Archive for ಆಗಷ್ಟ್, 2008

ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ…

 

 

ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ..

ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ

ಯಾರೂ ನಂಬಲ್ವೇ !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ

ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ

 

-.-.-.-.-.-.-.-.-.-.-.-.-.–.-.-.-.-.-.-.-.-

 

ಬಹಳ ದೂರ ನೀ ಹೋಗಿಬಿಟ್ಟೆ

ಹಿಂದಿರುಗಿ ಬರಲಾಗದಷ್ಟು…

ಬೇಸರವಾಗಿದ್ದು ಅದಕ್ಕಲ್ಲ

ಬದಲಾಗಿ ಬಿಟ್ಟೆಯಲ್ಲ ನೀ

ಹಿಂದಿರುಗಿ ನೋಡಲೂ ಆಗದಷ್ಟು..!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಚರಿತ್ರೆ ಮರುಕಳಿಸುತ್ತೆ ಅನ್ನೋ ಮಾತನ್ನು ನಂಬಿ

ಖುಶಿಯಿಂದ ಕಾಯುತ್ತ ಕುಳಿತಿದ್ದೆ

ನೀ ಮತ್ತೆ ಸಿಗಬಹುದೆಂದು…

ಆದರೀಗ ಯಾಕೋ ದಿಗಿಲಾಗುತ್ತಿದೆ ನೆನಪಾಗಿ

ನೀ ಕಳೆದು ಹೋಗಿದ್ದು ಕೂಡಾ

ಅದೇ ಚರಿತ್ರೆಯ ಭಾಗವೆಂದು !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಮೌನದ ನುಡಿ ನಿನಗೆ ಕೇಳಿಸಲೇ ಇಲ್ಲ,

ಮಾತಡೋಕೆ ನಂಗೂ ಧೈರ್ಯ ಇರಲಿಲ್ಲ

ಈಗ ಧೈರ್ಯವೇನೋ ಬಂದಿದೆ…

ಆದ್ರೆ ಮಾತಾಡೋಕೆ ಏನೂ ಉಳಿದೇ ಇಲ್ಲ!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಸದಾ ನೀ ಜೊತೆಯಾಗಿರು ಅಂತ ಪ್ರಾರ್ಥಿಸಿದ್ದೆ

ಯಾವುದೋ ದೇವತೆ ಅಸ್ತು ಅಂದಿರಬೇಕು

ಈಗ ಮರೆಯಬೇಕೆಂದುಕೊಂಡರೂ ಸದಾ

ನಿನ್ನ ನೆನಪಾಗೋದು ಅದಕ್ಕೇ ಇರಬೇಕು

ಇವತ್ತು ಅಂದ್ರೆ 29 ಆಗಸ್ಟ್ ಶುಕ್ರವಾರ ರಾತ್ರಿ 10:30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪೌರಾಣಿಕ ಯಕ್ಷಗಾನ ಪ್ರಿಯರಿಗೆ ಹಬ್ಬದೂಟವಿದೆ. ಮೂರು ಪೌರಾಣಿಕ ಪ್ರಸಂಗಗಳನ್ನು ರಂಗವೈಭವದಲ್ಲಿ ಸಾಕ್ಷಾತ್ಕರಿಸಲಿರುವರು. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು

            ಬಬ್ರುವಾಹನ

            ಕಾರ್ತವೀರ್ಯಾರ್ಜುನ

            ಮಾಯಾಬಜಾರ್

 

ಇವತ್ತಿನ ಪ್ರದರ್ಶನದ ವಿಶೇಷ ಆಕರ್ಷಣೆಗಳು ಇಂತಿವೆ

 

ಬಬ್ರುವಾಹನನಾಗಿ ತೀರ್ಥಳ್ಳಿ ಗೋಪಾಲಾಚಾರಿ

ಚಿತ್ರಾಂಗದೆ – ನೀಲ್ಕೋಡು ಶಂಕರ ಹೆಗಡೆ

ಕಾರ್ತವೀರ್ಯ – ವಿದ್ಯಾಧರ ಜಲವಳ್ಳಿ

ರಾವಣ – ಥಂಡಿಮನೆ ಶ್ರೀಪಾದ್ ಭಟ್

ಬಲರಾಮ – ಆರ್ಗೋಡು ಮೋಹನದಾಸ ಶೆಣೈ

ಘಟೋತ್ಕಜ – ಜನಾರ್ಧನ ಗುಡಿಗಾರ್

ಅಭಿಮನ್ಯು – ಕೊಳಲಿ ಕೃಷ್ಣ ಶೆಟ್ಟಿ

ಕೃಷ್ಣ – ತೀರ್ಥಳ್ಳಿ ಗೋಪಾಲಾಚಾರಿ

 

