ಮಾಧವಿ…ಹೊರಟಳು ಕಾನನಕೆ…

Posted: ಆಗಷ್ಟ್ 7, 2008 in ಹೀಗೊಂದು ಕತೆ...
ಟ್ಯಾಗ್ ಗಳು:, , , , , , , , , , ,

ನನಗೀಕೆಯ ಪರಿಚಯವಾಗಿದ್ದು ಸುಮಾರು ಹದಿನಾರು ವರ್ಷಗಳಷ್ಟು ಹಿಂದೆ. ಅವಳ ಬದುಕಿನ ದುರಂತ ಕಥೆಯನ್ನು ಕೇಳಿ ಕಣ್ಣೀರು ಮಿಡಿದದ್ದೂ ಆಗಲೇ. ಅಲ್ಲಿಂದ ಮುಂದೆ ಆಗೊಮ್ಮೆ ಈಗೊಮ್ಮೆ ಮನಸಿನ ಮೂಲೆಯಿಂದೆದ್ದು ಬರುತ್ತಿದ್ದಳು. ನೂರಾರು ಪ್ರಶ್ನೆಗಳ ಕೇಳಿ ಕಾಡುತ್ತಿದ್ದಳು. ಮತ್ತೆ ಸದ್ದಿಲ್ಲದೆ ತಟಕ್ಕನೆದ್ದು ಮನಸಿನ ಮೂಲೆ ಸೇರಿ ಬಿಡುತ್ತಿದ್ದಳು. ಮೊನ್ನೆ ಟಿ.ವಿ.ಯಲ್ಲಿ ಅವಿನಾಶ್-ಮಾಳವಿಕ ದಂಪತಿಗಳ ಸಂದರ್ಶನ ನೋಡುತ್ತಿದ್ದಾಗ ಮತ್ತೆ ಮನಸಿನ ಮಹಡಿಯಿಂದ ಇಣುಕಿದಳು ಅದೇ ಉತ್ತರವಿಲ್ಲದ ನೂರಾರು ಪ್ರಶ್ನೆಗಳನ್ನು ಹೊತ್ತ ಮುಖಭಾವದೊಂದಿಗೆ. ಈಕೆ ಹೀಗೆ ನೆನಪಾಗಲು ಕಾರಣ ಅವಿನಾಶ್-ಮಾಳವಿಕ ದಂಪತಿಗಳ ಮಗ! ಅವನ ಹೆಸರು ಗಾಲವ !!

 

ಅನುಮಾನವೇ ಬೇಡ. ಈಕೆ ಬೇರಿನ್ಯಾರೂ ಅಲ್ಲ. ವಿಶ್ವಾಮಿತ್ರರ ಶಿಷ್ಯ ಗಾಲವನ ಗುರುದಕ್ಷಿಣೆಯ ಯಜ್ಞಕ್ಕೆ ಸಮಿತ್ತಾಗಿ ಉರಿದು ಹೋದವಳೇ ಈ ಮಾಧವಿ. ವರವೊಂದು ಶಾಪವಾಗಿ ಪರಿಣಮಿಸಿದ ಕಥೆಯ ದುರಂತ ನಾಯಕಿಯೇ ಇವಳು. ಈಕೆಯ ಕಥೆಯನ್ನು ನಾನು ಕೇಳಿದ್ದು ವಧು ಮಾಧವಿ ಅನ್ನುವ ಯಕ್ಷಗಾನದ ಕ್ಯಾಸೆಟ್‌ನಲ್ಲಿ

 

ರಾಜಾ ಯಯಾತಿಯ ಮಗಳೀಕೆ. ಸುಂದರ ಬದುಕಿನ ಸ್ವಪ್ನಗಳನ್ನು ಕಂಗಳಲ್ಲಿ ತುಂಬಿಕೊಂಡು ತನ್ನನ್ನು ವರಿಸುವ ರಾಜಕುವರನ ನಿರೀಕ್ಷೆಯೊಳಿದ್ದಾಕೆ. ರಾಜಕುವರನ ಕನಸಿನಲ್ಲಿ ಕನವರಿಸುತ್ತಿದ್ದ ಈ ಬಾಲೆಯ ಬದುಕಲಿ ದುಃಸ್ವಪ್ನದಂತೆ ಬಂದವನೇ ಗಾಲವ. ಮಹಾಮುನಿ ವಿಶ್ವಾಮಿತ್ರರಲ್ಲಿ ಅಧ್ಯಯನ ಮುಗಿಸಿದವನಿವನು. ಗುರುವಿಗೇನಾದರೂ ದಕ್ಷಿಣೆ ಸಲ್ಲಿಸುವುದು ತನ್ನ ಕರ್ತವ್ಯವೆಂದು ತಿಳಿದು, ಗುರುಗಳೇ ನಿಮಗೇನು ಕೊಡಲಿ ಎಂದು ಕೇಳಿದವನು. ಏನೂ ಬೇಡವೆಂದರೂ ಕೇಳದೆ ಗುರುಗಳನ್ನು ಒತ್ತಾಯಿಸಲು ಹೋಗಿ ಅವರ ಸಿಟ್ಟಿಗೆ ಗುರಿಯಾದವನು. ವಿಶ್ವಾಮಿತ್ರರು ಸಿಟ್ಟಿನ ಭರದಲ್ಲಿ ಕೇಳಿದ್ದಿಷ್ಟು- ಗುರುದಕ್ಷಿಣೆ ನೀನು ಸಲ್ಲಿಸುವುದೇ ಆದರೆ ಎಂಟುನೂರು ಶ್ವೇತಾಶ್ವಗಳನ್ನು ತಂದುಕೊಡು. ಮಾತ್ರವಲ್ಲ ಅದರ ಒಂದು ಕಿವಿ ಮಾತ್ರ ಕಪ್ಪಾಗಿರಬೇಕು. ಮಿಕ್ಕಂತೆ ಅಶ್ವದ ಮೈಮೆಲೆ ಹುಡುಕಿದರೂ ಒಂದು ಚುಕ್ಕಿಯಷ್ಟೂ ಬೇರೆ ವರ್ಣಗಳಿರಕೂಡದು. ತಂದು ಕೊಡುತ್ತೀಯಾ? ಕೋಲುಕೊಟ್ಟು ಪೆಟ್ಟುತಿಂದ ಅವಸ್ಥೆಯಾಯ್ತು ಗಾಲವನದು. ಅಂತಹ ಅಶ್ವಗಳನ್ನು ಹುಡುಕುತ್ತಾ ಊರೂರು ಅಲೆದ. ಎಲ್ಲ ಕಡೆಗಳಲ್ಲೂ ನಿರಾಶೆಯೇ ಕಾದಿತ್ತವನಿಗೆ. ಆಗ ಸಿಕ್ಕಿದವನೇ ಅವನ ಬಾಲ್ಯಕಾಲದ ಮಿತ್ರ ಗರುಡ. ಅವನೇ ಗಾಲವನನ್ನು ಯಯಾತಿಯ ಬಳಿಗೆ ಕರೆತಂದಿದ್ದು. ಮಾಧವಿಯ ದುರಂತ ಕಥಾನಕಕ್ಕೆ ಮುನ್ನುಡಿ ಬರೆದಿದ್ದು.

