Archive for ಡಿಸೆಂಬರ್ 2, 2008

ಕಳೆದ ಕೆಲ ತಿಂಗಳುಗಳಿಂದ ದೇಶದ ನಾನಾ ಭಾಗಗಳಲ್ಲಿ ನಡೆದ ಮಾರಣ ಹೋಮದಿಂದ ಕೋಟ್ಯಾಂತರ ಭಾರತೀಯರ ಎದೆಯೊಳಗೆ ಬಿದ್ದ ಭಯಾತಂಕಗಳ ಬೀಜ ಮುಂಬೈನ ದುರಂತ ಅಧ್ಯಾಯದ ಬಳಿಕ ಚಿಗಿತು ಬೆಳೆದು ಹೆಮ್ಮರವಾಗಿದೆ. ಈ ವ್ಯವಸ್ಥೆಯ ಬಗ್ಗೆ, ರಾಜಕಾರಣಿಗಳ ಸೋಗಲಾಡಿತನದ ಕುರಿತಾಗಿದ್ದ ಜಿಗುಪ್ಸೆ ತಾರಕವನ್ನು ಮುಟ್ಟಿದೆ. ವೀರಯೋಧ ಸಂದೀಪ್ ತಂದೆ ಕೆರಳದ ಮುಖ್ಯಮಂತ್ರಿ ಭೇಟಿಗೆ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಪುತ್ರಶೋಕದ ಬಿಸಿಗಿಂತ ಈ ವ್ಯವಸ್ಥೆಯ ವಿರುದ್ಧ ಹುಟ್ಟಿದ ರೇಜಿಗೆಯ ಪಾಲೇ ಹೆಚ್ಚಿರಬೇಕು ಎಂದೆನ್ನಿಸುತ್ತದೆ. ಇದನ್ನು ಸರಿಪಡಿಸುವುದು ಹೇಗೆನ್ನುವದರ ಬಗ್ಗೆ ಕಾರ್ಯಪ್ರವೃತ್ತರಾಗುವ ಬದಲು, ಗೃಹಮಂತ್ರಿಯೊಬ್ಬನನ್ನು ಬದಲಾಯಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ಕೂರಿಸಿದರೆ ಜನರ ಅಸಹನೆ ತಣ್ಣಗಾಗಿ ಚುನಾವಣೆಯಲ್ಲಿ ವಿರೋಧಿ ಅಲೆಯ ಪ್ರಭಾವ ತಣ್ಣಗಾಗುತ್ತದೆ ಅಂತ ಲೆಕ್ಕಾಚಾರ ಹಾಕುವ ಸಮಯಸಾಧಕ ರಾಜಕಾರಣಿಗಳ ಬಗ್ಗೆ ಬರೆಯೋಕೆ ಕುಳಿತರೇ ವಾಕರಿಕೆ ಬರುತ್ತೆ. ಇತ್ತೀಚೆಗೆ ಚರ್ಚ್ ಮೇಲಿನ ದಾಳಿ ಸಂದರ್ಭದಲ್ಲಿ ತಾವು ಇರುವುದೇ ಹೇಳಿಕೆ ಕೊಡಲೇನೋ ಅನ್ನುವ ಮಟ್ಟದಲ್ಲಿ ಹುಯಿಲೆಬ್ಬಿಸಿ ಬೊಬ್ಬೆ ಹೊಡೆದ ಹುಸಿ ಜಾತ್ಯಾತೀತವಾದಿಗಳೆಂಬೋ ಆಷಾಡಭೂತಿ ಬುದ್ಧಿಯ ಜೀವಿಗಳು ಈಗ ಬಾಯಿಗೆ ಅವಲಕ್ಕಿ ಹಾಕಿಕೊಂಡು ಕೂತಿದ್ದಾರೆ. ಕುಸಿದ ಆರ್ಥಿಕತೆಯ ನಡುವೆ ಉಲ್ಭಣಿಸುತ್ತಿರುವ ಹತಾಶೆಯ ಬೆಂಕಿಗೆ ತುಪ್ಪ ಸುರಿಯುವ ರೀತಿಯಲ್ಲಿ ‘ಇಂದು ಹೇಗೋ ನಾಳೆ ಇನ್ನೇನು ಕಾದಿದೆಯೋ’ ಅನ್ನುವ ಆತಂಕ ಎಲ್ಲರನ್ನು ಕಂಗೆಡುವಂತೆ ಮಾಡಿದೆ. ಮಹಾ ನಗರಗಳಲ್ಲಿ ಇದೆಲ್ಲ ಸಾಮಾನ್ಯ ಅನ್ನುವರ್ಥದ ಪರಮ ತಿಕ್ಕಲು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಗೃಹಮಂತ್ರಿ ಅನ್ನೋ ಮಹಾನುಭಾವನಿಗೆ ಯಾವುದರಲ್ಲಿ ಹೊಡೆಯಬೇಕು ಅಥವಾ ಅಂತವನನ್ನು ಓಟು ಕೊಟ್ಟು ಗೆಲ್ಲಿಸಿದ ತಪ್ಪಿಗೆ ನಮಗೇ ನಾವು ಹೊಡೆದುಕೊಳ್ಳಬೇಕೋ ಅನ್ನೋ ದ್ವಂದ್ವದಲ್ಲಿ ಜನರು ತಬ್ಬಿಬ್ಬಾಗಿದ್ದಾರೆ.