ಜೊತೆಗೆ ನೀಲಗಗನ… ಪದ್ಯಕ್ಕೆ ಧಾರೇಶ್ವರ್-ಸುರೇಶ್ ಶೆಟ್ಟಿ ದ್ವಂದ್ವ ಹಾಡುಗಾರಿಕೆಯ ಪೈಪೋಟಿ ಇದೆ.

 

ಇದಲ್ಲದೆ, ಪೆರ್ಡೂರು ಮೇಳದಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಶೆಟ್ಟಿಯವರ ಅಭಿನಂದನಾ ಸಮಾರಂಭದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಭಾನುವಾರ ಆಗಸ್ಟ್ 31ರಂದು ಮಧ್ಯಾಹ್ನ 3 ಗಂಟೆಯಿಂದ ಮತ್ತೆರಡು ಪೌರಾಣಿಕ ಪ್ರಸಂಗಗಳು ರಂಗದ ಮೇಲೆ ವಿಜೃಂಭಿಸಲಿವೆ. ಪ್ರಸಂಗಗಳು

            ಶ್ರೀ ರಾಮಾಂಜನೇಯ

            ಚಂದ್ರಾವಳಿ ವಿಲಾಸ

ನಾನಂತೂ ಈಗಲೇ ಹೊರಡಲು ತುದಿಗಾಲಲ್ಲಿ ನಿಂತಿದ್ದೇನೆ. ನಿಮಗೂ ಆಸಕ್ತಿಯಿದ್ದಲ್ಲಿ ನೀವೂ ಬಂದು ನೋಡಿ ಆನಂದಿಸಿ ಅಂತ ಈ ಸುದ್ದಿ ಹೇಳುತ್ತಿದ್ದೇನೆ. ನಮ್ಮ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ನಾವೆಲ್ಲರೂ ಆಸ್ವಾದಿಸೋಣ-ಪ್ರೋತ್ಸಾಹಿಸೋಣ

ವೈಯೆನ್ಕೆಯವರ ಪನ್ನು, ಫನ್ನುಗಳ ಬಗ್ಗೆ ಬರೀಬೇಕು ಅಂತ ತುಂಬಾ ದಿನದಿಂದ ಅಂದುಕೊಳ್ಳುತ್ತಿದ್ದೆ. ಇವತ್ತು ಕಾಲ ಕೂಡಿ ಬಂದಿದೆ. ಅವರ ಬೆರಗುಗಣ್ಣಿನ ನೋಟಕ್ಕೆ ದಕ್ಕುತ್ತಿದ್ದ ಸ್ವಾರಸ್ಯವನ್ನು ಅಷ್ಟೇ ರಸವತ್ತಾಗಿ ಓದಿಸಿಕೊಂಡು ಹೋಗುವಂತೆ ಬರೆಯುವ ಒಂದು ವಿಶಿಷ್ಟ ಶೈಲಿ ವೈಯೆನ್ಕೆಯವರಿಗೆ ಸಿದ್ಧಿಸಿತ್ತು. ವಂಡರ್‌ಕಣ್ಣಿನ ವಿಷಯ ವೈವಿಧ್ಯತೆ, ಪದಗಳೊಂದಿಗೆ ಸರಸವಾಡುತ್ತಾ ವಿಶೇಷ ಅರ್ಥಗಳನ್ನು ಹೊರಡಿಸುವ ಅದರ ಪಂಚುಗಳು, ಲಘುಧಾಟಿಯಲ್ಲೇ ಬರೆದರೂ ಕೂಡಾ ಸೂಕ್ಷ್ಮವಾಗಿ ಚುರುಕುಮುಟ್ಟಿಸಬೇಕಾದವರಿಗೆ ಚಾವಟಿಯೇಟಿನಂತಿದ್ದ ಅದರ ಮೊನಚು…ಹೀಗೆ ಅಂಕಣ ಬರಹದ ಯಾವ ನಿರ್ದಿಷ್ಟ ಕಟ್ಟುಪಾಡಿಗೂ ಸಿಲುಕದೇ…ತನ್ನದೇ ಒಂದು ವಿಶಿಷ್ಟ ಹಾದಿ ನಿರ್ಮಿಸಿಕೊಂಡಿತ್ತು. ಆ ಕಾರಣಕ್ಕೇ ಅದು ಓದುಗರಿಗೂ ಇಷ್ಟವಾಗಿತ್ತು.

