Archive for ಜುಲೈ, 2008

ಮೊನ್ನಿನ ಕರಾಳ ಶುಕ್ರವಾರದ ಘಟನೆಯ ಸುದ್ದಿ ಮಧ್ಯಾಹ್ನ ಮೂರು ಗಂಟೆಯ ಸುರುವಿಗೆ ಒಂದೊಂದಾಗಿ ಕಿವಿಯ ಮೇಲೆ ಬಂದು ಬೀಳಲಾರಂಭಿಸಿತ್ತು. ಆರು ಕಡೆ ಬಾಂಬ್ ಸ್ಫೋಟ ಅಂತೆ..ಅಲ್ಲಲ್ಲ ಎಂಟು ಕಡೆ ಅಂತೆ, ಐವತ್ತು ಜನ ಸತ್ತರಂತೆ, ನೂರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆಯಂತೆ, ಜನರನ್ನು ಮೂಟೆಯಂತೆ ಹೊತ್ತು ಆಸ್ಪತ್ರೆಗೆ ಹಾಕ್ತಾ ಇದ್ದಾರಂತೆ, ಗರುಡಾ ಮಾಲ್‌ನಲ್ಲಿ ಮೊದಲು ಸ್ಫೋಟ ಆಯ್ತಂತೆ, ಶಿವಾಜಿನಗರದಲ್ಲೂ ಬಾಂಬ್ ಅಂತೆ..ಹೀಗೆ ರೆಕ್ಕೆ-ಪುಕ್ಕ ಕೂಡಿಸಿಕೊಂಡ ಸುದ್ದಿಗಳು ಸಾಲುಸಾಲಾಗಿ ಕಿವಿಯ ಮೇಲೆ ಬಂದು ಅಪ್ಪಳಿಸುತ್ತಿತ್ತು. ಎಲ್ಲರಲ್ಲೂ ಆತಂಕದ ಛಾಯೆ ಕವಿಯತೊಡಗಿತ್ತು. ಪುಣ್ಯಕ್ಕೆ ಟೆಲಿಫೋನ್ ನೆಟ್‌ವರ್ಕ್‌ಗಳೆಲ್ಲಾ ಜಾಮ್ ಆಗಿ ಬಿಟ್ವು. ಇಲ್ಲಾಂದ್ರೆ ಈ ಸುದ್ದಿಗಳು ಇನ್ಯಾವ ರೂಪ ತಳೆಯುತ್ತಿದ್ದವೋ ಏನೋ. ಕೊನೆಗೆ ಮನೆಗೆ ಬಂದು ಟಿ.ವಿ. ನೋಡಿದ ಮೇಲಷ್ಟೇ ಘಟನೆಯ ವಾಸ್ತವದ ಚಿತ್ರಣ ಸಿಗಲಾರಂಭಿಸಿದ್ದು.

 

ಆಗ ಅನ್ನಿಸಿದ್ದೆಂದರೆ.. ನಡೆದ ಈ ಬಾಂಬ್ ಸ್ಫೋಟದ ದುರ್ಘಟನೆಗಿಂತಲೂ ಈ ರೀತಿಯ ಸುಳ್ಳು ಸುದ್ದಿ ಅರ್ಥಾತ್ ವದಂತಿಗಳನ್ನು ಹಬ್ಬಿಸುವವರೇ ಹೆಚ್ಚು ಅಪಾಯಕಾರಿ ಅಂತ. ನಡೆದಿದ್ದನ್ನು ಅತಿರಂಜಿತವಾಗಿ, ಉತ್ಪ್ರೇಕ್ಷೆಯಿಂದ ಹೇಳದಿದ್ದರೆ ಕೆಲವರಿಗೆ ತಿಂದ ಅನ್ನ ಜೀರ್ಣವಾಗೊಲ್ಲ. ಇಂತಹ ಚಾಳಿಯ ನಾಲ್ಕು ಮಂದಿಯ ಬಾಯಿ ದಾಟಿ ಬರುವಾಗ ಸುದ್ದಿಯೊಂದು ಅದರ ಹತ್ತು ಪಟ್ಟು ಉತ್ಪ್ರೇಕ್ಷಿತವಾಗಿ ಅನಗತ್ಯ ಗಾಬರಿ ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ. ಈ ಸುದ್ದಿ ಕೇಳಿ ತಳಮಳಕ್ಕೊಳಗಾಗಿ ಚಡಪಡಿಸುವವರ ಮಾನಸಿಕ ಕ್ಷೋಭೆಯ ಅರಿವು ಈ ತಿಳಿಗೇಡಿಗಳಿಗೆಲ್ಲಿಂದ ಬರಬೇಕು…ಸ್ವತಃ ತಮಗೇ ಆ ರೀತಿಯ ಅನುಭವವಾಗುವವರೆಗೆ.

