ಈದಿ ಅಮಿನ್ – ನರಹಂತಕ(ಭಕ್ಷಕ?)ನೊಬ್ಬನ ವಿಲಕ್ಷಣ ಗಾಥೆ !!!

Posted: ಡಿಸೆಂಬರ್ 15, 2008 in ವಿಚಾರ
ಟ್ಯಾಗ್ ಗಳು:, , , ,

amin_dada_lg

೧೯೭೧ರ ಜನವರಿ ೨೫, ಉಗಾಂಡಾದ ಇತಿಹಾಸದಲ್ಲೊಂದು ವಿಲಕ್ಷಣ ತಿರುವು. ಅಪೋಲೋ ಮಿಲ್ಟನ್ ಒಬೋಟೆಯನ್ನು ಪದಚ್ಯುತಗೊಳಿಸಿ ಉಗಾಂಡಾದ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ಈದಿ ಅಮಿನ್ ಅನ್ನೋ ಸೇನಾನಾಯಕನಿಗೆ ಭವಿಷ್ಯತ್ತಿನಲ್ಲಿ ತನ್ನ ಅವಸಾನದ ಬಳಿಕವೂ ಬಹುಚರ್ಚಿತ ವ್ಯಕ್ತಿ ತಾನಾಗಬಹುದೆಂಬ ಸಣ್ಣ ಸುಳಿವೂ ಇದ್ದಿರಲಿಕ್ಕಿಲ್ಲ. ಅವನ ಧ್ಯೇಯ ಸ್ಪಷ್ಟವಾಗಿತ್ತು. ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಷ್ಟು ಸುದೃಢವಾಗಿ-ಬಲಿಷ್ಟವಾಗಿ ಬೆಳೆದು ನಿಂತ ಅಫ್ರಿಕಾದ ಚಿತ್ರ ಅವನ ಕಣ್ಮುಂದೆ ಕುಣಿಯುತ್ತಿತ್ತು ಮತ್ತು ಅದನ್ನು ಶತಾಯಗತಾಯ ನನಸಾಗಿಸುತ್ತೇನೆಂಬ ತುಂಬು ವಿಶ್ವಾಸವೂ ಇತ್ತು. ಅದಕ್ಕೆ ಬೇಕಾದ ಹುಂಬ ಧೈರ್ಯ, ಪಟ್ಟುಬಿಡದ ಛಲ, ಆಸೀಮ ಎದೆಗಾರಿಕೆ ಅವನಲ್ಲಿ ತುಂಬಿ ತುಳುಕುತ್ತಿತ್ತು. ಅವೆಲ್ಲಕ್ಕಿಂತಲೂ ಮಿಗಿಲಾಗಿ ಅವನ ನರನಾಡಿಗಳಲ್ಲಿ ನಿರ್ದಯತೆ ಬೆರೆತ ತಣ್ಣನೆಯ ಕ್ರೌರ್ಯ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿತ್ತು….ಮತ್ತದು ಆಫ್ರಿಕಾದ ಇತಿಹಾಸದಲ್ಲಿ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಬರೆದ ಮುನ್ನುಡಿಯಂತಿತ್ತು!! ಈ ಘಟನೆಯ ಮೂಲಕ ಹಿಟ್ಲರ್‌ನ ನಂತರ ಜಗತ್ತು ಕಂಡ ಭೀಕರ ನರಮೇಧವೊಂದರ ರೂವಾರಿ ಹುಟ್ಟಿಬಿಟ್ಟಿದ್ದ… ಮೇಲಾಗಿ ಕ್ರೌರ್ಯದಲ್ಲಿ ಅವನನ್ನೂ ಮೀರಿಸೋವಷ್ಟು ಕಟುಕನೊಬ್ಬ ತಯಾರಾಗಿ ಬಿಟ್ಟಿದ್ದ !!