 

ನೋಟದಿ ಹುಡುಕಿ ಸ್ವಾರಸ್ಯವನ್ನು,

ಅದಕೆ ಸೇರಿಸಿದರೆ ಹದವಾಗಿ ಫನ್ನು,

ಮೇಲೊಂದಿಷ್ಟು ಶಬ್ದಗಳಾಟದ ಪನ್ನು,

ಇಂಥ ಲೇಖನವ ಬರೆಯುವ ಪೆನ್ನು,

ಓದುಗರತ್ತ ನಗೆಬಾಣವ ತೂರುವ ವೆಪನ್ನು,

ಹಾಗಾಗಿ ಜನಪ್ರಿಯವಾಗಿತ್ತು ವಂಡರ್‌ಕಣ್ಣು

 

ವೈಯೆನ್ಕೆ ಪಂಚುಗಳಲ್ಲೇ ನನಗೆ ಅತ್ಯಂತ ಖುಷಿಕೊಟ್ಟಿದ್ದು ಇರಾನ್-ಇರಾಕ್ ಯುದ್ಧದ ಸಂದರ್ಭದಲ್ಲಿ ಆ ಯುದ್ಧವನ್ನು ಒಂದೇ ಸಾಲಿನಲ್ಲಿ ಬಣ್ಣಿಸಿದ ಅವರ ಚಾಟೂಕ್ತಿ

 

ಸುಮ್ನೆ ಇರಾಣ ಅಂದ್ರೆ ಇರಾಕ್ ಬಿಡಾಕಿಲ್ಲ !!

 

ಈ ಚತುರೋಕ್ತಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ. ಪನ್ನು, ಫನ್ನು, ವಿಟ್ಟು, ಸುದ್ದಿಗೆ ಗುದ್ದು ಎಲ್ಲಾ ಇದೊಂದರಲ್ಲೇ ಮಿಳಿತವಾಗಿದೆ.

 

ವೈಯೆನ್ಕೆಯವರು ಪದ್ಯ ಇಷ್ಟು ಲೈಟ್ ಆದ್ರೆ ಹೇಗೆ ಸ್ವಾಮಿ ಅನ್ನುವ ಲಘುಧಾಟಿಯ ಪದ್ಯಗಳ ಸಂಕಲನವೊಂದನ್ನು ಹೊರತಂದಿದ್ದರು. ಅದರಲ್ಲಿನ ಒಂದೆರಡು ಪಂಚ್ ನಿಮಗಾಗಿ…

 

ಕಪಿಲವಸ್ತುವಿನ ರಾಜ

            ಶುದ್ಧೋದನ

ಅವನ ಮಗ ರಾತ್ರೋರಾತ್ರಿ

            ಎದ್ಹೋದನ

ಹೆಂಡತಿ ಮಗೂನ ಬಿಟ್ಟು

            ಒಬ್ಬನೇ ಪರಾರಿ

ನಿದ್ರೆ ಬರದವರಿಗೆಲ್ಲ

            ಇದೇ ಸರಿಯಾದ ದಾರಿ

ಹಿಂತಿರುಗಿ ಬರುವಾಗ

            ಪೂರ್ತಿ ಬದಲಾಯಿಸಿದ್ದ

ಹೆಸರೂ ಕೂಡ; ಸಿದ್ಧಾರ್ಥ

            ಆಗಿದ್ದ ಬುದ್ಧ

 

ಇನ್ನೊಂದು ಕ್ರಾಂತಿಕಾರಿ ಅನ್ನೋ ಪದ್ಯದ ಕೊನೆಯಲ್ಲಿರುವ ಪಂಚು ನೋಡಿ

 

