Archive for ಅಕ್ಟೋಬರ್, 2008

ಕನಸಿನರಮನೆ ಬ್ಲಾಗಿನಲ್ಲಿ ನಟೇಶ್ ಬಾಬುರವರು ತೋಚಿದಂತೆ ಗೀಚಲು ಬ್ಲಾಗ್ ಏನು ಪರ್ಸನಲ್ ಡೈರಿಯಾ ಅಂತ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ನನಗೆ ತೋಚಿದ ಒಂದಿಷ್ಟು ಇಲ್ಲಿ ಗೀಚಿದ್ದೇನೆ. ಒಪ್ಪಿಸಿಕೊಳ್ಳಿ.

 

ನಾನಂತೂ ಹೆಚ್ಚು ಕಡಿಮೆ ಹಾಗೇ ಬರೆಯುವವನು. ತೋಚಿದ್ದು ಗೀಚಿದ್ದೇ ಹೆಚ್ಚು. ನನಗೆ ಆಸಕ್ತಿ ಹುಟ್ಟಿಸಿದ ಪ್ರತಿಯೊಂದರ ಬಗ್ಗೆ.. ನನಗೆ ತಿಳಿದಿದ್ದನ್ನು ಹಂಚಿಕೊಳ್ಳುವಂತೆ ಬರೆದಿದ್ದೇನೆ. ನಿಮ್ಮ ಪ್ರಕಾರ ತುಂಬಾ ಗಂಭೀರವಾಗಿ ಸಾಮಾನ್ಯರಿಗೆ ಅರ್ಥವೇ ಆಗದ ಹಾಗೆ ( ಕೆಲವೊಮ್ಮೆ ಬರೆದ ಅವರಿಗೂ ಅರ್ಥ ಆಗಿರೋದು ಅಷ್ಟರಲ್ಲೆ ಇದೆ ಬಿಡಿ) ಬರೆಯೋರಷ್ಟೇ… ಬ್ಲಾಗ್‌ನಲ್ಲಿ ಬರೆಯಬೇಕಾ? ವಿಷಯ ವೈವಿಧ್ಯ ಇರಬೇಕು. ಒಪ್ಪಿಕೊಳ್ಳೋಣ. ಆದ್ರೆ ಭಾವನೆಗಳು, ನೆನಪುಗಳು, ಕನಸು, ಕನವರಿಕೆಗಳು ಇವುಗಳಲ್ಲಿ ವೈವಿಧ್ಯ, ಮಾಹಿತಿ, ಅನುಭವ , ಜ್ಞಾನ ಇಲ್ಲ ಅಂತ ನಿಮ್ಮ ಅಭಿಪ್ರಾಯಾನಾ?

 

ಈಗ ನೀವು ಹೇಳಿರುವ ವಿಷಯಗಳನ್ನೇ ನೋಡೋಣ. ಬ್ಲಾಗು ಅಪ್‌ಡೇಟ್ ಮಾಡಲು ಸಮಯವಿಲ್ಲದವರು ಬ್ಲಾಗಿಗೆ ಬೀಗ ಹಾಕಬೇಕೆನ್ನುತ್ತೀರಿ. ಎಲ್ಲರಿಗೂ ದಿನಾ ಅಥವ ವಾರಕ್ಕೊಂದು ಸಲ ಬ್ಲಾಗ್ ಬರೆಯಲು ಪುರುಸೊತ್ತು ಸಿಗಬೇಕೆಂದೇನಿಲ್ಲವಲ್ಲ. ಸಮಯ ಸಿಕ್ಕಾಗ ಬರೆಯುವ ಉತ್ಸಾಹ ಬಂದಾಗ ಬರೆಯುವುದು ಯಾವ ರೀತಿಯಲ್ಲಿ ತಪ್ಪು? ಇಂತಾ ದಿನವೇ ಇಂತಿಷ್ಟು ದಿನಕ್ಕೇ ಬ್ಲಾಗ್ ಉಪ್‌ಡೇಟ್ ಆಗಲು ಅವೇನು ನಿಯತಕಾಲಿಕಗಳಲ್ಲಿ ಬರುವ ಅಂಕಣಗಳೆನಲ್ಲ.

