Archive for ಜುಲೈ 15, 2008

ಸುಮಾರು ಎರಡು-ಮೂರು ವರ್ಷಗಳ ಹಿಂದಿನ ಮಾತು. ಊರಿಗೆ (ಕುಂದಾಪುರಕ್ಕೆ) ಹೋಗಲು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಸ್ ಹತ್ತಿ ಕುಳಿತಿದ್ದೆ. ಪ್ರಯಾಣ ಮಾಡುವಾಗ ನಿದ್ರಾದೇವಿ ನನ್ನೊಂದಿಗೆ ಚಾಳಿ ಟೂ ಮಾಡೋ ಕಾರಣದಿಂದ ಕಣ್ಣರಳಿಸಿಕೊಂಡು ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುವ ಸುತ್ತಲಿನ ಸೊಬಗನ್ನು ಆಸ್ವಾದಿಸುತ್ತಿದ್ದೆ. ಯಾವತ್ತಿನಂತೆ ಚನ್ನರಾಯಪಟ್ಟಣ ದಾಟಿದ ಮೇಲೆ ಸಿಗುವ ಕಾಮತ್ ಹೋಟೆಲ್‌ನಲ್ಲಿ ಬಸ್ ನಿಲ್ಲಲಿಲ್ಲ. ಹಾಸನ, ಸಕಲೇಶಪುರಗಳನ್ನೂ ಹಿಂದೆ ಹಾಕಿ ಬಸ್ಸೆಂಬೋ ಬಸ್ಸು ಶರವೇಗದ ಸರದಾರನಂತೆ ಓಡುತ್ತಿತ್ತು. ಸಕಲೇಶಪುರ ದಾಟಿದ ನಂತರ ಶುರುವಾಗೋದೇ ಶಿರಾಡಿ ಘಾಟ್‌ನ ರುದ್ರ-ರಮ್ಯ ದಾರಿ ! ( ರುದ್ರ ರಸ್ತೆಯ ಅವಸ್ಥೆಯ ಕಾರಣಕ್ಕೆ…. ರಮ್ಯ – ಸುತ್ತಲಿನ ಪ್ರಕೃತಿಯ ದೆಸೆಯಿಂದ )

ಕುಳಿರ್ಗಾಳಿಯ ತಂಪಿಗೆ ಮೆಲ್ಲನೆ ನಡುಗುತ್ತ, ಗುಲಾಮ್ ಆಲಿಯ ಅರ್ದ್ರ ದನಿಗೆ ತಲೆದೂಗುತ್ತಿದ್ದೆ. ಇನ್ನೇನು ಘಾಟಿ ಮುಗಿಯುತ್ತಾ ಬಂದಿರಬೇಕು, ಅಷ್ಟರಲ್ಲಿ ಗುಂಡ್ಯ ಬಳಿಯ ಅದ್ಯಾವುದೋ ತಿರುವಿನಲ್ಲಿ ಬಸ್ಸು ನಿಂತು ಬಿಟ್ಟಿತು.

 

