Archive for ಜೂನ್ 7, 2008

ಪದಬಂಧ, ಪದಹಾಸು, ಮೆದುಳಿಗೆ ಮೇವು, ನುಡಿಕಟ್ಟು…ಹೀಗೆ ಅನೇಕ ದಿನಪತ್ರಿಕೆಗಳಲ್ಲಿ, ನಿಯತ ಕಾಲಿಕಗಳಲ್ಲಿ ಬರುವ ಪದಗಳ ನಡುವಿನ ಆಟ ಆಕರ್ಷಿಸಿದಷ್ಟು ಇನ್ಯಾವುದೂ ನನ್ನನ್ನು ಆಕರ್ಷಿಸಿಲ್ಲ ಅಂತಾನೇ ಹೇಳ್ಬೋದು… 10 ವರ್ಷದ ಕೆಳಗೆ ನನ್ನ ಮಾವ ನಡೆಸುತ್ತಿದ್ದ ಕ್ಷಿತಿಜಪತ್ರಿಕೆಗೆ ಆಗೊಮ್ಮೆ ಈಗೊಮ್ಮೆ ಇಂತಹ ಪದಹಾಸು ರಚಿಸಿದ್ದುಂಟು. ಈಗ ಮತ್ತೊಮ್ಮೆ ಅಂತಹುದೆ ಪ್ರಯತ್ನಕ್ಕೆ ಕೈ ಹಾಕಿ ನಿಮಗಾಗಿ ಒಂದು ಪದಬಂಧ ರಚಿಸಿದ್ದೇನೆ.

ಆಸಕ್ತಿ ಇರುವವರು ಉತ್ತರ ಬರೆದು ಕಳಿಸಿದ್ರೆ ಅದನ್ನು ಪರೀಕ್ಷಿಸಿ ಸರಿ ಉತ್ತರ ಹೇಳ್ತೀನಿ…

ಪದಬಂಧ

ಎಡದಿಂದ ಬಲಕ್ಕೆ

1 ಪ್ರಕೃತ ವಿಷಯದಲ್ಲಿ ಗಮನವಿಲ್ಲದವ, ಬೇರೆ ಕಡೆ ಮನಸ್ಸಿಟ್ಟವ   (5)

3 ಉಡುಪಿಯ ಹೆಸರಾಂತ ಉತ್ಸವವನ್ನು ಆದಿಯಲ್ಲಿ ಕಟ್ಟಿಕೊಂಡ ಸಮಾನಾರ್ಥಕ ಪದ(5)

6 ಚಿತ್ರಕಾರನ ಕೈಲಿರುವುದೇನು ಹೇಳಿ?   (2)

7 ಬೇಕಾದ್ದಕ್ಕಿಂತ ಜಾಸ್ತಿ ಮಾತಾಡುವ ಇವನನ್ನು ತಲೆಹರಟೆ ಅಂತಾನೂ ಕರೀಬಹುದು   (6)

8 ದೊಡ್ಡ ಬುಟ್ಟಿ, ಮಂಕರಿ ಇಲ್ಲಿ ದಿಕ್ಕು ತಪ್ಪಿಸಿ ಬಂದಿದೆ   (2)

11 ಈ ನೋಟ, ದೃಷ್ಟಿ ಉತ್ತರ ಭಾರತದಿಂದ ಬಂದಿದೆಯೆ?   (3)

12 ಮನಸ್ಸಿನ ಬಯಕೆ, ಇಚ್ಛೆ ಕೊನೆಯಲ್ಲಿ ಯುದ್ಧದಲ್ಲಿ ಬಳಸುವ ಕುದುರೆಯ ಗಾಡಿಯನ್ನು ಕಟ್ಟಿಕೊಂದಿದೆ   (4)

14 ಪ್ರೀತಿಯಿಂದ ಸಮಾಧಾನ ಮಾಡು, ಸಂತೈಸು   (3)

15 ಇದು ಆಸ್ಥಾನಕ್ಕೆ ಹೊರಡುವ ಪ್ರಯಾಣ ಅಥವಾ ಸಂಚಾರವೇ?   (3)

