Archive for ಫೆಬ್ರವರಿ, 2009

ಎಕ್ಸಾಮ್ ಡೇಟು ಬಂದ ಮೇಲೆ… ಓದ್ಬೇಕಂತ ಮಾಡಿದೆ,

ಫ್ರೆಂಡ್ಸ್‌ನೆಲ್ಲಾ ಕಾಡಿ ಬೇಡಿ… ನೋಟ್ಸು ಕಾಪಿ ಮಾಡಿದೆ,

ಓದುವುದು ತುಂಬಾ ಉಳಿದು ಹೋಗಿದೆ…

ಓದಲಿ ಹೇಗೆ ತಿಳಿಯದಾಗಿದೆ…

 

ಮ್ಯಾತ್ಸು ಅಂದ್ರೆ ಕಷ್ಟ ಕಷ್ಟ… ಇರಲಿ ನಂತರ

ಕೆಮಿಸ್ಟ್ರಿ ಸೂತ್ರ ಓದಲು… ಭಯವು ಒಂಥರ

ನಿನ್ನೆ ಓದಲಿಲ್ಲ ಇಂದೂ… ಬಾಟ್ನಿ ಬೇಸರ

ಕಣ್ಣು ಭಾರಿ ಎಳೀತಿದೆ… ನಿದ್ದೆ ಮಂಪರಾ?

 

ಮನಸಲ್ಲಿ ಓದಿದ್ ಎಲ್ಲಿ ಉಳಿದಿದೆ?

ನೆನಪಿಡಲಿ ಹೇಗೆ ತಿಳಿಯದಾಗಿದೆ

 

ಎಕ್ಸಾಮ್ ಡೇಟು ಬಂದ ಮೇಲೆ…||

 

ಕಣ್ಣು ತೆರೆದು ರಾತ್ರಿಡಿ… ಎದ್ದು ಓದೋಣ

ಹಠವ ಮಾಡಿ ಕುಳಿತೆನು… ಬಿಡದೆ ಮೂರ್ದಿನ

ನಿದ್ದೆಯು ಮಂಪರಲ್ಲಿಯೇ… ಎಕ್ಸಾಮಿಗೆ ಬಂದ್ನಣ್ಣ

ಕೇಳು ಗೆಳೆಯನೇ ನೀ… ನನ್ನ ಅಧ್ವಾನ

 

ಹಾಲ್‌ಟಿಕೇಟು ಎಲ್ಲೋ ಕಳೆದು ಹೋಗಿದೆ…

ಹುಡುಕಲಿ ಹೇಗೆ ತಿಳಿಯದಾಗಿದೆ…

 

ಎಕ್ಸಾಮ್ ಡೇಟು ಬಂದ ಮೇಲೆ…||

 

ಆರ್ಥಿಕ ಕುಸಿದ ಹಿನ್ನೆಲೆಯಲ್ಲಿ, ಕೆಲ್ಸ ಕಳೆದುಹೋಗುವ ಭೀತಿಯಲ್ಲಿ ಮಿಲನ ಚಿತ್ರದ ನಿನ್ನಿಂದಲೇ… ನಿನ್ನಿಂದಲೇ… ಹಾಡನ್ನು ಹೀಗೆ ಹಾಡಿದ್ರೆ ಹೇಗಿರುತ್ತೆ…?

ಇದಕ್ಕೆ ನಾನು ಇಟ್ಟ ಟೈಟಲ್ – ಪುನರ್ಮಿಲನ… ಅಂದ್ರೆ ಮಿಲನದ ರಿಮೇಕು ಅಂತ 🙂

 

ನಿನ್ನೆಯಿಂದಲೇ… ನಿನ್ನೆಯಿಂದಲೇ…

ಫೈರಿಂಗು ಶುರುವಾಗಿದೆ…

ನಿನ್ನೆಯಿಂದಲೇ… ನಿನ್ನೆಯಿಂದಲೇ…

ಭಯವೊಂದು ಮನೆಮಾಡಿದೆ…

 

ಎದೆಯಲ್ಲಿ ಏನೇನೋ ಕೋಲಾಹಲ…

ಕಣ್ಣೆದುರಲ್ಲೇ ಫೈರಿಂಗು ನಡೆವಾಗಲೇ

ಐ.ಟಿ. ಸಿಟಿಯಲ್ಲಿ ಕೆಲ್ಸ ಹೋಗುವ ಸಂಭವ

ನಾ ನಿಂತಲ್ಲೇ ಬೆವರಾದೆ ನಿನ್ನೆಯಿಂದಲೇ…

 

ನಿನ್ನೆಯಿಂದಲೇ… ನಿನ್ನೆಯಿಂದಲೇ…||

 

ಮನೆಸಾಲದ ಬಾಕಿ… ತೀರ್ಸಿಲ್ಲ ಇನ್ನೂ…

ಕಾರ್ ಲೋನು ತುಂಬುವ ದಾರಿಯೇನು…?

ಶೇರ್ಸ್‌ನಲ್ಲಿ ಹಣ ಹಾಕಿ ಬೀದಿಗೆ ಬಂದೆ…

ಕೆಲ್ಸ ಹೋದ್ರೆ ಮುಂದೆ ಗತಿಯೇನು…?

