Archive for ಸೆಪ್ಟೆಂಬರ್ 21, 2008

ಈ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ.-ವಿಚಿತ್ರವಾಗಿದೆ. ನೂರು ನಿಮಿಷಕ್ಕೂ ಕಡಿಮೆ ಅವಧಿಯ ಇಡೀ ಚಿತ್ರದ ಪರಿಕಲ್ಪನೆ, ಕಥೆಯನ್ನು ವಿವರಿಸುವಲ್ಲಿನ ಬಿಗಿ ಹಿಡಿತ, ಚಿತ್ರೀಕರಿಸಿದ ರೀತಿ ಕೊನೆಯಲ್ಲಿ ಎತ್ತುವ ಪ್ರಶ್ನೆಗಳು…ಎಲ್ಲವೂ ಇಷ್ಟವಾಗುತ್ತದೆ. ಮುಂಬೈ ಮೇರಿ ಜಾನ್ ನಂತರ ನಾನು ನೋಡಿದ ಈ ಚಿತ್ರ ಒಂದರ್ಥದಲ್ಲಿ ಅದರಲ್ಲಿ ನಿಲ್ಲಿಸಿಹೋದ ಕಥೆ ಮುಂದುವರಿಸಿದಂತಿದೆ.. ಅದರೂ ಇನ್ನೊಂದು ರೀತಿಯಿಂದ ನೊಡಿದ್ರೆ ಆ ಚಿತ್ರಕ್ಕೆ ಸಂಪೂರ್ಣ ವಿರುದ್ಧವಾಗೂ ಇದೆ. ಇದೇನು ಹಿಂಗೆ ಪರಸ್ಪರ ಒಂದಕ್ಕೊಂದು ವಿರೋಧವಾದ ಹೇಳಿಕೆಗಳು ಅಂತೀರಾ? ಚಿತ್ರ ನೋಡಿ ಆಮೇಲೆ ನಿಮಗೇ ಅರ್ಥವಾಗುತ್ತೆ!!

 

 

ಇದೂ ಕೂಡಾ ಭಯೋತ್ಪಾದನೆಯ ಸುತ್ತ ಹೆಣೆದ ಚಿತ್ರ. ಇಷ್ಟು ಬಿಗಿಯಾದ ನಿರೂಪಣೆ ಇರುವ ಚಿತ್ರಗಳನ್ನು ಕನ್ನಡದಲ್ಲಿ ನಾನು ನೊಡಿದ್ದು ಎರಡೇ ಎರಡು… ಅದು ನಿಷ್ಕರ್ಷ ಮತ್ತು ಸೈನೇಡ್.

 

ಇಡೀ ಚಿತ್ರದ ಕಥೆ ನಡೆಯುವುದು ಒಂದು ಬುಧವಾರ ಮಧ್ಯಾಹ್ನ 2ರಿಂದ 6 ಗಂಟೆಯ ನಡುವಿನ ಅವಧಿಯಲ್ಲಿ. ಸುಮಾರು ನೂರು ನಿಮಿಷಗಳಷ್ಟಿರುವ ಚಿತ್ರದ ಓಟ ಶುರುವಾಗುವುದು ನಿವೃತ್ತ ಪೊಲಿಸ್ ಕಮಿಶನರ್ ಪ್ರಕಾಶ್ ರಾಠೋಡ್ ನೆನಪಿಸಿಕೊಳ್ಳುವ ಆ ಬುಧವಾರದ ಘಟನೆಗಳಿಂದ. ಒಬ್ಬ ಅನಾಮಧೇಯ ವ್ಯಕ್ತಿ ಕಮಿಶನರ್‌ಗೆ ಕರೆ ಮಾಡಿ ನಗರದಲ್ಲಿನಾಲ್ಕು ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸುತ್ತಾನೆ. ಅದು ಹುಸಿ ಕರೆ ಅಲ್ಲ ಅನ್ನೋದನ್ನು ಸಾಬೀತು ಮಾಡಲು ಅದಕ್ಕೂ ಮೊದಲು ತಾನು ಪೋಲಿಸ್ ಠಾಣೆಯಲ್ಲೇ ಬಾಂಬ್ ಇಟ್ಟು ಹೋದ ಬಗ್ಗೆ ತಿಳಿಸುತ್ತಾನೆ. ಅವನ ಬೇಡಿಕೆ ಎಂದರೆ ನಾಲ್ಕು ಜನ ಭಯೋತ್ಪಾದಕರ ಬಿಡುಗಡೆ……ಮುಂದೇನಾಯಿತು ಅನ್ನುವುದು ಹೇಳಿ ಬಿಟ್ರೆ ಸ್ವಾರಸ್ಯ ಇರೊಲ್ಲ.

