Archive for ಸೆಪ್ಟೆಂಬರ್ 13, 2008

ಕೊಚ್ಚಿಗೆ ಅಕ್ಕಿಯ ಗಂಜಿ ( boiled rice), ಮೇಲೊಂದೆರಡು ಚಮಚ ತುಪ್ಪ, ಇದರೊಟ್ಟಿಗೆ ಪರಿಮಳಕ್ಕೇ ನಾಲ್ಕು ತುತ್ತು ಹೆಚ್ಚು ಹೊಟ್ಟೆ ಸೇರುವಂತೆ ಮಾಡುವ ತಾಕತ್ತಿರೋ ಮಿಡಿ ಉಪ್ಪಿನಕಾಯಿ. ವಾಹ್ ! ಕ್ಯಾ ಸ್ವಾದ್ ಹೈ. ಸವಿದವನೇ ಬಲ್ಲ ಅದರ ಸವಿಯ. ಇಂಥಾ ಗಂಜಿಯೂಟವನ್ನು ಯಾವತ್ತಾದ್ರೂ ಮಾಡಿದ್ದೀರಾ? ನೀವು ಕುಂದಾಪ್ರ, ಉಡುಪಿ, ಮಂಗ್ಳೂರು ಕಡೆಯವರಾದ್ರೆ ನಿಮ್ಗೆ ಈ ರುಚಿ ಗೊತ್ತೇ ಇರುತ್ತೆ. ನಾನು ಶಾಲೆಗೆ ಹೋಗೋ ಸಮಯದಲ್ಲಿ ಆಗೆಲ್ಲ ನಮ್ಮ ಕಡೆ ಬಹುತೇಕರ ಮನೆಗಳಲ್ಲಿ ಬೆಳಗಿನ ಉಪಹಾರ ಅಂದ್ರೆ ಇದೇ ಗಂಜಿಯೂಟ. ಬೆಳಗಿನ ಧಾವಂತದಲ್ಲಿ ತಿಂಡಿಯನ್ನೆಲ್ಲಾ ಹಮ್ಮಿಸಿಕೊಂಡು ಕೂತ್ರೆ ಮಾಡಿ ಪೂರೈಸೋದು ಕಷ್ಟವಾದ್ದರಿಂದ ಶಾಲೆ ಇರುವ ದಿನಗಳಲ್ಲಂತೂ ಇದೊಂತರಾ ಡಿಫಾಲ್ಟ್ ಬೆಳಗಿನ ತಿಂಡಿ.

 

ಮೊನ್ನೆ ಊರಿಗೆ ಹೋಗಿದ್ದಾಗ ಬೆಳಗಿನ ತಿಂಡಿಗೆ ಗಂಜಿ ಮಾಡಿದ್ರು. ಬಹುಕಾಲದ ನಂತರ ಗಂಜಿಯೂಟ ಮಾಡೋದು ಅಂತ ಬಟ್ಟಲಿನ ತುಂಬಾ ಗಂಜಿ ಹಾಕಿಸ್ಕೊಂಡು ಕೂತೆ. ಎರಡು-ಮೂರು ತುತ್ತು ತಿನ್ನುವಷ್ಟರಲ್ಲೇ ಗಂಜಿ ಯಾಕೋ ಗಂಟಲಲ್ಲಿಳಿಯಲು ತಕರಾರು ಮಾಡೋಕೆ ಶುರುವಿಟ್ಟುಕೊಂಡಿತು. ಹಿಂದೆಲ್ಲಾ ಚಪ್ಪರಿಸುತ್ತಾ ಕಬಳಿಸುತ್ತಿದ್ದ ಈ ಗಂಜಿಯೂಟ ಯಾಕೋ ಹಿಡಿಸಲೇ ಇಲ್ಲ. ಸುಮಾರು ವರ್ಷಗಳಿಂದ ಬೆಂಗಳೂರಿನ ಬೆಳ್ತಿಗೆ ಅಕ್ಕಿ ಅನ್ನ ಉಂಡ ನಾಲಿಗೆ ಗಂಜಿಯ ರುಚಿ ಮರೆತಿತ್ತಾ..? ಗೊತ್ತಿಲ್ಲ. ಅಷ್ಟು ಇಷ್ಟಪಟ್ಟು ಉಣ್ಣುತ್ತಿದ್ದ ಗಂಜಿಯ ರುಚಿಯೇನೂ ಬದಲಾಗಿರಲಿಕ್ಕಿಲ್ಲ. ಬದಲಾಗಿದ್ದು ಬೇರೆ ರುಚಿಗೆ ಒಗ್ಗಿಹೋದ ನನ್ನ ನಾಲಿಗೆ.

