Archive for ಜೂನ್, 2008

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ.

 

ಸ್ವಾಮಿಯ ಬಡತನದ ಬಾಲ್ಯದಲ್ಲಿ ಆತನಿಗೊಂದು ಕನಸಿದ್ದಿತ್ತು. ಒಂದು ತೂಗು ಕುರ್ಚಿಯಲ್ಲಿ ಸುಖಾಸೀನನಾಗುವ ಬಯಕೆ ಮನಸಲ್ಲಿ ಅಚ್ಚೊತ್ತಿರುತ್ತೆ. ಅಂತಹ ಕುರ್ಚಿಯನ್ನು ಕಂಡಾಗಲೆಲ್ಲ ಮಗು ಮನಸಿನ ಸ್ವಾಮಿಯನ್ನು ಆ ಕುರ್ಚಿಯ ಕನಸು ಕಚ್ಚುತ್ತಿರುತ್ತೆ. ಅದರ ಬೆಲೆ ಮಾತ್ರ ಇವನ ಸೀಮಿತ ಆದಾಯದ ಪರಿಧಿಯೊಳಗೆ ಬರದೆ ಕನಸಿನ ಬಲೂನಿಗೆ ಸೂಜಿ ಚುಚ್ಚುತ್ತಿರುತ್ತೆ. ಹೀಗೆ ಸಾಗುತ್ತೆ ಸ್ವಾಮಿ-ರಾಧಾರ ಬದುಕಿನ ಪಯಣ.

 

ಟಿ.ವಿ.ಯಲ್ಲಿ ಬಂದ ವರದಿಯನ್ನು ನೋಡಿ ಮಗುವಿನ ಶಿಕ್ಷಣ ಹಳ್ಳಿಯ ಶಾಲೆಯಲ್ಲಾದರೆ ಸರಿಯಾಗಿ ನಡೆಯದೇನೋ ಅನ್ನೋ ದಿಗಿಲು ರಾಧೆಯ ಮನಸ್ಸಿನಲ್ಲಿ ಮೂಡಿ, ಈ ಕುರಿತು ಆಕೆ ಸ್ವಾಮಿಯನ್ನು ಕಾಡಿ ಬೇಡಿ, ಗೂಡು ಬಿಟ್ಟು ದೂರದ ಮುಂಬೈಗೆ ಹಾರಿ ಹೋಯ್ತು ಈ ಹಕ್ಕಿ ಜೋಡಿ. ತನ್ನ ಚೂಟಿತನದ ಮಾತುಗಳು, ಮುಗ್ಧ ತೊದಲ್ನುಡಿಯ ಮೋಡಿ ಮಾಡಿ ಪ್ರಿನ್ಸಿಪಾಲರ ಮನ ಗೆಲ್ಲುವ ಮಗ ಪ್ರತಿಷ್ಟಿತ ಶಾಲೆಗೆ ಸೇರಿದಾಗ ಸ್ವಾಮಿ ದಂಪತಿಗಳ ಪಾಲಿಗೆ ಎವೆರೆಸ್ಟ್ ಶಿಖರ ಹತ್ತಿದ್ದಕ್ಕಿಂತಲೂ ಒಂದು ಕೈ ಮೇಲಿನ ಸಾಧನೆ ಮಾಡಿದಷ್ಟೇ ಖುಶಿ. ಟಿ.ವಿ.ಯಲ್ಲಿ ಅಮೇರಿಕಾವನ್ನು ಕಂಡ ಮಗ ತಾನೂ ಅಲ್ಲಿಗೆ ಹೋಗ್ತೀನಿ , ನಿನ್ನನ್ನ ಹೆಗಲ ಮೇಲೆ ಕೂರಿಸ್ಕೊಂಡು ಕರ್ಕೊಂಡೋಗ್ತೀನಿ ಅಂತಾ ನುಡಿದದ್ದನ್ನು ಕೇಳಿ ರಾಧಾಳ ಕನಸಿನ ರೆಕ್ಕೆಗೆ ಗರಿ ಮೂಡಲಾರಂಭಿಸುತ್ತೆ.

