ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವದ ಮುನ್ನಾದಿನ ಸೋನೆ ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರಿನ ಯಕ್ಷಗಾನಪ್ರಿಯರ ಮನಕ್ಕೆ ರಾತ್ರಿ ಪೂರಾ ತಂಪೆರೆದ ಯಕ್ಷರಸ ಧಾರೆಯ ಒಂದೆರಡು ಹುಂಡುಗಳು. ಎರಡು ಪ್ರಚಂಡ ಯಕ್ಷಗಾನ ಮೇಳಗಳ ಸಮ್ಮಿಲನದಲ್ಲಿ ನಡೆದ ಕೂಡಾಟದ ಮಳೆಯಲ್ಲಿ ಮಿಂದ ಮನಸ್ಸಿನಿಂದ ಆಟ ಮುಗಿದ ಮೇಲೂ ನೆನಪಾಗಿ ತೊಟ್ಟಿಕ್ಕಿದ ರಸ ಬಿಂದುಗಳು. ಯಕ್ಷರಂಗದ ಸಿಡಿಲಮರಿ ಎಂದೇ ಖ್ಯಾತಿವೆತ್ತ ತೀರ್ಥಳ್ಳಿ ಗೋಪಾಲಾಚಾರಿಯವರ ಸುಧನ್ವ, ಅಬ್ಬರದ ಪಾತ್ರಗಳಲ್ಲಿ ಆರ್ಭಟಿಸುವ ಮದನಾರಿಯಾಗುವ ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆ, ತಮ್ಮ ಮನಮೋಹಕ ಕುಣಿತದಿಂದ ರಂಗದಲ್ಲಿ ಸುಳಿಮಿಂಚಿನಂತೆ ಪ್ರಜ್ವಲಿಸಿದ ತೊಂಬಟ್ಟು ವಿಶ್ವನಾಥ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿಯವರ ಕುಶ-ಲವ ಪಾತ್ರ ಇಡೀ ಪ್ರದರ್ಶನದಲ್ಲಿ ಎದ್ದು ತೋರಿದ ಅಂಶಗಳಾಗಿವೆ. ಹಾಗೆಯೇ ರವೀಂದ್ರ ಶೆಟ್ಟಿಯವರ ಸುಶ್ರಾವ್ಯ ಭಾಗವತಿಕೆ ಕೂಡಾ ಇನ್ನೂ ಕಿವಿಯಲ್ಲಿ ಅನುರಣನಗೊಳ್ಳುತ್ತಿದೆ.

 

ಯಕ್ಷಗಾನವೆಂದರೆ ಹಾಡು, ನೃತ್ಯ, ಅರ್ಥಗಾರಿಕೆ, ಗತ್ತು-ಗಾಂಭೀರ್ಯಗಳ ಜೊತೆಗೆ ಕಣ್ಮನ ಸೆಳೆಯುವ ವೇಷ-ಭೂಷಣಗಳ ಮಿಲನ. ಭಾವ-ಭಂಗಿ-ಕುಣಿತ-ಮಾತುಗಾರಿಕೆ-ಹಾಡುಗಳಲ್ಲಿ ನವರಸಗಳೂ ಮೇಳೈಸಿದ ದೃಕ್-ಶ್ರಾವ್ಯ ರಸಾಯನ. ಇಂದು ಇಲ್ಲಿ ನಡೆದಿದ್ದು ಯಕ್ಷರಂಗದ ಎರಡು ದಿಗ್ಗಜ ಮೇಳಗಳಾದ ಪೆರ್ಡೂರು-ಸಾಲಿಗ್ರಾಮಗಳ ಸಮ್ಮಿಲನ. ಸ್ಪರ್ಧೆಯೆಂದಾಕ್ಷಣ ಯಕ್ಷಗಾನದಲ್ಲಿ ವೀರರಸವೇ ಪ್ರಧಾನ. ಅದಕ್ಕೆಂದೇ ಪ್ರದರ್ಶನಕ್ಕೆ ಆರಿಸಲಾಗಿದ್ದು ಸುಧನ್ವಾರ್ಜುನ, ಭೀಷ್ಮ ವಿಜಯ ಮತ್ತು ಕುಶ-ಲವ ಎಂಬ ಮೂರು ಪೌರಾಣಿಕ ಆಖ್ಯಾನ.

