Archive for ಜೂನ್ 18, 2008

ಕಳೆದೊಂದು ದಶಕದಲ್ಲಿ ಮನೋರಂಜನಾ ಮಾಧ್ಯಮವಾಗಿ ಟಿ.ವಿ. ಬೆಳೆದ ಪರಿ ಯಾರಿಗೇ ಆಗಲಿ ಅಚ್ಛರಿ ಮೂಡಿಸುವಂತದ್ದು. ರಿಮೋಟಿನ ಗುಂಡಿಯೊತ್ತುತ್ತಿದ್ದಂತೆ ಸಂಗೀತ, ಸುದ್ದಿ, ಚಲನಚಿತ್ರ, ಕ್ರೀಡೆ, ಫ್ಯಾಷನ್, ಭಕ್ತಿ..ಹೀಗೆ ನಿರ್ದಿಷ್ಟ ವಿಷಯಕ್ಕೇ ಮೀಸಲಾದ ನೂರಾರು ವಾಹಿನಿಗಳು ಸಿಗುತ್ತವೆ. ನಿಮಗೆ ಬೇಕಿರಲಿ ಬೇಡದಿರಲಿ, ಅವ್ಯಾಹತವಾಗಿ ೨೪X7  ಬಿತ್ತರಗೊಳ್ಳುತ್ತಿರುತ್ತವೆ. ಮೊಟ್ಟ ಮೊದಲು ಟಿ.ವಿ. ಬಂದಾಗ ನಮಗಿದ್ದ ಏಕೈಕ ಆಯ್ಕೆಯೆಂದರೆ ದೂರದರ್ಶನ… ಅದೂ ಡಿ.ಡಿ. ಯ ರಾಷ್ಟ್ರೀಯ ವಾಹಿನಿ.

 

ಇಂದು ಕನ್ನಡಕ್ಕೆಂದೇ ಮೀಸಲಾದ ಈ ಟಿ.ವಿ, ಜೀ ಟಿ.ವಿ, ಸುವರ್ಣ, ಕಸ್ತೂರಿ, ಚಂದನ, ಉದಯ, ಉದಯ ಮೂವೀಸ್, ಯು೨, ಟಿ.ವಿ. 9, ಉದಯ ವಾರ್ತೆ, ಸುವರ್ಣ ವಾರ್ತೆ.. ಹೀಗೆ ಹತ್ತಾರು ಚ್ಯಾನೆಲ್‌ಗಳು ಇವೆ. ೧೯೯೧ರಲ್ಲಿ ಡಿಡಿ9 ತನ್ನ ಪ್ರಸಾರವನ್ನು ರಾಜ್ಯವ್ಯಾಪಿ ವಿಸ್ತರಿಸುವ ಮೊದಲು ನಮ್ಗೆ ಕನ್ನಡ ಕಾರ್ಯಕ್ರಮ ನೋಡಬೇಕೆಂದರೆ ಇದ್ದಿದ್ದು ಎರಡೇ ಎರಡು ಅವಕಾಶ. ಒಂದು ಭಾನುವಾರ ಮಧ್ಯಾಹ್ನ ಬರುತ್ತಿದ್ದ ಪ್ರಾದೇಶಿಕ ಭಾಷಾ ಚಲನಚಿತ್ರದಲ್ಲಿ ನಾಲ್ಕಾರು ತಿಂಗಳಿಗೊಮ್ಮೆ ಬರುತ್ತಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ. ಇನ್ನೊಂದು ಸೋಮವಾರ ರಾತ್ರಿ ೮:೦೫ಕ್ಕೆ ಪ್ರಸಾರವಾಗುತ್ತಿದ್ದ ಚಿತ್ರಮಾಲಾ.