 

ಈ ರೀತಿಯ ಅತಿರಂಜಕತೆಯನ್ನು ಹಬ್ಬಿಸೋದರಲ್ಲಿಯೇ ಖುಷಿಪಡುವ ಮನಸ್ಥಿತಿಯವರು ಎಲ್ಲೆಲ್ಲೂ ತುಂಬಿದ್ದಾರೆ. ಒಂದು ಅಪಘಾತ ಸಂಭವಿಸಿತು ಅಂತಾದ್ರೆ ಇಂತಹವರು ಕೇಳೋ ಮೊದಲನೇ ಪ್ರಶ್ನೆ ಅಂದ್ರೆ ಎಷ್ಟು ಜನ ಸತ್ರು , ಸ್ಪಾಟಾ? ಅಂತೆಲ್ಲಾ ಸುದ್ದಿ ಕೇಳಿ, ಅದಕ್ಕೆ ಮಸಾಲೆ ಬೆರೆಸಿ ಇನ್ನೊಬ್ಬರ ಕಿವಿಗೆ ದಾಟಿಸಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಲುತ್ತಾರೆ. ಇಂತಹುದೇ ಪ್ರಸಂಗವೊಂದರಲ್ಲಿ ಜನರು ಹೇಗೆಲ್ಲಾ ವರ್ತಿಸುತ್ತಾರೆ, ಅವರ ಮಾತುಕತೆ, ಮನಸ್ಥಿತಿ ಇವೆಲ್ಲವನ್ನು ವೈದೇಹಿಯವರು ತಮ್ಮ ಬರಹವೊಂದರಲ್ಲಿ ಚಿತ್ರಿಸಿದ್ದಾರೆ.

 

ಅದಕ್ಕೇ ಹೇಳಿದ್ದು.. ಸಿಡಿದ ಬಾಂಬಿಗಿಂತಲೂ ಇಂತಹ ವದಂತಿವೀರರು ಹೆಚ್ಚು ಅಪಾಯಕಾರಿ ಅಂತ. ಅವರು ತಮ್ಮ ಕಲ್ಪನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟೆಲ್ಲಾ ಭೀಕರತೆಯನ್ನು ಕಲ್ಪಿಸಿಕೊಂಡು, ಸುದ್ದಿ ಹರಡಿಸಿ ಮಜ ನೋಡುತ್ತಾರೆ. ಇದರಿಂದಾಗಿ ಅನಾವಶ್ಯಕವಾಗಿ ಭೀತಿಯು ಜನರ ಮನಸ್ಸಿನಲ್ಲಿ ಆತಂಕ ಹುಟ್ಟಿಸುತ್ತದೆ. ಅದರಲ್ಲೂ ಮೊನ್ನಿನ ತರಹದ ಘಟನೆಗಳಾದಾಗ ಆತಂಕದಿಂದಾಗಬಹುದಾದ ಅನಾಹುತ, ತೊಂದರೆ, ಗೊಂದಲಗಳು ಇನ್ನೂ ಹೆಚ್ಚು. ಹೆದರಿದವನು ಹಗ್ಗವನ್ನೇ ಹಾವೆಂದು ಭ್ರಮಿಸುವ ತೊಂದರೆಗೀಡಾಗುವ ಸಾಧ್ಯತೆಯನ್ನು ಸೃಷ್ಟಿಸುವ ಇಂತಹ ವದಂತಿಗಳು ನಿಜಕ್ಕೂ ತುಂಬಾ ಅಪಾಯ ತಂದೊಡ್ಡಬಹುದು.

 

ಈ ಪ್ರವೃತ್ತಿಗೆ ಇಂಬು ಕೊಡುವಂತೆ ಇವೆ ನಮ್ಮ ದೃಶ್ಯಮಾಧ್ಯಮಗಳು..ನ್ಯೂಸ್ ಚಾನೆಲ್‌ಗಳು. ಎಲ್ಲರಿಗಿಂತ ಮೊದಲು ಸುದ್ದಿ ನೀಡುವ ಹಪಹಪಿಯಲ್ಲಿ ಒಂದು ಸುದ್ದಿ ಬಂದಾಕ್ಷಣ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗದೆ, ಸು…ಅಂದ್ರೆ ಸುಕ್ಕಿನುಂಡೆ ಅನ್ನೊ ರೀತಿಯಲ್ಲಿ ವ್ಯವಹರಿಸುವ ಇವರ ಫ್ಲಾಶ್ ನ್ಯೂಸ್‌ಗಳು, ಬ್ರೇಕಿಂಗ್ ನ್ಯೂಸ್‌ಗಳು ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಲು ತಮ್ಮ ಪಾಲಿನ ದೇಣಿಗೆ ನೀಡುತ್ತವೆ. ಇದಕ್ಕೆ ಉದಾಹರಣೆಯಾಗಿ ಪದ್ಮಪ್ರಿಯಾ ಪ್ರಕರಣವೇ ನಮ್ಮ ಕಣ್ಣೆದುರು ಇದೆ. ಈ ಘಟನೆಯಿಂದ ಪಾಠ ಕಲಿತದ್ದಕ್ಕೋ ಏನೋ..ಮೊನ್ನೆ ಶುಕ್ರವಾರ ಸುದ್ದಿಯನ್ನು ಅತಿರಂಜಕವಾಗಿಸುವ ಧಾವಂತವನ್ನು ನ್ಯೂಸ್ ಚಾನೆಲ್‌ಗಳು ತೋರಲಿಲ್ಲ ಅನ್ನುವುದೊಂದು ಸಮಾಧಾನ.