 

ಮೊದಲು ರಂಗವೈಭವವನ್ನು ಸಾಕ್ಷಾತ್ಕರಿಸಲು ಬಂದ ಕಥಾನಕ ಪೆರ್ಡೂರು ಮೇಳದವರ ಸುಧನ್ವಾರ್ಜುನ. ರವೀಂದ್ರ ಶೆಟ್ಟಿಯವರ ಅಮೋಘ ಕಂಠಸಿರಿಯನ್ನು ಮೆಚ್ಚಿ, ಇಡೀ ಸಭಾಂಗಣವೇ ನಾದವೈಭವಕ್ಕೆ ತಲೆದೂಗುತ್ತಿತ್ತು. ಅಷ್ಟರಲ್ಲಾಗಲೇ ರಂಗಸ್ಥಳದಲ್ಲಿ ಮಿಂಚಿನ ಸಂಚಾರ. ಸುಧನ್ವನಾಗಿ ರಂಗಕ್ಕಿಳಿದ ತೀರ್ಥಳ್ಳಿ ಗೋಪಾಲಾಚಾರಿಯವರನ್ನು ಸ್ವಾಗತಿಸಿದ್ದು ಕರತಾಡನದ ಜೊತೆಗೆ ಪ್ರೇಕ್ಷಕರ ಹರ್ಷೋದ್ಗಾರ. ತಮ್ಮ ನಯನಮನೋಹರ ನೃತ್ಯ, ವಿದ್ವತ್‌ಪೂರ್ಣ ಮಾತಿನಿಂದ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದ ತೀರ್ಥಳ್ಳಿ, ಏಕಮೇವಾದ್ವಿತೀಯರಾಗಿ ರಂಗದಲ್ಲಿ ಮೆರೆದರು. ತೀರ್ಥಳ್ಳಿಯವರ ಜೊತೆಗೆ ರಂಗಕ್ಕೆ ಬಂದು ಹಿಮ್ಮೇಳಕ್ಕೆ ಸಾಥಿಯಾದ ಕರಾವಳಿ ಗಾನಕೋಗಿಲೆ ಬಿರುದಾಂಕಿತ ಧಾರೇಶ್ವರರ ಕಂಠಸಿರಿಯಿಂದ ಆಟ ಇನ್ನಷ್ಟು ಕಳೆಕಟ್ಟಿತು. ಇಷ್ಟೆಲ್ಲಾ ಇದ್ದರೂ ಕೂಡಾ ಪೆರ್ಡೂರು ಮೇಳದ ಪ್ರದರ್ಶನದಲ್ಲಿ ಹಲವಾರು ನ್ಯೂನ್ಯತೆಗಳಿದ್ದವು. ಸುಧನ್ವನಿಗೆ ಸರಿಮಿಗಿಲಾಗಿ ಆರ್ಭಟಿಸಬೇಕಿದ್ದ ಥಂಡಿಮನೆಯವರ ಅರ್ಜುನ, ಹೊರೆಗೆ ಸುರಿಯುತ್ತಿದ್ದ ಮಳೆಗೆ ಥಂಡಿಹೊಡೆದವರಂತೆ ಮಂಕಾಗಿದ್ದರು. ಸುಧನ್ವನ ಕುಣಿತ-ಮಾತುಗಳ ಎಡೆಯಲ್ಲಿ ಆಕಳಿಸುತ್ತಿದ್ದ ಸಪ್ಪೆ ಅರ್ಜುನ, ತಮ್ಮ ಸವ್ಯಸಾಚಿ ಬಿರುದಿಗೆ ನ್ಯಾಯಸಲ್ಲಿಸಲಿಲ್ಲ ಅನ್ನುವುದು ಕಣ್ಣೆದುರಿಗೇ ಹೊಡೆದು ಕಾಣಿಸುತ್ತಿತ್ತು. ಇನ್ನು ಶಂಕರ ಹೆಗಡೆಯವರ ಪ್ರಭಾವತಿ ಆರಕ್ಕೇರದಿದ್ದರೂ ಮೂರಕ್ಕಿಳಿಯಲಿಲ್ಲ ಅನ್ನುವುದೇ ಸಮಾಧಾನ. ಪ್ರದರ್ಶನದ ಹೈಲೈಟ್ ಅಂದರೆ ಒಂದು ನರ್ತನದಲ್ಲಿ ಸುಮಾರು ಕಾಲು ಗಂಟೆ ಹೊತ್ತು ಚಿಗರೆಮರಿಯಂತೆ ರಂಗದ ಮೇಲೆಲ್ಲಾ ಸುಳಿದಾಡಿ ಗೋಪಾಲಾಚಾರಿ ವಿಜೃಂಭಿಸಿದ್ದು. ಅವರಿಗೆ ತಕ್ಕ ಜೊತೆ ನೀಡಿದ ರವೀಂದ್ರ ಶೆಟ್ಟಿಯವರ ಭಾಗವತಿಕೆಗೂ ಪೂರ್ಣಾಂಕ ಸಲ್ಲಲೇ ಬೇಕು.