 

ಗಾಲವನ ಬೇಡಿಕೆ ಏನೆಂದು ತಿಳಿದುಕೊಳ್ಳುವ ಮುನ್ನವೇ ಯಯಾತಿ ಅದನ್ನು ಈಡೇರಿಸುವ ಭರವಸೆಕೊಟ್ಟ. ಆ ಮೂಲಕ ಅರಿವಿಲ್ಲದೆಯೇ ತನ್ನ ಕಂದನ ಬದುಕಿಗೇ ಕೊಳ್ಳಿಯಿಟ್ಟ. ಶ್ವೇತಾಶ್ವಗಳು ತನ್ನಲ್ಲಿಲ್ಲದ ಕಾರಣ ಕೊಟ್ಟ ಮಾತಿಗೆ ಕಟ್ಟುಬಿದ್ದು ತನ್ನ ಮಗಳನ್ನೇ ಗಾಲವನಿಗೆ ಕೊಟ್ಟ. ಯಾವ ದೊರೆಯ ಬಳಿ ಅಂತಹ ಶ್ವೇತಾಶ್ವಗಳಿವೆಯೋ ಅವನಿಗೆ ನನ್ನ ಮಗಳನ್ನು ಕೊಟ್ಟು ನಿಮಗೆ ಬೇಕಾದ ಕುದುರೆಗಳನ್ನು ಪಡೆದುಕೊಳ್ಳಿ ಎಂದ. ಹೀಗೆ ತನ್ನ ಕನಸುಗಳನ್ನೆಲ್ಲಾ ಮೂಟೆ ಕಟ್ಟಿಟ್ಟು, ತನ್ನ ಪಾಲಿಗೊದಗಿದ ಸ್ಥಿತಿಗೆ ಕಣ್ಣೀರಿಟ್ಟು, ಯಯಾತಿಯ ಮುದ್ದುಕುವರಿ ತನ್ನ ದುರ್ವಿಧಿಯ ಹಳಿಯುತ್ತಾ ವಿಧಿಯಿಲ್ಲದೆ ಗಾಲವನೊಂದಿಗೆ ಹೊರಟಳು.

 

ಪೆತ್ತಿಹ ಪಿತನ ವಾಕ್ಯವನುಳುಹಲು

ಸತ್ಯದ ಪಥವಿಂದು…

ಬತ್ತಿದ ಆಸೆ..ಪ್ರೇಮ, ಮೋಹವು

ಸತ್ತಿತು ತನಗೆಂದು

ಮಾಧವಿ… ಕಂಬನಿ ತುಂಬಿದಳು….

 

ಸರಿ, ಶುರುವಾಯಿತು ಗಾಲವನ ಅಶ್ವಗಳ ಬೇಟೆ. ಸುಕೋಮಲೆಯಾದ ರಾಜಕುವರಿ ಮಾಧವಿ ತುಟಿ ಪಿಟ್ಟೆನ್ನದೆ ಮೌನವಾಗಿ ಹಿಂಬಾಲಿಸಿದಳು…ಎದೆಯೊಳಗೆ ಸುಡುವ ಅಗ್ನಿಪರ್ವತವನ್ನು ಅಡಗಿಸಿಡುತ್ತಾ. ಕುದುರೆಯ ಬದಲಾಗಿ ತನ್ನಪ್ಪನು ತನ್ನನ್ನು ವಸ್ತುವನ್ನು ಕೊಡುವಂತೆ ಈ ಗಾಲವನ ಕೈಗೊಪ್ಪಿಸಿದನಲ್ಲ ಎಂದು ಮನದೊಳಗೇ ರೋಧಿಸಿದಳು. ಅಪ್ಪನ ಮಾತಿಗೆ ಕಟ್ಟುಬಿದ್ದು ಹೀಗೆ ಅನ್ಯರ ತೊತ್ತಿನಂತೆ ಸಾಗುವ ತನ್ನ ಬದುಕಿನ ಕುರಿತು ಬೇಸರವಾಯ್ತು. ಹೀಗೆ ವಿಚಾರಗಳ ಸುಳಿಯೊಳಗೆ ಸಿಲುಕಿದ್ದ ಮಾಧವಿಯ ಜೊತೆಗೆ ಗಾಲವ ಅಯೋಧ್ಯೆಯನ್ನು ಬಂದು ತಲುಪಿದ. ಅಯೋಧ್ಯೆಯ ರಾಜನ ಬಳಿ ಅಂತಹ ಕುದುರೆಗಳಿವೆಯೆಂಬ ಖಚಿತ ವರ್ತಮಾನ ಸಿಕ್ಕಿತ್ತು. ಆದರೆ ಬಂದು ನೋಡಿದಾಗ ಅಲ್ಲಿಯೂ ನಿರಾಶೆಯೇ ಕಾದಿತ್ತು. ರಾಜನ ಬಳಿ ಕೇವಲ ಇನ್ನೂರು ಅಶ್ವಗಳಿದ್ದವು. ಬೇಕಾಗಿದ್ದುದು ಎಂಟು ನೂರು. ಏನು ಮಾಡಲಿ ಎಂದು ಗರುಡನೊಡನೆ ಸಮಾಲೋಚನೆ ನಡೆಸಿದ. ಆಗ ಹೊಳೆಯಿತು ಮಿತ್ರದ್ವಯರಿಗೊಂದು ಕುಟಿಲೋಪಾಯ. ಮಾಧವಿಗೊಂದು ವಿಶೇಷ ವರವಿದ್ದಿತ್ತು. ಮಗುವನ್ನು ಪಡೆದ ಬಳಿಕ ಪುನಃ ಕನ್ಯತ್ವ ಸಿದ್ಧಿಸುವ ವರ. ಈ ವರವೇ ಅವಳ ಪಾಲಿಗೆ ಶಾಪವಾಯಿತು. ಒಂದು ವರ್ಷಕ್ಕೆಂದು ಮಾಧವಿಯನ್ನು ರಾಜನಿಗೊಪ್ಪಿಸಿ, ಅವಳಿಂದ ಒಂದು ಮಗುವನ್ನು ಪಡೆದ ಮೇಲೆ ಪುನಃ ಮಾಧವಿಯನ್ನು ಕರೆದೊಯ್ಯುವ ಹಂಚಿಕೆ ಹಾಕಿದರು. ಹೇಗಿದ್ದರೂ ಅವಳು ಕನ್ಯೆಯಾಗಿರುವಳಲ್ಲ. ಅವಳನ್ನು ಇನ್ಯಾವ ರಾಜನ ಬಳಿ ಕುದುರೆ ಸಿಗುತ್ತದೋ ಅವನಿಗೊಪ್ಪಿಸಿದರಾಯ್ತು ಅಂದುಕೊಂಡರು. ಇನ್ನೂರು ಅಶ್ವಗಳನ್ನು ಪಡೆದು, ಒಂದು ವರ್ಷದ ಒಡಂಬಡಿಕೆಗೆ ಒಪ್ಪಿ, ಮಾಧವಿಯನ್ನು ಅರಸನಿಗೊಪ್ಪಿಸಿ ನಡೆದೇ ಬಿಟ್ಟ ಗಾಲವ….ಸುರಿದು ಮಾಧವಿಯ ಬದುಕಿನ ಬಟ್ಟಲಿಗೆ ಹಾಲಾಹಲವ.

 

ಪಾಪ ಮುಗ್ಧೆ ಬಾಲೆಗೇನು ಗೊತ್ತು ಇವರ ಕುಟಿಲೋಪಾಯ. ಅಂತೂ ತನಗೆ ಕೊನೆಗೂ ನೆಲೆಯೊಂದು ಸಿಕ್ಕಿತಲ್ಲ ಎಂದು ಹರ್ಷಚಿತ್ತಳಾದಳು. ವರುಷವೊಂದು ಸಂದಿತು. ಮಾಧವಿ ಮಗುವೊಂದಕ್ಕೆ ಜನ್ಮವಿತ್ತಳು. ಎಲ್ಲವೂ ಸರಿಯಾಯ್ತೆಂದು ಮಾಧವಿ ಖುಷಿಯಲ್ಲಿರಲು ಆಗ ಅಲ್ಲಿಗೆ ಬಂದ ಗಾಲವ. ಮಾಧವಿಯ ಮರಳಿ ಕೊಂಡೊಯ್ಯಲು. ಮಾಧವಿಗೆ ಸಿಡಿಲೆರಗಿದಂತಾಯ್ತು. ಈಗ ಅವಳಿಗೆ ಎಲ್ಲವೂ ಅರ್ಥವಾಗಿತ್ತು. ಎಷ್ಟು ರೋಧಿಸಿದರೂ ಎಲ್ಲಾ ವ್ಯರ್ಥವಾಗಿತ್ತು. ಮಾಧವಿಯ ಮನಸು ಅಂದಿನಿಂದ ಕಲ್ಲಾಗಿಹೋಯ್ತು.

