Archive for ಸೆಪ್ಟೆಂಬರ್ 22, 2008

ಇವೂ ಕೂಡಾ ನನ್ನ ಪುಸ್ತಕದಿಂದಲೇ ಹೆಕ್ಕಿದಂತವುಗಳು….

 

ಆದರೂ ಒಂದಿಷ್ಟು ಬೇರೆಯೇ ತರಹದ ಸಾಲುಗಳು ಅನ್ನುವ ಕಾರಣಕ್ಕೆ ಹೀಗೆ ಪ್ರತ್ಯೇಕವಾಗಿ ಕೊಡುತ್ತಿದ್ದೇನೆ ಬಿಟ್ರೆ  ಬೇರೆ ಏನೂ ಸೀರಿಯಸ್ ಅರ್ಥಗಳಿಲ್ಲ. ಹಾಗೆಲ್ಲ ಪ್ರತಿಮೆ ರೂಪಕ ಇಟ್ಟು ಬರೆಯೋಕೆ ನಾನು ಕವಿಯೂ ಅಲ್ಲ. ಇದಕ್ಕೆ ಒಳಾರ್ಥ ಮತ್ತೊಂದು ಇನ್ನೊಂದು ಅಂತ ಹುಡುಕಲು ಹೋಗಬೇಡಿ…. ಸುಮ್ನೆ ಓದಿ… ಖುಷಿಯಾದ್ರೆ ಹೇಳಿ…

 

ಎಲ್ಲ ಭವ ಬಂಧನದ ಬಿಡುಗಡೆಯ ಬೆಳಕಿನಲಿ

ಇಲ್ಲವಾಗುವೆನೆಂಬ ಅವ್ಯಕ್ತ ಅಳುಕಿನಲಿ                                                          

ಸೊಲ್ಲಡಗಿ ಹೋಗುತಿದೆ ಬರದಿರುವ ನಾಳೆಯಲಿ

ಎಲ್ಲಡಗಿ ಕುಳಿತಿರುವೆ ಸಾವೇ ಮಾತಾಡು

————————————

ಬುದ್ಧನಾಗೋದು ಅಂದ್ರೆ ಮುಗ್ಧನಾಗೋದು

ಸದ್ದಿಲ್ಲದೆ-ಸುದ್ದಿ ಮಾಡದೆ ಶುದ್ಧನಾಗೋದು

ಜಿದ್ದಿಲ್ಲದೆ-ಗುದ್ದಾಡದೆ ಕಾರ್ಯ ಮಗ್ನನಾಗೋದು

ಗೆದ್ದರೂ-ಬಿದ್ದರೂ ಅಲುಗದ ಪ್ರಬುದ್ಧನಾಗೋದು

————————————-

ಅವನು ಅವನಿಯ ಕಾದು

ಅವನಿ ಅವನ ಕಾದರೂ

ಅವನವನಿಗೆ ಸಿಗಲಿಲ್ಲ

ಅವನಿಯವನಿಗೆ ಸಿಗಲೇ ಇಲ್ಲ

————————————–

(ಎಲ್ಲವನ್ನೂ ನನ್ನ ಅಂತರಂಗದ ಆಪ್ತಸ್ವರಪುಸ್ತಕದಿಂದ ಹೆಕ್ಕಿಕೊಳ್ಳಲಾಗಿದೆ)

 

ನಿನ್ನ ನೆನಪುಗಳದೇ ಒಂದು

ವಿಶೇಷ ಪುರವಣಿ ತಂದರೂ

ಉಳಿದೇ ಹೋಗಿವೆ ಒಂದು

ವಿಶೇಷಾಂಕ ತುಂಬುವಷ್ಟು 

———————————————————-

 

ಬೂದಿಯಾಗಲಿ ನೆನಪು ಅಂತ

ಭಾವನೆಗಳಿಗೆ ಬೆಂಕಿ ಇಟ್ಟೆ

ಇಲ್ಲವಾಗಲಿ ಆಸೆ ಅಂತ

ಕನಸುಗಳಿಗೆ ಕೊಳ್ಳಿ ಇಟ್ಟೆ

ಆದರೆ ಕೊನೇಲಿ ಆಗಿದ್ ಇಷ್ಟೇ…

ಕನಸುಗಳು ಕೆಂಡವಾಗಿ

ಭಾವನೆಗಳು ಬೂದಿಯಾಗಿ 

ನೆನಪುಗಳ ಹೊಗೆ ನನ್ನ ಆವರಿಸಿತಷ್ಟೇ…

 