 

ಮುಂಬೈ ದುರ್ಘಟನೆ, ಅದರ ಭೀಭತ್ಸ ಚಿತ್ರಣ, ಎನ್.ಎಸ್.ಜಿ. ಯೋಧರ ಸಾಹಸ ಇವೆಲ್ಲದರ ಬಗ್ಗೆ ಸುದ್ದಿ ಚಾನೆಲ್ಗಳಲ್ಲಿ, ದಿನಪತ್ರಿಕೆಗಳಲ್ಲಿ ಸಾಕಷ್ಟು ಕಂಡಿದ್ದೇವೆ..ಓದಿದ್ದೇವೆ. ಆದರೆ ಛೆ..ಪಾಪ ಹೀಗಾಗಬಾರದಿತ್ತು ಅಂತ ಓದಿ ಲೊಚಗುಟ್ಟಿ ಆಮೇಲೆ ಮರೆತುಬಿಡುವ ಸಂಗತಿಯಾಗಿ ಉಳಿದಿಲ್ಲ ಈ ಭಯೋತ್ಪಾದನೆಯ ಭೂತ. ಹಿಂದೆ ಅಲ್ಲೆಲ್ಲೋ ಕಾಶ್ಮೀರದಲ್ಲಿ, ಪಂಜಾಬ್‌ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯಗಳ ಸುದ್ದಿ ಓದಿ, ಸಧ್ಯ… ನಮ್ಮ ಕಡೆ ಹಾಗಿಲ್ಲವಲ್ಲ ಅಂತ ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಅದರ ಬಿಸಿ ನಮಗೆ ತಟ್ಟುತ್ತಲ್ಲೇ ಇರಲಿಲ್ಲ. ಆದರೀಗ ಆ ಮಾರಿ ನಮ್ಮ ಮನೆಯಂಗಳಕ್ಕೂ ಬಂದುಬಿಟ್ಟಿದೆ… ಓದಿ ಕೇಳಿ ಗೊತ್ತಿದ್ದ ಸಂಗತಿಗಳೆಲ್ಲ ನಮ್ಮ ಕಣ್ಣೆದುರಿಗೆ, ಸಮೀಪದಲ್ಲೆಲ್ಲೋ ನಡೆಯುತ್ತಿದೆ. ಕಾಶ್ಮೀರಿಗಳ ನಿತ್ಯದ ನರಕಯಾತನೆಯ ಬದುಕು ಹೇಗಿರುತ್ತೆ ಅನ್ನುವ ಸಂಗತಿ ನಮ್ಮರಿವಿಗೆ ನಿಧಾನವಾಗಿ ಬರತೊಡಗಿದೆ. ಆದರೆ ಇದ್ಯಾವುದರ ಪರಿವೆ ಇಲ್ಲದ ನಮ್ಮ ಜನನಾಯಕರೆಂಬ ನಾಲಾಯಕರು ಮಾತ್ರ ಉರಿವ ಮನೆಯ ಬೆಂಕಿಯಲ್ಲಿ ನಮ್ಮ ಬೇಳೆ ಬೆಂದರೆ ಅಷ್ಟೇ ಲಾಭ ಅನ್ನೋ ಲೆಕ್ಕಾಚಾರದಲ್ಲಿರುವುದು ನಮ್ಮ ಪಾಲಿನ ಅತಿ ದೊಡ್ಡ ದುರಂತ. ನಮ್ಮ ಸಂಸತ್ ದಾಳಿ ನಡೆಸಿದ ಸಂಚಿನ ಸೂತ್ರದಾರನಾದ ಅಫ್ಜಲ್‌ಗುರುವನ್ನು ನೇಣಿಗೇರಿಸಿದರೆ ನಮ್ಮ ಓಟಿಗೆಲ್ಲಿ ಸಂಚಕಾರ ಬರುತ್ತದೋ ಅನ್ನುವ ಲೆಕ್ಕಾಚಾರದಲ್ಲೇ ದಿನತಳ್ಳುತ್ತಿರುವವರಿಂದ ಇದಕ್ಕಿಂತ ಹೆಚ್ಚಿನದೇನನ್ನು ತಾನೆ ನಿರೀಕ್ಷಿಸಬಹುದು?