 

            ಶಿಲೆಯಾದಳು ಕೈಗೊಂಬೆ ಗಾಲವನ

            ಜಲಧಿಯೊಳಾಡಿದರೂ….

            ಮಾಧವಿ ಸದಮಳಳಾಗಿಹಳು                                                    ( ಸದಮಳ = ಪವಿತ್ರ)

           

ಪಡೆದ ವರದ ಫಲದಿಂದ ಅವಳೀಗ ಮತ್ತೆ ಕನ್ಯೆಯಾಗಿದ್ದಳು. ಮತ್ತೆ ಶುರುವಾಯಿತು ಕುದುರೆಗಳ ಹುಡುಕಾಟ. ನಡೆದೇ ಇತ್ತು ಮಾಧವಿಯ ಬಾಳಲ್ಲಿ ವಿಧಿಯ ಕ್ರೂರ ಚೆಲ್ಲಾಟ. ಕಾಶೀರಾಜ ಮತ್ತು ಭೋಜಪುರದ ರಾಜನ ಬಳಿ ಇದ್ದ ತಲಾ ಇನ್ನೂರು ಅಶ್ವಗಳಿಗಾಗಿ ಮತ್ತೆ ನಡೆಯಿತು ಮಾಧವಿಯ ಮಾರಾಟ. ತಂದೆಯ ಮಾತನ್ನುಳಿಸಲು ಮಾಧವಿ ಬಿಕರಿಯ ಸೊತ್ತಾದಳು. ಗಾಲವನ ಹಟಕೆ ಬಲಿಯಾಗಿ ತೊತ್ತಾದಳು.

 

ವರುಷಗಳೆರಡು ಉರುಳಿದವು. ಆರುನೂರು ಅಶ್ವಗಳೇನೋ ಸಿಕ್ಕಿದವು. ಮಿಕ್ಕ ಇನ್ನೂರು ಅಶ್ವಗಳಿಗಾಗಿ ಎಷ್ಟು ಸುತ್ತಿದರೂ ಸಿಗಲೇ ಇಲ್ಲ. ಸರಿ ಇನ್ನೇನು ಮಾಡೋದು. ವಿಶ್ವಾಮಿತ್ರರ ಬಳಿ ಹೋಗಿ ಇದ್ದ ವಿಷಯವನ್ನು ಇದ್ದಂತೆಯೇ ಅರುಹಿದರಾಯ್ತೆಂದು ನಿರ್ಧರಿಸಿ, ಮಾಧವಿಯೊಡಗೂಡಿ ಗಾಲವ ಹೊರಟ. ಆಶ್ರಮ ತಲುಪುವ ಮುನ್ನವೇ ಹೊಳೆಯಿತು ಅವನಿಗೊಂದು ಕಪಟ. ಮೂರು ಮಕ್ಕಳ ಹೆತ್ತರೂ ಇವಳಿನ್ನೂ ಅಕ್ಷತ ಕನ್ಯೆಯಾಗಿಯೇ ಇರುವಳು. ಮಿಕ್ಕ ಇನ್ನೂರು ಕುದುರೆಗಳ ಬದಲಾಗಿ ಇವಳನ್ನೇ ಒಂದು ವರ್ಷದ ಮಟ್ಟಿಗೆ ವಿಶ್ವಾಮಿತ್ರರಿಗೆ ಒಪ್ಪಿಸಿದರೆ ಹೇಗೆ ಎಂದು ಯೋಚಿಸಿದ. ಮುನಿವರ್ಯರ ಬಳಿ ಬಂದು ಅಂತೆಯೇ ಸೂಚಿಸಿದ. ಅಸ್ತು ಎಂದ ಮುನಿ ಮಾಧವಿಯ ಸ್ವೀಕರಿಸಿದರು. ಆಕೆಯ ಬದುಕಲಿ ಬಂದ ನಾಲ್ಕನೆಯ ಪತಿ ಅವರಾದರು.

ಮಾಧವಿ ಅವರ ಬಳಿಯೂ ಒಂದು ವರ್ಷ ಸಂಸಾರ ನಡೆಸಿದಳು. ಅಷ್ಟಕನೆಂಬ ಪುತ್ರನೊಬ್ಬನ ಹಡೆದಳು. ಮರಳಿ ಕನ್ಯೆಯಾಗಿಯೇ ಪಿತಗೃಹವ ಸೇರಿದಳು.

 

            ಸತಿಯಾಗುತ ಪತಿ ಸದನವ ಸೇರಿ …

ಮುದ್ದು ಸುತನ ಪಡೆವೆ…

 

ಅನ್ನುವ ಮಾಧವಿಯ ಆಸೆಯೊಂದು ಹೀಗೆ ಕಮರಿಹೋಯ್ತು. ಗಾಲವನ ಗುರುದಕ್ಷಿಣೆ ಸಲ್ಲಿಸುವ ಹಟ ಮತ್ತು ಪಿತನು ನೀಡಿದ ಭಾಷೆಯ ಉಳಿಸಲು ಮಾಧವಿಯ ಬದುಕು ಹರಿದು ಹಂಚಿಹೋಯ್ತು.

 

ಇಷ್ಟೆಲ್ಲಾ ನಡೆದ ಮೇಲೆ ಯಯಾತಿಗೆ ನಡೆದ ತಪ್ಪಿನ ಅರಿವಾಯ್ತು. ಮಿಂಚಿಹೋಗಿದ್ದಕ್ಕೆ ಚಿಂತಿಸಿ ಏನು ಫಲವಿತ್ತು? ಆದರೂ ಅವನಲ್ಲಿ ದೂರದ ಆಸೆಯೊಂದು ಇನ್ನೂ ಉಳಿದಿತ್ತು. ನಾಲ್ಕು ಮಕ್ಕಳನ್ನು ಹಡೆದರೂ ಈಕೆಯಿನ್ನೂ ಕನ್ಯೆಯಾಗಿಯೇ ಉಳಿದಿಹಳು. ತಾನು ಕಣ್ಮುಚ್ಚುವುದರೊಳಗೆ ಇವಳಿಗೊಂದು ಸ್ವಯಂವರವನ್ನೇರ್ಪಡಿಸಿ, ಮದುವೆ ಮಾಡಿಸುವುದೇ ತನ್ನ ಪಾಪಕ್ಕೆ ಪ್ರಾಯಶ್ಚಿತ್ತವೆಂದು ನಂಬಿದ್ದ. ಅಂತೆಯೇ ದೇಶ-ವಿದೇಶಗಳ ರಾಜ ಮಹಾರಾಜರುಗಳು, ಯಕ್ಷರು-ಗಂಧರ್ವರು-ಕಿನ್ನರರಾದಿಯಾಗಿ ಎಲ್ಲರೂ ನೆರೆದಿದ್ದರು. ಮಾಧವಿ ತನ್ನನೇ ವರಿಸುವಳೆಂದು ಕಾದಿದ್ದರು.

