Archive for ಜುಲೈ 16, 2008

 

ಈ ಮುಂಗಾರು ಮಳೆಯ ದುನಿಯಾವೇ ವಿಚಿತ್ರ ಕಣ್ರಿ….ರಾಜ್ಯಾದ್ಯಂತ ಮತ್ತೊಮ್ಮೆ ಮುಂಗಾರು ಮಳೆ ಸುದ್ದಿ ಮಾಡಿದೆ. ಆದರೆ ಇದು ಯೋಗರಾಜ ಭಟ್ಟರ ಕೈ ಹಿಡಿದು ಉದ್ಧರಿಸಿದ ಮಳೆಯಲ್ಲ. ರಾಜ್ಯದ ರೈತರಿಗೆ ಕೈಕೊಟ್ಟ ಮಳೆ. ಶುರುವಿನಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಅಲ್ಪಸ್ವಲ್ಪ ಮಳೆ ಸುರಿದಿದ್ದು ಬಿಟ್ರೆ ಮಿಕ್ಕಂತೆ ರಾಜ್ಯದ ಉಳಿದ ಪ್ರದೇಶಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಮತ್ತೊಮ್ಮೆ ಮೋಡ ಬಿತ್ತನೆಯಂತಹ ವೈಜ್ಞಾನಿಕವಾಗಿ ಮಳೆ ಬರಿಸುವ ಪ್ರಯೋಗಗಳ ಬಗ್ಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ, ಕಪ್ಪೆ ಮದುವೆಯಂತಹ ಸುದ್ದಿಗಳೂ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಳೆಯ ಸುತ್ತಮುತ್ತ ಹಬ್ಬಿರುವ ಕೆಲವು ವಿಚಿತ್ರ ನಂಬಿಕೆಗಳತ್ತ ಕಣ್ಣು ಹಾಯಿಸೋಣ

 

  • ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗಳಕ್ಕೆ ಸೆಗಣಿ ಸಾರಿಸಿ, ಪೊರಕೆಯನ್ನು ತೊಳೆದು ಮನೆಯ ಮಾಡಿನ ಕೆಳಗಿಟ್ಟರೆ ಮಳೆ ಬರುತ್ತದೆ ಅನ್ನುವುದೊಂದು ಪ್ರತೀತಿ.
  • ಮಳೆಗಾಗಿ ದೇವರಿಗೆ ಎಳನೀರು(ಸಿಯಾಳ) ಅಭಿಷೇಕ ಮಾಡುವ ಕ್ರಮವೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಚಾಲ್ತಿಯಲ್ಲಿದೆ.
  • ಕೊಲಬಾ (ರಾಯಗಡ) ಜಿಲ್ಲೆಯ ಒಂದು ಊರಿನಲ್ಲಿ ಇರುವ ಕಲ್ಲೊಂದನ್ನು ಅಲುಗಾಡಿಸಿದರೆ ಮಳೆ ಬರುತ್ತದೆನ್ನುವುದೊಂದು ನಂಬಿಕೆ
  • ಅದೇ ಜಿಲ್ಲೆಯ ಚೆವುಲ್‌ನಲ್ಲಿರುವ ರಾಮೇಶ್ವರ ದೇವಾಲಯದಲ್ಲಿ ಬೆಂಕಿ, ಗಾಳಿ ಮತ್ತು ಮಳೆಗಾಗಿ ಇಟ್ಟಿರುವ ಮೂರು ಕೊಡಗಳಿದ್ದು, ಕ್ಷಾಮ ಬಂದಾಗ ಮಳೆಗಾಗಿ ಇರಿಸಲ್ಪಟ್ಟ ಕೊಡದ ಬಾಯಿ ತೆರೆದು ಮಳೆ ಬರಿಸಲಾಗುತ್ತದಂತೆ.
  • ಭಿಲ್ಲ ಜಾತಿಯ ಹೆಂಗಸರು ನೆರೆಗ್ರಾಮಕ್ಕೆ ಹೋಗಿ ಒಂದು ಎಮ್ಮೆಯನ್ನು ಎಳೆದುತಂದು ಕಾಳಿಗೆ ಬಲಿ ಕೊಡುತ್ತಾರಂತೆ. ಹೀಗೆ ಮಾಡಿದರೆ ಕಾಳಿ ಸಂಪ್ರೀತಳಾಗಿ ಮಳೆ ಸುರಿಸುವಳೆಂದು ಅವರ ನಂಬಿಕೆ
  • ಇದಕ್ಕಿಂತ ಸ್ವಾರಸ್ಯಕರವಾದ ನಂಬಿಕೆ ಪಂಜಾಬ್‌ನ ಕೆಲವು ಗ್ರಾಮಗಳಲ್ಲಿದೆ. ಕೋಪಿಷ್ಟ ಹೆಂಗಸರನ್ನು ಕೆರಳಿಸಿ, ನಿಂದಿಸಿ ಅವರಿಗೆ ಸಿಟ್ಟು ಬರಿಸಿದರೆ ಮಳೆ ಬರುತ್ತದೆನ್ನುತ್ತಾರವರು
  • ಶಿವಮೊಗ್ಗದ ತೀರ್ಥರಾಮೇಶ್ವರ , ಮರವಂತೆಯ ಮಾರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರಿಂದ ಮಳೆ ಬರುತ್ತದೆಂದು ನಂಬಲಾಗಿದೆ
  • ಟಿಬೆಟ್‌ನ ಲಾಮಾಗಳು ಕೆಂಪು ಚೀಲವನ್ನು ಬೆನ್ನಿಗೆ ಕಟ್ಟಿಕೊಂಡು, ಜಾಗಟೆ ಬಡಿಯುತ್ತಾ, ಮಂತ್ರ ಉಚ್ಚರಿಸುತ್ತಾ ಮೆರವಣಿಗೆ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳುವರಂತೆ
  • ಬ್ರಾಹುಯಿ ಜನಾಂಗದ (ಪಾಕಿಸ್ತಾನ, ಅಫ್ಘಾನಿಸ್ಥಾನ) ಸ್ತ್ರೀಯರು, ಗುಪ್ತವಾದ ಸ್ಥಳದಲ್ಲಿ ಯಾರೂ ಕಾಣದಂತೆ ವೀರಗಚ್ಛೆ ಹಾಕಿ ತಲೆ ಕೆದರಿಕೊಂಡು ಮೈಯಲ್ಲಿ ರಕ್ತ ಬರುವಂತೆ ಮುಳ್ಳುಗೋಲಲ್ಲಿ ಹೊಡೆದುಕೊಂಡು ಮಳೆಗಾಗಿ ಪ್ರಾರ್ಥಿಸುತ್ತಾರೆ.
  • ತೊನ್ನಾಗಿರುವವರು ಯಾರಾದರೂ ಸತ್ತರೆ ಅವರ ಶವವನ್ನು ಹೂಳಿದರೆ ಮಳೆ ಬರೋಲ್ಲ ಅನ್ನೋ ನಂಬಿಕೆ ಕೆಲವು ಕಡೆ ಇದೆ. ಆ ಶವವನ್ನು ತೆಗೆದು ಸುಟ್ಟರೆ ಮಳೆ ಬರುತ್ತದೆನ್ನುವುದು ಅವರ ನಂಬಿಕೆ

 

ಈ ನಂಬಿಕೆಗಳೇನೇ ಇದ್ದರೂ ಮಳೆರಾಯನ ಮುನಿಸಿಗೆ ಕಾರಣ ಬೇರೆಯೇ ಇದೆ ಬಿಡಿ. ಬೇಕಾಬಿಟ್ಟಿ ಪ್ರಕೃತಿಯ ಮೇಲೆ ನಡೆಸಿದ ವಿಕೃತಿಗಳಿಗೆ ಶಿಕ್ಷೆ ಸಿಗಲೇಬೇಕಲ್ಲವೇ. ನೈಸರ್ಗಿಕ ಸಮತೋಲನ ಹದಗೆಡಿಸುವ ಚಟುವಟಿಕೆ ಮಾಡಿ, ಅದನ್ನು ಸರಿಪಡಿಸಲು ಇನ್ನೇನೋ ಮಾಡಿ..ಒಟ್ಟಿನಲ್ಲಿ ಸರಿಪಡಿಸಲಾಗದ ಸ್ಥಿತಿಗೆ ಬಂದು ಬಿಟ್ಟಿದೆ ಈ ವ್ಯವಸ್ಥೆ. ಮುನಿಸು ತೊರೆದು ಪ್ರಕೃತಿ ದೇವಿ ಒಲಿಯಲಿ, ಮಳೆ ಹೊಯ್ದು, ಹೊಳೆ ಹರಿದು ಎಲ್ಲ ಹಸನಾಗಲಿ ಅನ್ನೋದು ಹಾರೈಕೆ.

