Archive for ಜುಲೈ 13, 2008

ನೀವೆಲ್ಲ ಬುದ್ಧಿವಂತರು ಅಂತ ನಂಗೂ ಗೊತ್ತಿದೆ. ಆದ್ರೂ ಇಲ್ಲಿ ನಿಮಗೆ ಕೆಲವು ತರ್ಲೆ/ದಡ್ಡ ಪ್ರಶ್ನೆಗಲಿವೆ. ಈ ಪ್ರಶ್ನೆಗಳನ್ನು ನೀವು ಅಲ್ಲಿ-ಇಲ್ಲಿ ಕೇಳಿರಬಹುದು. ಕೇಳದೆ ಇರೋರಿಗಾಗಿ ಇಲ್ಲಿ ಕೆಲವು ಪ್ರಶ್ನೆಗಳು…ಉತ್ರ ಗೊತ್ತಿದ್ರೆ ಹೇಳಿ

 

೧.         ಜವಾಹರ್‌ಲಾಲ್ ನೆಹರು ಇಂದಿರಾಗಾಂಧಿಯ ತಂದೆಯ _________

 

೨.         ಬಸ್‌ಸ್ಟ್ಯಾಂಡ್ನಲ್ಲಿ ಬಸ್ಸು ಯಾಕೆ ನಿಲ್ಲುತ್ತೆ?

 

೩.         ಸೆನೆಂಟೀ ಸೆವೆನ್ ಕಾಫಿನ ಹದಿನಾಲ್ಕು ಜನ ಸಮನಾಗಿ ಹಂಚಿ ಕುಡಿದ್ರೆ ಒಬ್ಬ್ರೊಬ್ರು ಎಷ್ಟು ಲೋಟ ಕುಡಿದ ಹಾಗಾಯ್ತು?

 

೪.         ಕಲ್ಲು ನೀರಲ್ಲಿ ಯಾಕೆ ಮುಳುಗುತ್ತೆ?

 

೫.         ಬೆಂಗಳೂರಿಂದ ಮಂಗಳೂರಿಗೆ ಹೋಗುವ ಒಂದು ಎಲೆಕ್ಟ್ರಿಕ್ ರೈಲು ಸಧ್ಯ ಪೂರ್ವದಿಂದ ಪಸ್ಚಿಮಕ್ಕೆ ಹೊಗ್ತಾ ಇದೆ. ಆಗ ಜೋರಾಗಿ ಉತ್ತರದಿಕ್ಕಿಂದ ದಕ್ಷಿಣ ದಿಕ್ಕಿಗೆ ಗಾಳಿ ಬೀಸ್ತಾ ಇದೆ. ರೈಲಿನ ಹೊಗೆ ಯಾವ ದಿಕ್ಕಿಗೆ ಹೋಗುತ್ತೆ?

 

೬.         ನಾನ್ನೂರರಿಂದ ನೂರನ್ನು ತೆಗೆದ್ರೆ ಉಳಿಯೋದೆಷ್ಟು?

 

೭.         (1೦೦-೦) x ( 991) x (982) x (973) x…………….. x (397) x (298) x (199) x (೦-1೦೦) = ? ಬೇಗ ಹೇಳಿ.

 

೮.         ೪ಸೆಂ.ಮಿ ಉದ್ದ ಹಾಗೂ ೪ಸೆಂ.ಮಿ ಅಗಲ ಇರೋ ಒಂದು ಕಿಂದಿಯೊಳಗಿಂದ ೪.೫ ಸೆಂ.ಮಿ ವ್ಯಾಸವಿರೊ(ಇಂಗ್ಲಿಷ್ ಗೊತ್ತಿಲ್ಲದವರು ಇದನ್ನು ಕನ್ನಡದ ಡಯಾಮೀಟರ್ ಅಂತ ಓದಿಕೊಳ್ಳಿ!) ನಾಣ್ಯವನ್ನು ತೂರಿಸ್ಬೇಕು. ಇದು ಸಾಧ್ಯಾನೇ?