 

ವದಂತಿಗಳು ಉಂತುಮಾಡುವ ಮಾನಸಿಕ ಕ್ಷೋಭೆಯನ್ನು ಪಕ್ಕಕ್ಕಿಟ್ಟು ನೋಡಿದರೂ ಕೂಡಾ ಅವುಗಳು ಸೃಷ್ಟಿಸುವ ಗೊಂದಲದ ಪರಿಣಾಮವನ್ನು ಅಲಕ್ಷಿಸಲಾಗದು. ಪೋಲಿಸರಲ್ಲಿ, ಬಾಂಬ್ ನಿಷ್ಕ್ರಿಯ ದಳದವರಲ್ಲಿ ಈ ಸುಳ್ಳು/ಉತ್ಪ್ರೇಕ್ಷಿತ ಸುದ್ದಿ ಅನಗತ್ಯ ಗಲಿಬಿಲಿ ಸೃಷ್ಟಿಸಿ, ಸಮಾಜ ಘಾತುಕರಿಗೆ ಅನುಕೂಲ ಮಾಡಿಕೊಡುತ್ತವೆ, ಹಾಗಾಗಿ ಸುದ್ದಿ ಯಾವುದೇ ಇರಲಿ, ಅದರ ವಿಶ್ವಾಸಾರ್ಹತೆಯನ್ನು ನಾಲ್ಕು ಬಾರಿ ದೃಢಪಡಿಸಿಕೊಳ್ಳದೆ ಅದನ್ನು ಯಾರಿಗೂ ಹೇಳಲು ಹೋಗಬೇಡಿ. ನೀವು ಅದನ್ನು ಉತ್ಪ್ರೇಕ್ಷೆ ಮಾಡದೇ ಇರುವ ಸಭ್ಯರೇ ಇರಬಹುದು..ಆದರೆ ನಿಮಗೆ ಸುದ್ದಿ ಹೇಳಿದವರು..ಇಲ್ಲಾ ಅವರಿಗೆ ಸುದ್ದಿ ತಿಳಿಸಿದವರು ಅಂತವರಲ್ಲ ಅನ್ನೋದಕ್ಕೆ ಏನು ಖಾತ್ರಿ?

 

 

ಇದಕ್ಕೆ ಹೇಗೆ ಪ್ರತಿಕ್ರಿಯೆ ತೋರಬೇಕೋ ಗೊತ್ತಾಗುತ್ತಾ ಇಲ್ಲ. ಅದೂ ಈ ಮಾತು ಬಂದಿದ್ದು ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಕರೆಯಿಸಿಕೊಳ್ಳುವ ವಿಜಯಕರ್ನಾಟಕದಲ್ಲಿ. ಇವತ್ತಿನ ವಿಜಯ ಕರ್ನಾಟಕದ ಜ್ಯೋತಿಷ್ಯ ವಿಜಯದಲ್ಲಿ ಪ್ರಕಟವಾದದ್ದು ಇದು. ಆತ್ಮಹತ್ಯೆಗೆ ಆ ವ್ಯಕ್ತಿಯ ಪೂರ್ವಜನ್ಮಾದಿ ಕರ್ಮಗಳೇ ಕಾರಣ. ಗುರುಹಿರಿಯರ ನಿಂದನೆ, ಮಾತಪಿತೃಗಳನ್ನು ಹಿಂಸಿಸಿರುವುದು, ಪತಿ-ಪತ್ನಿಯಲ್ಲಿ ವಿರಸ ಮೂಡಿಸಿರುವುದು, ಮೂಕಪ್ರಾಣಿಗಳಿಗೆ ಹಿಂಸೆ ನೀಡಿರುವುದು, ಮೋಸಮಾಡಿ ಮಾನಸಿಕ ಹಿಂಸೆ ನೀಡಿದ ದೋಷಗಳು ಈ ಜನ್ಮದಲ್ಲಿ ಆತ್ಮಹತ್ಯೆಗೆ ಪ್ರೇರಕವಾಗುತ್ತವೆ ಅನ್ನುತ್ತೆ ಈ ಲೇಖನ.

 

ಇಂತಹ ಲೇಖನ ಬರೆದವರ ವಿಷಯ ಬಿಟ್ಟುಬಿಡಿ. ಅವರರವರ ಅಭಿಪ್ರಾಯ ಅದು. ಹಾಗಂತ ಅದನ್ನು ಯಥಾವತ್ತಾಗಿ ಪ್ರಕಟಿಸಿದ ನಮ್ಮ ಹೆಮ್ಮೆಯ ಪತ್ರಿಕೆ ಬಗ್ಗೆ ಏನನ್ನೋಣ ಸ್ವಾಮಿ! ಸರ್ಕಾರದವರು ರೈತರ ನೆರವಿಗೆ ಹೋಗೋದು ಕೂಡಾ ಬೇಡ ಅನ್ಸುತ್ತೆ. ಯಾಕಂದ್ರೆ ಸಾಯೋದು ಅವರ ಪೂರ್ವಜನ್ಮದ ಕರ್ಮಫಲ ಅಂತಾದ್ಮೇಲೆ ಕರ್ಮಫಲ ತಪ್ಪಿಸೋಕಾಗುತ್ತಾ!!

 

ಇಂತಹ ಲೇಖನಗಳನ್ನು ಪ್ರಕಟಿಸುವ ಹಕ್ಕು, ಅಧಿಕಾರ ನಿಮ್ಮ ಯಾವುದೋ ಜನ್ಮದ ಸುಕೃತದ ಫಲವೇ ಇರಬಹುದೋ ಏನೋ, ಆದರೆ ಮೌಢ್ಯದ ಪರಮಾವಧಿಯಂತಹ ಇಂತಹ ವಿಚಾರಧಾರೆಯೆ ಲೇಖನ ಓದುವ ಕರ್ಮ ನಮ್ಮ ಯಾವ ಜನ್ಮದ ಪಾಪ ಶೇಷದ ಫಲ ಅಂತ ಹೇಳ್ತೀರಾ?

 

ನಾನು ಹುಸಾರ್….!!

ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆಯ ಹುಡುಗ ಹುಡುಗಿಯರ ಮಧ್ಯೆ ಓದೋದ್ರಲ್ಲಿ ಸ್ವಲ್ಪ ಆಸಕ್ತಿ ನನಗೆ ಹೆಚ್ಚಾಗಿದ್ದ ಕಾರಣ ಎಲ್ಲಾ ಮಾಷ್ಟ್ರುಗಳ ಅಚ್ಚುಮೆಚ್ಚಿನವನಾಗಿದ್ದೆ. ಆಗ ನಮ್ಮ ಕ್ಲಾಸ್ ಮಾಷ್ಟ್ರು ಗಣಪತಿ ಮಂಜರು ಅನ್ನುವವರು. ಅವರೊಂದು ದಿನ 4ನೇ ಕ್ಲಾಸಿನಲ್ಲಿ ಪಾಠ ಓದಿಸ್ತಾ ಇದ್ದ್ರು. ಆಗ ಕ್ಲಾಸಿನಲ್ಲಿರೋರೆಲ್ಲ ತಪ್ಪು ತಪ್ಪಾಗಿ ಓದ್ತಾ ಇದ್ರು. ಹಾಗಾಗಿ ನನ್ನನ್ನು 4 ನೇ ಕ್ಲಾಸಿಗೆ ಕರೆದುಕೊಂಡು ಹೋಗಿ ಸಮಾಜ ಪಾಠದ 2 ಪುಟ ಓದಿಸಿ, ಕ್ಲಾಸಿನ ಮುಂದೆ ನನ್ನನು ಹೊಗಳಿದ್ದು; ಅದರಿಂದ ನನ್ನ ತಲೆಯ ಮೇಲೊಂದು ಕೋಡು ಮೂಡಿದ್ದು…ಯಾಕೋ ಸುಮ್ಮನೆ ನೆನಪಾಗಿ ತುಟಿಯಂಚಿನಲ್ಲಿ ಕಿರುನಗೆ ಮಿನುಗಿತ್ತು.

 

ಕ್ಷಮಿಸಿಬಿಡಿ ಮಾಷ್ಟ್ರೆ….

ಇನ್ನೊಂದು ಘಟನೆ ಹೇಳ್ತಿನಿ ಕೇಳಿ. ಆಗ ನಾನು ಕಮಲಶಿಲೆ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದ್ತಾ ಇದ್ದೆ. ಕ್ಲಾಸಿಗೆ ನಾನೇ ಲೀಡರು ( ಮಾನಿಟರ್ ಅಂತ ಬೇಕಿದ್ರೆ ಓದ್ಕೊಳ್ಳಿ). ಕಥೆ ಪುಸ್ತಕ ಓದುವ ಹುಚ್ಚು ಆಗಲೂ ಜೋರಾಗಿತ್ತು. ನನ್ನ ಓದಿಗೆ ರಾಗಸಂಗಮ, ಹಂಸರಾಗ ಪುಸ್ತಕಗಳನ್ನು ನನ್ನ ಕ್ಲಾಸಿನಲ್ಲೇ ಇದ್ದ ಉಮೇಶ್ ಶೆಟ್ಟಿ ಅನ್ನುವ ಹುಡುಗ ತಂದು ಕೊಡುತ್ತಿದ್ದ. ಕ್ಲಾಸಲ್ಲಿ ಪಾಠ ಇರದೆ, ಕ್ಲಾಸ್ ನೋಡಿಕೊಳ್ಳುವ ಹೊತ್ತಿನಲ್ಲಿ ತೋರಿಕೆಗೆ ಪಾಠ ಪುಸ್ತಕ ಇಟ್ಟುಕೊಂಡು ಅದರ ಮಧ್ಯೆ ರಾಗಸಂಗಮ, ಹಂಸರಾಗದ ಪುಸ್ತಕ ಇಟ್ಟು ಓದಿನಲ್ಲಿ ಮುಳುಗಿ ಹೋಗುತ್ತಿದ್ದೆ. ನನ್ನ ತನ್ಮಯತೆ ನೋಡಿದ ಪಕ್ಕದ ಕ್ಲಾಸಿನಲ್ಲಿದ್ದ ಮೇಷ್ಟ್ರು.. ನೋಡಿ ಅವ್ನು ಎಷ್ಟು ತನ್ಮಯತೆಯಿಂದ ಒದುತ್ತಿದ್ದಾನೆ. ನೀವೂ ಹಾಗೆ ಓದ್ಬಾರ್ದಾ ಅಂತ ಹೇಳಿದ್ರು ಅಂತ ಊಟಕ್ಕೆ ಬಿಟ್ಟಾಗ ಪಕ್ಕದ ಕ್ಲಾಸಿನ ಹುಡುಗನೊಬ್ಬ ಹೇಳ್ತಾ ಇದ್ದ. ಹೊಗಳಿಕೆಗೆ ಆಗ ಖುಶಿ ಆಯ್ತಾದ್ರೂ..ಈಗ ಅನ್ಸುತ್ತೆ… ಇದೂ ಕೂಡಾ ಒಂದು ರೀತಿ ನಂಬಿಕೆದ್ರೋಹಾನೇ ಅಲ್ವಾ ಅಂತ…ಮಾಷ್ಟ್ರೇ…ಕ್ಷಮಿಸ್ತೀರಾ..?

