಅನಿವಾರ್ಯತೆ. ಆಗ ನನಗೆ 8-10 ವರ್ಷ ಪ್ರಾಯವಾದುದರಿಂದ ನೋಡಿದ ಎಲ್ಲಾ ಚಿತ್ರಗಳೂ ನೆನಪಿನಲ್ಲಿಲ್ಲವಾದರೂ, ಶಂಖನಾದ, ತಬರನ ಕಥೆ, ಬೆಟ್ಟದ ಹೂ ಈ ಮೂರು ಚಿತ್ರ ನೋಡಿದ್ದು ಅಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ. ಅದರಲ್ಲೂ ಕಾರ್ಯಕ್ರಮದ ವಿವರಣೆ ಹೇಳುವವರು ಹೇಳಿದ ಒಂದು ವಿವರಣೆ ಅದ್ಯಾವ ಕಾರಣಕ್ಕೋ ಏನೋ ನೆನಪಾಗಿ ಕುಳಿತುಬಿಟ್ಟಿದೆ. ಆಯಿಯೇ ದೇಖ್‌ತೇ ಹೈಂ ಕನಡಾ ಫೀಚರ್ ಫಿಲ್ಮ್ ತಬ್ರನ್ ಕತೆ ಅನ್ನೋದೆ ಆ ಡೈಲಾಗು ! ಎಷ್ಟು ವಿಚಿತ್ರ ಈ ನೆನಪುಗಳ ಸಂತೆ-ಕಂತೆ.

 

ಇದು ಭಾನುವರದ ಕಥೆ ಆದ್ರೆ, ಸೋಮವಾರ ಬರುತ್ತಿದ್ದ ಚಿತ್ರಮಾಲ ಅನ್ನೋ ವಿವಿಧ ಭಾಷೆಗಳ ಚಿತ್ರಗೀತೆಗಳದ್ದು ಇನ್ನೊಂದು ಕಥೆ. ಇದರಲ್ಲಿ ಕೂಡಾ ಪ್ರತೀವಾರ ಕನ್ನಡ ಬರುತ್ತೆ ಅನ್ನೋ ಖಾತ್ರಿ ಇಲ್ಲ. ಇರುವ ಅರ್ಧ ಘಂಟೇಲಿ ಅವರಾದ್ರೂ ಎಷ್ಟು ಭಾಷೆಯದು ಅಂತಾ ಹಾಕ್ತಾರೆ ಹೇಳಿ. (ಈಗ ಅನ್ಸೊದು ಅಂದ್ರೆ.. ದಕ್ಷಿಣದ ಬಗ್ಗೆ ಆಗಲೂ ಕೂಡಾ ಸ್ವಲ್ಪ ಮಲತಾಯಿ ಧೋರಣೆ ಇತ್ತೋ ಏನೋ). ಅದ್ರೂ ಕಾರ್ಯಕ್ರಮ ಮುಗ್ಯೋವರೆಗೂ ಮುಂದಿನ ಹಾಡು ಕನ್ನಡ ಬರುತ್ತೆ ಅಂತಾ ಬೆಟ್ ಕಟ್ಟುತ್ತಾ ಇದ್ದಿದ್ದು, ಬಂದರೆ ಸೋತೋರಿಗೂ ಗೆದ್ದೋರಿಗೂ ಇಬ್ರಿಗೂ ಖುಷಿಯಾಗ್ತಿದ್ದದ್ದು, ಬರದೆ ಹೋದ್ರೆ ಮುಖ ಚಪ್ಪೆಯಾಗ್ತಿದ್ದದ್ದು ಎಲ್ಲಾ ಎಷ್ಟು ಮಜವಾಗಿತ್ತು. ಇವೆಲ್ಲಾ ಈಗ ಜ್ಞಾಪಕ ಚಿತ್ರಮಾಲೆಯಲ್ಲಿ ಪೋಣಿಸಿದ ಮುತ್ತಿನಂತಹ ನೆನಪಾಗಿವೆ.

 

ಈ ನೆನಪಿನ ಜೊತೆಗೆ ತಳುಕು ಹಾಕಿಕೊಂಡಿರೋ ಇನ್ನೊಂದು ನೆನಪು ಅಂದ್ರೆ, ಜೀ ವಾಹಿನಿಯು ಶುರು ಮಾಡಿದ ಪ್ರಾದೇಶಿಕ ಹಾಡುಗಳ ಕಾರ್ಯಕ್ರಮ. ಬಹುಶಃ 1994ರಲ್ಲಿ ಸಂಜೆ 5-3೦ರಿಂದ 6-೦೦ರವರೆಗೆ ದಕ್ಷಿಣದ ಪ್ರಾದೇಶಿಕ ಭಾಷೆಗಳಿಗೆ ಮೀಸಲಾದ ಕಾರ್ಯಕ್ರಮವನ್ನು ಬಿತ್ತರಿಸುತ್ತಿತ್ತು. ಅದ್ರೆ ಅವರ ಕಾರ್ಯಕ್ರಮದಲ್ಲಿ ಅದದೇ ಗೀತೆಗಳು ಪ್ರಸಾರವಾಗುತ್ತಿದ್ದು ಅಮೇಲೆ ಅದು ನಿಂತು ಹೋಯ್ತು. ಅದರಲ್ಲೂ ಕೂಡಾ ವಿಷ್ಣು ಅಭಿನಯದ ಮುಸುಕು ಚಿತ್ರದ ಯಾಮಿನೀ ದಾಮಿನಿ ಯಾರು ಹೇಳು ನೀ ಅನ್ನೋ ಹಾಡು ನೋಡಿದ್ದು ನೆನಪಿನಲ್ಲಿ ಅಚ್ಚೊತ್ತಿದಂತೆ ಇದೆ (ಬಹುಶ ಅವ್ರು ಅಷ್ಟು ಬಾರಿ ಅದನ್ನು ರೆಪೀಟ್ ಆಗಿ ಪ್ರಸಾರ ಮಾಡಿರ್ಬೇಕು ಅನ್ಸುತ್ತೆ!)

