Archive for ಡಿಸೆಂಬರ್, 2008

amin_dada_lg

೧೯೭೧ರ ಜನವರಿ ೨೫, ಉಗಾಂಡಾದ ಇತಿಹಾಸದಲ್ಲೊಂದು ವಿಲಕ್ಷಣ ತಿರುವು. ಅಪೋಲೋ ಮಿಲ್ಟನ್ ಒಬೋಟೆಯನ್ನು ಪದಚ್ಯುತಗೊಳಿಸಿ ಉಗಾಂಡಾದ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ಈದಿ ಅಮಿನ್ ಅನ್ನೋ ಸೇನಾನಾಯಕನಿಗೆ ಭವಿಷ್ಯತ್ತಿನಲ್ಲಿ ತನ್ನ ಅವಸಾನದ ಬಳಿಕವೂ ಬಹುಚರ್ಚಿತ ವ್ಯಕ್ತಿ ತಾನಾಗಬಹುದೆಂಬ ಸಣ್ಣ ಸುಳಿವೂ ಇದ್ದಿರಲಿಕ್ಕಿಲ್ಲ. ಅವನ ಧ್ಯೇಯ ಸ್ಪಷ್ಟವಾಗಿತ್ತು. ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಷ್ಟು ಸುದೃಢವಾಗಿ-ಬಲಿಷ್ಟವಾಗಿ ಬೆಳೆದು ನಿಂತ ಅಫ್ರಿಕಾದ ಚಿತ್ರ ಅವನ ಕಣ್ಮುಂದೆ ಕುಣಿಯುತ್ತಿತ್ತು ಮತ್ತು ಅದನ್ನು ಶತಾಯಗತಾಯ ನನಸಾಗಿಸುತ್ತೇನೆಂಬ ತುಂಬು ವಿಶ್ವಾಸವೂ ಇತ್ತು. ಅದಕ್ಕೆ ಬೇಕಾದ ಹುಂಬ ಧೈರ್ಯ, ಪಟ್ಟುಬಿಡದ ಛಲ, ಆಸೀಮ ಎದೆಗಾರಿಕೆ ಅವನಲ್ಲಿ ತುಂಬಿ ತುಳುಕುತ್ತಿತ್ತು. ಅವೆಲ್ಲಕ್ಕಿಂತಲೂ ಮಿಗಿಲಾಗಿ ಅವನ ನರನಾಡಿಗಳಲ್ಲಿ ನಿರ್ದಯತೆ ಬೆರೆತ ತಣ್ಣನೆಯ ಕ್ರೌರ್ಯ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿತ್ತು….ಮತ್ತದು ಆಫ್ರಿಕಾದ ಇತಿಹಾಸದಲ್ಲಿ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಬರೆದ ಮುನ್ನುಡಿಯಂತಿತ್ತು!! ಈ ಘಟನೆಯ ಮೂಲಕ ಹಿಟ್ಲರ್‌ನ ನಂತರ ಜಗತ್ತು ಕಂಡ ಭೀಕರ ನರಮೇಧವೊಂದರ ರೂವಾರಿ ಹುಟ್ಟಿಬಿಟ್ಟಿದ್ದ… ಮೇಲಾಗಿ ಕ್ರೌರ್ಯದಲ್ಲಿ ಅವನನ್ನೂ ಮೀರಿಸೋವಷ್ಟು ಕಟುಕನೊಬ್ಬ ತಯಾರಾಗಿ ಬಿಟ್ಟಿದ್ದ !!

 

ಈದಿ ಅಮಿನ್ ಹುಟ್ಟಿದ್ದು ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ. ಹುಟ್ಟಿದ ಇಸವಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆಯಾದರೂ ಅವನ ಮಗ ಜಾಫರ್ ಅಮಿನ್ ಹೇಳೋ ಪ್ರಕಾರ ಈದಿ ಅಮಿನ್ ಹುಟ್ಟಿದ್ದು ಉಗಾಂಡಾದ ಈಶಾನ್ಯ ಗಡಿ ಭಾಗದ ಅರುವಾದಲ್ಲಿ; 1927ನೇ ಇಸವಿಯಲ್ಲಿ. ಈ ಪ್ರದೇಶ ಕಾಂಗೋ ಮತ್ತು ಸೂಡಾನ್‌ನ ಗಡಿಭಾಗದಲ್ಲಿದೆ. ಇನ್ನೊಂದು ಮೂಲದ ಪ್ರಕಾರ ಅವನ ಹುಟ್ಟು 1925ರಲ್ಲಿ ಕಂಪಾಲದಲ್ಲಾಯ್ತು. ಕಾಕ್ವಾ(ಕಕ್ವಾ ಅಂತಲೂ ಉಚ್ಚರಿಸಬಹುದು) ಬುಡಕಟ್ಟಿಗೆ ಸೇರಿದ ಅವನಪ್ಪ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದ. ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದ ರೈತ. ಲುಗ್‌ಬರಾ ಬುಡಕಟ್ಟಿಗೆ ಸೇರಿದ ಅವನಮ್ಮನಿಗೆ ನಾಟಿವೈದ್ಯ ಗೊತ್ತಿತ್ತು. ಹಾಗೆಯೇ ಮಾಟ ಮಂತ್ರ ಕೂಡಾ ಮಾಡುತ್ತಿದ್ದಳು ಎನ್ನಲಾಗಿದೆ. ಮುಸ್ಲಿಂ ಸಮುದಾಯದವರ ಹಜ್ ಆಚರಣೆಯ ಈದ್-ಅಲ್-ಅಧಾದ ದಿನವೇ ಹುಟ್ಟಿದ ಕಾರಣಕ್ಕೆ ಈದ್ ಅಂತ ನಾಮಕರಣಗೊಂಡ ಅಮಿನ್‌ನ ಹೆಸರು ಕಾಕ್ವಾ ಬುಡಕಟ್ಟಿನವರ ಬಾಯಲ್ಲಿ ಈದಿ ಅನ್ನಿಸಿಕೊಂಡಿತು.

 

ಈದಿ ಅಮಿನ್ ಹುಟ್ಟು-ಬಾಲ್ಯದ ಸುತ್ತಮುತ್ತ ಕೆಲವು ವರ್ಣರಂಜಿತ ಕತೆಗಳಿವೆ. ಈದಿ ಅಮಿನ್‌ನ ಅಮ್ಮ ಅಕ್ರಮವಾಗಿ ಗರ್ಭ ಧರಿಸಿದ್ದಳು ಎನ್ನುವ ಪುಕಾರು ಕುಟುಂಬ ವಲಯದಲ್ಲಿ ಪಿಸುಮಾತಾಗಿ ಹಬ್ಬಿತ್ತಂತೆ. ಅವರ ಬುಡಕಟ್ಟಿನ ಸಂಪ್ರದಾಯದಲ್ಲಿ ಈ ರೀತಿಯ ಅನುಮಾನಗಳು ಹುಟ್ಟಿಕೊಂಡಾಗ ಅದನ್ನು ಬಗೆಹರಿಸಿಕೊಳ್ಳುವ ವಿಚಿತ್ರ ರೂಢಿಯೊಂದಿತ್ತು. ಆ ಪ್ರಕಾರವಾಗಿ ಹುಟ್ಟಿದ ಮಗುವನ್ನು ದುರ್ಗಮವಾದ ಕಾಡಿನಲ್ಲಿ ಬಿಟ್ಟುಬಂದು, ಮೂರು ದಿನಗಳ ಬಳಿಕವೂ ಮಗು ಬದುಕುಳಿದರೆ ಅದು ಅಕ್ರಮಸಂತಾನವಲ್ಲ ಅಂತ ಸಾಬೀತಾದ ಹಾಗೆ. ಅಂತೆಯೇ ಹಸುಗೂಸು ಅಮಿನ್‌ನನ್ನು ಅವನಜ್ಜ ಕೊಂಡೊಯ್ದು ಕಾಡಿನಲ್ಲಿ ಬಿಟ್ಟು ಬಂದಿದ್ದನಂತೆ. ನಾಲ್ಕನೇ ದಿನ ಹೋಗಿ ನೋಡಿದರೆ ಕೂದಲು ಕೂಡಾ ಕೊಂಕದಂತೆ ಮಗು ಸುರಕ್ಷಿತವಾಗಿತ್ತಂತೆ. ಹಾಗೆ ಜೀವಂತವಾಗುಳಿದ ಮಗುವೇ ಮುಂದೆ ಅದೆಷ್ಟೋ ಜೀವಗಳಿಗೆ ಕಂಟಕವಾಗುತ್ತದೆನ್ನುವ ಮುನ್ಸೂಚನೆ ಅವರ್ಯಾರಿಗೂ ಇರಲಿಲ್ಲವಾದ ಕಾರಣ ದೊಡ್ಡ ಸಂಭ್ರಮದೊಂದಿಗೆ ಮಗುವನ್ನು ಮನೆಗೆ ಕರೆತಂದರು. ಇನ್ನೊಂದು ಕತೆಯ ಪ್ರಕಾರ ಮಗುವಾಗಿದ್ದ ಅಮಿನ್‌ನ ಸುತ್ತ ಬುಡಕಟ್ಟಿನ ಜನರು ಪವಿತ್ರವೆಂದು ಪೂಜಿಸುವ ಘಟಸರ್ಪವೊಂದು ಸುರುಳಿಸುತ್ತಿಕೊಂಡಿತ್ತಂತೆ. ತನ್ನ ಮೊಟ್ಟೆಯನ್ನು ರಕ್ಷಿಸುವ ಹಾವಿನೋಪಾದಿಯಲ್ಲಿ ಸಿಂಬೆ ಸುತ್ತಿಕೊಂಡು ಮಗುವಿನ ತಲೆಯ ಮೇಲೆ ತನ್ನ ಹೆಡೆಯನ್ನಿರಿಸಿ ಸದ್ದಿಲ್ಲದೆ ಹೊರಟು ಹೋಗಿತ್ತಂತೆ. ಬಹುಶ: ಈದಿ ಅಮಿನ್ ಮನಸ್ಸಿನಲ್ಲಿ ಕ್ರೌರ್ಯದ ವಿಷಬೀಜ ಆಗಲೇ ಬಿದ್ದಿರಬೇಕು !! ಇದರಲ್ಲಿ ಕಲ್ಪನೆ ಯಾವುದು ಸತ್ಯ ಯಾವುದು ಅನ್ನೋದು ಗೊತ್ತಿಲ್ಲವಾದರೂ, ಈದಿ ಅಮಿನ್‌ನ ಬಾಲ್ಯದ ಸುತ್ತ ಅತಿರಂಜಕ ಪವಾಡದ ಎಳೆಯೊಂದು ಸೃಷ್ಟಿಸುವಲ್ಲಿ ಈ ಕತೆಗಳು ಯಶಸ್ವಿಯಾಗಿವೆ.