 

ಹೋಳಿಗೆ ಪ್ರಸಂಗ

ಕಮಲಶಿಲೆ ಶಾಲೆಯಲ್ಲಿದ್ದಾಅಗಲೇ ನಡೆದ ಇನ್ನೊಂದು ಪ್ರಸಂಗ ಭಾರಿ ಗಮ್ಮತ್ತಾಗಿದೆ. ಆಗ ನಮ್ಮ ಸಂಬಂಧಿಕರೊಬ್ಬರ ಮದುವೆ ಅಲ್ಲೇ ಕಮಲಶಿಲೆಯ ದೇವಸ್ಥಾನದಲ್ಲಿ ನಡೆದಿತ್ತು. ಮದುವೆಗೆ ಹೋಗೋಕೆ ಅಂತ ಮಂಜಯ್ಯ ಮಾಷ್ಟ್ರ ಹತ್ತಿರ ಅನುಮತಿ ಕೇಳಿಕೊಂಡು ನಾವೊಂದು ನಾಲ್ಕಾರು ಜನ ಹೋಗಿದ್ವಿ. ನಾವು ಕೇಳೋಕೆ ಹೋದಾಗ ಮಾಷ್ಟ್ರು ಸುಮ್ನೆ ಕುಶಾಲಿಗೆ ಅಂತ…ಮದಿಗೆ ಹೋಯಿ ಬರೇ ನೀವ್ ಮಾತ್ರ ಗಡ್ಜಾಗಿ( ಗಡದ್ದಾಗಿ) ಉಂಡ್ಕಂಡ್ ಬಂದ್ರೆ ಸಾಕಾ? ಮಾಷ್ಟ್ರಿಗೆ ಏನಾರೂ ಹೋಳ್ಗಿ ತಕಂಡ್ ಬತ್ರ್ಯಾ ಅಂತ ಕೇಳಿದ್ರು. ಅವ್ರು ತಮಾಷೆಗೆ ಹೇಳಿದ್ದಾದ್ರೂ ನಾವ್ ಮಾತ್ರ ಅದನ್ನೇ ಗಟ್ಟಿಮಾಡಿಕೊಂಡು ಹೋಳಿಗೆ ತಗೊಂಡು ಹೋಗಿಯೇ ಶುದ್ಧ ಅಂತ ನಿರ್ಧಾರ ಮಾಡಿದ್ವಿ. ಅಂತೆಯೇ ಅಲ್ಲಿ ನಮ್ಮ ಗುರುತಿನವರಲ್ಲಿ ಕೇಳಿ ಹೋಳಿಗೆ ಕಟ್ಟಿಸಿಕೊಂಡು ಬಂದದ್ದೂ ಆಯ್ತು. ತಕ್ಕೊಂಡು ಹೋಗಿ ಆಫೀಸ್ ರೂಮ್ನಲ್ಲಿ ಮಾಷ್ಟ್ರಿಗೆ ಕೊಟ್ಟಿದ್ದೂ ಆಯ್ತು. ನಾವು ಬಂದು ನಮ್ಮ ನಮ್ಮ ಕ್ಲಾಸಲ್ಲಿ ಕುಳಿತುಕೊಂಡೆವು. ಆಗ ಬಂತು ನಮಗೆ ಬುಲಾವ್. ಅಲ್ಲಿಯವರೆಗೆ ಯಾವತ್ತೂ ರೌದ್ರಾವತಾರ ತಳೆಯದ ಮಂಜಯ್ಯ ಮಾಷ್ಟ್ರಿಗೆ ಅದೆಲ್ಲಿತ್ತೋ ಸಿಟ್ಟು, ನೆತ್ತಿಗೇರಿಬಿಟ್ಟಿತ್ತು. ಆಲ್ಲಿ ಹೋಗಿ ನಮಗೆ ಅಂತ ಹೇಳಿ ಹೋಳಿಗೆ ತಂದಿದ್ದೀರಲ್ಲ. ಅವ್ರು ಏನಂತ ತಿಳ್ಕೋತಾರೆ ಅನ್ನೋ ಅಕಲು(ಬುದ್ಧಿ) ಬೇಡ್ವಾ ನಿಮ್ಗೆ.. ಅಂತಂದು ಕೈ ಮೇಲೆ ಕಾಸಿ ಕೊಟ್ಟ ನಾಲ್ಕು ನಾಲ್ಕು ಬೆತ್ತದೇಟಿನ ಹೋಳಿಗೆ…ಈಗ ನೆನಪಾದ್ರೆ ಬಿದ್ದು ಬಿದ್ದು ನಗುವಂತಾಗುತ್ತೆ.

 

ನೆನಪುಗಳಿಗೇನು ಬಿಡಿ…ಹೊತ್ತು ಗೊತ್ತಿಲ್ಲದೆ ಅಕಾರಣವಾಗಿ ಆಗೀಗ ಮುಂದೆ ಬಂದು ತದಿಗಿಣತೋಂ ಅಂತ ಕುಣಿಯಲಾರಂಭಿಸುತ್ತವೆ. ಹೀಗೆ ಉಕ್ಕಿದ ನೆನಪುಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮಲ್ಲೂ ಇಂತಹ ಸ್ವಾರಸ್ಯಕರ ಪ್ರಸಂಗ ಇದ್ರೆ ಹಂಚಿಕೊಳ್ಳಿ..ಎಲ್ಲರೂ ಓದಿ ಸಂಭ್ರಮಿಸೋಣ

 

 