 

೯.         ಗಂಡ ಹೆಂಡತಿ ಇಬ್ರು, ೩ ಜನ ಮಕ್ಕಳು. ಒಟ್ಟು ೭ ರೊಟ್ಟಿ ಇದೆ. ರೊಟ್ಟಿಯನ್ನು ಹರಿಯದೆ ಸಮನಾಗಿ ಹಂಚಬೇಕು. ಪ್ರಯತ್ನ ಮಾಡಿ

 

ಉತ್ರ ನಿಮಗೆಲ್ಲರಿಗೂ ಗೊತ್ತಿರೋದ್ರಿಂದ ಉತ್ತರ ಕೊಡ್ತಾ ಇಲ್ಲ. ಬಹುತೇಕ ನೀವೆಲ್ಲರೂ ಕೇಳಿದ ಪ್ರಶ್ನೆಗಳೇ ಇವು. ಆದ್ರೂ ಉತ್ರ ಬೇಕು ಅಂದ್ರೆ ಮುಂದಿನ ವಾರ ಕೊಡ್ತೀನಿ ಬಿಡಿ.

 

ನಾಗರಾಜ್ ವಸ್ತಾರೆಯವರದ್ದೊಂದು ಕಥಾ ಸಂಕಲನದ ಹೆಸರು ಹಕೂನ ಮಟಾಟ. ಇದೇನಿದು ವಿಚಿತ್ರ ಹೆಸರು ಅಂತ ತಲೆಕೆಡಿಸಿಕೊಳ್ಳುವಷ್ಟರಲ್ಲಿ ಗೊತ್ತಯ್ತು ಅದೊಂದು ಆಫ್ರಿಕನ್ ಪದ ಅಂತ. ಅದರರ್ಥ ನೋ ಪ್ರಾಬ್ಲಂ ಅಂತ. ಭಾಷೆಗಳ ಬಗ್ಗೆ ನನಗಿರುವ ಹುಚ್ಚು ಆಕರ್ಷಣೆಯಿಂದಾಗಿ ಈ ಬಾರಿ ಟಾಂಜಾನಿಯಾದಿಂದ ರಜೆಯ ಮೇಲೆ ಊರಿಗೆ ಬಂದ ಅತ್ತೆ, ಮಾವನನ್ನು ಕೇಳಿ ಟಾಂಜಾನಿಯಾದ ಭಾಷೆ ಸ್ವಹಿಲಿಯ ( ಅಥವಾ ಅವರದೇ ಭಾಷೆಯಲ್ಲಿ ಹೇಳುವಂತೆ ಕಿಸ್ವಹಿಲಿ) ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡೆ. ಹಿಂದಿ/ಉರ್ದು/ಅರೇಬಿಯಬ್ ಭಾಷೆಗಳಿಂದ ಸ್ವಹಿಲಿಯು ಎರವಲು ಪಡೆದ ಅನೇಕ ಪದಗಳ ಬಗ್ಗೆ ಕೇಳಿದಾಗ ನನ್ನ ಕುತೂಹಲ ಇನ್ನೂ ಹೆಚ್ಚಾಯ್ತು. ನಿಮಗೂ ಈ ಭಾಷೆಯ ಬಗ್ಗೆ ಆಸಕ್ತಿ ಇದ್ರೆ ಅದರ ಒಂದಿಷ್ಟು ಪದಗಳ ಮೇಲೆ ಕಣ್ಣು ಹಾಯಿಸೋಣ ಬನ್ನಿ.

 

ಮೊದಲಿಗೆ ಹಿಂದಿ/ಉರ್ದು ಅಥವಾ ಅರಬ್ಬೀ ಭಾಷೆಯಿಂದ ಪ್ರಭಾವಿತವಾಗಿರುವ ಪದಗಳನ್ನು ನೋಡೋಣ

 

ಕಿಸ್ವಹಿಲಿ ಪದ                                ಪದದ ಅರ್ಥ                 ಮೂಲ ಹಿಂದೀ/ಅರಬ್ಬಿ ಪದ

ಗಾಡಿ                                          ವೆಹಿಕಲ್                           ಗಾಡಿ

ಕಿತಾಬು                                       ಬುಕ್                              ಕಿತಾಬ್

ದುಕಾ                                          ಶಾಪ್                             ದುಕಾನ್

ಕಲಾಮು                                      ಪೆನ್                               ಕಲಮ್

ದವಾ                                          ಮೆಡಿಸಿನ್                         ಧವಾ(ಧವಾಯಿ)

ದಫ್ತರ್                                         ಅಕೌಂಟ್ ಬುಕ್                   ದಫ್ತರ್

ಚೀಟಿ                                          ಟಿಕೇಟ್                            ಚೀಟಿ