 

ಭಾನುವಾರ ಮಧ್ಯಾಹ್ನದ ಚಲನಚಿತ್ರ ಭಾಷೆಯ ಹೆಸರಿನ ಅನುಕ್ರಮಣಿಕೆಯಲ್ಲಿ ಬರ್ತಾ ಇತ್ತು. ಅಂದ್ರೆ ಅಸ್ಸಾಮೀ ಈ ವಾರ ಬಂದರೆ ಮುಂದಿನ ವಾರ ಬೆಂಗಾಳಿ. ಹೀಗೆ ಕನ್ನಡದ ಕೆ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದದ್ದು ಈಗ ನೆನಪಾದ್ರೆ ನಗು ಬರುತ್ತೆ. ಆದ್ರೆ ಆ ಕಾಯುವಿಕೆಯಲ್ಲಿ ಕೂಡಾ ಒಂಥರಾ ಮಜಾ ಇತ್ತು. ಎಲ್ಲಾದ್ರೂ ಒಮ್ಮೊಮ್ಮೆ ಯಾವುದೋ ಕಾರಣಕ್ಕಾಗಿ ಕನ್ನಡದ ಚಿತ್ರ ಬರದೇ ಹೋದ್ರೆ ಮತ್ತೆ ೪ ತಿಂಗಳು ಕಾಯಬೇಕಾದ ಅನಿವಾರ್ಯತೆ. ಆಗ ನನಗೆ 8-10 ವರ್ಷ ಪ್ರಾಯವಾದುದರಿಂದ ನೋಡಿದ ಎಲ್ಲಾ ಚಿತ್ರಗಳೂ ನೆನಪಿನಲ್ಲಿಲ್ಲವಾದರೂ, ಶಂಖನಾದ, ತಬರನ ಕಥೆ, ಬೆಟ್ಟದ ಹೂ ಈ ಮೂರು ಚಿತ್ರ ನೋಡಿದ್ದು ಅಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ. ಅದರಲ್ಲೂ ಕಾರ್ಯಕ್ರಮದ ವಿವರಣೆ ಹೇಳುವವರು ಹೇಳಿದ ಒಂದು ವಿವರಣೆ ಅದ್ಯಾವ ಕಾರಣಕ್ಕೋ ಏನೋ ನೆನಪಾಗಿ ಕುಳಿತುಬಿಟ್ಟಿದೆ. ಆಯಿಯೇ ದೇಖ್‌ತೇ ಹೈಂ ಕನಡಾ ಫೀಚರ್ ಫಿಲ್ಮ್ ತಬ್ರನ್ ಕತೆ ಅನ್ನೋದೆ ಆ ಡೈಲಾಗು ! ಎಷ್ಟು ವಿಚಿತ್ರ ಈ ನೆನಪುಗಳ ಸಂತೆ-ಕಂತೆ.

 

ಇದು ಭಾನುವರದ ಕಥೆ ಆದ್ರೆ, ಸೋಮವಾರ ಬರುತ್ತಿದ್ದ ಚಿತ್ರಮಾಲ ಅನ್ನೋ ವಿವಿಧ ಭಾಷೆಗಳ ಚಿತ್ರಗೀತೆಗಳದ್ದು ಇನ್ನೊಂದು ಕಥೆ. ಇದರಲ್ಲಿ ಕೂಡಾ ಪ್ರತೀವಾರ ಕನ್ನಡ ಬರುತ್ತೆ ಅನ್ನೋ ಖಾತ್ರಿ ಇಲ್ಲ. ಇರುವ ಅರ್ಧ ಘಂಟೇಲಿ ಅವರಾದ್ರೂ ಎಷ್ಟು ಭಾಷೆಯದು ಅಂತಾ ಹಾಕ್ತಾರೆ ಹೇಳಿ. (ಈಗ ಅನ್ಸೊದು ಅಂದ್ರೆ.. ದಕ್ಷಿಣದ ಬಗ್ಗೆ ಆಗಲೂ ಕೂಡಾ ಸ್ವಲ್ಪ ಮಲತಾಯಿ ಧೋರಣೆ ಇತ್ತೋ ಏನೋ). ಅದ್ರೂ ಕಾರ್ಯಕ್ರಮ ಮುಗ್ಯೋವರೆಗೂ ಮುಂದಿನ ಹಾಡು ಕನ್ನಡ ಬರುತ್ತೆ ಅಂತಾ ಬೆಟ್ ಕಟ್ಟುತ್ತಾ ಇದ್ದಿದ್ದು, ಬಂದರೆ ಸೋತೋರಿಗೂ ಗೆದ್ದೋರಿಗೂ ಇಬ್ರಿಗೂ ಖುಷಿಯಾಗ್ತಿದ್ದದ್ದು, ಬರದೆ ಹೋದ್ರೆ ಮುಖ ಚಪ್ಪೆಯಾಗ್ತಿದ್ದದ್ದು ಎಲ್ಲಾ ಎಷ್ಟು ಮಜವಾಗಿತ್ತು. ಇವೆಲ್ಲಾ ಈಗ ಜ್ಞಾಪಕ ಚಿತ್ರಮಾಲೆಯಲ್ಲಿ ಪೋಣಿಸಿದ ಮುತ್ತಿನಂತಹ ನೆನಪಾಗಿವೆ.