 

ಚಿತ್ರದ ವಸ್ತುವಿನ ಬಗ್ಗೆ ಮಾತಾಡಲು ಹೊರಟರೆ ಚಿತ್ರದ ಕ್ಲೈಮಾಕ್ಸ್ ಬಗ್ಗೆ ಹೇಳಲೇ ಬೇಕಾಗುತ್ತದೆ. ಹಾಗಾಗಿ ಅದನ್ನು ನಾನಿಲ್ಲಿ ವಿವರಿಸಲು ಹೊಗೋದಿಲ್ಲ. ಆದರೆ ಕೊನೆಯಲ್ಲಿ ಚಿತ್ರ ಮುಂದಿಡುವ ವಿಚಾರ, ಅದನ್ನು ಹೇಳಿದ ರೀತಿ…ಅದ್ಭುತ ಅನ್ನುವ ಪದ ಬರೇ ಸವಕಲು ಅನ್ನಿಸಿಬಿಡುವಷ್ಟು ಚೆನ್ನಾಗಿದೆ. ಆದರಲ್ಲೂ ಚಿತ್ರದ ಕೊನೆಯ ಅರ್ಧ ಗಂಟೆ ಬಗ್ಗೆ ಹೇಳೋದಕ್ಕಿಂತ ಅದನ್ನು ನೋಡಿ ಅನುಭವಿಸಬೇಕು. ಇಡೀ ಚಿತ್ರದ ಕೇಂದ್ರಬಿಂದುವಾಗಿರುವ ನಾಸಿರುದ್ದೀನ್ ಶಾಗೆ ನಾನಂತೂ ನೂರಕ್ಕೆ ನೂರು ಅಂಕ ಕೊಡ್ತೀನಿ. ಅನುಪಮ್ ಖೇರ್‌ಗೆ ಡಿಸ್ಟಿಂಕ್ಶನ್. ಹಾಗೆಯೆ ನಿರ್ದೇಶಕ ನೀರಜ್ ಪಾಂಡೆ ಮತ್ತು ಚಿತ್ರ ತಂಡಕ್ಕೆ  ಇಂತಹ ಅದ್ಭುತ ಚಿತ್ರ ನೀಡಿದ್ದಾಕ್ಕಾಗಿ ನೂರೆಂಟು ಶಹಬ್ಬಾಸ್‌ಗಳನ್ನು ಕೂಡಾ. ರೇಟಿಂಗ್ ಕೊಡೋದಿದ್ರೆ ಕಣ್ಣು ಮುಚ್ಚಿಕೊಂಡು ನಾಲ್ಕು ಸ್ಟಾರ್ ಕೊಡಬಹುದು. ಚಿತ್ರ ನೋಡಿ ಹೊರಬಂದ ಮೇಲೆ ಚಿತ್ರ ಬಹುಕಾಲ ನಿಮ್ಮನ್ನು ಕಾಡುವುದಂತೂ ಸತ್ಯ .ಒಂದು ಮರೆಯಲಾಗದ ಚಿತ್ರ ನೋಡಿದ ಖುಷಿ ನಿಮ್ಮದಾಗಲಿ.