ಹೀಗೆ ನೆನಪಿನ ಗಣಿ ಅಗೆಯುತ್ತಾ ಹೋದರೆ ಕಾರಣವಿದ್ದೋ ಇಲ್ಲದೆಯೋ ಅಲ್ಲಿ ಗಟ್ಟಿಯಾಗಿ ಬೇರುಬಿಟ್ಟ ನೂರಾರು ಸಾವಿರಾರು ನೆನಪುಗಳ ಕಣಜವೇ ಸಿಗುತ್ತೆ. ಮತ್ತು ಅವು ಎಷ್ಟೇ ಸಿಲ್ಲಿಯಾಗಿದ್ರೂ ಕೂಡಾ ಯಾಕೋ ಏನೋ ಇಷ್ಟವಾಗುತ್ತೆ. ನಾಸ್ಟಾಲ್ಜಿಯಾ ಅಂದ್ರೆ ಇದೇನಾ?

 

ಚಿಕ್ಕಂದಿನಲ್ಲಿ ಮನೆಯವರಿಂದ ಹಿಡಿದು, ಬಂಧು ಮಿತ್ರರು, ಮನೆಗೆ ಬಂದ ಅತಿಥಿ ಅಭ್ಯಾಗತರಾದಿಯಾಗಿ ಎಲ್ಲರೂ ಕೇಳುವ ಪ್ರಶ್ನೆ ನೀನು ದೊಡ್ಡವನಾದ ಮೇಲೆ ಏನಾಗ್ತೀಯಾ? ಅಂತ. ಆ ವಯಸ್ಸಿನಲ್ ಇರುವ ಕಲ್ಪನೆ, ದೊಡ್ಡವರು ಹೇಳಿದ್ದು-ಕೇಳಿದ್ದು, ಟಿ.ವಿ. ಸಿನೆಮಾಗಳಲ್ಲಿ ನೋಡಿದ್ದು ಎಲ್ಲಾ ಸೇರಿ ಮನಸ್ಸಿಗೆ ಹೊಳೆದಂತಹ ಒಂದು ಉತ್ತರವನ್ನು ಕೊಟ್ಟಿರುತ್ತೇವೆ. ನಾನು ಪೈಲಟ್ ಆಗ್ತೀನಿ, ಸಿನೆಮಾ ಹೀರೋ ಆಗ್ತೀನಿ, ಡಾಕ್ಟರ್, ಸೈನಿಕ, ಮೇಷ್ಟ್ರು ಆಗ್ತೀನಿ, ಅಮೇರಿಕಾಕ್ಕೆ ಹೋಗ್ತೀನಿ… ಹೀಗೆ ತರಹೇವಾರಿ ಉತ್ತರಗಳನ್ನು ನಾವು ನೀವೆಲ್ಲಾ ಕೊಟ್ಟಿರುತ್ತೀವಿ. ಯಾವ ಆಧಾರವೂ ಇಲ್ಲದ ಆ ಬಾಲಿಶ ಮನಸ್ಸಿನ ಕಲ್ಪನೆಗೆ ತಕ್ಕುದಾದ ಆ ಉತ್ತರವನ್ನು ಗಂಭೀರವಾಗೇನೂ ಪರಿಗಣಿಸದೆ ಎಲ್ಲರೂ ನಕ್ಕು ಸುಮ್ಮನಾಗುತ್ತಾರೆ. ಆದರೆ ಬುದ್ಧಿ ಬೆಳೆದಂತೆಲ್ಲಾ ಬದುಕಿನ ಕುರಿತು ನಮ್ಮ ಪರಿಕಲ್ಪನೆಗಳು ಸ್ಪಷ್ಟವಾದಂತೆಲ್ಲಾ, ನಾನೇನು ಆಗಬೇಕು ಎಂಬ ಕನಸೊಂದು ಸದ್ದಿಲ್ಲದೆ ಮನಸಿನ ಗೂಡಿನೊಳಗೆ ನುಸುಳಿ ಬಂದಿರುತ್ತದೆ. ಅದು ಯಾರೆಲ್ಲರ ಬದುಕಿನಲ್ಲಿ ಕೈಗೂಡಿ ತಾವು ಬಯಸಿದ ಕ್ಷೇತ್ರದಲ್ಲೇ ಮುಂದುವರಿಯುವ ಅವಕಾಶ ಸಿಗುತ್ತದೋ ಗೊತ್ತಿಲ್ಲವಾದರೂ ಕನಸಂತೂ ಎಲ್ಲರಲ್ಲೂ ಮೊಳಕೆಯೊಡೆದಿರುತ್ತದೆ.