 

ಈ ನೆನಪಿನ ಜೊತೆಗೆ ತಳುಕು ಹಾಕಿಕೊಂಡಿರೋ ಇನ್ನೊಂದು ನೆನಪು ಅಂದ್ರೆ, ಜೀ ವಾಹಿನಿಯು ಶುರು ಮಾಡಿದ ಪ್ರಾದೇಶಿಕ ಹಾಡುಗಳ ಕಾರ್ಯಕ್ರಮ. ಬಹುಶಃ 1994ರಲ್ಲಿ ಸಂಜೆ 5-3೦ರಿಂದ 6-೦೦ರವರೆಗೆ ದಕ್ಷಿಣದ ಪ್ರಾದೇಶಿಕ ಭಾಷೆಗಳಿಗೆ ಮೀಸಲಾದ ಕಾರ್ಯಕ್ರಮವನ್ನು ಬಿತ್ತರಿಸುತ್ತಿತ್ತು. ಅದ್ರೆ ಅವರ ಕಾರ್ಯಕ್ರಮದಲ್ಲಿ ಅದದೇ ಗೀತೆಗಳು ಪ್ರಸಾರವಾಗುತ್ತಿದ್ದು ಅಮೇಲೆ ಅದು ನಿಂತು ಹೋಯ್ತು. ಅದರಲ್ಲೂ ಕೂಡಾ ವಿಷ್ಣು ಅಭಿನಯದ ಮುಸುಕು ಚಿತ್ರದ ಯಾಮಿನೀ ದಾಮಿನಿ ಯಾರು ಹೇಳು ನೀ ಅನ್ನೋ ಹಾಡು ನೋಡಿದ್ದು ನೆನಪಿನಲ್ಲಿ ಅಚ್ಚೊತ್ತಿದಂತೆ ಇದೆ (ಬಹುಶ ಅವ್ರು ಅಷ್ಟು ಬಾರಿ ಅದನ್ನು ರೆಪೀಟ್ ಆಗಿ ಪ್ರಸಾರ ಮಾಡಿರ್ಬೇಕು ಅನ್ಸುತ್ತೆ!)

ಹೀಗೆ ನೆನಪಿನ ಗಣಿ ಅಗೆಯುತ್ತಾ ಹೋದರೆ ಕಾರಣವಿದ್ದೋ ಇಲ್ಲದೆಯೋ ಅಲ್ಲಿ ಗಟ್ಟಿಯಾಗಿ ಬೇರುಬಿಟ್ಟ ನೂರಾರು ಸಾವಿರಾರು ನೆನಪುಗಳ ಕಣಜವೇ ಸಿಗುತ್ತೆ. ಮತ್ತು ಅವು ಎಷ್ಟೇ ಸಿಲ್ಲಿಯಾಗಿದ್ರೂ ಕೂಡಾ ಯಾಕೋ ಏನೋ ಇಷ್ಟವಾಗುತ್ತೆ. ನಾಸ್ಟಾಲ್ಜಿಯಾ ಅಂದ್ರೆ ಇದೇನಾ?

