Archive for ಜುಲೈ 9, 2008

ಈ ಪ್ರಸಂಗ ಹೇಳಿದವರು ನನಗೆ ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಎಂ.ವಿ.ಹೆಗಡೆ. ಅವರು ಮೂಲತಃ ಉತ್ತರಕನ್ನಡದವರು. ಆರಂಭದಲ್ಲಿ ಪ್ರಾಥಮಿಕ ಶಾಲೆಗೆ ಮೇಷ್ಟ್ರಾಗಿ ಬಂದ ಅವರಿಗೆ ಕುಂದಾಪುರ ಕನ್ನಡದ ಪರಿಚಯವೇ ಇರಲಿಲ್ಲ. ಸಿದ್ದಾಪುರ(ಉಡುಪಿ ಜಿಲ್ಲೆ)ದಲ್ಲಿ ಅವರ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯ ಆರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಮಗೊಮ್ಮೆ ಕ್ಲಾಸಿನಲ್ಲಿ ಅವರು ಹೇಳಿದ್ರು. ಅದನ್ನೇ ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ.

 

ಸಿದ್ದಾಪುರದ ಶಾಲೆಗೆ ಮೇಷ್ಟ್ರಾಗಿ ಬಂದ ಹೊಸದು. ಯಾವುದೋ ತರಗತಿಯೊಂದರಲ್ಲಿ ಪಾಠ ಮಾಡುತ್ತಾ ಇದ್ರು. ಪಾಠ ಮುಗಿಯುವುದಕ್ಕೊ ಶಾಲೆಯ ಲಾಂಗ್ ಬೆಲ್ ಹೊಡೆಯುವುದಕ್ಕೊ ಸರಿಹೋಗಿತ್ತು. ಈಗಷ್ಟೇ ಮಾಡಿದ ಪಾಠ ಮಕ್ಕಳ ತಲೆಗೆ ಎಷ್ಟು ಹೋಗಿದೆ ನೋಡೋಣ ಅಂತ ಅವ್ರು ಮಕ್ಕಳಿಗೆ ಪಾಠದ ಕೊನೆಯಲ್ಲಿರುವ ಪ್ರಶ್ನೆಗೆ ನಾಳೆ ಉತ್ತರ ಹೇಳಬೇಕು ಅಂತ ಮಕ್ಕಳಿಗೆ ಹೇಳಿದ್ರು. ಆಗ ತರಗತಿಯಲ್ಲಿದ್ದ ಅಷ್ಟೂ ಮಕ್ಕಳೂ ಕೋರಸ್ನಲ್ಲಿ ಬರ್ಕ ಬರ್ಕಾ ಸಾರ್… ಅಂತ ರಾಗವಾಗಿ ಉಲಿದಾಗ ಕಕ್ಕಾಬಿಕ್ಕಿಯಾಗುವ ಸರದಿ ಹೆಗಡೆ ಮಾಷ್ಟ್ರದಾಗಿತ್ತು. ಏನು ಅಂತ ಆ ಮಕ್ಕಳನ್ನು ಕೇಳಿದ್ರೆ..ಮತ್ತೊಂದು ಸಾರಿ ಏಕಕಂಠದಿಂದ ಹೊರಬಂದಿತ್ತು ಅಮೃತವಾಣಿ…. ಬರ್ಕ ಬರ್ಕಾ ಸಾರ್..

 

ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ… ಯಾವುದೀ ದ್ವಿರುಕ್ತಿ…ಬರ್ಕ ಬರ್ಕ ಅಂತ ಯೋಚಿಸುತ್ತಾ ಏನೂ ಹೇಳದೇನೆ ತರಗತಿಯಿಂದ ಹೊರಬಂದ ಹೆಗಡೆ ಮೇಷ್ಟ್ರು ತಲೆಯಲ್ಲಿ ಅದೇ ಪ್ರಶ್ನೆ -ಏನಿರಬಹುದು ಈ ಬರ್ಕ ಬರ್ಕಾ..? ಕುತೂಹಲ ತಡೆಯಲಾಗದೆ ತಮ್ಮ ಸಹೋದ್ಯೋಗಿ ಮೇಷ್ಟ್ರ ಬಳಿ ಅದೇ ಪ್ರಶ್ನೆ ಹಾಕಿದರು.