 

ಈ ನಡುವೆ ಕುರ್ಚಿಯ ಕನಸಿನ ಗೀಳು ಸ್ವಾಮಿಯನ್ನು ಆವರಿಸಿಕೊಳ್ಳುತ್ತೆ. ಆದರೆ ತನ್ನ ಸಾಮರ್ಥ್ಯದ ಎಟುಕಿಗೆ ನಿಲುಕದ ಕಾರಣ ಸುಮ್ಮನಿರುತ್ತಾನೆ. ಹೀಗೆ ನಿರುದ್ವಿಗ್ನನಾಗಿ ಸಾಗುತ್ತಿದ್ದ ಸ್ವಪ್ನ ವಿಹಾರಕ್ಕೆ ಬ್ರೇಕ್ ಬೀಳೋದು ರಾಧಾಳ ಖಾಯಿಲೆಯಿಂದಾಗಿ. ಸ್ವಾಮಿ ಆಸೆಯಿಂದ ಗೋಲಕಕ್ಕೆ ಹಾಕಿಟ್ಟ ೫ ರೂಪಾಯಿಯ ನಾಣ್ಯಗಳ ಮೊತ್ತ ಕೂಡಾ ರಾಧಾಳ ಚಿಕಿತ್ಸೆಗೆ ಸಾಲದೆಂದು ಗೊತ್ತಾದಾಗ ಸ್ವಾಮಿ ಓವರ್‌ಟೈಮ್ ಕೆಲಸ ಮಾಡಿ ದುಡ್ಡು ಜೋಡಿಸುತ್ತಾನೆ. ಇನ್ನೇನು ನಾಳೆ ಆಪರೇಷನ್ ಅಂತನ್ನುವಾಗ ಸ್ವಾಮಿಯ ಹಣದ ಪೆಟ್ಟಿಗೆಯ ಹಣ ಮಂಗಮಾಯ. ಎಲ್ಲಿ ಹೋಯ್ತು ಆ ಹಣ, ರಾಧಾಳ ಸ್ಥಿತಿ ಏನಾಯ್ತು, ಮಗನ ಅಮೇರಿಕಾ ಯಾತ್ರೆಯ ಅವಳ ಕನಸು ಕೊನೆಗೂ ಇಡೇರಿತೆ, ಹಾಗಾದ್ರೆ ಸ್ವಾಮಿಯ ಕುರ್ಚಿಯ ಕಥೆ ಏನು…ಈ ಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಈಗ ಮೋಸರ್ ಬೇರ್ಸಿ.ಡಿ ಯಲ್ಲಿ ನೋಡಬಹುದು. ಅಂದ ಹಾಗೆ ಚಿತ್ರದ ಹೆಸರು ಸ್ವಾಮಿ.

 

ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಪ್ರಥಮ ಬಾರಿಗೆ ನಿರ್ದೇಶಕರಾಗಿ ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರ ತನ್ನ ವಸ್ತು ಮತ್ತು ಅದರ ಮನಮುಟ್ಟುವ ನಿರೂಪಣೆಯ ದೆಸೆಯಿಂದ ಮನಸ್ಸಿನ ಮೂಲೆಯ ಯಾವುದೋ ತಂತುವನ್ನು ಮೀಟುವಲ್ಲಿ ಸಫಲವಾಗುತ್ತದೆ. ಮಧ್ಯಮ ವರ್ಗೀಯ ಜನರ ಕನಸು, ಅದು ನನಸಾಗುವತ್ತ ಸಾಗುವ ಬದುಕಿನ ಪಯಣದ ತಿರುವುಗಳು, ಕುಟುಂಬವೊಂದರ ಸುತ್ತ ಗಿರಕಿ ಹೊಡೆಯುವ ಈ ಸರಳ ಕಥಾವಸ್ತು ಕಿವಿಗೆ ಹಿತವೆನಿಸುವ ಹಾಡು, ಕಣ್ಣಿಗೆ ಹಬ್ಬದಂತಾ ದೃಶ್ಯಗಳ ಜೊತೆಗೆ ಭಾವನಾತ್ಮಕ ಆಯಮವನ್ನು ಹೊಂದಿರುವ ಕಾರಣ ಇಷ್ಟವಾಗುತ್ತೆ. ಇಲ್ಲಿ ಸ್ವಾಮಿಯ ಕುರ್ಚಿಯ ಕನಸನ್ನು ಜನಸಾಮಾನ್ಯನ ಮಹದಾಶೆಯೊಂದರ ಪ್ರತಿಮೆಯನ್ನಾಗಿಸಿಕೊಂಡು, ಸೂಚ್ಯವಾಗಿ ಕನಸಿನ ಸುತ್ತ ಸಾಗುವ ನಮ್ಮದೇ ಬದುಕಿನ ಚಿತ್ರವೊಂದನ್ನು ಬಿಡಿಸಿಡಲಾಗಿದೆ. ಇಲ್ಲಿ ಸ್ವಾಮಿ ನಮ್ಮ ಪ್ರತೀಕವಾದರೆ, ಆತನ ಕುರ್ಚಿಯ ಆಸೆ ನಮ್ಮ ಕನಸು ಆಸೆಗಳಿಗೆ ಸಮೀಕರಿಸಿಕೊಂಡು ನೋಡಿದರೆ ಚಿತ್ರಕ್ಕೆ ಬೇರೆಯದೆ ಆದ ಹೊಸ ರೂಪ ಆಯಾಮ ಸಿಗುತ್ತೆ. ಈ ಪಯಣದ ಏರು-ಪೇರು, ಹಾದಿಯ ತಿರುವುಗಳು….ನಿಮ್ಮನ್ನು ಕಾಡಿಸುತ್ತವೆ.