 

ಚಿಕ್ಕಂದಿನಲ್ಲಿ ಮನೆಯವರಿಂದ ಹಿಡಿದು, ಬಂಧು ಮಿತ್ರರು, ಮನೆಗೆ ಬಂದ ಅತಿಥಿ ಅಭ್ಯಾಗತರಾದಿಯಾಗಿ ಎಲ್ಲರೂ ಕೇಳುವ ಪ್ರಶ್ನೆ ನೀನು ದೊಡ್ಡವನಾದ ಮೇಲೆ ಏನಾಗ್ತೀಯಾ? ಅಂತ. ಆ ವಯಸ್ಸಿನಲ್ ಇರುವ ಕಲ್ಪನೆ, ದೊಡ್ಡವರು ಹೇಳಿದ್ದು-ಕೇಳಿದ್ದು, ಟಿ.ವಿ. ಸಿನೆಮಾಗಳಲ್ಲಿ ನೋಡಿದ್ದು ಎಲ್ಲಾ ಸೇರಿ ಮನಸ್ಸಿಗೆ ಹೊಳೆದಂತಹ ಒಂದು ಉತ್ತರವನ್ನು ಕೊಟ್ಟಿರುತ್ತೇವೆ. ನಾನು ಪೈಲಟ್ ಆಗ್ತೀನಿ, ಸಿನೆಮಾ ಹೀರೋ ಆಗ್ತೀನಿ, ಡಾಕ್ಟರ್, ಸೈನಿಕ, ಮೇಷ್ಟ್ರು ಆಗ್ತೀನಿ, ಅಮೇರಿಕಾಕ್ಕೆ ಹೋಗ್ತೀನಿ… ಹೀಗೆ ತರಹೇವಾರಿ ಉತ್ತರಗಳನ್ನು ನಾವು ನೀವೆಲ್ಲಾ ಕೊಟ್ಟಿರುತ್ತೀವಿ. ಯಾವ ಆಧಾರವೂ ಇಲ್ಲದ ಆ ಬಾಲಿಶ ಮನಸ್ಸಿನ ಕಲ್ಪನೆಗೆ ತಕ್ಕುದಾದ ಆ ಉತ್ತರವನ್ನು ಗಂಭೀರವಾಗೇನೂ ಪರಿಗಣಿಸದೆ ಎಲ್ಲರೂ ನಕ್ಕು ಸುಮ್ಮನಾಗುತ್ತಾರೆ. ಆದರೆ ಬುದ್ಧಿ ಬೆಳೆದಂತೆಲ್ಲಾ ಬದುಕಿನ ಕುರಿತು ನಮ್ಮ ಪರಿಕಲ್ಪನೆಗಳು ಸ್ಪಷ್ಟವಾದಂತೆಲ್ಲಾ, ನಾನೇನು ಆಗಬೇಕು ಎಂಬ ಕನಸೊಂದು ಸದ್ದಿಲ್ಲದೆ ಮನಸಿನ ಗೂಡಿನೊಳಗೆ ನುಸುಳಿ ಬಂದಿರುತ್ತದೆ. ಅದು ಯಾರೆಲ್ಲರ ಬದುಕಿನಲ್ಲಿ ಕೈಗೂಡಿ ತಾವು ಬಯಸಿದ ಕ್ಷೇತ್ರದಲ್ಲೇ ಮುಂದುವರಿಯುವ ಅವಕಾಶ ಸಿಗುತ್ತದೋ ಗೊತ್ತಿಲ್ಲವಾದರೂ ಕನಸಂತೂ ಎಲ್ಲರಲ್ಲೂ ಮೊಳಕೆಯೊಡೆದಿರುತ್ತದೆ.

 