 

ಇಂತಹ ಕನಸೊಂದನ್ನು ನಾನೂ ಕಟ್ಟಿಕೊಂಡಿದ್ದೆ. ನಾನು ಪತ್ರಕರ್ತನಾಗಬೇಕೆಂಬುದೇ ಆ ಹೆಬ್ಬಯಕೆ. ಆದರೆ ಪಿಯೂಸಿ ಮುಗಿದಾಕ್ಷಣ ಮುಂದೇನು ಎಂದು ಎಲ್ಲಾ ಹೆತ್ತವರು ಚಿಂತಿಸುವಂತೆಯೇ ನನ್ನ ಮನೆಯವರೂ ಚಿಂತಿಸಿ ತಳೆದ ನಿರ್ಧಾರದ ಫಲವಾಗಿ, ಬಂಧು ಮಿತ್ರರ ಒತ್ತಾಸೆ ( ಒತ್ತಾಯದ ಆಸೆ? )ಗೆ ಅನುಗುಣವಾಗಿ ನಾನು ಇಂಜಿನಿಯರಿಂಗ್‌ಗೆ ಸೇರಬೇಕಾಗಿ ಬಂತು. ಇಂಜಿನಿಯರಿಂಗ್ ಸೇರುವ ಮೊದಲು ಸಿಕ್ಕಿದ ೪ ತಿಂಗಳ ಬಿಡುವಿನ ಅವಧಿಯಲ್ಲಿ ನನ್ನಾಸೆಗೆ ಇಂಬುಕೊಡುವ ಅವಕಾಶವೊಂದು ಒದಗಿ ಬಂತು. ನನ್ನ ಮಾವ ಆಗ ಉಡುಪಿಯಿಂದ ಹೊರಡಿಸುತ್ತಿದ್ದ ಕ್ಷಿತಿಜ ಅನ್ನುವ ಪಾಕ್ಷಿಕ ಪತ್ರಿಕೆಯಲ್ಲಿ ನನ್ನ ಬರವಣಿಗೆಯ ಆಸೆಗೆ ನೀರೆರೆಯುವಂತಹ ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಸಿನೆಮಾ, ಕ್ರೀಡೆ, ರಾಜಕೀಯ, ಚಿಂತನೆ, ಅನುವಾದ, ಪದಬಂಧ, ವಿಶಿಷ್ಠ-ವಿಚಿತ್ರ ಅನ್ನುವ ಪುಟ್ಟದೊಂದು ಅಂಕಣ.. ಇವೆಲ್ಲದನ್ನು ಬರೆಯುವ ಸದಾವಕಾಶ ನನ್ನದಾಗಿತ್ತು. ಪತ್ರಕರ್ತನಾಗದೇ ಹೋದರೂ ನಾನೂ ಒಬ್ಬ ಬರಹಗಾರನಾದೆನಲ್ಲ ಅನ್ನುವ ಸಮಾಧಾನ ಸಿಕ್ಕಿತ್ತು.

 

ಮುಂದೆ ಇಂಜಿನಿಯರಿಂಗ್‌ನ ತಿರುಗಣೆಯಲ್ಲಿ ಬರೆಯುವ ಅವಕಾಶ ಸಿಗಲೇ ಇಲ್ಲ. ಈ ನಡುವೆ ಉದಯವಾಣಿಯಲ್ಲೊಮ್ಮೆ ನನ್ನ ಕ್ರೀಡಾ ಬರಹ ಪ್ರಕಟವಾದದ್ದೇ ಈ ನಿಟ್ಟಿನಲ್ಲಿ ನಡೆದ ಏಕೈಕ ಪ್ರಯತ್ನ. ಮುಂದೆ ಪದವಿಯ ನಂತರ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಇಂಜಿನಿಯರ್ ಅನ್ನಿಸಿಕೊಂಡು ಈಗಾಗಲೇ ಸುಮಾರು ಐದೂವರೆ ವರ್ಷ ಕಳೆದುಹೋಗುತ್ತಿರುವ ಈ ವೇಳೆಯಲ್ಲಿ ನನ್ನ ಕನಸಿನ ಕುರಿತು ಹಿಂದಿರುಗಿ ನೋಡಿದರೆ ನಿರಾಸೆಯ ನಡುವೆಯೂ ಸಮಾಧಾನದ ಒಂದು ಎಳೆ ಕಾಣಸಿಗುತ್ತದೆ. ನನ್ನದಲ್ಲದ ಮಾಧ್ಯಮವಾದ ಹನಿಗವನ, ಅಣಕವಾಡು ಇತ್ಯಾದಿಗಳನ್ನು ಆಗೊಮ್ಮೆ ಈಗೊಮ್ಮೆ ಬರೆದು ನನ್ನ ಮಿತ್ರ ಮಣಿಕಾಂತನಿಗೆ ಮೊಬೈಲ್‌ನಲ್ಲೇ ಬರೆದು ಕಳಿಸುತ್ತಲಿದ್ದೆ. ಅದು ಆಗೀಗ ವಿಜಯ ಕರ್ನಾಟಕದಲ್ಲೂ ಅಚ್ಚಾಗುತ್ತಲೂ ಇತ್ತು. ಅವನ್ನೆಲ್ಲಾ ಒಟ್ಟಾಗಿಸಿ ಅಂತರಂಗದ ಆಪ್ತಸ್ವರ ಅನ್ನುವ ಹೆಸರಿನಲ್ಲಿ ಬಿಡುಗಡೆ ಮಾಡಿದ್ದೂ ಆಯ್ತು. ಅದೂ ಕೂಡಾ ನನ್ನ ಇಷ್ಟದ ಲೇಖಕರಾದ ವಸುಧೇಂದ್ರ ಮತ್ತು ಆಲೂರರ ಸಮ್ಮುಖದಲ್ಲಿ. ಈ ಸಂಕಲನ ಅಚ್ಚಾಗಿ ಹೊರಬಂದ ಹೊತ್ತಿನಲ್ಲ್ರಿ ನನ್ನ ಇಷ್ಟದ ಪ್ರಕಾರವಾದ ಗದ್ಯದಲ್ಲಿ ಯಾಕೆ ಕೈ ಆಡಿಸಬಾರದು ಅಂತ ಅನ್ನಿಸತೊಡಗಿತ್ತು. ಆದರೆ ಅದನ್ನು ಬರೆದರೆ ಪ್ರಕಿಟಿಸೋದು ಹೇಗೆ ಅಂತ ಎಣಿಸುತ್ತಿರುವಾಗಲೇ, ಕನ್ನಡದಲ್ಲಿ ಇರುವ ಬ್ಲಾಗ್‌ಗಳ ಪಟ್ಟಿಯೊಂದು ಈ-ಮೇಲ್ ಮೂಲಕ ಬಂದಿತ್ತು. ಹುಡುಕುತ್ತಿದ್ದ ಬಳ್ಳಿಯೇ ಬಂದು ಕಾಲಿಗೆ ತೊಡರಿದಂತಾಯಿತು. ಸರಿ ಶುರುವಾಯ್ತು ನನ್ನ ಬ್ಲಾಗಿನ ಬರವಣಿಗೆ. ಮೊಟ್ಟ ಮೊದಲನೇ ಬರಹವಾಗಿ ರಂಗಶಂಕರದಲ್ಲಿ ನೋಡಿದ ಮೂಕಜ್ಜಿಯ ಕನಸುಗಳು ನಾಟಕದ ವಿಮರ್ಶಾರೂಪದ ಲೇಖನ ಬರೆದೆ. ಹತ್ತು ವರ್ಷದ ಬರಹ ಸನ್ಯಾಸದ ವ್ರತ ಕೊನೆಗೂ ಮುರಿಯಿತು. ಈ ಬ್ಲಾಗಿನ ಪಯಣ ೩ ತಿಂಗಳಿನಲ್ಲೇ ಅನೇಕ ಹೊಸ-ಹೊಸ ಗೆಳೆಯರನ್ನು ತಂದು ಕೊಟ್ಟಿತು. ಈ ಸ್ಫೂರ್ತಿಯಲ್ಲೇ ನಮ್ ಕುಂದಾಪ್ರ ಕನ್ನಡಕ್ಕೆ ಎಂತಾರೂ ಬರೀದಿದ್ರೆ ಹ್ಯಾಂಗೆ ಅಂತೇಳಿ ಕುಂದಾಪ್ರ ಕನ್ನಡ ’http://kundaaprakannada.wordpress.com ಅನ್ನೋ ಬ್ಲಾಗ್ ಕೂಡಾ ಶುರುವಿಟ್ಟುಕೊಂಡೆ.

