Archive for ಜುಲೈ 28, 2008

ನಾನು ಹುಸಾರ್….!!

ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆಯ ಹುಡುಗ ಹುಡುಗಿಯರ ಮಧ್ಯೆ ಓದೋದ್ರಲ್ಲಿ ಸ್ವಲ್ಪ ಆಸಕ್ತಿ ನನಗೆ ಹೆಚ್ಚಾಗಿದ್ದ ಕಾರಣ ಎಲ್ಲಾ ಮಾಷ್ಟ್ರುಗಳ ಅಚ್ಚುಮೆಚ್ಚಿನವನಾಗಿದ್ದೆ. ಆಗ ನಮ್ಮ ಕ್ಲಾಸ್ ಮಾಷ್ಟ್ರು ಗಣಪತಿ ಮಂಜರು ಅನ್ನುವವರು. ಅವರೊಂದು ದಿನ 4ನೇ ಕ್ಲಾಸಿನಲ್ಲಿ ಪಾಠ ಓದಿಸ್ತಾ ಇದ್ದ್ರು. ಆಗ ಕ್ಲಾಸಿನಲ್ಲಿರೋರೆಲ್ಲ ತಪ್ಪು ತಪ್ಪಾಗಿ ಓದ್ತಾ ಇದ್ರು. ಹಾಗಾಗಿ ನನ್ನನ್ನು 4 ನೇ ಕ್ಲಾಸಿಗೆ ಕರೆದುಕೊಂಡು ಹೋಗಿ ಸಮಾಜ ಪಾಠದ 2 ಪುಟ ಓದಿಸಿ, ಕ್ಲಾಸಿನ ಮುಂದೆ ನನ್ನನು ಹೊಗಳಿದ್ದು; ಅದರಿಂದ ನನ್ನ ತಲೆಯ ಮೇಲೊಂದು ಕೋಡು ಮೂಡಿದ್ದು…ಯಾಕೋ ಸುಮ್ಮನೆ ನೆನಪಾಗಿ ತುಟಿಯಂಚಿನಲ್ಲಿ ಕಿರುನಗೆ ಮಿನುಗಿತ್ತು.

 

ಕ್ಷಮಿಸಿಬಿಡಿ ಮಾಷ್ಟ್ರೆ….

ಇನ್ನೊಂದು ಘಟನೆ ಹೇಳ್ತಿನಿ ಕೇಳಿ. ಆಗ ನಾನು ಕಮಲಶಿಲೆ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದ್ತಾ ಇದ್ದೆ. ಕ್ಲಾಸಿಗೆ ನಾನೇ ಲೀಡರು ( ಮಾನಿಟರ್ ಅಂತ ಬೇಕಿದ್ರೆ ಓದ್ಕೊಳ್ಳಿ). ಕಥೆ ಪುಸ್ತಕ ಓದುವ ಹುಚ್ಚು ಆಗಲೂ ಜೋರಾಗಿತ್ತು. ನನ್ನ ಓದಿಗೆ ರಾಗಸಂಗಮ, ಹಂಸರಾಗ ಪುಸ್ತಕಗಳನ್ನು ನನ್ನ ಕ್ಲಾಸಿನಲ್ಲೇ ಇದ್ದ ಉಮೇಶ್ ಶೆಟ್ಟಿ ಅನ್ನುವ ಹುಡುಗ ತಂದು ಕೊಡುತ್ತಿದ್ದ. ಕ್ಲಾಸಲ್ಲಿ ಪಾಠ ಇರದೆ, ಕ್ಲಾಸ್ ನೋಡಿಕೊಳ್ಳುವ ಹೊತ್ತಿನಲ್ಲಿ ತೋರಿಕೆಗೆ ಪಾಠ ಪುಸ್ತಕ ಇಟ್ಟುಕೊಂಡು ಅದರ ಮಧ್ಯೆ ರಾಗಸಂಗಮ, ಹಂಸರಾಗದ ಪುಸ್ತಕ ಇಟ್ಟು ಓದಿನಲ್ಲಿ ಮುಳುಗಿ ಹೋಗುತ್ತಿದ್ದೆ. ನನ್ನ ತನ್ಮಯತೆ ನೋಡಿದ ಪಕ್ಕದ ಕ್ಲಾಸಿನಲ್ಲಿದ್ದ ಮೇಷ್ಟ್ರು.. ನೋಡಿ ಅವ್ನು ಎಷ್ಟು ತನ್ಮಯತೆಯಿಂದ ಒದುತ್ತಿದ್ದಾನೆ. ನೀವೂ ಹಾಗೆ ಓದ್ಬಾರ್ದಾ ಅಂತ ಹೇಳಿದ್ರು ಅಂತ ಊಟಕ್ಕೆ ಬಿಟ್ಟಾಗ ಪಕ್ಕದ ಕ್ಲಾಸಿನ ಹುಡುಗನೊಬ್ಬ ಹೇಳ್ತಾ ಇದ್ದ. ಹೊಗಳಿಕೆಗೆ ಆಗ ಖುಶಿ ಆಯ್ತಾದ್ರೂ..ಈಗ ಅನ್ಸುತ್ತೆ… ಇದೂ ಕೂಡಾ ಒಂದು ರೀತಿ ನಂಬಿಕೆದ್ರೋಹಾನೇ ಅಲ್ವಾ ಅಂತ…ಮಾಷ್ಟ್ರೇ…ಕ್ಷಮಿಸ್ತೀರಾ..?