 

ಒಮ್ಮೆ ಯೋಚಿಸಿದಳು ಮಾಧವಿ. ನನಗೆ ಸಿಕ್ಕಿದ ವರದಾನದ ಫಲವಾಗಿ ನಾನಿನ್ನೂ ಕನ್ಯೆಯಾಗಿಯೇ ಉಳಿದಿರುವೆ. ಆದರೆ ಈ ನಡುವೆ ಯಾರೂ ಯೋಚಿಸಲೇ ಇಲ್ಲ. ನನಗೂ ಮನಸ್ಸು ಅನ್ನುವುದೊಂದಿದೆ. ಮತ್ತೆ ಹಸೆಮಣೆಯೇರಲು ನಾನೀಗ ಸಿದ್ಧಳಿಲ್ಲ. ಬಯಸಿದಾಕ್ಷಣ ಬದಲಾಯಿಸಲು ಮನಸೇನು ಬಟ್ಟೆಯಲ್ಲವಲ್ಲ. ನಾಲ್ಕು ವರುಷಗಳ ಪಡಿಪಾಟಲು ಅವಳನ್ನು ಹುರಿದು ಮುಕ್ಕಿ ಹಾಕಿತ್ತು. ಮದುವೆಯ ಆಸೆಯು ಅವಳ ಮನದಲ್ಲಿ ಎಂದೋ ನಶಿಸಿತ್ತು. ಸೂತ್ರದ ಗೊಂಬೆಯಂತೆ ಕುಣಿಸುವ ಈ ಮನುಷ್ಯರ ಕಂಡು ಅವಳ ಮನಸು ರೋಸಿತ್ತು. ಈ ಮನುಷ್ಯರ ನಡುವೆ ಬದುಕುವುದಕ್ಕಿಂತ ಕಾಡೇ ಲೇಸೆನಿಸಿತ್ತು. ಹೆತ್ತ ತಂದೆಯೇ ಮಗಳನ್ನು ಗಾಲವನ ತೊತ್ತನ್ನಾಗಿಸಿ ಕಳಿಸಿದ ಮೇಲೆ ಇನ್ನು ಈ ಜಗತ್ತಿನಲ್ಲಿ ಯಾವ ವಿಶ್ವಾಸದ ಮೇಲೆ ಬದುಕಿರಬೇಕು ಅಂದುಕೊಂಡು, ಎಲ್ಲರೂ ಬಿಡುಗಣ್ಣಾಗಿ ನೋಡುತ್ತಿರುವಂತೆಯೇ ಮಾಧವಿ ಕೈಲಿದ್ದ ಮಾಲೆ ಬಿಸುಟಳು. ಓಡುತ್ತಾ ಹೋಗಿ ಕಾನನದೊಳಗೆ ಸೇರಿಕೊಂಡಳು…

            ಪೆತ್ತಿಹ ಪಿತನ ವಾಕ್ಯವನುಳುಹಲು

            ಸತ್ಯದ ಪಥವಿಂದು,

ಬತ್ತಿದ ಆಸೆ, ಪ್ರೇಮ ಮೋಹವು

ಸತ್ತಿತು ತನಗೆಂದು…

ಮಾಧವಿ ಹೊರಟಳು ಕಾನನಕೆ…..

 

( ಇಲ್ಲಿ ಉಪಯೋಗಿಸಿರುವ ಯಕ್ಷಗಾನದ ಪದಗಳನ್ನು ಹದಿನಾರು ವರ್ಷದ ಹಿಂದೆ ಕೇಳಿದ ನೆನಪಿನ ಅಧಾರದ ಮೇಲೆ ಬರೆದಿದ್ದೇನೆ. ಅದರಲ್ಲಿ ತಪ್ಪಿರಲೂ ಬಹುದು. ತಪ್ಪಿದ್ದರೆ…ನಿಮಗೆ ಗೊತ್ತಿದ್ದರೆ.. ತಿದ್ದಿ ಓದಿ )

 

 

 

ಟಿಪ್ಪಣಿಗಳು
 1. ವಾಣಿ ಶೆಟ್ಟಿ ಹೇಳುತ್ತಾರೆ:

  i have no words…ನಾ ಇಂಥ ಕಥೇನ ಇಂಥಹ ಭಾವದಲ್ಲಿ ಹಿಂದೆಂದೂ ಓದಿದ್ದಿಲ್ಲ..ಶೀರ್ಷಿಕೆಯೇ ಎಷ್ಟು ಸುಂದರವಾಗಿದೆ…ಓದುತ್ತಾ ಹೋದಂತೆ ಉದಿಸುವ ಪ್ರಶ್ನೆಗಳಿಗೆಲ್ಲಾ ಕವಿ ಕಲ್ಪನೆ ಅನ್ನೋ ಉತ್ತರಾನ ನಾವೇ ಕೊಡುತ್ತಾ ಹೋಗಬೇಕಷ್ಟೆ..ಇನ್ನು ಕಥೆಯ ಮಧ್ಯದಲ್ಲಿ ನಡುಗುಡ್ಡೆಯಂತೆ ಸಿಕ್ಕ ಯಕ್ಷಗಾನದ ಪದಗಳಂತೂ ಸೂಪರ್..ನಿಮ್ಮ ನೆನಪಿಗೆ, ಬರವಣಿಗೆಯ ಹದಕ್ಕೆ, ಅದರ ಶೈಲಿಗೆ ಹ್ಯಾಟ್ಸಾಫ್ …

 2. mmaravanthe ಹೇಳುತ್ತಾರೆ:

  ಹೇಳುಕೆ ಎಂತದೂ ಇಲ್ಲ, ಬರಿ ಆಲೋಚನೆ ಮಾಡುದೇ ಅಯ್ತ಼

 3. vijay ಹೇಳುತ್ತಾರೆ:

  ಚೆನ್ನಾಗಿದೆ,.. mahatva purna maahiti..

 4. paranjape ಹೇಳುತ್ತಾರೆ:

  ಕಥೆ ಚೆನ್ನಾಗಿದೆ, ಯಕ್ಷಗಾನ ನೋಡಿದ ಅನುಭವವಾಯ್ತು. ಪುರಾಣ ಕಥೆಗಳನ್ನು ಸಹ ನಾವು ನಮ್ಮ ಇ೦ದಿನ ವಿದ್ಯಮಾನದೊ೦ದಿಗೆ ಥಳಕು ಹಾಕಿ ವಿಶ್ಲೇಷಿಸುವುದು ತಪ್ಪಲ್ಲ. ಸ್ವಾರ್ಥ, ಪ್ರತಿಷ್ಠೆ, ಅಹ೦ಕಾರ, ಇವು ಎಲ್ಲ ಕಾಲದಲ್ಲೂ ಇದ್ದ೦ಥವು. ಅ೦ದಿನ ಮತ್ತು ಇ೦ದಿನ ಪರಿಸ್ಥಿತಿ ಬೇರೆ ಬೇರೆ ಇರಬಹುದು. ಆದರೆ ಮೂಲಭೂತವಾಗಿ ವ್ಯಕ್ತಿಗತ ಸ್ವಭಾವದ ನೆಲೆಯಲ್ಲಿ ಪುರಾಣದ ಕೆಲವು ನಿದರ್ಶನ ಗಳು ಎ೦ದೆ೦ದಿಗೂ ಸಲ್ಲುವ೦ಥವು.

