Archive for ಜುಲೈ 11, 2008

ವಿದ್ರೋಹ

ನಿನ್ನ ಪ್ರೀತಿಯ ಕೋಟೆಯೊಳಗೆ

ಸುರಕ್ಷಿತ ಅಂದುಕೊಂಡಿದ್ದೆ,

ಒಳಗೇ ಹೆಡೆಯೆತ್ತಿದ ನಿನ್ನ

ವಿದ್ರೋಹದ ಅರಿವಾಗುವ ತನಕ !

 

ಅಂತಃಸಾಕ್ಷಿ

ನಿನ್ನ ನಂಬಿಕೆದ್ರೋಹಕ್ಕೆ

ಶಿಕ್ಷೆ ಕೊಡಿಸೋಣ ಅಂದುಕೊಂಡರೆ

ಸಾಕ್ಷಿ ತರಲೆಲ್ಲಿಂದ ಹೇಳು?

 

ನಿನ್ನ ಅಂತಃಸಾಕ್ಷಿಗಿಂತ

ಅನ್ಯ ಸಾಕ್ಷಿಯು ಬೇಕೆ

ಏಕಾಂತದಲೊಮ್ಮೆ ಕಿವಿಗೊಟ್ಟು ಕೇಳು

 

 

ಹನಿದುಂಬಿ

ಎಲ್ಲೋ ಸುರಿದ ಮಳೆಗೆ ನದಿ

ಕೆಂಪಾಗಿ ಮೈತುಂಬಿಕೊಂಡಂತೆ

ಎಲ್ಲೋ ಇರುವ ನಿನ್ನ ನೆನಪಾಗಿ

ನನ್ನ ಕಣ್ತುಂಬಿ ಬಂತು

 

ಆದರೂ...

ಎತ್ತಲಾರೆ ನಿನಗಾಗಿ ಹತ್ತಾರು ಜನ್ಮ

ಬೆನ್ನಟ್ಟಲಾರೆ ಹಿಂಬಾಲಿಸಿ ಹಗಲಿರುಳು ನಿನ್ನ

ಆದರೇನು ಮಾಡಲಿ ಮರೆಯಲಾರೆ ಚಿನ್ನ

ನೆನಪಾಗುವೆ ಮತ್ತೊಮ್ಮೆ ಕೊನೆಯುಸಿರೆಳೆಯೋ ಮುನ್ನ

( ಕೊನೆಯ 2 ಕವನಗಳನ್ನು ನನ್ನ ಕವನ ಸಂಕಲನ ಅಂತರಂಗದ ಆಪ್ತಸ್ವರ ದಿಂದ ಹೆಕ್ಕಿದ್ದು..)

 

 

ಬದುಕಿನ ಸ್ವಾರಸ್ಯವಿರೋದೇ ಸಂಭವಿಸುವ ಪ್ರತಿಕ್ಷಣದವರೆಗೂ ಏನಾಗುವುದು ಎಂಬ ಸುಳಿವು ಬಿಟ್ಟುಕೊಡದ ಅದರ ರಹಸ್ಯಗಳಲ್ಲಿ ಅನಿಶ್ಚಿತತೆಯಲ್ಲಿ. ನಿನ್ನೆ-ಇಂದು-ನಾಳೆಗಳಾಗಿ ಉರುಳಿ ಹೋಗುವ ಕಾಲಚಕ್ರದ ಅದ್ಯಾವುದೋ ಅಗೋಚರ ಮೂಲೆಯಲ್ಲಡಗಿ ಕುಳಿತು, ದಿಗ್ಗನೆ ಎದುರಾಗಿ ನಮ್ಮನ್ನು ಬೆಚ್ಚಿಬೀಳಿಸಿ, ಅಚ್ಚರಿಗೆ ಕೆಡಹುವ ಘಟನಾವಳಿಗಳಿಲ್ಲದೇ ಹೋಗಿದ್ದರೆ ಈ ಬದುಕು ಎಷ್ಟು ನೀರಸ ಅನ್ನಿಸ್ತಾ ಇತ್ತು ಅಲ್ವೇ? ನಮ್ಮ ನೆರೆಹೊರೆ, ಊರು-ಕೇರಿ, ಶಾಲೆ-ಕಾಲೇಜು, ವೃತ್ತಿ-ಪ್ರವೃತ್ತಿಗಳ ಎಡೆಯಲ್ಲಿ ನಮ್ಮ ಬದುಕಿನ ಪರಿಧಿಯೊಳಗೆ ಬರುವ ನೂರಾರು-ಸಾವಿರಾರು ಮಂದಿಗಳಲ್ಲಿ, ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಪ್ತರಾಗುತ್ತಾರಲ್ಲ…ಯಾಕಿರಬಹುದು? ಇದು ಬಹುಶಃ ಮನಸ್ಸಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಂತೆಯೇ ಉತ್ತರವಿಲ್ಲದ್ದು ಇರಬೇಕು. ಇಲ್ಲದೇ ಹೋಗಿದ್ರೆ ಎಲ್ಲಿಯವನು ಮಂಡ್ಯದ ನಾಗಮಂಗಲ ಬಳಿಯ ಆಯತನಹಳ್ಳಿಯ ರಾಮಯ್ಯನವರ ಮಗ ಎ.ಆರ್.ಮಣಿಕಾಂತ ಮತ್ತು ಎಲ್ಲಿಯವನು ಕುಂದಾಪುರದ ಹಳ್ಳಿಹೊಳೆಯ ಈ ವಿಜಯರಾಜ್ ಕನ್ನಂತ?