 

ಅಷ್ಟಕ್ಕೂ ಕನ್ನಡದಲ್ಲಿ ವಿಷಯ ವೈವಿಧ್ಯವಿರುವ ಅನೇಕ ಒಳ್ಳೆಯ ಬ್ಲಾಗುಗಳಿವೆ. ಸ್ವಲ್ಪ ಹುಡುಕಿ ನೋಡಿ. ಒಂದೆರಡು ಉದಾಹರಣೆ ಹೇಳಬೇಕಂದ್ರೆ ಚೇತನ ತೀರ್ಥಹಳ್ಳಿ , ಸಂದೀಪ್ ಕಾಮತ್ ಅವರ ಕಡಲತೀರ, ನಾವುಡರ ಚೆಂಡೆಮದ್ದಳೆ, ಸುಧನ್ವ ಬ್ಲಾಗ್ – ಚಂಪಕಾವತಿ, ನಗೆ ಬರಹಗಳ ನಗೆನಗಾರಿ, ರಾಜೇಶ್ ನಾಯ್ಕ್ ಅವರ ಅಲೆಮಾರಿ, ವೇಣುವಿನೋದ್ ಅವರ ಮಂಜು ಮುಸುಕಿದ ದಾರಿಯಲ್ಲಿ, ವಿಕಾಸವಾದ, ಪ್ರಮೋದ್ ಅವರ ಕುಂಚ ಪ್ರಪಂಚ… ಹೀಗೆ ಪಟ್ಟಿ ಮಾಡುತ್ತಾ ಹೋದ್ರೆ ಬಹಳ ಬಹಳ ವೈವಿಧ್ಯ ಇರುವ ಕನಿಷ್ಟ ನೂರಾದರೂ ಬ್ಲಾಗ್ ನಿಮಗೆ ಸಿಕ್ಕೇ ಸಿಗುತ್ತೆ. ಹುಡುಕುವ ತಾಳ್ಮೆ ಬೇಕಷ್ಟೇ. ಇಲ್ಲಿ ಕೊಟ್ಟಿರೋದು ನಾನು ಓದುವ ನಾನಿಷ್ಟದ ಬ್ಲಾಗ್‌ಗಳಲ್ಲಿ ಕೆಲವು ಬ್ಲಾಗ್‌ಗಳ ಉದಾಹರಣೆ ಮಾತ್ರ… ಇನ್ನು ನನ್ನ ಕಣ್ಣಿಗೆ ಬೀಳದ ಅದೆಷ್ಟೋ ಒಳ್ಳೆಯ ಬ್ಲಾಗ್‌ಗಳು ಇರಬಹುದು ಅಲ್ವೆ?

 

ನನಗನ್ನಿಸುವ ಪ್ರಕಾರ ಬರೆಯುವ ಆಸಕ್ತಿ ಇದ್ದೂ ಅವಕಾಶ ಸಿಗದೆಯೋ ಇನ್ಯಾವ ಕಾರಣಕ್ಕೋ ಬರವಣಿಗೆ ಮುಂದುವರಿಸಲು ಸಾಧ್ಯವಾಗದ ಅನೇಕರಿಗೆ ತಮ್ಮ ಅನಿಸಿಕೆ, ವಿಚಾರ, ಚಿಂತನೆ, ಭಾವನೆಗಳ ಅಭಿವ್ಯಕ್ತಿಗೆ ಬ್ಲಾಗ್‌ಪ್ರಪಂಚ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಇನ್ನೊಬ್ಬರ ಮನಸ್ಸಿಗೆ ವಿನಾಕಾರಣ ನೋವಾಗುವಂತಹ ಬರಹಗಳನ್ನು ಬರೆಯಬಾರದು. ಅದು ಬಿಟ್ಟರೆ ಮಾಹಿತಿ, ಕನಸು, ನೆನಪು, ಕತೆ, ವಿಚಾರ, ಹನಿ, ಚರ್ಚೆ… ಹೀಗೆ ಏನು ಬೇಕಾದ್ರೂ ಬರೆಯಬಹುದು ಅನ್ನೋದು ನನ್ನ ಅನಿಸಿಕೆ. ಚೆನ್ನಾಗಿದ್ರೆ ಓದ್ತಾರೆ. ಆದ್ರೆ ಚೆನ್ನಾಗಿರೋದೆ ಬರೆಯುವ ಪ್ರಯತ್ನ, ಹುಮ್ಮಸ್ಸು ಇದ್ದರೆ ಸಾಕು. ನನ್ನ ಅಭಿಪ್ರಾಯ ಸರಿ ಅಂತ ನಾನು ವಾದ ಮಾಡ್ತಾ ಇಲ್ಲ. ಯಾಕೆಂದ್ರೆ ಎಷ್ಟೇ ಆದ್ರೂ ನಾನೂ ಒಬ್ಬ ತೋಚಿದ್ದು ಗೀಚುವವನು…ಇಲ್ಲಿ ಮಾಡಿದ್ದೂ ಅದನ್ನೇ. ಇದನ್ನು ಬ್ಲಾಗ್ ಬರಹವೆಂದು ಒಪ್ಪಿಕೊಳ್ಳಲೇಬೇಕೆಂಬ ಯಾವ ಒತ್ತಾಯವೂ ಇಲ್ಲ ಬಿಡಿ.  