 

( ನಂಬಿಕೆಗಳ ಕುರಿತು ಮಾಹಿತಿ ವಿವಿಧ ಮೂಲಗಳಿಂದ )

 

ಇದೂ ಕೂಡಾ ಇನ್ನೊಂದು ಭಾವಾನುವಾದ. ಈ ಪದ್ಯ ಕೂಡಾ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಅಂತೆಯೇ ಅಚ್ಚುಮೆಚ್ಚಿನದ್ದು. ಇದು ಭಾವಾನುವಾದವೇ ಹೊರತು ಭಾಷಾನುವಾದವಲ್ಲ.

ಮೂಲ: ಸುಭದ್ರಾ ಕುಮಾರಿ ಚೌಹಾಣ್

ಕವಿತೆ : ಮೇರಾ ನಯಾ ಬಚ್‌ಪನ್

 

ಮತ್ತೆ ಮತ್ತೆ ನೆನಪಾಗುತಿದೆ ಆ ಬಾಲ್ಯಕಾಲ,

ಮತ್ತೆಂದಾದರೂ ಬಂದೀತೆ ಆ ರಮ್ಯ ಚೈತ್ರಕಾಲ?

 

ಬಡವ ಬಲ್ಲಿದ ಎಂಬ ಭೇದ ಗೊತ್ತಿರದ,

ಜಾತಿ-ಧರ್ಮಗಳ ಸೋಂಕೇ ಇರದ

 

ನನ್ನ ಪುಟ್ಟ ಗುಡಿಸಲಿಗೆ ನಾನೇ ರಾಣಿ,

ಹಂಸತೂಲಿಕಾ ಕಲ್ಪವಾಗಿ ಹರಕು ಗೋಣಿ

 

ಚಂದಮಾಮನ ನೋಡುತಾ ಬೆಳದಿಂಗಳ ಕೈತುತ್ತು,

ಅತ್ತು ಕರೆದಾಗಲೆಲ್ಲ ರಮಿಸಿ ಅಮ್ಮನ ಸಿಹಿಮುತ್ತು

 

ಅಜ್ಜಿಯ ಮಡಿಲಲಿ ಕುಳಿತು ಕೇಳಿದ ಕತೆ,

ತಟ್ಟುತಿರಲಿಲ್ಲ ಯಾವ ದುಃಖ, ಕಷ್ಟ, ವ್ಯಥೆ

 

ಬರಲಾರೆಯಾ ಮತ್ತೊಮ್ಮೆ ಮರಳಿ ಓ ಬಾಲ್ಯಕಾಲ,

ಬೀಸಲೋಸುಗ ಇನ್ನೊಮ್ಮೆ ನಿನ್ನ ದಿವ್ಯ ಮೋಹಜಾಲ

 

ಹೀಗೆ ಬಾಲ್ಯವ ಮರಳಿ ಕರೆವ ಹೊತ್ತಿನಲಿ,

ಒಳ ಬಂದಳು ನನ್ನ ಮುದ್ದು ಮಗಳು ಗತ್ತಿನಲಿ

 

ತಪ್ಪು ಹೆಜ್ಜೆಯ ಮೇಲೆ ಹೆಜ್ಜೆ ಹಾಕುತಾ,

ತೊದಲ್ನುಡಿಯಿಂದಲೆ ನನ್ನ ಕೂಗಿ ಕರೆಯುತಾ

 

ಅವಳಂತೆಯೇ ನಾನು ತೊದಲ್ನುಡಿಯುತ್ತಾ,

ಬಿಗಿದಪ್ಪಿದೆ ಕೈ ಹಾಕಿ ಕೊರಳ ಸುತ್ತಾ

 