 

ದುಡ್ಡಿಲ್ಲದೇ… ಕೆಲಸವಿಲ್ಲದೇ… ಮುಖವೀಗ ಕಳೆಗುಂದಿದೆ…

 

ನಿನ್ನೆಯಿಂದಲೇ… ನಿನ್ನೆಯಿಂದಲೇ…||

 

ಯಾವ್ ಕಂಪ್ನಿಗ್ ಹೋದ್ರು ಕೆಲ್ಸ ಖಾಲಿ ಇಲ್ಲ…

ಆರ್ಥಿಕ ಕುಸಿತದ ಪರಿಣಾಮ…

ಚಳಿಜ್ವರ ನಡುಕ ಶುರುವಾಗ್ತದಿಲ್ಲಿ…

ಕೆಡ್ತಂದ್ರೆ ಅಮೇರಿಕದ ಹವಮಾನ…

 

ಭಡ್ತಿ ಇಲ್ದಿದ್ರೂ… ಸಂಬ್ಳ ಕಟ್ಟಾದ್ರೂ… ಕೆಲ್ಸ ಉಳಿದ್ರೆ ಸಾಕಾಗಿದೆ…

ನಿನ್ನೆಯಿಂದಲೇ… ನಿನ್ನೆಯಿಂದಲೇ…||

ನಮ್ಮ ಊರಿನ ಹುಡುಗ ಪವನ್ ಒಂದು ಬ್ಲಾಗ್ ಶುರು ಮಾಡಿದ್ದಾನೆ… ನಮ್ಮ  ಊರಿನವ ಅಂತ ಹೇಳೋದಲ್ಲ… ಇವನು ತುಂಬಾ ಚೆನ್ನಾಗಿ ಬರೆಯಬಲ್ಲೆ ಅನ್ನುವ ಸೂಚನೆಯನ್ನು ತಾನು ಬರೆದ ಕೆಲವು ಪುಟ್ಟ ಪುಟ್ಟ ಲೇಖನಗಳಲ್ಲೇ ತೋರ್ಸಿದ್ದಾನೆ… ನೀವೂ ಒಂದ್ ಸಲ ಹೋಗಿ ಓದಿ ಅವನ ಬೆನ್ನು ತಟ್ಟಿದ್ರೆ… ಇನ್ನಷ್ಟು ಹುರುಪಿಂದ ಮತ್ತಷ್ಟು ಚೆಂದವಾಗಿ ಬರೆದಾನು… ಹೋಗಿ ನೋಡಿ ಸ್ವ ರಿಂಗಣವನ್ನು ಕೇಳಿಸಿಕೊಳ್ಳಿ

ಇದೊಂದು ಪುಸ್ತಕದ ಬಗ್ಗೆ ಹೇಳಿಕೊಂಡಷ್ಟು ರವಿ ಬೆಳಗೆರೆ ಇನ್ಯಾವ ಪುಸ್ತಕದ ಕುರಿತೂ ಹೇಳಿರಲಿಕ್ಕಿಲ್ಲ. ಈಗ ಕೊಡ್ತೀನಿ… ಆಮೇಲೆ ಕೊಡ್ತೀನಿ ಅಂತ ಸುಮಾರು ಆರೇಳು ವರ್ಷಗಳಲ್ಲಿ ಓದುಗರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಕೊನೆಗೂ ಮೊನ್ನೆ ಗಣರಾಜ್ಯೋತ್ಸವದ ಮುನ್ನಾದಿನ ಗಜಗರ್ಭ ಪ್ರಸವವಾಯ್ತು. ಕಾದು ಕಾದು ಬೇಸರಗೊಂಡಿದ್ದ ಓದುಗ ದೊರೆಗಳ ಮುಖ ಪ್ರಸನ್ನವಾಯ್ತು. ಹಿಂದೊಮ್ಮೆ ತಮ್ಮ ಪತ್ರಿಕೆ ಹಾಯ್ ಬೆಂಗಳೂರ್ನಲ್ಲಿ ನೀನಾ ಪಾಕಿಸ್ತಾನಮಾಲಿಕೆಯನ್ನು ಬೆಳಗೆರೆ ಶುರು ಮಾಡಿದ್ದರು. ಭುಟ್ಟೋ ಮರಣದಂಡನೆಯ ವಿವರಗಳೊಂದಿಗೆ ಪ್ರಾರಂಭವಾದ ಆ ಮಾಲಿಕೆ ಶುರುವಾದ ಕೆಲವೇ ದಿನಗಳಲ್ಲಿ ನಿಂತೂ ಹೋಗಿತ್ತು… ಓದುಗರ ನಿರೀಕ್ಷೆಯ ಕಾವಿಗೆ ಇನ್ನಷ್ಟು ತುಪ್ಪವನ್ನು ಸುರಿದು. ಇದೀಗ ಅಂತೂ ಇಂತೂ ಪುಸ್ತಕ ಹೊರಬಂದಿದೆ. ಪಾಕಿಸ್ತಾನದ ಪತ್ರಕರ್ತ ಅಮೀರ್ ಮೀರ್ ಕೃತಿಯನ್ನಾಧರಿಸಿದ ಈ ಪುಸ್ತಕ ಜೆಹಾದಿ ಜಗತ್ತಿನ ಒಳಹೊರಗುಗಳನ್ನು, ಧರ್ಮಾಂಧತೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ.