ಗಝಲ್ ಅಸ್ವಾದನೆಗೆ ತಡೆಯುಂಟಾದರೂ ಕೂಡಾ, ಕೂತು ಕೂತು ಮೈ ಜಡಗಟ್ಟಿದಂತಾದ ಕಾರಣ ಎದ್ದು ಕೆಳಗಿಳಿದೆ. ಇಳಿದ ಮರುಕ್ಷಣವೇ ಮೂಳೆಯ ಆಳದೊಳಕ್ಕೂ ಚಳಿ ಇಳಿದಂತೆ ಭಾಸವಾಯ್ತು. ಈಗೊಂದು ಬಿಸಿ ಬಿಸಿ ಚಹಾ ಕುಡಿಯದೆ ಇದ್ರೆ ಆಗೋದೆ ಇಲ್ಲ ಅಂದುಕೊಂಡು ಡ್ರೈವರಣ್ಣನ ಹಿಂಬಾಲಿಸಿದೆ. ಸುತ್ತಲಿನ ಕತ್ತಲಿನ ಸಾಮ್ರಾಜ್ಯಕ್ಕೆ ಸವಾಲೆಸೆಯಲೋ ಎಂಬಂತೆ ಮಿಣಿ ಮಿಣಿ ಅನ್ನುವ ದೀಪದ ಬೆಳಕು, ಯಾವ ಬೋರ್ಡೂ ಇಲ್ಲದ ಹೋಟೆಲ್‌ನ ಮಾಲಿಕ, ಕ್ಯಾಷಿಯರ್, ಸಪ್ಲೈಯರ್ ಎಲ್ಲವೂ ಆಗಿರುವ ವ್ಯಕ್ತಿ ನಗು ನಗುತ್ತಾ ಬಂದು ಎಂತ ನಿಮ್ಗೆ ಚಾವಾ, ಕಾಪಿಯಾ? ಅನ್ನುತ್ತಾ ಸ್ವಾಗತಿಸಿದ. ಡ್ರೈವರನ್ನು ಹಿಂಬಾಲಿಸಿ ನನ್ನಂತೆ ಸುಮಾರು ಜನ ಬಂದಿದ್ದರಿಂದ ಜಾಗರಣೆ ಮಾಡಿ ಹೋಟೆಲ್ ತೆರೆದಿಟ್ಟಿದ್ದು ಸಾರ್ಥಕವಾಯ್ತು ಅನ್ನೋ ಭಾವ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಬಿಸಿಬಿಸಿ ಚಹಾ ತುಂಬಿಸಿ ಗ್ಲಾಸಿಗೆ ಹಾಕಿ ಎಲ್ಲರಿಗೂ ಕೊಟ್ಟ. ಒಂದು ಗೂಟುಕು…ಹೀರಿದೆ….ಆಹಾ…ಪರಮಾನಂದ.. ಅಷ್ಟು ರುಚಿಯಾಗಿತ್ತೋ ಅದು ಅಥವಾ ಚಳಿಯ ಕಾರಣಕ್ಕೆ ಬಿಸಿಯಾದ ಏನು ಕುಡಿದರೂ ಅಷ್ಟೇ ರುಚಿಯಾಗಿರುತ್ತೋ ಗೊತ್ತಿಲ್ಲ. ಆ ಚಹಾದ ಮಾಧುರ್ಯವನ್ನು ಅಸ್ವಾದಿಸಿ ಅಲ್ಲೇ ಪಕ್ಕದಲ್ಲಿ ಪೇರಿಸಿಟ್ಟಿದ್ದ ಅಪ್ಪದಂತಹ ತಿಂಡಿಯನ್ನು ಕುರುಕುತ್ತಾ ಸುಡುಸುಡು ಚಹಾ ಗಂಟಲಲ್ಲಿಳಿಯುತ್ತಿದ್ದರೆ…ಜಿಹ್ವೆಗಷ್ಟೇ ಏನು…ಇಡೀ ದೇಹಕ್ಕೆ ಅಹ್ಲಾದದಾನಂದ. ಆ ಕ್ಷಣಕ್ಕೆ ಆ ಚಹಾ ನೀಡಿದ ಖುಷಿ, ಮನಸ್ಸಲ್ಲಿ ಮೂಡಿಸಿದ ಅನುಭೂತಿ, ಮುಂದೆ ಮೆಲುಕುಹಾಕಲೋಸುಗವೋ ಎಂಬಂತೆ ಸ್ಮೃತಿಯಲ್ಲಿ ಸ್ಥಿರವಾಯಿತು.

 