 

ಪಾಕಿಸ್ಥಾನ ಬಾಂಗ್ಲಾ ದೇಶದಿಂದ ಪ್ರತೀವರ್ಷ ಸಾವಿರಾರು ಮಂದಿ ಅಕ್ರಮವಾಗಿ ವಲಸೆಬಂದು ನಮ್ಮ ದೇಶದ ಮೂಲೆಮೂಲೆಗಳಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ನಮ್ಮ ರಕ್ಷಣಾ ಕೋಟೆಯನ್ನು ಬೇಧಿಸಿ ಸುಲಭವಾಗಿ ನಮ್ಮ ನಗರಗಳಲ್ಲಿ ಸರಣಿ ಹತ್ಯಾಕಾಂಡಗಳನ್ನು ನಡೆಸಿ ವಿಕೃತಾನಂದವನ್ನು ಹೊಂದುತ್ತಿದ್ದಾರೆ. ಉರಿವ ನಮ್ಮ ಮನೆಗಳ ಬೆಂಕಿಯಲ್ಲಿ ಉಗ್ರರು ಮೈಕಾಯಿಸಿಕೊಳ್ಳುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಂಭವಿಸಿದರೂ ಭದ್ರತೆಯ ಬಗ್ಗೆ ಬಿಗಿ ನಿಲುವು ತಳೆಯಲು, ರಕ್ಷಣಾವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿವಾರಿಸಲು ಬೇಕಾದ ಬಿಗಿ ಕಾನೂನು-ವ್ಯವಸ್ಥೆಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುವ ರಾಜಕಾರಣಿಗಳು ಇರುವ ತನಕ ನೆಮ್ಮದಿ ಹೇಗೆ ತಾನೆ ನೆಲೆಗೊಳ್ಳಬಲ್ಲುದು? ದೇಶದ ಬಗ್ಗೆ ನಿಜವಾದ ಪ್ರೀತಿಯಿರುವ ಯಾರೇ ಆಗಲಿ, ದೇಶವನ್ನು ವಿದ್ವಂಸಕ ಕೃತ್ಯಗಳ ದಳ್ಳುರಿಯಲ್ಲಿ ಬೇಯುವಂತೆ ಮಾಡುವ ಪಾತಕಿಗಳನ್ನು ಕೇವಲ ತಮ್ಮ ಧರ್ಮಕ್ಕೋ ಕೋಮಿಗೋ ಜಾತಿಗೋ ಸೇರಿದವರೆಂಬ ಕಾರಣಕ್ಕೆ ಖಂಡಿತ ಬೆಂಬಲಿಸಲಾರರು. ಹಾಗೊಂದು ವೇಳೆ ಯಾರಾದರೂ ಬೆಂಬಲಿಸಿದರೆಂದಾದರೆ ಅವರೂ ಕೂಡಾ ದೇಶವನ್ನು ಕಂಗೆಡಿಸುವ ಉಗ್ರರಷ್ಟೇ ಅಪಾಯಕಾರಿಗಳು. ಅಂತವರನ್ನು ಮಟ್ಟಹಾಕಲೇ ಬೇಕು. ಉಗ್ರರನ್ನು