 

ಕುಂದಾಪುರ ತಾಲೂಕಿನವರೇ ಆದ ಆ ಮೇಷ್ಟು ನಸುನಗುತ್ತಾ ಹೇಳಿದ್ದು ಇಷ್ಟು… ಅದ್ರಲ್ಲಿ ವಿಶೇಷ ಎಂತಾ ಇಲ್ಲಾ ಮರಾಯ್ರೆ.. ಮಕ್ಕಳು ನಿಮ್ ಹತ್ರ ಕೇಳ್ತಾ ಇದ್ದಾವೆ, ಪ್ರಶ್ನೆಗಳಿಗೆ ಉತ್ರಾ ಬರೆದುಕೊಂಡು ಬರಬೇಕಾ ಸಾರ್. ಅದನ್ನೇ ಶಾರ್ಟ್ ಆಂಡ್ ಸ್ವೀಟ್ ಆಗಿ ಕುಂದಾಪ್ರ ಕನ್ನಡದಲ್ಲಿ ಬರ್ಕ ಬರ್ಕಾ ಸಾರ್ ಅಂತ ಕೇಳಿದಾರೆ ಅಂದಾಗ ಒಗಟು ಬಿಡಿಸಿದ ಸಂಭ್ರಮದಲ್ಲಿ ಹೆಗಡೆ ಮಾಷ್ಟ್ರ ಮುಖದಲ್ಲಿ ನಗುವೊಂದು ಮೂಡಿತ್ತು. ಹೀಗಿದೆ ನೋಡಿ ಸ್ವಾಮಿ ಬರ್ಕ ಬರ್ಕಾ ಮಹಾತ್ಮೆ.

 

 

ನಿಮಗೆಂದಾದರೂ ಈ ರೀತಿಯ ಅನುಭವವಾಗಿದೆಯೇ? ಯಾರನ್ನೋ ಬಹುಕಾಲದ ನಂತರ ಭೇಟಿಯಾಗೋದು ಅಂತ ನಿಶ್ಚಯವಾಗಿರುತ್ತೆ. ಅವರಿನ್ನೇನು ನಾಳೆ ಬರಬಹುದು ಅನ್ನೋ ಹೊತ್ತಿಗಾಗಲೇ ಮನಸ್ಸಿನಲ್ಲಿ ಕಾತುರ, ಸಡಗರ-ಸಂಭ್ರಮ. ಆದರೆ ಆ ನಾಳೆ ಬಂದಾಗ, ಅವರನ್ನು ಭೇಟಿ ಆದಾಗ ಮನಸ್ಸು ಸಂತೋಷದಲ್ಲಿ ಇದ್ದರೂ ಕೂಡಾ ಏನೋ ಅಷ್ಟು ಖುಶಿಯಾಗಲಿಲ್ಲಪ್ಪ ಅಂತ ಒಳಮನಸು ಯಾಕೋ ಪಿಸುಗುಟ್ಟಿದಂತಾಗುತ್ತದೆ. ಬಹು ಆಸೆಯಿಂದ ಕೊಂಡು ತಂದ ವಸ್ತು-ವಡವೆ, ಆಸೆಪಟ್ಟು ಆರ್ಡರ್ ಮಾಡಿದ ಐಸ್‌ಕ್ರೀಂ, ಕಾದು ಬ್ಲ್ಯಾಕ್‌ನಲ್ಲಿ ಟಿಕೇಟ್ ಕೊಂಡು ನೋಡಿದ ಸಿನೆಮಾ… ಹೀಗೆ ಯಾವುದು ಬೇಕಿದ್ರೂ ಆಗಬಹುದು. ನಾವು ಅದರ ನಿರೀಕ್ಷೆಯಲ್ಲಿ ಕಂಡ ಸುಖ, ತೃಪ್ತಿಗಳು, ಅದು ದಕ್ಕಿದಾಗ ಸಿಗದೇ ಹೋಗಬಹುದು. ಒಮ್ಮೊಮ್ಮೆ ನಮ್ಮ ನಿರೀಕ್ಷೆಯಲ್ಲಿ ಇದ್ದ ಕಲ್ಪನೆಗೂ, ವಾಸ್ತವದಲ್ಲಿ ಇರುವುದೋ ಇಲ್ಲಾ ಘಟಿಸುವುದಕ್ಕೋ ವ್ಯತ್ಯಾಸ ಇದ್ದಾಗ ಹೀಗಾಗುತ್ತದೆ. ಆದರೆ ಎಷ್ಟೋ ಸಾರಿ ಯಾವ ಕಾರಣವೂ ಇಲ್ಲದೆ ಈ ಅತೃಪ್ತಿ ಹೆಡೆಯೆತ್ತಬಹುದು. ಇದಕ್ಕೆ ಕಾರಣವೇನಿರಬಹುದು?