 

ಈದಿ ಅಮಿನ್ ಹುಟ್ಟಿದ್ದು ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ. ಹುಟ್ಟಿದ ಇಸವಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆಯಾದರೂ ಅವನ ಮಗ ಜಾಫರ್ ಅಮಿನ್ ಹೇಳೋ ಪ್ರಕಾರ ಈದಿ ಅಮಿನ್ ಹುಟ್ಟಿದ್ದು ಉಗಾಂಡಾದ ಈಶಾನ್ಯ ಗಡಿ ಭಾಗದ ಅರುವಾದಲ್ಲಿ; 1927ನೇ ಇಸವಿಯಲ್ಲಿ. ಈ ಪ್ರದೇಶ ಕಾಂಗೋ ಮತ್ತು ಸೂಡಾನ್‌ನ ಗಡಿಭಾಗದಲ್ಲಿದೆ. ಇನ್ನೊಂದು ಮೂಲದ ಪ್ರಕಾರ ಅವನ ಹುಟ್ಟು 1925ರಲ್ಲಿ ಕಂಪಾಲದಲ್ಲಾಯ್ತು. ಕಾಕ್ವಾ(ಕಕ್ವಾ ಅಂತಲೂ ಉಚ್ಚರಿಸಬಹುದು) ಬುಡಕಟ್ಟಿಗೆ ಸೇರಿದ ಅವನಪ್ಪ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದ. ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದ ರೈತ. ಲುಗ್‌ಬರಾ ಬುಡಕಟ್ಟಿಗೆ ಸೇರಿದ ಅವನಮ್ಮನಿಗೆ ನಾಟಿವೈದ್ಯ ಗೊತ್ತಿತ್ತು. ಹಾಗೆಯೇ ಮಾಟ ಮಂತ್ರ ಕೂಡಾ ಮಾಡುತ್ತಿದ್ದಳು ಎನ್ನಲಾಗಿದೆ. ಮುಸ್ಲಿಂ ಸಮುದಾಯದವರ ಹಜ್ ಆಚರಣೆಯ ಈದ್-ಅಲ್-ಅಧಾದ ದಿನವೇ ಹುಟ್ಟಿದ ಕಾರಣಕ್ಕೆ ಈದ್ ಅಂತ ನಾಮಕರಣಗೊಂಡ ಅಮಿನ್‌ನ ಹೆಸರು ಕಾಕ್ವಾ ಬುಡಕಟ್ಟಿನವರ ಬಾಯಲ್ಲಿ ಈದಿ ಅನ್ನಿಸಿಕೊಂಡಿತು.

 

