Archive for ಸೆಪ್ಟೆಂಬರ್ 29, 2008

ಒಂದೇ ಮಾತಲ್ಲಿ ಹೇಳ್ತೀನಿ ಕೇಳಿ. ಇದು ಉಪ್ಪಿಯ ಕಟ್ಟಾ ಅಭಿಮಾನಿಗಳಿಗೆ ಮಾತ್ರ ತಯಾರಾದ ಚಿತ್ರ. ಉಪ್ಪಿಯ ಹಳೆಯ ಚಿತ್ರಗಳ ಮಟ್ಟಕ್ಕೆ ಮುಟ್ಟುವ ಮಾತು ಬದಿಗಿರಲಿ…ಅದರ ಸನಿಹ ಕೂಡಾ ಸುಳಿಯಲು ಯೋಗ್ಯತೆ ಇಲ್ಲದ, ಅಸಲಿಗೆ ಕಥೆ ಅಂತ ಕರೆಸಿಕೊಳ್ಳಲೇ ಅಯೋಗ್ಯವೆನ್ನಿಸುವ ವಿಷಯವನ್ನಿಟ್ಟುಕೊಂಡು ಇಂತದ್ದೊಂದು ಚಿತ್ರವನ್ನು ಅಭೂತಪೂರ್ವ ಚಿತ್ರ ಅನ್ನುವ ರೀತಿಯಲ್ಲಿ ಪ್ರಚಾರ ಕೊಡುತ್ತಿರುವ ಚಿತ್ರತಂಡ, ಅವರು ಬಯಸಿದಂತೆ ಹಾಡಿ ಹೊಗಳಿದ ಮಾಧ್ಯಮಗಳು….ಇವರೆಲ್ಲ ಬುದ್ಧಿವಂತರೇ… ಅವರು ಹೇಳಿದ್ದನ್ನು ನಂಬಿಕೊಂಡು ಓಂ, , ರಕ್ತಕಣ್ಣೀರು ಚಿತ್ರಗಳ ಉಪ್ಪಿಯನ್ನು ಹುಡುಕಲು ಹೋಗೋ ನಾವೇ ದಡ್ಡರು. ಮೂಲ ತಮಿಳು ಚಿತ್ರ ನಾನು ನೋಡಿಲ್ಲ. ಅದು ಹೇಗಿದೆಯೋ ಗೊತ್ತಿಲ್ಲ. ಇದು ಮಾತ್ರ ಪಂಚಾಮೃತದ ಹೆಸರಲ್ಲಿ ಹಳಸಲು ಚಿತ್ರಾನ್ನಕ್ಕೆ ಬರೇ ಉಪ್ಪಿನ ಒಗ್ಗರಣೆ ಹಾಕಿದ್ದಾರೆ. ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ತಿಳ್ಕೊಂಡು ಬರೀ ಉಪ್ಪು ಸುರಿದು ಮಾಡಿದ ಈ ಚಿತ್ರ ಉಪ್ಪಿಯ ಪ್ಲಾಪ್ ಚಿತ್ರಗಳ ಹನುಮಂತನ ಬಾಲದಂತಹ ಪಟ್ಟಿಗೆ ಇನ್ನೊಂದು ಚಿತ್ರವಾಗುತ್ತಾ….ಅಥವಾ ಬರೀ ಉಪ್ಪಿ ಅಭಿಮಾನಿಗಳೇ ಚಿತ್ರವನ್ನು ದಡ ಹತ್ತಿಸುತ್ತಾರಾ ಕಾದು ನೋಡಬೇಕು.

 