———————————————————-

 

ಎದೆಯ ನೂರು ಭಾವಗಳಲಿ ಯಾವುದನು ಬಚ್ಚಿಡಲಿ

ನೆನಪು ಬುತ್ತಿಗಂಟಿನಿಂದ ಏನನು ಬಿಚ್ಚಿಡಲಿ

ಮನಸುಭಾವ ಎಲ್ಲಾ ನೀನೇ ಎಷ್ಟು ದಿನ ಮುಚ್ಚಿಡಲಿ

ಹೇಳೇ ಸಖಿ ಎನಿತು ಕಾಲ ಎದೆಯಾಸೆಗೆ ಕಿಚ್ಚಿಡಲಿ

ಇಂದಲ್ಲಾ ನಾಳೆ ನೀ ಬರುವೆಯೆಂಬ ನೆಚ್ಚಿನಲಿ….ಹುಚ್ಚಿನಲ್ಲಿ

———————————————————-

 

ಚುಕ್ಕಿಯಿಟ್ಟು ಅಳಿಸಿಬಿಟ್ಟೆ ಒಲವಿನ ರಂಗವಲ್ಲಿ

ನಿಲ್ಲಿಸಿ ಹೋದೆ ಕೊಳಲನು ಬಿಸುಟು ಹಾಡಿನ ನಡುವಲ್ಲಿ

ಅರಳುವ ಮೊದಲೇ ಬಾಡಿತು ಏಕೆ ನಲ್ಮೆಯ ಹೂ-ಗಿಡ-ಬಳ್ಳಿ

ಆರಿಸಿದೆ ನೀ ಪ್ರೀತಿಯ ಸೊಡರನು ನಿಶೆಯ ನಟ್ಟಿರುಳಲ್ಲಿ

ಆದರೂ ಒಂದು ತುಣುಕು ಆಸೆ, ಭರವಸೆ ನನ್ನೆದೆಯಲ್ಲಿ

ಸಿಗಲಾರೆಯಾ ನೀ ಇಂದಲ್ಲವಾದರೂ ಮುಂದಿನ ಜನುಮದಲ್ಲಿ

———————————————————-

 

ಕಳಚಿಕೊಂಡಷ್ಟೂ ನಿನ್ನ ನೆನಪಿನ ಹಂಗು

ಮತ್ತೆ ಮರಳುವ ಇದ್ಯಾತರದ ಗುಂಗು

 

ಕಳಚಿಟ್ಟ ಮೇಲೂ ಬಣ್ಣದ ವೇಷ

ಉಳಿದೇ ಹೋದಂತೆ ರಾತ್ರಿಯ ಆವೇಶ

 

ಮುಗಿದೇ ಹೋದ ಮೇಲೂ ಹಾಡಿನ ಚರಣ

ಮನಸಿನಲ್ಲೇಕೋ ಆಲಾಪದ ಅನುರಣನ

 

ಕಳೆದ ಮೇಲೂನೂ ಮಾಗಿಯ ಚಳಿ

ಗ್ರೀಷ್ಮದಲಿ ನೆನಪಾಗಿ ಏನೋ ಕಚಗುಳಿ

 

ನಿಂತು ಹೋದ ಮೇಲೂ ಜಡಿಮಳೆಯ ಜೋರು

ತೊಟ್ಟಿಕ್ಕುವಂತೆ ಮರದಿಂದ ಹನಿಯಾಗಿ ನೀರು

 

ಕಳೆದು ಹೋದ ಮೇಲೂನೂ ಇದ್ದಂತೆ ಭಾಸ

ನೀ ಬಂದ ಮೇಲಷ್ಟೇ ಮುಗಿದೀತು ಧ್ಯಾಸ

———————————————————- 

 