ವರ್ಷಗಳ ಹುಡುಕಾಟಕೆ ಕೊನೆಗೂ ತೆರೆ ಬಿತ್ತು

ಕಳೆದ ಬಾಲ್ಯವು ಮತ್ತೆ ಮರುಕಳಿಸಿತ್ತು

ಕಿಚ್ಚ ಸುದೀಪ್‌ರ ಬಾಲಿವುಡ್ ಯಾತ್ರೆಯ ಚೊಚ್ಚಲ ಚಿತ್ರ ಫೂಂಕ್ ಆಗಸ್ಟ್ 22ರಂದು ತೆರೆಕಾಣಲು ಸಿದ್ಧವಾಗುತ್ತಿದೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರ ಹಾರರ್ ಹಿನ್ನೆಲೆಯ ಕಥಾವಸ್ತುವನ್ನು ಒಳಗೊಂಡಿದ್ದು, ಬೆಚ್ಚಿಬೀಳಲು ಸಿದ್ಧರಾಗಿ ಅಂತ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ವರ್ಮಾ ಹೇಳಿಕೊಂಡಿದ್ದಾರೆ. ಭೂತ್ ಚಿತ್ರದಲ್ಲಿದ್ದಂತೆ ಸಣ್ಣಪುಟ್ಟ ಘಟನೆಗಳಿಂಡ ಭೀತಿ ಹುಟ್ಟಿಸುವ ತಂತ್ರ ಇದರಲ್ಲಿಲ್ಲ ಅಂದ ಅವರು ಇದು ನಿಜಕ್ಕೂ ನಿಮ್ಮನ್ನು ಭೀತಿಯ ಕೊಳದಲ್ಲಿ ಅದ್ದಿ ತೆಗೆಯಲಿದೆ ಅಂದಿದ್ದಾರೆ.

 

ಪಕ್ಕಾ ನಾಸ್ತಿಕ ಕಥಾನಾಯಕ ರಾಜೀವ್‌ಗೆ ದೇವರು, ದೆವ್ವ, ಭೂತಗಳಲ್ಲಿ ಎಳ್ಳಷ್ಟೂ ನಂಬಿಕೆ ಇರೊಲ್ಲ. ಆದರೆ ಯಾವ ವಿವರಣೆಗೂ ನಿಲುಕದ ಶಕ್ತಿಗಳ ಆಟ್ಟಹಾಸಕ್ಕೆ ಬಲಿಯಾಗಿ ತನ್ನ ಪ್ರೀತಿಪಾತ್ರಳು ನಲುಗುವುದನ್ನು ಕಂಡ ಅವನ ನಂಬಿಕೆಯ ಭದ್ರ ಬುನಾದಿಯೆ ಅಲುಗಾಡಲಾರಂಭಿಸುತ್ತದೆ. ದುಷ್ಟ ಶಕ್ತಿಗಳನ್ನು ಎದಿರಿಸಲು ದೈವಶಕ್ತಿಯ ಮೊರೆಹೋಗುವ ಮಾಮೂಲಿ ಕಥೆಯೇನೋ ಇದು ಅನ್ನಿಸುತ್ತದಾದರೂ ವರ್ಮಾ ಅದನ್ನು ಹೇಗೆ ವಿಭಿನ್ನವಾಗಿ ತೆರೆಯ ಮೇಲೆ ತೋರಿಸಬಹುದು ಅನ್ನೋದು ಸಧ್ಯದ ಕುತೂಹಲ. ಜೊತೆಗೆ ಕಿಚ್ಚ ಸುದೀಪ್ ತಮ್ಮ ಬಾಲಿವುಡ್ ಎಂಟ್ರಿಯಲ್ಲಿ ಹೇಗೆ ಕಾಣಬಹುದು ಅನ್ನುವ ನಿರೀಕ್ಷೆ ಕೂಡಾ ಅವರ ಅಭಿಮಾನಿಗಳದ್ದು. ಈ ಕುತೂಹಲಕ್ಕೆಲ್ಲ ಇನ್ನೊಂದು ತಿಂಗಳಲ್ಲಿ ಉತ್ತರ ತೆರೆಯ ಮೇಲೆ ಸಿಗುತ್ತೆ. ಹಾಗೆಯೇ ಚಿತ್ರ ನಿಮ್ಮನ್ನು ಬೆಚ್ಚಿ ಬೀಳಿಸುತ್ತಾ ಇಲ್ಲಾ ಬೇಸ್ತು ಬೀಳಿಸುತ್ತಾ ಅನ್ನುವ ಪ್ರಶ್ನೆಗೂ ಕೂಡಾ