ಎಡಗೈಲಿ ಕುಡುಗೋಲು

            ಬಲಗೈಲಿ ಸುತ್ತಿಗೆ

ಮನೇಗ್ ಬೇಗ ಹೋಗದಿದ್ರೆ

            ಬೈತಾಳೆ ಅತ್ತಿಗೆ

 

ಗಾಳಿಪಟ ಚಿತ್ರದಲ್ಲಿ ಕೇಳಿದ ಕವಿತೆ, ಕವಿತೆ..ನೀನೇಕೆ ಪದಗಳಲಿ ಕುಳಿತೆ ಅನ್ನೋ ಸಾಲು ನೆನಪಿದ್ಯಾ…?

ಅದನ್ನು ಹೋಲುವ ಸಾಲುಗಳನ್ನು ವೈಯೆನ್ಕೆ ಮುಂಚೇನೆ ಬರ್ದಿದ್ದಾರೆ…!

 

ಕವಿತೆ

ನೀನೇಕೆ

ಪದಗಳಲ್ಲಿ

ಅವಿತೆ?

 

ಹೀಗೆ ಅವರ ಪನ್ನು, ಪನ್-ಚುಗಳ ಬಗ್ಗೆ ಎಷ್ಟು ಬೇಕಾದ್ರೂ ಬರೀಬಹುದು. ಅವರ ಪನ್ನುಗಳ ಕೆಲವು ಸ್ಯಾಂಪಲ್ ಇಲ್ಲಿದೆ…

 

ಚರಣೇ-shoe

ಆಟೋ-ಬಯ್ಯಾಗ್ರಫಿ – ಏರುವ ಆಟೋ ದರಗಳಿಗೆ ಜನರ ಪ್ರತಿಕ್ರಿಯೆ !!

ಉಪನಯನ ಕನ್ನಡಕ

Phd – precious hours of drinking

He whispered in the right ear which was the wrong ear. ( ಬಲಗಿವಿ ಕಿವುಡಾದವನ ಕಿವಿಯಲ್ಲಿ ಉಸುರಿದ ಕುರಿತು)

 

ಅವರ ಬರಹದ ಕೊನೆಯಲ್ಲಿ ಕೊನೆಸಿಡಿ ಅಂತ ಇರ್ತಾ ಇತ್ತು. ಅವರ ಕೊನೆಸಿಡಿಯೊಂದನ್ನು ಸಿಡಿಸುತ್ತಾ ಈ ಬರಹವನ್ನು ಮುಗಿಸುತ್ತೇನೆ

 

ಗೆಳೆಯರಿಬ್ಬರಲ್ಲಿ ಸಿನಿಮಾಗೆ ಹೋಗುವ ಬಗ್ಗೆ ಮಾತುಕತೆ ನಡೀತಿರುತ್ತೆ.

ರಾಮು ಏ ಸೋಮು, ಇಂಗ್ಲೀಷ್ ಪಿಕ್ಚರ್‌ಗೆ ಹೋಗೋಣ್ವಾ?

ಸೋಮು – ಬೇಡ ಕಣೋ. ನಂಗೆ ಇಂಗ್ಲೀಷ್ ಅರ್ಥ ಆಗೊಲ್ಲ. ಸುಮ್ನೆ ದುಡ್ ವೇಷ್ಟು.

ರಾಮು – ಹಾಂಗಿದ್ರೆ ಬಾ ನಡಿ ಕನ್ನಡ ಸಿನಿಮಾಗೆ ಹೋಗೋಣ. ಅದ್ರಲ್ಲಿ ಡಬ್ಬಲ್ ಮೀನಿಂಗ್ ಇರೋ ಡೈಲಾಗ್‌ಗಳು ಇರುತ್ತೆ. ಕೊಟ್ಟ ದುಡ್ಡಿಗೆ ಡಬ್ಬಲ್ ಬೆನಿಫಿಟ್ !!

 

ಕ್ರಿಕೇಟ್ ಪ್ರೇಮಿಗಳಿಗೆಲ್ಲರಿಗೂ ಚಿರಪರಿಚಿತ ಈ ನೆಲ್ಸನ್ ನಂಬರ್. ಸ್ಕೋರ್ 111 ಆದಾಗ ಡೇವಿಡ್ ಶೆಫರ್ಡ್ ಕುಪ್ಪಳಿಸುತ್ತಿದ್ದ ಚಿತ್ರವೂ ಕಣ್ಣಿಗೆ ಕಟ್ಟಿದಂತಿದೆಯಲ್ಲವೇ? ಈ ನಂಬರಿನ ವೈಶಿಷ್ಟ್ಯವಾದರೂ ಏನು? ಯಾಕೆ ಇದು ಅನ್‌ಲಕ್ಕಿ?