ಇಂತಹ ಕನಸೊಂದನ್ನು ನಾನೂ ಕಟ್ಟಿಕೊಂಡಿದ್ದೆ. ನಾನು ಪತ್ರಕರ್ತನಾಗಬೇಕೆಂಬುದೇ ಆ ಹೆಬ್ಬಯಕೆ. ಆದರೆ ಪಿಯೂಸಿ ಮುಗಿದಾಕ್ಷಣ ಮುಂದೇನು ಎಂದು ಎಲ್ಲಾ ಹೆತ್ತವರು ಚಿಂತಿಸುವಂತೆಯೇ ನನ್ನ ಮನೆಯವರೂ ಚಿಂತಿಸಿ ತಳೆದ ನಿರ್ಧಾರದ ಫಲವಾಗಿ, ಬಂಧು ಮಿತ್ರರ ಒತ್ತಾಸೆ ( ಒತ್ತಾಯದ ಆಸೆ? )ಗೆ ಅನುಗುಣವಾಗಿ ನಾನು ಇಂಜಿನಿಯರಿಂಗ್‌ಗೆ ಸೇರಬೇಕಾಗಿ ಬಂತು. ಇಂಜಿನಿಯರಿಂಗ್ ಸೇರುವ ಮೊದಲು ಸಿಕ್ಕಿದ ೪ ತಿಂಗಳ ಬಿಡುವಿನ ಅವಧಿಯಲ್ಲಿ ನನ್ನಾಸೆಗೆ ಇಂಬುಕೊಡುವ ಅವಕಾಶವೊಂದು ಒದಗಿ ಬಂತು. ನನ್ನ ಮಾವ ಆಗ ಉಡುಪಿಯಿಂದ ಹೊರಡಿಸುತ್ತಿದ್ದ ಕ್ಷಿತಿಜ ಅನ್ನುವ ಪಾಕ್ಷಿಕ ಪತ್ರಿಕೆಯಲ್ಲಿ ನನ್ನ ಬರವಣಿಗೆಯ ಆಸೆಗೆ ನೀರೆರೆಯುವಂತಹ ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಸಿನೆಮಾ, ಕ್ರೀಡೆ, ರಾಜಕೀಯ, ಚಿಂತನೆ, ಅನುವಾದ, ಪದಬಂಧ, ವಿಶಿಷ್ಠ-ವಿಚಿತ್ರ ಅನ್ನುವ ಪುಟ್ಟದೊಂದು ಅಂಕಣ.. ಇವೆಲ್ಲದನ್ನು ಬರೆಯುವ ಸದಾವಕಾಶ ನನ್ನದಾಗಿತ್ತು. ಪತ್ರಕರ್ತನಾಗದೇ ಹೋದರೂ ನಾನೂ ಒಬ್ಬ ಬರಹಗಾರನಾದೆನಲ್ಲ ಅನ್ನುವ ಸಮಾಧಾನ ಸಿಕ್ಕಿತ್ತು.

 

