ಫ್ಯಾಷನ್ ಲೋಕದ ಒಳ-ಹೊರಗುಗಳ ಅನಾವರಣ

Posted: ನವೆಂಬರ್ 10, 2008 in ಸಿನಿಮಾ
ಟ್ಯಾಗ್ ಗಳು:,

ಕಳೆದ ವಾರದ ಅಂತ್ಯದಲ್ಲಿ ಎರಡು ಸಿನೆಮಾಗಳನ್ನು ನೋಡಿದೆ. ಮೊದಲನೆಯದು ಗೋಲ್‌ಮಾಲ್ ರಿಟರ್ನ್ಸ್. ಕೆಲವೊಂದು ಉತ್ತಮ ನಗೆಚಟಾಕಿಗಳು, ಒಂದೆರಡು ನಗು ಹುಟ್ಟಿಸುವ ಹಾಸ್ಯ ದೃಶ್ಯಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಹತ್ತರೊಟ್ಟಿಗೆ ಹನ್ನೊಂದು ಅನ್ನಿಸುವಂತಹ ಚಿತ್ರ. ಕೆಲವೊಂದು ನಗೆಚಟಾಕಿಗಳು ತೀರಾ ಹಳಸಲಾಗಿತ್ತು. ಗೋಲ್‌ಮಾಲ್ ಮೊದಲ ಭಾಗದಲ್ಲಿ ಇದ್ದ ಪರೇಶ್ ರಾವಲ್ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಕ್ಲೈಮಾಕ್ಸ್ ಕೂಡಾ ವಿಚಿತ್ರ ಸರ್ಕಸ್‌ಗಳಿಂದ ಹಾಸ್ಯವಾಗುವ ಬದಲು ಹಾಸ್ಯಾಸ್ಪದ ಅನ್ನಿಸುತ್ತಿತ್ತು. ಆದರೂ ಮಾಡೋಕೆ ಬೇರೆ ಏನೂ ಕೆಲ್ಸ ಇಲ್ಲದಿದ್ದರೆ ಹೊತ್ತು ಕಳೆಯಲು ಒಮ್ಮೆ ನೋಡಬಹುದು ಅಷ್ಟೆ. ಮುನ್ನಾಭಾಯ್ ಹೊರತು ಪಡಿಸಿದರೆ ಮಿಕ್ಕ ಯಾವುದೇ ಚಿತ್ರದ ಮುಂದುವರಿದ ಭಾಗ ಚೆನ್ನಾಗಿಲ್ಲ ಅನ್ನೋ ಮಾತಿಗೆ ಹೊಸ ದೃಷ್ಟಾಂತ ಒದಗಿಸಿದ್ದಷ್ಟೇ ಚಿತ್ರದ ಹೆಗ್ಗಳಿಕೆ.

 