 

ಇಪ್ಪತ್ತೊಂಬತ್ತು ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ಜೆಹಾದಿಗಳ ಪ್ರಪಂಚದ ಮೂಲೆಮೂಲೆಯತ್ತ ಬೆಳಕು ಚೆಲ್ಲುವ ಈ ಕೃತಿಯ ಆರಂಭದಲ್ಲಿ ಬೆಳಗೆರೆ ಸವಿಸ್ತಾರವಾದ ಮುನ್ನುಡಿಯೊಂದರ ಮೂಲಕ ಧರ್ಮಯುದ್ಧದ ಅಂಗಳಕ್ಕೆ ಓದುಗರನ್ನು ಎಳೆತಂದು ನಿಲ್ಲಿಸುತ್ತಾರೆ. ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್‌ಗೆ ಸಮರ್ಪಿತವಾದ ಈ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಜೆಹಾದಿಗಳ ಕಪಿಮುಷ್ಟಿಯಲ್ಲಿರುವ ಪಾಕಿಸ್ತಾನದ ಚಿತ್ರಣವನ್ನು ಒಂದೊಂದಾಗಿ ಕಟ್ಟಿಕೊಡುತ್ತಾ ಹೋಗುತ್ತದೆ.  ಐ.ಎಸ್.ಐ., ಅಲ್-ಕೈದಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯಿಬಾ, ಹರ್ಕತುಲ್ ಮುಜಾಹಿದೀನ್, ಹಿಜ್ಬುಲ್ ಮುಜಾಹಿದೀನ್ ಹೀಗೆ ಬೇರೆಬೇರೆ ಹೆಸರಿನಲ್ಲಿ ಧರ್ಮಯುದ್ಧದ ನೆಪದಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಸಂಘಟನೆಗಳ ಬಗ್ಗೆ ಇಂಚಿಂಚೂ ಬಿಡದೇ ಸಂಗ್ರಹಿಸಿ ಕೊಟ್ಟಿರುವ ಮಾಹಿತಿಯನ್ನು ಓದಿದಾಗ ಇದನ್ನು ಬರೆದು ದಕ್ಕಿಸಿಕೊಂಡಿರುವ ಪಾಕಿಸ್ತಾನಿ ಪತ್ರಕರ್ತನ ಯಮಗುಂಡಿಗೆಯ ಬಗ್ಗೆ ಮೆಚ್ಚುಗೆ ಬೆರೆತ ಆಶ್ಚರ್ಯ ಮೂಡದೇ ಇರದು. ಹಾಗೆಯೇ ಅದನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಬೆಳಗೆರೆಯ ಬರವಣಿಗೆಯ ಚಾತುರ್ಯ, ಶೈಲಿ ಕೂಡಾ ಇಷ್ಟವಾಗುತ್ತದೆ. ನೂರಾರು ಅಪರೂಪದ ಫೋಟೋಗಳು ಪುಟಪುಟಗಳ ಒಟ್ಟಂದಕ್ಕೆ ಇನ್ನಷ್ಟು ಕಳೆಕಟ್ಟುವಂತೆ ಮಾಡಿರುವುದು ಮಾತ್ರವಲ್ಲದೆ, ಅಲ್ಲಿನ ವಿವರಣೆಗೆ ಇನ್ನಷ್ಟು ಇಂಬು ಕೊಡುವಂತಿವೆ.

 