 

ಸಿದ್ಧ ಸೂತ್ರಕ್ಕೆ ಬಲಿಯಾಗದ ಒಂದು ಸರಳ ಸುಂದರ ಚಿತ್ರ ನೋಡುವ ಆಸೆ ಇದ್ದರೆ ಸ್ವಾಮಿಯನ್ನು ನೋಡಬಹುದು. ವಿಭಿನ್ನ ಪಾತ್ರದಲ್ಲಿ ಸ್ವಾಮಿಯಾಗಿ ಮನಸೂರೆಗೊಳ್ಳುವ ಮನೋಜ್ ಬಾಜ್‌ಪೇಯಿ ಖಂಡಿತ ನಿಮಗಿಷ್ಟವಾಗುತ್ತಾರೆ. ಅಪ್ಪಡಿಯಾ ಅನ್ನುವ ಅಪ್ಪಟ ಮದ್ರಾಸಿ ಗೃಹಿಣಿ ಜೂಹಿಯ ಅಭಿನಯ ಕೂಡಾ ಆಹ್ಲಾದ ತರುತ್ತದೆ. ಒಮ್ಮೆ ಸ್ವಾಮಿ ನೋಡಿ… ಆಮೇಲೆ ಹೇಗಿದೆ ಹೇಳಿ.

 ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ರಾಮದಾಸ ನಾಯ್ಡು, ಬರಗೂರು ರಾಮಚಂದ್ರಪ್ಪ…ಈ ಹೆಸರುಗಳೆಲ್ಲ ಎಲ್ಲರಿಗೂ ಸುಪರಿಚಿತ. ಇವರು ನಿರ್ದೇಶಿಸಿರುವ ಚಿತ್ರಗಳೂ ಕೂಡಾ ಬಹುಚರ್ಚಿತ. ಜೊತೆಗೆ ರಾಜ್ಯ-ರಾಷ್ಟ್ರ ಪ್ರಶಸ್ತಿಗಳಿಗೂ ಈ ಚಿತ್ರಗಳು ಅಂಕಿತ. ಆದರೂ ಈ ಚಿತ್ರಗಳ ಮಾರುಕಟ್ಟೆ ತುಂಬಾ ಸೀಮಿತ-ಪರಿಮಿತ. ಇದ್ಯಾಕೆ ಹೀಗೆ? ‘ಕಲಾತ್ಮಕ ಚಿತ್ರಗಳು’ ಎಂಬ ಹೆಗಾಳಿಕೆಯಾಗಬೇಕಿದ್ದ ಹಣೆಪಟ್ಟಿಯೇ ಈ ಚಿತ್ರಗಳನ್ನು ಅಸ್ಪೃಶ್ಯವಾಗಿಸಿದೆಯಾ? ಅಥವಾ ಎಲ್ಲದಕ್ಕೊ ಬಳಕೆಯಾಗುವ ಮಾರ್ಕೆಟಿಂಗ್ ತಂತ್ರಗಳಿಗೆ ಹಣಹೂಡಲು ಇರುವ ಆರ್ಥಿಕ ಸಮಸ್ಯೆಯೇ ಈ ಚಿತ್ರಗಳಿಗೆ ಮುಳುವಾಗಿವೆಯಾ? ಇಲ್ಲಾ ಮಸಾಲಾ ಚಿತ್ರಗಳಲ್ಲಿ ಇರುವ ಗಿಮಿಕ್ ಇಲ್ಲದೆ ಜನರನ್ನು ಸೆಳೆಯಲು ವಿಫಲವಾಗುತ್ತಿವೆಯಾ? ಇದು ಧರ್ಮರಾಯನೂ ಉತ್ತರಿಸಲು ತಿಣಕಾಡಬಹುದಾದ ಯಕ್ಷಪ್ರಶ್ನೆಯಂತಿದೆ ! ಸರಿ ಸುಮಾರು ಎಪ್ಪತ್ತರ ದಶಕದ ಆದಿಯಿಂದ ಶುರುವಾದ ವಿಭಿನ್ನ ಜಾಡಿನ ಕಲಾತ್ಮಕ ಚಿತ್ರಗಳು ‘ಹೊಸ ಅಲೆ’ಯ ಚಿತ್ರಗಳೆಂದು ಕರೆಯಲ್ಪಡುತ್ತಿದ್ದವು. ಅಂದಿನಿಂದ ಇಂದಿನವರೆಗೂ ವರ್ಷಕ್ಕೆ ಏನಿಲ್ಲವೆಂದರೂ ಮೂರು-ನಾಲ್ಕು ಇಂತಹ ಚಿತ್ರಗಳು ಬರುತ್ತವಾದರೂ ಕಮರ್ಶಿಯಲ್ ಆಗಿಯೂ ಯಶಸ್ಸು ಪಡೆದಿರುವ ಚಿತ್ರಗಳು ಇಲ್ಲವೇ ಇಲ್ಲವೆಂದರೂ ತಪ್ಪಾಗಲಾರದು. ಘಟಶ್ರಾದ್ಧ, ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಶಂಖನಾದ, ಕಾಡು, ಕ್ರೌರ್ಯ, ಬೆಟ್ಟದ ಹೂ, ದ್ವೀಪ, ತಾಯಿ ಸಾಹೇಬ, ಮುಸ್ಸಂಜೆ, ಅತಿಥಿ, ಪ್ರವಾಹ, ಕಾನೂರು ಹೆಗ್ಗಡತಿ, ಬರ, ಶಾಂತಿ, ದೇವೀರಿ, ನಾಯಿ-ನೆರಳು, ಬಣ್ಣದ ವೇಷ, ಹಸೀನಾ, ಮತದಾನ, ಹಂಸಗೀತೆ, ಬೇರು, ಮೊಗ್ಗಿನ ಜಡೆ.. ಹೀಗೆ ಎಷ್ಟೋ ಅತ್ಯುತ್ತಮ ಚಿತ್ರಗಳು ಬಂದಿದ್ದರೂ ಕೂಡಾ ಹಣಗಳಿಕೆಯ ಮಾನದಂಡದಲ್ಲಿ ಎಲ್ಲವೂ ಸೋತಿವೆ. ರಾಜ್ಯ-ರಾಷ್ಟ್ರ ಪ್ರಶಸ್ತಿ, ಸ್ವರ್ಣ ಕಮಲಗಳನ್ನೆಲ್ಲಾ ದಕ್ಕಿದರೂ ಕೂಡಾ ಸಿಗಬೇಕಾದ ಜನಮನ್ನಣೆ ಸಿಗಲಿಲ್ಲ. ಇದಕ್ಕೆ ಕಾರಣಗಳೇನಿರಬಹುದು? ಈ ಚಿತ್ರಗಳ ಬಜೆಟ್ ಸೀಮಿತವಾಗಿರುವುದರಿಂದ ಚಿತ್ರಕ್ಕೆ ಅಗತ್ಯವಾಗಿ ಸಿಗಲೇಬೇಕಾದ ಪ್ರಚಾರ ಸಿಗದೇ ಹೋಗುವುದು, ಕಲಾತ್ಮಕ ಚಿತ್ರಗಳ ಓಟ ಬಹುತೇಕ ನಿಧಾನವಾಗಿರುವುದರಿಂದ ಬೋರ್ ಹೊಡೆಸುತ್ತವೆ ಅನ್ನುವ ದೂರು, ಬರೀ ಮನೋರಂಜನೆಗೆ ಮಾತ್ರ ಚಿತ್ರ ನೋಡುವ ವರ್ಗದ ಜನರು ಬಹುಸಂಖ್ಯಾತರಾಗಿರುವುದರಿಂದ ಈ ಚಿತ್ರಗಳಲ್ಲಿ ಹೊಡೆದಾಟ, ಐಟಮ್ ಸಾಂಗ್ಸ್ ಇಲ್ಲದೆ ಇರುವುದರಿಂದ ಬಹುತೇಕ ಮಂದಿ ಚಿತ್ರ ಮಂದಿರದತ್ತ ತಲೆ ಹಾಕದೇ ಇರುವುದು, ಬರೀ ಪ್ರಶಸ್ತಿಗೋಸ್ಕರ ರೀಲು ಸುತ್ತುವ ಕೆಲವು ಜನರಿಂದಾಗಿ ಒಳ್ಳೆಯ ಪ್ರಯತ್ನಗಳಿಗೂ ಅಂಟುವ ನೆಗೆಟಿವ್ ಹಣೆಪಟ್ಟಿ, ಕಮರ್ಶಿಯಲ್ ಚಿತ್ರಗಳಿಗೆ ಮಣೆ ಹಾಕುವ ಚಿತ್ರ ಮಂದಿರಗಳ ನಡುವೆ ಉತ್ತಮ ಚಿತ್ರಮಂದಿರ ಸಿಗದೆ ಇರುವುದು.. ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಇದಕ್ಕೆ ಉಪಾಯವೆನ್ನುವಂತೆ ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಮಧ್ಯದ ಮಾರ್ಗವೊಂದನ್ನು ಅನುಸರಿಸುವ ನಾಗತಿಹಳ್ಳಿ, ಕವಿತಾ ಲಂಕೇಶ್, ಟಿ. ಎನ್. ಸೀತಾರಾಂ ಪ್ರಯತ್ನಗಳು ಫಲ ಕೊಟ್ಟಿವೆಯಾದರೂ ತೀರಾ ಹೇಳಿಕೊಳ್ಳುವ ಮಟ್ಟಿನ ಯಶಸ್ಸು ಮರೀಚಿಕೆಯಾಗಿರುವುದು ಸತ್ಯ.