ಇದಕ್ಕೆ ತೀರಾ ವಿರುದ್ಧವಾಗಿರುವ ಚಿತ್ರ ಫ್ಯಾಷನ್. ಮಧುರ್ ಭಂಡಾರ್ಕರ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಫ್ಯಾಷನ್ ಜಗತ್ತಿನ ಸುತ್ತ ಗಿರಕಿ ಹೊಡೆಯುವ ಚಿತ್ರ. ತೆರೆಯ ಮೇಲೆ ಬೆರಗು ಹುಟ್ಟಿಸುವ, ಕಣ್ಣುಕುಕ್ಕುವ ಫ್ಯಾಷನ್ ಲೋಕದ ತೆರೆಮರೆಯನ್ನು ತೆರೆದಿಡುವ ಪ್ರಯತ್ನದಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಕಣ್ಣುಕುಕ್ಕುವ ಬೆಳಕು ಕ್ಯಾಮರಾಗಳೆದುರಿಗಿನ ಭ್ರಾಮಕ ಜಗತ್ತಿನ ಹಿಂದಿರುವ ಕಹಿಸತ್ಯದಂತಹ ಕತ್ತಲೆಯನ್ನು ಯಥಾವತ್ತಾಗಿ ತೆರೆದಿಟ್ಟು ಬೆರಗುಗೊಳಿಸುತ್ತಾರೆ. ಪಾರ್ಟಿಗಳಿಗೆ ಕಳೆಯೇರಿಸಲು ದುಡ್ಡು ಕೊಟ್ಟು ಮಾಡೆಲ್‌ಗಳನ್ನು ಕರೆಸುವ ಶೋಕಿ, ಕರಿಯರ್ ಹೆಸರಿನಲ್ಲಿ ಕಾಂಟ್ರಾಕ್ಟುಗಳಿಗೆ ಸಹಿ ಮಾಡಿ ತಮ್ಮನ್ನು ತಾವೇ ಮಾರಿಕೊಂಡು ಹತಾಶರಾಗುವ ಹುಡುಗಿಯರು, ಅವರ ನಡುವಿನ ಸ್ಪರ್ಧೆ-ಒಳಜಗಳ, ಕಾಲೆಳೆಯುವಿಕೆ, ಚಮಚಾಗಿರಿ… ಯಾರನ್ನೋ ತುಳಿದುಕೊಂಡೇ ಇನ್ಯಾರೋ ಯಶಸ್ಸಿನ ಮೆಟ್ಟಿಲೇರುವುದು, ನಾಳೆ ಇನ್ನೊಬ್ಬನಿಗೆ ತುಳಿದವರೇ ಮೆಟ್ಟಿಲಾಗುವ ವಿಪರ್ಯಾಸ… ಹ್ಮ್… ಕಣ್ಣ ಮುಂದಿನ ಬೆಡಗಿಗೂ ಬೆನ್ನ ಹಿಂದಿನ ವಾಸ್ತವಕ್ಕೂ ಎಂತಹ ವ್ಯತ್ಯಾಸ.

 