 

ಮನಸ್ಸೆನ್ನುವುದು ಅಂಕೆಯಿಲ್ಲದ ಕಪಿಯಂತದ್ದು. ಇದು ಯಾವ ಪ್ರಚೋದನೆಗೋ, ಘಟನೆಗೋ ಸ್ಪಂದಿಸಿ ಕ್ಷಣಕ್ಷಣದಲ್ಲಿ ಬದಲಾಗುತ್ತಾ ಇರುತ್ತದೆ. ಕೆಲವೊಮ್ಮೆ ಹುಚ್ಚು ಕುದುರೆಯಂತೆ ಅತ್ಯುತ್ಸಾಹದಿಂದ ಕೆನೆಯುತ್ತಾ ಮುನ್ನುಗ್ಗಿದರೆ, ಮತ್ತೊಮ್ಮೆ ಬಸವನ ಹುಳುವಿನಂತೆ ನಿಂತಲ್ಲೇ ತೆವಳುತ್ತಿರುತ್ತದೆ. ಹಾಗಾಗಿ ನಿರೀಕ್ಷೆ ಮಾಡುವಾಗಿನ ಮನಸ್ಥಿತಿ ಬದಲಾಗಿ, ವಾಸ್ತವದಲ್ಲಿನ ಘಟನೆ ಯಾ ಅನುಭೂತಿಗೆ ಅದು ಸ್ಪಂದಿಸುವ ರೀತಿಯೇ ಬೇರೆಯಾಗಿ ಬಿಡುವುದರಿಂದ ಹೀಗಾಗುತ್ತಿರಬಹುದೇ? ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಅಚ್ಚರಿಯಲ್ಲಿ ಇರುವ ಥ್ರಿಲ್ ನಿರೀಕ್ಷಿತವಾದುದರಲ್ಲಿ ಇಲ್ಲದಿರುವುದೇ ಹೀಗೆ ಅನ್ನಿಸಲು ಹೇತುವಾಗಬಹುದೇ? ಇಲ್ಲಾ ಅಡಿಗರು ಹೇಳಿರುವಂತೆ ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ ತುಡಿಯೋದೇ ಮನಸಿನ ಈ ಅತೃಪ್ತಿಯ ಮರ್ಮವಾಗಿರಬಹುದೇ? ಇದಕ್ಕೆ ಉತ್ತರ ಹೇಳೋದು ಬಹುಶಃ ಮನಃಶಾಸ್ತ್ರಜ್ಞರಿಗೂ ಕಷ್ಟಸಾಧ್ಯ ಅನ್ನಿಸುತ್ತೆ.

 