 5. shwetha.m ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ. ಈ ಕಥೆಯ ಬಗ್ಗೆ ಹೇಳುವುದಕ್ಕಿಂತ ವಾಸ್ತವಾಂಶ ಹಂಚಿಕೊಳ್ಳಲು ಬಯಸುತ್ತೇನೆ, ಇದಕ್ಕಿಂತಲೂ ಭಿನ್ನವಲ್ಲದ ಪರಿಸ್ಥಿತಿಯಲ್ಲಿ ನಾವು ಮುಂದುವರಿದಿರುವುದು ಸುಳ್ಳಲ್ಲ, ಕೇವಲ 1000 ರೂ,ಗಳಿಗಾಗಿ ಹೆಂಡತಿಯನ್ನು ಮಾರುವ ಪುರುಷರು ಇರುವ ನಾಗರಿಕ ಸಮಾಜದಲ್ಲಿ ನಾವು ನೀವೇಲ್ಲರು ಬದುಕು ನಡೆಸುತ್ತಿರುವುದು ದುರದೃಷ್ಟಕರ. ಇದು ನಾನು ಕಂಡ ಸತ್ಯ. ನೀವು ಒಪ್ಪುವುದಾದರೆ. ಆ ನಾನು ಕಂಡ ಸತ್ಯವನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುತ್ತೀನಿ

 6. Sathya ಹೇಳುತ್ತಾರೆ:

  Adbutha….. idannu bittare beravude maathu baruttilla.

 7. vijayraj ಹೇಳುತ್ತಾರೆ:

  ನೀಲಾಂಜಲ,

  ಇದ್ರಲ್ಲಿ ಕೋಪ ಮಾಡ್ಕೋಳ್ಳೋ ವಿಷ್ಯ ಏನಿದೆ ಬಿಡಿ. ನಿಮ್ಮ ಅಭಿಪ್ರಾಯ ನೀವು ಹೇಳಿದ್ದೀರ…
  ಆದ್ರೆ ನಂಗೆ ಈ ಜಗತ್ತಿನ ವಿದ್ಯಮಾನಗಳನ್ನು ಕಂಡಾಗ ಅನ್ನಿಸೋದೇನಂದ್ರೆ ಯಯಾತಿ, ಗಾಲವನ ಸಂತತಿ ಇಂದಿಗೂ ಜೀವಂತವಾಗಿದೆ ಅಂತ… ನವ ಮನ್ವಂತರದಿ ಹೊಸ ವೇಷ ತೊಟ್ಟು…

  ಎಷ್ಟು ಜನ ಈ ಜಗತ್ತಲ್ಲಿ ಇದ್ದಾರೋ ಅಷ್ಟು ಅಭಿಪ್ರಾಯಗಳು ಅಲ್ವೇ..
  ನಿಮ್ಮ ಅನಿಸಿಕೆ ಸರಿ ಇರಬಹುದು… ಆದ್ರೆ ಒಂದು ಮಾತು ಮಾತ್ರ ಒಪ್ಪೋಕಾಗೊಲ್ಲ…
  ಮಾತು ಉಳಿಸಿಕೊಳ್ಳೋದು ಅಂದಿಗೂ ಇಂದಿಗೂ ಸ್ವ-ಪ್ರತಿಷ್ಟೆಯ ವಿಷಯಾನೇ…

  ಯಾವುದಕ್ಕೂ ಅನುಪಮಾ ನಿರಂಜನ್ ಬರೆದ ‘ಮಾಧವಿ’ ಪುಸ್ತಕ ನಿನ್ನೆ ತಾನೆ ಅಂಕಿತದಲ್ಲಿ ತಗೊಂಡಿದ್ದಿನಿ. ಅದರ ಅರ್ಧ ಭಾಗ ಒದಿ ಆಯ್ತು.. ತುಂಬಾನೇ ವಿವರಗಳ ಜೊತೆಗೆ ಅದ್ಭುತವಾಗಿದೆ.

  ಕನ್ಯತ್ವ ಸಿಧ್ಧಿಸುವ ವರದ ಕುರಿತು ಅವರೂ ನಿಮ್ಮದೇ ಮಾತನ್ನು ಹೇಳಿದ್ದಾರೆ. ‘ಮೂಲದಲ್ಲಿ ಹಾಗೆ ಇದ್ದರೂ, ಇದು ಕವಿಯ ಅಸಂಗತ ಕಲ್ಪನೆ’ ಹಾಗಾಗಿ ಅದನ್ನು ಕಾದಂಬರಿಯಲ್ಲಿ ಬಳಸಿಲ್ಲ ಅಂದಿದ್ದಾರೆ

  ನಿಮಗೆ ಮಾಹಿತಿ ಕೊಡೋಕೆ ಅಂತ ನಾನು ಆ ಕಾದಂಬರಿ ಓದೋಕೆ ಹೊರಟಿದ್ದಲ್ಲ. ಮಾಧವಿಯ ಬಗ್ಗೆ ಇನ್ನಷ್ಠು ಓದುವ ಕುತೂಹಲ ಅಷ್ಠೇ.

  ಅಭಿಪ್ರಾಯ ಭಿನ್ನತೆಯ ಕುರಿತು ಒಂದು ಚುಟುಕ ಇದೆ.. ಬಹುಶಃ 9ನೇ ಕ್ಲಾಸಲ್ಲಿ ಓದಿದ್ದು… ಬರೆದವರು ದಿನಕರ ದೇಸಾಯಿ ಅಂತ ನೆನಪು…

  ಅವರವರ ಮನದಂತೆ ದೃಷ್ಟಿಯೂ ಬೇರೆ,
  ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ,
  ಚಿಕ್ಕ ಮಕ್ಕಳಿಗೋ ಶಶಿ ಬಾಂದಳದ ಚೆಂಡು,
  ವಿಜ್ಞಾನಿಗಳಿಗೆ ಬರಿ ಕಲ್ಲು ಗುಂಡು

 8. neelanjala ಹೇಳುತ್ತಾರೆ:

  ವಿಜಯ್ ಅವರೇ,
  ಕೋಪ ಮಾಡ್ಕೊಬೇಡಿ
  ನನಗೆ ಈ ‘ಕತೆ’, ಒಂದು ‘ಕತೆ’ಯ ದೃಷ್ಟಿಯಿಂದ ತುಂಬಾನೆ ಇಷ್ಟ ಆಗಿದೆ. ಆದರೆ ನಾನು ಕೇಳಿದ ಸಮಸ್ಯೆ ಕತೆಯ ಬಗ್ಗೆ ಅಲ್ಲಾ.

  ‘ಮಾಧವಿಯ ದೃಷ್ಟಿಕೋನವನ್ನು ಬಿಂಬಿಸಲು’
  ‘ಅದರ ಹಿಂದಿನ ನೀತಿಯೇನು ಅನ್ನೋದನ್ನು ಮಾತ್ರ ಗ್ರಹಿಸಿ’
  ಇವೆರಡನ್ನು ನೀವು (ನಾವೆಲ್ಲರೂ) ಇಂದಿನ ಸಮಾಜದ ಚೌಕಾಟ್ಟಿನಲ್ಲಿ, ಇಂದಿನ ನಂಬಿಕೆಗಳ,
  ಇಂದಿನ ಸತ್ಯಗಳ ಆಧಾರದ ಮೇಲೆ ತಾರ್ಕಿಸುತ್ತಿದ್ದೀರಿ.
  ಅದು ಸರಿಯೇ ಎಂಬುದು ನನ್ನ ಪ್ರಶ್ನೆ.

  “ನಾವ್ಯಾಕೆ ಸಾವಿರ ವರ್ಷಗಳ ಹಿಂದಿನ ಸಮಾಜವನ್ನು ಇಂದಿನ ಸಮಾಜದ ಕಣ್ಣಲ್ಲಿ ನೋಡುತ್ತೇವೆ?”