ಬದುಕಿನ ಅವಸ್ಥೆಗಳಲ್ಲೆಲ್ಲಾ ಅತೀ ಸುಂದರವಾದದ್ದು ಬಾಲ್ಯಾವಸ್ಥೆ. ಯಾವ ಸೋಗು, ಕಪಟವಿಲ್ಲದೆ, ಕಿರಿಕಿರಿ-ಟೆನ್ಷನ್ ಇಲ್ಲದೆ ಹಕ್ಕಿಯಂತೆ ಹಾರಿಕೊಂಡಿರುವ ಬಾಲ್ಯದ ಗಮ್ಮತ್ತೇ ಬೇರೆ. ಬಾಲ್ಯಕಾಲದಲ್ಲಿ ಬಡತನದಲ್ಲೇ ಬೆಳೆದುಬಂದಿದ್ದರೂ ಕೂಡಾ ಅವು ಚಿನ್ನದ ದಿನಗಳೇ. ನಾವು ಬೆಳೆದಂತೆಲ್ಲಾ ಬದಲಾಗುತ್ತಾ ಬಂದು, ನಮ್ಮೊಳಗಿನ ಮಗು ಮನಸ್ಸು ಮಾಯವಾದಂತೆಲ್ಲಾ ಬದುಕನ್ನು ಆಸ್ವಾದಿಸುವ ಆ ಖುಷಿ ನಿಧಾನಕ್ಕೆ ಮರೆಯಾಗುತ್ತಾ ಬರುತ್ತದೆ. ಮಕ್ಕಳ ಲೋಕ ಯಾಕೆ ಆಷ್ಟು ಮುದ್ದಾಗಿರುತ್ತೆ ಅಂದ್ರೆ…

  • ಮಕ್ಕಳ ಮನಸ್ಸಿನಲ್ಲಿ ಯಾವ ಕಪಟ,ಮೋಸ ಇರೋಲ್ಲ. ಅದು ನಿಷ್ಕಲ್ಮಷವಾಗಿರುತ್ತೆ. ಹಾಗಾಗಿ ಮನಸ್ಸು ಯಾವ ಆತಂಕ, ಯೋಚನೆಯ ಸುಳಿಗೆ ಸಿಕ್ಕದೆ ಸದಾ ಪ್ರಫುಲ್ಲವಾಗಿರುತ್ತೆ
  • ಏನನ್ನು ನೋಡಿದರೂ ಕೂತಹಲಭರಿತ ಅಚ್ಚರಿ ಮಕ್ಕಳ ಕಂಗಳಲ್ಲಿ ಸದಾ ಇರುತ್ತೆ. ಅದು ಏನು, ಅದ್ಯಾಕೆ ಹೀಗೆ, ಯಾಕೆ ಹಾಗಲ್ಲ ಅನ್ನೋ ಪ್ರಶ್ನೆಗಳ ಜೊತೆಗೆ ಸಣ್ಣ ಪುಟ್ಟ ಅಚ್ಛರಿಗಳಿಗೂ ಬೆರಗಾಗುವ ಸಂಭ್ರಮವಿರುತ್ತೆ
  • ಮಕ್ಕಳ ಅಗತ್ಯಗಳು ತೀರಾ ಮಿತಿಯುಳ್ಳದ್ದಾಗಿರುತ್ತೆ. ಇರುವುದರಲ್ಲೇ ತೃಪ್ತಿಪಡುವ ಗುಣ, ಅಧರಿಂದ ಸಿಗುವ ಸಮಾಧಾನ ಏನು ಕಡಿಮೆಯದ್ದೇ? ಇದಕ್ಕೆ ಪುರಾವೆ ಬೇಕಿದ್ದರೆ ತೆಂಗಿನ ಗರಿಯ ವಾಚನ್ನೇ ಸ್ವಿಸ್‌ವಾಚೋ ಎಂಬ ಸಂಭ್ರಮದಲ್ಲಿ ಕೈಗೆ ಕಟ್ಟಿಕೊಂಡು ಕುಣಿದಾಡುತ್ತಿದ್ದ ಆ ಬಾಲ್ಯಕಾಲವನ್ನು ನೆನಪಿಸಿಕೊಳ್ಳಿ
  • ಏನೇ ಜಗಳವಾಡಿದ್ರೂ ಅದನ್ನು ಮರುಕ್ಷಣ ಮರೆತು ಮತ್ತೆ ಜೊತೆಯಾಗಿ ಆಡಲಿಕ್ಕೆ ಹೋಗುವ ಆ ನಿರ್ಮಲ ಮನಸ್ಸು ಈಗ ಬೇಕೆಂದರೂ ಸಿಕ್ಕೀತೇ?
  • ಪೊಳ್ಳು ಪ್ರತಿಷ್ಟೆ, ಒಣ ಜಂಬ ಇವೆಲ್ಲದರಿಂದ ತುಂಬಿರುವ ನಮ್ಮ ಲೋಕಕ್ಕಿಂತ ಭಿನ್ನವಾದ, ಯಾರೊಟ್ಟಿಗೂ ಬೆರೆಯುವ ಮಕ್ಕಳ ಲೋಕಾನೇ ವಾಸಿ ಅಂತ ಅನ್ನಿಸೋಲ್ವಾ ಹೇಳಿ?
  • ತಿಂಗಳ ಕೊನೆಗೆ ಏನಪ್ಪಾ ಮಾಡೋದು, ಸೈಟ್ ಕೊಳ್ಳೋಕೆ ಸಾಲ ಯಾವಾಗ ತಗೊಳ್ಳೋದು, ಕಾರಿನ ಸಾಲದ ಕಂತು ಕಟ್ಟೋದ್ಯಾವಾಗ, ಪೇಟ್ರೋಲ್ ಬೆಲೆ ಜಾಸ್ತಿ ಅಯ್ತಲ್ಲಪ್ಪಾ..ಇವ್ಯಾವ ಯೋಚನೆಗಳೂ ತಟ್ಟದ ಜಗತ್ತು ಎಷ್ಟು ಸುಂದರ ಅಲ್ವೇ?
  • ಕಥೆ ಹೇಳಿ ಅಂತ ಯಾರನ್ನಾದ್ರು ಪೀಡಿಸಿ ಕಥೆಗಳನ್ನು ಕೇಳುವ ಸುಖದೊಂದಿಗೆ, ನಮ್ಮ ಕಲ್ಪನೆಯ ಲೋಕದಲ್ಲಿ ಕಥೆಯ ರಾಜಕುಮಾರ(ರಿ) ನಾವೇ ಆದಂತೆ ಭ್ರಮಿಸಿ ಖುಷಿ ಪಟ್ಕೋಬಹುದು.
  • ಬೇಸಿಗೆ ರಜೆಯಲ್ಲಿ ಊರಿಂದೂರಿಗೆ ಸುತ್ತಬಹುದು. ಹೊಳೆಯಲ್ಲಿ ಈಜಾಡಿ, ಹುಲಿ-ದನ, ಮರಕೋತಿ, ಚಿನ್ನಿ-ದಾಂಡು, ಲಗೋರಿ ( ಇದನ್ನು ನಾವು ರಗೋಲಿ ಅಂತಾ ಇದ್ವಿ. ಲಗೋರಿಯ ಅಪಭ್ರಂಶ ರೂಪ ಇರ್ಬೇಕು) ಆಟ ಆಡಿ ಕುಣಿದು ಕುಪ್ಪಳಿಸಬಹುದು.( ಈಗ ಎಲ್ಲಾ ಹುಡುಗ್ರು ಆಡೋದು ಕ್ರಿಕೇಟ್..ಅದು ಬೇರೆ ಮಾತು ಬಿಡಿ). ಗೇರು ಮರ,ಕಾಟು ಮಾವಿನ ಮರಕ್ಕೆ ಕಲ್ಲು ಹೊಡೆದು ಹಣ್ಣು ತಿಂದು ಮಜವಾಗಿರಬಹುದು.