ಇದನ್ನೇ ಇನ್ನೂ ಒಂದು ಕೋನದಿಂದ ಕಂಡಾಗ ಅನ್ನಿಸುವುದೇನೆಂದರೆ, ನಮ್ಮ ಸುಪ್ತಪ್ರಜ್ಞೆಯ ಆಳದಲ್ಲೆಲ್ಲೋ ಹಿಂದೆ ಈ ರೀತಿಯ ಘಟನೆಗಳು ನಡೆದಾಗ ಸಿಕ್ಕ ಸಂತೃಪ್ತಿ, ಅನುಭೂತಿ, ಖುಷಿಗಳು ಅಚ್ಚೊತ್ತಿರುತ್ತವೆ. ಪ್ರಸ್ತುತ ಅದೇ ರೀತಿಯ ಘಟನೆ-ಅನುಭೂತಿಗೆ ನಾವು ಒಳಗಾದಾಗ, ಸುಪ್ತ ಮನಸ್ಸಿನ ತಕ್ಕಡಿಯಲ್ಲಿ ನಮಗೆ ಅರಿವಿಲ್ಲದಂತೆ ಹಿಂದಿನ ಅನುಭೂತಿಯೊಂದಿಗೆ ತಾಳೆ ಹಾಕಿ ನೋಡುವ ಪ್ರಕ್ರಿಯೆ ನಡೆಯುತ್ತಿರಬಹುದು. ಈ ತುಲನೆಯ ಫಲಶ್ರುತಿಯಾಗಿಯೇ ಏನೋ ಅಷ್ಟು ಖುಷಿಯಾಗ್ಲಿಲ್ಲಪ್ಪ ಅಂತ ನಮಗನ್ನಿಸುತ್ತಿರಬಹುದೇ? ಒಂದು ಪುಟ್ಟ ಉದಾಹರಣೆ ನೋಡೋದಾದ್ರೆ, ಸಚಿನ್ ತೆಂಡೂಲ್ಕರ್ ಈಗ ಒಂದು ಸೆಂಚುರಿ ಹೊಡೆದ ಅಂತಿಟ್ಟುಕೊಳ್ಳೋಣ. ಅದನ್ನು ಅವನ ಹಿಂದಿನ ಸೆಂಚುರಿಗಳಿಗೆ ಹೋಲಿಸಿ, ಏನೇ ಆದ್ರೂ ಮುಂಚಿನ ಸಚಿನ್ ಅಲ್ಲಪ್ಪ.. ಅದರ ಮಜವೇ ಬೇರೆ ಇತ್ತು.. ಅಂತ ನಾವು ಉದ್ಘರಿಸುತ್ತೇವೆ. ಅವನು ಇವತ್ತೂ ಚೆನ್ನಾಗಿಯೇ ಆಡಿರುತ್ತಾನೆ. ಆದರೆ ಅವನ ಮುಂಚಿನ ಆರ್ಭಟ, ಅಬ್ಬರ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದಾಗಿ, ಸಚಿನ್ ಆಟ ಅಂದ್ರೆ ಆ ಥ್ರಿಲ್ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೇವೆ. ಹಾಗಾಗಿ ಅವನು ಚೆನ್ನಾಗಿಯೇ ಆಡಿದ್ರೂ ಕೂಡಾ, ಹಿಂದಿನ ಸಚಿನ್ ಜೊತೆ ಸದಾ ತಾಳೆ ಹಾಕುವ ಮನಸಿನ ಚಾಳಿಯಿಂದಾಗಿ.. ಮುಂಚಿನ ಹಾಗೆ ಖುಷಿ ಆಗ್ಲಿಲ್ಲ ಅನ್ನುತ್ತೆ ಅತೃಪ್ತ ಮನಸ್ಸು. ಅದೇ ಯಾವ ನಿರೀಕ್ಷೆಯೂ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಕುಂಬ್ಳೆ, ಶ್ರೀನಾಥ್ ಬೆಂಗಳೂರಿನ ಟೈಟಾನ್ ಕಪ್ನಲ್ಲಿ ಆಡಿ ಗೆಲ್ಲಿಸಿದ್ದು ನಮಗೆ ತುಂಬಾ ಆಪ್ಯಾಯಮಾನ ಅನುಭೂತಿಯಾಗಿರುತ್ತೆ. ಯಾಕಂದ್ರೆ ಅದು ಅಚ್ಛರಿ ಹಾಗು ಅನಿರೀಕ್ಷಿತ. ಇದು ಹೀಗೆಯೇ ಇರಬಹುದು ಅಂತ ನಾನು ಪ್ರತಿಪಾದಿಸುತ್ತಿಲ್ಲ. ಬಹುಶಃ ಹೀಗೂ ಇರಬಹುದೇನೋ ಅಂತ ಹೇಳುತ್ತಿದ್ದೇನೆ ಅಷ್ಟೇ.