  ನೀವು ಪುನಃ ‘ಕೊಟ್ಟ ಮಾತಿಗೆ ತಪ್ಪದಿರುವುದು ಅಂದರೆ ತನ್ನ ಸ್ವ-ಪ್ರತಿಷ್ಟೆ ಉಳಿಸಿಕೊಳ್ಲುವುದೇ ಅಲ್ಲವೇ?’
  ಎಂದು ಆಗಿನ ಕಾಲದ ಮೌಲ್ಯವನ್ನು ಇಂದಿನ ಕಾಲದ ವಿಚಾರ (ಮೌಲ್ಯ(?) )ಕ್ಕೆ ಹೋಲಿಸುತ್ತಿದ್ದೀರಿ.

  ‘ಹೊಸ ಅರ್ಥ ಹೊಳೆಯಬಹುದು’ ಇದರ ಬಗ್ಗೆನೇ ನನಗೆ ಆಕ್ಷೇಪ ಇರುವುದು

  ಮತ್ತು
  ನೀವು ’ಕನ್ಯತ್ವ ಸಿದ್ಧಿಸುವ ವರ’ ಏನೆಂದು ನನ್ನ ಸಲುವಾಗಿ ಹುಡುಕಲು ಹೋಗಬೇಡಿ ಮಹಾರಾಯರೇ,
  ನಾನು ನಿಮ್ಮ ಕಾಲು ಎಳೆಯಲು ಹೇಳಿದ್ದು.
  ಇದು ‘ಪುರುಷ’ ಕಲ್ಪನೆ ಎನಿಸಿ ನಗು ಬಂತು, ಅಷ್ಟೇ.

 9. vijayraj ಹೇಳುತ್ತಾರೆ:

  ನೀಲಾಂಜಲ,
  ಪ್ರಸ್ತುತ ಅಂತ ನಾ ಹೇಳಿದ್ದು ಆ ಅರ್ಥದಲ್ಲಿ ಅಲ್ಲ. ಇಂದಿಗೂ ಗಾಲವನಂಥಹ, ಯಯಾತಿಯಂತಹ ಜನ ಕಾಣಸಿಗುತ್ತಾರೆ ಅಂತ.

  ಕೊಟ್ಟ ಮಾತಿಗೆ ತಪ್ಪದಿರುವುದು ಅಂದರೆ ತನ್ನ ಸ್ವ-ಪ್ರತಿಷ್ಟೆ ಉಳಿಸಿಕೊಳ್ಲುವುದೇ ಅಲ್ಲವೇ? ಅದು ಹೇಗೆ ಸ್ವಾರ್ಥಕ್ಕಿಂತ ಭಿನ್ನವಾದೀತು? ಮಾತು ತಪ್ಪಿದರೆ ತನ್ನ ಹೆಸರು ಕೆಡಬಹುದು, ಅದು ಆಗಬಾರದು ಅನ್ನುವ ಸ್ವಾರ್ಥ ಇದೆ ಅಲ್ಲವೇ. ಅಲ್ಲದೆ ಕಥೆಯೊಂದನ್ನು ವಿವಿಧ ದೃಷ್ಟಿಕೋನಗಳಿಂದ ನೋಡಲು ಸಾಧ್ಯ. ಇಲ್ಲಿ ಮಾಧವಿಯ ದೃಷ್ಟಿಕೋನವನ್ನು ಬಿಂಬಿಸಲು ಯತ್ನಿಸಿದ್ದೇನೆ. ಇದನ್ನೇ ಗಾಲವ, ಇಲ್ಲಾ ಯಯಾತಿಯ ಕಣ್ಣಿಂದ ನೋಡಿದಾಗ ಕಥೆಗೆ ಇನ್ನೊಂದೇ ಹೊಸ ಅರ್ಥ ಹೊಳೆಯಬಹುದು.

  ಇನ್ನು ಪುರಾಣಗಳು ಕರ್ಮ ಸಿದ್ಧಾಂತದ ಆಧಾರದ ಮೇಲೆ ನಿಂತಿರುತ್ತವೆ ಅಂತ ಹೇಳಿದ್ದೀರಿ. ಅದು ನಿಜವೇ ಇರಬಹುದು. ಆದರೆ ನಾನಂತೂ ಕರ್ಮ ಸಿದ್ಧಾಂತ, ಪುನರ್ಜನ್ಮಗಳನ್ನು ನಂಬೋಲ್ಲ. ನಂಬುವವರನ್ನು ವಿರೋಧಿಸೋಲ್ಲ. ನಾನು ಪುರಾಣದ ಕಥೆಗಳನ್ನು ಅದರಲ್ಲಿ ಇರುವ ವಿಷಯವಾನು ಗ್ರಹಿಸೋದಕ್ಕೆ ಅಷ್ಟೇ ಓದುತ್ತೀನಿ. ಅದು ಹಿಂದೆ ನಡೆದ ಘಟನೆಗಳ ದಾಖಲೆಗಳೋ ಅಥವಾ ಪ್ರಾಚೀನ ಕವಿಯೊಬ್ಬನ ಕಲ್ಪನೆಯೋ ಅನ್ನುವುದನ್ನು ಪಕ್ಕಕ್ಕಿಟ್ಟು, ಆ ಕಥೆಯು ನಮ್ಮನ್ನು ಎಷ್ಟು ಚಿಂತನೆಗೆ ಹಚ್ಚುತ್ತೆ, ಅದರ ಹಿಂದಿನ ನೀತಿಯೇನು ಅನ್ನೋದನ್ನು ಮಾತ್ರ ಗ್ರಹಿಸಿ ಅರಿವಿನ ಕೋಶಕ್ಕೊಂದು ಪುಟ್ಟ ಮಾಹಿತಿ ಸೇರಿಸಿಕೊಳ್ಳೋದಷ್ಟೇ ನನ್ನ ಉದ್ಧೇಶ.
  ’ಕನ್ಯತ್ವ ಸಿದ್ಧಿಸುವ ವರ’ ಅನ್ನೋದು ಒಂದು ಕವಿ ಕಲಪನೆಯಿರಬಹುದೇನೋ. ಮಾಲ ರಾವ್ ಅವರು ತಿಳಿಸಿದ್ದಾರೆ ಮಾಧವಿಯ ಕುರಿತು ಅನುಪಮಾ ನಿರಂಜನ ಅವರು ಒಂದು ಪುಸ್ತಕ ಬರೆದಿದ್ದಾರಂತೆ. ಇವತ್ತು ಅಂಕಿತಕ್ಕೆ ಹೋಗಿ ಸಿಗುತ್ತಾ ನೋಡ್ಬೇಕು. ಅದರಲ್ಲಿ ಏನಾದರೂ ವಿವರ ಸಿಕ್ಕಿದರೆ ನಿಮಗೆ ಖಂಡಿತಾ ತಿಳಿಸುವೆ
  ವಿಜಯ್ ರಾಜ್

 10. vijayraj ಹೇಳುತ್ತಾರೆ:

  ಗುರು, ಶಿಶಿರ
  ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್…
  ಯೊಗೀಶ್,
  ನೀನು ನೀಡಿದ ಸಲಹೆ ತುಂಬಾ ಚೆನ್ನಾಗಿದೆ…ಮುಂದಿನ ಸಲ ಇಂಥದ್ದೇನಾದ್ರೂ ಬರೆದಾಗ ಟ್ರೈ ಮಾಡ್ತೀನಿ

  ಮಾಲ ಅವರೆ,
  ನನಗೆ ಗೊತ್ತಿರುವ ಪ್ರಕಾರ ಇದು ಒಂದು ಉಪಕಥೆಯಾಗಿ ಮಹಾಭಾರತದಲ್ಲಿ ಬರುತ್ತೆ. ದುರ್ಯೋಧನನ ಬಳಿ ಸಂಧಾನಕ್ಕಾಗಿ ಹೋದಾಗ ಅವನನ್ನು ಕುರಿತು, ಸುಮ್ಮನೆ ಹಟ ಮಾಡಬೇಡ ಗಾಲವನಂತೆ ಅಂತ ಉದಾಹರಣೆ ಕೊಡಲು ಈ ಕಥೆ ಬಳಸಲಾಗಿದೆ. ಆದರೆ ಈ ಕಥೆಯ ’ಕಾಲ’ ಮಹಾಭಾರತಕ್ಕಿಂತ ಹಿಂದಿನದಾದ ಕಾರಣ ಅನ್ಯ ಪುರಾಣಗಳಲ್ಲಿಯೂ ಇದರ ಉಲ್ಲೇಖ ಇರಬಹುದು.
  ಅನುಪಮಾ ನಿರಂಜನ ಅವರು ಬರೆದ ಮಾಧವಿ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಇವತ್ತೇ ಅಂಕಿತಕ್ಕೆ ಹೋಗಿ ಹುಡುಕಿ ಸಿಕ್ಕರೆ ಕೊಂಡು ಓದುತ್ತೇನೆ.

