ಕ್ರಿಕೇಟ್ ಪ್ರೇಮಿಗಳಿಗೆಲ್ಲರಿಗೂ ಚಿರಪರಿಚಿತ ಈ ನೆಲ್ಸನ್ ನಂಬರ್. ಸ್ಕೋರ್ 111 ಆದಾಗ ಡೇವಿಡ್ ಶೆಫರ್ಡ್ ಕುಪ್ಪಳಿಸುತ್ತಿದ್ದ ಚಿತ್ರವೂ ಕಣ್ಣಿಗೆ ಕಟ್ಟಿದಂತಿದೆಯಲ್ಲವೇ? ಈ ನಂಬರಿನ ವೈಶಿಷ್ಟ್ಯವಾದರೂ ಏನು? ಯಾಕೆ ಇದು ಅನ್ಲಕ್ಕಿ?
ಕೆಲವರು ಪ್ರತಿಪಾದಿಸುವ ಪ್ರಕಾರ ‘ಈ ನಂಬರ್ನೊಂದಿಗೆ ಜೋಡಿಸಲ್ಪಡುವ ನೆಲ್ಸನ್ ಅನ್ನುವಾತ – ಬ್ರಿಟಿಷ್ ಸೇನೆಯಲ್ಲಿದ್ದ ವೈಸ್ ಅಡ್ಮಿರಲ್ ನೆಲ್ಸನ್. ಅವನಿಗೆ ಕೇವಲ ಒಂದು ಕಣ್ಣು, ಒಂದು ಕೈ, ಒಂದು ಕಾಲು ಮಾತ್ರ ಇತ್ತು. ಹಾಗಾಗಿ ಅವನ ದುರಾದೃಷ್ಟದ ಸಂಕೇತವಾಗಿ ಅದನ್ನು ಸೂಚಿಸಲು 111 ಬಳಸುವ ಕ್ರಮ ಮೊದಲುಗೊಂಡಿತು.’ ಆದರೆ ವಾಸ್ತವದಲ್ಲಿ ನೆಲ್ಸನ್ಗೆ ಒಂದು ಕಣ್ಣು ಒಂದು ಕೈ ಇಲ್ಲವಾಗಿದ್ದರೂ ಕೂಡಾ ಅವನ ಎರಡೂ ಕಾಲುಗಳು ಸರಿಯಿದ್ದವಂತೆ.
ಇನ್ನೊಂದು ಮೂಲದ ಪ್ರಕಾರ ನೆಲ್ಸನ್ ಗೆದ್ದ ಮೂರು ನೌಕಾಪಡೆಯ ಯುದ್ಧಗಳ (ಕೋಪನ್ಹೇಗನ್, ನೈಲ್, ಟ್ರಫಾಲ್ಗರ್) ಗೌರವಾರ್ಥ “won-won-won” ಅನ್ನುವುದನ್ನು ಸಾಂಕೇತಿಕವಾಗಿ 111 ಅಂತ ಬಳಸಲಾಯ್ತು. ಕ್ರಮೇಣ ಇದು ಅನ್ಲಕ್ಕಿ ಅನ್ನುವ ಮೂಢನಂಬಿಕೆ ಇದರೊಂದಿಗೆ ಸೇರಿಕೊಂಡಿತು.
ಇನ್ನೂ ಒಂದು ವಾದವಿದೆ. ‘111 ಅನ್ನುವ ಸಂಖ್ಯೆ ಬೇಲ್ಸ್ ಇಲ್ಲದ ಮೂರು ಸ್ಟಂಪ್ಗಳನ್ನು ಸೂಚಿಸುತ್ತದೆ. ಅದು ವಿಕೇಟ್ ಉರುಳುವ ಸಂಕೇತ ಅಂತ’ ಅಂತ ಹೇಳುತ್ತದೆ ಈ ವಾದ. ಏನೇ ಇರಲಿ 111 ಅನಿಷ್ಟದ ಸಂಕೇತ ಅನ್ನುವ ನಂಬಿಕೆ ಅದು ಹೇಗೋ ಬಹುತೇಕರಲ್ಲಿ ಮನೆಮಾಡಿದೆ. ಜೊತೆಗೆ 222– ಡಬಲ್ ನೆಲ್ಸನ್, 333- ಟ್ರಿಪಲ್ ನೆಲ್ಸನ್… ಹೀಗೆ ಇವೂ ಕೂಡಾ ದುರದೃಷ್ಟ ತರುತ್ತದೆ ಅಂತ ಬಲವಾಗಿ ನಂಬುವವರಿದ್ದಾರೆ. ಸ್ಕೋರ್ ನೆಲ್ಸನ್ ನಂಬರನ್ನು ದಾಟುವವರೆಗೂ ಒಂಟಿ ಕಾಲಲ್ಲಿ ನಿಂತರೆ ಅಶುಭ ಸಂಭವಿಸದು ಅನ್ನುವ ನಂಬಿಕೆಯೇ ಶೆಫರ್ಡ್ ಕುಪ್ಪಳಿಸುವುದರ ಹಿಂದಿನ ರಹಸ್ಯ.
ಆಸ್ಟ್ರೇಲಿಯನ್ ಕ್ರಿಕೇಟ್ನಲ್ಲಿ 87ನ್ನು ಡೆವಿಲ್ಸ್ ನಂಬರ್ ಎಂದು ಕರೆಯುತ್ತಾರೆ. ಇದು 100 ರನ್ಗಳಿಗೆ 13 ರನ್ ಕಡಿಮೆ ಇರುವುದರಿಂದ , 13 ಅನ್ನುವುದು ದುರಾದೃಷ್ಟದ ಸಂಖ್ಯೆ ಅಂತ ಅವರು ಭಾವಿಸುವುದೇ ಈ ನಂಬಿಕೆಯ ಹಿಂದಿನ ಮರ್ಮ.
ಒಟ್ಟಿನಲ್ಲಿ ಈ ನೆಲ್ಸನ್ ನಂಬರ್, ಡೆವಿಲ್ಸ್ ನಂಬರ್ ದುರದೃಷ್ಟ ತರುತ್ತೋ ಅಥವಾ ಆ ಭೀತಿಯಿಂದಲೇ ವಿಕೇಟ್ ಉರುಳುತ್ತೋ, ನೋಡುವವರಿಗಂತೂ ಇದನ್ನು ನಂಬುವವರ ಕುಣಿದಾಟ ನಗು ತರಿಸುತ್ತೆ.
ಡೇವಿಡ್ ಷೆಪರ್ಡ್ರಿಗೆ ‘ಹಾಗೆ ಕುಪ್ಪಳಿಸಬೇಡಿ’ ಎಂದು ಫೀಲ್ಡಿಂಗ್ ಮಾಡುತ್ತಿದ್ದ ತಂಡದವರು ಯಾರಾದರೂ ಹೇಳಿದ್ದುಂಟೆ? 😀