 

ಕಾರಣಗಳು ಏನೇ ಇದ್ದರೂ ಕೂಡಾ, ಮನಸಿನಲ್ಲಿ ತಿನ್ನುವ ಮಂಡಿಗೆ ಹೆಚ್ಚು ರುಚಿ ಅನ್ನೋದು ಸತ್ಯ. ನಿರೀಕ್ಷೆಯಲ್ಲಿರುವ ಸುಖವನ್ನು ಅನುಭವಿಸಲಾದ್ರೂ ನಿರೀಕ್ಷೆಗಳು ಬೇಕಲ್ವೇ?

 

ಕನಸಲ್ಲಿ ಬರುವ ಬೆಡಗಿಯರೇ

ನಿಜದಿ ಎದುರಾಗಬೇಡಿ

ನಿರೀಕ್ಷೆಯಲ್ಲಿರುವ ಸುಖವ

ಹುಸಿಯಾಗಿಸಬೇಡಿ .

 

ಈ ಬರಹ ನಿಮಗೆ ಖುಷಿಕೊಟ್ಟಿತಾ? ಇಲ್ಲವಾದಲ್ಲಿ ಅದಕ್ಕೆ ಕಾರಣ ನಿಮ್ಮ ಮನದಲ್ಲಿ ನಿರೀಕ್ಷೆಯ ಫಲಶ್ರುತಿಯಾಗಿ ಹುಟ್ಟಿದ ಅತೃಪ್ತಿಯೇ ಇರಬೇಕು J

 

ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು.

 

ಕಥೆ ಏನಪ್ಪಾ ಅಂದ್ರೆ …

 

ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ ಒಂಬತ್ ಆನಿ ಹೋಯಿ, ಮರಿಯಾನಿ ಬಾಲ ಸಿಕ್ಕಂಡ್ ಬಿದ್ದಿತ್ತ್ ಅಂದ ಅಂಬ್ರ್

 

ಇದು ಸುಳ್ಳು ಹೇಳುವುದರ ಪರಮಾವಧಿಯನ್ನು ಸೂಚಿಸುವ ಒಂದು ನುಡಿಕಟ್ಟು ಅಥವಾ ಕಟ್ಟು ಕಥೆ ಅನ್ನಬಹುದು. ಇದರ ಅರ್ಥ ಇಷ್ಟೇ.. ಸುಕ್ರ ಅನ್ನುವ ಒಬ್ಬ ಮಹಾ ಸುಳ್ಳುಗಾರನ ಹತ್ರ ಹೋಗಿ ಸುಳ್ಳು ಹೇಳಪ್ಪಾ ಅಂತ ಅಂದ್ರೆ.. ವಾಟೆ ಅಂಡೆಯ ( ಒಲೆ ಊದಲು ಬಳಸುವ ಬಿದಿರಿನ ಕೊಳವೆ… ಲೋಹದ ಕೊಳವೆ ಅಂತ ಬೇಕಾದ್ರೂ ಇಟ್ಟುಕೊಳ್ಳಬಹುದು) ಒಳಗೆ ಒಂಬತ್ತು ಆನೆಗಳು ತೂರಿ ಹೋಗಿ, ಮರಿಯಾನೆ ತೂರಿ ಹೋಗುವಾಗ ಅದರ ಬಾಲ ಸಿಕ್ಕಿ ಹಾಕಿಕೊಂಡಿತ್ತು ಅಂತಾ ಹೇಳಿದನಂತೆ. ಇಲ್ಲಿ ಸುಕ್ರನ ಸುಳ್ಳಿನ ಪವರ್ ಎಷ್ಟಿದೆ ಅಂದ್ರೆ.. ವಾಟೆ ಅಂಡೆಯ ಒಳಗೆ ಆನೆ ತೂರಿ ಹೋಗುವುದೇ ಅಸಾಧ್ಯ ಪರಿಕಲ್ಪನೆ. ಅಂಥಾದ್ರಲ್ಲಿ ಒಂಬತ್ತು ಆನೆ ಸಲೀಸಾಗಿ ತೂರಿ ಹೋಗಿ, ಗಾತ್ರದಲ್ಲಿ ಚಿಕ್ಕದಾದ ಮರಿ ಆನೆ ತೂರಿ ಹೋಗೋವಾಗ ಅದರ ಬಾಲ ಸಿಕ್ಕಿಹಾಕಿಕೋಡಿತು… ಅಂತ ಬುರುಡೆ ಬಿಡ್ತಾನೆ.