ಚಂಡೀಗಡದಿಂದ ಮಾಡೆಲ್ ಆಗುವ ಕನಸು ಹೊತ್ತ ಹುಡುಗಿಯೊಬ್ಬಳನ್ನು ಕೈಬೀಸಿ ಕರೆಯುತ್ತದೆ ಮುಂಬೈ ಅನ್ನೋ ಮಾಯಾಂಗನೆ. ಅವಳು ಮೇಘನಾ ಮಾಥುರ್. ತಾನು ಮಾಡೆಲ್ ಮಾತ್ರವಲ್ಲ ಸೂಪರ್ ಮಾಡೆಲ್ ಆಗೇ ತೀರುತ್ತೇನೆ ಅನ್ನುವ ಆತ್ಮವಿಶ್ವಾಸ ಅವಳಲ್ಲಿ ತುಂಬಿ ತುಳುಕುತ್ತಿರುತ್ತದೆ. ಅವಳಿಗೊಬ್ಬ ಪ್ರಮೋಟರ್. ಹೆಸರು ರೋಹಿತ್. ಅವನ ನೆರವಿಂದ ಬೆಳೆಯುವ ಕಾಂಟಾಕ್ಟ್‌ಗಳು…ಅವಳನ್ನು ಅವಕಾಶಗಳ ಬಾಗಿಲಿಗೆ ಕೊಂಡೊಯ್ಯುತ್ತವೆ. ಹೀಗೆ ಖ್ಯಾತನಾಮರ ಸಖ್ಯ ಬೆಳೆಸುವಷ್ಟರಲ್ಲಿ ಅವಳಿಗೊಬ್ಬ ಗೆಳೆಯೆ ಸಿಗುತ್ತನೆ. ಅವನೊಬ್ಬ ಅವಕಾಶಗಳು ಸಿಗದೆ ಯಶಸ್ಸಿಗಾಗಿ ಹಾತೊರೆಯುವ ಅನ್‌ಸಕ್ಸೆಸ್‌ಫುಲ್ ಮಾಡೆಲ್. ಅವನಿಗೆ ಹತ್ತಿರವಾಗುವಷ್ಟರಲ್ಲಿ ಅವಳು ಖ್ಯಾತ ಮಾಡೆಲ್ ಶೊನಾಲಿಗೆ ಖೊಕ್ ನೀಡಿ ಪ್ರತಿಷ್ಟಿತ ಫ್ಯಾಷನ್ ಡೆಸೈನರ್ ಬ್ರಾಂಡ್‌ಗೆ ಸೇರಿಕೊಳ್ಳುತ್ತಾಳೆ. ಮೊದಲ ಸಲ ಸ್ವಲ್ಪ ಮುಜುಗರ ಅನ್ನಿಸುತ್ತದೆಆಮೇಲಾಮೇಲೆ ಎಲ್ಲಾ ತೀರಾ ಸಹಜ ಅನ್ನಿಸುವಷ್ಟು ರೂಡಿಯಾಗುತ್ತೆ ಬಿಡು.. ಅಂದ ಸಹ ಮಾಡೆಲ್‌ಳ ಮಾತು ಎಷ್ಟು ಸತ್ಯ ಅನ್ನಿಸುವಷ್ಟರಲ್ಲೆ ಅವಳು ಯಶಸ್ಸಿನ ಶಿಖರವೇರಿಯಾಗಿರುತ್ತೆ. ಅದಕ್ಕಾಗಿ ಕಳೆದುಕೊಂಡಿದ್ದೇನು ಅನ್ನುವ ಜಿಜ್ಞಾಸೆ ಆಗಾಗ ಕಾಡುತ್ತಿರುತ್ತದೆ. ಆದರೆ ಹಾಗಂತ ತಲೆ ಕೆಡಿಸಿಕೊಳ್ಳುತ್ತಾ ಕೂತರೆ ಈ ಫ್ಯಾಷನ್ ಜಗತ್ತು ಅವಳನ್ನು ಬಿಟ್ಟು ಬಹು ದೂರಕ್ಕೆ ಹೋಗಿರುತ್ತದೆ ಅನ್ನುವ ವಾಸ್ತವದ ಎದುರು ಮನಸ್ಸಿನ ಮಾತಿನದ್ಯಾವ ಲೆಕ್ಕ.