 

ಅಂತೂ ಇಂತೂ ಕಂಡ ಕನಸೊಂದು ಈ ರೂಪದಲ್ಲಿ ಕೈಗೂಡುತ್ತಿರುವ ಸಮಾಧಾನವಿದೆ. ನೀವು ಓದಿ ಮೆಚ್ಚುಗೆಯ ನಾಲ್ಕು ಮಾತು ಹೇಳಿದ್ರೆ ಹೆಚ್ಚು ಉತ್ಸಾಹದಲ್ಲಿ ಬರೆದೇನು. ತಪ್ಪಿದ್ದರೆ ತೋರಿಸಿದರೆ ತಿದ್ದಿಕೊಂಡೇನು.. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಾ..

            ವಿಜಯ್‌ರಾಜ್ ಕನ್ನಂತ್

 

 

ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ? ಹಾಗಿದ್ರೆ ಓದಿ ನೋಡಿ.

 

ಮೊಟ್ಟ ಮೊದಲನೆಯದಾಗಿ ದೇವನೊಬ್ಬ ನಾಮ ಹಲವು ಅನ್ನುವ ಮಾತಿದೆಯಷ್ಟೇ? ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ ಪ್ರೈಮ್ ಟೈಮ್‌ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ, ಅದೇ ಮಧ್ಯಮ ವರ್ಗದ ಕನಸು-ಆಸೆ-ನಿರಾಸೆಗಳು, ಅತ್ತೆ-ಸೊಸೆ ಜಗಳಗಳು, ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಮಿಂದು ಮುಳುಗಿ ಹೋಗಿರುವಾಗ ಕಥೆ ಒಂದು, ಶೀರ್ಷಿಕೆಚ್ಯಾನೆಲ್ ಹಲವು ಅಂತನ್ನುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೇ? ಅದೂ ಅಲ್ಲದೆ ಆ ಧಾರಾವಾಹಿಯಲ್ಲಿ ಗೀತಾ ಆದವಳು ಇಲ್ಲಿ ಸೀತಾ; ಅಲ್ಲಿ ಶ್ಯಾಮನಾದವನು ಇಲ್ಲಿ ರಾಮನಾಗಿ ಅವತಾರವೆತ್ತಿರುವಾಗ, ಅದೇ ಅದೇ ಮುಖಗಳು ಕಾಣಿಸಿಕೊಂಡು ಪಾತ್ರಧಾರಿ ಒಬ್ಬನೇ ಪಾತ್ರ ಬೇರೆ ಅನ್ನೋದು ಕೂಡಾ ಸರಿ ಅಂದ ಹಾಗಾಯ್ತು.

 

ಅದೂ ಅಲ್ಲದೆ ದೇವರು ಎಷ್ಟೇ ಕಷ್ಟ ಕೊಟ್ಟರೂ ಸಮಚಿತ್ತದಿಂದ ನಗುನಗುತ್ತಾ ಸ್ವೀಕರಿಸುವ ಹೆಣ್ಣು ಮಕ್ಕಳನ್ನೆಲ್ಲಾ ಸಾಮೂಹಿಕವಾಗಿ ಕಣ್ಣೀರು ಸುರಿಸುವಂತೆ ಮಾಡುವ ಧಾರಾವಾಹಿಯ ನಿರ್ದೇಶಕ ಅನ್ನುವ ಸೂತ್ರಧಾರನಿಗೆ ಆ ಪಟ್ಟವನ್ನು ದೇವರೇ ಹತಾಶೆಯಿಂದ ನೀಡಿದ್ದಾನೆ ಅನ್ನುವುದು ಒಂದು ವದಂತಿ. ಜೊತೆಗೆ ಟಿ.ಆರ್.ಪಿ.ಗೆ ಅನುಗುಣವಾಗಿ ಪಾತ್ರಗಳ ಬದುಕಿನ ಆಟಗಳನ್ನು ಹಿಗ್ಗಿಸುವ ಕುಗ್ಗಿಸುವ ಶಕ್ತಿ, ಕಿರಿಕ್ ಪಾರ್ಟಿಗಳನ್ನು ತಟಕ್ಕನೆ ಸಾಯಿಸಿ ಹೂಹಾರ ಹಾಕಿ ಕೈತೊಳೆದುಕೊಳ್ಳುವ ನಿರ್ದೇಶಕನ ಸಾಮರ್ಥ್ಯದಿಂದ ದೇವರು ತನ್ನ ಸರ್ವಶಕ್ತ ಪದ ತ್ಯಾಗ ಮಾಡಿರುವುದು ಇದೀಗ ಬಂದ ಫ್ಲಾಶ್ ನ್ಯೂಸ್.