ಆಂಬೆ                                          ಮ್ಯಾಂಗೋ                       ಆಮ್

ಅಚಾರಿ                                        ಪಿಕಲ್                             ಅಚಾರ್

ಚಾಪಾ                                         ಸ್ಟ್ಯಾಂಪ್                          ಛಾಪಾ

ನೇಲಿ                                          ಪೈಪ್                             ನಲ್

ರಂಗೀ                                         ಕಲರ್                             ರಂಗ್

ಲಾಕಿ                                           ಲ್ಯಾಕ್                             ಲಾಕ್

ಯಾಯಾ                                      ನರ್ಸ್                             ಆಯಾ

ಕಾನುನಿ                                       ರೂಲ್ಸ್                             ಕಾನೂನ್

ಸಾಮಾನಿ                                     ವುಡನ್ ಫರ್ನಿಚರ್                ಸಾಮಾನ್

ಪೊರ್‌ತಂಗ್                                   ಕೈಟ್                              ಪತಂಗ್

ಇಲಿಕಿ                                          ಕಾರ್ಡಮಮ್                      ಇಲೈಚಿ ( ಏಲಕ್ಕಿ ನೆನಪಿಸಿಕೊಳ್ಳಿ)

ಹಂಡೋ                                      ಕಾಪರ್ ವೆಸ್ಸೆಲ್                  ನಮ್ಮ ಹಂಡೆ ನೆನಪಾಯ್ತಾ !!

 

ಅಲ್ಲದೇ ಕೆಲವೊಂದು ಇಂಗ್ಲೀಷ್ ಪದಗಳಿಗೆ ಕೊನೆಗೊಂದು ‘i’ ಸೇರಿಸಿಬಿಟ್ರೆ ಕಿಸ್ವಹಿಲಿ ಪದ ತಯಾರು

 

ಉದಾ

ಕಿಸ್ವಹಿಲಿ                     ಮೂಲ

ಆಫಿಸಿ                                        ಆಫಿಸ್                                        

ಹಾಸ್ಪಿಟಲಿ                                    ಹಾಸ್ಪಿಟಲ್                                   

 

ಇದಲ್ಲದೆ ಕೆಲವು ಆಸಕ್ತಿ ಮೂಡಿಸಿದ , ಉಚ್ಚರಿಸಲು ಮಜವಾಗಿರುವ ಪದಗಳು ಕೆಲವು ಇಲ್ಲಿವೆ ನೋಡಿ

ಕಿಸ್ವಹಿಲಿ ಪದ                                ಪದದ ಅರ್ಥ

ಪಿಕಿಪಿಕಿ                                        ಬೈಕ್/ಸ್ಕೂಟರ್

ಡಲಾಡಲಾ                                    ಬಸ್

ಸುಲೆ                                          ಸ್ಕೂಲ್

ಬರಬರಾನಿ                                    ರೋಡ್

ಚಕುಲ                                         ಫುಡ್

ಮಿಮಿ                                          ಐ (ನಾನು)

ಸಿಸಿ                                            ವಿ (ನಾವು)

ವೆವೆ                                           ಯು

ಕ್ವಾಹೆರಿ                                        ಗುಡ್ ಬ್ಯೆ

ಕರಿಬು                                         ವೆಲ್ಕಮ್

ಅಸಾಂಟೆ                                      ಥ್ಯಾಂಕ್ಸ್

ತ(ದ)ಫಧಾಲಿ                                  ಪ್ಲೀಸ್

ಪೋಲೆ                                        ಸಾರಿ

ಚೇಕಾ                                         ಸ್ಮೈಲ್

ಚೇಜೋ                                       ಪ್ಲೇ (ಆಟಆಡು)

ಹರಾಕ                                         ಫಾಸ್ಟ್

 

ಒಟ್ಟಿನಲ್ಲಿ ನಂಗಂತೂ ಈ ಆಫ್ರಿಕನ್ ಭಾಷೆ ಸಕ್ಕತ್ ಇಂಟರೆಸ್ಟಿಂಗ್ ಅನ್ನಿಸ್ತು. ನಿಮಗೆ ಹೇಗನ್ನಿಸಿತು? ಕಿಸ್ವಲಿಯ ಬಗ್ಗೆ ಮುಂದೆಂದಾದರೂ ಇನ್ನಷ್ಟು ಬರೆದೇನು.

