ಈದಿ ಅಮಿನ್ – ನರಹಂತಕನೊಬ್ಬನ ವಿಲಕ್ಷಣ ಗಾಥೆ – ಭಾಗ 4

Posted: ಫೆಬ್ರವರಿ 5, 2009 in ವಿಚಾರ

ದೊರೆತನ ಅಳಿದ ಮೇಲೆ

ಸೌದಿ ಅರೇಬಿಯಾಕ್ಕೆ ಬಂದ ಅಮಿನ್‌ಗೆ ರಾಜಾತಿಥ್ಯವೇ ಸಿಗುತ್ತದೆ. ತನ್ನ ಪರಿವಾರದ ಸಮೇತ ಉಳಿದುಕೊಳ್ಳಲು ಅರಮನೆಯಂತಹ ಬಂಗಲೆ, ಆಳು-ಕಾಳು, ಅಡುಗೆಯವರು,ಕಾರುಗಳು.. ಇವೆಲ್ಲ ಸೌಲಬ್ಯದ ಜೊತೆಗೆ ಪ್ರತಿ ತಿಂಗಳು 1400 ಅಮೇರಿಕನ್ ಡಾಲರ್‌ಗಳ ವೇತನ… ಯಾರಿಗುಂಟು ಯಾರಿಗಿಲ್ಲ. ಆದರೆ ಅತ್ತ ಅವನು ಬಿಟ್ಟು ಬಂದ ಉಗಾಂಡಾದ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಾಗಿತ್ತು. 320 ಮಿಲಿಯನ್ ಅಮೇರಿಕನ್ ಡಾಲರುಗಳ ಸಾಲ, 200%ನಷ್ಟು ಹಣದುಬ್ಬರ, ಪಾಳುಬಿದ್ದ ಕೃಷಿಭೂಮಿ, ಬಾಗಿಲು ಮುಚ್ಚಿದ ಕಾರ್ಖಾನೆಗಳು, ದಿವಾಳಿಯಾದ ಉದ್ಯಮಗಳು… ಉಗಾಂಡಾವನ್ನು ಎತ್ತರೆತ್ತರಕ್ಕೆ ಕ್ಕೊಂಡೊಯ್ಯುವ ಕನಸು ಕಂಡ ಅಮಿನ್ ಅಕ್ಷರಶಃ ಅವನತಿಯ ಪ್ರಪಾತಕ್ಕೆ ತಳ್ಳಿಬಿಟ್ಟಿದ್ದ. 1980ರಲ್ಲಿ ಒಬೋಟೆ ಪುನಃ ಅಧಿಕಾರದ ಚುಕ್ಕಾಣಿ ಹಿಡಿದನು. ಆದರೆ ಅವನ ಆಡಳಿತವು ಕೂಡಾ ಅಮಿನ್ ಆಡಲಿತಕ್ಕಿಂತ ಭಿನ್ನವಾಗೇನು ಇರಲಿಲ್ಲ. ಅವನ ಆಳ್ವಿಕೆಯಲ್ಲೂ ಸಾಕಷ್ಟು ಅಮಿನ್ ಬೆಂಬಲಿಗರ ಮಾರಣಹೋಮ ನಡೆಯಿತು. ಅಮಿನ್ ಬಿಟ್ಟುಹೋದ ಪರಂಪರೆಯನ್ನೇ ಯಥಾವತ್ತಾಗಿ ಮುಂದುವರಿಸಿದ ಒಬೋಟೆ, ಮೊದಲೇ ಪಾಳುಬಿದ್ದ ಸ್ಮಶಾನದಂತಾಗಿದ್ದ ಉಗಾಂಡಾವನ್ನು ಇನ್ನಷ್ಟು ಹಾಳುಸುರಿವಂತೆ ಮಾಡಿದ್ದೆ ಮಹತ್ಸಾಧನೆಯಾಯ್ತು. 1989ರಲ್ಲಿ ಅಮಿನ್ ಪುನಹ ಗದ್ದುಗೆಯನ್ನೇರುವ ಕನಸಿನ ಬೆನ್ನೇರಿ ಉಗಾಂಡಾಕ್ಕೆ ಮರಳುವ ಪ್ರಯತ್ನ ಮಾಡಿದ. ಆದರೆ ಕಾಂಗೋದ ಜೈರೆಯಲ್ಲಿ ಅವನನ್ನು ಗುರುತು ಹಿಡಿಯಲಾಗಿ, ಅವನ ಕನಸಿನ ರೆಕ್ಕೆ ಕತ್ತರಿಸಿ ಬಿತ್ತು. ಬಂದದಾರಿಗೆ ಸುಂಕವಿಲ್ಲ ಎಂದು ಮತ್ತೆ ಮತ್ತೆ ಸೌದಿಗೆ ಮರಳಿದ. ಅಮಿನ್ ಸೌದಿ ಅರೇಬಿಯಾದಲ್ಲಿ ಇರತೊಡಗಿದ ಬಳಿಕ ಸಾರ್ವಜನಿಕ ಜೀವನದಿಂದ ಸಾಕಷ್ಟು ದೂರವೇ ಉಳಿದ. ಮಾಧ್ಯಮಗಳಿಗೆ ಮುಖ ತೋರಿಸಲೂ ಇಲ್ಲ. ಆದರೂ 1999ರಲ್ಲಿ ಉಗಾಂಡಾದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿನ್ ಹೇಳಿದ್ದು ಇಷ್ಟು… ನಾನು ಈಗ ತುಂಬಾ ಸುಖಿಯಾಗಿ ನೆಮ್ಮದಿಯಿಂದ ಇದ್ದೇನೆ. ನನ್ನ ಅಧಿಕಾರಾವಧಿಗಿಂತ ಹೆಚ್ಚು ಸಂತೃಪ್ತಿಯಿಂದ ಇದ್ದೇನೆ. ಲಕ್ಷಾಂತರ ಜನರ ನೆಮ್ಮದಿಯ ಸಮಾಧಿಯ ಮೇಲೆ ತನ್ನ ಐಷಾರಾಮದ ಸೌಧ ಕಟ್ಟಿಕೊಂಡ ಅಮಿನ್‌ಗೆ ಸಕಲ ಸಂತಸ…. ಅವನ ದುರಾಡಳಿತಕ್ಕೆ ಸಿಕ್ಕಿ ನಲುಗಿದವರ ಪಾಲಿಗೆ ನಿತ್ಯ ಸೂತಕ. 2001ರಲ್ಲಿ ಅಮಿನ್ ಪುನಃ ಉಗಾಂಡಾಕ್ಕೆ ತೆರಳುವ ಇಚ್ಛೆಯನ್ನು ವ್ಯಕ್ತಪಡಿಸಿದ. ಆದರೆ ಉಗಾಂಡಾದ ಸರ್ಕಾರ ಅವನ ಈ ಇಚ್ಛೆಯನ್ನು ಖಂಡತುಂಡವಾಗಿ ಖಂಡಿಸಿತು ಮಾತ್ರವಲ್ಲ ಒಂದು ವೇಳೆ ಅವನು ಉಗಾಂಡಾಕ್ಕೆ ಮರಳಿ ಬಂದರೆ ಅವನ ಹಿಂದಿನ ಎಲ್ಲಾ ಕೃತ್ಯಗಳಿಗೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯನ್ನೊಡ್ಡಿತು. ಹೀಗಾಗಿ ಉಗಾಂಡಾಕ್ಕೆ ತೆರೆಳಿ ಮತ್ತೆ ಮೆರೆಯುವ ಅಮಿನ್ ಹಂಬಲದ ಬಳ್ಳಿ ಚಿಗುರುವ ಮುನ್ನವೇ ಕಮರಿಹೋಯಿತು. ದೇವರು ದೊಡ್ಡವನು ಎಂದು ಉಗಾಂಡಾದ ಜನತೆ ನಿಟ್ಟುಸಿರಾಯಿತು!