 

ನಿಮಗೂ ಮಕ್ಕಳ ಲೋಕದ ಖುಷಿಯ ಬಗ್ಗೆ ನಿಮ್ಮದೇ ಕಲ್ಪನೆ ಇರಬಹುದಲ್ವೇ? ಅದನ್ನು ಹಂಚಿಕೊಳ್ಳಿ. ಕೊನೇಪಕ್ಷ ಓದಿ ಆದ್ರೂ ಆ ಖುಷಿಯಲ್ಲಿ ಒಂದು ಪಾಲು ಖುಷಿ ಸಿಕ್ರೂ ಅಷ್ಟೇ ಸಾಕಲ್ವೇ?

ಪ್ರತಿಭೆಗೆ ಪ್ರಾದೇಶಿಕತೆ, ಜಾತಿ-ಮತ ಇವ್ಯಾವುದೂ ಅಡ್ಡಗೋಡೆ ಆಗಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಮೆಚ್ಚುವ ಗುಣ ಆದರಣೀಯ. ಆದ್ರೆ ಪಕ್ಕದ್ಮನೆ ಹುಡುಗಿ ಚೆನ್ನಾಗಿದ್ದಾಳೆ ಅಂದ ಮಾತ್ರಕ್ಕೆ ಮನೇಲಿರೋ ಹೆಂಡ್ತಿನ ಕಾಲಕಸ ಮಾಡೋಕಾಗುತ್ತಾ ಹೇಳಿ? ಈ ಮಾತು ಯಾಕೆ ಹೇಳಿದೆ ಅಂದ್ರೆ, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪರಭಾಷಾ ಗಾಯಕ-ಗಾಯಕಿಯರ ಆಮದು ಯಾವ ಪರಿ ಬೆಳೆದಿದೆ ಅಂದ್ರೆ, ಇದರಿಂದಾಗಿ ಅಪ್ಪಟ ಕನ್ನಡದ ಪ್ರತಿಭೆಗಳು ಅವಕಾಶವೇ ಇಲ್ಲದೆ ಮೂಲೆಗುಂಪಾಗುತ್ತಿದ್ದಾರೆ ಅನ್ನಿಸೋವಷ್ಟು. ಕನ್ನಡದ ಪ್ರತಿಭೆಗಳಾದ ಹೇಮಂತ್, ನಂದಿತಾ, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ರಾಜೇಶ್ ಕೃಷ್ಣನ್, ಚೈತ್ರ ಇವರೆಲ್ಲ ಯಾವ ಗಾಯಕ/ಗಾಯಕಿಯರಿಗೆ ಯಾವುದರಲ್ಲಿ ಕಡಿಮೆ ಅಂತ ಹೊರಗಿನಿಂದ ದುಬಾರಿ ಬೆಲೆಯ ಸೋನು ನಿಗಂ, ಕುನಾಲ್ ಗಂಜಾವಾಲ, ಶ್ರೇಯಾ ಘೋಷಾಲ್‌ರನ್ನು ರತ್ನಗಂಬಳಿ ಹಾಸಿ ಕರೆಸಬೇಕೋ ಅರ್ಥವಾಗುತ್ತಿಲ್ಲ.