 

ಕೆಲವರು ಪ್ರತಿಪಾದಿಸುವ ಪ್ರಕಾರ ಈ ನಂಬರ್‌ನೊಂದಿಗೆ ಜೋಡಿಸಲ್ಪಡುವ ನೆಲ್ಸನ್ ಅನ್ನುವಾತ – ಬ್ರಿಟಿಷ್ ಸೇನೆಯಲ್ಲಿದ್ದ ವೈಸ್ ಅಡ್ಮಿರಲ್ ನೆಲ್ಸನ್. ಅವನಿಗೆ ಕೇವಲ ಒಂದು ಕಣ್ಣು, ಒಂದು ಕೈ, ಒಂದು ಕಾಲು ಮಾತ್ರ ಇತ್ತು. ಹಾಗಾಗಿ ಅವನ ದುರಾದೃಷ್ಟದ ಸಂಕೇತವಾಗಿ ಅದನ್ನು ಸೂಚಿಸಲು 111 ಬಳಸುವ ಕ್ರಮ ಮೊದಲುಗೊಂಡಿತು.ಆದರೆ ವಾಸ್ತವದಲ್ಲಿ ನೆಲ್ಸನ್‌ಗೆ ಒಂದು ಕಣ್ಣು ಒಂದು ಕೈ ಇಲ್ಲವಾಗಿದ್ದರೂ ಕೂಡಾ ಅವನ ಎರಡೂ ಕಾಲುಗಳು ಸರಿಯಿದ್ದವಂತೆ.

 

ಇನ್ನೊಂದು ಮೂಲದ ಪ್ರಕಾರ ನೆಲ್ಸನ್ ಗೆದ್ದ ಮೂರು ನೌಕಾಪಡೆಯ ಯುದ್ಧಗಳ (ಕೋಪನ್‌ಹೇಗನ್, ನೈಲ್, ಟ್ರಫಾಲ್ಗರ್) ಗೌರವಾರ್ಥ won-won-won” ಅನ್ನುವುದನ್ನು ಸಾಂಕೇತಿಕವಾಗಿ 111 ಅಂತ ಬಳಸಲಾಯ್ತು. ಕ್ರಮೇಣ ಇದು ಅನ್‌ಲಕ್ಕಿ ಅನ್ನುವ ಮೂಢನಂಬಿಕೆ ಇದರೊಂದಿಗೆ ಸೇರಿಕೊಂಡಿತು.

 

ಇನ್ನೂ ಒಂದು ವಾದವಿದೆ. 111 ಅನ್ನುವ ಸಂಖ್ಯೆ ಬೇಲ್ಸ್ ಇಲ್ಲದ ಮೂರು ಸ್ಟಂಪ್‌ಗಳನ್ನು ಸೂಚಿಸುತ್ತದೆ. ಅದು ವಿಕೇಟ್ ಉರುಳುವ ಸಂಕೇತ ಅಂತ ಅಂತ ಹೇಳುತ್ತದೆ ಈ ವಾದ. ಏನೇ ಇರಲಿ 111 ಅನಿಷ್ಟದ ಸಂಕೇತ ಅನ್ನುವ ನಂಬಿಕೆ ಅದು ಹೇಗೋ ಬಹುತೇಕರಲ್ಲಿ ಮನೆಮಾಡಿದೆ. ಜೊತೆಗೆ 222 ಡಬಲ್ ನೆಲ್ಸನ್, 333- ಟ್ರಿಪಲ್ ನೆಲ್ಸನ್… ಹೀಗೆ ಇವೂ ಕೂಡಾ ದುರದೃಷ್ಟ ತರುತ್ತದೆ ಅಂತ ಬಲವಾಗಿ ನಂಬುವವರಿದ್ದಾರೆ. ಸ್ಕೋರ್ ನೆಲ್ಸನ್ ನಂಬರನ್ನು ದಾಟುವವರೆಗೂ ಒಂಟಿ ಕಾಲಲ್ಲಿ ನಿಂತರೆ ಅಶುಭ ಸಂಭವಿಸದು ಅನ್ನುವ ನಂಬಿಕೆಯೇ ಶೆಫರ್ಡ್ ಕುಪ್ಪಳಿಸುವುದರ ಹಿಂದಿನ ರಹಸ್ಯ.