 

ಕಾಕ್ವಾ ಬುಡಕಟ್ಟಿನವರ ಸಂಪ್ರದಾಯಕ್ಕನುಗುಣವಾಗಿ ಈದಿ ಅಮಿನ್‌ಗೆ ಅವೋಂಗೋ ಅಂತ ಹೆಸರಿಡಲಾಗಿತ್ತು. ಆ ಎಳೆ ವಯಸ್ಸಿನ ಕೂಸು ಒದೆಯುವ, ಕಿರುಚುವ ಪರಿಯನ್ನು ಕಂಡೇ ಅವನಿಗೆ ಆ ನಾಮಕರಣವಾಗಿತ್ತಂತೆ. ಅವರ ಭಾಷೆಯಲ್ಲಿ ಅವೋಂಗೋ ಅಂದ್ರೆ ಕಿರುಚುವವನು ಅಥವಾ ಬೊಬ್ಬೆ ಹೊಡೆಯುವವನು ಎಂದರ್ಥ. ಮುಂದೆ ಅವನು ಉಗಾಂಡಾದ ಸರ್ವಾಧಿಕಾರಿಯಾಗಿದ್ದಾಗ ಎಂಟು ವರ್ಷಗಳಲ್ಲಿ ಉಂಟಾದ ಕೋಲಾಹಲಗಳನ್ನು ಗಮನಿಸಿದರೆ ಒಂದರ್ಥದಲ್ಲಿ ಅವನಿಗದು ಅನ್ವರ್ಥನಾಮವೇ ಸರಿ !

 

ಈದಿ ಅಮಿನ್‌ನ ಬಾಲ್ಯ ಸುಖದ ಸುಪ್ಪತ್ತಿಗೆಯೇನಾಗಿರಲಿಲ್ಲ. ಅವನು ಹುಟ್ಟಿದ ಕೆಲಸಮಯದಲ್ಲೇ ವಿರಸದ ಕಾರಣಕ್ಕೆ ಅವನ ಅಪ್ಪ-ಅಮ್ಮ ಬೇರೆಯಾದರು. ಅಮಿನ್ ಬರೀ ಮೂಲ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪೂರೈಸಿದ್ದ. ಆದರೆ ಅಟೋಟಗಳ ವಿಷಯಕ್ಕೆ ಬಂದರೆ ಅವನನ್ನು ಸರಿಗಟ್ಟುವವರೂ ಯಾರೂ ಇರಲಿಲ್ಲ. ಅವನು ಹುಟ್ಟುವ ಪೂರ್ವದಲ್ಲೇ ಅಂದರೆ 1894ರಲ್ಲೇ ಉಗಾಂಡಾವು ಬ್ರಿಟಿಷ್ ಸೈನ್ಯದ ವಸಾಹತಾಗಿತ್ತು. ಬ್ರಿಟಿಷ್ ವಸಾಹತು ಸೈನ್ಯ ಕಿಂಗ್ಸ್ ಆಫ್ರಿಕನ್ ರೈಫಲ್ಸ್ನಲ್ಲಿ ಸಹಾಯಕ ಅಡುಗೆ ಭಟ್ಟನಾಗಿ ಅಮಿನ್ ಸೇರುವಾಗ ಅವನಿಗಿನ್ನೂ ಇಪ್ಪತ್ತು ತುಂಬಿರಲಿಲ್ಲ. ಮುಂದೆ ಎರಡು ವರ್ಷಗಳಲ್ಲೇ ಅವನು ಸೈನ್ಯದ ಯೋಧನಾಗಿ ಬಡ್ತಿ ಪಡೆದ. ಅಲ್ಲಿಂದ ಹಂತಹಂತವಾಗಿ ಪದೋನ್ನತಿಯನ್ನು ಸಾಧಿಸಿ ಮೇಜರ್ ಸರ್ಜೆಂಟ್ ಹಾಗೂ ಪ್ಲಟೂನ್ ಕಮಾಂಡರ್ ಆಗುವಷ್ಟರಲ್ಲಿ ಅಮಿನ್ 30ರ ಯುವಕನಾಗಿದ್ದ. ಅವನ ಮೇಲಧಿಕಾರಿಗಳಿಂದ ಹುಟ್ಟು ನಾಯಕ, ಉತ್ತಮ ಸೈನಿಕ ಹಾಗೂ ತಂತ್ರಗಾರಿಕೆಯಲ್ಲಿ ಎಲ್ಲರನ್ನೂ ಮೀರಿಸಬಲ್ಲ ಚಾಣಾಕ್ಷ ಅನ್ನುವ ಶಹಭಾಶ್‌ಗಿರಿಯನ್ನಾಗಲೇ ಪಡೆದುಬಿಟ್ಟಿದ್ದ.

 

ಈ ಮಧ್ಯೆ 1951ರಲ್ಲಿ ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಉಗಾಂಡಾದ ಚಾಂಪಿಯನ್ ಅನ್ನಿಸಿಕೊಂಡಿದ್ದ ಅಮಿನ್ ಆ ಪಟ್ಟವನ್ನು ನಿರಂತರ ಹತ್ತು ವರ್ಷಗಳ ಕಾಲ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಅವನೊಬ್ಬ ಉತ್ತಮ ಸ್ವಿಮ್ಮರ್ ಹಾಗೂ ರಗ್ಬಿ ಆಟಗಾರ ಕೂಡ ಆಗಿದ್ದ. ಮುಂದೆ 1962ರಲ್ಲಿ ಉಗಾಂಡಾ ಸ್ವತಂತ್ರ ರಾಷ್ಟ್ರವೆನ್ನಿಸಿಕೋಂಡಿತು. ಸರ್ ಎಡ್ವರ್ಡ್ ಮುಟೇಸಾ ರಾಷ್ಟ್ರಾಧ್ಯಕ್ಷ(ರಾಜ)ನಾದನು, ಮಿಲ್ಟನ್ ಒಬೋಟೆ ಪ್ರಧಾನಮಂತ್ರಿಯ ಸ್ಥಾನಕ್ಕೆ ಬಂದ. ಇತ್ತ ಅಮಿನ್ ಸೈನ್ಯದಲ್ಲಿ ಪದವಿಯಿಂದ ಪದವಿಗೆ ಜಿಗಿಯುತ್ತಾ ಬಂದು ಭೂಸೇನೆ ಮತ್ತು ವಾಯುಸೇನೆಗಳ ಡೆಪ್ಯುಟಿ ಕಮಾಂಡರ್ ಹುದ್ದೆಗೇರಿದ. 1966ರಲ್ಲಿ ನಡೆದ ಚಿನ್ನ ಕಳ್ಳಸಾಗಾಣಿಕೆಯ ಹಗರಣವೊಂದು ಒಬೋಟೆ ಮತ್ತು ಅಮಿನ್ ಕೊರಳಿಗೆ ಉರುಳಾಗುವ ಸಾಧ್ಯತೆ ಇತ್ತು. ಆ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಗಳು ಬಂದಾಗ ಸಂಸತ್ತನ್ನೇ ಅಮಾನತ್ತಿನಲ್ಲಿರಿಸಿ ಒಬೋಟೆ ತಾನೇ ರಾಷ್ಟ್ರಾಧ್ಯಕ್ಷನ ಸ್ಥಾನಕ್ಕೆ ಬಂದು ಕುಳಿತು ಬಿಟ್ಟ. ಹೆಚ್ಚೂಕಡಿಮೆ ಅನಕ್ಷರಸ್ಥನಾಗಿದ್ದ ಅಮಿನ್ ಈಗ ಸೈನ್ಯದ ಕಮಾಂಡರ್ ಹುದ್ದೆಗೆ ಬಂದು ಕುಳಿತಿದ್ದ. ತನ್ನ ಬುಡಕಟ್ಟಿನ ಜನರನ್ನೇ ಸೈನ್ಯದ ಆಯಕಟ್ಟಿನ ಜಾಗಕ್ಕೆ ನೇಮಿಸಿಕೊಂಡು ತನ್ನ ಬೆಂಬಲಿಗರ ಪಡೆಯೊಂದನ್ನು ಸದ್ದಿಲ್ಲದೆ ಕಟ್ಟತೊಡಗಿದ್ದ. ಮುಂದೆ 1969ರಿಂದ ಒಬೋಟೆ ಮತ್ತು ಅಮಿನ್ ನಡುವೆ ಮನಸ್ತಾಪಗಳು, ತಿಕ್ಕಾಟ-ಮುಸುಕಿನ ಗುದ್ದಾಟ ಶುರುವಾಯ್ತು. ಈದಿ ಅಮಿನ್ ರಂಗಪ್ರವೇಶಕ್ಕೆ ವೇದಿಕೆ ಸಜ್ಜುಗೊಳ್ಳಲು ಆರಂಭವಾಯ್ತು.