 

ಆರಂಭದಲ್ಲಿ ಕಥಾ ನಿರೂಪಣೆಯಲ್ಲಾದ ವೃಥಾ ಎಳೆತದ ಫಲಶ್ರುತಿಯಾಗಿ, ಕೊನೆಯಲ್ಲಿ ಎಷ್ಟೇ ತ್ವರಿತವಾಗಿ ಓಡಿಸಿದರೂ ಕೃಷ್ಣನ ರಂಗ ಪ್ರವೇಶವಾಗುವಾಗಲೇ ನಿಗದಿ ಪಡಿಸಿದ ಮೂರು ಗಂಟೆಯ ಹೊತ್ತು ಮೀರಿ ಹೋಗಿತ್ತು. ಹಾಗಾಗಿ ಅಂತೂ ಇಂತೂ ಮುಗಿಸಿದರೆ ಸಾಕಪ್ಪಾ ಅನ್ನುವ ಹಾಗೆ ಓಡಿಸಿದ ಪರಿಣಾಮವಾಗಿ ಆಟದ ಒಟ್ಟಂದಕ್ಕೆ ಚ್ಯುತಿ ಬಂದಿದ್ದು ಸುಳ್ಳಲ್ಲ. ಅಲ್ಲದೇ ಹಾಸ್ಯಪಾತ್ರ ಇರದೇ ಇದ್ದುದು ಕೂಡಾ ಪ್ರದರ್ಶನದ ಒಟ್ಟು ಪರಿಣಾಮಕ್ಕೆ ಹಿನ್ನಡೆ ಉಂಟುಮಾಡಿದ್ದು ಸುಳ್ಳಲ್ಲ. ಒಟ್ಟಿನಲ್ಲಿ ತೀರ್ಥಳ್ಳಿ, ರವೀಂದ್ರ ಶೆಟ್ಟಿಯವರ ಅಮೋಘ ಪ್ರದರ್ಶನದಿಂದಾಗಿ ಪೆರ್ಡೂರು ಮೇಳದ ಆಟಕ್ಕೆ ಒಂದು ತೂಕ ಬಂದಿತ್ತು.