ಗುರು ಕಿರಣ್ ಅವರ ಬಂಡಲ್ ಬಡಾಯಿ ಮಾದೇವ…ನೂ ಸುಕ್ರನಿಂದ ಸ್ಫೂರ್ತಿ ಪಡೆದಿದ್ದಾನೆ ಅನ್ನೋದು ಶುದ್ದ ಶುಂಠಿ.

ನಿಮ್ಮಲ್ಲೂ ಇಂಥಹ ಕಥೆಗಳಿವೆಯೆ…ಇದ್ರೆ ಹಂಚಿಕೊಳ್ಳಿ. ಎಲ್ಲಾರು ಓದಿ ಖುಷಿ ಪಡೋಣ.

 

ತೊಂಬತ್ತರ ದಶಕದ ಆದಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡು ಇಂದಿಗೂ ನನ್ನ ಅಚ್ಚುಮೆಚ್ಚಿನದು. ರಾಷ್ಟ್ರೀಯ ಭಾವೈಕ್ಯವನ್ನು ಸಾರುವ ಈ ಗೀತೆಯ ಹಿಂದಿರುವ ಭಾವ, ಅದನ್ನು ಮನಮುಟ್ಟುವಂತೆ ನಿರೂಪಿಸಿದ ರೀತಿಯಿಂದಾಗಿ ಅದು ಮನಸ್ಸನ್ನು ತಟ್ಟಿ ಅಲ್ಲೇ ಗಟ್ಟಿಯಾಗಿ ನಿಂತುಬಿಟ್ಟಿದೆ. ಇತ್ತೀಚೆಗೆ ಜಾತಿ, ಭಾಷೆ, ಗಡಿಗಳ ವಿಷಯದಲ್ಲಿ ಜನರಲ್ಲಿ ಮನೆ ಮಾಡುತ್ತಿರುವ ಒಂದು ರೀತಿಯ ಅಸಹನೆಯ ಹಿನ್ನೆಲೆಯಲ್ಲಿ ಈ ಹಾಡು ಮತ್ತೊಮ್ಮೆ ನೆನಪಾಗಿ ನನ್ನಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟುಹಾಕಿದೆ. ಅದರಲ್ಲಿ ಕೆಲವನ್ನು ಮುಂದಿಡುವ ಪ್ರಯತ್ನವೇ ಈ ಲೇಖನ.

 