 

ಈ ಹಗ್ಗ ಜಗ್ಗಾಟಕ್ಕೊಂದು ಅಂತಿಮ ತಿರುವು ಸಿಕ್ಕಿದ್ದು 1971ರಲ್ಲಿ. ಸೈನ್ಯದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಒಬೋಟೆ ಅಮಿನ್ ಮೇಲೆ ಕ್ರಮಕೈಗೊಳ್ಳಲು ಮುಂದಾದಾಗ ಅಮಿನ್ ಸಿಡಿದು ನಿಂತ. ಸಿಂಗಾಪುರಕ್ಕೆ ಕಾಮನ್‌ವೆಲ್ತ್ ಸಮ್ಮೇಳನೆಕ್ಕೆಂದು ಒಬೋಟೆ ತೆರಳಿದ್ದ ಸಂದರ್ಭದಲ್ಲಿ ಕ್ಷಿಪ್ರ ಸೈನ್ಯ ಕ್ರಾಂತಿಯೊಂದನ್ನು ನಡೆಸಿ, ಕಂಪಾಲವನ್ನು ಮುತ್ತಿಗೆ ಹಾಕಿ ತನ್ನ ಕೈವಶ ಮಾಡಿಕೊಂಡ. ಎಂಟೆಬೆ ಅಂತಾರಾಷ್ಟ್ರೀಯ ನಿಲ್ದಾಣ ಅವನ ಅಧೀನಕ್ಕೆ ಬಂತು. ಹದಗೆಟ್ಟ ಶಾಂತಿ ಸುವ್ಯವಸ್ಥೆ, ಆರ್ಥಿಕ ದುಸ್ಥಿತಿ, ಭ್ರಷ್ಟಾಚಾರದ ಆರೋಪ ಹೊರಿಸಿ ಒಬೋಟೆಯನ್ನು ಪದಚ್ಯುತಗೊಳಿಸಿ ಸೈನ್ಯಾಡಳಿತದ ಘೋಷಣೆ ಮಾಡಿದ. ಅಧಿಕಾರವಹಿಸಿಕೊಂಡ ಅಮಿನ್ ಹೇಳಿದ್ದು ಇಷ್ಟೇ… ನನಗೆ ಅಧಿಕಾರದ ಮಹತ್ವಾಕಾಂಕ್ಷೆ ಇಲ್ಲ. ನಾನೊಬ್ಬ ಸೈನಿಕ ಮಾತ್ರ. ಇದೊಂದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ನನ್ನ ಕಾಳಜಿ ಏನಿದ್ದರೂ ನಿಮ್ಮೆಲ್ಲರ ಒಳಿತು ಮತ್ತು ಈ ದೇಶವನ್ನು ಬಲಿಷ್ಟಗೊಳಿಸುವುದು…. ಜನ ಖುಶಿಯಿಂದ ಹುಚ್ಚೆದ್ದು ಬೀದಿಗಿಳಿದು ಬಂದು ಅವನನ್ನು ಬೆಂಬಲಿಸಿದರು… ಹರ್ಷೋದ್ಗಾರ ಮಾಡಿದರು. ಅಂತರರಾಷ್ಟ್ರೀಯ ಸಮುದಾಯ ಕೂಡಾ ಅವನ ಕ್ರಮವನ್ನು ಸ್ವಾಗತಿಸಿತು. ಇದಾದ ಒಂದು ವಾರದಲ್ಲೇ ಫೆಬ್ರವರಿ ಎರಡರಂದು ಅಮಿನ್ ಮುಕುಟವಿಲ್ಲದ ಮಹಾರಾಜನಂತೆ ಸಿಂಹಾಸನವನ್ನೇರಿದ. ಹೀಗೆ ತಾತ್ಕಾಲಿಕವೆಂದು ಹೇಳಿಕೊಂಡು ಅಧಿಕಾರದ ರುಚಿ ಕಂಡ ಅಮಿನ್ ಸರಿ ಸುಮಾರು ಎಂಟು ವರ್ಷಗಳ ಕಾಲ ಮೆರೆದಾಡಿಬಿಟ್ಟ. ಯಾವ ಚುನಾವಣೆಯನ್ನು ನಡೆಸುವ ಗೋಜಿಗೂ ಹೋಗಲಿಲ್ಲ…. ಹೀಗೆ ಶುರುವಾಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಆಡಳಿತಗಾರನೊಬ್ಬನ ಸರ್ವಾಧಿಕಾರಿ ದರ್ಬಾರು… ಎಂಟು ವರ್ಷಗಳ ನಿರಂಕುಶ ಪ್ರಭುತ್ವದ ಕಾರ್ಬಾರು… ಅದೆಷ್ಟೋ ಜನರ ಪ್ರಾಣಕ್ಕೆರವಾದ ನರಮೇಧದದ ಅಧ್ಯಾಯ ಇನ್ನು ಶುರು.

 

( ಮುಂದಿನ ಭಾಗದಲ್ಲಿ…. ಈದಿ ಅಮಿನ್ ದರ್ಬಾರಿನ ಆ ದಿನಗಳು…..!!)

 

ಮೊತ್ತ ಮೊದಲನೆಯದಾಗಿ ವಿಜಯಕರ್ನಾಟಕಕ್ಕೆ ಒಂದು ಧನ್ಯವಾದ ಹೇಳ್ಬೇಕು. ಕಳೆದ ಆದಿತ್ಯವಾರದ ಸಾಪ್ತಾಹಿಕ ವಿಜಯದಲ್ಲಿ ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಅನ್ನೋ ಚಿತ್ರ ಆವತ್ತು ರಾತ್ರಿ 11.25ಕ್ಕೆ ಸ್ಟಾರ್ ಮೂವೀಸ್‌ನಲ್ಲಿ  ಬರುತ್ತದೆ… ಈದಿ ಅಮಿನ್ ಕುರಿತಾದ ಚಿತ್ರವದು…ತುಂಬಾ ಚೆನ್ನಾಗಿದೆ ಅಂತೆಲ್ಲಾ ವಿವರಣೆ ಇತ್ತು… ರವಿ ಬೆಳಗೆರೆ ಹಿಂದೊಮ್ಮೆ ಕಂಪಾಲಾಗೆ ಹೋಗಿ ಬಂದಿದ್ದಾಗ ಹಾಯ್ ಬೆಂಗಳೂರ್‌ನಲ್ಲಿ ಬರೆದ ಲೇಖನಳಲ್ಲಿ ಈದಿ ಅಮೀನ್ ಬಗ್ಗೆ ಓದಿದ್ದೆ. ಆಮೇಲೆ ಈದಿ ಅಮಿನ್ ಒಂದು ಡಾಕ್ಯುಮೆಂಟರಿ ತರಹದ ಸಿ.ಡಿ. ಯನ್ನು ಕೂಡಾ ನೋಡಿದ್ದೆ. ಮೊನ್ನೆ ರಾತ್ರಿ ಹನ್ನೊಂದುವರೆಗೆ ಚಿತ್ರ ನೋಡಿದೆ ಮೇಲೆ ಯಾಕೋ ಈದಿ ಅಮಿನ್ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತ್ತು. ಅವನ ಅಷ್ಟೂ ಕ್ರೌರ್ಯದ ಕತೆಗಳು ಒಂದು ಕಡೆಯಾದರೆ, ಆಫ್ರಿಕಾ…ಅದರಲ್ಲೂ ಉಗಾಂಡಾವನ್ನು ಒಂದು ಬಲಿಷ್ಟ ಶಕ್ತಿಯನ್ನಾಗಿ, ಅಭಿವೃದ್ದಿಯ ಹಾದಿಯಲ್ಲಿ ಮುನ್ನಡೆಸಬೇಕೆಂಬ ಅವನ ಅದಮ್ಯ ಹಂಬಲ. ಅವನು ಹಿಡಿದ ಹಾದಿ ತಪ್ಪಾಗಿರಬಹುದು… ಆದರೆ ಅಫ್ರಿಕಾ..ಉಗಾಂಡಾದ ಕುರಿತು ಅವನು ಕಂಡ ಕನಸು, ಜನರಲ್ಲಿ ಹುಟ್ಟಿಸಿದ ಭರವಸೆ-ವಿಶ್ವಾಸ ಇವೆಲ್ಲವನ್ನು ಮೆಚ್ಚೋಣವೇ ಅನ್ನುವಷ್ಟರಲ್ಲೇ… ಈ ಹಾದಿಯಲ್ಲಿ ಅವನು ಉರುಳಿಸಿದ ಹೆಣಗಳು ಕಾಲ್ತೊಡರಿಕೊಂಡಂತಾಗುತ್ತದೆ; ನೆತ್ತರ ವಾಸನೆಗೆ ವಾಕರಿಕೆ ಉಮ್ಮಳಿಸಿಕೊಂಡು ಬರುತ್ತದೆ…