16 ದಿಗಿಲು ಅಥವ ಸಂಕಟವನ್ನು ಸೂಚಿಸುವ ನಾಲ್ಕಕ್ಷರದ ಪದ   (4)

17 ಈ ಹೂವು ಷಟ್ಪದಿಯೊಂದರ ಹೆಸರೂ ಕೂಡಾ ಹೌದು   (3)

19 ಎರಡಕ್ಷರದ ಮಂಗಳಸೂತ್ರ

2೦ ನಿಂದಿಸುವುದರ ಜೊತೆ ವಿಶೇಷಣವಾಗಿ ಬಳಸುವ ಪದ, ಬಾಯಿಗೆ ಬಂದಂತೆ ಅಥವಾ ಅವಾಚ್ಯವಾಗಿ ಅನ್ನುವ ಅರ್ಥ ಕೊಡುತ್ತೆ. ಮಧ್ಯೆ ಒಂದಕ್ಷರದ ಹಸು ಇದೆ   (6)

21 ಈ ಕೆಲಸದ ಹೆಂಗಸು ಹಿಂದೀ ನಾಡಿಂದ ಬಂದವಳಾ?   (2)

24 ಕಾರ್ನಾಡರ ಕುದುರೇಮುಖ   (5)

25 ನಂಬಿಸಿ ಮೋಸ ಮಾಡುವುದು ಅನ್ನುವ ಈ ಪದದ ಆದಿಯಲ್ಲಿ ನುಣುಪಿಗೆ ಪರ್ಯಾಯವಾದ ಎರಡಕ್ಷರವಿದೆ (5)

ಮೇಲಿನಿಂದ ಕೆಳಕ್ಕೆ

1 ಮುಖದ ಪರದೆ ಅಥವಾ ಮುಸುಕು ಕಾವ್ಯಮಯ ರೂಪದಲ್ಲಿದೆ   (5)

2 ತೀರಾ ಭಾರ ಅನ್ನುವಾಗ ಬಳಕೆಯಾಗುವ ವಿಶೇಷಣ, ಸುಮಾರು ನಲವತ್ತು ಸೇರಿನ ಒಂದು ಅಳತೆ   (2)

4 ಕುಬೇರನ ಇನ್ನೊಂದು ಹೆಸರು;  ಕರಾವಳಿ, ಮಲೆನಾಡು ಭಾಗದ ಹೆಸರಾಂತ ಕಲೆಯ ಮೊದಲಾರ್ಧ ಕೂಡಾ (2)

5 ಬೇರೆಯವರ ಅಭಿಪ್ರಾಯಕ್ಕೆ ಸಹಮತ ಸೂಚಿಸು, ಅನುಮೋದಿಸು ಅನ್ನುವ ಪದದ ಮೊದಲಲ್ಲಿ ಸ್ವರದ ಇನ್ನೊಂದು ಹೆಸರು  ಇದೆ   (5)

9 ಕನಿಕರ ಹುಟ್ಟಿಸುವ, ದಯನೀಯ ಸ್ಥಿತಿಯ ಕೊನೆಯಲ್ಲಿ ಸೀತೆಯ ಅಪ್ಪ ಇದ್ದಾನೆ   (6)

1೦ ಓದು ಬರಹ ಬಾರದವನು, ಅವಿದ್ಯಾವಂತ   (6)

12 ನವರತ್ನಗಳಲ್ಲಿ ಒಂದು, ಆದಿಯಲ್ಲಿ ವೃಕ್ಷವಿದೆ   (4)

13 ಹೊಳೆಯುವುದನ್ನು ಸೂಚಿಸುವ ಈ ವಿಶೇಷಣ ದ್ವಿರುಕ್ತಿಯಲ್ಲಿದೆ   (4)