ಪ್ರೀತಿ ಅಕಾರಣವಾಗಿರಲಿ.. ದ್ವೇಷ ಸಕಾರಣವಾಗಿರಲಿ ಎಂಬುದೊಂದು ಉಕ್ತಿ. ನಾವು ಯಾರನ್ನಾದರೂ ದ್ವೇಷಿಸಲು ಕಾರಣವೇನು? ಕಾರಣವಿಲ್ಲದ ದ್ವೇಷ ಅರ್ಥಹೀನ ( ಕಾರಣವಿರುವ ದ್ವೇಷ ಕೂಡಾ ಸಮರ್ಥನೀಯವೇನಲ್ಲ) ಅಂಥಹುದರಲ್ಲಿ ರಾಜ್ಯ-ರಾಜ್ಯಗಳ ನಡುವಿನ ಭಾಷೆ, ಸಂಸ್ಕೃತಿಯ ನಡುವಿನ ಭಿನ್ನತೆ-ವೈವಿಧ್ಯತೆಗಳ ಕಾರಣಕ್ಕಾಗಿ ಯಾಕಾದರೂ ದ್ವೇಷ ಹುಟ್ಟಬೇಕು? ರಾಜ್ಯ, ಜಿಲ್ಲೆ, ತಾಲ್ಲೂಕು ಇವೆಲ್ಲವೂ ಆಡಳಿತದ ವಿಕೇಂದ್ರೀಕರಣ ಹಾಗು ಭಾಷೆ-ಸಂಸ್ಕೃತಿಯ ವ್ಯತ್ಯಾಸಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸುಗಮ ನಿರ್ವಹಣೆಗಾಗಿ ನಾವೇ ಮಾಡಿಕೊಂಡ ವ್ಯವಸ್ಥೆ. ಇಷ್ಟು ಸರಳ ಸತ್ಯದ ಅರಿವು ಇಲ್ಲದೆ, ನಮ್ಮ-ನಮ್ಮಲ್ಲಿನ ವೈವಿಧ್ಯತೆಗಳನ್ನೇ ಬೊಟ್ಟುಮಾಡಿ ಪರಸ್ಪರ ಕೆಸರೆರಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಅನ್ನೋದು ನನ್ನ ದೃಢ ನಂಬಿಕೆ. ವ್ಯಕ್ತಿಯೊಬ್ಬನನ್ನು ಆತನ ಧರ್ಮ, ಜಾತಿ, ಭಾಷೆಯ ಹಿನ್ನೆಲೆಯಲ್ಲಿ ಪ್ರತ್ಯೇಕಿಸಿ ನೋಡುವುದಾದರೆ, ಈ ಭಿನ್ನತೆಯ ಮುಂದೆ ಆತನ ವ್ಯಕ್ತಿತ್ವ, ಸಾಧನೆಗಳನ್ನು ಅಲಕ್ಷಿಸುವುದಾದರೆ, ನಮ್ಮ ದೃಷ್ಟಿಕೋನಕ್ಕೆ ಚಿಕಿತ್ಸೆ ಆಗಬೇಕೇನೋ ಅಲ್ಲವೇ?

 

ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ನಾಗರೀಕತೆಯ ಹುಟ್ಟಿನ ಆದಿಯಲ್ಲಿ ನಮ್ಮ ಪೂರ್ವಜರೆಲ್ಲರೂ ಬಹುಶಃ ಉಪಯೋಗಿಸುತ್ತಿದ್ದ ಭಾಷೆ ಒಂದೇ ಒಂದು. ಅದುವೇ ಸಂಜ್ಞಾಭಾಷೆ. ಕ್ರಮೇಣ ಆಯಾ ಪ್ರದೇಶಗಳಲ್ಲಿ ಬೀಡುಬಿಟ್ಟ ಜನರು ತಮ್ಮ ನಡುವಿನ ಸುಗಮ ಸಂವಹನಕ್ಕಾಗಿ ರೂಪಿಸಿಕೊಂಡ ಮಾಧ್ಯಮ – ಭಾಷೆ. ಇದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದು, ಇಂದು ನಾವಾಡುವ ಭಾಷೆಯ ಮಟ್ಟಕ್ಕೆ ಬಂದು ಮುಟ್ಟುವ ಹಾದಿಯಲ್ಲಿ ಜನರ ವಲಸೆ, ನಮ್ಮನ್ನು ಆಳಿದವರು, ಇವರೆಲ್ಲರ ಪ್ರಭಾವದಿಂದಾಗಿ ಪರಸ್ಪರ ಕೊಡು-ಕೊಳ್ಳುವಿಕೆಯಿಂದಾಗಿ ಸಂಪದ್ಭರಿತವಾಗುತ್ತಾ ಬಂದಿದೆ. ನಿಖರವಾಗಿ ಅಭ್ಯಸಿಸಿದರೆ ಭಾರತೀಯ ಭಾಷೆಗಳೆಲ್ಲಾ ಬಹುತೇಕ ಒಂದೇ ಮೂಲದಿಂದ ಬಂದಂತೆ ಭಾಸವಾಗುತ್ತದೆ. ಕನ್ನಡ, ತಮಿಳು, ಮಲೆಯಾಳಂ, ತುಳು, ತೆಲುಗು ಭಾಷೆಗಳಲ್ಲಿರುವ ಅನೇಕ ಸಾಮ್ಯತೆಗಳು ಇದಕ್ಕೆ ಸ್ಪಷ್ಟ ನಿದರ್ಶನ. ಅಷ್ಟೇಕೆ ಬೆಂಗಾಲಿ, ಒರಿಯಾ ಭಾಷೆಗಳಲ್ಲೂ ಕೂಡಾ ದಕ್ಷಿಣದ ಭಾಷೆಗಳೊಂದಿಗೆ ಅನೇಕ ಹೋಲಿಕೆಗಳಿವೆ. ಹೀಗಿರುವಾಗ ಭಾಷೆಯನ್ನು ಕಾರಣವಾಗಿರಿಸಿಕೊಂಡು ನಾವೇಕೆ ಪರಸ್ಪರರಲ್ಲಿ ನಮ್ಮದು ಮೇಲು-ನಿಮ್ಮದು ಕೀಳು ಎಂದು ಜಗಳವಾಡಬೇಕು? ನಮ್ಮ ನಮ್ಮ ಭಾಷೆಯನ್ನು ಪ್ರೀತಿಸಿ, ಬೇರೆಯವರದನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಸಾಕಲ್ಲವೇ?