ನಾನು ಹೋದರೆ ಹೋದೇನು ಅಂತ ಕನಕದಾಸರೇನೋ ಬಹಳ ಸುಲಭವಾಗಿ ಹೇಳಿದರು. ಆದರೆ ಈ ನಾನು ಎಂಬುದೇ ಇಲ್ಲವಾದರೆ ನನ್ನ ಅಸ್ತಿತ್ವವಾದರೂ ಏನು ಉಳಿಯುತ್ತೆ ಸ್ವಾಮಿ? ಮಹಾನ ಸಾಧಕರಿಗೆ, ತಪಸ್ವಿಗಳಿಗೆ, ಜಿತೇಂದ್ರಿಯರಿಗಷ್ಟೆ ಇದು ಸುಲಭಸಾಧ್ಯವೇನೊ. ನನ್ನ-ನಿಮ್ಮಂತ ಹುಲುಮಾನವರಿಗೆ ಕೊನೆಯ ಉಸಿರಿರುವ ತನಕ ಬಹುಶಃ ಈ ನಾನು, ನನ್ನದು ನಮ್ಮವರು ಎಂಬ ಮೋಹ, ಮಮಕಾರ ತಪ್ಪಿದ್ದಲ್ಲ ಅನ್ನಿಸುತ್ತದೆ. ಇದಕ್ಕೆ ನಿದರ್ಶನ ಹುಡುಕುವುದಕ್ಕೆ ತೀರಾ ದೂರವೇನು ಹೋಗಬೇಕಾಗಿಲ್ಲ. ಈಗ ನನ್ನದು ಎರಡು ಬ್ಲಾಗ್‌ಗಳಿವೆ. ಆದರೆ ಯಾರಾದ್ರೂ ಕುಂದಾಪ್ರ ಕನ್ನಡ ಬ್ಲಾಗ್ ನೋಡಿ ಮೆಚ್ಚುಗೆ ಹೇಳಿದ್ರೆ ಜಾಸ್ತಿ ಖುಷಿಯಾಗುತ್ತದೆ. ಯಾಕೆಂದರೆ ಅದು ನನ್ನ ಊರಿನ ಆಡುಭಾಷೆ. ವಿದೇಶಗಳಲ್ಲಿ ನೆಲೆಸಿರುವವರಿಗೆ ತಮ್ಮ ದೇಶದವರು, ರಾಜ್ಯದವರು, ಊರಿನವರು ಸಿಕ್ಕಿದರೆ, ಅವರ ಪರಿಚಯವೇ ಇಲ್ಲದಿದ್ದರೂ ಪರಿಚಯ ಮಾಡಿಕೊಂಡು ಸಂತೋಷದಿಂದ ಆದರಿಸುತ್ತಾರೆ. ಕಾರಣ ಇಷ್ಟೆ, ನಮ್ಮವರು ಅನ್ನುವ ಚುಂಬಕದ ಅಗೋಚರ ಸೆಳೆತ…. ಸ್ವಲ್ಪ ವಿಶಾಲ ಭಾವದಲ್ಲಿ. ನಮ್ಮ ದೇಶ, ನಮ್ಮ ಊರು, ನಮ್ಮ ಬಂಧುಗಳು, ನಮ್ಮ ಸ್ನೇಹಿತರು… ಇವರನ್ನೆಲ್ಲ ಕಂಡರೆ ಆತ್ಮೀಯತೆಯ ಸೆಲೆಯುಕ್ಕುತ್ತದೆ.( ಇವುಗಳ ಜೊತೆಗೆ ಸ್ವಲ್ಪ ಸಂಕುಚಿತ ಅನ್ನಿಸಿದರೂ ನಮ್ಮ ಜಾತಿ ಧರ್ಮ ಅಂತ ಪ್ರೀತಿ ತೋರಿಸೂವವರೂ ಇದ್ದಾರೆ….ಆ ವಿಷಯ ಒತ್ತಟ್ಟಿಗಿರಲಿ ಬಿಡಿ). ವಿಷಯಾಂತರವಾಯ್ತು ಅನ್ನಿಸುತ್ತೆ.