 11. neelanjala ಹೇಳುತ್ತಾರೆ:

  ನೀವು ಹೇಳಿದ್ದು ಸರಿಯೇ,
  ಇಂದಿಗೂ ಪ್ರಸ್ತುತ ಎಂದರೆ ಪಾಪದ ಹುಡುಗಿಯನ್ನು ಅಪ್ಪನಾದವನು ತನ್ನ ಪ್ರತಿಷ್ಟೆಗೋಸ್ಕರ ಪಿಂಪ್ ಗೆ ಮಾರಿ,
  ಆತ ಮೂರು ಜನ ಶ್ರೀಮಂತ ಅಧಿಕಾರಿಗಳಿಗೆ ಹಾಗೂ ಸನ್ಯಾಸಿಯೊಬ್ಬನಿಗೆ ದುಡ್ಡಿಗೋಸ್ಕರ ಮಾರಿದ …… ಹೀಗೆಲ್ಲಾ ಅತಿರೇಕ ಅಂದುಕೊಳ್ಳಲು ನನ್ನ ಕೈನಲ್ಲಿ ಸಾದ್ಯವಿಲ್ಲ.

  ನನಗೆ ತಿಳಿದ ಮಟ್ಟಿಗೆ ಪುರಾಣ ಕತೆಗಳು ಕರ್ಮ ಸಿದ್ದಾಂತದ ಮೇಲೆ ನಿಂತಿರುತ್ತವೆ. ದಿವ್ಯ ದೃಷ್ಟಿಯುಳ್ಳ ಮಹಾಮುನಿ ವಿಷ್ವಾಮಿತ್ರ ಗಾಲವನಿಗೆ ಗುರುದಕ್ಷಿಣೆ ಕೇಳಿದ್ದಕ್ಕೂ,ಅವಳಿಗೆ ಕನ್ಯತ್ವ ಸಿದ್ಡಿಸುವ ವರ ದೊರೆತದ್ದಕ್ಕೂ , ಕೊನೆಯಲ್ಲಿ ಅವಳಿಂದ ಅಷ್ಟಕ ನೆಂಬ ಪುತ್ರನನ್ನು ಪಡೆದಿದ್ದಕ್ಕೂ, ಒಂದು ಉಪ ಕತೆ ಇರಲು ಸಾಧ್ಯ.

  ಕೊಟ್ಟ ಮಾತಿಗೆ ತಪ್ಪದಿರುವುದು-ಸ್ವಾರ್ಥಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

  ಆದರೆ “ಕನ್ಯತ್ವ ಸಿದ್ಧಿಸುವ ವರ” ಏನೆಂಬುದು ಕೊನೆಗೂ ತಿಳಿಯಲಿಲ್ಲ 😉

 12. ಶಿಶಿರ ಕನ್ನಂತ ಹೇಳುತ್ತಾರೆ:

  ನನಗಂತೂ ಈ ಕಥೆ ಓದಿ ಮನಸ್ಸು ತುಂಬಿ ಬಂತು….. ಯಾಕಂದ್ರೆ ನನ್ನ ಸ್ಟುಡೆಂಟ್ ಲೈಫಿನ ಪುಟಗಳು ಕಣ್ಮುಂದೆ ಬಂದವು…. ಶಾಲೆಯಲ್ಲಿ ಕನ್ನಡ ಪಾಠದಲ್ಲಿ ಬರುವ ಕಥೆ ಕೇಳಿದ ಹಾಗೆ ಅನ್ನಿಸಿತು. ತುಂಬ ಥ್ಯಾಂಕ್ಸ್.

 13. ಮಾಲ ರಾವ್ ಹೇಳುತ್ತಾರೆ:

  ಅನುಪಮಾ ನಿರಂಜನ ಬರೆದಿರುವ ‘ಮಾಧವಿ’ ಹೆಸರಿನ ಕಾದಂಬರಿಯದ್ದು ಇದೇ ಕಥೆ
  ಅವರು ಇದರ ಮೂಲವನ್ನು ಯಾವುದೋ ಪುರಾಣದಿಂದ ಆರಿಸಿದ್ದೆಂದು ಬರೆದಿದ್ದಾರೆ

 14. Yogeesha Adiga ಹೇಳುತ್ತಾರೆ:

  kate chennagittu… niroopane ya shaili nanage neene hattiradalli iddu helidante ittu… haagagi idu innobbara jeevanada kate helidante aaytu… haagene yakshaganada prouda bhashe noo balasiddarinda saahityatmaka kate annistu… ide kateyannu madhavi ye niroopaki aagi helidre innu bhavapoornavagirutteno annistu…
  ee comment kate ya niroopane bagge nanna drashtikona ddu… aadru kate chennagi ne barediddiya… keep it up.

 15. guru ಹೇಳುತ್ತಾರೆ:

  viji thumba channagi nirupane madiddiya sakhath ista aytu, gaalava bagge ondu asahya bhaava moodi mareyayithu maraya…

 16. vijayraj ಹೇಳುತ್ತಾರೆ:

  ವಿನಯ ಉಡುಪ ,

  ಗಾಲವ ಅಂದ್ರೆ ಅರ್ಥ ನಂಗೂ ಗೊತ್ತಿಲ್ಲ. ಬಹುಶಃ ಅದು ಮುನಿಯ ಹೆಸರು ಅಂತ ಇಟ್ಟಿರಬಹುದು. ಅದೂ ಅಲ್ದೆ ಇಲ್ಲಿ ಗಾಲವನಿಗಿಂತ ನನಗೆ ಅನ್ನಿಸೋದು ಯಯಾತಿ ದೊಡ್ಡ ಖಳ ಅಂತ.ಗಾಲವನದೂ ತಪ್ಪಿದೆ ಬಿಡಿ. ಆದರೂ ತನ್ನ ಮಾತು ಉಳಿಸಿಕೊಳ್ಳಲು ಮಗಳನ್ನೇ ವಸ್ತು ಅನ್ನೋ ಹಾಗೆ ಕೊಟ್ಟಿದ್ದು ಅಕ್ಷಮ್ಯ ಅಂತ ನನ್ನ ಭಾವನೆ.

 17. ವಿನಯ ಉಡುಪ ಹೇಳುತ್ತಾರೆ:

  ಕತೆ ಬಹಳ ಚೆನ್ನಾಗಿದೆ.. ಹೇಳಿರೋ ರೀತಿನೂ ಅಷ್ಟೆ..
  .
  .
  ಒಂದು ಅಧಿಕ ಪ್ರಸಂಗ.. ಆದರು ಕೇಳ್ತೀನಿ

  ಗಾಲವ ಅಂದ್ರೆ ಅರ್ಥ ಏನು? ಅದು ಈ ತರಹದ ಖಳನಾಯಕನ ಹೆಸರಾದರೆ ಮಾಳವಿಕಾ-

  ಅವಿನಾಶ್ ದಂಪತಿಗಳು ಮಗನಿಗೆ ಆ ಹೆಸರು ಯಾಕಿಟ್ಟಿರಬಹುದು ಅಂತ?