ಈದಿ ಅಮಿನ್ ಹುಟ್ಟು-ಬಾಲ್ಯದ ಸುತ್ತಮುತ್ತ ಕೆಲವು ವರ್ಣರಂಜಿತ ಕತೆಗಳಿವೆ. ಈದಿ ಅಮಿನ್‌ನ ಅಮ್ಮ ಅಕ್ರಮವಾಗಿ ಗರ್ಭ ಧರಿಸಿದ್ದಳು ಎನ್ನುವ ಪುಕಾರು ಕುಟುಂಬ ವಲಯದಲ್ಲಿ ಪಿಸುಮಾತಾಗಿ ಹಬ್ಬಿತ್ತಂತೆ. ಅವರ ಬುಡಕಟ್ಟಿನ ಸಂಪ್ರದಾಯದಲ್ಲಿ ಈ ರೀತಿಯ ಅನುಮಾನಗಳು ಹುಟ್ಟಿಕೊಂಡಾಗ ಅದನ್ನು ಬಗೆಹರಿಸಿಕೊಳ್ಳುವ ವಿಚಿತ್ರ ರೂಢಿಯೊಂದಿತ್ತು. ಆ ಪ್ರಕಾರವಾಗಿ ಹುಟ್ಟಿದ ಮಗುವನ್ನು ದುರ್ಗಮವಾದ ಕಾಡಿನಲ್ಲಿ ಬಿಟ್ಟುಬಂದು, ಮೂರು ದಿನಗಳ ಬಳಿಕವೂ ಮಗು ಬದುಕುಳಿದರೆ ಅದು ಅಕ್ರಮಸಂತಾನವಲ್ಲ ಅಂತ ಸಾಬೀತಾದ ಹಾಗೆ. ಅಂತೆಯೇ ಹಸುಗೂಸು ಅಮಿನ್‌ನನ್ನು ಅವನಜ್ಜ ಕೊಂಡೊಯ್ದು ಕಾಡಿನಲ್ಲಿ ಬಿಟ್ಟು ಬಂದಿದ್ದನಂತೆ. ನಾಲ್ಕನೇ ದಿನ ಹೋಗಿ ನೋಡಿದರೆ ಕೂದಲು ಕೂಡಾ ಕೊಂಕದಂತೆ ಮಗು ಸುರಕ್ಷಿತವಾಗಿತ್ತಂತೆ. ಹಾಗೆ ಜೀವಂತವಾಗುಳಿದ ಮಗುವೇ ಮುಂದೆ ಅದೆಷ್ಟೋ ಜೀವಗಳಿಗೆ ಕಂಟಕವಾಗುತ್ತದೆನ್ನುವ ಮುನ್ಸೂಚನೆ ಅವರ್ಯಾರಿಗೂ ಇರಲಿಲ್ಲವಾದ ಕಾರಣ ದೊಡ್ಡ ಸಂಭ್ರಮದೊಂದಿಗೆ ಮಗುವನ್ನು ಮನೆಗೆ ಕರೆತಂದರು. ಇನ್ನೊಂದು ಕತೆಯ ಪ್ರಕಾರ ಮಗುವಾಗಿದ್ದ ಅಮಿನ್‌ನ ಸುತ್ತ ಬುಡಕಟ್ಟಿನ ಜನರು ಪವಿತ್ರವೆಂದು ಪೂಜಿಸುವ ಘಟಸರ್ಪವೊಂದು ಸುರುಳಿಸುತ್ತಿಕೊಂಡಿತ್ತಂತೆ. ತನ್ನ ಮೊಟ್ಟೆಯನ್ನು ರಕ್ಷಿಸುವ ಹಾವಿನೋಪಾದಿಯಲ್ಲಿ ಸಿಂಬೆ ಸುತ್ತಿಕೊಂಡು ಮಗುವಿನ ತಲೆಯ ಮೇಲೆ ತನ್ನ ಹೆಡೆಯನ್ನಿರಿಸಿ ಸದ್ದಿಲ್ಲದೆ ಹೊರಟು ಹೋಗಿತ್ತಂತೆ. ಬಹುಶ: ಈದಿ ಅಮಿನ್ ಮನಸ್ಸಿನಲ್ಲಿ ಕ್ರೌರ್ಯದ ವಿಷಬೀಜ ಆಗಲೇ ಬಿದ್ದಿರಬೇಕು !! ಇದರಲ್ಲಿ ಕಲ್ಪನೆ ಯಾವುದು ಸತ್ಯ ಯಾವುದು ಅನ್ನೋದು ಗೊತ್ತಿಲ್ಲವಾದರೂ, ಈದಿ ಅಮಿನ್‌ನ ಬಾಲ್ಯದ ಸುತ್ತ ಅತಿರಂಜಕ ಪವಾಡದ ಎಳೆಯೊಂದು ಸೃಷ್ಟಿಸುವಲ್ಲಿ ಈ ಕತೆಗಳು ಯಶಸ್ವಿಯಾಗಿವೆ.

 

ಕಾಕ್ವಾ ಬುಡಕಟ್ಟಿನವರ ಸಂಪ್ರದಾಯಕ್ಕನುಗುಣವಾಗಿ ಈದಿ ಅಮಿನ್‌ಗೆ ಅವೋಂಗೋ ಅಂತ ಹೆಸರಿಡಲಾಗಿತ್ತು. ಆ ಎಳೆ ವಯಸ್ಸಿನ ಕೂಸು ಒದೆಯುವ, ಕಿರುಚುವ ಪರಿಯನ್ನು ಕಂಡೇ ಅವನಿಗೆ ಆ ನಾಮಕರಣವಾಗಿತ್ತಂತೆ. ಅವರ ಭಾಷೆಯಲ್ಲಿ ಅವೋಂಗೋ ಅಂದ್ರೆ ಕಿರುಚುವವನು ಅಥವಾ ಬೊಬ್ಬೆ ಹೊಡೆಯುವವನು ಎಂದರ್ಥ. ಮುಂದೆ ಅವನು ಉಗಾಂಡಾದ ಸರ್ವಾಧಿಕಾರಿಯಾಗಿದ್ದಾಗ ಎಂಟು ವರ್ಷಗಳಲ್ಲಿ ಉಂಟಾದ ಕೋಲಾಹಲಗಳನ್ನು ಗಮನಿಸಿದರೆ ಒಂದರ್ಥದಲ್ಲಿ ಅವನಿಗದು ಅನ್ವರ್ಥನಾಮವೇ ಸರಿ !