 

ನಾನು ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದೆನಾದರೂ, ವಾಸ್ತವದಲ್ಲಿ ಇದು ಪ್ರತಿಯೊಬ್ಬರಿಗೂ ಅನ್ವಯಿಸುವ ತತ್ವ. ನನ್ನ ಇಷ್ಟಾನಿಷ್ಟ, ಗುಣಾವಗುಣ, ನನ್ನ ಮನೋಭಾವ-ಸ್ವಭಾವ, ನನ್ನ ಮೇಲರಿಮೆ-ಕೀಳರಿಮೆ, ನನ್ನ ಬಲಹೀನತೆ-ಸಾಮರ್ಥ್ಯ…ಇವೆಲ್ಲದರ ಬಗ್ಗೆ ನನಗಲ್ಲದೆ ಇನ್ಯಾರಿಗೆ ತಾನೆ ಜಾಸ್ತಿ ಗೊತ್ತಿರಲು ಸಾಧ್ಯ? ತೆರೆದ ಪುಸ್ತಕದಂತೆ ನನ್ನ ಸ್ವಭಾವ ಅಂತ ಯಾರು ಎಷ್ಟೇ ಹೇಳಿದರೂ…ಅದನ್ನು ಓದುವವರು ತಪ್ಪಾಗಿ ಅರ್ಥೈಸಿಕೊಂಡಿರಬಹುದಲ್ಲ. ಅದೂ ಅಲ್ಲದೆ ಕೆಲವಾದರೂ ತೀರಾ ಖಾಸ್‌ಬಾತ್ ಅನ್ನಿಸುವ ವಿಷಯಗಳು ಇದ್ದೇ ಇರುತ್ತವೆ. ನಮ್ಮ ದುಃಖ ಹೇಳಿಕೊಂಡರೆ ಹಗುರಾಗುತ್ತದೆ ಅನ್ನುವ ಮಾತಿದೆಯಾದರೂ ಎಲ್ಲವನ್ನೂ ಹೇಳಿಕೊಳ್ಳಲು ಆಗದು ತಾನೆ? ಅಂತೆಯೆ ತೀರಾ ಖಾಸಗಿ ಅನ್ನಿಸುವ ಕೆಲವು ಖುಷಿಗಳೂ. ಹಾಗಾಗಿಯೇ ನನಗಿಂತ ಚೆನ್ನಾಗಿ ನನ್ನನ್ನು ಅರ್ಥಮಾಡಿಕೊಂಡವರು ಈ ಜಗತ್ತಿನಲ್ಲಿ ಬೇರೆ ಯಾರೂ ಇರಲು ಅಸಾಧ್ಯ.

