Archive for ಆಗಷ್ಟ್ 6, 2008

ನಾನು ಮೊದಲೊಮ್ಮೆ ನನ್ನ ಮೆಚ್ಚಿನ ಬರಹಗಾರ/ಬರಹಗಾರ್ತಿಯರ ಬಗ್ಗೆ ಹೇಳುತ್ತಾ..ನೇಮಿಚಂದ್ರ ನಾನು ಇಷ್ಟಪಟ್ಟು ಓದುವ ಲೇಖಕಿಯರಲ್ಲೊಬ್ಬರು ಅಂತಂದಿದ್ದೆ. ಅದು ಯಾಕೆ ಅಂತ ಗೊತ್ತಾಗಬೇಕಿದ್ದರೆ ನೀವೊಮ್ಮೆ ಅವರ ಯಾದ್ ವಶೇಮ್ ಓದಿ ನೋಡಿ. ಇದನ್ನು ನೀವು ಕಾದಂಬರಿ ಅಂತಂದುಕೊಂಡು ಓದಿದರೂ ನಿಮಗಿಲ್ಲಿ ಕಥೆ ಸಿಗುತ್ತದೆ. ಹಿಟ್ಲರನ ನೆಲದಿಂದ ಗಾಂಧಿ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆ ಹ್ಯಾನಾಳ ಕಥೆ. ಇತಿಹಾಸದ ದುರಂತ ಗಾಥೆಯೆಂದು ಓದಿಕೊಂಡರೆ ನೂರು ಸಾವಿರ ಸಾವಿನ ನೆನಪುಗಳ ನೆತ್ತರ ಕಥೆ ನಿಮ್ಮ ಕಣ್ಣೆದುರು ನಿಲ್ಲುತ್ತದೆ. ನಿಮ್ಮನ್ನು ಬೆಚ್ಚಿಬೀಳಿಸುತ್ತದೆ, ಮನುಕುಲ ಚರಿತ್ರೆಯ ಅಮಾನುಷ ಮುಖ ಅನಾವರಣಗೊಳ್ಳುತ್ತದೆ. ಪುಸ್ತಕ ಓದಿ ಮುಗಿಸಿದ ಮೇಲೂ ಡಕಾವ್‌ನ ನಾಜಿ ಕ್ಯಾಂಪ್‌ನ್ ಭೀಕರತೆ, ಭೀಭತ್ಸತೆಗಳು ನಿಮ್ಮನ್ನು ಕಾಡುತ್ತವೆ. ಕಿವಿಯಲ್ಲಿ ಯಹೂದಿಯರ ಮರಣಚೀತ್ಕಾರದ ನಿರಂತರ ಅನುರಣನ. ಮನುಷ್ಯ ಕ್ರೌರ್ಯದ ಕರಾಳತೆಯನ್ನು ಅನಾವರಣಗೊಳಿಸುವುದರ ಜೊತೆಗೆ, ಅದಕ್ಕೆ ಸಡ್ಡು ಹೊಡೆದು ಬದುಕುವ ಛಲ ಹೊತ್ತು, ತಮ್ಮ ತಾಯ್ನಾಡನ್ನೇ ತೊರೆದು ಇನ್ನೆಲ್ಲೋ ಬೇರು ಬಿಟ್ಟವರ ಮನಸಿನ ತಳಮಳ, ತುಮುಲಗಳನ್ನು ಬಿಚ್ಚಿಡುತ್ತದೆ. ಜೊತೆ ಜೊತೆಗೆ ನಮಗೆ ಗೊತ್ತಿಲ್ಲದ ಯಹೂದಿಗಳಿಗೆ ಸಂಬಂಧಿಸಿದ ಎಷ್ಟೋ ಅಪರೂಪದ ಚಾರಿತ್ರಿಕ ಸಂಗತಿಗಳು, ಸ್ಥಳಗಳು ವಿವರಣೆಗಳನ್ನು ಅಪರೂಪದ ನೂರಾರು ಚಿತ್ರಗಳ ಸಹಿತ ನೀಡಿರುವ ಇಂತಹದೊಂದು ಪುಸ್ತಕ ನೀಡಿದ್ದಕ್ಕೆ ನೇಮಿಚಂದ್ರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

 