 

೨೦೦೩ರಲ್ಲಿ ಅಮಿನ್ ದೇಹಸ್ಥಿತಿ ಬಿಗಡಾಯಿಸಲಾರಂಭಿಸಿತು. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅಮಿನ್ ಸಂಪೂರ್ಣ ಜರ್ಜರಿತನಾಗಿದ್ದ. ಸರಿ ಸುಮಾರು ಮೂರು ತಿಂಗಳುಗಳ ಕಾಲ ಅಸ್ಪತ್ರೆವಾಸವನ್ನು ಮಾಡಿ ತನ್ನ ಕಾಯಿಲೆಯೆ ವಿರುದ್ಧ ಸೆಣಸಿದ ಅಮಿನ್ ಕೊನೆಗೂ ಸೋತು ಕೈಚೆಲ್ಲಿದ. ಎಂಬತ್ತರ ಹೊಸ್ತಿಲಿನಲ್ಲಿದ್ದ ಅಮಿನ್ 2003ನೇ ಇಸವಿಯ ಆಗ್‌ಸ್ಟ್ 16ರಂದು ತನ್ನ ಇಹಲೋಕದ ವ್ಯಾಪಾರವನ್ನು ಮುಗಿಸಿದ. ಈ ಮೂಲಕ ಆಫ್ರಿಕಾದ ಬಹುಸಂಸ್ಕೃತಿಯ ಪರಿಣಾಮವಾಗಿ ಹುಟ್ಟಿಕೊಂಡ ಪರಮ ವಿಲಕ್ಷಣ, ಪರಮಕ್ರೂರಿ, ಆದರೆ ಅಷ್ಟೇ ದೊಡ್ಡ ಕನಸುಗಾರ ನಾಯಕನೊಬ್ಬನ ಯುಗಾಂತ್ಯವಾಯಿತು. ಅವನ ಸಂಬಂಧಿಕರು ಅಮಿನ್ ಶವವನ್ನು ಉಗಾಂಡಾದಲ್ಲಿ ಮಣ್ಣುಮಾಡಲು ಬಯಸಿದ್ದರು. ಆದರೆ ಅಮಿನ್ ಉಗಾಂಡಾಕ್ಕೆ ಮಾಡಿದ ದೊಡ್ಡ ಉಪಕಾರದ(!) ಫಲವನ್ನು ಇನ್ನೂ ಉಣ್ಣುತ್ತಿದ್ದ ಉಗಾಂಡಾದ ಸರ್ಕಾರ ಮತ್ತು ಜನತೆಗೆ ಅಮಿನ್ ತಮ್ಮ ನೆಲದಲ್ಲಿ ಮಣ್ಣಾಗುವುದು ಸುತರಾಂ ಇಷ್ಟವಿರಲಿಲ್ಲ. ಇದರಿಂದಲೇ ಅಮಿನ್ ಕುರಿತು ಅವರಿಗಿದ್ದ ಅಸಮಾಧಾನ ಅಸಹ್ಯ ಭಾವನೆಗಳು ಎಷ್ಟಿದ್ದವೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಒಂದು ವೇಳೆ ಅಮಿನ್ ಶವವನ್ನು ಉಗಾಂಡಾದಲ್ಲೇ ಮಣ್ಣು ಮಾಡಲು ಬಂದರೂ ಅವನಿಗೆ ಯಾವ ವಿಶೇಷ ಮರ್ಯಾದೆಯನ್ನೂ ಕೊಡಮಾಡುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಅವನ ಅಂತ್ಯಸಂಸ್ಕಾರ ಮಾಡೋದಾದ್ರೆ ಮಾಡಿಕೊಳ್ಳಿ ಅಂದಿತು ಅಂದಿನ ಉಗಾಂಡಾದ ಸರ್ಕಾರ. ಹಾಗಾಗಿ ಅನಿವಾರ್ಯವಾಗಿ ಸೌದಿ ಅರೇಬಿಯಾದ ಜೆಡ್ಡಾದ ರುವಾಯಿ ಚಿತಾಗಾರದಲ್ಲಿ ಅಮಿನ್ ದೇಹ ಪಂಚಭೂತಗಳಲ್ಲಿ ಲೀನವಾಯ್ತು.

