ಮನಸಿನ ಮರ್ಮರದಲ್ಲಿ ನಾನು ಬರೆಯುತ್ತಿರುವ ನೂರನೇ ಲೇಖನವಿದು. ಸರಿಯಾಗಿ ಆರು ತಿಂಗಳ ಹಿಂದೆ ಮಾರ್ಚ್ 24ರಂದು ಮನಸಿನ ಗರ್ಭದಲ್ಲಿದ್ದ ಮಾತುಗಳು ಶಿಶುವೊಂದು ಅಕ್ಷರರೂಪದಲ್ಲಿ ಬ್ಲಾಗಿನಂಗಳದಲ್ಲಿ ಜನ್ಮತಾಳಿತ್ತು. ಆರು ತಿಂಗಳೆಂದರೆ ಮಗು ಅಂಬೆಗಾಲಿಡಲು ಶುರು ಮಾಡುವ ಮುಂಚಿನ ಕಾಲ. ಈ ಅವಧಿಯಲ್ಲಿ ಮಗು ತೆವಳುತ್ತಾ, ಹೊರಳಾಡುತ್ತಾ ನೂರು ಲೇಖನಗಳ ಹೊಸ್ತಿಲು ದಾಟಿದ್ದಕ್ಕೆ ಇವತ್ತು ಪಾಯಸ ಮಾಡಬೇಕೋ ಏನೋ
ನೂರು ಲೇಖನಗಳನ್ನೇನೋ ಬರೆದದ್ದಾಯ್ತು. ಮಕ್ಕಳು ಏನು ಮಾಡಿದ್ರು ಚೆಂದ ಅನ್ನುತ್ತಾರಲ್ಲ ಆ ರೀತಿ ನಿಮ್ಮಲ್ಲನೇಕರು ನನ್ನ ಬರವಣಿಗೆಯ ಶಿಶುವಿನ ಬಾಲಲೀಲೆಗಳನ್ನು ಮೆಚ್ಚಿದ್ದೀರಿ. ಬ್ಲಾಗ್ ಲೋಕದ ದಿಗ್ಗಜರ ಎಡೆಯಲ್ಲಿಯೂ ನನ್ನ ಬ್ಲಾಗಿಗೂ ಒಂಚೂರು ಜಾಗ ಕೊಟ್ಟಿದ್ದೀರಿ. ನಿಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ಪ್ರತಿಕ್ರಿಯೆಗಳ ರೂಪದಲ್ಲಿ ನೀಡಿ ಹುರಿದುಂಬಿಸಿದ್ದೀರಿ. ಈ ಪ್ರೋತ್ಸಾಹ ಮುಂದೆಯೂ ಜಾರಿಯಲ್ಲಿರುವ ವಿಶ್ವಾಸ ನನಗಿದೆ. ನಾನು ಇಷ್ಟೆಲ್ಲ ಬರೆಯುತ್ತೇನೆಂದು ಎಣಿಸಿರಲಿಲ್ಲ ಮುಂತಾದ ಕ್ಲೀಷೆಯ ಮಾತುಗಳೆಲ್ಲ ಬದಿಗಿರಲಿ ಬಿಡಿ. ಬ್ಲಾಗಿನಲ್ಲಿ ನಿಮಗೇನು ಇಷ್ಟವಾಯ್ತು, ಏನು ಇಷ್ಟವಾಗಲಿಲ್ಲ, ಏನೇನು ವಿನೂತನ ಪ್ರಯೋಗಗಳನ್ನು ಮಾಡಬಹುದು, ಯಾವ ರೀತಿಯ ಬರವಣಿಗಳು ಇದ್ದರೆ ಚೆಂದ… ಹೀಗೆ ನಾಲ್ಕು ಮಾತು ಹೇಳಿದ್ರೆ ತುಂಬಾ ಒಳ್ಳೇದಿತ್ತು.