ಕಳೆದೆರಡು ವಾರಗಳಲ್ಲಿ ಎರಡು ಅತ್ಯುತ್ತಮ ಚಿತ್ರಗಳನ್ನು ನೋಡಿದೆ. ನೋಡಿದ ಮೇಲೆ ವಿಮರ್ಶೆ ತರಹದ್ದು ಏನಾದ್ರೂ ಬರೀಬೇಕು ಅಂತ ಕೂಡ ಅಂದ್ಕೊಂಡೆ. ಹಾಗಂತ ಬರೆಯೋಕೆ ಕೂತ್ರೆ ಮುಂದಕ್ಕೋಡಲು ತಕರಾರು ಮಾಡ್ತಾ ಇತ್ತು. ಬಹುಶಃ ಚಿತ್ರದ ವಸ್ತು ಮನಸ್ಸನ್ನು ಗಾಢವಾಗಿ ತಟ್ಟಿದ್ದಕ್ಕೆ ಇರಬೇಕು. ಆದ್ರೆ ಹಾಗಂತ ಏನೂ ಬರೆಯದೆ ಹೋದ್ರೆ ಚಿತ್ರ ನೀಡಿದ ತೃಪ್ತಿಗೆ ಮೋಸ ಮಾಡಿದ ಹಾಗೆ ಅನ್ನಿಸ್ತು. ಅದಕ್ಕೇ ಪುಟ್ಟದಾಗಿ ಒಂದು ಪರಿಚಯ ತರಹ ಬರ್ದಿದ್ದೀನಿ. ಆ ಚಿತ್ರಗಳೆಂದ್ರೆ .. ಮುಂಬೈ ಮೇರಿಜಾನ್ ಮತ್ತು ವೆಡ್‌ನಸ್ಡೇ( ವೆನ್ಸ್‌ಡೇ ಅಂತ ಬೇಕಾದ್ರೆ ಓದಿಕೊಳ್ಳಿ). ಎರಡೂ ಚಿತ್ರಗಳ ವಸ್ತುವಿನಲ್ಲಿ ತುಂಬಾ ಸಾಮ್ಯತೆ ಇದೆ. ಆದರೆ ನೋಡೋ ದೃಷ್ಟಿ ಮಾತ್ರ ಭಿನ್ನವಾಗಿದೆ. ಭಯೋತ್ಪಾದನೆಯ ಸುತ್ತ ಸಾಗುವ ಈ ಚಿತ್ರಗಳು ಇಷ್ಟವಾಗಲು ಕಾರಣ… ಅದನ್ನು ನಿರೂಪಣೆ ಮಾಡಿದ ರೀತಿ.

 

ಈ ಚಿತ್ರಗಳನ್ನು ನೋಡೋಕೆ ಬೇರೆಯದೇ ಆದ ಮನಸ್ಥಿತಿ ಒಂದು ಬೇಕಾಗುತ್ತೆ. ಸುಮ್ನೇ ಟೈಂಪಾಸ್‌ಗೆ ಅಂತ ನೋಡೋ ಚಿತ್ರಗಳ ತರಹ ಇಲ್ಲ. ಅದಕ್ಕೇ ಹೇಳಿದ್ದು ಚಿತ್ರವನ್ನು ಮರೆಯದೆ ನೋಡಿ ಆದ್ರೆ ನೋಡಿ ಮರೆಯಬೇಡಿ ಅಂತ. ಈ ಚಿತ್ರಗಳನ್ನು ನೋಡಿದ ನಂತರವೂ ಅದರ ಧ್ವನಿ, ಅದು ಹೇಳ ಹೊರಟ ಮಾತುಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ. ನಮ್ಮ ಚಿಂತನೆಯ ಶೈಲಿಯಲ್ಲಿ, ವಸ್ತುವೊಂದನ್ನು ನಾವು ಗ್ರಹಿಸುವ ಕ್ರಮದಲ್ಲಿ ಒಂದು ಪುಟ್ಟ ಬದಲಾವಣೆ ತರುವಲ್ಲಿ ಚಿತ್ರ ಯಶಸ್ವಿಯಾದ್ರೆ… ಚಿತ್ರತಂಡದ ಶ್ರಮ ಸಾರ್ಥಕ. ಹಾಗಂತ ಹೊಸತನ್ನೇನೂ ಚಿತ್ರ ಹೇಳಲುಹೊರಟಿಲ್ಲ. ಅದು ನಮಗೆಲ್ಲಾ ಗೊತ್ತಿರುವಂತದ್ದೇ. ಭಯೋತ್ಪಾದಕರ ಕೃತ್ಯಗಳ ಪರಿಣಾಮವಾಗಿ ನಮ್ಮ ಮಸ್ತಿಷ್ಕದಾಳದಲ್ಲೆಲ್ಲೋ ಸದಾ ಜಾಗೃತವಾಗಿರುವ ದಿಗಿಲು, ಹುಟ್ಟುವ ಅಸಹನೆ, ಅನುಮಾನಗಳು, ದ್ವೇಷ, ಆಕ್ರೋಶ ಇವನ್ನೇ ಹೇಳುತ್ತವೆ. ಆದರೆ ಅದನ್ನು ಹೇಳಿದ ರೀತಿ, ಅದನ್ನು ತೆರೆಯ ಮೇಲೆ ಪಡಿಮೂಡಿಸಿದ ಕ್ರಮಗಳಿಂದಾಗಿ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನಮ್ಮ ಮನಸ್ಸಿಗೆ ನಾಟುತ್ತದೆ.