 

ಈದಿ ಅಮಿನ್‌ನ ಬಾಲ್ಯ ಸುಖದ ಸುಪ್ಪತ್ತಿಗೆಯೇನಾಗಿರಲಿಲ್ಲ. ಅವನು ಹುಟ್ಟಿದ ಕೆಲಸಮಯದಲ್ಲೇ ವಿರಸದ ಕಾರಣಕ್ಕೆ ಅವನ ಅಪ್ಪ-ಅಮ್ಮ ಬೇರೆಯಾದರು. ಅಮಿನ್ ಬರೀ ಮೂಲ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪೂರೈಸಿದ್ದ. ಆದರೆ ಅಟೋಟಗಳ ವಿಷಯಕ್ಕೆ ಬಂದರೆ ಅವನನ್ನು ಸರಿಗಟ್ಟುವವರೂ ಯಾರೂ ಇರಲಿಲ್ಲ. ಅವನು ಹುಟ್ಟುವ ಪೂರ್ವದಲ್ಲೇ ಅಂದರೆ 1894ರಲ್ಲೇ ಉಗಾಂಡಾವು ಬ್ರಿಟಿಷ್ ಸೈನ್ಯದ ವಸಾಹತಾಗಿತ್ತು. ಬ್ರಿಟಿಷ್ ವಸಾಹತು ಸೈನ್ಯ ಕಿಂಗ್ಸ್ ಆಫ್ರಿಕನ್ ರೈಫಲ್ಸ್ನಲ್ಲಿ ಸಹಾಯಕ ಅಡುಗೆ ಭಟ್ಟನಾಗಿ ಅಮಿನ್ ಸೇರುವಾಗ ಅವನಿಗಿನ್ನೂ ಇಪ್ಪತ್ತು ತುಂಬಿರಲಿಲ್ಲ. ಮುಂದೆ ಎರಡು ವರ್ಷಗಳಲ್ಲೇ ಅವನು ಸೈನ್ಯದ ಯೋಧನಾಗಿ ಬಡ್ತಿ ಪಡೆದ. ಅಲ್ಲಿಂದ ಹಂತಹಂತವಾಗಿ ಪದೋನ್ನತಿಯನ್ನು ಸಾಧಿಸಿ ಮೇಜರ್ ಸರ್ಜೆಂಟ್ ಹಾಗೂ ಪ್ಲಟೂನ್ ಕಮಾಂಡರ್ ಆಗುವಷ್ಟರಲ್ಲಿ ಅಮಿನ್ 30ರ ಯುವಕನಾಗಿದ್ದ. ಅವನ ಮೇಲಧಿಕಾರಿಗಳಿಂದ ಹುಟ್ಟು ನಾಯಕ, ಉತ್ತಮ ಸೈನಿಕ ಹಾಗೂ ತಂತ್ರಗಾರಿಕೆಯಲ್ಲಿ ಎಲ್ಲರನ್ನೂ ಮೀರಿಸಬಲ್ಲ ಚಾಣಾಕ್ಷ ಅನ್ನುವ ಶಹಭಾಶ್‌ಗಿರಿಯನ್ನಾಗಲೇ ಪಡೆದುಬಿಟ್ಟಿದ್ದ.