ಪಾಕಿಸ್ತಾನದ ಮುಸ್ಲಿಂ ಪಂಗಡಗಳ ಒಳಜಗಳಗಳು, ಐ.ಎಸ್.ಐ. ಮತ್ತು ಜೆಹಾದಿಗಳ ಬಿಗಿ ಹಿಡಿತದಲ್ಲಿರುವ ಪಾಕಿ ಸೈನ್ಯ, ಜೆಹಾದಿಗಳ ಹುಟ್ಟಿಗೆ ಅಮೇರಿಕ ಪರೋಕ್ಷವಾಗಿ ಹೇಗೆ ಕಾರಣವಾಯ್ತು, ಅಮೇರಿಕಾದ ಟ್ವಿನ್ ಟವರ್ ದಾಳಿಯ ನಂತರ ಅಮೇರಿಕಾದ ತಾಳಕ್ಕೆ ಅನಿವಾರ್ಯವಾಗಿ ಕುಣಿದ ಮುಷರಫ್ ಜೆಹಾದಿಗಳ ಪ್ರತಿರೋಧಕ್ಕೆ ಸಿಲುಕಿ ಅನುಭವಿಸಿದ ಪ್ರಾಣಭೀತಿ, ಕಂದಹಾರ್ ವಿಮಾನಾಪಹರಣ, ಡೇನಿಯಲ್ ಪರ್ಲ್ ಹತ್ಯೆ… ಹೀಗೆ ಜೆಹಾದಿಗಳ ಲೋಕದೊಳಗೆ ಒಂದು ಸುತ್ತು ತಿರುಗಿದಂತಹ ಅನುಭವವನ್ನು ಪುಸ್ತಕ ನೀಡುವುದಂತೂ ಖಂಡಿತ. ಹೀಗೆ ನಮ್ಮರಿವಿಗೆ ಬರದಂತೆ ಆ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳು, ಆ ಘಟನೆಗಳಿಗೆ ಪ್ರತ್ಯಕ್ಷ-ಪರೋಕ್ಷ ಕಾರಣಗಳು, ಅದರ ಪರಿಣಾಮ ಇವೆಲ್ಲವನ್ನು ಕಣ್ಣಮುಂದೆಯೇ ನಡೆವಂತೆ ಚಿತ್ರಿಸಿದ ಪರಿ ನಿಜಕ್ಕೂ ಶ್ಲಾಘನೀಯ. ಪಾಕಿಸ್ತಾನದ ಮದರಸಾಗಳು ಹೇಗೆ ಜೆಹಾದಿಗಳ ಹುಟ್ಟಿಗೆ ಕಾರಣವಾಗುತ್ತವೆ, ಅಲ್ಲಿ ಎಳೆ ಕಂದಮ್ಮಗಳ ನಿಷ್ಕಲ್ಮಷ ಮನಸ್ಸಿನಲ್ಲಿ ಹೇಗೆ ಧರ್ಮದ್ವೇಷದ ವಿಷಬೀಜವನ್ನು ಬಿತ್ತಲಾಗುತ್ತದೆ, ಮುಂದೆ ಅವರನ್ನು ಹೇಗೆ ಜೀವಂತ ಬಾಂಬ್ ಆಗಿ ತರಬೇತುಗೊಳಿಸಿ ನಮ್ಮ ದೇಶದೊಳಕ್ಕೆ ಬಿಡಲಾಗುತ್ತದೆ ಅನ್ನುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಒಸಾಮ, ದಾವೂದ್, ಮುಲ್ಲಾ ಉಮರ್ ಮೊದಲಾದವರು ಜೆಹಾದಿ ಜಗತ್ತಿನ ಮುಖಂಡರ ಜೊತೆ ಕೈಜೋಡಿಸಿ ಹೇಗೆ ಧರ್ಮದ್ವೇಷದ ಬೆಂಕಿಯಿಂದ ಜಗತ್ತಿನಾದ್ಯಂತ ಭಯೋತ್ಪಾದನೆಯ ಬಿಸಿ ಮುಟ್ಟಿಸುತ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬೇಕಿದ್ದರೆ ನೀನಾ ಪಾಕಿಸ್ತಾನವನ್ನು ಒಮ್ಮೆ ತಪ್ಪದೇ ಓದಿ.

 

ತನ್ನ ವಿರೋಧಿಗಳನ್ನು ಹಣಿಯಲು ತಾನೇ ವಿಷದ ಹಾಲೂಡಿ ಬೆಳೆಸಿದ ಜೆಹಾದಿಗಳು, ಅಮೇರಿಕವನ್ನೇ ಕಚ್ಚಲು ಮುಂದಾದ ಬಳಿಕವಷ್ಟೇ ಅದು ಹೇಗೆ ಸುಭಗನಂತೆ ಪೋಸು ಕೊಡುತ್ತಾ ಭಯೋತ್ಪಾದನೆ ನಿರ್ಮೂಲನದ ಮಾತಾಡುತ್ತಿದೆಯೋ ನೋಡಿ. ಈಗ ಅವರು ಏನೇ ಬೊಬ್ಬೆ ಹೊಡೆದರೂ, ಪ್ರಾರಂಭದಲ್ಲಿ ರಷ್ಯನ್ನರನ್ನು ಹಣಿಯುವುದಷ್ಟೇ ಪರಮೋದ್ಧೇಶವನ್ನಾಗಿಸಿಕೊಂಡು ಭಯೋತ್ಪಾದನೆಗೆ ತೆರೆಮರೆಯಲ್ಲಿ ಬೆಂಬಲ ನೀಡಿದ್ದು, ಆ ಮೂಲಕ ಸಣ್ಣ ಪ್ರಮಾಣದಲ್ಲಿ ಸಕ್ರಿಯರಾಗಿದ್ದ ಜೆಹಾದಿಗಳು ಈ ಪ್ರಮಾಣದಲ್ಲಿ ಬೆಳೆದು ನಿಲ್ಲುವಲ್ಲಿ ಅಮೇರಿಕ ನಿರ್ವಹಿಸಿದ ಪಾತ್ರ – ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಈಗ ಜೆಹಾದಿಗಳು ಯಾವ ಪರಿ ಬೆಳೆದು ನಿಂತಿದ್ದಾರೆಂದರೆ ಅಮೇರಿಕದ ಮಾತು ಹಾಗಿರಲಿ ಪಾಕಿಸ್ತಾನ ಸರ್ಕಾರದ ಮಾತನ್ನೇ ಅವರು ಕೇಳುವುದಿಲ್ಲ. ಜೆಹಾದಿಗಳು ಈ ಪರಿ ಹೆಚ್ಚಿಕೊಂಡಿರುವುದಕ್ಕೆ ಅಮೇರಿಕಾ ಅವರನ್ನು ಆ ಪರಿ ಹಚ್ಚಿಕೊಂಡಿದ್ದು ಹೇಗೆ ಕಾರಣವಾಯ್ತು ಅನ್ನುವುದರ ಬಗ್ಗೆ ಭರಪೂರ ಮಾಹಿತಿ ಪುಸ್ತಕದುದ್ದಕ್ಕೂ ಸಿಗುತ್ತದೆ. ಪುಸ್ತಕದಲ್ಲಿರುವ ವಿವರಣೆ, ಅದು ಕಟ್ಟಿಕೊಡುವ ಅಪರೂಪದ ಮಾಹಿತಿಗಳ ಅಗಾಧತೆ, ಅಪರೂಪದ ಫೋಟೋಗಳು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಸಂಗ್ರಹಯೋಗ್ಯ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ.