 

ಇದು ಗಾಂಪರ ಕಥೆ ಹೌದೋ ಅಲ್ವೋ ಗೊತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಕೇಳಿದ್ದು. ನೀವೂ ಈ ಕಥೆ ಕೇಳಿರಬಹುದು. ಅಳಿದುಳಿದ ನೆನಪಿನೊಂದಿಗೆ ಕಥೆ ಹೀಗಿದೆ…

 

ಒಮ್ಮೆ ಗಾಂಪರ ಗುರುವಿಗೆ ಕುದುರೆ ಮೇಲೆ ತಿರುಗಬೇಕು ಅಂತ ಆಸೆಯಾಗುತ್ತೆ. ಆದ್ರೇನು ಮಾಡೋದು? ಕುದುರೆಯ ಬೆಲೆ ಭಾರಿ ದುಬಾರಿ. ಜೊತೆಗೆ ಈಗಿನ ತರಕಾರಿ. ತೈಲದ ಬೆಲೆಯೆ ತರಹವೇ ದಿನದಿನಕ್ಕೂ ಬೆಲೆ ಹೆಚ್ಚಾಗ್ತಾ ಇದೆ. ಹಾಗಾಗಿ ತಮ್ಮ ಆಸೆಯನ್ನು ಗುರುಗಳು ಅದುಮಿಟ್ಟುಕೊಂಡಿದ್ರು. ಅವರ ಶಿಷ್ಯರಿಗೆ ಗುರುಗಳ ಈ ಆಸೆಯ ಬಗ್ಗೆ ಹ್ಯಾಗೋ ಗೊತ್ತಾಯ್ತು. ಸರಿ, ಹೇಗಾದ್ರೂ ಮಾಡಿ ಗುರುಗಳ ಆಸೆ ತೀರಿಸಲೇಬೇಕು ಅಂತ ನಿರ್ಧರಿಸಿದ್ರು. ಆದ್ರೆ ಅಷ್ಟು ಹಣ ಹೊಂದಿಸೊ ಶಕ್ತಿ ಇಲ್ಲದ ಕಾರಣ ಸುಮ್ಮನಿದ್ದರು.

 

ಹೀಗಿರುತ್ತಾ ಒಂದು ದಿನ ತಿರುಗಾಡೋಕೆ ಹೋಗಿದ್ದ ಶಿಷ್ಯರು ಕುದುರೆಗಳು ಮೇಯುತ್ತಾ ಇದ್ದ ಜಾಗವೊಂದಕ್ಕೆ ಬಂದ್ರು. ಅಲ್ಲೆಲ್ಲಾ ಕುಂಬಳಕಾಯಿ ಬಳ್ಳಿ ಹುಲುಸಾಗಿ ಬೆಳೆದು ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿದ್ವು. ಶಿಷ್ಯರೆಲ್ಲಾ ಸಂತೋಷದಿಂದ ಕುದುರೆಮೊಟ್ಟೆ… ಕುದುರೆಮೊಟ್ಟೆ ಅಂತ ಒಕ್ಕೊರಲಿನಿಂದ ಕೂಗಿ, ಕುಣಿದು ಕುಪ್ಪಳಿಸಿದ್ರು. ಕುದುರೆ ಬೆಲೆ ಜಾಸ್ತಿಯಾದ್ರೇನಂತೆ, ಕುದುರೆ ಮೊಟ್ಟೆ ಕೊಂಡೊಯ್ದು ಮರಿ ಮಾಡಿ ಅದರ ಮೇಲೆ ಗುರುಗಳ ಸವಾರಿ ಮಾಡಿಸೋದು ಅಂತ ಸರ್ವಾನುಮತದ ನಿರ್ಣಯವಾಯ್ತು. ಅಲ್ಲೇ ಕುದುರೆ ಮೇಯಿಸ್ತಾ ಇದ್ದ ಹುಡುಗನ ಕರೆದು ಕೇಳಿದ್ರು..ಎಷ್ಟಪ್ಪಾ ಕುದುರೆ ಮೊಟ್ಟೆ ಬೆಲೆ? ಆ ಹುಡುಗ ಬಲು ಚಾಲಾಕಿ. ಇದ್ಯಾವುದೋ ಕುರಿ ಸಿಕ್ತು ಅಂದ್ಕೊಂಡು ೨೦೦ ರೂಪಾಯಿ ಅಂತಂದ. ಸಾಕಷ್ಟು ಹೊತ್ತು ಚೌಕಾಸಿ ನಡೆಸಿ, ಕೊನೆಗೂ ೧೦೦ ರೂಪಾಯಿಗೆ ಕುದುರೆ ಮೊಟ್ಟೆಯ ವಿಕ್ರಯ ಮಾಡಿ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಶಿಷ್ಯರ ಗುಂಪಿನ ಸವಾರಿ ಗುರುಮಠದತ್ತ ಹೊರಟಿತು.