 

ಇದಕ್ಕೆ ತದ್ವಿರುದ್ಧವಾಗಿ ಸಾಲಿಗ್ರಾಮ ಮೇಳದವರು ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದು ಅವರ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಅವರಾರಿಸಿದ ಪ್ರಸಂಗ ಕೂಡಾ ಅದಕ್ಕೆ ತಕ್ಕುದಾಗಿತ್ತು. ದೂತನಾಗಿ ರಂಗಸ್ಥಳಕ್ಕೆ ಬಂದ ಮಹಾಬಲೇಶ್ವರ್ ಭಟ್ ಕ್ಯಾದಗಿ ತಮ್ಮ ಚಿನಕುರುಳಿ ಮಾತುಗಳಿಂದ ಪ್ರೇಕ್ಷಕರಲ್ಲಿ ನಗೆಯಲೆಯುಕ್ಕಿಸುವಲ್ಲಿ ಸಫಲರಾದರು. ನಂತರ ಅಭಿಮಾನಿಗಳ ಚಪ್ಪಾಳೆಯ ಸ್ವಾಗತದೊಂದಿಗೆ ಸಾಳ್ವನಾಗಿ ರಂಗಪ್ರವೇಶಿಸಿದ ಕಣ್ಣಿಮನೆ, ತಮ್ಮ ಖ್ಯಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಯಶಕಾಣಲಿಲ್ಲ. ಆದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ನ್ಯಾಯ ಒದಗಿಸಿದ್ದಂತೂ ಸತ್ಯ. ನಂತರ ಎಲ್ಲೆಲ್ಲೂ ಸೊಬಗಿದೆ…ಎಲ್ಲೆಲ್ಲೂ ಸೊಗಸಿದೆ… ಮಾಮರವು ಹೂತಿದೆ… ಪದ್ಯಕ್ಕೆ ಹೆಜ್ಜೆ ಹಾಕಿ ಕುಣಿದ ಕಾಶೀರಾಜನ ಕನ್ಯೆಯರ ನೃತ್ಯ, ಬೆಳಕಿನ ಚಿತ್ತಾರದೊಂದಿಗೆ ಕಣ್ಮನ ಸೆಳೆಯಿತು. ರಾಗವೇಂದ್ರ ಮಯ್ಯರ ಭಾಗವತಿಕೆ ಅವರು ತಮ್ಮ ಹಳೇ ವೈಭವವನ್ನು ಕಳೆದುಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿ ಮಧ್ಯ ಮಧ್ಯದಲ್ಲಿ ಸ್ವರ ಕರ್ಕಶವಾಗಿ ಕೇಳಿ ಬರುತ್ತಿತ್ತು. ಆದರೆ ಹೆರಂಜಾಲು ಬಂದ ಮೇಲೆ ಹಿಮ್ಮೇಳದ ದನಿ ಕಿವಿಗಿಂಪಾಗಿ ಕೇಳಿಸುತ್ತಿತ್ತು. ಕಾಶೀರಾಜನ ಸುಪುತ್ರಿಯರ ವಿವಾಹಕ್ಕಾಗಿ ಇಟ್ಟ ವಿಕ್ರಮ ಪಣದ ಪ್ರದರ್ಶನದ ವೇಳೆ ಕೋಟ ಶಿವಾನಂದರು ನಾಲ್ಕು ಚಂಡೆವಾದನಗೈದು ಮೆಚ್ಚುಗೆಗೆ ಪಾತ್ರರಾದರು. ಆದರೂ ಚಂಡೆಯ ದನಿಯ ಏರಿಳಿತಗಳಲ್ಲಿ ಒಂದು ರೀತಿ ಅಸಹಜತೆ ಇದ್ದಂತೆ ಭಾಸವಾಗುತ್ತಿತ್ತು.

 