 

ಮುಂಬೈ ಮೇರಿಜಾನ್.. ಹೆಸರೇ ಹೇಳುವಂತೆ ಮುಂಬೈ ನಗರದ ಕತೆ. ಅಲ್ಲಿನ ಕಟಿಂಗ್ ಚಾಯ್, ವಡಾಪಾವ್ ಸವಿಯುತ್ತಾ, ಲೋಕಲ್ ಟ್ರೈನ್, ಶಾಪಿಂಗ್ ಮಾಲ್‌ಗಳಲ್ಲಿ, ದಟ್ಟಣೆಯ ರಸ್ತೆಗಳಲ್ಲಿ ಸದಾ ಓಡುತ್ತಲೇ ಇರುವಂತೆ ಭಾಸವಾಗುವ ಲಕ್ಷಾಂತರ ಜನರ ಧಾವಂತದ ಆದರೆ ಅಷ್ಟೇ ಜೀವಂತಿಕೆ ತುಂಬಿದ ಬದುಕಿನ ಪಯಣ. ಅವತ್ತು ಜುಲೈ ಏಳು, 2006. ಆ ದಿನ ಮುಂಬೈನ ಲೋಕಲ್ ಟ್ರೈನ್‌ಗಳಲ್ಲಿ ಅಂತಕನ ದೂತ ಹೊಂಚುಹಾಕಿ ಕುಳಿತಿದ್ದ. ಅಮಾಯಕರ ಪ್ರಾಣ ತೆಗೆಯುವ ಭಯೋತ್ಪಾದಕನ ಕ್ರೌರ್ಯಕ್ಕೆ ಇಡೀ ನಗರಿ ನಲುಗಿ ಹೋಗಿತ್ತು. ಈ ಘಟನೆಯ ನಂತರ ಹೇಗೆ ಭೀತಿಯ ಸೆಳಕು, ಸಮುದಾಯಗಳ ನಡುವೆ ಹುಟ್ಟುವ ಗೋಡೆಗಳು, ಸದಾ ಎಲ್ಲವನ್ನೂ ಸಂಶಯದಿಂದ ಕಾಣುವ-ಹಾವು ಹಗ್ಗಕ್ಕೂ ವ್ಯತ್ಯಾಸ ತಿಳಿಯದಷ್ಟು ಮಂಕುಗಟ್ಟಿದ ಭೀತ ಮನಸ್ಥಿತಿ, ಹುಸಿ ಕರೆಗಳು ಹುಟ್ಟಿಸುವ ಗೊಂದಲ ಗಾಬರಿ…ಹೀಗೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ನಿರೂಪಿಸಲಾಗಿದೆ. ಪರೇಶ್ ರಾವಲ್ ಮಾಧವನ್, ಕೆ.ಕೆ.ಮೆನನ್, ಇರ್ಫಾನ್ ಖಾನ್ ಹೀಗೆ ಎಲ್ಲರ ಸಹಜ ಅಭಿನಯ ಚಿತ್ರದ ಒಟ್ಟು ಪರಿಣಾಮಕ್ಕೆ ಪೂರಕವಾಗಿದೆ.