 

ಮಾರ್ಗ ಮಧ್ಯದಲ್ಲಿ ಒಂದು ಪುಟ್ಟ ಕಾಡನ್ನು ಹಾದು ಸಾಗುತ್ತಿರುವಾಗ ಅವರ ದುರಾದೃಷ್ಟಕ್ಕೆ ಕುದುರೆ ಮೊಟ್ಟೆ ಹಿಡಿದವನ ಕಾಲಿಗೆ ಬಳ್ಳಿಯೊಂದು ತೊಡರಿ ಅವನು ಬಿದ್ದೇಬಿಟ್ಟ. ಕುದುರೆಮೊಟ್ಟೆ ನಾಮಾಂಕಿತ ಕುಂಬಳಕಾಯಿ ಒಡೆದು ಇಬ್ಬಾಗವಾಯ್ತು. ಆ ಸದ್ದಿಗೆ ಅಲ್ಲೇ ಪೊಕ್ಕದ ಪೊದೆಯೊಂದರಲ್ಲಿದ್ದ ಮೊಲವೊಂದು ಬೆಚ್ಚಿಬಿದ್ದು ಸರಸರನೆ ಓಡಲು ಶುರುವಿಟ್ಟುಕೊಂಡಿತು. ಹೋ..ಕುದುರೆಮೊಟ್ಟೆ ಒಡೆದು ಕುದುರೆ ಮರಿ ಹೊರಬಂದು ಓಡಿ ಹೋಗ್ತಾ ಇದೆ ಅಂತ ಲೆಕ್ಕ ಹಾಕಿದ ಶಿಷ್ಯರು ಅದರ ಬೆನ್ನಟ್ಟಿ ಓಡಿದರು. ಆದ್ರೆ ಮೊಲದ ಚುರುಕಿನ ಎದುರು ಇವರದ್ದು ಯಾವ ಲೆಕ್ಕ ಬಿಡಿ. ಆದರೂ ಛಲ ಬಿಡದೆ ಶಿಷ್ಯರೆಲ್ಲಾ ಸೇರಿ ಅದನ್ನು ಹಿಂಬಾಲಿಸಿ ಓಡುತ್ತಲೇ ಇದ್ರು. ಅಷ್ಟರಲ್ಲಿ ದಾರಿಯಲ್ಲಿ ಬರುತ್ತಿದ್ದ ಗುರುಗಳನ್ನು ಕಂಡು, ನಡೆದ ವೃತ್ತಾಂತವನ್ನೆಲ್ಲಾ ಅವರಿಗೆ ಚುಟುಕಾಗಿ ವಿವರಿಸಿದರು. ಸರಿ, ಶುರುವಾಯ್ರು ಗುರು-ಶಿಷ್ಯರ ಹುಡುಕಾಟ. ಗುರುಗಳಿಗೆ ವಯಸ್ಸಾದ ಕಾರಣ ಸ್ವಲ್ಪ ದೂರ ಓಡುವಷ್ಟರಲ್ಲೇ ಸುಸ್ತಾಗಿ ದಣಿವಿಂದ ಬಿದ್ದು ಮೂರ್ಛೆ ಹೋಗಿಬಿಟ್ರು. ಶಿಷ್ಯರೆಲ್ಲಾ ಓಡಿದ ಕುದುರೆ ಮರಿಯನ್ನು ಶಪಿಸುತ್ತಾ ಒಲ್ಲದ ಮನಸ್ಸಿಂದ ಗುರುಗಳನ್ನು ಹೊತ್ತು ವೈದ್ಯರ ಬಳಿ ಕರೆತಂದ್ರು.