 

ಆದರೂ ನನ್ನ ಮಟ್ಟಿಗೆ ಹೇಳುವುದಾದರೆ ಈ ಪುಸ್ತಕದಿಂದ ನಾನು ನಿರೀಕ್ಷಿಸಿದ್ದು ನನಗೆ ಸಂಪೂರ್ಣವಾಗಿ ಸಿಗಲಿಲ್ಲವೆಂದೇ ಹೇಳಬೇಕು. ಹಾಯ್ನಲ್ಲಿ ಬಂದ ಕೆಲವು ಅಧ್ಯಾಯಗಳನ್ನು ಓದಿದ ನಂತರ ಈ ಪುಸ್ತಕದ ಬಗ್ಗೆ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು. ದೇಶ ವಿಭಜನೆಯ ಬಳಿಕ ಪಾಕಿಸ್ತಾನವೆಂಬ ನಮ್ಮ ನೆರೆಯ ರಾಷ್ಟ್ರದಲ್ಲಾದ ಸಮಗ್ರ ಘಟನಾವಳಿಗಳು, ಭಾರತ ಪಾಕಿಸ್ತಾನ ಯುದ್ಧಗಳ ಇತಿಹಾಸ, ಸೈನ್ಯಾಧಿಕಾರಿಗಳ ಸರ್ವಾಧಿಕಾರದಲ್ಲಿ ಆಳಿಸಿಕೊಂಡ ಪಾಕಿಸ್ತಾನ, ಭಾರತದ ಕುರಿತು ಅಲ್ಲಿನ ಜನಸಾಮಾನ್ಯರಲ್ಲಿ ಇರುವ ನೈಜ ಅಭಿಪ್ರಾಯ, ಆರ್ಥಿಕ ಸಂಕಷ್ಟಗಳ ಅಡಿಯಲ್ಲೂ ಅಡಗದ ಅವರ ರಣೋತ್ಸಾಹ… ಹೀಗೆ ಪಾಕಿಸ್ತಾನದ ಸಮಗ್ರ ಚಿತ್ರಣವೊಂದನ್ನು ನಾನು ನಿರೀಕ್ಷಿಸಿದ್ದೆ. ಬಹುತೇಕ ಜೆಹಾದಿಗಳ ಜಗತ್ತಿನ ಸುತ್ತಲೇ ಸುತ್ತುವ ಪುಸ್ತಕದ ವಿವರಣೆಗಳು ಆ ಜಗತ್ತಿನ ಕರಾಳತೆ, ನಿಗೂಢತೆಯನ್ನು ಸಮಗ್ರವಾಗಿ ಪರಿಚಯಿಸುತ್ತದಾದರೂ ಪುಸ್ತಕದಲ್ಲಿನ ಘಟನೆಗಳು ಪಾಕಿಸ್ತಾನದ ಇತ್ತೀಚಿನ ಇತಿಹಾಸದ ಸುತ್ತಲಷ್ಟೇ ಗಿರಕಿ ಹೊಡೆಯುತ್ತವೆ. ಹಾಗಾಗಿ ಸಮಗ್ರ ಇತಿಹಾಸದ ಚಿತ್ರಣದ ನಿರೀಕ್ಷೆಯಿಟ್ಟುಕೊಂಡ ನನಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಬಹುಶಃ ಅಮಿರ್ ಮೀರ್ ಕೃತಿಯ ವ್ಯಾಪ್ತಿಗಷ್ಟೇ ಪುಸ್ತಕ ಸೀಮಿತಗೊಳ್ಳಬೇಕಾದ ಅನುವಾದಕರ ಅಸಹಾಯಕತೆಯೂ ಇದಕ್ಕೆ ಕಾರಣವಿರಬಹುದು. ಏನೇ ಇರಲಿ, ಪ್ರಸ್ತುತ ಪುಸ್ತಕ ಹೊರತರುತ್ತಿರುವ ಬೆಳಗೆರೆಯ ವೇಗವನ್ನು ಗಮನಿಸಿದರೆ, ಅಂತಹ ಪುಸ್ತಕವೊಂದು ಸಧ್ಯದಲ್ಲೇ ನಮ್ಮ ಕೈ ಸೇರಿದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನುವುದು ನನ್ನ ಆಶಾವಾದ.

 

ಪುಸ್ತಕ                             : ನೀನಾ ಪಾಕಿಸ್ತಾನ

ಮೂಲ                             : ಅಮೀರ್ ಮೀರ್

ಅನುವಾದ                         : ರವಿ ಬೆಳಗೆರೆ

ಪುಟಗಳು                          : 277+26

ಪ್ರಕಾಶನ                          : ಭಾವನಾ ಪ್ರಕಾಶನ

ಬೆಲೆ                               : 150 ರೂ.