15 ಈ ಮುತ್ತಜ್ಜ ( ಸುಳುಹು : ಮಹಾಭಾರತದಲ್ಲಿ ಭೀಷ್ಮರನ್ನು ಪಾಂಡವರು ಕೌರವರು ಏನಂತ ಸಂಬೋಧಿಸುತ್ತಿದ್ರು ಅಂತ ಟಿ.ವಿ. ಸೀರಿಯಲ್‌ನಲ್ಲಿ ಕೇಳಿದ್ದು ನೆನಪು ಮಾಡ್ಕೊಳ್ಳಿ. ಅದಕ್ಕೆ ಆದಿಯಲ್ಲಿ ಒಂದಕ್ಷರ ಸೇರಿಸಿದ್ರೆ ಮುತ್ತಜ್ಜ ಬರ್ತಾರೆ)   (5)

18 ಕಳೆದೊಂದು ತಿಂಗಳಲ್ಲಿ ರಾಜಕಾರಣಿಗಳು ಮನೆ ಮನೆಗೆ ತೆರಳಿ ಮಾಡಿದ ಮನವಿ   (5)

22 ಅನಂತಮೂರ್ತಿಯವರ ಕಾದಂಬರಿಯ ಹೆಸರು ( ಸುಳುಹು : ದಿವ್ಯ ಅಲ್ಲ )   (2)

23 ಈ ನಮಸ್ಕಾರ ಮೇಲೇರುತ್ತಿದೆ   (2)

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ.

 

ಸ್ವಾಮಿಯ ಬಡತನದ ಬಾಲ್ಯದಲ್ಲಿ ಆತನಿಗೊಂದು ಕನಸಿದ್ದಿತ್ತು. ಒಂದು ತೂಗು ಕುರ್ಚಿಯಲ್ಲಿ ಸುಖಾಸೀನನಾಗುವ ಬಯಕೆ ಮನಸಲ್ಲಿ ಅಚ್ಚೊತ್ತಿರುತ್ತೆ. ಅಂತಹ ಕುರ್ಚಿಯನ್ನು ಕಂಡಾಗಲೆಲ್ಲ ಮಗು ಮನಸಿನ ಸ್ವಾಮಿಯನ್ನು ಆ ಕುರ್ಚಿಯ ಕನಸು ಕಚ್ಚುತ್ತಿರುತ್ತೆ. ಅದರ ಬೆಲೆ ಮಾತ್ರ ಇವನ ಸೀಮಿತ ಆದಾಯದ ಪರಿಧಿಯೊಳಗೆ ಬರದೆ ಕನಸಿನ ಬಲೂನಿಗೆ ಸೂಜಿ ಚುಚ್ಚುತ್ತಿರುತ್ತೆ. ಹೀಗೆ ಸಾಗುತ್ತೆ ಸ್ವಾಮಿ-ರಾಧಾರ ಬದುಕಿನ ಪಯಣ.

 

ಟಿ.ವಿ.ಯಲ್ಲಿ ಬಂದ ವರದಿಯನ್ನು ನೋಡಿ ಮಗುವಿನ ಶಿಕ್ಷಣ ಹಳ್ಳಿಯ ಶಾಲೆಯಲ್ಲಾದರೆ ಸರಿಯಾಗಿ ನಡೆಯದೇನೋ ಅನ್ನೋ ದಿಗಿಲು ರಾಧೆಯ ಮನಸ್ಸಿನಲ್ಲಿ ಮೂಡಿ, ಈ ಕುರಿತು ಆಕೆ ಸ್ವಾಮಿಯನ್ನು ಕಾಡಿ ಬೇಡಿ, ಗೂಡು ಬಿಟ್ಟು ದೂರದ ಮುಂಬೈಗೆ ಹಾರಿ ಹೋಯ್ತು ಈ ಹಕ್ಕಿ ಜೋಡಿ. ತನ್ನ ಚೂಟಿತನದ ಮಾತುಗಳು, ಮುಗ್ಧ ತೊದಲ್ನುಡಿಯ ಮೋಡಿ ಮಾಡಿ ಪ್ರಿನ್ಸಿಪಾಲರ ಮನ ಗೆಲ್ಲುವ ಮಗ ಪ್ರತಿಷ್ಟಿತ ಶಾಲೆಗೆ ಸೇರಿದಾಗ ಸ್ವಾಮಿ ದಂಪತಿಗಳ ಪಾಲಿಗೆ ಎವೆರೆಸ್ಟ್ ಶಿಖರ ಹತ್ತಿದ್ದಕ್ಕಿಂತಲೂ ಒಂದು ಕೈ ಮೇಲಿನ ಸಾಧನೆ ಮಾಡಿದಷ್ಟೇ ಖುಶಿ. ಟಿ.ವಿ.ಯಲ್ಲಿ ಅಮೇರಿಕಾವನ್ನು ಕಂಡ ಮಗ ತಾನೂ ಅಲ್ಲಿಗೆ ಹೋಗ್ತೀನಿ , ನಿನ್ನನ್ನ ಹೆಗಲ ಮೇಲೆ ಕೂರಿಸ್ಕೊಂಡು ಕರ್ಕೊಂಡೋಗ್ತೀನಿ ಅಂತಾ ನುಡಿದದ್ದನ್ನು ಕೇಳಿ ರಾಧಾಳ ಕನಸಿನ ರೆಕ್ಕೆಗೆ ಗರಿ ಮೂಡಲಾರಂಭಿಸುತ್ತೆ.

