Archive for ಜುಲೈ 10, 2008

ನಾನು ಚಿಕ್ಕವನಿದ್ದಾಗ ಕೇಳಿದ ಒಂದು ಪದ್ಯ ಇದು. ಇದು ಬಾಯಿಂದ ಬಾಯಿಗೆ ಹರಿದು ಬರುವಾಗ ಇದರ ರೂಪದಲ್ಲಿ ಅನೇಕ ಬದಲಾವಣೆಗಳಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕೆರಳಿಸುವ, ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುವ ಈ ಪದ್ಯ ಯಾರು ಸೃಷ್ಟಿಸಿದ್ದೋ ಗೊತ್ತಿಲ್ಲ. ನನಗೆ ಚಿಕ್ಕಂದಿನಲ್ಲಿ ಕೇಳಿದ್ದು ಇನ್ನೂ ಬಾಯಿಪಾಠ ಇದೆ.

 

ಈ ಪದ್ಯದಲ್ಲಿ ಸಿಂಡಿಕೇಟ್ ಬ್ಯಾಂಕು ಬರುತ್ತೆ. ಅದ್ಯಾವುದೋ ಕಮಲಾ ಸರ್ಕಸ್ ಅನ್ನೋ ಸರ್ಕಸ್ ಬರುತ್ತೆ. ಹಾಗೆಯೇ ಬಡ್ಡಿ ಕಮಲ ಅನ್ನೋ ಹೆಂಗಸಿನ ಪ್ರಸ್ತಾಪವೂ ಬರುತ್ತೆ. ಯಾರೀಕೆ ಕಮಲ? ಆಕೆ ಬಡ್ಡಿ ವ್ಯವಹಾರ ಮಾಡ್ತಾ ಇದ್ದಳಾ? ಯಾವೂರಿನವಳು? ಅದ್ಯಾವುದು ಕಮಲಾ ಸರ್ಕಸ್? ಅದು ಈಗಲೂ ಇದ್ಯಾ? ಈ ಹಾಡು ರಚಿತವಾದ ಕಾಲ ಯಾವುದಿರಬಹುದು? ಯಾರಿದನ್ನು ಬರೆದಿರಬಹುದು..ಇದು ಜನರ ಬಾಯಿಂದ ಬಾಯಿಗೆ ಹೀಗೆ ಹರಿದು ಬಂತೆ..? ಹೀಗೆ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಬಹುಶಃ ನಮ್ಮೂರು ಕುಂದಾಪ್ರ-ಉಡುಪಿ ಕಡೆಯ ಪದ್ಯ ಇರಬೇಕು ಅನ್ನೋದು ನನ್ನ ಊಹೆ. ಕೊನೆಯಲ್ಲಿ ದೇಶಪ್ರೇಮದ ಒಂದು ಝಲಕ್ ಕೂಡಾ ಇದೆ. ನಿಮಗೇನಾದ್ರೂ ಈ ಕುರಿತು ಗೊತ್ತಿದ್ರೆ ಹೇಳಿ…ಇಲ್ಲವಾದ್ರೂ ಹಾಡನ್ನಂತೂ ಓದಿ ಖುಶಿ ಪಡಲು ಅಡ್ಡಿಯಿಲ್ಲ.

 

ಮಗು ಮಗು ಪಾಠ ಕಲಿ..

ಯಾವ ಪಾಠ?

ಕೃಷ್ಣ ಪಾಠ

ಯಾವ ಕೃಷ್ಣ?

ಬಾಲ ಕೃಷ್ಣ

ಯಾವ ಬಾಲ?

ಕುದುರೆ ಬಾಲ

ಯಾವ ಕುದುರೆ?

ಸರ್ಕಸ್ ಕುದುರೆ

ಯಾವ ಸರ್ಕಸ್?

ಕಮಲಾ ಸರ್ಕಸ್

ಯಾವ ಕಮಲಾ?

ಬಡ್ಡಿ ಕಮಲ

ಯಾವ ಬಡ್ಡಿ?