ಮುಂದೆ ಇಂಜಿನಿಯರಿಂಗ್‌ನ ತಿರುಗಣೆಯಲ್ಲಿ ಬರೆಯುವ ಅವಕಾಶ ಸಿಗಲೇ ಇಲ್ಲ. ಈ ನಡುವೆ ಉದಯವಾಣಿಯಲ್ಲೊಮ್ಮೆ ನನ್ನ ಕ್ರೀಡಾ ಬರಹ ಪ್ರಕಟವಾದದ್ದೇ ಈ ನಿಟ್ಟಿನಲ್ಲಿ ನಡೆದ ಏಕೈಕ ಪ್ರಯತ್ನ. ಮುಂದೆ ಪದವಿಯ ನಂತರ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಇಂಜಿನಿಯರ್ ಅನ್ನಿಸಿಕೊಂಡು ಈಗಾಗಲೇ ಸುಮಾರು ಐದೂವರೆ ವರ್ಷ ಕಳೆದುಹೋಗುತ್ತಿರುವ ಈ ವೇಳೆಯಲ್ಲಿ ನನ್ನ ಕನಸಿನ ಕುರಿತು ಹಿಂದಿರುಗಿ ನೋಡಿದರೆ ನಿರಾಸೆಯ ನಡುವೆಯೂ ಸಮಾಧಾನದ ಒಂದು ಎಳೆ ಕಾಣಸಿಗುತ್ತದೆ. ನನ್ನದಲ್ಲದ ಮಾಧ್ಯಮವಾದ ಹನಿಗವನ, ಅಣಕವಾಡು ಇತ್ಯಾದಿಗಳನ್ನು ಆಗೊಮ್ಮೆ ಈಗೊಮ್ಮೆ ಬರೆದು ನನ್ನ ಮಿತ್ರ ಮಣಿಕಾಂತನಿಗೆ ಮೊಬೈಲ್‌ನಲ್ಲೇ ಬರೆದು ಕಳಿಸುತ್ತಲಿದ್ದೆ. ಅದು ಆಗೀಗ ವಿಜಯ ಕರ್ನಾಟಕದಲ್ಲೂ ಅಚ್ಚಾಗುತ್ತಲೂ ಇತ್ತು. ಅವನ್ನೆಲ್ಲಾ ಒಟ್ಟಾಗಿಸಿ ಅಂತರಂಗದ ಆಪ್ತಸ್ವರ ಅನ್ನುವ ಹೆಸರಿನಲ್ಲಿ ಬಿಡುಗಡೆ ಮಾಡಿದ್ದೂ ಆಯ್ತು. ಅದೂ ಕೂಡಾ ನನ್ನ ಇಷ್ಟದ ಲೇಖಕರಾದ ವಸುಧೇಂದ್ರ ಮತ್ತು ಆಲೂರರ ಸಮ್ಮುಖದಲ್ಲಿ. ಈ ಸಂಕಲನ ಅಚ್ಚಾಗಿ ಹೊರಬಂದ ಹೊತ್ತಿನಲ್ಲ್ರಿ ನನ್ನ ಇಷ್ಟದ ಪ್ರಕಾರವಾದ ಗದ್ಯದಲ್ಲಿ ಯಾಕೆ ಕೈ ಆಡಿಸಬಾರದು ಅಂತ ಅನ್ನಿಸತೊಡಗಿತ್ತು. ಆದರೆ ಅದನ್ನು ಬರೆದರೆ ಪ್ರಕಿಟಿಸೋದು ಹೇಗೆ ಅಂತ ಎಣಿಸುತ್ತಿರುವಾಗಲೇ, ಕನ್ನಡದಲ್ಲಿ ಇರುವ ಬ್ಲಾಗ್‌ಗಳ ಪಟ್ಟಿಯೊಂದು ಈ-ಮೇಲ್ ಮೂಲಕ ಬಂದಿತ್ತು. ಹುಡುಕುತ್ತಿದ್ದ ಬಳ್ಳಿಯೇ ಬಂದು ಕಾಲಿಗೆ ತೊಡರಿದಂತಾಯಿತು. ಸರಿ ಶುರುವಾಯ್ತು ನನ್ನ ಬ್ಲಾಗಿನ ಬರವಣಿಗೆ. ಮೊಟ್ಟ ಮೊದಲನೇ ಬರಹವಾಗಿ ರಂಗಶಂಕರದಲ್ಲಿ ನೋಡಿದ ಮೂಕಜ್ಜಿಯ ಕನಸುಗಳು ನಾಟಕದ ವಿಮರ್ಶಾರೂಪದ ಲೇಖನ ಬರೆದೆ. ಹತ್ತು ವರ್ಷದ ಬರಹ ಸನ್ಯಾಸದ ವ್ರತ ಕೊನೆಗೂ ಮುರಿಯಿತು. ಈ ಬ್ಲಾಗಿನ ಪಯಣ ೩ ತಿಂಗಳಿನಲ್ಲೇ ಅನೇಕ ಹೊಸ-ಹೊಸ ಗೆಳೆಯರನ್ನು ತಂದು ಕೊಟ್ಟಿತು. ಈ ಸ್ಫೂರ್ತಿಯಲ್ಲೇ ನಮ್ ಕುಂದಾಪ್ರ ಕನ್ನಡಕ್ಕೆ ಎಂತಾರೂ ಬರೀದಿದ್ರೆ ಹ್ಯಾಂಗೆ ಅಂತೇಳಿ ಕುಂದಾಪ್ರ ಕನ್ನಡ ’http://kundaaprakannada.wordpress.com ಅನ್ನೋ ಬ್ಲಾಗ್ ಕೂಡಾ ಶುರುವಿಟ್ಟುಕೊಂಡೆ.

 

ಅಂತೂ ಇಂತೂ ಕಂಡ ಕನಸೊಂದು ಈ ರೂಪದಲ್ಲಿ ಕೈಗೂಡುತ್ತಿರುವ ಸಮಾಧಾನವಿದೆ. ನೀವು ಓದಿ ಮೆಚ್ಚುಗೆಯ ನಾಲ್ಕು ಮಾತು ಹೇಳಿದ್ರೆ ಹೆಚ್ಚು ಉತ್ಸಾಹದಲ್ಲಿ ಬರೆದೇನು. ತಪ್ಪಿದ್ದರೆ ತೋರಿಸಿದರೆ ತಿದ್ದಿಕೊಂಡೇನು.. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಾ..

            ವಿಜಯ್‌ರಾಜ್ ಕನ್ನಂತ್