ಯಹೂದಿಗಳ ನೆಲದಿಂದ ಭಾರತಕ್ಕೆ ಬಂದ ಪುಟ್ಟ ಬಾಲೆ ಹ್ಯಾನಾಳು ಅನಿತಳಾಗಿ ಬದಲಾಗಿ ಇಲ್ಲಿನ ರೀತಿನೀತಿಗೆ ಹೊಂದಿಕೊಂಡು ವಿವೇಕ್‌ನನ್ನು ಮದುವೆಯಾಗಿರುತ್ತಾಳೆ. ಅವಳೊಳಗೆ ಮನೆಮಾಡಿರುವ ತನ್ನ ತಾಯ್ನಾಡಿನ ಕುರಿತಾದ ಆತಂಕ, ತನ್ನವರು ಯಾರಾದರು ಸಿಗಬಹುದೇನೋ ಅನ್ನುವ ದೂರದ ಆಸೆಯೊಂದು ಅವಳನ್ನು ಹುಟ್ಟೂರಿಗೆ ಎಳೆದು ತರುತ್ತದೆ. ಹ್ಯಾನಾಳನ್ನು ಕೇಂದ್ರವಾಗಿರಿಸಿಕೊಂಡು ಯಹೂದಿಗಳ, ಪ್ಯಾಲೆಸ್ತೀನ್‌ನ ಎಂದಿಗೂ ಮುಗಿಯದ ಯುದ್ಧ ಸಾವು, ಹಿಂಸೆ, ಬಡಿದಾಟ, ಯಹೂದಿಗಳ ಮಾರಣ ಹೋಮದ ರೂವಾರಿ ಹಿಟ್ಲರ್‌ನ ಜನಾಂಗೀಯ ದ್ವೇಷ, ತಮ್ಮ ನೆಲದಲ್ಲೇ ನೆಲೆಕಳೆದುಕೊಂಡವರ ಮುಗಿಯದ ಗೋಳುಗಳನ್ನು ಚಿತ್ರಿಸುತ್ತಾ ಸಾಗುತ್ತದೆ ಈ ಕಥಾನಕ. ಸ್ವತಃ ತಾವೇ ಈ ಸ್ಥಳಗಳಲ್ಲೆಲ್ಲಾ ಅಡ್ಡಾಡಿ, ಅವರ ಬೇಗುದಿಯನ್ನು ಬಲು ಹತ್ತಿರದಿಂದ ಕಂಡು, ವಿವಿಧ ಸ್ಮಾರಕ, ಸಂಗ್ರಹಾಲಯಗಳಿಗೆ ಸುತ್ತು ಹೊಡೆದು ನೇಮಿಚಂದ್ರ ಅವರು ಸಂಪಾಸಿದ ಅಮೂಲ್ಯ ವಿವರಗಳು, ಫೋಟೋಗಳು ಈ ಪುಸ್ತಕದ ಮೌಲ್ಯಕ್ಕೆ ಇನ್ನಷ್ಟು ಮೆರುಗು ನೀಡಿದೆ.

 

ನೂರು ಸಾವಿರ ಸಾವಿನ ನೆನಪುಗಳು, ಬದುಕಿರುವ ಇನ್ನೆಷ್ಟೋ ಲಕ್ಷಾಂತರ ಮಂದಿಯ ವರ್ತಮಾನದ ಗೋಳು…ಈ ನೋವಿನ ಸರಮಾಲೆ ತುಂಡರಿಯುವ ಬಗೆಯಾದರೂ ಎಂತು? ಗತ ಬದುಕಿನ ಒಂದು ಒಡಪಿಗೆ ಉತ್ತರವನ್ನು ಅರಸಿ ಖಂಡ ಖಂಡಗಳನ್ನು ಅಲೆದು ಬಂದೆ. ಮತ್ತೆ ಮತ್ತೆ ಹಿಂದಿರುಗುತ್ತಿರುವೆ- ಇತಿಹಾಸದ ಅದೇ ಕೊಲೆಗಡುಕ ಪುಟಗಳಿಗೆ. ಕಲಿತ ದ್ವೇಷವನ್ನೊಮ್ಮೆ ಮರೆಯಲು ಸಾಧ್ಯವೇ? ಇತಿಹಾಸದ ಭೂತಗಳನ್ನೆಲ್ಲಾ ಉಚ್ಚಾಟಿಸಲು ಸಾಧ್ಯವೇ? ಗೋಳುಗೋಡೆಯ ಮುಂದೆ ನೂರು ಸಾವಿರ ನೆನಪುಗಳಲ್ಲಿ ತೋಯ್ದು ಹೋಗಿದ್ದೆ. ಸತ್ತ ತಾಯಿಯನ್ನು, ತಮ್ಮನನ್ನು ನೆನೆದು ಶೋಕಿಸಿದ್ದೆ. ಆದರೆ ನನ್ನ ದುಃಖ ಈ ಕ್ಷಣ ಆ ಎರಡು ಸಾವುಗಳದಾಗಿರಲಿಲ್ಲ. ನನ್ನನ್ನು ಕಾಡಿದ್ದು ಇತಿಹಾಸದ ಸಾವುಗಳಲ್ಲ. ವರ್ತಮಾನದ ಸಾವುಗಳು; ಭವಿಷ್ಯದ ಸಾವುಗಳು. ನಾನು ನಿನ್ನೆಗಳ ನೂರು ನೋವನ್ನು ಮರೆಯಲು ಸಿದ್ಧ. ನಾಳೆಗಳ ಭರವಸೆಯನ್ನು ಯಾರಾದರೂ ನೀಡಿದರೆ…… ಹ್ಯಾನಾಳ ಮನದಲ್ಲಿ ಹುಟ್ಟುವ ಈ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು? ಯಾರಾದರೂ ಭರವಸೆ ನೀಡಿಯಾರೇ?