 

ಇತ್ತ ಯಶಸ್ಸಿನ ಅಲೆಯಲ್ಲಿ ತೇಲುತ್ತ ಮೈಮರೆತ ಮಗಳ ಕುರಿತು ತಂದೆತಾಯಿಗಳಿಗೆ ಆತಂಕ. ಆದರೆ ಯಶಸ್ಸು ಕೊಡುವ ಅಮಲಿನಲ್ಲಿ ಇವೆಲ್ಲ ಕ್ಷುಲ್ಲಕ ಅನ್ನಿಸಿ ತನ್ನ ಹೆತ್ತವರಿಂದ, ಗೆಳೆಯನಿಂದ ಮೇಘನಾ ದೂರಾಗುತ್ತಿದ್ದರೆ, ಅತ್ತ ಅವಕಾಶ ಕಳೆದುಕೊಂಡು ಹತಾಶಳಾಗುವ ಮೊದಲೇ ಹಾದಿ ತಪ್ಪಿದ್ದ ಶೋನಾಲಿ ಇನ್ನಷ್ಟು ಡ್ರಗ್, ಮದಿರೆಯ ಸಖ್ಯದಲ್ಲಿ ತನ್ನನ್ನು ತಾನೆ ನಾಶ ಮಾಡಿಕೊಳ್ಳುತ್ತಿರುತ್ತಾಳೆ. ಶೋ ಒಂದರಲ್ಲಿ ಎದೆಯ ಕಂಚುಕ ಜಾರಿದಾಗ ಅವಳು ಖಿನ್ನತೆಯ ಕೊಳದಲ್ಲಿ ಕತ್ತಿನ ತನಕ ಮುಳುಗೇಳುತ್ತಿರುತ್ತಾಳೆ. ಕೊನೆಗೆ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚಿಯಾಗುತ್ತಾಳೆ. ಎಲ್ಲಾ ತನ್ನ ಕಿರುಬೆರಳ ಸನ್ನೆಗೆ ಕುಣಿವ ದಾಳಗಳೆಂಬಂತೆ ಕುಣಿಸುವ ಮೇಘನಾಗೆ ತಾನು ಇನ್ಯಾರದೋ ಸೂತ್ರದ ಗೊಂಬೆ ಅನ್ನುವುದು ಮನವರಿಕೆಯಾಗುವ ಕಾಲವೂ ಬರುತ್ತದೆ. ತನ್ನನ್ನು ಮುಂದಕ್ಕೆ ತಂದ ಫ್ಯಾಷನ್ ಡೆಸೈನರ್ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಅನ್ನುವ ಸತ್ಯವನ್ನು ಹೇಳಿದಾಗ ಅವನ ಪ್ರತಿಕಿಯೆ, ಅವಳ ಕರಾರಿನಲ್ಲಿದ್ದ ಶರತ್ತುಗಳು… ಅವಳನ್ನು ಭ್ರಮನಿರಸನಗೊಳಿಸುತ್ತವೆ. ಪಾರ್ಟಿಯೊಂದರಲ್ಲಿ ಅವನ ಹೆಂಡತಿಯ ಜೊತೆ ಮುಖಾಮುಖಿಯಾದಾಗ ಅವಳಿಗೆ ತನ್ನ ಸಂಬಂಧದ ಕ್ಷಣಿಕತೆ ಅರಿವಾಗುತ್ತದೆ. ಆಗ ಹುಟ್ಟುವ ವ್ಯಕ್ತಿಗತ ಮತ್ತು ವೃತ್ತಿಗತ ಸಂಬಂಧಗಳ ನಡುವಿನ ಘರ್ಷಣೆಗೆ ಮೇಘನಾ ಬಲಿಯಾಗುತ್ತಾಳೆ. ಅಲ್ಲಿಂದ ಅವಳ ದುರ್ದಿನಗಳು ಶುರುವಾಗುತ್ತವೆ. ಹಿಂದೆ ತಾನು ಶೋನಾಲಿಯನ್ನು ಮೆಟ್ಟಿ ಮೇಲಕ್ಕೇರಿದಂತೆ ಇನ್ಯಾರೋ ಅನಾಮಿಕಳು ಆ ಜಾಗಕ್ಕೆ ಲಗ್ಗೆಯಿಡುತ್ತಾಳೆ…. ಹೀಗೆ ಸಾಗುವ ಕತೆ ಕೊನೆಯಲ್ಲಿ ಸುಖಾಂತ್ಯ ಕಾಣುತ್ತದಾದರೂ…. ಆ ನಡುವೆ ನಡೆಯುವ ವಿದ್ಯಮಾನಗಳು, ತಾಕಲಾಟಗಳು, ಹತಾಶೆ… ಇದನ್ನೆಲ್ಲ ಅನುಭವಿಸಬೇಕೆಂದಿದ್ದರೆ… ಒಮ್ಮೆ ಫ್ಯಾಷನ್ ಚಿತ್ರ ನೋಡಿ.

ಟಿಪ್ಪಣಿಗಳು
  1. skhalana ಹೇಳುತ್ತಾರೆ:

    ನಿಮ್ಮ ವಿಮರ್ಶೆ ಚೆನ್ನಾಗಿ ಮೂಡಿಬಂದಿದೆ. ಛಾನ್ಸ್ ಸಿಕ್ಕಿದರೆ ಖಂಡಿತ ಈ ಸಿನೆಮಾ ನೋಡುತ್ತೇನೆ.

  2. Sushrutha ಹೇಳುತ್ತಾರೆ:

    ಕೆಲವರನ್ನ ಕೇಳಿದ್ರೆ ಚನಾಗಿಲ್ಲ ಅಂತಾರೆ, ಕೆಲವ್ರು ಮಸ್ಟ್ ವಾಚ್ ಅಂತಾರೆ.. ಒಟ್ನಲ್ಲಿ ನೋಡೋದೇ ಆಯ್ತು ಫ್ಯಾಷನ್.. 😉

  3. ರಂಜಿತ್ ಹೇಳುತ್ತಾರೆ:

    ಪಿಕ್ಚರ್ ನೋಡಿಲ್ಲ… ಟ್ರೈಲರ್‍ನಲ್ಲಿ ಪ್ರಿಯಾಂಕ ಮುದ್ದಾಗಿ ಕಾಣಿಸ್ತಿದ್ಲು..:)

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s