 

ಬದಲಾವಣೆಗಳಿಗೆ ನಾವು ಎಷ್ಟು ಬೇಗ ಹೊಂದಿಕೊಂಡು ಬಿಡುತ್ತೇವೆ ಅಲ್ವಾ? ಬೆಂಗಳೂರಿಗೆ ಬಂದಾಗ ಮೊದಮೊದಲು ಬೆಳ್ತಿಗೆ ಅಕ್ಕಿಯ ಅನ್ನ ನಾಲಿಗೆಯ ಪಾಲಿಗೆ ದೂರದ ನೆಂಟನಂತೆ ಇತ್ತು. ಆಮೇಲಾಮೇಲೆ ಅದು ರೂಢಿಯಾಗುತ್ತಾ ಬಂದು, ಈಗ ಹುಟ್ಟಿನಿಂದಲೇ ಬೆಳ್ತಿಗೆ ಅಕ್ಕಿಯ ಅನ್ನವನ್ನು ತಿನ್ನುತ್ತಿದ್ದೇನೋ ಅನ್ನಿಸುವಷ್ಟು ಸಹಜವಾಗಿ ಸೇರುತ್ತೆ. ಊರುಬಿಟ್ಟು ಬೆಂಗಳೂರಿಗೆ ಬರುವಾಗಲೂ ಕೂಡಾ ಹಾಗೇ ಅನ್ನಿಸಿತ್ತು. ಕಾಡಿನೂರಿನಿಂದ ಬಂದು ಈ ಕಾಂಕ್ರೀಟ್ ಕಾಡಿನಲ್ಲಿ ಇರೋದು ಹೇಗಪ್ಪಾ ಅನ್ನುವ ದಿಗಿಲು ಮನೆಮಾಡಿತ್ತು. ಈಗ ನಿಧಾನವಾಗಿಯಾದರೂ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರ, ಚಾಮರಾಜಪೇಟೆ, ಗಾಂಧಿಬಜಾರು ಎಲ್ಲಾ ನಮ್ಮೂರೇ ಅನ್ನಿಸತೊಡಗಿರುವುದೂ ಸುಳ್ಳಲ್ಲ. ಇಲ್ಲಿನ ಬೆರಕೆ ಕನ್ನಡ, ಟ್ರಾಫಿಕ್ ಜಾಮು, ಅಕಾಲಿಕ ಮಳೆ, ಸದಾಕಾಲದ ಚಳಿ ಎಲ್ಲಾನೂ ರೂಢಿಯಾಗಿದೆ.

 