 

ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲವೇನೋ. ಆದ್ರೆ ನೀವೆ ನೋಡಿರುವಂತೆ ಬೆಂಗಳೂರಿನ ಚಾಮರಾಜ ಪೇಟೆಯಿಂದ ಮಡಿಕೇರಿಯ ವಿರಾಜಪೇಟೆಯವರೆಗೆ, ಶಿವಮೊಗ್ಗದ ಶಿಕಾರಿಪುರದಿಂದ ಹಿಡಿದು ಗುಲ್ಬರ್ಗದ ಅಫ್ಜಲ್‌ಪುರದವರೆಗೂ ಸಂಜೆ 6ರಿಂದ ರಾತ್ರಿ 1೦ರವರೆಗೆ ನೀವು ಯಾರ ಮನೆ ಹೊಗ್ಗಿ ಹೊರಟರೂ ಎಲ್ಲೆಲ್ಲೂ ಮಿಂಚು, ಮುಗಿಲು, ಮಾಂಗಲ್ಯಗಳೇ. ಇದನ್ನು ಕಂಡ ಮೇಲೆ ಧಾರಾವಾಹಿ ಸರ್ವಾಂತರ್ಯಾಮಿ ಅನ್ನೋದನ್ನು ಒಪ್ಕೋತೀರ? ಇಷ್ಟೆಲ್ಲಾ ಆದ ಮೇಲೆ ದೇವರಿಗೆ ತನ್ನ ಪಟ್ಟದ ಬಗ್ಗೆ ಹೆದರಿಕೆ ಹುಟ್ಟುವುದು ಸಹಜ ತಾನೆ?

 

ಅಸಲಿ ಟ್ರಬಲ್ಲು ಇರುವುದು ಬೇರೆಯದೇ ಆದ ಒಂದು ಕಾರಣಕ್ಕೆ. ಹಿಂದೆಲ್ಲಾ ವಯಸ್ಸಾದವರು ನೇರವಾಗಿ ಸ್ವರ್ಗಕ್ಕೆ ಹೋಗೋ ಆಸೆಯಿಂದ ಉತ್ತರಾಯಣ ಕಾಲದವರೆಗೆ ನನ್ನನ್ನು ಬದುಕಿಸಪ್ಪಾ, ಆಮೇಲೆ ಬೇಕಾದ್ರೆ ಕೊಂಡುಹೋಗುವಿಯಂತೆ ಅಂತ ಬೇಡ್ಕೊಳ್ತಾ ಇದ್ದದ್ದು ನಿಜವಷ್ಟೇ? ದೇವ್ರೂ ಕೂಡಾ ಹೋಗ್ಲಿ ಬಿಡಿ ಪಾಪ ಅಂತ ಆಗೀಗ ಅಸ್ತು ಅಂದಿರಲೂ ಸಾಕು. ಆದ್ರೆ ಈಗ ಏನಾಗಿದೆ ನೋಡಿ. ಈ ಧಾರಾವಾಹಿ ಮುಗಿಯೋವರೆಗಾದ್ರೂ ನನ್ನನ್ನು ಕರ್ಕೋಬೇಡಪ್ಪಾ ಅಂತ ಬೇಡ್ಕೊಳ್ಳೋರು ಜಾಸ್ತಿ ಆಗಿದಾರೆ. ದೇವರೂ ಕರಗಿ ತಥಾಸ್ತು ಅಂದಿದ್ದೇ ಈಗ ಫಚೀತಿಗಿಟ್ಟುಕೊಂಡಿದೆ. ಅತ್ಲಾಗೆ ಧಾರಾವಾಹಿ ಮುಗ್ಯೋದೂ ಇಲ್ಲಾ, ಇತ್ಲಾಗೆ ಡೆಡ್‌ಲೈನ್ ಮೀರಿದ್ರೂ ಟಾರ್ಗೆಟ್ ಮುಟ್ಲಿಲ್ಲ ಅಂತ ಅವನ ಬಾಸ್ ಬೇರೆ ರಗಳೆ ಮಾಡ್ತಾ ಇದ್ದಾನೆ. ಒಟ್ರಾಶಿಯಾಗಿ ದೇವರ ಸ್ಥಿತಿ ಅವನ ಶತ್ರುವಿಗೂ ಬೇಡ ಅನ್ನೋಹಾಗಾಗಿ ಬಿಟ್ಟಿದೆ. ಅದನ್ನು ಅವ್ನು ಕಳ್ಳಬಟ್ಟಿ, ಅಪಘಾತಗಳ ಲೆಕ್ಕದಲ್ಲಿ ಹೇಗೋ ಸರಿದೂಗಿಸಿ ಅಯ್ಯಬ್ಬಾ ಅಂತ ಉಸಿರುಬಿಡ್ತಾ ಇದ್ದಾನಂತೆ.