 18. M G Harish ಹೇಳುತ್ತಾರೆ:

  ಈ ಕಥೆಯನ್ನು ಎಲ್ಲೋ ಬಾಲ್ಯದಲ್ಲಿ ಕೇಳಿದ ನೆನಪು. ಆದರೆ ಎಲ್ಲಿ, ಯಾವಾಗ, ಯಾರಿಂದ ಎಂದು ನೆನಪಾಗುತ್ತಿಲ್ಲ.

 19. vijayraj ಹೇಳುತ್ತಾರೆ:

  ಟೀನಾ, ಸೋಮು, ಉಷಾರಾಣಿ, ಗುರುಪ್ರಸಾದ್, ಯಶೋಧ, ರಾಮ್‌ದಾಸ್ ಎಲ್ಲರಿಗೂ ಥ್ಯಾಂಕ್ಸ್.

  ಲೊಡ್ಡೆ,

  ಕಥೆಯ ಮಧ್ಯೆ ಮಧ್ಯೆ ಬರೆದಿದ್ದು ಕವನ ಅಲ್ಲ ಕಣೋ. ನಾ ಕೇಳಿದ ಯಕ್ಷಗಾನದ ‘ಪದ’ಗಳು. ಅದು ಸಾಂದರ್ಭಿಕವಾಗಿ ಕಥೆಗೆ ಇನ್ನೂ ಹೆಚ್ಚು ಒತ್ತು ಕೊಡುತ್ತೆ ಅಂತ ಸೇರ್ಸಿದ್ದೆ- ಕೊಟ್ಟಿದೆ ಕೂಡಾ.

  ನೀಲಾಂಜಲ,
  ಕಥೆ ಹಳೆಯದಾದರೂ ಇಂದಿಗೂ ಪ್ರಸ್ತುತ ಅಂತ ನನ್ನ ಭಾವನೆ. ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಜೀವನದ ಕುರಿತು ಎಳ್ಳಷ್ಟು ಕಾಳಜಿಯೂ ಇಲ್ಲದೆ ಅವರ ಬಾಳಿನಲ್ಲಿ ಆಟವಾಡುವವರು, ತಮ್ಮ ಪ್ರತಿಷ್ಟೆಗಾಗಿ ಮಕ್ಕಳ ಭವಿಷ್ಯ ಬಲಿಕೊಡುವ ತಂದೆತಾಯಿಯರು ಈಗಲೂ ಇಲ್ಲ ಅನ್ನುವಿರಾ?

  ಉಉನಾಶೆ,
  ನನಗೆ ಈ ಕುರಿತು ಹೆಚ್ಚು ಮಾಹಿತಿ ಇಲ್ಲ. ಆ ಪುಸ್ತಕದ ಬಗ್ಗೆ ತಿಳಿದರೆ ಖಂಡಿತಾ ನಿಮಗೆ ತಿಳಿಸುತ್ತೇನೆ

 20. ಉಉನಾಶೆ ಹೇಳುತ್ತಾರೆ:

  ಈ ಕತೆಯನ್ನು ಒಂದು ಕಾದಂಬರಿಯಾಗಿ ಓದಿದ ನೆನಪು. ಕನ್ನಡದ್ದೇ ಕಾದಂಬರಿ. ಬರೆದದ್ದು ಯಾರು ನೆನಪಿಲ್ಲ. ಕಾದಂಬರಿಯ ಹೆಸರು “ಮಾಧವಿ” ಅಂತಲೇ ನೆನಪು.
  ಓದಿದಾಗ ನಾನು ಹೈಸ್ಕೂಲಿನಲ್ಲಿದ್ದೆ. ಆದರೆ ಇನ್ನೂ ಕಾಡುವಂತಹ ಕತೆ.
  ಸಿಕ್ಕರೆ ಮತ್ತೊಮ್ಮೆ ಓದಲೇಬೇಕು.
  ಇತೀ,
  ಉಉನಾಶೆ

 21. neelanjala ಹೇಳುತ್ತಾರೆ:

  ‘kate’ iShTavaayitu.

  Adare navyaake saavira varshagaLa hindina samajavannu indina samaajada kaNNalli nODuttEve?

 22. Ramdas ಹೇಳುತ್ತಾರೆ:

  tUmba Chennagitu kathe. YakshGana Nodidanthe tUmba chennagi barediddiri

 23. Lodde ಹೇಳುತ್ತಾರೆ:

  Vijayanna, chanagide kahte…nin memory super..

  Kathe niroopane madya kavana gala saalugalu ok…but gadyabhagadalli padya praasa ellaa kade astu samanjasavaagirolla annodu nanna abipraaya

  But adbhuta kahe…devranegu munche kelirlilla..

 24. Yashoda ಹೇಳುತ್ತಾರೆ:

  nijakku adbhta kathe, e katheyannu elliyu naanu odiralilla

 25. ಗುರುಪ್ರಸಾದ್ ಸಿ. ಎಂ ಹೇಳುತ್ತಾರೆ:

  ಅಧ್ಬುತ ವಾದ ಒಂದು ಕಥೆ ನನ್ನನ್ನು ಕೆಲ ಕ್ಷಣ ಬೇರೆಯದೇ ಲೋಕಕ್ಕೆ ಕೊಂಡು ಹೋಗಿತ್ತು. ನಿಜಕ್ಕು ದಯನೀಯವಾದ ಸನ್ನಿವೇಶಗಳನ್ನೊಳಗೊಂಡ ಚಿತ್ರಣವನ್ನು ಮನಕಲಕುವಂತೆ ಕಥಾರೂಪದಲ್ಲಿ ವಿವರಿಸಿರುವುದು ವಿಜಯ್ ರವರ ವಿಶೇಷಗಳಲ್ಲೊಂದು.

  ——-

  ಗುರು

 26. usharani ಹೇಳುತ್ತಾರೆ:

  ನಿಜವಾಗಿಯೂ ಮಾಧವಿಯ ಕತೆ ತುಂಬಾ ಚೆನ್ನಾಗಿದೆ, ಕೊನೆಯಲ್ಲಿ ಅವಳು ತೆಗದು ಕೊಳ್ಳುವ ನಿರ್ಧಾರ ಸರಿಯಾದುದು. ಒಮ್ಮೆಯೂ ಕೇಳಿರಲಿಲ್ಲ,

 27. somu ಹೇಳುತ್ತಾರೆ:

  nijakku ee kathe nanage gotte iralilla….adbhuta niroopane..summane odisikondu hogutte…matte maadhavigaagi mana midiyutte…yayaatiyanna kolemaadibiduvashtu…..tumba hidisitu gurugale:).

  nimma
  somu

 28. Tina ಹೇಳುತ್ತಾರೆ:

  ಅಬ್ಬ! ಎಂತಹ ಕಥೆ!! ಈ ಮೊದಲು ಕೇಳಿರಲೇ ಇಲ್ಲವಲ್ಲ!!
  ಎಂತೆಂತಹ ಒಳನೋಟಗಳಿವೆ ಈ ಕಥೆಗೆ.
  ಮಾಧವಿಗಾಗಿ ಮನ ಮಿಡಿಯಿತು. ಯಯಾತಿಯ ಮೇಲೆ ರೋಷವುಕ್ಕಿತು.
  ಮರೆಯಲಾರದಂಥ ಕಥೆ.
  -ಟೀನಾ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s