 

ಈ ನಡುವೆ ಕುರ್ಚಿಯ ಕನಸಿನ ಗೀಳು ಸ್ವಾಮಿಯನ್ನು ಆವರಿಸಿಕೊಳ್ಳುತ್ತೆ. ಆದರೆ ತನ್ನ ಸಾಮರ್ಥ್ಯದ ಎಟುಕಿಗೆ ನಿಲುಕದ ಕಾರಣ ಸುಮ್ಮನಿರುತ್ತಾನೆ. ಹೀಗೆ ನಿರುದ್ವಿಗ್ನನಾಗಿ ಸಾಗುತ್ತಿದ್ದ ಸ್ವಪ್ನ ವಿಹಾರಕ್ಕೆ ಬ್ರೇಕ್ ಬೀಳೋದು ರಾಧಾಳ ಖಾಯಿಲೆಯಿಂದಾಗಿ. ಸ್ವಾಮಿ ಆಸೆಯಿಂದ ಗೋಲಕಕ್ಕೆ ಹಾಕಿಟ್ಟ ೫ ರೂಪಾಯಿಯ ನಾಣ್ಯಗಳ ಮೊತ್ತ ಕೂಡಾ ರಾಧಾಳ ಚಿಕಿತ್ಸೆಗೆ ಸಾಲದೆಂದು ಗೊತ್ತಾದಾಗ ಸ್ವಾಮಿ ಓವರ್‌ಟೈಮ್ ಕೆಲಸ ಮಾಡಿ ದುಡ್ಡು ಜೋಡಿಸುತ್ತಾನೆ. ಇನ್ನೇನು ನಾಳೆ ಆಪರೇಷನ್ ಅಂತನ್ನುವಾಗ ಸ್ವಾಮಿಯ ಹಣದ ಪೆಟ್ಟಿಗೆಯ ಹಣ ಮಂಗಮಾಯ. ಎಲ್ಲಿ ಹೋಯ್ತು ಆ ಹಣ, ರಾಧಾಳ ಸ್ಥಿತಿ ಏನಾಯ್ತು, ಮಗನ ಅಮೇರಿಕಾ ಯಾತ್ರೆಯ ಅವಳ ಕನಸು ಕೊನೆಗೂ ಇಡೇರಿತೆ, ಹಾಗಾದ್ರೆ ಸ್ವಾಮಿಯ ಕುರ್ಚಿಯ ಕಥೆ ಏನು…ಈ ಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಈಗ ಮೋಸರ್ ಬೇರ್ಸಿ.ಡಿ ಯಲ್ಲಿ ನೋಡಬಹುದು. ಅಂದ ಹಾಗೆ ಚಿತ್ರದ ಹೆಸರು ಸ್ವಾಮಿ.