ಸುತ್ತಲಿನ ಕತ್ತಲೆಯ ಹಿನ್ನೆಲೆಯಲ್ಲಿ, ರಾತ್ರಿಯ ಚಳಿಯ ಸನ್ನಿಧಿಯಲ್ಲಿ ಹೀಗೆ ಚಹಾದ ಗುಂಗಿನಲ್ಲಿ ಮೈಮರೆತು ಅಸ್ವಾದಿಸುತ್ತಿದ್ದವನನ್ನು ಎಚ್ಚರಿಸಿದ್ದು ಬಸ್‌ನ ಹಾರ್ನ್ ಕರೆ. ಅದಾದ ಮೇಲೆ ಹಲವು ಬಾರಿ ಊರಿಗೆ ಹೋದೆನಾದರೂ ಆ ಅನಾಮಿಕ ಹೋಟೆಲಿನ ಚಹಾದ ಸುಖ ನನ್ನ ಪಾಲಿಗೆ ಬರೆದಿರಲಿಲ್ಲ. ಯಥಾಂಪ್ರತಿಯಂತೆ ಕಾಮತ್ ಹೋಟೆಲ್ ಬಳಿಯೇ ಎಲ್ಲಾ ಬಸ್ಸುಗಳು ನಿಲ್ಲುತ್ತಿದ್ದವು. ಆ ಆವರಣ ಶುಚಿಯಾಗಿದ್ದರೂ ಏನೋ ಕೃತಕ ವಾತಾವರಣ, ಬರೀ ವ್ಯಾಪಾರದ ವಾತಾವರಣದಲ್ಲಿ ಆ ಅನಾಮಿಕನ ಆತ್ಮೀಯತೆಯ ಬಿಸಿ ಚಹಾದ ರುಚಿ ಹುಡುಕಿದರೆ ಸಿಕ್ಕೀತೆ? ಇವತ್ತಾದರೂ ಈ ಬಸ್ಸು ಆ ಅನಾಮಿಕ ತಿರುವಿನ ಪುಟ್ಟ ಹೋಟೆಲಿನ ಮುಂದೆ ನಿಲ್ಲಲಪ್ಪಾ ಅನ್ನೋ ನನ್ನ ಪ್ರಾರ್ಥನೆ ಇಲ್ಲಿಯವರೆಗೆ ಫಲಿಸಿಲ್ಲ. ನೋಡೋಣ ಮುಂದೆಂದಾದರೂ ನನ್ನ ಕೋರಿಕೆ ಈಡೇರಿತು ಅನ್ನುವ ಆಶಾವಾದ ನನ್ನದು.

 

 ಮನದಲಿ ಜಿನುಗಿದ ಹನಿ ಹನಿಗಳು ಸೇರಿ ಭಾವ ಸಿಂಧುವಾಗಿದೆ…

ಹೆಜ್ಜೆ ಗುರುತು

ಮಳೆಗಾಲದೊಂದು ತಣ್ಣನೆಯ ರಾತ್ರಿಯಲಿ,

ಕಪೋಲ ಚುಂಬಿಸುವ ನಿನ್ನ ನೆನಪಿನಶ್ರು ಧಾರೆಯಲಿ,

ಒದ್ದೆಯಾದ ಮನದ ಅಂಗಳದ ತುಂಬೆಲ್ಲಾ,

ನೀ ನಲಿದು ಹೋದ ಹೆಜ್ಜೆಯದೇ ಗುರುತು

 

ಜಾಣ ಕಿವುಡು

ಹೃದಯದ ಪಿಸುಮಾತುಗಳಿಗೂ ಸ್ಪಂದಿಸಿ

ಕಿವಿಯಾದವಳೇ ಕೇಳು

ಈಗ ಕೂಗಿ ಕರೆದರೂ ಕೇಳೋಲ್ಲಾ ಅಂದ್ರೆ

ನಂಬೋದು ಹ್ಯಾಗೆ ಹೇಳು?

 

ಗಾಯ

ಕಣ್ಣಂಚಿನ ತೇವ ಆರಿ ಹೋದೀತು

ಇಂದಲ್ಲಾ ನಾಳೆ…

ಎದೆಯೊಳಗಿನ ಗಾಯಕ್ಕೆ

ಮದ್ದು ಗೊತ್ತಿದ್ದರೆ ಹೇಳೆ…

 

ಸುಳ್ಳೇ…?

ಈಗ ಕತ್ತಲಾದ ಮಾತ್ರಕ್ಕೆ

ಸೂರ್ಯ ಹುಟ್ಟಿದ್ದು ಸುಳ್ಳಾಗೋದೇ

ಮನಸು ಮುರಿದ ಮಾತ್ರಕ್ಕೆ

ಪ್ರೇಮಿಸಿದ ಹೃದಯ ಕಲ್ಲಾಗೋದೇ?