 

ಕಳೆದು ಹೋಗಿದೆ ಕನಸೊಂದು ಹುಡುಕಿಕೊಡುವೆಯಾ

          ಹಳೆಯ ನೆನಪುಗಳ ಹಾಳೆಯ ನಡುವೆಲ್ಲೋ..

 

ಮರೆತು ಹೋಗಿದೆ ರಾಗವೊಂದು ನುಡಿಸುವೆಯಾ

          ಅನುರಾಗ ಪಲ್ಲವಿಯ ಚರಣಗಳ ನಡುವೆಲ್ಲೋ…

 

ಮೂಕವಾಗಿದೆ ಮಾತು ದನಿಗೂಡಿಸುವೆಯಾ

          ಏಕಾಂತ ಮೌನದ ಮುಸುಕಿನ ಅಡಿಯೆಲ್ಲೋ…

 

ಬಾಡಿಹೋಗಿದೆ ವನಸುಮವೊಂದು ಅರಳಿಸುವೆಯಾ

          ನೆನಪುಗಳ ಕಾನನದ ನಟ್ಟ ನಡುವೆಯೆಲ್ಲೋ…

 

ಅಳಿದು ಹೋಗಿದೆ ನಂಬಿಕೆ ಉಳಿಸಿಕೊಡುವೆಯಾ

          ಮುರಿದ ಸಂಬಂಧ ಸಂಕೋಲೆಯ ಕೊಂಡಿಯಲೆಲ್ಲೋ…

 

ಆತ್ಮೀಯತೆಯ ಅರ್ಥ ಕಲಿಸಿಕೊಡುವೆಯಾ

          ಕೃತಕ ನಗುವಿನ ಅಲೆಗಳ ನಡುವೆಲ್ಲೋ…!!!

ನನ್ನ ಪುಸ್ತಕ ಬಿಡುಗಡೆಯ ಆಮಂತ್ರಣ