 

ತುಕ್ಕು ಹಿಡಿದ ವ್ಯವಸ್ಥೆಯ ಭಾಗವಾಗಿ ಹೋದ ಒಬ್ಬ ಸಾಮಾನ್ಯ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ಪರೇಶ್ ರಾವಲ್ ಮೊದಲು ತಮ್ಮ ಎಂದಿನ ನಗೆಚಟಾಕಿಗಳ ಮೊಲಕ ರಂಜಿಸುತ್ತಾರೆ. ಈ ವ್ಯವಸ್ಥೆಯನ್ನು ಬದಲಿಸಲು ತಾನೇನೂ ಮಾಡಲಾಗಲಿಲ್ಲ ಅನ್ನುವ ವಿಷಾದದ ಅಡಿಯಲ್ಲಿದ್ದ ,ಅಸಹಾಯಕತೆಯ ಹಿಂದೆ ಮರೆಯಾಗಿದ್ದ ಮಾನವೀಯ ಮುಖವೊಂದು ಅನಾವರಣಗೊಳ್ಳುತ್ತಾ ಹೋದಂತೆ ಇನ್ನಷ್ಟು ಇಷ್ಟವಾಗುತ್ತಾರೆ. ಎಲ್ಲಿಯವರೆಗೆ ಈ ಹೋರಾಟ? ಸದಾ ಬೂದಿಮುಚ್ಚಿದ ಕೆಂಡದಂತೆ ಹೊಗೆಯಾಡುವ ಅಸಹನೆಯ ಅಡಿಯಲ್ಲಿ ನಾವೆಲ್ಲ ನಿಧಾನವಾಗಿ ಉರಿದು ಹೋಗುತ್ತಿದ್ದೇವೆಂದು ಯಾಕೆ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರು ಬಡಿದರೆಂದು ಇವರೂ, ಇವರು ಕೊಂದರೆಂದು ಅವರೂ…ಹೀಗೆ ಮುಂದುವರಿಯುತ್ತಾ ಹೊಗುವ ಈ ದ್ವೇಷದ ಸರಪಣಿಯಲ್ಲಿ ನಮ್ಮನ್ನು ನಾವೇ ಯಾಕೆ ಬಂಧಿಗಳಾಗಿಸಿಕೊಂಡಿದ್ದೇವೆ? ಎಲ್ಲೋ ಒಂದು ಕಡೆ ಹೊಸ ಚಿಂತನೆ, ಹೊಸ ದೃಷ್ಟಿಕೋನ ಹುಟ್ಟಲೇಬೇಕಲ್ಲವೇ, ಅದು ನಮ್ಮಿಂದಲೇ ಯಾಕೆ ಶುರುವಾಗಬಾರದು ಅಂತನ್ನುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಎಲ್ಲಾ ಯುದ್ಧ, ದ್ವೇಷ, ಹುಟ್ಟುವುದು ಧರ್ಮ ದೇಶಗಳ ನಡುವೆಯಲ್ಲ.. ಅದು ಹುಟ್ಟುವುದು ನಮ್ಮ ಮಸ್ತಿಷ್ಕದಲ್ಲಿ… ಅದನ್ನೇ ಚಿವುಟಿಹಾಕುವುದು ನಮ್ಮೆಲ್ಲರ ಕೈಲಿದೆ ಅಲ್ಲವೇ….ಹೀಗಂತೆ ಯೋಚಿಸುವಂತೆ ಮಾಡುತ್ತದೆ ಈ ಚಿತ್ರ.

 