 

ಇದೆಲ್ಲದರಿಂದ ಬೇಸತ್ತು ಹೋಗಿ ದೇವ್ರು ಈಗ ನಂಗೆ ಈ ಕೆಲ್ಸಾನೇ ಬೇಡ. ಈ ಪಟ್ಟ, ಬಿರುದು, ಬಾವಲಿಗಳೆಲ್ಲಾ ಧಾರಾವಾಹಿಗೇ ಇರಲಿ ಅಂದ್ಕೊಂಡು, ರಾಜೀನಾಮೆ ಕೊಟ್ಟು ನೋಟೀಸ್ ಪಿರಿಯಡ್ನಲ್ಲಿ ಇದ್ದಾನಂತೆ. ಈಗ ಅವನದ್ದು ಒಂದೇ ಹಾಡು… ಎಂದು ಆದೇನು ನಾನು….. ಮುಕ್ತ…ಮುಕ್ತ…ಮುಕ್ತ

 

( ಎಲ್ಲಾ ಆಸ್ತಿಕ ಮಹಾಶಯರ ಕ್ಷಮೆ ಕೋರಿ )

ವಿಜಯ್‌ರಾಜ್ ಕನ್ನಂತ್

 

 

 

ಮನಸಿನ ಅಂಗಳದಲ್ಲಿ ಮೂಡಿ ಮರೆಯಾಗುವ, ಈಗಿದ್ದು ಇಲ್ಲವಾಗುವ ನೂರು ಸಾವಿರ ಭಾವಗಳಲ್ಲಿ ಆಗೊಮ್ಮೆ ಈಗೊಮ್ಮೆ ಒಡಮೂಡಿದ ಆಪ್ತ ದನಿಗಳನ್ನು ಹೆಕ್ಕಿ ನಿಮ್ಮ ಮುಂದೆ ಹರವುತ್ತಿದ್ದೇನೆ. ನೆನಪಿನ ಯಾವ ಪದರದಲ್ಲೋ ಅವಿತ ನವಿರು ಕಂಪನಗಳಿಗೆ ಅಕ್ಷರ ರೂಪ ನೀಡಿ ನಿಮ್ಮೆದುರು ಇಡುತ್ತಿದ್ದೇನೆ. ಈ ನೂರಾರು ಸ್ವರ ಕಂಪನಗಳಲ್ಲಿ ಒಂದೆರಡಾದರೂ ನಿಮ್ಮ ಮನಸ್ಸಿನ ಕದ ತಟ್ಟಿದರೆ ಹೊರ ಹೊಮ್ಮಿದ ಅಂತರಂಗದ ದನಿ ಸಾರ್ಥಕವಾದಂತೆ.

 

ಅಂತರಂಗದ ಸರಿಗಮಪದನಿ

ಗುನುಗುತಲಿದೆ ಮನಸಿನ ಇನಿದನಿ

ಮನಸಿನೊಳಗಿನ ಪಿಸುಮಾತು

ಪದಗಳಾಗಿ ಹೊರಬಂತು

 

ಪದಗಳಾಗಿ ಹೊರಬಂದ ಮನಸಿನ ಹಾಡುಗಳನ್ನೆಲ್ಲಾ ಒಟ್ಟಾಗಿಸಿ ಅಂತರಂಗದ ಆಪ್ತಸ್ವರ ಅನ್ನುವ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರತಂದಿದ್ದೇನೆ. ನಾಡಿದ್ದು ಶನಿವಾರ 14 ಜೂನ್, 2೦೦8ರಂದು ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬಿಡುಗಡೆಯ ಸಂಭ್ರಮ. ಚೆಂದದ ಕಥೆಗಳನ್ನು ಬರೆಯುವ ಛಂದ ಪುಸ್ತಕದ ವಸುಧೇಂದ್ರ ಹಾಗೂ ಒಲಿದಂತೆ ಹಾಡುತ್ತಾ ಸುಂದರ ಪ್ರಬಂಧಗಳನ್ನು ಬರೆಯುವ ಚಂದ್ರಶೇಖರ ಆಲೂರ್ ಉಪಸ್ಥಿತಿಯಿಂದ ಸಮಾರಂಭಕ್ಕೆ ಇನ್ನಷ್ಟು ಮೆರುಗು ಬರುತ್ತದೆ. ಈ ಸಂತೋಷದಲ್ಲಿ ಭಾಗಿಯಾಗಲು ಸಾಹಿತ್ಯ ಪ್ರೇಮಿಗಳಾದ ನೀವೆಲ್ಲರೂ ಆಗಮಿಸಿದರೆ ಖುಷಿ ಇಮ್ಮಡಿಯಾದೀತು. ಬರ್ತೀರಲ್ವಾ? ಪುಸ್ತಕರೂಪದಲ್ಲಿ ಹೊರಬರುತ್ತಿರುವ ನನ್ನ ಮೊದಲನೇ ಕೃತಿ ಇದು. ಓದಿ ಪ್ರೋತ್ಸಾಹಿಸಿ.. ತಪ್ಪುಗಳಿದ್ದರೆ ತಿದ್ದಿ.