 

ವಿಜಯ ಕರ್ನಾಟಕ ಅನ್ನೋ ಪತ್ರಿಕೆ ಲಕ್ಷಾಂತರ ಓದುಗರಿಗೆ ಖುಷಿ ಕೊಟ್ಟಿರಬಹುದು, ಸಾವಿರಾರು ಮಂದಿಗೆ ತುತ್ತಿನ ಚೀಲಕ್ಕೆ ಕಾಳಿತ್ತಿರಬಹುದು. ನಾನು ಮಾತ್ರ ಈ ಪತ್ರಿಕೆಯಿಂದ ಪಡೆದುಕೊಂಡಿದ್ದು ಇವೆಲ್ಲಕ್ಕೂ ಮೀರಿದ್ದು, ಅಮೂಲ್ಯವಾದದ್ದು. ಮಗು ಮನಸ್ಸಿನ ತುಂಬೆಲ್ಲಾ ಪ್ರೀತಿ,ಸ್ನೇಹವನ್ನು ತುಂಬಿಕೊಂಡಿರುವ ಮಣಿಕಾಂತನಂತಹ ಗೆಳೆಯನ ಸ್ನೇಹ ಕೊಟ್ಟ ಈ ಪತ್ರಿಕೆಯನ್ನು ಮರೆತೇನಂದ್ರ ಮರೆಯಲಿ ಹ್ಯಾಂಗ?

 

2002ರಲ್ಲಿ ಉದ್ಯೋಗದ ಬೆನ್ನಟ್ಟಿ ಬೆಂಗಳೂರಿಗೆ ಬಂದ ನನಗೆ ಊರಲ್ಲಿ ಉದಯವಾಣಿ ಓದಿ ಅಭ್ಯಾಸವಾಗಿದ್ದಕ್ಕೋ ಏನೋ ಮೊದಮೊದಲು ವಿಜಯ ಕರ್ನಾಟಕ ಪತ್ರಿಕೆ ಅಷ್ಟು ರುಚಿಸುತ್ತಿರಲಿಲ್ಲ. ಆದರೆ ಒಮ್ಮೆ ಹೀಗೆ ಪತ್ರಿಕೆ ನೋಡುತ್ತಿದ್ದಾಗ ಸಿಂಪ್ಲಿಸಿಟಿ ಪೇಜ್ ಅನ್ನೋ ಪುಟ ತನ್ನ ವಿಶಿಷ್ಟತೆ, ಅದರ ವೈವಿಧ್ಯದಿಂದಾಗಿ ಕಣ್ಮನ ಸೂರೆಗೊಂಡು ನನ್ನನ್ನು ವಿಜಯಕರ್ನಾಟಕದ ಖಾಯಂ ಓದುಗನನ್ನಾಗಿಸಿತು. ಒಮ್ಮೆ ಕುತೂಹಲಕ್ಕೆಂಬಂತೆ ಆ ಪುಟದ ಹಿಂದಿರುವ ಎ.ಆರ್.ಮಣಿಕಾಂತ ಅನ್ನೋ ಈ ವ್ಯಕ್ತಿಗೆ ಈ-ಮೇಲ್ ಕಳಿಸಿದೆ. ಆ ಕ್ಷಣದಲ್ಲಿ ಈ ಮಣಿಕಾಂತ ನನ್ನ ಆಪ್ತಮಿತ್ರನಾಗುತ್ತಾನೆಂಬ ಸಣ್ಣ ಕುರುಹೂ ಇರಲಿಲ್ಲ. ಮುಖತಃ ಭೇಟಿಯಾಗದಿದ್ದರೂ ಅಲ್ಲಿಂದ ಶುರುವಾದ ಪತ್ರ ಮೈತ್ರಿ ಸುಮಾರು ಒಂದು ವರ್ಷ ಕಾಲ ಎಡೆಬಿಡದೆ ಗೆಳೆತನದ ಸಸಿಗೆ ನೀರೆರೆದಿತ್ತು. ಆಮೆಲೊಂದು ದಿನ ಮಣಿಕಾಂತನ ಈ ಗುಲಾಬಿಯು ನಿನಗಾಗಿ ಪುಸ್ತಕದ ಬಿಡುಗಡೆಗೆ ಹೋದೆ. ಅಲ್ಲಿಂದ ಶುರುವಾದ ಮಣಿಯ ಸ್ನೇಹದ ಮಳೆ ಇಂದಿಗೂ ಸೋನೆಯಾಗಿ ಸುರಿಯುತ್ತಿದೆ.