 ಕಥೆಯ ನಡುವೆ ಬರುವ ನ್ಯೂಸ್ ರೀಡರ್ ಒಬ್ಬಳ ಪಾತ್ರವೊಂದರ ಮೂಲಕ ನ್ಯೂಸ್ ಚಾನೆಲ್‌ಗಳು ಅತಿರಂಜಕ ಸುದ್ದಿ ಹುಡುಕುವ, ಫ್ಲಾಶ್ ನ್ಯೂಸ್ ಹೆಕ್ಕುವ ಭರದಲ್ಲಿ ಹೇಗೆ ಮಾನವೀಯತೆಯನ್ನೇ ಮರೆಯುತ್ತವೆ ಅನ್ನುವುದನ್ನು ತೋರಿಸಲಾಗಿದೆ. ಸದಾ ಸುದ್ದಿಯ ಹಸಿವಿನಿಂದ ತಹತಹಿಸುವ ಚಾನೆಲ್‌ನ ವರದಿಗಾರರು ದುರ್ಘಟನೆಯೊಂದು ಸಂಭವಿಸಿದಾಗ ಅದನ್ನು ಹೇಗೆ ವರ್ಣರಂಜಿತ ಸುದ್ದಿಯಾಗಿಸಿ ತಮ್ಮ ಚಾನೆಲ್‌ನ್ ಟಿ.ಆರ್.ಪಿ. ಹೆಚ್ಚಿಸುವ ಕುರಿತು  ಯೋಚಿಸುತ್ತಾರೆ ಅನ್ನುವುದನ್ನು ತೋರಿಸಲಾಗಿದೆ. ಆಲ್ಲಿ ಎಲ್ಲವೂ ಸುದ್ದಿ, ಅಘಾತಕ್ಕೆ ಒಳಗಾದ ನೊಂದವರ ಅಳು ಕೂಡಾ ಅವರ ಕಣ್ಣಲ್ಲಿ ಮಾರಾಟವಾಗುವ ಸರಕು. ಆದರೆ ಅದೇ ವರದಿಗಾರ್ತಿ ಬಾಂಬ್ ಸ್ಫೋಟದಲ್ಲಿ ತನ್ನ ಇನಿಯನನ್ನೇ ಕಳೆದುಕೊಂಡು ಶೋಕಿಸುತ್ತಿರುವಾಗ ಅವಳ ದುಃಖವೂ ಆ ಚಾನೆಲ್‌ಗೆ ಮಾರಾಟವಾಗಬಲ್ಲ ಸುದ್ದಿಯಾಗುತ್ತದೆ. ಸುದ್ದಿ ಕೊಡುವ ಅತ್ಯುತ್ಸಾಹದಲ್ಲಿ ನಾನು ಮರೆತದ್ದೇನು ಅನ್ನುವ ಅರಿವು ಅವಳಿಗಾಗುತ್ತದೆ. ಆದ್ರೆ ನ್ಯೂಸ್ ಚಾನೆಲ್‌ಗಳಿಗೆ ಇದು ಅರ್ಥವಾಗುತ್ತಾ? ನನಗಂತೂ ನಂಬಿಕೆ ಇಲ್ಲ.

 

ಇಂತಹ ಮುಂಬೈ ನಗರಿ ಇಲ್ಲಿಯ ತನಕ ಅದೆಷ್ಟೋ ವಿಕೋಪಗಳಿಗೆ ಆಘಾತಗಳಿಗೆ, ಅವಘಡಗಳಿಗೆ ತುತ್ತಾಗಿ ಮುಗ್ಗರಿಸಿದರೂ, ಮತ್ತೆ ಸೆಟೆದು ನಿಂತಿದೆ. ಎಲ್ಲ ಭೀತಿಯ ಮಧ್ಯೆಯೂ ತುತ್ತಿನ ಚೀಲ ತುಂಬಿಸಲು ಮತ್ತೆ ದೈನಂದಿನದ ಚಕ್ರ ಎಂದಿನಂತೆ ಸುತ್ತುತ್ತದೆ. ಭೀತಿಯ ಮಧ್ಯೆಯೂ ನಲುಗದೆ ಹಸಿರಾಗಿರುವ ಜೀವನಪ್ರೀತಿಯ ಅಮೃತಧಾರೆ ಎದೆಯಿಂದ ಎದೆಗೆ ಹರಿಯಬಾರದೇ ಅನ್ನುವ ಪ್ರಶ್ನೆಯನ್ನು ಕೇಳುತ್ತದೆ ಈ ಚಿತ್ರ. ಉತ್ತರ ನಮ್ಮಲ್ಲಿದೆಯಾ…? ಬರೀ ಮುಸ್ಲಿಮನಾಗಿಯೋ, ಹಿಂದುವಾಗಿಯೋ, ಕ್ರೈಸ್ತನಾಗಿಯೋ ಯೋಚಿಸುವುದಕ್ಕಿಂತ ಭಿನ್ನವಾಗಿ ಯೋಚಿಸಿದರೆ ಉತ್ತರ ಸಿಗಬಹುದೇನೋ…