 

ಎಷ್ಟೋ ಸಂದರ್ಭಗಳಲ್ಲಿ ನಾವು ನಮ್ಮ ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ನೇಹಿತರ ಬಳಿ, ಬಂಧುಗಳ ಜೊತೆಗೆ ವಿಚಾರ ವಿನಿಮಯ ನಡೆಸುತ್ತೇವೆ. ಅವರ ಸಲಹೆ ಪಡೆಯುತ್ತೇವೆ. ಬೇರೆಯದೇ ಆದ ಒಂದು ದೃಷ್ಟಿಕೋನದಿಂದ ಯೋಚಿಸಬೇಕಾದ ಅಗತ್ಯವಿರುವ ವೇಳೆ ಈ ರೀತಿ ಮಾಡುವುದು ತಪ್ಪೇನಲ್ಲ. ಅವರ ಸಲಹೆ ಸೂಚನೆ ನಮಗೆ ಕೆಲಸಕ್ಕೆ ಬರಲೂಬಹುದು. ಆದರೆ ಇದು ಬರೀ ಸಲಹೆ ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿರಲಿ. ಅಂತಿಮ ತೀರ್ಮಾನ ಯಾವತ್ತಿಗಿದ್ದರೂ ನಮ್ಮದೇ ಆಗಿರಬೇಕು. ಮನಸಿನ ಮಾತಿಗೇ ಮೊದಲ ಮರ್ಯಾದೆ-ಪ್ರಾಶಸ್ತ್ಯ ಸಲ್ಲಬೇಕು. ವಿಷಯ ತೀರಾ ವೈಯುಕ್ತಿಕವಾದರೆ ಮನಸಿನ ಮಾತನ್ನಲ್ಲದೆ ಇನ್ಯಾರ ಮಾತೂ ಕೇಳಬೇಡಿ. ಆದರೆ ಸಾಕಷ್ಟು ಯೋಚಿಸಿ ಸರಿ-ತಪ್ಪುಗಳನ್ನು ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮಗೆ ನಿಮ್ಮ ಮೇಲೆ, ನಿಮ್ಮ ಸಾಮರ್ಥ್ಯದ ಮೇಲೆ ಇರುವ ವಿಶ್ವಾಸ-ನಂಬಿಕೆಗಳು ವರ್ಧಿಸುತ್ತವೆ.

 

ಕೆಲವೊಂದು ಸಂದರ್ಭಗಳಿರುತ್ತವೆ. ಯಾವುದೋ ಒಂದು ವಿಷಯದ ಬಗ್ಗೆ ನೀವು ತೆಗೆದುಕೊಳ್ಳುವ ತೀರ್ಮಾನ ಕೇವಲ ನಿಮಗಷ್ಟೇ ಸಂಬಂಧಿಸಿರದೆ, ಅನ್ಯರ ಮೇಲೂ ಪರಿಣಾಮ ಬೀರುವಂತದ್ದಾಗಿರಬಹುದು. ಅಂತಹ ವೇಳೆ ಸ್ನೇಹಿತರ ಹಿತೈಷಿಗಳ ಮಾತು ಕೇಳಿ ಅಭಿಪ್ರಾಯ ತಿಳಿದುಕೊಳ್ಳುವುದು ಅನಿವಾರ್ಯವೆನಿಸುತ್ತದೆ. ಇದಕ್ಕೊಂದು ಸಣ್ಣ ಉದಾಹರಣೆ ಕೊಡುವುದಿದ್ರೆ ಇತೀಚೆಗೆ ನಾನೊಂದು ಲೇಖನ ಬರೆದಿದ್ದೆ. ಅದರಲ್ಲಿ ಅನ್ಯರ ಪ್ರಸ್ತಾಪ ಬರುವ ಕಾರಣ ಸ್ವಲ್ಪ ವಿವಾದ ಹುಟ್ಟುಹಾಕುವ ಸಾಧ್ಯತೆಗಳಿದ್ದವು. ಹಾಗಾಗಿ ಸ್ನೇಹಿತ ವಿಕಾಸನ ಜೊತೆ ಸಮಾಲೋಚಿಸಿ ನಿರ್ಧಾರಕ್ಕೆ ಬಂದೆ. ಇಲ್ಲಿ ಬರೀ ನನ್ನ ಮನಸಿನ ಮಾತು ಕೇಳಿದ್ರೆ ಫಚೀತಿಗಿಟ್ಟುಕೊಳ್ಳುವ ಸಾಧ್ಯತೆಗಳಿದ್ದವು.