 

ಈ ಮಧ್ಯೆ 1951ರಲ್ಲಿ ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಉಗಾಂಡಾದ ಚಾಂಪಿಯನ್ ಅನ್ನಿಸಿಕೊಂಡಿದ್ದ ಅಮಿನ್ ಆ ಪಟ್ಟವನ್ನು ನಿರಂತರ ಹತ್ತು ವರ್ಷಗಳ ಕಾಲ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಅವನೊಬ್ಬ ಉತ್ತಮ ಸ್ವಿಮ್ಮರ್ ಹಾಗೂ ರಗ್ಬಿ ಆಟಗಾರ ಕೂಡ ಆಗಿದ್ದ. ಮುಂದೆ 1962ರಲ್ಲಿ ಉಗಾಂಡಾ ಸ್ವತಂತ್ರ ರಾಷ್ಟ್ರವೆನ್ನಿಸಿಕೋಂಡಿತು. ಸರ್ ಎಡ್ವರ್ಡ್ ಮುಟೇಸಾ ರಾಷ್ಟ್ರಾಧ್ಯಕ್ಷ(ರಾಜ)ನಾದನು, ಮಿಲ್ಟನ್ ಒಬೋಟೆ ಪ್ರಧಾನಮಂತ್ರಿಯ ಸ್ಥಾನಕ್ಕೆ ಬಂದ. ಇತ್ತ ಅಮಿನ್ ಸೈನ್ಯದಲ್ಲಿ ಪದವಿಯಿಂದ ಪದವಿಗೆ ಜಿಗಿಯುತ್ತಾ ಬಂದು ಭೂಸೇನೆ ಮತ್ತು ವಾಯುಸೇನೆಗಳ ಡೆಪ್ಯುಟಿ ಕಮಾಂಡರ್ ಹುದ್ದೆಗೇರಿದ. 1966ರಲ್ಲಿ ನಡೆದ ಚಿನ್ನ ಕಳ್ಳಸಾಗಾಣಿಕೆಯ ಹಗರಣವೊಂದು ಒಬೋಟೆ ಮತ್ತು ಅಮಿನ್ ಕೊರಳಿಗೆ ಉರುಳಾಗುವ ಸಾಧ್ಯತೆ ಇತ್ತು. ಆ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಗಳು ಬಂದಾಗ ಸಂಸತ್ತನ್ನೇ ಅಮಾನತ್ತಿನಲ್ಲಿರಿಸಿ ಒಬೋಟೆ ತಾನೇ ರಾಷ್ಟ್ರಾಧ್ಯಕ್ಷನ ಸ್ಥಾನಕ್ಕೆ ಬಂದು ಕುಳಿತು ಬಿಟ್ಟ. ಹೆಚ್ಚೂಕಡಿಮೆ ಅನಕ್ಷರಸ್ಥನಾಗಿದ್ದ ಅಮಿನ್ ಈಗ ಸೈನ್ಯದ ಕಮಾಂಡರ್ ಹುದ್ದೆಗೆ ಬಂದು ಕುಳಿತಿದ್ದ. ತನ್ನ ಬುಡಕಟ್ಟಿನ ಜನರನ್ನೇ ಸೈನ್ಯದ ಆಯಕಟ್ಟಿನ ಜಾಗಕ್ಕೆ ನೇಮಿಸಿಕೊಂಡು ತನ್ನ ಬೆಂಬಲಿಗರ ಪಡೆಯೊಂದನ್ನು ಸದ್ದಿಲ್ಲದೆ ಕಟ್ಟತೊಡಗಿದ್ದ. ಮುಂದೆ 1969ರಿಂದ ಒಬೋಟೆ ಮತ್ತು ಅಮಿನ್ ನಡುವೆ ಮನಸ್ತಾಪಗಳು, ತಿಕ್ಕಾಟ-ಮುಸುಕಿನ ಗುದ್ದಾಟ ಶುರುವಾಯ್ತು. ಈದಿ ಅಮಿನ್ ರಂಗಪ್ರವೇಶಕ್ಕೆ ವೇದಿಕೆ ಸಜ್ಜುಗೊಳ್ಳಲು ಆರಂಭವಾಯ್ತು.