 

ಹೋಳಿಗೆ ಪ್ರಸಂಗ

ಕಮಲಶಿಲೆ ಶಾಲೆಯಲ್ಲಿದ್ದಾಅಗಲೇ ನಡೆದ ಇನ್ನೊಂದು ಪ್ರಸಂಗ ಭಾರಿ ಗಮ್ಮತ್ತಾಗಿದೆ. ಆಗ ನಮ್ಮ ಸಂಬಂಧಿಕರೊಬ್ಬರ ಮದುವೆ ಅಲ್ಲೇ ಕಮಲಶಿಲೆಯ ದೇವಸ್ಥಾನದಲ್ಲಿ ನಡೆದಿತ್ತು. ಮದುವೆಗೆ ಹೋಗೋಕೆ ಅಂತ ಮಂಜಯ್ಯ ಮಾಷ್ಟ್ರ ಹತ್ತಿರ ಅನುಮತಿ ಕೇಳಿಕೊಂಡು ನಾವೊಂದು ನಾಲ್ಕಾರು ಜನ ಹೋಗಿದ್ವಿ. ನಾವು ಕೇಳೋಕೆ ಹೋದಾಗ ಮಾಷ್ಟ್ರು ಸುಮ್ನೆ ಕುಶಾಲಿಗೆ ಅಂತ…ಮದಿಗೆ ಹೋಯಿ ಬರೇ ನೀವ್ ಮಾತ್ರ ಗಡ್ಜಾಗಿ( ಗಡದ್ದಾಗಿ) ಉಂಡ್ಕಂಡ್ ಬಂದ್ರೆ ಸಾಕಾ? ಮಾಷ್ಟ್ರಿಗೆ ಏನಾರೂ ಹೋಳ್ಗಿ ತಕಂಡ್ ಬತ್ರ್ಯಾ ಅಂತ ಕೇಳಿದ್ರು. ಅವ್ರು ತಮಾಷೆಗೆ ಹೇಳಿದ್ದಾದ್ರೂ ನಾವ್ ಮಾತ್ರ ಅದನ್ನೇ ಗಟ್ಟಿಮಾಡಿಕೊಂಡು ಹೋಳಿಗೆ ತಗೊಂಡು ಹೋಗಿಯೇ ಶುದ್ಧ ಅಂತ ನಿರ್ಧಾರ ಮಾಡಿದ್ವಿ. ಅಂತೆಯೇ ಅಲ್ಲಿ ನಮ್ಮ ಗುರುತಿನವರಲ್ಲಿ ಕೇಳಿ ಹೋಳಿಗೆ ಕಟ್ಟಿಸಿಕೊಂಡು ಬಂದದ್ದೂ ಆಯ್ತು. ತಕ್ಕೊಂಡು ಹೋಗಿ ಆಫೀಸ್ ರೂಮ್ನಲ್ಲಿ ಮಾಷ್ಟ್ರಿಗೆ ಕೊಟ್ಟಿದ್ದೂ ಆಯ್ತು. ನಾವು ಬಂದು ನಮ್ಮ ನಮ್ಮ ಕ್ಲಾಸಲ್ಲಿ ಕುಳಿತುಕೊಂಡೆವು. ಆಗ ಬಂತು ನಮಗೆ ಬುಲಾವ್. ಅಲ್ಲಿಯವರೆಗೆ ಯಾವತ್ತೂ ರೌದ್ರಾವತಾರ ತಳೆಯದ ಮಂಜಯ್ಯ ಮಾಷ್ಟ್ರಿಗೆ ಅದೆಲ್ಲಿತ್ತೋ ಸಿಟ್ಟು, ನೆತ್ತಿಗೇರಿಬಿಟ್ಟಿತ್ತು. ಆಲ್ಲಿ ಹೋಗಿ ನಮಗೆ ಅಂತ ಹೇಳಿ ಹೋಳಿಗೆ ತಂದಿದ್ದೀರಲ್ಲ. ಅವ್ರು ಏನಂತ ತಿಳ್ಕೋತಾರೆ ಅನ್ನೋ ಅಕಲು(ಬುದ್ಧಿ) ಬೇಡ್ವಾ ನಿಮ್ಗೆ.. ಅಂತಂದು ಕೈ ಮೇಲೆ ಕಾಸಿ ಕೊಟ್ಟ ನಾಲ್ಕು ನಾಲ್ಕು ಬೆತ್ತದೇಟಿನ ಹೋಳಿಗೆ…ಈಗ ನೆನಪಾದ್ರೆ ಬಿದ್ದು ಬಿದ್ದು ನಗುವಂತಾಗುತ್ತೆ.

 

ನೆನಪುಗಳಿಗೇನು ಬಿಡಿ…ಹೊತ್ತು ಗೊತ್ತಿಲ್ಲದೆ ಅಕಾರಣವಾಗಿ ಆಗೀಗ ಮುಂದೆ ಬಂದು ತದಿಗಿಣತೋಂ ಅಂತ ಕುಣಿಯಲಾರಂಭಿಸುತ್ತವೆ. ಹೀಗೆ ಉಕ್ಕಿದ ನೆನಪುಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮಲ್ಲೂ ಇಂತಹ ಸ್ವಾರಸ್ಯಕರ ಪ್ರಸಂಗ ಇದ್ರೆ ಹಂಚಿಕೊಳ್ಳಿ..ಎಲ್ಲರೂ ಓದಿ ಸಂಭ್ರಮಿಸೋಣ