ಬ್ಯಾಂಕಿನ ಬಡ್ಡಿ

ಯಾವ ಬ್ಯಾಂಕು?

ಸಿಂಡಿಕೇಟ್ ಬ್ಯಾಂಕು

ಯಾವ ಸಿಂಡಿ?

ಭಟ್ಟರ ಸಿಂಡಿ

ಯಾವ ಭಟ್ಟರು?

ಪೂಜೆ ಭಟ್ಟರು

ಯಾವ ಪೂಜೆ?

ಗಣಪನ ಪೂಜೆ

ಯಾವ ಗಣಪ?

ಸೊಂಡಿಲ ಗಣಪ

ಯಾವ ಸೊಂಡಿಲು?

ಆನೆ ಸೊಂಡಿಲು

ಯಾವ ಆನೆ?

ಕಾಡು ಆನೆ

ಯಾವ ಕಾಡು?

ನಮ್ಮ ಕಾಡು

ಯಾವ ನಮ್ಮ?

ನಮ್ಮ ದೇಶ ನಮ್ಮ

ಯಾವ ದೇಶ?

ಭಾರತ ದೇಶ

ಯಾವ ಭಾರತ?

ನಮ್ಮ ಭಾರತ

 

 

ಹಾಡುಗಳೆಂದ್ರೆ ಯಾರಿಗೆ ಇಷ್ಟ ಇರೊಲ್ಲ ಹೇಳಿ? ಭಕ್ತಿಗೀತೆ, ಚಿತ್ರಗೀತೆ, ಜಾನಪದ, ತತ್ವಪದ, ಭಾವಗೀತೆ, ರಾಪ್, ರಾಕ್, ಪಾಪ್… ಹೀಗೆ ಒಬ್ಬೊಬ್ಬರ ಅಭಿರುಚಿಗೆ ತಕ್ಕಂತೆ ಒಂದೊಂದು ಇಷ್ಟ. ಈಗಂತೂ ಎಫ್.ಎಂ.ಗಳ ಭರಾಟೆ ಶುರುವಾದ ಮೇಲೆ ದಿನದ 24 ಗಂಟೆಯೂ ಕಿವಿಗೊಂದು ಇಯರ್‌ಫೋನ್ ಸಿಕ್ಕಿಸಿಕೊಂಡು ಸದಾ ಕಿವಿ ತುಂಬಿಸಿಕೊಳ್ಳುವವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಅದಿರಲಿ, ನಿಮಗೆ ಯಾವ ಹಾಡು ಇಷ್ಟ ಹೇಳಿ? ನಾನಂತೂ ರಾಪ್, ರಾಕ್, ಪಾಪ್‌ಗಳ ಅಬ್ಬರವನ್ನು ಬಿಟ್ಟು ಮಿಕ್ಕೆಲ್ಲದರ ಇಂಪಿಗೆ ಕಿವಿಯಾಗುತ್ತೇನೆ. ಆದರೆ ಯಾವತ್ತಾದರೂ ಮುಸ್ಸಂಜೆಯ ಹೊತ್ತಲ್ಲಿ ಗಝಲ್‌ಗಳ ಮತ್ತಲ್ಲಿ ಮುಳುಗೆದ್ದಿದ್ದೀರಾ..? ಸೂರ್ಯ ಮುಳುಗಿ ಹಕ್ಕಿಗಳು ಗೂಡು ಸೇರುವ ಹೊತ್ತಿನಲಿ, ದಿವ್ಯ ಏಕಾಂತದಲ್ಲೊಮ್ಮೆ ಗಝಲ್‌ಗಳನ್ನು ಕೇಳಿ ನೋಡಿ. ಎಂಥಾ ಅರಸಿಕನನ್ನೂ ಕವಿಯಾಗಿಸಬಲ್ಲ, ದಿವ್ಯ ಸಾನ್ನಿಧ್ಯವೊಂದರಲ್ಲಿ ಲೀನವಾದಂತಹ ಆ ಮಧುರಾನುಭೂತಿ ಶಬ್ದಗಳ ನಿಲುಕಿಗೆ ಸಿಗುವಂತದ್ದಲ್ಲ. ಅದನ್ನು ಅನುಭವಿಸಿಯೇ ತಿಳಿಯಬೇಕು.