 

ಹೀಗೆ ಒಂದು ರೀತಿಯಲ್ಲಿ ವಿರೋಧಾಭಾಸಗಳ ಮೊತ್ತದಂತಿರುವ ಅವನ ಬಗ್ಗೆ ನಾನು ಓದಿದ್ದು… ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಚಿತ್ರದ ಕುರಿತು ಒಂದಿಷ್ಟು ಬರೆಯಬೇಕೆನಿಸಿದೆ… ಒಂದು ಲೇಖನದಲ್ಲಿ ಪೂರ್ತಿ ಬರೆಯೋದು ಕಷ್ಟವೆನ್ನಿಸುತ್ತದೆ… ಹಾಗಾಗಿ ಎರಡು-ಮೂರು ಭಾಗಗಳಲ್ಲಿ ನಾನು ಓದಿದ್ದು..ಕಂಡದ್ದು..ನನಗನ್ನಿಸಿದ್ದು ಇವೆಲ್ಲವನ್ನೂ ಹೇಳಬೇಕೆನ್ನಿಸಿದೆ… ಮುಂದಿನ ಲೇಖನದಲ್ಲಿ ಈದಿ ಅಮೀನ್ ಕುರಿತು ಒಂದಿಷ್ಟು ಮಾಹಿತಿ ಹಿಡಿದುಕೊಂಡು ಬರುತ್ತೇನೆ… ಓದೋಕೆ ನೀವೆಲ್ಲಾ ಸಿದ್ಧ ಅನ್ನೋದಾದ್ರೆ ಮಾತ್ರ…

 

ಕಳೆದ ಕೆಲವು ದಿನಗಳಿಂದ ಬ್ಲಾಗ್‌ನ್ನು ಸಾಧ್ಯವಾದಷ್ಟು ಭಿನ್ನವಾಗಿಸಬೇಕೆಂದು ಪ್ರಯತ್ನಿಸುತ್ತಾ ಇದ್ದೇನೆ. ಡಕ್ವರ್ತ್-ಲೂಯೀಸ್ ಕುರಿತಾದ ವಿವರಣೆ ಈ ದಿಸೆಯಲ್ಲಿ ನಾನು ಮಾಡಿದ ಒಂದು ಪುಟ್ಟ ಪ್ರಯೋಗ. ಮಾಮೂಲಿ ಚಿತ್ರ ವಿಮರ್ಶೆ, ಹನಿಗಳು..ಪುಸ್ತಕ…ಇವೆಲ್ಲದ ಮಧ್ಯೆ ಒಂದಿಷ್ಟು ವಿಶಿಷ್ಟ ವಿಷಯಗಳೂ ಇರಲಿ ಅಂತ… ನಿಮಗೆ ಖಂಡಿತಾ ಇಷ್ಟವಾಗಲಿವೆ ಅನ್ನುವ ಭರವಸೆಯೊಂದಿಗೆ… ಮುಂದಿನ ಲೇಖನದಲ್ಲಿ ಈದಿ ಅಮಿನ್ ಬಗ್ಗೆ ಬರೆಯುವ ಸಿದ್ದತೆಯಲ್ಲಿರುವೆ 

ಮೊನ್ನೆ ರಾತ್ರಿ ಹತ್ತು ಗಂಟೆಗೆ ಸಿಎನ್‌ಎನ್ ಐಬಿಎನ್ನಲ್ಲಿ ರಾಜ್‌ದೀಪ್ ಸರ್ದೇಸಾಯಿ ಜೊತೆಗೆ ಶಾರುಕ್ ಖಾನ್ ಸಂದರ್ಶನ ಬರ್ತಾ ಇತ್ತು. 26/11 ಮುಂಬೈ ಭಯೋತ್ಪಾದಕ ದಾಳಿಯ ಕುರಿತು ಶಾರುಕ್ ತುಂಬಾ ನೇರವಾಗಿ, ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ಮಂಡಿಸಿದ್ದರು. ಅವರ ಮಾತಿನಲ್ಲಿ ಹೊರಹೊಮ್ಮಿದ ಭಾವನೆ ನಮ್ಮೆಲ್ಲರ ಭಾವನೆಗಳಿಗೆ ಕನ್ನಡಿ ಹಿಡಿಯುವಂತಿತ್ತು. ಒಂದು ಕ್ಷಣ ನಮ್ಮ ರಾಜಕಾರಣಿಗಳೂ ಹೀಗೆ ಮಾತಾಡುವ ಹಾಗಿದ್ದರೆ… ಮಾತಾಡಿದ್ದನ್ನು ಮಾಡಿ ದಕ್ಕಿಸಿಕೊಳ್ಳುವ ಛಾತಿ ತೋರಿಸಿದ್ದಿದ್ರೆ…. ಅನ್ನಿಸಿದ್ದು ಸುಳ್ಳಲ್ಲ. ಆ ಕಾರ್ಯಕ್ರಮ ಟಿ.ವಿ.ಯಲ್ಲಿ ನೋಡಲು-ಕೇಳಲು ಸಾಧ್ಯವಾಗದವರಿಗಾಗಿ ಆ ಸಂಭಾಷಣೆಯ ಪೂರ್ಣಪಾಠ ಈ ಕೆಳಗಿನ ಕೊಂಡಿಯಲ್ಲಿದೆ… ನೋಡಿ ಒಮ್ಮೆ..

http://news.in.msn.com/national/article.aspx?cp-documentid=1717087

ಕ್ರಿಕೆಟ್-ಮಳೆ-ಡಕ್ವರ್ತ್ಲೂಯಿಸ್ ನಿಯಮ… ಇದೊಂತರ ಬಿಡಿಸಲಾಗದ ನಂಟು. ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮಾತ್ರ ಈ ನಿಯಮ ಬಿಡಿಸಲಾಗದ ಕಗ್ಗಂಟು. ಹಾಗಂತ ನಾನೂ ನಂಬಿಕೊಂಡಿದ್ದೆ… ಮೊನ್ನೆಯವರೆಗೂ. ಕ್ರಿಕೆಟ್ ವೀಕ್ಷಕ ವಿವರಣೆ ನೀಡುವ ಮಹಶಯರೆಲ್ಲ ಹಾಗಂತಲೇ ತಾವೂ ನಂಬಿದ್ದಾರೆ… ನಮ್ಮನ್ನೂ ನಂಬಿಸಿಬಿಟ್ಟಿದ್ದಾರೆ. ನಿಜಕ್ಕೂ ಆ ನಿಯಮ ಕಬ್ಬಿಣದ ಕಡಲೆಯೆ? ಹೀಗೊಂದು ಪ್ರಶ್ನೆಯನ್ನಿರಿಸಿಕೊಂಡು ಅಂತರಜಾಲದಲ್ಲಿ ಅಂತರಪಿಶಾಚಿಯಾಗಿ ಅಲೆದು ಸುಸ್ತಾಗಿ, ಕೊನೆಗೂ ಮಸ್ತಾಗಿರೋ ಮಾಹಿತಿಯನ್ನೆಲ್ಲಾ ಹುಡುಕಿ ತಂದು, ಅರಗಿಸಿಕೊಂಡು, ಒಂದಿಷ್ಟು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅಂತ ಕುಳಿತಿದ್ದೇನೆ. ಈ ನಿಯಮದ ಹಿಂದಿರುವ ಸಂಖ್ಯಾಶಾಸ್ತ್ರದ ಸಿದ್ಧಾಂತಗಳನ್ನು ಬದಿಗಿರಿಸಿ, ಈ ನಿಯಮವನ್ನು ಅನ್ವಯಿಸುವ ಬಗೆ ಹೇಗೆ ಅಂತ ತಿಳಿದುಕೊಂಡರೆ ಸಾಕಲ್ವೆ? ಇದನ್ನು ತೀರಾ ಪ್ರದೇಶ ಸಮಾಚಾರದ ರಣಜಿ ಕ್ರಿಕೇಟ್ ಸುದ್ದಿ ಹೇಳೋ ಶೈಲಿಯಲ್ಲಿ ಎಸೆತ, ಹುದ್ದರಿ ಅಂತೆಲ್ಲ ವಿವರಿಸುತ್ತಾ ಕುಳಿತುಕೊಂಡರೆ ವಿವರಣೆ ಇನ್ನಷ್ಟು ಜಟಿಲವಾಗುತ್ತದೆ. ಹಾಗಾಗಿ ಅಲ್ಲಲ್ಲಿ ಕ್ರಿಕೆಟ್ನಲ್ಲಿ ಬಳಕೆಯಿರುವ ಪದಗಳಿಗಾಗಿ ಇಂಗ್ಲೀಷ್ನ ಮೊರೆ ಹೋದರೆ ತಪ್ಪು ತಿಳಿಯೋಲ್ಲ ಅಂತ ಭಾವಿಸಿದ್ದೇನೆ.