 

ಅವರನ್ನು ಪರೀಕ್ಷಿಸಿದ ವೈದ್ಯರು ಶಿಷ್ಯರಲ್ಲಿ ಹೇಳಿದ್ದಿಷ್ಟು..ಗುರುಗಳು ಪ್ರಾಣ ಅಪಾಯದಲ್ಲಿದೆ. ಔಷಧಿಗೆ ಬೇಕಾದ ನಾರು-ಬೇರು ಮುಗಿದು ಹೋಗಿದೆ. ನಾನು ಬೇಗ ಕಾಡಿಗೆ ಹೋಗಿ ಹುಡುಕಿ ತರುತ್ತೇನೆ. ಗುರುಗಳ ಗಾಳಿ ಒಂದು ಮೇಲೆ ಹೋಗದ ಹಾಗೆ ನೋಡ್ಕೊಳ್ಳಿ ( ಅಂದ್ರೆ ಪ್ರಾಣ ಹೋಗದ ಹಾಗೆ ನೋಡ್ಕೊಳ್ಳಿ). ಈಗ ಬಂದೆ... ಸರಿ ಶಿಷ್ಯರೆಲ್ಲಾ ತಮ್ಮ ತಮ್ಮಲ್ಲೇ ಸಮಾಲೋಚನೆ ಮಾಡಿ, ವೈದ್ಯರು ಹೇಳಿದ್ದನ್ನು ಶಿರಸಾವಹಿಸಲು ಕಂಕಣಬದ್ಧರಾದ್ರು. ಗುರುಗಳ ಮೂಗು ಒಬ್ಬ ಹಿಡಿದ. ಗುರುಗಳು ಮಿಸುಕಾಡಿ ಬಾಯಿ ಕಳೆದರು. ಇಬ್ಬರು ಸೇರಿ ಅವರ ಬಾಯಿಗೆ ಬಟ್ಟೆ ಕಟ್ಟಿದ್ರು. ಗುರುಗಳು ಒದ್ದಾಡೋದು ನೋಡಿ..ಗಾಳಿ ಹೊರ ಹೋಗುತ್ತಲ್ಲಾ ಅಂತ ಇನ್ನಷ್ಟು ಬಿಗಿಯಾಗಿ ಒತ್ತಿ ಹಿಡಿದರು. ಅಂತೂ ಕಷ್ಟ ಪಟ್ಟು ಗುರುಗಳ ಗಾಳಿ ಹೊರಗೆ ಹೋಗದಂತೆ ತಡೆದ ಫಲವಾಗಿ ವೈದ್ಯರು ಗಡಿಬಿಡಿಯಿಂದ ಬರುವಷ್ಟರಲ್ಲಿ ಗುರುಗಳ ಗಾಳಿ ಬಂದ್ ಆಗಿಯಾಗಿತ್ತು.

 

ಇತೀ ಕುದುರೆ ಮೊಟ್ಟೆ ಪುರಾಣಂ ಪರಿಸಮಾಪ್ತಿ

 

ಈ ವಿಜ್ಞಾನಿಗಳು ಎಲ್ಲಾ ಹಾಳು ಮಾಡಿಬಿಟ್ರು…

ಚಂದಮಾಮನ ತೋರಿಸಿ ಮೊಲದ ಕಥೆ ಹೇಳಿದ್ರೆ

ಚಂದ್ರಕಂದಕಗಳ ಬಗ್ಗೆ ಮಗು ಕೇಳುತ್ತೆ,

ಪುಷ್ಪಕವಿಮಾನದ ಸೊಗಸು ಹೇಳೋಕೆ ಹೋದ್ರೆ

ಆಗ ಪೆಟ್ರೋಲ್ ಎಲ್ಲಿತ್ತು ಅಂತ ಕೆಣಕುತ್ತೆ

ರಕ್ತಬೀಜಾಸುರರ ಕಥೆ ಹೇಳೋಣ ಅಂದ್ರೆ

ಆಗ ಕ್ಲೋನಿಂಗ್ ಎಲ್ಲಿತ್ತು ಅಂತ್ ಸವಾಲೆಸೆಯುತ್ತೆ

ಈ ವಿಜ್ಞಾನಿಗಳು ಎಲ್ಲಾ ಕಲ್ಪನೆಗಳ ಕಥೆ ಕೆಡಿಸಿಬಿಟ್ಟಿದ್ದಾರೆ..

ನೂರಿನ್ನೂರು ವರ್ಷಗಳ ಮುಂಚೆ ಹುಟ್ಬೇಕಿತ್ತು ಅಂತ ಒಮ್ಮೊಮ್ಮೆ ಅನ್ಸುತ್ತೆ