 

ನೂರಾರು ಗಝಲ್ ಗಾಯಕ-ಗಾಯಕಿಯರಿದ್ದಾರದರೂ ಗುಲಾಮ್ ಅಲಿ, ಅಬೀದಾ ಪರ್ವೀನ್, ಜಗಜೀತ್ ಸಿಂಗ್ ಗಝಲ್‌ಗಳೆಂದರೆ ನನಗಂತೂ ಪಂಚಪ್ರಾಣ. ಒಮ್ಮೆ ರವಿ ಬೆಳಗೆರೆ ಹಾಯ್ನಲ್ಲಿ ಗಝಲ್‌ಗಳ ಬಗ್ಗೆ ಬರೆದ ಲೇಖನ ಓದಿ ಹತ್ತಿಸಿಕೊಂಡ ಗುಲಾಮ್ ಅಲಿ ಮತ್ತು ಅಬೀದಾ ಪರ್ವೀನ್‌ಳ ಗಝಲ್ ಹುಚ್ಚು  ಇನ್ನೂ ಬಿಟ್ಟಿಲ್ಲ. ಗುಲಾಮ್ ಅಲಿಯ ಚುಪ್ಕೆ ಚುಪ್ಕೆ ರಾತ್ ದಿನ್.., ಝಕ್ಮ್-ಎ-ತನಹಾಯಿ ಮೆ.., ಹಮ್ಕೊ ಕಿಸ್ಕೆ ಘಮ್ ನೆ ಮಾರಾ.. ಕೇಳುತ್ತಾ ಕಳೆದು ಹೋದರೆ.. ಅಬೀದಾಳ ಮೈಂ ನಾ ರಹಿ ಮಸ್ತಾನ.., ಪ್ರೀತಮ್ ಮತ್ ಪರ್ದೇಸ್ ಸಿಧಾರೋ.., ತೂನೆ ದೀವಾನ ಬನಾಯ..ಮೈ ದೀವಾನಿ ಬನೀ.. ನಿಮ್ಮನ್ನು ಆವರಿಸಿಕೊಂಡು ಕಾಡುತ್ತದೆ. ಜಗಜೀತ್ ಸಿಂಗ್ ಗಝಲ್ ಬಗ್ಗೆ ಬೇರೆ ಹೇಳಲೇಬೇಕಾಗಿಲ್ಲ.

ಮೊದ ಮೊದಲು ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನಿಸಿದರೂ ಕೂಡಾ ಅದರ ಭಾವ ಅರಿವಾದಂತೆಲ್ಲಾ ಹಾಡಿನ ಅರ್ಥವೂ ಆಗುತ್ತಾ ಹೋಗುತ್ತದೆ. ಅರ್ಥವಾದಂತೆಲ್ಲಾ ಆ ದನಿಯ ಆರ್ದ್ರತೆ, ಹಾಡಿನ ಮಾಧುರ್ಯ, ಭಾವುಕತೆ ಇವೆಲ್ಲಾ ಮೇಳೈಸಿದಾಗ ಸಿಗುವ ಆನಂದ ಮುಸ್ಸಂಜೆಯ ರಂಗಿಗೆ ಇನ್ನಷ್ಟು ಮೆರುಗು ನೀಡುತ್ತದೆ. ನಿಮ್ಮ ಸಾಯಂಕಾಲದ ಸೌಂದರ್ಯವನ್ನು ನೂರ್ಮಡಿಗೊಳಿಸುವ ಗಝಲ್‌ಗಳಿಗೆ ಒಮ್ಮೆ ಕಿವಿಯಾಗಿ ನೋಡಿ…