ಬ್ಲಾಗೊಂದರಲ್ಲಿ ನೂರು ಬರಹಗಳು ಬರುವುದು ತೀರಾ ಹೇಳಿಕೊಳ್ಳುವಂತ ಮಹತ್ಸಾಧನೆಯೇನೂ ಅಲ್ಲವೆಂಬ ಸ್ಪಷ್ಟ ಅರಿವು ನನಗಿದೆ. ಆದರೆ ಬದುಕಲ್ಲಿ ಹೀಗೆ ಸಣ್ಣ-ಪುಟ್ಟ ಸಂಭ್ರಮಗಳನ್ನು ಆಸ್ವಾದಿಸಿ ಖುಷಿಯಾಗಿರಲು ನಯಾ ಪೈಸಾ ಖರ್ಚಿಲ್ಲದಿರುವಾಗ ನಿಮ್ಮೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳೋ ಆಸೆಯಿಂದ ಇದನ್ನೆಲ್ಲ ಬರೆಯಲು ಹೊರಟೆ. ಅಲ್ಲದೆ ಇಲ್ಲಿನ ಲೇಖನಗಳು ಎಷ್ಟು ಮಾಹಿತಿಪೂರ್ಣವಾಗಿವೆ, ಮುದನೀಡುವಂತಿದೆ ಅನ್ನೋದೆ ಯಶಸ್ಸಿನ ನಿಜವಾದ ಮಾನದಂಡ ಎಂಬ ಎಚ್ಚರಿಕೆ ಕೂಡಾ ಇದೆ. ಹಾಗಾಗಿ ನಿಮಗನ್ನಿಸಿದ್ದನ್ನು ನೇರವಾಗಿ, ಯಾವ ಸಂಕೋಚವು ಇಲ್ಲದೆ ತಿಳಿಸಿದರೆ, ಹಾಗೆ ಬರೆಯುವಂತೆ ಪ್ರಯತ್ನವನ್ನು ಮಾಡುವ ಉತ್ಸಾಹವಂತೂ ನನ್ನಲ್ಲಿದೆ.
ಈ ಪಯಣದಲ್ಲಿ ಇನ್ನೂ ಹೆಚ್ಚು ಹೆಚ್ಚು ಬರೆಯುವಂತೆ ಪ್ರೋತ್ಸಾಹ ನೀಡಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ವಿಶೇಷವಾಗಿ ನನ್ನ ಬರವಣಿಗೆಯನ್ನು ಮೆಚ್ಚಿ ಪ್ರತಿಕ್ರಿಯೆಯನ್ನು ನೀಡಿದ ಭಾಗ್ವತ್ರು, ವಿಕಾಸ್, ಸುಶ್ರುತ, ಹರೀಶ್, ಸೋಮು, ಶ್ರೀನಿಧಿ, ಚೇತನಾ, ಟೀನಾ, ನೀಲಾಂಜಲ, ಮಾಲಾರಾವ್, ನಾವಡ, ಮಣಿಕಾಂತ್, ರಂಜಿತ್, ಸಂದೀಪ್ ಕಾಮತ್, ಚಿತ್ರಾ, ಸುನಾಥ್, ಅರೇಹಳ್ಳಿ ರವಿ, ಗಣೇಶ್, ಶಾನಿ, ಶಂಕರ್, ಜೋಮನ್, ವಿಶಾಲ್, ಭೀಮೇಶ್, ಸಂತು, ವಿಶಾಲಮತಿ, ಹೊಳ್ಳ, ಶಿಶಿರ, ರಾಜಣ್ಣ, ಮಯ್ಯ, ಯೊಗೀಶ, ಗುರುಪ್ರಸಾದ್, ಗುರು, ಸುನಿಲ್, ರಘು, ಸುಹಾಸ್, ವಿಮಲ ನಾವುಡ, ಯೋಗಾನಂದ, ಶ್ರೀಪ್ರಕಾಶ್, ಸತ್ಯ, ಲಕ್ಷ್ಮಿಕೃಷ್ಣ, ಅನುಪಮ, ಆನಂದ್,ಶ್ರೀರಾಮ್, ವಿನಯ ಉಡುಪ, ಯು.ಎನ್.ಶೆಟ್ಟಿ, ಲೊಡ್ಡೆ, ಯಶೋದ, ಉಶಾರಾಣಿ,ಸ್ವಾಮಿ, ವಿಘ್ನೇಶ್, ರವೀಂದ್ರ ಭಟ್, ವಿಜಯ್ ಕುಮಾರ್, ಜಗದೀಶ್…..ಹೀಗೆ ಪಟ್ಟಿ ಇನ್ನೂ ಉದ್ದಕ್ಕಿರುವುದರಿಂದ ಸರ್ವರಿಗೂ… ಹಾಗೂ ವರ್ಡ್ಪ್ರೆಸ್ನ ‘ಸರ್ವರ್’ಗೂ ನನ್ನ ಧನ್ಯವಾದ.