ಮಾಡಿಲ್ಲ ಕವನ ಪೂರ್ತಿ

ಎಲ್ಲಿ ಮರೆಯಾದೇ ನೀ ಸ್ಫೂರ್ತಿ

ಕನಸಲ್ಲಾದ್ರೂ ಒಂದು ಸರ್ತಿ

ಕಾಯ್ತೀನಿ ಬಾರೇ ಮಾರಾಯ್ತಿ

———————————————————- 

ಒಬ್ಬರು ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಆಗ ಗುಂಡ ಎಂದಿನಂತೆ ತರಲೆ ಮಾಡಲು ಶುರುಮಾಡಿದ. ಅಧ್ಯಾಪಕರಿಗೆ ತುಂಬಾ ಸಿಟ್ಟು ಬಂತು. ಅವನನ್ನು ಬಯ್ಯಲು ಹೊರಟರು. ಆದರೆ ಅವರಿಗೊಂದು ವಿಲಕ್ಷಣ ಅಭ್ಯಾಸವಿತ್ತು. ಯಾರನ್ನು ಬಯ್ಯುವುದಾದರೂ ಕೆಟ್ಟ ಶಬ್ದಗಳನ್ನು ಬಳಸದೆ, ಬಯ್ಗುಳವನ್ನು ಒಗಟಿನ ರೂಪದಲ್ಲಿ ಹೇಳುತ್ತಿದ್ದರು. ಹಾಗಾಗಿ ಗುಂಡನನ್ನು ಬಯ್ಯಲು ಕೂಡ ಒಂದು ಒಗಟನ್ನು ಹೇಳಿದರು. ಗುಂಡನಿಗೆ ಏನೂ ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನಿಂತ. ನಿಮಗೆ ಏನಾದರು ಅರ್ಥವಾಗುತ್ತದೆಯೆ ನೋಡಿ…ಗೊತ್ತಾದರೆ ಗುಂಡನಿಗೂ ಹೇಳಿ.. J

 

ಕತ್ತಲೆ ಮನೆಯೊಳಗಿದ್ದಾತನ ಕೊಂದಾತನ ಅಗ್ರಜನ ಪಿತನ ವಾಹನದಂತೆ ಇದ್ದೀಯಲ್ಲೋ..

ಇತ್ತೀಚೆಗೆ ಒಂದು ಒಳ್ಳೆಯ ಪುಸ್ತಕ ಓದಲು ಸಿಕ್ಕಿತ್ತು. ಪೇರೂರು ಜಾರು ಅವರು ಬರೆದಿರುವ ನಿಜಗನ್ನಡ ಅನ್ನುವ ಕೃತಿ. ನಮ್ಮ ಬರಹಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಎಷ್ಟು ತಪ್ಪುಗಳು ನುಸುಳಿರುತ್ತವೆ (ಬೆರಳಚ್ಚು ದೋಷಗಳನ್ನು ಹೊರತುಪಡಿಸಿ) ಅನ್ನುವುದು ಇದನ್ನು ಓದಿದ ಮೇಲೆ ಗೊತ್ತಾಯ್ತು. ಯಾವ ಶಬ್ದ ಸರಿ, ಅದು ಯಾಕೆ ಸರಿ, ಯಾವ ಪ್ರಭಾವದಿಂದ ಅಥವ ಕಾರಣದಿಂದ ತಪ್ಪಾದ ರೂಪ ಹುಟ್ಟಿಕೊಂಡಿದೆ… ಇವೆಲ್ಲವನ್ನು ಸೂಕ್ತ ಉದಾಹರಣೆಗಳೊಂದಿಗೆ ಸೊಗಸಾಗಿ ತಿಳಿಸಿದ್ದಾರೆ. ಕನ್ನಡದಲ್ಲಿ ಬರೆಯುವವರೆಲ್ಲರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ. ಆದರೆ ಇದು ಪ್ರಕಟವಾಗಿ ಬಹಳ ಕಾಲ ಆಗಿರುವುದರಿಂದ ಪುಸ್ತಕ ಮಳಿಗೆಗಳಲ್ಲಿ ಇನ್ನೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದರೆ ಖಂಡಿತ ಕೊಂಡು ಓದಿ.