ದೊರೆತನ ಅಳಿದ ಮೇಲೆ

ಸೌದಿ ಅರೇಬಿಯಾಕ್ಕೆ ಬಂದ ಅಮಿನ್‌ಗೆ ರಾಜಾತಿಥ್ಯವೇ ಸಿಗುತ್ತದೆ. ತನ್ನ ಪರಿವಾರದ ಸಮೇತ ಉಳಿದುಕೊಳ್ಳಲು ಅರಮನೆಯಂತಹ ಬಂಗಲೆ, ಆಳು-ಕಾಳು, ಅಡುಗೆಯವರು,ಕಾರುಗಳು.. ಇವೆಲ್ಲ ಸೌಲಬ್ಯದ ಜೊತೆಗೆ ಪ್ರತಿ ತಿಂಗಳು 1400 ಅಮೇರಿಕನ್ ಡಾಲರ್‌ಗಳ ವೇತನ… ಯಾರಿಗುಂಟು ಯಾರಿಗಿಲ್ಲ. ಆದರೆ ಅತ್ತ ಅವನು ಬಿಟ್ಟು ಬಂದ ಉಗಾಂಡಾದ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಾಗಿತ್ತು. 320 ಮಿಲಿಯನ್ ಅಮೇರಿಕನ್ ಡಾಲರುಗಳ ಸಾಲ, 200%ನಷ್ಟು ಹಣದುಬ್ಬರ, ಪಾಳುಬಿದ್ದ ಕೃಷಿಭೂಮಿ, ಬಾಗಿಲು ಮುಚ್ಚಿದ ಕಾರ್ಖಾನೆಗಳು, ದಿವಾಳಿಯಾದ ಉದ್ಯಮಗಳು… ಉಗಾಂಡಾವನ್ನು ಎತ್ತರೆತ್ತರಕ್ಕೆ ಕ್ಕೊಂಡೊಯ್ಯುವ ಕನಸು ಕಂಡ ಅಮಿನ್ ಅಕ್ಷರಶಃ ಅವನತಿಯ ಪ್ರಪಾತಕ್ಕೆ ತಳ್ಳಿಬಿಟ್ಟಿದ್ದ. 1980ರಲ್ಲಿ ಒಬೋಟೆ ಪುನಃ ಅಧಿಕಾರದ ಚುಕ್ಕಾಣಿ ಹಿಡಿದನು. ಆದರೆ ಅವನ ಆಡಳಿತವು ಕೂಡಾ ಅಮಿನ್ ಆಡಲಿತಕ್ಕಿಂತ ಭಿನ್ನವಾಗೇನು ಇರಲಿಲ್ಲ. ಅವನ ಆಳ್ವಿಕೆಯಲ್ಲೂ ಸಾಕಷ್ಟು ಅಮಿನ್ ಬೆಂಬಲಿಗರ ಮಾರಣಹೋಮ ನಡೆಯಿತು. ಅಮಿನ್ ಬಿಟ್ಟುಹೋದ ಪರಂಪರೆಯನ್ನೇ ಯಥಾವತ್ತಾಗಿ ಮುಂದುವರಿಸಿದ ಒಬೋಟೆ, ಮೊದಲೇ ಪಾಳುಬಿದ್ದ ಸ್ಮಶಾನದಂತಾಗಿದ್ದ ಉಗಾಂಡಾವನ್ನು ಇನ್ನಷ್ಟು ಹಾಳುಸುರಿವಂತೆ ಮಾಡಿದ್ದೆ ಮಹತ್ಸಾಧನೆಯಾಯ್ತು. 1989ರಲ್ಲಿ ಅಮಿನ್ ಪುನಹ ಗದ್ದುಗೆಯನ್ನೇರುವ ಕನಸಿನ ಬೆನ್ನೇರಿ ಉಗಾಂಡಾಕ್ಕೆ ಮರಳುವ ಪ್ರಯತ್ನ ಮಾಡಿದ. ಆದರೆ ಕಾಂಗೋದ ಜೈರೆಯಲ್ಲಿ ಅವನನ್ನು ಗುರುತು ಹಿಡಿಯಲಾಗಿ, ಅವನ ಕನಸಿನ ರೆಕ್ಕೆ ಕತ್ತರಿಸಿ ಬಿತ್ತು. ಬಂದದಾರಿಗೆ ಸುಂಕವಿಲ್ಲ ಎಂದು ಮತ್ತೆ ಮತ್ತೆ ಸೌದಿಗೆ ಮರಳಿದ. ಅಮಿನ್ ಸೌದಿ ಅರೇಬಿಯಾದಲ್ಲಿ ಇರತೊಡಗಿದ ಬಳಿಕ ಸಾರ್ವಜನಿಕ ಜೀವನದಿಂದ ಸಾಕಷ್ಟು ದೂರವೇ ಉಳಿದ. ಮಾಧ್ಯಮಗಳಿಗೆ ಮುಖ ತೋರಿಸಲೂ ಇಲ್ಲ. ಆದರೂ 1999ರಲ್ಲಿ ಉಗಾಂಡಾದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿನ್ ಹೇಳಿದ್ದು ಇಷ್ಟು… ನಾನು ಈಗ ತುಂಬಾ ಸುಖಿಯಾಗಿ ನೆಮ್ಮದಿಯಿಂದ ಇದ್ದೇನೆ. ನನ್ನ ಅಧಿಕಾರಾವಧಿಗಿಂತ ಹೆಚ್ಚು ಸಂತೃಪ್ತಿಯಿಂದ ಇದ್ದೇನೆ. ಲಕ್ಷಾಂತರ ಜನರ ನೆಮ್ಮದಿಯ ಸಮಾಧಿಯ ಮೇಲೆ ತನ್ನ ಐಷಾರಾಮದ ಸೌಧ ಕಟ್ಟಿಕೊಂಡ ಅಮಿನ್‌ಗೆ ಸಕಲ ಸಂತಸ…. ಅವನ ದುರಾಡಳಿತಕ್ಕೆ ಸಿಕ್ಕಿ ನಲುಗಿದವರ ಪಾಲಿಗೆ ನಿತ್ಯ ಸೂತಕ. 2001ರಲ್ಲಿ ಅಮಿನ್ ಪುನಃ ಉಗಾಂಡಾಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದ. ಆದರೆ ಉಗಾಂಡಾದ ಸರ್ಕಾರ ಅವನ ಈ ಇಚ್ಛೆಯನ್ನು ಖಂಡತುಂಡವಾಗಿ ಖಂಡಿಸಿತು ಮಾತ್ರವಲ್ಲ ಒಂದು ವೇಳೆ ಅವನು ಉಗಾಂಡಾಕ್ಕೆ ಮರಳಿ ಬಂದರೆ ಅವನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯನ್ನೊಡ್ಡಿತು. ಹೀಗಾಗಿ ಉಗಾಂಡಾಕ್ಕೆ ತೆರೆಳಿ ಮತ್ತೆ ಮೆರೆಯುವ ಅಮಿನ್ ಹಂಬಲದ ಬಳ್ಳಿ ಚಿಗುರುವ ಮುನ್ನವೇ ಕಮರಿಹೋಯಿತು. ದೇವರು ದೊಡ್ಡವನು ಎಂದು ಉಗಾಂಡಾದ ಜನತೆ ನಿಟ್ಟುಸಿರಾಯಿತು!