ಮಟ್ಟ ಹಾಕುವುದು ಅನ್ನುವುದು ಯಾವ ಜಾತಿ-ಧರ್ಮದ ವಿರುದ್ಧದ ಕಾರ್ಯಾಚರಣೆ ಖಂಡಿತ ಅಲ್ಲ. ಅದನ್ನು ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲಷ್ಟು ಪ್ರಬುದ್ಧರೇ ಇದ್ದರೆ ನಮ್ಮ ಭಾರತೀಯರು. ಆದರೆ ಈ ರಾಜಕಾರಣಿಗಳೇ ನಾಳೆ ನಮ್ಮ ಓಟೆಲ್ಲಿ ಕೈತಪ್ಪಿ ಹೋಗುತ್ತದೋ ಅನ್ನುವ ಅರ್ಥವಿಲ್ಲದ ಅನುಮಾನದಲ್ಲಿ ವಿರೋಧಾಭಾಸದ ಹೇಳಿಕೆಗಳ ಮೂಲಕ ಇಲ್ಲದ ಗೊಂದಲ ಹುಟ್ಟುಹಾಕುತ್ತಾರೆ.

ಭಯೋತ್ಪಾದಕರು ಇಷ್ಟು ನಿರಾತಂಕವಾಗಿ ಅಟ್ಟಹಾಸಗೈಯುವುದನ್ನು ಕ್ಂಡರೆ ನಮ್ಮ ರಕ್ಷಣಾವ್ಯವಸ್ಥೆಯ ಬಗ್ಗೆಯೇ ಸಂಶಯ ಮೂಡುತ್ತದೆ. ಆದರೆ ತಮ್ಮ ಉಳಿವಿಗಾಗಿ ದೇಶವನ್ನೇ ಮಾರೋಕೂ ಸಿದ್ಧವಾಗಿರೋ ಲಜ್ಜೆಗೇಡಿಗಳಿಗೆ ಇದು ಕಾಣಿಸುವುದೇ ಇಲ್ಲ. ಸಿಮಿಯಂತಹ ಸಂಘಟನೆಗಳು ಇಂತಹ ಉಗ್ರರಿಗೆ ಪ್ರತ್ಯಕ್ಷ-ಪರೋಕ್ಷ ನೆರವು ನೀಡುತ್ತಿರುವುದು ಗೊತ್ತಿದ್ದೂ ಕಣ್ಣುಮುಚ್ಚಿಕೊಳ್ಳುವವರು ಯಾರೆಂದರೆ… ಮತಾಂತರ,ಗೋ ಹತ್ಯೆಯ ವಿರುದ್ಧ ಪ್ರತಿಭಟನೆ ಮಾಡಿದ ಸಂಘಟನೆಗಳಿಗೆ ಆಜೀವ ನಿಷೇಧ ಹೇರಬೆಕೆಂದು ವಾದಿಸುವ ಅದೇ ಜನರು ಅನ್ನೋದು ಎಂತಹಾ ವ್ಯಂಗ್ಯವಲ್ಲವೇ. ಇಲ್ಲಿ ಆರ್.ಎಸ್.ಎಸ್ ಆಗಲಿ ಭಜರಂಗ ದಳವಾಗಲಿ ಮಾಡಿದ್ದು ಸರಿಯೇ ತಪ್ಪೇ ಅನ್ನೋ ವಿಷಯ ಪಕ್ಕಕ್ಕಿರಲಿ. ಆದರೆ ನೋಡುವ ಕಣ್ಣುಗಳ ದೃಷ್ಟಿಯಲ್ಲಿನ ಅನುಕೂಲಸಿಂಧು ಬೇಧ ಹೇಗಿರತ್ತೆ ಅನ್ನೋದನ್ನು ಸೂಚಿಸಲು ಈ ಉದಾಹರಣೆ ಸಾಕಲ್ಲವೆ.

