Archive for ಆಗಷ್ಟ್ 29, 2008

ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ…

 

 

ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ..

ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ

ಯಾರೂ ನಂಬಲ್ವೇ !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ

ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ

 

-.-.-.-.-.-.-.-.-.-.-.-.-.–.-.-.-.-.-.-.-.-

 

ಬಹಳ ದೂರ ನೀ ಹೋಗಿಬಿಟ್ಟೆ

ಹಿಂದಿರುಗಿ ಬರಲಾಗದಷ್ಟು…

ಬೇಸರವಾಗಿದ್ದು ಅದಕ್ಕಲ್ಲ

ಬದಲಾಗಿ ಬಿಟ್ಟೆಯಲ್ಲ ನೀ

ಹಿಂದಿರುಗಿ ನೋಡಲೂ ಆಗದಷ್ಟು..!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಚರಿತ್ರೆ ಮರುಕಳಿಸುತ್ತೆ ಅನ್ನೋ ಮಾತನ್ನು ನಂಬಿ

ಖುಶಿಯಿಂದ ಕಾಯುತ್ತ ಕುಳಿತಿದ್ದೆ

ನೀ ಮತ್ತೆ ಸಿಗಬಹುದೆಂದು…

ಆದರೀಗ ಯಾಕೋ ದಿಗಿಲಾಗುತ್ತಿದೆ ನೆನಪಾಗಿ

ನೀ ಕಳೆದು ಹೋಗಿದ್ದು ಕೂಡಾ

ಅದೇ ಚರಿತ್ರೆಯ ಭಾಗವೆಂದು !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಮೌನದ ನುಡಿ ನಿನಗೆ ಕೇಳಿಸಲೇ ಇಲ್ಲ,

ಮಾತಡೋಕೆ ನಂಗೂ ಧೈರ್ಯ ಇರಲಿಲ್ಲ

ಈಗ ಧೈರ್ಯವೇನೋ ಬಂದಿದೆ…

ಆದ್ರೆ ಮಾತಾಡೋಕೆ ಏನೂ ಉಳಿದೇ ಇಲ್ಲ!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಸದಾ ನೀ ಜೊತೆಯಾಗಿರು ಅಂತ ಪ್ರಾರ್ಥಿಸಿದ್ದೆ

ಯಾವುದೋ ದೇವತೆ ಅಸ್ತು ಅಂದಿರಬೇಕು

ಈಗ ಮರೆಯಬೇಕೆಂದುಕೊಂಡರೂ ಸದಾ

ನಿನ್ನ ನೆನಪಾಗೋದು ಅದಕ್ಕೇ ಇರಬೇಕು

ಇವತ್ತು ಅಂದ್ರೆ 29 ಆಗಸ್ಟ್ ಶುಕ್ರವಾರ ರಾತ್ರಿ 10:30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪೌರಾಣಿಕ ಯಕ್ಷಗಾನ ಪ್ರಿಯರಿಗೆ ಹಬ್ಬದೂಟವಿದೆ. ಮೂರು ಪೌರಾಣಿಕ ಪ್ರಸಂಗಗಳನ್ನು ರಂಗವೈಭವದಲ್ಲಿ ಸಾಕ್ಷಾತ್ಕರಿಸಲಿರುವರು. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು

            ಬಬ್ರುವಾಹನ

            ಕಾರ್ತವೀರ್ಯಾರ್ಜುನ

            ಮಾಯಾಬಜಾರ್

 

ಇವತ್ತಿನ ಪ್ರದರ್ಶನದ ವಿಶೇಷ ಆಕರ್ಷಣೆಗಳು ಇಂತಿವೆ

 

ಬಬ್ರುವಾಹನನಾಗಿ ತೀರ್ಥಳ್ಳಿ ಗೋಪಾಲಾಚಾರಿ

ಚಿತ್ರಾಂಗದೆ – ನೀಲ್ಕೋಡು ಶಂಕರ ಹೆಗಡೆ

ಕಾರ್ತವೀರ್ಯ – ವಿದ್ಯಾಧರ ಜಲವಳ್ಳಿ

ರಾವಣ – ಥಂಡಿಮನೆ ಶ್ರೀಪಾದ್ ಭಟ್

ಬಲರಾಮ – ಆರ್ಗೋಡು ಮೋಹನದಾಸ ಶೆಣೈ

ಘಟೋತ್ಕಜ – ಜನಾರ್ಧನ ಗುಡಿಗಾರ್

ಅಭಿಮನ್ಯು – ಕೊಳಲಿ ಕೃಷ್ಣ ಶೆಟ್ಟಿ

ಕೃಷ್ಣ – ತೀರ್ಥಳ್ಳಿ ಗೋಪಾಲಾಚಾರಿ

 

ಜೊತೆಗೆ ನೀಲಗಗನ… ಪದ್ಯಕ್ಕೆ ಧಾರೇಶ್ವರ್-ಸುರೇಶ್ ಶೆಟ್ಟಿ ದ್ವಂದ್ವ ಹಾಡುಗಾರಿಕೆಯ ಪೈಪೋಟಿ ಇದೆ.

 

ಇದಲ್ಲದೆ, ಪೆರ್ಡೂರು ಮೇಳದಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಶೆಟ್ಟಿಯವರ ಅಭಿನಂದನಾ ಸಮಾರಂಭದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಭಾನುವಾರ ಆಗಸ್ಟ್ 31ರಂದು ಮಧ್ಯಾಹ್ನ 3 ಗಂಟೆಯಿಂದ ಮತ್ತೆರಡು ಪೌರಾಣಿಕ ಪ್ರಸಂಗಗಳು ರಂಗದ ಮೇಲೆ ವಿಜೃಂಭಿಸಲಿವೆ. ಪ್ರಸಂಗಗಳು

            ಶ್ರೀ ರಾಮಾಂಜನೇಯ

            ಚಂದ್ರಾವಳಿ ವಿಲಾಸ

ನಾನಂತೂ ಈಗಲೇ ಹೊರಡಲು ತುದಿಗಾಲಲ್ಲಿ ನಿಂತಿದ್ದೇನೆ. ನಿಮಗೂ ಆಸಕ್ತಿಯಿದ್ದಲ್ಲಿ ನೀವೂ ಬಂದು ನೋಡಿ ಆನಂದಿಸಿ ಅಂತ ಈ ಸುದ್ದಿ ಹೇಳುತ್ತಿದ್ದೇನೆ. ನಮ್ಮ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ನಾವೆಲ್ಲರೂ ಆಸ್ವಾದಿಸೋಣ-ಪ್ರೋತ್ಸಾಹಿಸೋಣ