 

ಆಸ್ಟ್ರೇಲಿಯನ್ ಕ್ರಿಕೇಟ್‌ನಲ್ಲಿ 87ನ್ನು ಡೆವಿಲ್ಸ್ ನಂಬರ್ ಎಂದು ಕರೆಯುತ್ತಾರೆ. ಇದು 100 ರನ್‌ಗಳಿಗೆ 13 ರನ್ ಕಡಿಮೆ ಇರುವುದರಿಂದ , 13 ಅನ್ನುವುದು ದುರಾದೃಷ್ಟದ ಸಂಖ್ಯೆ ಅಂತ ಅವರು ಭಾವಿಸುವುದೇ ಈ ನಂಬಿಕೆಯ ಹಿಂದಿನ ಮರ್ಮ.

 

ಒಟ್ಟಿನಲ್ಲಿ ಈ ನೆಲ್ಸನ್ ನಂಬರ್, ಡೆವಿಲ್ಸ್ ನಂಬರ್ ದುರದೃಷ್ಟ ತರುತ್ತೋ ಅಥವಾ ಆ ಭೀತಿಯಿಂದಲೇ ವಿಕೇಟ್ ಉರುಳುತ್ತೋ, ನೋಡುವವರಿಗಂತೂ ಇದನ್ನು ನಂಬುವವರ ಕುಣಿದಾಟ ನಗು ತರಿಸುತ್ತೆ.

ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೆಮೆಟೋರಿಯಂನಲ್ಲಿ

ಉರಿದು ಬೂದಿಯಾಗಿ ಹೋದ,

ವಿಷಗಾಳಿಯ ಹಾಯಿಸಿದ ಛೇಂಬರಿನೊಳಗೆ

ಉಸಿರಾಡುತ್ತಲೇ ಇಲ್ಲವಾಗಿಹೋದ

ಕಾಮಪಿಪಾಸು ನಾಜಿ ಸೈನಿಕರ ಅಧಿಕಾರಿಗಳ

ದಾಹಕ್ಕೆ ಸಿಲುಕಿ ನಲುಗಿಹೋದ

ವಿಜ್ಞಾನಿ-ವೈದ್ಯರುಗಳ ಪ್ರಯೋಗಗಳಿಗೆ

ಬಲಿಪಶುವಾಗಿ ನರಳಿದ

ತಮ್ಮವರನೆಲ್ಲ ಕಣ್ಣೆದುರೇ ಕಳೆದುಕೊಂಡು

ಬದುಕಿದ್ದೂ ಶವವಾದ

ತುಂಡು ಬ್ರೆಡ್ಡಿಗೂ ಗತಿಯಿಲ್ಲದೆ ಮೂಳೆಚಕ್ಕಳವಾಗಿ

ಸೊರಗಿ ಅಸುನೀಗಿದ

ನೂರು ಸಾವಿರ ಸಾವಿನ ಕಥೆಯನ್ನು ಕೇಳಿದ ಮೇಲೂ

ಎದೆಯ ಮೇಲೊಮ್ಮೆ ಕೈಯಿಟ್ಟು ಕೇಳಿ ನೋಡಿ…

ಬೇಕೆನ್ನುಸುತ್ತಿದೆಯೇ ಈ ಜನಾಂಗೀಯ ದ್ವೇಷ?

 

( ನೇಮಿಚಂದ್ರರ ಯಾದ್ ವಶೇಮ್ ಒಮ್ಮೆ ಒದಿ ನೋಡಿ. ಆಮೇಲೆ ಜೀವಮಾನದಲ್ಲೇ ಜನಾಂಗೀಯ ದ್ವೇಷದ ಯೋಚನೆ ಅಪ್ಪಿತಪ್ಪಿ ಕೂಡಾ ಯಾರ ಕನಸಲ್ಲೂ ಸುಳಿಯಲಾರದು)