 

ನನ್ನೂರು ಕುಂದಾಪುರ ಬಳಿಯ ಹಳ್ಳಿಹೊಳೆ, ಕಮಲಶಿಲೆ, ಹಳ್ಳಿಹೊಳೆ ಸಿದ್ಧಾಪುರ, ಬಾರ್ಕೂರಿನಲ್ಲಿ ಓದಿ, ಮುಂದೆ ಮಣಿಪಾಲದ ಎಂ.ಐ.ಟಿ. ಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಸಧ್ಯಕ್ಕೆ ಬಸವನಗುಡಿಯ ಕ್ಯಾರಿಟೋರ್(ಕೀನ್)ನಲ್ಲಿ ಪ್ರಾಜೆಕ್ಟ್ ಲೀಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ತೋಚಿದ್ದು ಗೀಚಿದ್ದೆಲ್ಲಾ ಆಗೊಮ್ಮೆ ಈಗೊಮ್ಮೆ ವಿಜಯ ಕರ್ನಾಟಕ ಮತ್ತು ಉದಯವಾಣಿಯಲ್ಲಿ ಬೆಳಕು ಕಂಡಿವೆ. ಅಕ್ಷರಪ್ರೀತಿ ಜಾರಿಯಲ್ಲಿಡುವ ಬಯಕೆಯಿಂದ ನನ್ನ ಬ್ಲಾಗ್ ಮನಸಿನ ಮರ್ಮರದಲ್ಲಿ ಪುಸ್ತಕ ವಿಮರ್ಶೆ, ಚಿತ್ರ ವಿಮರ್ಶೆ, ಮನಸಿನ ಲಹರಿ, ಪದಬಂಧ, ಹರಟೆ ಹೀಗೆ ಒಂದಿಷ್ಟು ಬರೆದಿದ್ದೇನೆ. ಸಮಯ ಸಿಕ್ಕಾಗಲೊಮ್ಮೆ ಕಣ್ಣು ಹಾಯಿಸಿ <https://vijaykannantha.wordpress.com&gt;

 

ಕುಂದಗನ್ನಡದ ಮೇಲಿನ ಪ್ರೀತಿಯಿಂದ ಕುಂದಾಪ್ರ ಕನ್ನಡ ಅನ್ನೋ ಬ್ಲಾಗ್ ಕೂಡಾ ಶುರು ಮಾಡಿದ್ದೇನೆ. ಆಸಕ್ತಿ ಇರುವವರು ಈ ಕೆಳಗಿನ ತಾಣಕ್ಕೆ ಭೇಟಿ ಕೊಡಿ <http://kundaaprakannada.wordpress.com&gt;

 

ಸಧ್ಯಕ್ಕೆ ಇಷ್ಟು ಸಾಕಲ್ಲವೇ..? ಪುಸ್ತಕ ಬಿಡುಗಡೆಗೆ ಖಂಡಿತಾ ಬರ್ತೀರಲ್ಲವೇ?

 

 

ಪದಬಂಧ, ಪದಹಾಸು, ಮೆದುಳಿಗೆ ಮೇವು, ನುಡಿಕಟ್ಟು…ಹೀಗೆ ಅನೇಕ ದಿನಪತ್ರಿಕೆಗಳಲ್ಲಿ, ನಿಯತ ಕಾಲಿಕಗಳಲ್ಲಿ ಬರುವ ಪದಗಳ ನಡುವಿನ ಆಟ ಆಕರ್ಷಿಸಿದಷ್ಟು ಇನ್ಯಾವುದೂ ನನ್ನನ್ನು ಆಕರ್ಷಿಸಿಲ್ಲ ಅಂತಾನೇ ಹೇಳ್ಬೋದು… 10 ವರ್ಷದ ಕೆಳಗೆ ನನ್ನ ಮಾವ ನಡೆಸುತ್ತಿದ್ದ ಕ್ಷಿತಿಜಪತ್ರಿಕೆಗೆ ಆಗೊಮ್ಮೆ ಈಗೊಮ್ಮೆ ಇಂತಹ ಪದಹಾಸು ರಚಿಸಿದ್ದುಂಟು. ಈಗ ಮತ್ತೊಮ್ಮೆ ಅಂತಹುದೆ ಪ್ರಯತ್ನಕ್ಕೆ ಕೈ ಹಾಕಿ ನಿಮಗಾಗಿ ಒಂದು ಪದಬಂಧ ರಚಿಸಿದ್ದೇನೆ.

ಆಸಕ್ತಿ ಇರುವವರು ಉತ್ತರ ಬರೆದು ಕಳಿಸಿದ್ರೆ ಅದನ್ನು ಪರೀಕ್ಷಿಸಿ ಸರಿ ಉತ್ತರ ಹೇಳ್ತೀನಿ…

ಪದಬಂಧ

ಎಡದಿಂದ ಬಲಕ್ಕೆ

1 ಪ್ರಕೃತ ವಿಷಯದಲ್ಲಿ ಗಮನವಿಲ್ಲದವ, ಬೇರೆ ಕಡೆ ಮನಸ್ಸಿಟ್ಟವ   (5)

3 ಉಡುಪಿಯ ಹೆಸರಾಂತ ಉತ್ಸವವನ್ನು ಆದಿಯಲ್ಲಿ ಕಟ್ಟಿಕೊಂಡ ಸಮಾನಾರ್ಥಕ ಪದ(5)

6 ಚಿತ್ರಕಾರನ ಕೈಲಿರುವುದೇನು ಹೇಳಿ?   (2)

7 ಬೇಕಾದ್ದಕ್ಕಿಂತ ಜಾಸ್ತಿ ಮಾತಾಡುವ ಇವನನ್ನು ತಲೆಹರಟೆ ಅಂತಾನೂ ಕರೀಬಹುದು   (6)

8 ದೊಡ್ಡ ಬುಟ್ಟಿ, ಮಂಕರಿ ಇಲ್ಲಿ ದಿಕ್ಕು ತಪ್ಪಿಸಿ ಬಂದಿದೆ   (2)

11 ಈ ನೋಟ, ದೃಷ್ಟಿ ಉತ್ತರ ಭಾರತದಿಂದ ಬಂದಿದೆಯೆ?   (3)