 

ಕೆಲವು ಸರಿ-ತಪ್ಪು ಪ್ರಯೋಗಗಳ ಬಗ್ಗೆ ಮಾಹಿತಿಯನ್ನು ಆ ಪುಸ್ತಕದಿಂದ ಹೆಕ್ಕಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ….ನಿಮಗಾಗಿ…ಮತ್ತು ನನಗಾಗಿ ಕೂಡ! ಇನ್ನು ಮುಂದೆ ನನ್ನ ಬರಹಗಳಲ್ಲಿ ಈ ತಪ್ಪುಗಳು ಆದಷ್ಟು ಕಡಿಮೆ ಆಗಲಿವೆ ಅನ್ನುವ ಭರವಸೆಯೊಂದಿಗೆ….

 

ತಪ್ಪು ಪ್ರಯೋಗ                                          ಸರಿಯಾದ ರೂಪ

 

ನೆನೆಗುದಿಗೆ ಬಿದ್ದಿದೆ                                        ನನೆಗುದಿಗೆ ಬಿದ್ದಿದೆ

 

ಉಚ್ಛ                                                      ಉಚ್ಚ

 

ಅಂತಾರಾಷ್ಟ್ರೀಯ                                         ಅಂತರರಾಷ್ಟ್ರೀಯ

 

ಅಂತರ್ಜಾಲ                                              ಅಂತರಜಾಲ

 

ಜನರು                                                     ಜನ

 

ಮೆಟ್ಟಲು                                                   ಮೆಟ್ಟಿಲು

 

ಗಿಡಗಂಟೆ                                                  ಗಿಡಗಂಟಿ  ( ಗಿಡ + ಕಂಟಿ )

 

ಬಂದ್ಲು                                                     ಬಂದ್ಳು / ಬಂದಳು

 

ಹಠ                                                        ಹಟ

 

ಭತ್ತ                                                        ಬತ್ತ

 

ಗಾಭರಿ                                                    ಗಾಬರಿ

 

ಒಂಭತ್ತು                                                   ಒಂಬತ್ತು

 

ನೋಡುತ್ತಾ *                                             ನೋಡುತ್ತ

 

ಎಲ್ಲಾ *                                                    ಎಲ್ಲ

 

ಕೂಡಾ *                                                  ಕೂಡ

 

ಮೊಟ್ಟ ಮೊದಲು *                                      ಮೊತ್ತ ಮೊದಲು

 

ವಿನಃ , ವಿನಹ *                                           ವಿನಾ

 

ಜತೆ                                                       ಜೊತೆ

 

ಉಡಿಗೆ                                                    ಉಡುಗೆ  

 

ಅಡಿಗೆ                                                     ಅಡುಗೆ

 

ಯೌವ್ವನ                                                  ಯವ್ವನ / ಯೌವನ

 

ಬರ್ತಾಯಿದೆ                                               ಬರ್ತಿದೆ / ಬರುತ್ತಿದೆ

 

ಘಂಟೆ                                                     ಗಂಟೆ

 

ನಡುಗೆ                                                    ನಡಿಗೆ

 

ಒಂಥರ *                                                  ಒಂತರ   

 

ನಿಶ್ಯಬ್ಧ                                                     ನಿಶ್ಶಬ್ಧ / ನಿಶಬ್ಧ                              

 

ನಿಶ್ಯಕ್ತಿ                                                     ನಿಶ್ಶಕ್ತಿ / ನಿಶಕ್ತಿ

 

ಧಾಳಿ                                                      ದಾಳಿ

 

ಬ್ರಹ್ಮಾಚಾರಿ                                               ಬ್ರಹ್ಮಚಾರಿ

 

ನೆನ್ನೆ                                                       ನಿನ್ನೆ

 

ಹಿಂದೂಸ್ಥಾನ                                              ಹಿಂದೂಸ್ತಾನ

 

ಆಶೆ                                                       ಆಸೆ

 

ಇಂಥಾ *                                                  ಇಂಥ

 

(* – ಈ ತಪ್ಪು ನಾನು ಅನೇಕ ಬಾರಿ ಮಾಡಿದ್ದೇನೆ L)

 

ಇದರ ಜೊತೆಯಲ್ಲಿ ನನ್ನದೊಂದು ಸಂಶಯವಿದೆ. ಪೂರ್ವಗ್ರಹ ಪದ ಸರಿಯೆ ಅಥವ ಪೂರ್ವಾಗ್ರಹ ಸರಿಯೆ? ಗೊತ್ತಿರುವವರು ಸಮರ್ಪಕ ವಿವರಣೆ ಸಹಿತ ತಿಳಿಸುವಿರಾ?