 

ಈ ಹಗ್ಗ ಜಗ್ಗಾಟಕ್ಕೊಂದು ಅಂತಿಮ ತಿರುವು ಸಿಕ್ಕಿದ್ದು 1971ರಲ್ಲಿ. ಸೈನ್ಯದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಒಬೋಟೆ ಅಮಿನ್ ಮೇಲೆ ಕ್ರಮಕೈಗೊಳ್ಳಲು ಮುಂದಾದಾಗ ಅಮಿನ್ ಸಿಡಿದು ನಿಂತ. ಸಿಂಗಾಪುರಕ್ಕೆ ಕಾಮನ್‌ವೆಲ್ತ್ ಸಮ್ಮೇಳನೆಕ್ಕೆಂದು ಒಬೋಟೆ ತೆರಳಿದ್ದ ಸಂದರ್ಭದಲ್ಲಿ ಕ್ಷಿಪ್ರ ಸೈನ್ಯ ಕ್ರಾಂತಿಯೊಂದನ್ನು ನಡೆಸಿ, ಕಂಪಾಲವನ್ನು ಮುತ್ತಿಗೆ ಹಾಕಿ ತನ್ನ ಕೈವಶ ಮಾಡಿಕೊಂಡ. ಎಂಟೆಬೆ ಅಂತಾರಾಷ್ಟ್ರೀಯ ನಿಲ್ದಾಣ ಅವನ ಅಧೀನಕ್ಕೆ ಬಂತು. ಹದಗೆಟ್ಟ ಶಾಂತಿ ಸುವ್ಯವಸ್ಥೆ, ಆರ್ಥಿಕ ದುಸ್ಥಿತಿ, ಭ್ರಷ್ಟಾಚಾರದ ಆರೋಪ ಹೊರಿಸಿ ಒಬೋಟೆಯನ್ನು ಪದಚ್ಯುತಗೊಳಿಸಿ ಸೈನ್ಯಾಡಳಿತದ ಘೋಷಣೆ ಮಾಡಿದ. ಅಧಿಕಾರವಹಿಸಿಕೊಂಡ ಅಮಿನ್ ಹೇಳಿದ್ದು ಇಷ್ಟೇ… ನನಗೆ ಅಧಿಕಾರದ ಮಹತ್ವಾಕಾಂಕ್ಷೆ ಇಲ್ಲ. ನಾನೊಬ್ಬ ಸೈನಿಕ ಮಾತ್ರ. ಇದೊಂದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ನನ್ನ ಕಾಳಜಿ ಏನಿದ್ದರೂ ನಿಮ್ಮೆಲ್ಲರ ಒಳಿತು ಮತ್ತು ಈ ದೇಶವನ್ನು ಬಲಿಷ್ಟಗೊಳಿಸುವುದು…. ಜನ ಖುಶಿಯಿಂದ ಹುಚ್ಚೆದ್ದು ಬೀದಿಗಿಳಿದು ಬಂದು ಅವನನ್ನು ಬೆಂಬಲಿಸಿದರು… ಹರ್ಷೋದ್ಗಾರ ಮಾಡಿದರು. ಅಂತರರಾಷ್ಟ್ರೀಯ ಸಮುದಾಯ ಕೂಡಾ ಅವನ ಕ್ರಮವನ್ನು ಸ್ವಾಗತಿಸಿತು. ಇದಾದ ಒಂದು ವಾರದಲ್ಲೇ ಫೆಬ್ರವರಿ ಎರಡರಂದು ಅಮಿನ್ ಮುಕುಟವಿಲ್ಲದ ಮಹಾರಾಜನಂತೆ ಸಿಂಹಾಸನವನ್ನೇರಿದ. ಹೀಗೆ ತಾತ್ಕಾಲಿಕವೆಂದು ಹೇಳಿಕೊಂಡು ಅಧಿಕಾರದ ರುಚಿ ಕಂಡ ಅಮಿನ್ ಸರಿ ಸುಮಾರು ಎಂಟು ವರ್ಷಗಳ ಕಾಲ ಮೆರೆದಾಡಿಬಿಟ್ಟ. ಯಾವ ಚುನಾವಣೆಯನ್ನು ನಡೆಸುವ ಗೋಜಿಗೂ ಹೋಗಲಿಲ್ಲ…. ಹೀಗೆ ಶುರುವಾಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಆಡಳಿತಗಾರನೊಬ್ಬನ ಸರ್ವಾಧಿಕಾರಿ ದರ್ಬಾರು… ಎಂಟು ವರ್ಷಗಳ ನಿರಂಕುಶ ಪ್ರಭುತ್ವದ ಕಾರ್ಬಾರು… ಅದೆಷ್ಟೋ ಜನರ ಪ್ರಾಣಕ್ಕೆರವಾದ ನರಮೇಧದದ ಅಧ್ಯಾಯ ಇನ್ನು ಶುರು.