 

ಮಂತ್ರಕ್ಕಿಂತ ಉಗುಳು ಜಾಸ್ತಿಯಾಯ್ತು ಅಂದ್ರಾ? ಇರಲಿ, ನೇರ ವಿಷಯಕ್ಕೇ ಬರ್ತೀನಿ. ಈ ನಿಯಮದ ಪ್ರಮುಖ ಅಂಶ ಅಂದ್ರೆ ರಿಸೋರ್ಸ್. ಇಲ್ಲಿನ ಎಲ್ಲಾ ಲೆಕ್ಕಾಚಾರಗಳೂ ಎರಡೂ ತಂಡಕ್ಕೆ ಲಭ್ಯವಿರುವ ರಿಸೋರ್ಸ್ ಆಧಾರದ ಮೇಲೆ ನಿಂತಿವೆ. ಲಭ್ಯವಿರುವ ರಿಸೋರ್ಸ್ ನಿರ್ಧಾರಕ್ಕೆ ಮುಖ್ಯವಾಗಿ ಎರಡು ಅಂಶಗಳನ್ನು ಬಳಸಲಾಗುತ್ತದೆ…

–           ಉಳಿದಿರುವ ವಿಕೆಟ್ಗಳು

–           ಬಾಕಿ ಉಳಿದಿರುವ ಓವರ್ಸ್ ಇಲ್ಲ ಬಾಲ್ಸ್

ಸರಳವಾಗಿ ಹೇಳಬೇಕೆಂದರೆ ಹೆಚ್ಚು ವಿಕೆಟ್ ಕೈಯಲ್ಲಿದ್ದರೆ, ಬಾಕಿ ಉಳಿದಿರುವ ಬಾಲ್ಗಳು ಜಾಸ್ತಿ ಇದ್ದರೆ, ತಂಡವೊಂದು ಹೆಚ್ಚು ರನ್ ಗಳಿಸಲು ಸಮರ್ಥ ಅನ್ನೋದು ಈ ನಿಯಮದ ಪ್ರಮುಖ ನಂಬಿಕೆ. ಈ ಆಧಾರದ ಮೇಲೆ ಸಂಖ್ಯಾಶಾಸ್ತ್ರದ ನಿಯಮದ ಅನ್ವಯ ಡಕ್ವರ್ತ್-ಲೂಯಿಸ್ ಅನ್ನುವ ಇಬ್ಬರು ಸಂಖ್ಯಾಶಾಸ್ತ್ರಜ್ಞರು ಚಾರ್ಟ್ (ಗ್ರಾಫ್) ಒಂದನ್ನು ಸಿದ್ಧಪಡಿಸಿದ್ದಾರೆ. ಉಳಿದಿರುವ ವಿಕೆಟ್ ಮತ್ತು ಬಾಕಿ ಉಳಿದಿರುವ ಓವರ್ಗಳ ಆಧಾರದ ಮೇಲೆ ತಂಡವೊಂದರ ಬಳಿ ಉಳಿದಿರುವ ರಿಸೋರ್ಸ್ ಎಷ್ಟು ಅನ್ನುವುದನ್ನು ಈ ಗ್ರಾಫ್ ತಿಳಿಸುತ್ತದೆ. ಅದರ ಆಧಾರದ ಮೇಲೆ ಗೆಲುವಿನ ಗುರಿ ನಿರ್ಧರಿಸಲಾಗುತ್ತದೆ. ಆ ಗ್ರಾಫ್ ಮತ್ತು ಚಾರ್ಟ್ ಈ ಕೆಳಗಿನಂತಿದೆ… 

 

untitled12

untitled21

 

ಈ ಚಾರ್ಟನ್ನು 50ರಿಂದ 20 ಓವರ್ಗಳವರೆಗಿನ ಯಾವ ಪಂದ್ಯಕ್ಕೂ ಅನ್ವಯಿಸಿ ನೋಡಬಹುದು ( ಒಂದು ಪಂದ್ಯ ಸಿಂಧು ಅಂತಾಗಲು ಕನಿಷ್ಟ 20 ಓವರ್ಗಳನ್ನು ಎರಡೂ ತಂಡಗಳು ಆಡಲೇಬೇಕು)

 

ಈಗ ಈ ಚಾರ್ಟನ್ನು ಬಳಸುವ ವಿಧಾನವನ್ನು ನಿಯಮವನ್ನು ಅನ್ವಯಿಸುವುದು ಹೇಗೆ ಅನ್ನುವ ಕೆಲವು ಸರಳ ಉದಾಹರಣೆಗಳೊಂದಿಗೆ ತಿಳಿದುಕೊಳ್ಳೋಣ.

 

ಉದಾ 1:

ಮೊದಲು ಭಾರತ ಬ್ಯಾಟಿಂಗ್ ಮಾಡಿ ಪೂರ್ತಿ 50 ಓವರ್ಗಳನ್ನು ಆಡಿ 260 ರನ್ ಗಳಿಸಿದೆ ಎಂದಿಟ್ಟುಕೊಳ್ಳೋಣ. ಆಸ್ಟ್ರೇಲಿಯಾದ ಆಟ ಪ್ರಾರಂಭವಾಗುವ ಮೊದಲೇ ಮಳೆ ಸುರಿದು ಎರಡನೇ ಇನ್ನಿಂಗ್ಸ್ ಬರೀ 30 ಓವರ್ಗಳಿಗೆ ಸೀಮಿತಗೊಂಡರೆ, ಆಸ್ಟ್ರೇಲಿಯಾ ಗೆಲ್ಲಲು ಗಳಿಸಬೇಕಾದ ರನ್ಗಳು ಎಷ್ಟು?

 

 

ಆಸ್ಟ್ರೇಲಿಯಾದ ಬಳಿ ಬಾಕಿ ಉಳಿದಿರುವ ಓವರ್ಗಳು 30

ಕೈಯಲ್ಲಿ ಇರುವ ವಿಕೆಟ್ಗಳು 10

ಮೇಲಿನ ಚಾರ್ಟ್ನ ಪ್ರಕಾರ ಆಸ್ಟ್ರೇಲಿಯದ ಬಳಿ ಉಳಿದಿರುವ ರಿಸೋರ್ಸ್ 77.1%

(ಭಾರತದ ಬಳಿ ಪೂರ್ತಿ 100% ರಿಸೋರ್ಸ್ ಲಭ್ಯವಿತ್ತು)

T = (S x R2/R1)  

T = ಟಾರ್ಗೆಟ್

S = ಟೀಮ್1 ಗಳಿಸಿದ ರನ್ಗಳು

R1 = ಟೀಮ್1 ಬಳಿ ಇರುವ ರಿಸೋರ್ಸ್

R2= ಟೀಮ್2 ಬಳಿ ಇರುವ ರಿಸೋರ್ಸ್

ಹಾಗಾಗಿ ಒಟ್ಟು ಮೊತ್ತದ 77.1%+1 ರನ್ ಗಳಿಸಿದರೆ ಆಸ್ಟ್ರೇಲಿಯ ಜಯಗಳಿಸುತ್ತದೆ.

ಅಂದರೆ (260*77.1/100) +1 =200.46 + 1 = 201.46

200 ರನ್ ಗಳಿಸಿದರೆ ಪಂದ್ಯ ಟೈ ಆಗುತ್ತದೆ. 201 ಗೆಲುವಿನ ಗುರಿ.

 

ಉದಾ 2:

ಮೊದಲು ಭಾರತ ಬ್ಯಾಟಿಂಗ್ ಮಾಡಿ ಪೂರ್ತಿ 50 ಓವರ್ಗಳನ್ನು ಆಡಿ 260 ರನ್ ಗಳಿಸಿದೆ ಎಂದಿಟ್ಟುಕೊಳ್ಳೋಣ. ಆಸ್ಟ್ರೇಲಿಯಾದ ಆಟ ಪ್ರಾರಂಭವಾಗಿ 40 ಓವರ್ಗಳಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ ಅಂದಿಟ್ಟುಕೊಳ್ಳಿ. ಆಗ ಮಳೆ ಸುರಿದು ಆಟ ಮುಂದುವರಿಸಲು ಸಾಧ್ಯವಾಗದಿದ್ದರೆ ಯಾರು ಗೆಲ್ಲುತ್ತಾರೆ?

 

ಆಸ್ಟ್ರೇಲಿಯಾದ ಬಳಿ ಬಾಕಿ ಉಳಿದಿರುವ ಓವರ್ಗಳು 10

ಕೈಯಲ್ಲಿ ಇರುವ ವಿಕೆಟ್ಗಳು 4

ಮೇಲಿನ ಚಾರ್ಟ್ನ ಪ್ರಕಾರ ಆಸ್ಟ್ರೇಲಿಯದ ಬಳಿ ಉಳಿದಿರುವ ರಿಸೋರ್ಸ್ 24.6%

(ಭಾರತದ ಬಳಿ ಪೂರ್ತಿ 100% ರಿಸೋರ್ಸ್ ಲಭ್ಯವಿತ್ತು)

ಹಾಗಾಗಿ ಆಸ್ಟ್ರೇಲಿಯಾಗೆ ಲಭ್ಯವಿದ್ದ ಒಟ್ಟು ರಿಸೋರ್ಸ್= 100-24.6 =75.4

ಅಂದರೆ (260 * 75.4/100) + 1 = 197.56 =197

ಆದರೆ ಆಸ್ಟ್ರೇಲಿಯ ಗಳಿಸಿದ್ದು 195. ಹಾಗಾಗಿ ಭಾರತ 1 ರನ್ಗಳಿಂದ ಜಯಗಳಿಸಿದಂತಾಗುತ್ತದೆ.