 

೨೦೦೩ರಲ್ಲಿ ಅಮಿನ್ ದೇಹಸ್ಥಿತಿ ಬಿಗಡಾಯಿಸಲಾರಂಭಿಸಿತು. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅಮಿನ್ ಸಂಪೂರ್ಣ ಜರ್ಜರಿತನಾಗಿದ್ದ. ಸರಿ ಸುಮಾರು ಮೂರು ತಿಂಗಳುಗಳ ಕಾಲ ಅಸ್ಪತ್ರೆವಾಸವನ್ನು ಮಾಡಿ ತನ್ನ ಕಾಯಿಲೆಯೆ ವಿರುದ್ಧ ಸೆಣಸಿದ ಅಮಿನ್ ಕೊನೆಗೂ ಸೋತು ಕೈಚೆಲ್ಲಿದ. ಎಂಬತ್ತರ ಹೊಸ್ತಿಲಿನಲ್ಲಿದ್ದ ಅಮಿನ್ 2003ನೇ ಇಸವಿಯ ಆಗ್‌ಸ್ಟ್ 16ರಂದು ತನ್ನ ಇಹಲೋಕದ ವ್ಯಾಪಾರವನ್ನು ಮುಗಿಸಿದ. ಈ ಮೂಲಕ ಆಫ್ರಿಕಾದ ಬಹುಸಂಸ್ಕೃತಿಯ ಪರಿಣಾಮವಾಗಿ ಹುಟ್ಟಿಕೊಂಡ ಪರಮ ವಿಲಕ್ಷಣ, ಪರಮಕ್ರೂರಿ, ಆದರೆ ಅಷ್ಟೇ ದೊಡ್ಡ ಕನಸುಗಾರ ನಾಯಕನೊಬ್ಬನ ಯುಗಾಂತ್ಯವಾಯಿತು. ಅವನ ಸಂಬಂಧಿಕರು ಅಮಿನ್ ಶವವನ್ನು ಉಗಾಂಡಾದಲ್ಲಿ ಮಣ್ಣುಮಾಡಲು ಬಯಸಿದ್ದರು. ಆದರೆ ಅಮಿನ್ ಉಗಾಂಡಾಕ್ಕೆ ಮಾಡಿದ ದೊಡ್ಡ ಉಪಕಾರದ(!) ಫಲವನ್ನು ಇನ್ನೂ ಉಣ್ಣುತ್ತಿದ್ದ ಉಗಾಂಡಾದ ಸರ್ಕಾರ ಮತ್ತು ಜನತೆಗೆ ಅಮಿನ್ ತಮ್ಮ ನೆಲದಲ್ಲಿ ಮಣ್ಣಾಗುವುದು ಸುತರಾಂ ಇಷ್ಟವಿರಲಿಲ್ಲ. ಇದರಿಂದಲೇ ಅಮಿನ್ ಕುರಿತು ಅವರಿಗಿದ್ದ ಅಸಮಾಧಾನ ಅಸಹ್ಯ ಭಾವನೆಗಳು ಎಷ್ಟಿದ್ದವೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಒಂದು ವೇಳೆ ಅಮಿನ್ ಶವವನ್ನು ಉಗಾಂಡಾದಲ್ಲೇ ಮಣ್ಣು ಮಾಡಲು ಬಂದರೂ ಅವನಿಗೆ ಯಾವ ವಿಶೇಷ ಮರ್ಯಾದೆಯನ್ನೂ ಕೊಡಮಾಡುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಅವನ ಅಂತ್ಯಸಂಸ್ಕಾರ ಮಾಡೋದಾದ್ರೆ ಮಾಡಿಕೊಳ್ಳಿ ಅಂದಿತು ಅಂದಿನ ಉಗಾಂಡಾದ ಸರ್ಕಾರ. ಹಾಗಾಗಿ ಅನಿವಾರ್ಯವಾಗಿ ಸೌದಿ ಅರೇಬಿಯಾದ ಜೆಡ್ಡಾದ ರುವಾಯಿ ಚಿತಾಗಾರದಲ್ಲಿ ಅಮಿನ್ ದೇಹ ಪಂಚಭೂತಗಳಲ್ಲಿ ಲೀನವಾಯ್ತು.