 

( ಮುಂದಿನ ಭಾಗದಲ್ಲಿ…. ಈದಿ ಅಮಿನ್ ದರ್ಬಾರಿನ ಆ ದಿನಗಳು…..!!)

 

ಟಿಪ್ಪಣಿಗಳು
 1. viji ಹೇಳುತ್ತಾರೆ:

  nimma baraha shaili, nirupane rithi bahu chennagide. heege munduvarisi…

 2. navilugari ಹೇಳುತ್ತಾರೆ:

  ಒಂದು ಅದ್ಭುತ ಲೇಖನ..:) ಬಾಲ್ಯ ಎಲ್ಲರದ್ದು ಸುಂದರವಾಗೆ ಇರತ್ತೆ..ಬರ್ತ ಬರ್ತಾನೆ ತಾನೆ ಅದರ ಖದರ್ ಬದಲಗೋದು? ನೋಡೋಣ ಮೊದಲ ಭಾಗದಲ್ಲೇ ಕುತೂಹಲ ಬೆಳಸಿಕೊಂಡು ಉಳಿಸಿಕೊಂಡು ಹೊರಟಿದ್ದೀರಿ..ಮುಂದಿನ ಭಾಗಕ್ಕೆ ಕಾಯ್ತ ಇರೋರಲ್ಲಿ ನಾನು ಕೂಡ ಒಬ್ಬ…

  ಮತ್ತೊಂದು ಮಾತು ನಿರೂಪಣಾ ಶೈಲಿ ಸೂಪರ್ ಇದೆ..ಯಾವುದಾದರೂ ಪತ್ರಿಕೆಗೆ ಕೊಡಬಹುದಲ್ಲಾ? ವಿಕಾಸ್ ಹೇಳಿದ ಹಾಗೆ?

 3. ಸಂದೀಪ್ ಕಾಮತ್ ಹೇಳುತ್ತಾರೆ:

  ಈಗ ’ಭಯಂಕರ’ವಾಗಿದೆ ಲೇಖನ:)

 4. ಸಂದೀಪ್ ಕಾಮತ್ ಹೇಳುತ್ತಾರೆ:

  ಚೆನ್ನಾಗಿದೆ .ಒಂದು ಫೋಟೊ ಹಾಕಿ ಇದ್ರೆ .

 5. ಗುರುಪ್ರಸಾದ್ ಸಿ. ಎಂ ಹೇಳುತ್ತಾರೆ:

  ಉಗಾಂಡ ಮತ್ತು ಪ್ರಪಂಚ ಕಂಡ ದುರುಳ ನಾಯಕನೊಬ್ಬನ ಚಿತ್ರಣ ಉತ್ತಮವಾಗಿ ಮೂಡಿಬರುತ್ತಿದೆ. ಇದು ಹೀಗೆ ಮುಂದುವರೆಯಲಿ.

  – ಚಿ.ಮ.ಗು

 6. kallakulla ಹೇಳುತ್ತಾರೆ:

  abha, yestu ghoravagide. keep writing
  -vikas negiloni

 7. ಶಿಶಿರ ಕನ್ನಂತ ಹೇಳುತ್ತಾರೆ:

  ಇಟ್ ಇಸ್ ರಿಯಲಿ ಇಂಟರೆಸ್ಟಿಂಗ್…

 8. NilGiri ಹೇಳುತ್ತಾರೆ:

  ಚೆನ್ನಾಗಿ ಮೂಡಿ ಬರುತ್ತಿದೆ. ಮುಂದುವರೆಸಿ.

 9. vikas hegde ಹೇಳುತ್ತಾರೆ:

  nice, yavdaru patrike or magazine navru idanna heege part by part haktara kELi.

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s