 

 

ಒಂದು ವೇಳೆ ಆಸ್ಟ್ರೇಲಿಯ 5 ವಿಕೆಟ್ ಮಾತ್ರ ಕಳೆದುಕೊಂದಿದ್ದರೆ?

ಆಸ್ಟ್ರೇಲಿಯಾದ ಬಳಿ ಬಾಕಿ ಉಳಿದಿರುವ ಓವರ್ಗಳು 10

ಕೈಯಲ್ಲಿ ಇರುವ ವಿಕೆಟ್ಗಳು 5

ಮೇಲಿನ ಚಾರ್ಟ್ನ ಪ್ರಕಾರ ಆಸ್ಟ್ರೇಲಿಯದ ಬಳಿ ಉಳಿದಿರುವ ರಿಸೋರ್ಸ್ 27.5%

(ಭಾರತದ ಬಳಿ ಪೂರ್ತಿ 100% ರಿಸೋರ್ಸ್ ಲಭ್ಯವಿತ್ತು)

ಹಾಗಾಗಿ ಆಸ್ಟ್ರೇಲಿಯಾಗೆ ಲಭ್ಯವಿದ್ದ ಒಟ್ಟು ರಿಸೋರ್ಸ್= 100-27.5 =72.5

ಅಂದರೆ (260 * 72.5/100) + 1 = 189.5 =189

ಆದರೆ ಆಸ್ಟ್ರೇಲಿಯ ಗಳಿಸಿದ್ದು 195. ಹಾಗಾಗಿ ಆಸ್ಟ್ರೇಲಿಯ 6 ರನ್ಗಳಿಂದ ಜಯಗಳಿಸಿದಂತಾಗುತ್ತದೆ.

 

ಉದಾ 3:

ಪಂದ್ಯಕ್ಕೂ ಮೊದಲೇ ಮಳೆಬಂದು 40 ಓವರ್ಗಳಿಗೆ ಪಂದ್ಯ ಸೀಮಿತವಾಗಿದೆ ಅಂತಿಟ್ಟುಕೊಳ್ಳೋಣ. ಮೊದಲು ಭಾರತ ಬ್ಯಾಟಿಂಗ್ ಮಾಡಿ  40 ಓವರ್ಗಳನ್ನು ಆಡಿ 220 ರನ್ ಗಳಿಸಿದೆ ಎಂದಿಟ್ಟುಕೊಳ್ಳೋಣ. ಆಸ್ಟ್ರೇಲಿಯಾದ ಆಟ ಪ್ರಾರಂಭವಾಗಿ 20 ಓವರ್ಗಳಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ ಅಂದಿಟ್ಟುಕೊಳ್ಳಿ. ಆಗ ಮಳೆ ಸುರಿದು 10 ಓವರ್ ಆಟ ಕಡಿತವಾಯ್ತು ಅಂತಿಟ್ಟುಕೊಳ್ಳೋಣ. ಬಾಕಿ ಉಳಿದ ಹತ್ತು ಓವರ್ಗಳಲ್ಲಿ ಆಸ್ಟ್ರೇಲಿಯಾ ಗಳಿಸಬೇಕಾದ ಮೊತ್ತ ಎಷ್ಟು?

 

ಮೇಲಿನ ಚಾರ್ಟ್ನ ಪ್ರಕಾರ ಪಂದ್ಯ ನಿಂತಾಗ ಆಸ್ಟ್ರೇಲಿಯಾದ ಬಳಿ ಬಾಕಿ ಉಳಿದಿದ್ದ ರಿಸೋರ್ಸ್ -50.6 (20 ಓವರ್ 7 ವಿಕೆಟ್)

ಪಂದ್ಯ ಪುನಹ ಶುರುವಾದಾಗ ಆಸ್ಟ್ರೇಲಿಯಾದ ಬಳಿ ಬಾಕಿ ಉಳಿದಿದ್ದ ರಿಸೋರ್ಸ್ -31.4 (10 ಓವೆರ್ 7 ವಿಕೆಟ್)

ಆಸ್ಟ್ರೇಲಿಯಾಕ್ಕದ ಒಟ್ಟು ರಿಸೋರ್ಸ್ ನಷ್ಟ– 50.6 31.4 = 19.2

ಮೇಲಿನ ಚಾರ್ಟ್ನ ಪ್ರಕಾರ ಭಾರತದ ಬಳಿ 90.3% ರಿಸೋರ್ಸ್ ಲಭ್ಯವಿತ್ತು

ಹಾಗಾಗಿ ಆಸ್ಟ್ರೇಲಿಯಾಗೆ ಲಭ್ಯವಿದ್ದ ಒಟ್ಟು ರಿಸೋರ್ಸ್= 90.3-19.2 =71.1

ಅಂದರೆ (220 * 71.1/90.3) + 1 = 174.22 =174

ಆದರೆ ಆಸ್ಟ್ರೇಲಿಯ ಈಗಾಗಲೇ 110 ರನ್ಗಳಿಸಿದ್ದು ಇನ್ನುಳಿದ 10 ಓವರ್ಗಳಲ್ಲಿ ಅದು 64 ರನ್ ಮಾತ್ರ ಗಳಿಸಿದರೆ ಸಾಕು.

 

ಉದಾ 4:

ಮೊದಲ ತಂಡ ಬ್ಯಾಟಿಂಗ್ ನಡೆಸುವಾಗ ಮಳೆ ಬಂದು ಓವರ್ಗಳ ಸಂಖ್ಯೆ ಕಡಿತವಾದರೆ?

 

40 ಓವರ್ಗಳ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ 20 ಓವರ್ ಆಡುವಾಗ ಮಳೆ ಬಂದು ಪಂದ್ಯ ನಿಂತಿತು ಅಂದು ಕೊಳ್ಳೋಣ. ಆಗ ಸ್ಕೋರ್ 120ಕ್ಕೆ 3 ವಿಕೆಟ್. ಮಳೆಯಿಂದ 10 ಓವರ್ ಕಡಿತವಾಗಿ 30 ಓವರ್ಕೆ ಮರುನಿಗದಿಯಾಗಿದೆ ಅಂದು ಕೊಳ್ಳೋಣ. ಭಾರತ 30 ಓವರ್ಗಳ ಕೊನೆಯಲ್ಲಿ 190 ರನ್ ಗಳಿಸಿತು ಅಂತಿಟ್ಟುಕೊಳ್ಳೀ.

 

40 ಓವರ್ ಪಂದ್ಯದಲ್ಲಿ ಮೊದಲನೆ ಇನ್ನಿಂಗ್ಸ್ ಆರಂಭಿಸಿದ ಭಾರತದ ಬಳಿ ಇದ್ದ ರಿಸೋರ್ಸ್ 90.3%

20 ಓವರ್ಗಳಲ್ಲಿ ಪಂದ್ಯ ನಿಂತಾಗ ಭಾರತದ ಬಳಿ ಇದ್ದ ರಿಸೋರ್ಸ್ -50.6% ( 20 ಓವರ್ 7 ವಿಕೇಟ್)

ಪುನಃ ಪಂದ್ಯ ಆರಂಭವಾದಾಗ ಭಾರತದ ಬಳಿ ಉಳಿದಿದ್ದ ರಿಸೋರ್ಸ್ 31.4% ( 10 ಓವೆರ್ಸ್ 7 ವಿಕೆಟ್)

ಭಾರತಕಾದ ರಿಸೊರ್ಸ್ ನಷ್ಟ =  50.6-31.4 =19.2%

ಭಾರತಕ್ಕೆ ಲಭ್ಯವಿದ್ದ ರಿಸೋರ್ಸ್ = 90.3- 19.2 =71.1

 

ಭಾರತದ ಓಟ್ಟು ರನ್‌ಗಳು = 190

ಆಸ್ಟ್ರೇಲಿಯಾ ಬಳಿ ಲಭ್ಯವಿರುವ ರಿಸೋರ್ಸ್ = 77.1 ( 30 ಓವರ್ 10 ವಿಕೆಟ್)

 

ಹಾಗಾಗಿ ಆಸ್ಟ್ರೇಲಿಯಾ ಗುರಿ (77.1/71.1*190)+1 = 207.03 = 207

 ಈ ಚಾರ್ಟು ಕೈಲಿದ್ರೆ ಇನ್ಮುಂದೆ ನೀವೆ ಲೆಕ್ಕ ಹಾಕಬಹುದು. ಆದ್ರೆ ಮೊನ್ನಿನ ಭಾರತ ಇಂಗ್ಲೆಂದ್ ಪಂದ್ಯದ ತರಹ ಪದೇ ಪದೇ ಮಳೆ ಬಂದು ಓವರ್ ಅನೇಕ ಬಾರಿ ಮರುನಿಗದಿಗೊಂಡ ಸಂದರ್ಭದಲ್ಲಿ ಲೆಕ್ಕ ಹಾಕೊದು ಸ್ವಲ್ಪ ಕಷ್ಟಾನೆ…