 

ಮಣಿಯ ಬರಹದ ಶಕ್ತಿಯಿರುವುದು ಅವನ ಆಸಕ್ತಿಯಲ್ಲಿ. ಎಲ್ಲೆಲ್ಲಿಂದಲೋ ಆಸಕ್ತಿಕರ, ಸ್ವಾರಸ್ಯಕರ ಸುದ್ದಿ,ಚಿತ್ರಗಳನ್ನು ಕಲೆಹಾಕಿ ಸಮೃದ್ಧ ಪುಟವನ್ನು ಕಟ್ಟಿಕೋಡುವ ಈತನ ಕಾಯಕ ಶುರುವಾದಾಗಿನಿಂದ ಇಲ್ಲಿಯವರೆಗೂ ಒಂದಿನಿತೂ ರುಚಿ ಕೆಡಿಸಿಕೊಳ್ಳದೆ ನಿರಂತರ ಜಾರಿಯಲ್ಲಿದೆ. ಇವನ ಬರಹಗಳು ಹೆಚ್ಚಿನವು ಮನಸು, ಹೃದಯ , ಕರುಣೆ, ಅಂತಃಕರಣದ ಸುತ್ತಲೇ ಇರುತ್ತವೆ. ಅದನ್ನು ಮನ ಮಿಡಿಯುವಂತೆ ನಿರೂಪಿಸುವ ಕಲೆ ಇವನಿಗೆ ಒಲಿದಿದೆ. ಮಾನವೀಯ ನೆಲೆಗಟ್ಟಿನಲ್ಲಿ ಈತ ಬರೆಯುವ ನುಡಿಚಿತ್ರಗಳು ಎಂಥಾ ಕಲ್ಲುಬಂಡೆಯಲ್ಲೂ ದಯೆಯ ಸೆಲೆಯುಕ್ಕಿಸಬಲ್ಲವು. ಮಣಿಯ ಬರವಣಿಗೆಯ ಶ್ರೇಷ್ಠತೆ ಅರಿಯಬೇಕಾದರೆ ಅವನು ಬರೆಯುವ ಉಭಯ ಕುಶಲೋಪರಿ ಸಾಂಪ್ರತ ಓದಬೇಕು. ಯಾವುದೇ ವಸ್ತು-ವಿಷಯ ಇಲ್ಲಾ ವ್ಯಕ್ತಿಯ ಕುರಿತು ಎರಡೂ ಮಗ್ಗುಲುಗಳನ್ನು ಅವಲೋಕಿಸಿ ಬರೆಯುವ ಈ ಸಮತೂಕದ ಬರಹಗಳನ್ನು ಓದೋದೆ ಒಂದು ಖುಶಿ. ಈ ಬರಹಗಳ ಧಾರೆ ಹೀಗೆ ನಿರಂತರವಾಗಿರಲಿ.

 

ಒಮ್ಮೆ ಆಪ್ತನಾಗಿಬಿಟ್ಟರೆ ಎಂಥಾ ಪರಿಸ್ಥಿತಿಯಲ್ಲೂ ಕೈ ಬಿಡದ ಜೊತೆಗಾರನಾಗುವ ಮಣಿಯಂತಹ ಗೆಳೆಯನ ಬಗ್ಗೆ ಎಷ್ಟು ಬರೆದರೂ ಕಮ್ಮಿಯೇ. ಅವನ ಬರವಣಿಗೆ, ಪ್ರೀತಿ ಸದಾ ಜಾರಿಯಲ್ಲಿರಲಿ. ಹೆಚ್ಚು ಮತ್ತು ಹುಚ್ಚು ಪ್ರೀತಿಯಿಂದ.

            ವಿಜಯ್‌ರಾಜ್ ಕನ್ನಂತ್