 

ಮಿಕ್ಕಂತೆ ನಿಮ್ಮ ಕುರಿತಾದ ಎಲ್ಲ ಪ್ರಮುಖ ನಿರ್ಧಾರಗಳೂ ನಿಮ್ಮದೇ ಆಗಿರಲಿ. ನಿಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ಗೆರೆಯೆಳೆದು ನಿರ್ಧರಿಸಲು ನಿಮ್ಮ ಮನಸ್ಸಿಗಿಂತಒಳ್ಳೆಯ ಸ್ನೇಹಿತ ಬೇಕೆ? ಹಾಗಾಗಿಯೇ ಎಷ್ಟೇ ಮಂದಿ ಸ್ನೇಹಿತರು ಇದ್ದರೂ, ಅವರ ಸಲಹೆ ಪಡೆದರೂ ನಿರ್ಧಾರ ಯಾವತ್ತಿಗೂ ನನ್ನದೇ. ನನ್ನ ಬೆಸ್ಟ್ ಫ್ರೆಂಡ್ ನಾನೇ J

ಒಂದು ಸಂತೋಷದ ಸಂಗತಿ ಅಂದ್ರೆ ಚಂದನ ವಾಹಿನಿಯ ಬಹು ಜನಪ್ರಿಯ ಹಾಗು ವಿಶಿಷ್ಟ ಕಾರ್ಯಕ್ರಮ ಥಟ್ ಅಂತ ಹೇಳಿಯ ಕ್ವಿಜ್ ಮಾಸ್ಟರ್ ನಾ.ಸೋಮೇಶ್ವರ ಅವರು ಈ ಎಲ್ಲಾ ಒಗಟುಗಳಿಗೂ ಸರಿಯುತ್ತರ ನೀಡಿದ್ದಾರೆ. ಅವರು ನನ್ನ ಬ್ಲಾಗಿಗೆ ಬಂದಿದ್ದು, ಇಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದು ನನಗಂತೂ ಹಿಡಿಸಲಾಗದಷ್ಟು ಖುಶಿಯಾಗಿದೆ.  ಅವರಿಗೆ ಅಭಿನಂದನೆ ಹೇಳುತ್ತ ಉತ್ತರಗಳನ್ನು ನೋಡೋಣವೇ?

 

( ಈ ಖುಶಿಯ ನಡುವೆಯೂ…ಈ ಒಗಟನ್ನು ಐವತ್ತಕ್ಕೂ ಮಿಕ್ಕಿ ಮಂದಿ ನೋಡಿದ್ದರೂ, ಉತ್ತರಿಸಲು ಯತ್ನಿಸಿದ್ದು ಕೆಲವೇ ಕೆಲವರು ಅನ್ನೋ ಬೇಜಾರೂ ಇದೆ)

 

1.          ದೇವರಿಲ್ಲದ ಗುಡಿಗೆ ಬಗ್ಗಿ ಬಗ್ಗಿ ಸಲಾಮು                             – ಸೌದೆ ಒಲೆ

2.          ಕಪ್ಪೆ ಮುಟ್ಟದ ಕೈಲಾಸದ ನೀರು                                     – ಎಳನೀರು ( ನಮ್ಮೂರಿನ ಬೊಂಡ)

3.          ಅಜ್ಜನ ಹೊಟ್ಟೆ ಹಿಡ್ಕೊಂಡು ಮೊಮ್ಮಗ ನೇತಾಡ್ತಾನೆ                – ಗೇರುಹಣ್ಣು ಮತ್ತು ಗೇರುಬೀಜ

4.         ಕಾಸಿನ ಕುದುರೆಗೆ ಮಾರುದ್ದ ಲಗಾಮು                               – ಸೂಜಿ ದಾರ

5.          ಕೈ ಹಿಡಿತಾನೆ ಗಂಡನಲ್ಲ. ಬಟ್ಟೆ ಹರಿಯುತ್ತಾನೆ ಹುಚ್ಚನಲ್ಲ           – ಬಳೆಗಾರ ಮತ್ತು ದರ್ಜಿ