ಕಳೆದ ಕೆಲ ತಿಂಗಳುಗಳಿಂದ ದೇಶದ ನಾನಾ ಭಾಗಗಳಲ್ಲಿ ನಡೆದ ಮಾರಣ ಹೋಮದಿಂದ ಕೋಟ್ಯಾಂತರ ಭಾರತೀಯರ ಎದೆಯೊಳಗೆ ಬಿದ್ದ ಭಯಾತಂಕಗಳ ಬೀಜ ಮುಂಬೈನ ದುರಂತ ಅಧ್ಯಾಯದ ಬಳಿಕ ಚಿಗಿತು ಬೆಳೆದು ಹೆಮ್ಮರವಾಗಿದೆ. ಈ ವ್ಯವಸ್ಥೆಯ ಬಗ್ಗೆ, ರಾಜಕಾರಣಿಗಳ ಸೋಗಲಾಡಿತನದ ಕುರಿತಾಗಿದ್ದ ಜಿಗುಪ್ಸೆ ತಾರಕವನ್ನು ಮುಟ್ಟಿದೆ. ವೀರಯೋಧ ಸಂದೀಪ್ ತಂದೆ ಕೆರಳದ ಮುಖ್ಯಮಂತ್ರಿ ಭೇಟಿಗೆ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಪುತ್ರಶೋಕದ ಬಿಸಿಗಿಂತ ಈ ವ್ಯವಸ್ಥೆಯ ವಿರುದ್ಧ ಹುಟ್ಟಿದ ರೇಜಿಗೆಯ ಪಾಲೇ ಹೆಚ್ಚಿರಬೇಕು ಎಂದೆನ್ನಿಸುತ್ತದೆ. ಇದನ್ನು ಸರಿಪಡಿಸುವುದು ಹೇಗೆನ್ನುವದರ ಬಗ್ಗೆ ಕಾರ್ಯಪ್ರವೃತ್ತರಾಗುವ ಬದಲು, ಗೃಹಮಂತ್ರಿಯೊಬ್ಬನನ್ನು ಬದಲಾಯಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ಕೂರಿಸಿದರೆ ಜನರ ಅಸಹನೆ ತಣ್ಣಗಾಗಿ ಚುನಾವಣೆಯಲ್ಲಿ ವಿರೋಧಿ ಅಲೆಯ ಪ್ರಭಾವ ತಣ್ಣಗಾಗುತ್ತದೆ ಅಂತ ಲೆಕ್ಕಾಚಾರ ಹಾಕುವ ಸಮಯಸಾಧಕ ರಾಜಕಾರಣಿಗಳ ಬಗ್ಗೆ ಬರೆಯೋಕೆ ಕುಳಿತರೇ ವಾಕರಿಕೆ ಬರುತ್ತೆ. ಇತ್ತೀಚೆಗೆ ಚರ್ಚ್ ಮೇಲಿನ ದಾಳಿ ಸಂದರ್ಭದಲ್ಲಿ ತಾವು ಇರುವುದೇ ಹೇಳಿಕೆ ಕೊಡಲೇನೋ ಅನ್ನುವ ಮಟ್ಟದಲ್ಲಿ ಹುಯಿಲೆಬ್ಬಿಸಿ ಬೊಬ್ಬೆ ಹೊಡೆದ ಹುಸಿ ಜಾತ್ಯಾತೀತವಾದಿಗಳೆಂಬೋ ಆಷಾಡಭೂತಿ ಬುದ್ಧಿಯ ಜೀವಿಗಳು ಈಗ ಬಾಯಿಗೆ ಅವಲಕ್ಕಿ ಹಾಕಿಕೊಂಡು ಕೂತಿದ್ದಾರೆ. ಕುಸಿದ ಆರ್ಥಿಕತೆಯ ನಡುವೆ ಉಲ್ಭಣಿಸುತ್ತಿರುವ ಹತಾಶೆಯ ಬೆಂಕಿಗೆ ತುಪ್ಪ ಸುರಿಯುವ ರೀತಿಯಲ್ಲಿ ‘ಇಂದು ಹೇಗೋ ನಾಳೆ ಇನ್ನೇನು ಕಾದಿದೆಯೋ’ ಅನ್ನುವ ಆತಂಕ ಎಲ್ಲರನ್ನು ಕಂಗೆಡುವಂತೆ ಮಾಡಿದೆ. ಮಹಾ ನಗರಗಳಲ್ಲಿ ಇದೆಲ್ಲ ಸಾಮಾನ್ಯ ಅನ್ನುವರ್ಥದ ಪರಮ ತಿಕ್ಕಲು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಗೃಹಮಂತ್ರಿ ಅನ್ನೋ ಮಹಾನುಭಾವನಿಗೆ ಯಾವುದರಲ್ಲಿ ಹೊಡೆಯಬೇಕು ಅಥವಾ ಅಂತವನನ್ನು ಓಟು ಕೊಟ್ಟು ಗೆಲ್ಲಿಸಿದ ತಪ್ಪಿಗೆ ನಮಗೇ ನಾವು ಹೊಡೆದುಕೊಳ್ಳಬೇಕೋ ಅನ್ನೋ ದ್ವಂದ್ವದಲ್ಲಿ ಜನರು ತಬ್ಬಿಬ್ಬಾಗಿದ್ದಾರೆ.

 

ಮುಂಬೈ ದುರ್ಘಟನೆ, ಅದರ ಭೀಭತ್ಸ ಚಿತ್ರಣ, ಎನ್.ಎಸ್.ಜಿ. ಯೋಧರ ಸಾಹಸ ಇವೆಲ್ಲದರ ಬಗ್ಗೆ ಸುದ್ದಿ ಚಾನೆಲ್ಗಳಲ್ಲಿ, ದಿನಪತ್ರಿಕೆಗಳಲ್ಲಿ ಸಾಕಷ್ಟು ಕಂಡಿದ್ದೇವೆ..ಓದಿದ್ದೇವೆ. ಆದರೆ ಛೆ..ಪಾಪ ಹೀಗಾಗಬಾರದಿತ್ತು ಅಂತ ಓದಿ ಲೊಚಗುಟ್ಟಿ ಆಮೇಲೆ ಮರೆತುಬಿಡುವ ಸಂಗತಿಯಾಗಿ ಉಳಿದಿಲ್ಲ ಈ ಭಯೋತ್ಪಾದನೆಯ ಭೂತ. ಹಿಂದೆ ಅಲ್ಲೆಲ್ಲೋ ಕಾಶ್ಮೀರದಲ್ಲಿ, ಪಂಜಾಬ್‌ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯಗಳ ಸುದ್ದಿ ಓದಿ, ಸಧ್ಯ… ನಮ್ಮ ಕಡೆ ಹಾಗಿಲ್ಲವಲ್ಲ ಅಂತ ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಅದರ ಬಿಸಿ ನಮಗೆ ತಟ್ಟುತ್ತಲ್ಲೇ ಇರಲಿಲ್ಲ. ಆದರೀಗ ಆ ಮಾರಿ ನಮ್ಮ ಮನೆಯಂಗಳಕ್ಕೂ ಬಂದುಬಿಟ್ಟಿದೆ… ಓದಿ ಕೇಳಿ ಗೊತ್ತಿದ್ದ ಸಂಗತಿಗಳೆಲ್ಲ ನಮ್ಮ ಕಣ್ಣೆದುರಿಗೆ, ಸಮೀಪದಲ್ಲೆಲ್ಲೋ ನಡೆಯುತ್ತಿದೆ. ಕಾಶ್ಮೀರಿಗಳ ನಿತ್ಯದ ನರಕಯಾತನೆಯ ಬದುಕು ಹೇಗಿರುತ್ತೆ ಅನ್ನುವ ಸಂಗತಿ ನಮ್ಮರಿವಿಗೆ ನಿಧಾನವಾಗಿ ಬರತೊಡಗಿದೆ. ಆದರೆ ಇದ್ಯಾವುದರ ಪರಿವೆ ಇಲ್ಲದ ನಮ್ಮ ಜನನಾಯಕರೆಂಬ ನಾಲಾಯಕರು ಮಾತ್ರ ಉರಿವ ಮನೆಯ ಬೆಂಕಿಯಲ್ಲಿ ನಮ್ಮ ಬೇಳೆ ಬೆಂದರೆ ಅಷ್ಟೇ ಲಾಭ ಅನ್ನೋ ಲೆಕ್ಕಾಚಾರದಲ್ಲಿರುವುದು ನಮ್ಮ ಪಾಲಿನ ಅತಿ ದೊಡ್ಡ ದುರಂತ. ನಮ್ಮ ಸಂಸತ್ ದಾಳಿ ನಡೆಸಿದ ಸಂಚಿನ ಸೂತ್ರದಾರನಾದ ಅಫ್ಜಲ್‌ಗುರುವನ್ನು ನೇಣಿಗೇರಿಸಿದರೆ ನಮ್ಮ ಓಟಿಗೆಲ್ಲಿ ಸಂಚಕಾರ ಬರುತ್ತದೋ ಅನ್ನುವ ಲೆಕ್ಕಾಚಾರದಲ್ಲೇ ದಿನತಳ್ಳುತ್ತಿರುವವರಿಂದ ಇದಕ್ಕಿಂತ ಹೆಚ್ಚಿನದೇನನ್ನು ತಾನೆ ನಿರೀಕ್ಷಿಸಬಹುದು?