ಆಗ ರಂಗ ಪ್ರವೇಶಿಸಿದ ಭೀಷ್ಮನ ಪಾತ್ರಧಾರಿ ಯಾಜಿಯನ್ನು ಸ್ವಾಗತಿಸುವಾಗ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ತಮ್ಮ ಎಂದಿನ ಗತ್ತು, ಗಾಂಭೀರ್ಯಗಳಿಂದ, ತೂಕದ ಮಾತುಗಳಿಂದ ಪಾತ್ರದ ಘನತೆಯನ್ನು ಎತ್ತಿ ಹಿಡಿದು ನಿರೀಕ್ಷೆ ಹುಸಿಹೋಗದಂತೆ ನೋಡಿಕೊಂಡರು. ಅಮೇಲೆ ಇಡೀ ಸಭಾಂಗಣದ ಮೂಲೆ ಮೂಲೆಯನ್ನು ಮುಟ್ಟಿದ್ದು ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆಯ ಅಬ್ಬರ. ಧ್ವನಿಯ ಏರಿಳಿತ, ಮುಖದಲ್ಲೇ ಭಾವದ ಅಭಿವ್ಯಕ್ತಿ ಮತ್ತು ಪಾತ್ರಕ್ಕೆ ತಕ್ಕುದಾದ ಅಬ್ಬರ ಇವೆಲ್ಲದರ ಸಮಪಾಕದೊಂದಿಗೆ ಅಂಬೆಯೇ ಇಳಿದುಬಂದಂತಿದ್ದರು. ಅದರಲ್ಲೂ ಶಿಖಂಡಿಯಾಗಿ ಹುಟ್ಟುವ ಪ್ರತಿಜ್ಞೆಗೈಯುವ ಸಂದರ್ಭದಲ್ಲಿ ಅವರ ಆರ್ಭಟ, ಆಕ್ರೋಶ, ಸಿಡಿಗುಂಡಿನಂತಹ ಮಾತುಗಳು… ನಿಜಕ್ಕೂ ಮೈನವಿರೇಳಿಸುವಂತಿತ್ತು. ಇಂತಹ ಉತ್ಕೃಷ್ಟ ಪ್ರದರ್ಶನದ ನೆರವಿನಿಂದ ಪೆರ್ಡೂರು ಮೇಳದ ಪ್ರದರ್ಶನವನ್ನು ಸಾಲಿಗ್ರಾಮದವರು ಮೀರಿನಿಂತರೆಂಬುದನ್ನು ಪೆರ್ಡೂರು ಮೇಳದ ಕಟ್ಟಾ ಅಭಿಮಾನಿಯಾದ ನಾನೂ ಅನುಮೋದಿಸಲೇಬೇಕು.

 

ಬೆಳಗಿನ ಜಾವದ ಕುಶ-ಲವ ಪ್ರಸಂಗವನ್ನು ಪೆರ್ಡೂರು ಸಾಲಿಗ್ರಾಮ ಮೇಳದ ಕಲಾವಿದರು ಹಿಮ್ಮೇಳ ಮುಮ್ಮೇಳಗಳಲ್ಲಿ ಜೊತೆಯಾಗಿ ಆಡಿದ ಕಾರಣ ಇದು ನಿಜಾರ್ಥದಲ್ಲಿ ಕೂಡಾಟ. ಇಲ್ಲೇನಿದ್ದರೂ ಕುಶ-ಲವರದ್ದೇ ಮೆರೆದಾಟ. ಕುಶ-ಲವ ಜೋಡಿಯಾಗಿ ಚಪ್ಪಾಳೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡ ತೊಂಬಟ್ಟು ವಿಶ್ವನಾಥ್ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿ, ಒಬ್ಬರ ಪ್ರದರ್ಶನದಿಂದ ಇನ್ನೊಬ್ಬರು ಸ್ಫೂರ್ತಿ ಪಡೆವವರಂತೆ ಸುಮಾರು ಒಂದು ಗಂಟೆ ಹೊತ್ತು ರಂಗಸ್ಥಳದಲ್ಲಿ ಆಟ ಹುಡಿ ಹಾರಿಸಿ ಕೊಟ್ಟರು. ಇಲ್ಲಿ ತಮ್ಮ ಸುಶ್ರಾವ್ಯ ಹಾಡುಗಳಿಂದ ಪ್ರಸಂಗಕ್ಕೆ ಕಳೆಯೇರಿಸಿದ ಸುರೇಶ್ ಶೆಟ್ಟಿಯವರನ್ನೂ ಕಡೆಗಣಿಸುವಂತಿಲ್ಲ.