 

ಜಾತಿ, ಧರ್ಮ, ಭಾಷೆಯ ವಿಷಯವನ್ನೇ ಕೇಂದ್ರವಾಗಿರಿಸಿಕೊಂಡು ದ್ವೇಷಿಸುವುದಾದರೆ, ಶಾಂತಿ, ನೆಮ್ಮದಿಯಿಂದ ಬಾಳುವುದು ಎಂದಿಗಾದರೂ ಸಾಧ್ಯವೇ? ಅಬ್ದುಲ್ ಕಲಾಂ, ತೆಂಡೂಲ್ಕರ್, ಲತಾ ಮಂಗೇಶ್ಕರ್, ಸಾನಿಯಾ ಮಿರ್ಜಾ, ವಾಜಪೇಯಿ, ಶಾರುಕ್ ಖಾನ್, ರಾಹುಲ್ ದ್ರಾವಿಡ್, ಲಿಯಾಂಡರ್ ಪೇಸ್ ಇವರೆಲ್ಲರನ್ನು ಪ್ರೀತಿಸಲು ನಮಗೆ ಅಡ್ಡಿಯಾಗದ ಪ್ರಾದೇಶಿಕತೆ, ಜಾತಿ ಧರ್ಮಗಳ ಭಿನ್ನತೆಯು, ಬೇರೆ ವಿಷಯಗಳಲ್ಲಿ ಏಕೆ ಅಡ್ಡಿಯಾಗಬೇಕು? ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ಥಾಪಿತ ಹಿತಾಸಕ್ತಿಗಳ ಪ್ರಚೋದಕ ಕ್ರಿಯೆಗಳಿಗೆ ನಾವ್ಯಾಕೆ ಪ್ರತಿಕ್ರಿಯೆ ನೀಡಬೇಕು? ನಮ್ಮ ಭಿನ್ನತೆಗಳನ್ನು ಪರಸ್ಪರು ಗೌರವಿಸುವಷ್ಟು ವಿವೇಕ ನಮ್ಮಲ್ಲಿದ್ದರೆ ಮಾತ್ರ ಭಾರತ ಒಂದು ಶಕ್ತಿಯಾಗಿ ಮುನ್ನಡೆಯಬಹುದೇನೋ. ಇಲ್ಲವಾದಲ್ಲಿ ಪ್ರಾದೇಶಿಕ ಭಿನ್ನತೆಯ ಕಚ್ಚಾಟಗಳಲ್ಲೇ ದೇಶ ಅಸಹನೆಯ ಗೂಡಾಗಿಹೋಗುತ್ತದೆ. ಹಾಗಾಗದು ಅನ್ನುವುದು ಭರವಸೆ. ನನ್ನ ದನಿಗೆ ನಿನ್ನ ದನಿಯು…ಸೇರಿದರೆ ನಮ್ಮ ದ್ವನಿಯು…