ನಮ್ಮ ಬದುಕಿನಲ್ಲಿ ತೀರಾ ಆತ್ಮೀಯರಾಗಿದ್ದವರು ಇಲ್ಲವಾದಾಗ, ಇಲ್ಲವೇ ದೂರಾದಾಗಲೂ ಕೂಡಾ ಶುರುವಿಗೆ ಅವರಿಲ್ಲದೆ ಹೇಗಪ್ಪಾ ಬದುಕೋದು ಅನ್ನಿಸಬಹುದು. ಏನೋ ಕಳಕೊಂಡಂತಾ ಖಾಲಿತನ, ಶೂನ್ಯಭಾವ ಕಾಡತೊಡಗಿ ಬದುಕು ಭಣಭಣ ಅನ್ನಿಸಲೂಬಹುದು. ಕ್ರಮೇಣ ನಿತ್ಯದ ಜಂಜಾಟಗಳಲ್ಲಿ ವ್ಯಸ್ತರಾಗುತ್ತಾ, ಇಲ್ಲಾ ನಮೆ ಖುಷಿ ಕೊಡುವ ಬೇರಿನ್ಯಾವುದೇ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಂತೆಲ್ಲಾ ಮನಸ್ಸು ಬದಲಾವಣೆಗೆ ಒಗ್ಗಿಕೊಳ್ಳಲಾರಂಭಿಸುತ್ತದೆ. ಅವರಿಲ್ಲದೇ ಬದುಕುವುದು ಅಭ್ಯಾಸವಾಗುತ್ತದೆ. ಕೊಚ್ಚಕ್ಕಿ ಗಂಜಿ ರುಚಿಸಿದ ನಾಲಿಗೆಗೆ ಬೆಳ್ತಿಗೆ ಅಕ್ಕಿಯ ಅನ್ನ ಹೇಗೆ ರುಚಿಸುತ್ತೋ ಥೇಟ್ ಹಾಗೆಯೇ.  ಆದರೂ… ಗಂಜಿಯೂಟ ಸೇರದೇ ಇದ್ದದ್ದು ಮಾತ್ರ ಬಾಳ ಬೇಜಾರ್ರೀ.. 🙂 ಯಾಕಂತ ನಿಮ್ಗೇನಾದ್ರೂ ಗೊತ್ತಾ?

ನಾವು ಬದಲಾಗುತ್ತಿರಬೇಕಂತೆ…

ಇಲ್ಲವಾದರೆ

ಕಾಲದ ಯಾವುದೋ ಘಟ್ಟದಲ್ಲಿ

ನಿಂತಿರುವಲ್ಲೇ ನಿಂತುಹೋಗಿ

ಶಿಲೆಯಂತಾಗಿಬಿಟ್ಟು

ಪಳೆಯುಳಿಕೆಗಳಾಗಿ ಬಿಡುತ್ತೇವಂತೆ

 

ನಿನ್ನೆ ಇಂದು ನಾಳೆಗಳಾಗಿ

ಸೆಕೆಂಡು ನಿಮಿಷ ಘಂಟೆಗಳಾಗಿ

ಉರುಳುವ ಕಾಲಚಕ್ರದೊಡನೆ

ಗುಂಪಿನೊಳಗೆ ಗೋವಿಂದ ಅಂತ

ನಾಲ್ಕ್ ಹೆಜ್ಜೆ ಹಾಕುತ್ತಿರಬೇಕಂತೆ

 

ನಿನ್ನೆಯದು ಇಂದಿಗೆ ರದ್ದಿಯಾಗುವ

ಇಂದು ಅದಾಗಲೇ ಭೂತಕ್ಕೆ ಸಂದಾಯವಾಗುವ

ನಾಳೆಯ ಹೊಸ್ತಿಲಾಚೆ ಕಾಲಿಟ್ಟು ಕಾಯುತ್ತಿರುವ

ಈ ಧಾವಂತದ ಬದುಕಿನಲಿ

ಕಾಲಕ್ಕೆ ತಕ್ಕ ಕೋಲ ಕಟ್ಟುತಿರುವವರು

ಪಿಸುನುಡಿಯುವುದು ಕೇಳಿಸುತ್ತಿಲ್ಲವೇ…

ಸರ್ವೈವಲ್ ಆಫ್ ಫಿಟ್ಟೆಸ್ಟ್ ಯುಗ

ಯಾವತ್ತೋ ಮುಗಿದಿದೆ

ಇನ್ನೇನಿದ್ರೂ ಸರ್ವೈವ್ ಆಗೋರು

ಫಾಸ್ಟೆಸ್ಟ್ ಇರೋರು ಮಾತ್ರವಂತೆ

 

ಒಮ್ಮೊಮ್ಮೆ ನನಗೆ ಅನ್ನಿಸುವುದುಂಟು

ನಾನೊಂದು ಐವತ್ತು ವರ್ಷ ಮುಂಚೇನೇ

ಹುಟ್ಟಬೇಕಿತ್ತಾ ಅಂತ….!

ಅಲ್ಲೂ ನಿಧಾನ ಮಾಡಿದೆನಾ ಏನ್ಕತೆ ಅಂತ !!