 

ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಪ್ರಥಮ ಬಾರಿಗೆ ನಿರ್ದೇಶಕರಾಗಿ ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರ ತನ್ನ ವಸ್ತು ಮತ್ತು ಅದರ ಮನಮುಟ್ಟುವ ನಿರೂಪಣೆಯ ದೆಸೆಯಿಂದ ಮನಸ್ಸಿನ ಮೂಲೆಯ ಯಾವುದೋ ತಂತುವನ್ನು ಮೀಟುವಲ್ಲಿ ಸಫಲವಾಗುತ್ತದೆ. ಮಧ್ಯಮ ವರ್ಗೀಯ ಜನರ ಕನಸು, ಅದು ನನಸಾಗುವತ್ತ ಸಾಗುವ ಬದುಕಿನ ಪಯಣದ ತಿರುವುಗಳು, ಕುಟುಂಬವೊಂದರ ಸುತ್ತ ಗಿರಕಿ ಹೊಡೆಯುವ ಈ ಸರಳ ಕಥಾವಸ್ತು ಕಿವಿಗೆ ಹಿತವೆನಿಸುವ ಹಾಡು, ಕಣ್ಣಿಗೆ ಹಬ್ಬದಂತಾ ದೃಶ್ಯಗಳ ಜೊತೆಗೆ ಭಾವನಾತ್ಮಕ ಆಯಮವನ್ನು ಹೊಂದಿರುವ ಕಾರಣ ಇಷ್ಟವಾಗುತ್ತೆ. ಇಲ್ಲಿ ಸ್ವಾಮಿಯ ಕುರ್ಚಿಯ ಕನಸನ್ನು ಜನಸಾಮಾನ್ಯನ ಮಹದಾಶೆಯೊಂದರ ಪ್ರತಿಮೆಯನ್ನಾಗಿಸಿಕೊಂಡು, ಸೂಚ್ಯವಾಗಿ ಕನಸಿನ ಸುತ್ತ ಸಾಗುವ ನಮ್ಮದೇ ಬದುಕಿನ ಚಿತ್ರವೊಂದನ್ನು ಬಿಡಿಸಿಡಲಾಗಿದೆ. ಇಲ್ಲಿ ಸ್ವಾಮಿ ನಮ್ಮ ಪ್ರತೀಕವಾದರೆ, ಆತನ ಕುರ್ಚಿಯ ಆಸೆ ನಮ್ಮ ಕನಸು ಆಸೆಗಳಿಗೆ ಸಮೀಕರಿಸಿಕೊಂಡು ನೋಡಿದರೆ ಚಿತ್ರಕ್ಕೆ ಬೇರೆಯದೆ ಆದ ಹೊಸ ರೂಪ ಆಯಾಮ ಸಿಗುತ್ತೆ. ಈ ಪಯಣದ ಏರು-ಪೇರು, ಹಾದಿಯ ತಿರುವುಗಳು….ನಿಮ್ಮನ್ನು ಕಾಡಿಸುತ್ತವೆ.

 

ಸಿದ್ಧ ಸೂತ್ರಕ್ಕೆ ಬಲಿಯಾಗದ ಒಂದು ಸರಳ ಸುಂದರ ಚಿತ್ರ ನೋಡುವ ಆಸೆ ಇದ್ದರೆ ಸ್ವಾಮಿಯನ್ನು ನೋಡಬಹುದು. ವಿಭಿನ್ನ ಪಾತ್ರದಲ್ಲಿ ಸ್ವಾಮಿಯಾಗಿ ಮನಸೂರೆಗೊಳ್ಳುವ ಮನೋಜ್ ಬಾಜ್‌ಪೇಯಿ ಖಂಡಿತ ನಿಮಗಿಷ್ಟವಾಗುತ್ತಾರೆ. ಅಪ್ಪಡಿಯಾ ಅನ್ನುವ ಅಪ್ಪಟ ಮದ್ರಾಸಿ ಗೃಹಿಣಿ ಜೂಹಿಯ ಅಭಿನಯ ಕೂಡಾ ಆಹ್ಲಾದ ತರುತ್ತದೆ. ಒಮ್ಮೆ ಸ್ವಾಮಿ ನೋಡಿ… ಆಮೇಲೆ ಹೇಗಿದೆ ಹೇಳಿ.