ಇದು ಲಾರ್ಡ್ ಟೆನಿಸನ್‌ನ ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್‌ನ ಭಾವಾನುವಾದ. ಈ ಪದ್ಯ ನಮಗೆ 10ನೇ ಕ್ಲಾಸಿನ ಇಂಗ್ಲೀಷ್ ಪಠ್ಯದ ಭಾಗವಾಗಿತ್ತು. ಈ ಪದ್ಯ ಅದರ ಭಾವ ತೀವ್ರತೆಯಿಂದಾಗಿ ನನ್ನನ್ನು ಗಾಢವಾಗಿ ತಟ್ಟಿತ್ತು. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ನನ್ನದು. ಅದರ ಮೂಲದ ತೀವ್ರತೆಯ ನೂರರಲ್ಲೊಂದು ಭಾಗ ಇಲ್ಲಿ ಬಂದಿದ್ದರೂ ನನ್ನ ಪ್ರಯತ್ನ ಸಾರ್ಥಕ

 

ಹೆಮ್ಮೆಯ ವೀರಯೋಧ ಆಕೆಯ ಪತಿ,

ಯುದ್ಧದಲಿ ಮಡಿದ ಅವನೀಗ ಬರೀ ಸ್ಮೃತಿ,

ಯೋಧನ ಶವವೀಗ ಮನೆಯ ಮುಂದಿದೆ,

ಅವಳ ಬಾಳ ಜ್ಯೋತಿಯೀಗ ನಂದಿದೆ.

 

ಅಳುವುದನೂ ಮರೆತಂತೆ ಕುಸಿದು ಕುಳಿತಿಹಳು,

ನಿರ್ಜೀವ ಭಾವ ಹೊರಸೂಸುವ ಕಂಗಳು,

ಶೋಕಭಾರಕೆ ಮೂಕಳಾಗಿಹ ಇವಳು,

ಅಳದಿದ್ದರೆ ಖಂಡಿತ ಬದುಕಿ ಉಳಿಯಳು.

 

ಣ್ಣೀರ ಬರಿಸಲೆಂದೇ ಅವನ ಹಾಡಿ ಹೊಗಳಿದರು,

ಬಣ್ನಿಸುತಾ ಅವನ ಶೌರ್ಯ ಸಾಹಸದ ಕತೆಗಳು,

ಕೇಳುತಾ ಕುಳಿತಳು ಅವಳು ಶಿಲೆಯಂತೆ,

ಈ ಲೋಕದಾ ಪರಿವೆಯೇ ಇಲ್ಲದವಳಂತೆ.

 

ಸ್ನೇಹಿತೆಯೊಬ್ಬಳು ಅವಳ ಕೈಹಿಡಿದು ಕರೆತಂದು,

ಯೋಧನ ಶವದ ಬಳಿಸಾರಿ ನಿಂದು,

ಮುಖವ ತೋರಿಸಿದಳು ಸರಿಸಿ ಬಿಳಿಬಟ್ಟೆ,

ಆದರೂ ಒಡೆಯಲಿಲ್ಲ ಅವಳ ದುಃಖದ ಕಟ್ಟೆ.

 

ಅಷ್ಟರಲಿ ಅಲ್ಲಿದ್ದ ವೃದ್ಧೆಯೊಬ್ಬಳು,

ಅಳುವ ಮಗುವ ತಂದು ಮಡಿಲಲಿಟ್ಟಳು,

ಉಕ್ಕಿ ಹರಿಯಿತು ಕಣ್ಣೀರು ಜಲಪಾತವಾಗಿ,

ಮುದ್ದು ಕಂದಾ ನಾ ಬದುಕಬೇಕು ಖಂಡಿತಾ ನಿನಗಾಗಿ