 

ಪಾಕಿಸ್ಥಾನ ಬಾಂಗ್ಲಾ ದೇಶದಿಂದ ಪ್ರತೀವರ್ಷ ಸಾವಿರಾರು ಮಂದಿ ಅಕ್ರಮವಾಗಿ ವಲಸೆಬಂದು ನಮ್ಮ ದೇಶದ ಮೂಲೆಮೂಲೆಗಳಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ನಮ್ಮ ರಕ್ಷಣಾ ಕೋಟೆಯನ್ನು ಬೇಧಿಸಿ ಸುಲಭವಾಗಿ ನಮ್ಮ ನಗರಗಳಲ್ಲಿ ಸರಣಿ ಹತ್ಯಾಕಾಂಡಗಳನ್ನು ನಡೆಸಿ ವಿಕೃತಾನಂದವನ್ನು ಹೊಂದುತ್ತಿದ್ದಾರೆ. ಉರಿವ ನಮ್ಮ ಮನೆಗಳ ಬೆಂಕಿಯಲ್ಲಿ ಉಗ್ರರು ಮೈಕಾಯಿಸಿಕೊಳ್ಳುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಂಭವಿಸಿದರೂ ಭದ್ರತೆಯ ಬಗ್ಗೆ ಬಿಗಿ ನಿಲುವು ತಳೆಯಲು, ರಕ್ಷಣಾವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿವಾರಿಸಲು ಬೇಕಾದ ಬಿಗಿ ಕಾನೂನು-ವ್ಯವಸ್ಥೆಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುವ ರಾಜಕಾರಣಿಗಳು ಇರುವ ತನಕ ನೆಮ್ಮದಿ ಹೇಗೆ ತಾನೆ ನೆಲೆಗೊಳ್ಳಬಲ್ಲುದು? ದೇಶದ ಬಗ್ಗೆ ನಿಜವಾದ ಪ್ರೀತಿಯಿರುವ ಯಾರೇ ಆಗಲಿ, ದೇಶವನ್ನು ವಿದ್ವಂಸಕ ಕೃತ್ಯಗಳ ದಳ್ಳುರಿಯಲ್ಲಿ ಬೇಯುವಂತೆ ಮಾಡುವ ಪಾತಕಿಗಳನ್ನು ಕೇವಲ ತಮ್ಮ ಧರ್ಮಕ್ಕೋ ಕೋಮಿಗೋ ಜಾತಿಗೋ ಸೇರಿದವರೆಂಬ ಕಾರಣಕ್ಕೆ ಖಂಡಿತ ಬೆಂಬಲಿಸಲಾರರು. ಹಾಗೊಂದು ವೇಳೆ ಯಾರಾದರೂ ಬೆಂಬಲಿಸಿದರೆಂದಾದರೆ ಅವರೂ ಕೂಡಾ ದೇಶವನ್ನು ಕಂಗೆಡಿಸುವ ಉಗ್ರರಷ್ಟೇ ಅಪಾಯಕಾರಿಗಳು. ಅಂತವರನ್ನು ಮಟ್ಟಹಾಕಲೇ ಬೇಕು. ಉಗ್ರರನ್ನು ಮಟ್ಟ ಹಾಕುವುದು ಅನ್ನುವುದು ಯಾವ ಜಾತಿ-ಧರ್ಮದ ವಿರುದ್ಧದ ಕಾರ್ಯಾಚರಣೆ ಖಂಡಿತ ಅಲ್ಲ. ಅದನ್ನು ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲಷ್ಟು ಪ್ರಬುದ್ಧರೇ ಇದ್ದರೆ ನಮ್ಮ ಭಾರತೀಯರು. ಆದರೆ ಈ ರಾಜಕಾರಣಿಗಳೇ ನಾಳೆ ನಮ್ಮ ಓಟೆಲ್ಲಿ ಕೈತಪ್ಪಿ ಹೋಗುತ್ತದೋ ಅನ್ನುವ ಅರ್ಥವಿಲ್ಲದ ಅನುಮಾನದಲ್ಲಿ ವಿರೋಧಾಭಾಸದ ಹೇಳಿಕೆಗಳ ಮೂಲಕ ಇಲ್ಲದ ಗೊಂದಲ ಹುಟ್ಟುಹಾಕುತ್ತಾರೆ.

ಭಯೋತ್ಪಾದಕರು ಇಷ್ಟು ನಿರಾತಂಕವಾಗಿ ಅಟ್ಟಹಾಸಗೈಯುವುದನ್ನು ಕ್ಂಡರೆ ನಮ್ಮ ರಕ್ಷಣಾವ್ಯವಸ್ಥೆಯ ಬಗ್ಗೆಯೇ ಸಂಶಯ ಮೂಡುತ್ತದೆ. ಆದರೆ ತಮ್ಮ ಉಳಿವಿಗಾಗಿ ದೇಶವನ್ನೇ ಮಾರೋಕೂ ಸಿದ್ಧವಾಗಿರೋ ಲಜ್ಜೆಗೇಡಿಗಳಿಗೆ ಇದು ಕಾಣಿಸುವುದೇ ಇಲ್ಲ. ಸಿಮಿಯಂತಹ ಸಂಘಟನೆಗಳು ಇಂತಹ ಉಗ್ರರಿಗೆ ಪ್ರತ್ಯಕ್ಷ-ಪರೋಕ್ಷ ನೆರವು ನೀಡುತ್ತಿರುವುದು ಗೊತ್ತಿದ್ದೂ ಕಣ್ಣುಮುಚ್ಚಿಕೊಳ್ಳುವವರು ಯಾರೆಂದರೆ… ಮತಾಂತರ,ಗೋ ಹತ್ಯೆಯ ವಿರುದ್ಧ ಪ್ರತಿಭಟನೆ ಮಾಡಿದ ಸಂಘಟನೆಗಳಿಗೆ ಆಜೀವ ನಿಷೇಧ ಹೇರಬೆಕೆಂದು ವಾದಿಸುವ ಅದೇ ಜನರು ಅನ್ನೋದು ಎಂತಹಾ ವ್ಯಂಗ್ಯವಲ್ಲವೇ. ಇಲ್ಲಿ ಆರ್.ಎಸ್.ಎಸ್ ಆಗಲಿ ಭಜರಂಗ ದಳವಾಗಲಿ ಮಾಡಿದ್ದು ಸರಿಯೇ ತಪ್ಪೇ ಅನ್ನೋ ವಿಷಯ ಪಕ್ಕಕ್ಕಿರಲಿ. ಆದರೆ ನೋಡುವ ಕಣ್ಣುಗಳ ದೃಷ್ಟಿಯಲ್ಲಿನ ಅನುಕೂಲಸಿಂಧು ಬೇಧ ಹೇಗಿರತ್ತೆ ಅನ್ನೋದನ್ನು ಸೂಚಿಸಲು ಈ ಉದಾಹರಣೆ ಸಾಕಲ್ಲವೆ.

 

ಹಿಂಸೆಗೆ ಪ್ರತಿಹಿಂಸೆ ಉತ್ತರವಲ್ಲ ಅನ್ನುತ್ತೆ ಅಹಿಂಸಾವಾದ. ಸತ್ಯಕ್ಕೆ ಯಾವತ್ತಿದ್ರೂ ಜಯ ಅನ್ನುತ್ತೆ ವೇದಾಂತ. ಆದರೆ ಅದು ಅರ್ಥವಾಗುವವರಿಗೆ ತಿಳಿಸಿ ಹೇಳಬಹುದು. ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸೇ ಇಲ್ಲದವರಿಗೆ ಅವರಿಗೆ ಅರ್ಥವಾಗುವಂತಹ ಶೈಲಿ ಭಾಷೆಯಲ್ಲಿಯೇ ಉತ್ತರ ಕೊಡಬೇಕಾದದ್ದು ಅನಿವಾರ್ಯ… ಬಹುಶಃ ಪಾಕಿಸ್ತಾನದೊಂದಿಗೆ ಶಾಂತಿ, ಮೈತ್ರಿ ಅಂತ ಇನ್ನೂ ಜಪಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಅವರಿಗೆ ಅರ್ಥವಾಗುವ ಭಾಷೆಯೇ ಬೇರೆ.

 

ದೇಶದೊಳಗೆ ಎಗ್ಗಿಲ್ಲದೆ ನುಗ್ಗಿ ಬರವ ಅಕ್ರಮ ವಲಸಿಗರನ್ನು ಬಗ್ಗುಬಡಿಯದೇ ಹೋದರೆ, ನಮ್ಮ ರಕ್ಷಣೆ-ವ್ಯವಸ್ಥೆ-ಕಾನೂನುಗಳಲ್ಲಿನ ಹುಳುಕುಗಳನ್ನು ನಿವಾರಸದೇ ಹೋದರೆ ನಮ್ಮ ನಾಳೆಗಳು ಇನ್ನಷ್ಟು ಭೀಕರವಾಗಲಿವೆ. ಹಾಗಾಗದೇ ಇರಲಿ ಅನ್ನುವುದು ಆಶಯ ಮತ್ತು ಆಸೆ.

ಈ ವಿಚಾರದಲ್ಲಿ ನಮ್ಮಿಂದಾಗೋದು ಏನು ಮಾಡಬಹುದು ಅನ್ನುವ ಬಗ್ಗೆ ನೀಲಾಂಜನ ಅವರ ಒಳ್ಳೆಯ ವಿಚಾರ ಇಲ್ಲಿದೆ … ಹೀಗ್ಯಾಕೆಮಾಡಬಾರದು ? ಓದಿ… ಸಾಧ್ಯವಾದಷ್ಟು ಮಟ್ಟಿಗೆ ನೀವೂ ಕೈ ಜೋಡಿಸಿ