 

ಸೋನು ನಿಗಂ ಅಂದ್ರೆ ನನ್ನಂತೆಯೇ ಅನೇಕ ಮಂದಿಗೆ ಪಂಚಪ್ರಾಣ. ಅವನ ಆಲ್ಬಂ ಜಾನ್ ಇವತ್ತಿಗೂ ನನ್ನ ಆಲ್ ಟೈಮ್ ಫೇವರೆಟ್ಗಳಲ್ಲಿ ಒಂದು. ಶ್ರೇಯಾ ಘೋಷಾಲ್ ದನಿಯಲ್ಲಿ ಬಂದ ಜಿಸ್ಮ್ ಚಿತ್ರದ ಚಲೋ..ತುಮ್ಕೋ ಲೇಕರ್ ಚಲೇ ಹಾಡು ಕೂಡ ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದು. ಆದರೆ ಅವರು ಚೆನ್ನಾಗಿ ಹಾಡ್ತಾರೆ ಅಂದ ಮಾತ್ರಕ್ಕೆ ಅವರಷ್ಟೇ ಸೊಗಸಾಗಿ, ಸುಶ್ರಾವ್ಯವಾಗಿ ಹಾಡಬಲ್ಲ ನಮ್ಮ ಗಾಯಕ/ಗಾಯಕಿಯರನ್ನು ಬಿಟ್ಟು, ಎಲ್ಲರೂ ಬಾಲಿವುಡ್ ಗಾಯಕರನ್ನೇ ಕರೆಸೋದು ಎಷ್ಟು ಸರಿ ಅನ್ನೋದು ಪ್ರಶ್ನೆ. ಪರಭಾಷಾ ಹಾಡುಗಾರರು ಕೇಳುವ ಪಂಚತಾರಾ ಸೌಲಭ್ಯ, ಅವರ ವಿಮಾನದ ಖರ್ಚು, ಜೊತೆಗೆ ಸಂಭಾವನೆಯಾಗಿ ಕೊಡುವ ಲಕ್ಷಾಂತರ ರೂಪಾಯಿಗಳನ್ನು ಕಮಕ್-ಕಿಮಕ್ ಅನ್ನದೆ ಸುರಿಯೋ ನಮ್ಮ ನಿರ್ಮಾಪಕರುಗಳು, ನಮ್ಮ ಗಾಯಕರು ಕೇಳುವ ಹತ್ತಿಪ್ಪತ್ತು ಸಾವಿರಕ್ಕೂ ಮೀನ-ಮೇಷ ಎಣಿಸೋದು ಕಂಡಾಗ ನಿಜಕ್ಕೂ ಬೇಸರವಾಗುತ್ತೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತು ಇವರನ್ನು ಕಂಡ ಮೇಲೆ ಎಷ್ಟು ನಿಜ ಅನ್ನಿಸುತ್ತೆ. ಪ್ರತಿಭೆಗಳು ನಮ್ಮಲ್ಲಿ ಯಾವ ಪರಿಯ ಅವಜ್ಞೆಗೆ ಒಳಗಾಗುತ್ತವೆ ಅನ್ನೋದಕ್ಕೆ ನಮ್ಮ ಪ್ರಕಾಶ್ ರೈ, ಅರ್ಜುನ್ ಸರ್ಜಾ ಇವರೆಲ್ಲರಿಗಿಂತ ಬೇರೆ ಸಾಕ್ಷಿ ಬೇಕೆ?

 

ಅದಕ್ಕೇ ಹೇಳಿದ್ದು.. ಸೋನು, ಶ್ರೇಯಾ ಇವರೆಲ್ಲ ನಮಗಿಷ್ಟದವರೇ ಆಗಿ ಇರಲಿ. ಆದರೆ ಅವರಿಗೆ ಅವರದ್ದೇ ಕ್ಷೇತ್ರವಾದ ಬಾಲಿವುಡ್‌ನಲ್ಲಿ ಕೈತುಂಬಾ ಅವಕಾಶಗಳಿವೆ. ಅವರ ಹಿಂದಿ ಹಾಡುಗಳನ್ನು ಕೇಳಿ ನಾವೂ ಖುಷಿ ಪಡೋಣ. ನಮ್ಮದೇ ನೆಲದ ಕನ್ನಡ ಹಾಡುಗಳಿಗೆ ಇವರಿಗಿಂತಲೂ ಸಮರ್ಥವಾಗಿ ದನಿಯಾಗಲು ನಮ್ಮವರಾದ ಹೇಮಂತ್, ಪಲ್ಲವಿ, ರಾಜೇಶ್, ನಂದಿತಾ…ಇವರೆಲ್ಲ ಇರುವಾಗ ಪರಭಾಷಾ ಗಾಯಕರು ತಪ್ಪುತಪ್ಪಾಗಿ ಹನಿಸುತಿದೆ… ಅನ್ನೋದನ್ನೆಲ್ಲಾ ಕೇಳಿಕೊಂಡು ಇರೋ ಕರ್ಮ ನಮಗ್ಯಾತಕ್ಕೆ ಹೇಳಿ? ಚಿತ್ರರಂಗದಲ್ಲಿರುವವರೆಲ್ಲಾ ಒಗ್ಗಟ್ಟಾಗಿ ಈ ಕುರಿತು ಯೋಚಿಸಿ ತೀರ್ಮಾನಕ್ಕೆ ಬರಬೇಕಾದುದು ತೀರಾ ಅಗತ್ಯ. ಇಲ್ಲದೇ ಹೋದಲ್ಲಿ ವಾಯ್ಸ್ ಆಫ್ ಕರ್ನಾಟಕ, ಎದೆ ತುಂಬಿ ಹಾಡಿದೆ.., ಲಿಟ್ಲ್ ಚಾಂಪ್ಸ್ ಅಂತ ಎಷ್ಟೇ ಪ್ರತಿಭೆಗಳನ್ನು ಬೆಳಕಿಗೆ ತಂದರೂ, ಹಾಡೋಕೆ ಹೊರಗಿನಿಂದ ಪ್ರತಿಭೆ ಆಮದಾಗೋದಾದ್ರೆ ಈ ಟ್ಯಾಲೆಂಟ್ ಹಂಟ್‌ಗಳೆಲ್ಲಾ ಅರ್ಥಹೀನ ಅನ್ನಿಸ್ಸುತ್ತೆ ಅಲ್ವಾ..?