 

ಒಟ್ಟಾರೆಯಾಗಿ ಹೇಳುವುದಾದರೆ ಕೂಡಾಟದಲ್ಲಿ ಶ್ರೇಷ್ಟ ಪ್ರದರ್ಶನವಾಗಿ ಸಾಲಿಗ್ರಾಮದವರ ಭೀಷ್ಮ ವಿಜಯ ಹೊರಹೊಮ್ಮಿದರೆ, ಈ ಕೂಡಾಟದ ಸರಣಿ ಶ್ರೇಷ್ಟ ನಿಸ್ಸಂಶಯವಾಗಿ ಶಶಿಕಾಂತ್ ಶೆಟ್ಟಿ. ಇನ್ನು ಆಯಾ ಪ್ರಸಂಗದಲ್ಲಿ ಉತ್ಕೃಷ್ಟ ಅಭಿನಯಕ್ಕೆ ಕ್ರಮವಾಗಿ ಗೋಪಾಲಾಚಾರಿ, ಶಶಿಕಾಂತ ಶೆಟ್ಟಿ ಮತ್ತು ವಿಶ್ವನಾಥ್ ಆಚಾರಿ- ಕೊಳಲಿ ಜೋಡಿಯನ್ನಲ್ಲದೆ ಬೇರೆ ಆಯ್ಕೆಯೇ ಇಲ್ಲ. ಪ್ರಸಂಗ ನೋಡಿ ಹೊರಬಂದ ಬಹುಕಾಲದ ನಂತರವೂ ಇವರೆಲ್ಲರ ಅಭಿನಯ ನೆನಪಾಗಿ ಉಳಿಯುತ್ತದೆ. ಅಂತೆಯೇ ರವೀಂದ್ರ ಶೆಟ್ಟಿ ಹೊಸಂಗಡಿಯವರ ಗಾನ ಮಾಧುರ್ಯ ಕೂಡಾ. ಪೌರಾಣಿಕ ಪ್ರಸಂಗಗಳು ತಮ್ಮ ಜನಪ್ರಿಯತೆಯನ್ನು ಕಳಕೊಂಡಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿತ್ತು ವರುಣನ ಮುನಿಸಿನ ನಡುವೆಯೂ ಅಲ್ಲಿ ಸೇರಿದ್ದ ಯಕ್ಷಾಭಿಮಾನಿಗಳ ಸಂದೋಹ. ಚಲಚಿತ್ರಗಳನ್ನು ಯಕ್ಷಗಾನವನ್ನಾಗಿಸಿ ಇಲ್ಲದ ಗಿಮಿಕ್‌ಗಳ ಮೂಲಕ ತಾವು ಯಕ್ಷಗಾನದ ಕ್ರಾಂತಿಪುರುಷ ಅನ್ನುವ ಭ್ರಮೆಯಲ್ಲಿರುವ ದೇವದಾಸ್ ಈಶ್ವರಮಂಗಲರಂತವರಿಗೆ ಇದು ಅರ್ಥವಾದೀತೇ…? ಸಂದೇಹ !!

 

                        …… ಯಕ್ಷಗಾನಂ ಗೆಲ್ಗೆ……

ಟಿಪ್ಪಣಿಗಳು
 1. Subbhushetty ಹೇಳುತ್ತಾರೆ:

  Laik madi bardiri marre olle ith …! Nanu Pedoor melada appata abhimani …!!

 2. vijayraj ಹೇಳುತ್ತಾರೆ:

  ಸಂತು,
  ನಾನು ಹೊಸತನವನ್ನು ವಿರೋಧಿಸುವುದಿಲ್ಲ. ಆದರೆ ಎಲ್ಲಾ ಪ್ರಸಂಗಗಳನ್ನು ಆ ವರ್ಷ/ಹಿಂದಿನ ವರ್ಷದ ಸಿನೆಮಾದ ಕಾಪಿ ಮಾಡುತ್ತಾ ಹೋದರೆ ಅವರ ಕ್ರಿಯೇಟಿವಿಟಿ ಏನು ಉಳಿತು?
  ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ…ಹೊಸತನ ಬೇಕು…ಆದ್ರೆ ಊಟಕ್ಕಿಂತ ಉಪ್ಪಿನಕಾಯಿಯೇ ಜಾಸ್ತಿ ಅನ್ನೋ ಹಾಗೆ ಗಿಮಿಕ್‌ಗಳೇ ಎಲ್ಲವೂ ಆಗಿ ಬಿಟ್ರೆ ಮಾತ್ರ ಕಷ್ಟ.