 

ಹಿಂಸೆಗೆ ಪ್ರತಿಹಿಂಸೆ ಉತ್ತರವಲ್ಲ ಅನ್ನುತ್ತೆ ಅಹಿಂಸಾವಾದ. ಸತ್ಯಕ್ಕೆ ಯಾವತ್ತಿದ್ರೂ ಜಯ ಅನ್ನುತ್ತೆ ವೇದಾಂತ. ಆದರೆ ಅದು ಅರ್ಥವಾಗುವವರಿಗೆ ತಿಳಿಸಿ ಹೇಳಬಹುದು. ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸೇ ಇಲ್ಲದವರಿಗೆ ಅವರಿಗೆ ಅರ್ಥವಾಗುವಂತಹ ಶೈಲಿ ಭಾಷೆಯಲ್ಲಿಯೇ ಉತ್ತರ ಕೊಡಬೇಕಾದದ್ದು ಅನಿವಾರ್ಯ… ಬಹುಶಃ ಪಾಕಿಸ್ತಾನದೊಂದಿಗೆ ಶಾಂತಿ, ಮೈತ್ರಿ ಅಂತ ಇನ್ನೂ ಜಪಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಅವರಿಗೆ ಅರ್ಥವಾಗುವ ಭಾಷೆಯೇ ಬೇರೆ.

 

ದೇಶದೊಳಗೆ ಎಗ್ಗಿಲ್ಲದೆ ನುಗ್ಗಿ ಬರವ ಅಕ್ರಮ ವಲಸಿಗರನ್ನು ಬಗ್ಗುಬಡಿಯದೇ ಹೋದರೆ, ನಮ್ಮ ರಕ್ಷಣೆ-ವ್ಯವಸ್ಥೆ-ಕಾನೂನುಗಳಲ್ಲಿನ ಹುಳುಕುಗಳನ್ನು ನಿವಾರಸದೇ ಹೋದರೆ ನಮ್ಮ ನಾಳೆಗಳು ಇನ್ನಷ್ಟು ಭೀಕರವಾಗಲಿವೆ. ಹಾಗಾಗದೇ ಇರಲಿ ಅನ್ನುವುದು ಆಶಯ ಮತ್ತು ಆಸೆ.

ಈ ವಿಚಾರದಲ್ಲಿ ನಮ್ಮಿಂದಾಗೋದು ಏನು ಮಾಡಬಹುದು ಅನ್ನುವ ಬಗ್ಗೆ ನೀಲಾಂಜನ ಅವರ ಒಳ್ಳೆಯ ವಿಚಾರ ಇಲ್ಲಿದೆ … ಹೀಗ್ಯಾಕೆಮಾಡಬಾರದು ? ಓದಿ… ಸಾಧ್ಯವಾದಷ್ಟು ಮಟ್ಟಿಗೆ ನೀವೂ ಕೈ ಜೋಡಿಸಿ