ನಿಜ ಹೇಳ್ಬೇಕಂದ್ರೆ ಈ ಚಿತ್ರ ನೋಡಿ ಬಂದ ಮೇಲೆ ಈ ಚಿತ್ರಕ್ಕೊಂದು ವಿಮರ್ಶೆ ಬರೆಯೋ ಸಹನೆ, ಮನಸ್ಸು ಎರಡೂ ನನ್ನಲ್ಲಿ ಇದ್ದಿರಲಿಲ್ಲ. ಆದರೆ ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳನ್ನು ಓದಿದ ಮೇಲೆ ಬರೆಯಲೇಬೇಕು ಅನ್ನುವ ನಿರ್ಧಾರ ಮಾಡಿದೆ. ಇಡೀ ಚಿತ್ರದಲ್ಲಿ ಎಲ್ಲೂ ಹುಡುಕಿದರೂ ಸಿಗದ ಅದ್ಯಾವ ಪಂಚಾಮೃತದ ಸವಿಯನ್ನು ಇವರೆಲ್ಲ ಉಂಡಿದ್ದಾರೋ ಅನ್ನೋದು ಆ ಭಗವಂತನೇ ಬಲ್ಲ. ಚಿತ್ರದಲ್ಲಿ ಒಳ್ಳೆಯ ಅಂಶವನ್ನು ಭೂತಗಾಜಿನಲ್ಲಿಟ್ಟು ಹುಡುಕಿದರೂ ಕೂಡಾ ಕಾಣ ಸಿಗೋದು ಇಷ್ಟೇ… ಮಂಗಳೂರು ಶೈಲಿಯ ಕನ್ನಡದಲ್ಲಿ ಉಪ್ಪಿ ಹೇಳಿದ ಎರಡ್ಮೂರು ಡೈಲಾಗುಗಳು, ಎರಡು ಹಾಡುಗಳು. ಅಷ್ಟು ಬಿಟ್ರೆ ಕ್ಯಾಮರಾಮನ್, ನಾಯಕಿಯರು, ಪೋಷಕ ಪಾತ್ರಗಳು ಯಾರಿಗೂ ಇಲ್ಲೇನು ಕೆಲಸವೇ ಇಲ್ಲ. ಬರೀ ಚಿತ್ರವಿಚಿತ್ರ ಸ್ಟಂಟುಗಳು, ಅದೇ ಅದೇ ಕೋರ್ಟಿನ ದೃಶ್ಯಗಳು, ನಡುವೆ ಒಂದೆರಡು ಡೈಲಾಗುಗಳು. ಮೊನ್ನೆ ಯಾವುದೋ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಉಪ್ಪಿ ಹೇಳ್ತಾ ಇದ್ದರು. ನಾನು ಚಿತ್ರವನ್ನು 10 ವರ್ಷ ಮುಂಚೆ ಮಾಡಿಬಿಟ್ಟೆ. ಆ ಕಾಲಕ್ಕೆ ಅದು ತುಂಬಾ ಅಡ್‌ವಾನ್ಸ್‌ಡ್ ಆಗಿತ್ತು. ಅದು ಈಗ ಬಂದಿದ್ರೆ ಇನ್ನೂ ಹೆಚ್ಚು ಜನ ಇಷ್ಟ ಪಡ್ತಾ ಇದ್ರೆನೋ ಅಂತ. ಇರಬಹುದೇನೋ..ಉಪ್ಪಿ. ಆದರೆ ಬುದ್ಧಿವಂತ ಮಾತ್ರ ಖಂಡಿತ ಹಾಗಲ್ಲ ಬಿಡಿ. ಅದು ಯಾವ ಕಾಲಕ್ಕೂ ಬರಬಾರದಂತ ಚಿತ್ರ. ಈ ಭಾಗ್ಯಕ್ಕೆ ತಮಿಳಿಂದ ಕತೆ ಬರಬೇಕಿತ್ತಾ?

 

ಸಾಕು ಈ ಚಿತ್ರಕ್ಕೆ ಇದಕ್ಕಿಂತ ಹೆಚ್ಚು ಬರೆಸಿಕೊಳ್ಳುವ ಯೋಗ್ಯತೆ ಖಂಡಿತ ಇಲ್ಲ. ಅಥವ ಈ ಚಿತ್ರದ ಬಗ್ಗೆ ಬರೆಯುವಷ್ಟು, ಇದರಲ್ಲಿ ಪಂಚಭಕ್ಷ ಪರಮಾನ್ನ ಹುಡುಕುವಷ್ಟು ಬುದ್ಧಿವಂತಿಕೆ ನನಗೆ ಇಲ್ಲವೇನೋ. ನಾನು ಓದಿದ ಪತ್ರಿಕೆಗಳಲ್ಲಿ ಟೈಮ್ಸ್ ಆಫ್ ಇಂಡಿಯಾ ಕನ್ನಡದಲ್ಲಿ ಮಾತ್ರ ಚಿತ್ರದ ಸರಿಯಾದ ವಿಮರ್ಶೆಯನ್ನು ಬರೆದಿತ್ತು. ಉಪ್ಪಿಯ ಚಿತ್ರ ಅಂತ ನಿರೀಕ್ಷೆ ಇಟ್ಟುಕೊಂಡು ಹೋಗುವವರಿಗಾಗುವ ನಿರಾಸೆಯನ್ನು ಸರಿಯಾಗಿ ಗುರುತಿಸಿತ್ತು. ಚಿತ್ರ ಮುಗಿದ ಮೇಲೆ ಉಪೇಂದ್ರ ಹೇಳುತ್ತಿದ್ದ ಒಂದೇ ಡೈಲಾಗು ಕಿವಿಯಲ್ಲಿ ಅನುರಣಿಸುತ್ತಿತ್ತು… ನಾನು ಅವನಲ್ಲ… ನಾನು ಅವನಲ್ಲ. ಹೌದು ಉಪ್ಪಿ ಸರಿಯಾಗಿಯೇ ಹೇಳಿದ್ದೀಯ…ನೀನು ಖಂಡಿತ ಆ ಹಳೆಯ ಉಪ್ಪಿಯಲ್ಲ.