  ಈಗ ಆಪ್ತಮಿತ್ರವನ್ನು ಆಧರಿಸಿ ಮಾಡಿದ ನಾಗವಲ್ಲಿ ಪ್ರಸಂಗ ಯಕ್ಷಗಾನಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಿತ್ತು. ಅದರೆ ಅದೇ ಮುಂಗಾರು ಮಳೆಯನ್ನು ಪ್ರೇಮಾಭಿಷೇಕ ಅನ್ನೋ ಹೆಸರಲ್ಲಿ ತಂದದ್ದು ಅಥವ ರಕ್ತ ಕಣ್ಣೀರು ಸಿನೆಮಾವನ್ನು ಪೆರ್ಡೂರಿನವರು ದೇವದಾಸ್ ಈಶ್ವರಮಂಗಲ ನೇತೃತ್ವದಲ್ಲಿ ತಂದರೆ…ಅದಕ್ಕೆ ಪ್ರತಿಯಾಗಿ ಸಾಲಿಗ್ರಾಮದವರು ’ರಕ್ತಕಣ್ಣೀರು, ಜೋಗಿ ಮತ್ತು ತಮಿಳಿನ ಅನ್ನಿಯನ್’ ಮೂರೂ ಚಿತ್ರ ಸೇರಿಸಿ ರಮೇಶ್ ಬೇಗಾರ್ ಸಾರಥ್ಯದಲ್ಲಿ ಹೆಣೆದ ರಕ್ತಕಂಬನಿಯನ್ನಾಗಲಿ ಯಕ್ಷಗಾನ ಅಂತ ಒಪ್ಪಿಕೊಳ್ಳೋಕೆ ಕಷ್ಟ. ಏನಂತೀರ?

 3. ಸಂತು ಹೇಳುತ್ತಾರೆ:

  ದೇವದಾಸ್ ಈಶ್ವರಮಂಗಲರ ’ಮಳೆ” ತರಹದ ಪ್ರಯೋಗಗಳು ತೀರಾ ಅತಿಯಾಯಿತು ಅಂತ ನನಗೂ ಅನ್ಸುತ್ತೆ (ನಾನ್ ಆ ಪ್ರಸಂಗ ನೋಡ್ಲಿಲ್ಲ). ಆದ್ರೆ ಯಕ್ಷಗಾನದಲ್ಲಿ ಹೊಸತೆ ಬ್ಯಾಡ ಅಂಬುದು ಸಹ ಇನ್ನೊಂದ್ ಅತಿ ಅಲ್ಯಾ? ’ಹೊಸತು’ ಗಟ್ಟಿಯಾಗಿದ್ರೆ ಉಳ್ಕಣತ್ತ್, ಟೊಳ್ಳಾದ್ರೆ ತೇಲ್ಕ್ ಹೋತ್ತ್.

 4. Shishir ಹೇಳುತ್ತಾರೆ:

  sidilu, gudugu keli namma maneya aatada nenapaaytu…..

 5. Yogeesha Adiga ಹೇಳುತ್ತಾರೆ:

  olle review bardiddiyalla… aatada gara kke hogibandahaage aaytu… kalavidara bagge bareda vimarshe chennagide.

 6. sriprakash ಹೇಳುತ್ತಾರೆ:

  Olle baraha.Shashikant shetty yavara abhinaya nOdabekeniside.Hosa kalavidara bagge nanage arivilla.
  nanu saha yakshagana premi. Olle aata nOdi bahaLa varshagaLagive.

  Regards
  Shree

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s