12 ಮನಸ್ಸಿನ ಬಯಕೆ, ಇಚ್ಛೆ ಕೊನೆಯಲ್ಲಿ ಯುದ್ಧದಲ್ಲಿ ಬಳಸುವ ಕುದುರೆಯ ಗಾಡಿಯನ್ನು ಕಟ್ಟಿಕೊಂದಿದೆ   (4)

14 ಪ್ರೀತಿಯಿಂದ ಸಮಾಧಾನ ಮಾಡು, ಸಂತೈಸು   (3)

15 ಇದು ಆಸ್ಥಾನಕ್ಕೆ ಹೊರಡುವ ಪ್ರಯಾಣ ಅಥವಾ ಸಂಚಾರವೇ?   (3)

16 ದಿಗಿಲು ಅಥವ ಸಂಕಟವನ್ನು ಸೂಚಿಸುವ ನಾಲ್ಕಕ್ಷರದ ಪದ   (4)

17 ಈ ಹೂವು ಷಟ್ಪದಿಯೊಂದರ ಹೆಸರೂ ಕೂಡಾ ಹೌದು   (3)

19 ಎರಡಕ್ಷರದ ಮಂಗಳಸೂತ್ರ

2೦ ನಿಂದಿಸುವುದರ ಜೊತೆ ವಿಶೇಷಣವಾಗಿ ಬಳಸುವ ಪದ, ಬಾಯಿಗೆ ಬಂದಂತೆ ಅಥವಾ ಅವಾಚ್ಯವಾಗಿ ಅನ್ನುವ ಅರ್ಥ ಕೊಡುತ್ತೆ. ಮಧ್ಯೆ ಒಂದಕ್ಷರದ ಹಸು ಇದೆ   (6)

21 ಈ ಕೆಲಸದ ಹೆಂಗಸು ಹಿಂದೀ ನಾಡಿಂದ ಬಂದವಳಾ?   (2)

24 ಕಾರ್ನಾಡರ ಕುದುರೇಮುಖ   (5)

25 ನಂಬಿಸಿ ಮೋಸ ಮಾಡುವುದು ಅನ್ನುವ ಈ ಪದದ ಆದಿಯಲ್ಲಿ ನುಣುಪಿಗೆ ಪರ್ಯಾಯವಾದ ಎರಡಕ್ಷರವಿದೆ (5)

ಮೇಲಿನಿಂದ ಕೆಳಕ್ಕೆ

1 ಮುಖದ ಪರದೆ ಅಥವಾ ಮುಸುಕು ಕಾವ್ಯಮಯ ರೂಪದಲ್ಲಿದೆ   (5)

2 ತೀರಾ ಭಾರ ಅನ್ನುವಾಗ ಬಳಕೆಯಾಗುವ ವಿಶೇಷಣ, ಸುಮಾರು ನಲವತ್ತು ಸೇರಿನ ಒಂದು ಅಳತೆ   (2)

4 ಕುಬೇರನ ಇನ್ನೊಂದು ಹೆಸರು;  ಕರಾವಳಿ, ಮಲೆನಾಡು ಭಾಗದ ಹೆಸರಾಂತ ಕಲೆಯ ಮೊದಲಾರ್ಧ ಕೂಡಾ (2)

5 ಬೇರೆಯವರ ಅಭಿಪ್ರಾಯಕ್ಕೆ ಸಹಮತ ಸೂಚಿಸು, ಅನುಮೋದಿಸು ಅನ್ನುವ ಪದದ ಮೊದಲಲ್ಲಿ ಸ್ವರದ ಇನ್ನೊಂದು ಹೆಸರು  ಇದೆ   (5)

9 ಕನಿಕರ ಹುಟ್ಟಿಸುವ, ದಯನೀಯ ಸ್ಥಿತಿಯ ಕೊನೆಯಲ್ಲಿ ಸೀತೆಯ ಅಪ್ಪ ಇದ್ದಾನೆ   (6)

1೦ ಓದು ಬರಹ ಬಾರದವನು, ಅವಿದ್ಯಾವಂತ   (6)

12 ನವರತ್ನಗಳಲ್ಲಿ ಒಂದು, ಆದಿಯಲ್ಲಿ ವೃಕ್ಷವಿದೆ   (4)

13 ಹೊಳೆಯುವುದನ್ನು ಸೂಚಿಸುವ ಈ ವಿಶೇಷಣ ದ್ವಿರುಕ್ತಿಯಲ್ಲಿದೆ   (4)

15 ಈ ಮುತ್ತಜ್ಜ ( ಸುಳುಹು : ಮಹಾಭಾರತದಲ್ಲಿ ಭೀಷ್ಮರನ್ನು ಪಾಂಡವರು ಕೌರವರು ಏನಂತ ಸಂಬೋಧಿಸುತ್ತಿದ್ರು ಅಂತ ಟಿ.ವಿ. ಸೀರಿಯಲ್‌ನಲ್ಲಿ ಕೇಳಿದ್ದು ನೆನಪು ಮಾಡ್ಕೊಳ್ಳಿ. ಅದಕ್ಕೆ ಆದಿಯಲ್ಲಿ ಒಂದಕ್ಷರ ಸೇರಿಸಿದ್ರೆ ಮುತ್ತಜ್ಜ ಬರ್ತಾರೆ)   (5)

18 ಕಳೆದೊಂದು ತಿಂಗಳಲ್ಲಿ ರಾಜಕಾರಣಿಗಳು ಮನೆ ಮನೆಗೆ ತೆರಳಿ ಮಾಡಿದ ಮನವಿ   (5)

22 ಅನಂತಮೂರ್ತಿಯವರ ಕಾದಂಬರಿಯ ಹೆಸರು ( ಸುಳುಹು : ದಿವ್ಯ ಅಲ್ಲ )   (2)

23 ಈ ನಮಸ್ಕಾರ ಮೇಲೇರುತ್ತಿದೆ   (2)