ನನ್ನ ಎರಡೂ ಬ್ಲಾಗ್ ಬಗ್ಗೆ ಬರೆದ ಕೆಂಡಸಂಪಿಗೆ, ನನ್ನ ‘ಕುಂದಾಪ್ರ ಕನ್ನಡ’ ಬ್ಲಾಗ್ ಪರಿಚಯಿಸಿದ ಅವಧಿ, ಕನ್ನಡ ಪ್ರಭ ಗಳಿಗೆ ನೂರರ ಸಂಭ್ರಮದ ಸಾವಿರ ನಮನ
ಈ ಬರಹ ಬರೆಯುವ ಹೊತ್ತಿನಲ್ಲಿ ಇಲ್ಲಿನ ಬರಹಗಳು 5989ಕ್ಕೂ ಹೆಚ್ಚು ಸಲ ಓದಲ್ಪಟ್ಟಿವೆ. ಇದು ಇನ್ನೂ ಹೆಚ್ಚು ಜನರನ್ನು ಮುಂಬರುವ ದಿನಗಳಲ್ಲಿ ತಲುಪುತ್ತದೆ ಎನ್ನುವ ನಿರೀಕ್ಷೆ, ತಲುಪಬೇಕೆಂಬ ಆಸೆ ಎರಡೂ ಇದೆ.
ಮುಗಿಸುವ ಮುನ್ನ ನನ್ನ ನೂರು ಬರಹಗಳಲ್ಲಿ ನನಗೆ ಇಷ್ಟವಾದ / ತೃಪ್ತಿಕೊಟ್ಟ ಹತ್ತು ಬರಹಗಳು ಮತ್ತು ಇಲ್ಲಿಯ ತನಕ ಹೆಚ್ಚು ಮಂದಿ ಒದಿ ಇಷ್ಟಪಟ್ಟ ಹತ್ತು ಬರಹಗಳ ಪಟ್ಟಿಯೊಂದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ. ಈ ತನಕ ನೀವು ಓದಿರದಿದ್ದಲ್ಲಿ ಓದಿ.. ಹೇಗಿದೆ ಹೇಳಿ.
ನನ್ನಿಷ್ಟದ ಬರಹಗಳು
ಮಾಧವಿ…ಹೊರಟಳು ಕಾನನಕೆ…
ಮೂಕಜ್ಜಿಯ ಕನಸು.. ಮೂಕವಾಯ್ತು ಮನಸು
ಮತ್ತೆ ನೆನಪಾಯಿತು ಕಮಲಶಿಲೆ ಹಬ್ಬ…
ನಿರೀಕ್ಷೆಯಲ್ಲಿನ ಸುಖ ನಿಜದಲ್ಲಿಲ್ಲ !!
ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ
ನಂಬಿಕೆದ್ರೋಹ ಅನ್ನೋದು ರಿಲೇಟಿವಾ?
ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
ಬೇಕೇ ಹೇಳಿ…ಈ ಪರಿಯ ದ್ವೇಷ…?
ಬದುಕಿನ ಆಟೋಗ್ರಾಫ್ ತುಂಬೆಲ್ಲಾ ಖಾಲಿ ಹಾಳೆಗಳು..
ಕುವೆಂಪು ಮಲೆನಾಡಿನಲ್ಲಿ ಒಂದು ಸುತ್ತು..
ಓದುಗರ ಅಚ್ಚುಮೆಚ್ಚು….
ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
ತೀರ್ಥಳ್ಳಿ ಸಿಡಿಲು, ಕಾರ್ಕಳ ಗುಡುಗು, ತೊಂಬಟ್ಟು-ಕೊಳಲಿ ಮಿಂಚು
‘ದಂಗೆಯ ದಿನಗಳು’
ಮಾಧವಿ…ಹೊರಟಳು ಕಾನನಕೆ…
ಕಂಚಿನ ಕಂಠದೊಡನೆ ಮಿಂಚಿನ ಸಂವಾದ – ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ
ಈ ಮಂಡೇ ಯಾಕಾಗಿದೆ…
ಯಾದ್ ವಶೇಮ್ – ಯಹೂದಿಗಳ ಇತಿಹಾಸದ ಬೆನ್ಹತ್ತಿ…..
ಮೊಗ್ಗಿನ ಮನಸು…ಅರಳಿ ನಿಂತ ಸೊಗಸು
ಯಾವ ಸಾಫ್ಟ್ವೇರ್ ಕಂಪೆನಿ ಕರೆಯಿತು…
ಸಾಫ್ಟ್ವೇರ್-ಮನೆ .. ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ
ಮಗು ಬೆಳೆದರೂ ಸಹ ಮಗು ಮನಸಿನ ಮುಗ್ಧತೆ ಮತ್ತು ಬೆರಗು ಮನಸಿನ ಮರ್ಮರದಿಂದ ಮರೆಯಾಗದು ಅನ್ನೋದನ್ನು ನಿಮಗೆ ನೆನಪಿಸುತ್ತಾ, ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ
– ವಿಜಯ್ರಾಜ್ ಕನ್ನಂತ್.
Like this:
Like ಲೋಡ್ ಆಗುತ್ತಿದೆ...