 

ಆಗಸ್ಟ್ 18ರ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಪ್ರಕಟವಾದ ಅಮಿನ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಲೇಖನವೊಂದು ಹೀಗೆ ಹೇಳಿತ್ತು…  ವಸಾಹತುಶಾಹಿಯ ಪ್ರಭಾವಕ್ಕೆ ಒಳಗಾಗಿ ಬಹುಸಂಸ್ಕೃತಿಯ ಮೂಸೆಯಿಂದ ಹುಟ್ಟಿಬಂದ ಆಫ್ರಿಕಾದ ಬಹುತೇಕ ನಾಯಕರುಗಳಂತೆ ಅಮಿನ್ ಪರಮ ಹುಂಬನಾಗಿದ್ದ. ಅವನ ಮಹತ್ವಾಕಾಂಕ್ಷೆಗೆ ಇಂಬುಕೊಡುವಂತಹ ಯಾವ ಒಳನೋಟಗಳೂ ಇರಲಿಲ್ಲ. ಅದಕ್ಕೆ ಬೇಕಾದ ಶಿಕ್ಷಣವಾಗಲಿ, ದಾರಿ ತೋರಿಸಬಲ್ಲಂತಹ ಮೇಧಾವಿಗಳ ನೆರವಾಗಲಿ ಇಲ್ಲದೇ, ತನ್ನ ಸುತ್ತಲೂ ತನ್ನಂತವರದೇ ಕೋಟೆ ಕಟ್ಟಿಕೊಂಡ ಅಮಿನ್ ಆ ಕೂಪದೊಳಗೇ ಉಳಿದುಬಿಟ್ಟ. ಆ ಮೂಲಕ ಹೊಸಬೆಳಕಿನತ್ತ ಹೊರಳಬೇಕಾಗಿದ್ದ ಉಗಾಂಡಾದ ಭವಿಷ್ಯವನ್ನು ಅಂಧಕಾರದ ಹೊಂಡಕ್ಕಿಳಿಸಿ ತಾನೂ ಅದರಲ್ಲಿ ಬಿದ್ದು ಬಿಟ್ಟ’. ತನ್ನ ಜೋಕರ್‌ನಂತಹ ವರ್ತನೆ ಹಾಗೂ ಹಿಟ್ಲರ್ ಕೃತ್ಯವನ್ನು ಸಮರ್ಥಿಸುವಂತಹ ಅಸಂಬದ್ಧ ಹೇಳಿಕೆಗಳ ಮೂಲಕ ಅಮಿನ್ ಹೊರ ಜಗತ್ತಿನ ಕಣ್ಣಲ್ಲಿಯೂ ಹಗುರಾಗಿಬಿಟ್ಟ. ಸಾಲದ್ದಕ್ಕೆ ಪರಮ ಹುಂಬನಾಗಿದ್ದ ಅಮಿನ್ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸಿದ್ದು ಕೂಡಾ ಅವನ ತನ್ಮೂಲಕ ಉಗಾಂಡಾದ ದುರಂತಕ್ಕೆ ಹೇತುವಯ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ತನಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿ, ಉಗಾಂಡಾದ ಉದ್ಧಾರದ ಮೂಲಕರ್ತೃ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ತನ್ನ ವಿಚಿತ್ರ ವಿಲಕ್ಷಣ ವ್ಯಕ್ತಿತ್ವದ ದೆಸೆಯಿಂದ ದುರಂತ ನಾಯಕನಾಗಿಬಿಟ್ಟ ಅವನ ಬದುಕು ಗೊಂದಲಗಳ ಮೇರುಕೃತಿಯಂತಾಗಿದ್ದು ಮಾತ್ರ ಆಫ್ರಿಕಾದ ಚರಿತ್ರೆಯ ದುರಂತವೇ ಸರಿ.