 

ಆಗಸ್ಟ್ 18ರ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಪ್ರಕಟವಾದ ಅಮಿನ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಲೇಖನವೊಂದು ಹೀಗೆ ಹೇಳಿತ್ತು…  ವಸಾಹತುಶಾಹಿಯ ಪ್ರಭಾವಕ್ಕೆ ಒಳಗಾಗಿ ಬಹುಸಂಸ್ಕೃತಿಯ ಮೂಸೆಯಿಂದ ಹುಟ್ಟಿಬಂದ ಆಫ್ರಿಕಾದ ಬಹುತೇಕ ನಾಯಕರುಗಳಂತೆ ಅಮಿನ್ ಪರಮ ಹುಂಬನಾಗಿದ್ದ. ಅವನ ಮಹತ್ವಾಕಾಂಕ್ಷೆಗೆ ಇಂಬುಕೊಡುವಂತಹ ಯಾವ ಒಳನೋಟಗಳೂ ಇರಲಿಲ್ಲ. ಅದಕ್ಕೆ ಬೇಕಾದ ಶಿಕ್ಷಣವಾಗಲಿ, ದಾರಿ ತೋರಿಸಬಲ್ಲಂತಹ ಮೇಧಾವಿಗಳ ನೆರವಾಗಲಿ ಇಲ್ಲದೇ, ತನ್ನ ಸುತ್ತಲೂ ತನ್ನಂತವರದೇ ಕೋಟೆ ಕಟ್ಟಿಕೊಂಡ ಅಮಿನ್ ಆ ಕೂಪದೊಳಗೇ ಉಳಿದುಬಿಟ್ಟ. ಆ ಮೂಲಕ ಹೊಸಬೆಳಕಿನತ್ತ ಹೊರಳಬೇಕಾಗಿದ್ದ ಉಗಾಂಡಾದ ಭವಿಷ್ಯವನ್ನು ಅಂಧಕಾರದ ಹೊಂಡಕ್ಕಿಳಿಸಿ ತಾನೂ ಅದರಲ್ಲಿ ಬಿದ್ದು ಬಿಟ್ಟ’. ತನ್ನ ಜೋಕರ್‌ನಂತಹ ವರ್ತನೆ ಹಾಗೂ ಹಿಟ್ಲರ್ ಕೃತ್ಯವನ್ನು ಸಮರ್ಥಿಸುವಂತಹ ಅಸಂಬದ್ಧ ಹೇಳಿಕೆಗಳ ಮೂಲಕ ಅಮಿನ್ ಹೊರ ಜಗತ್ತಿನ ಕಣ್ಣಲ್ಲಿಯೂ ಹಗುರಾಗಿಬಿಟ್ಟ. ಸಾಲದ್ದಕ್ಕೆ ಪರಮ ಹುಂಬನಾಗಿದ್ದ ಅಮಿನ್ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸಿದ್ದು ಕೂಡಾ ಅವನ ತನ್ಮೂಲಕ ಉಗಾಂಡಾದ ದುರಂತಕ್ಕೆ ಹೇತುವಯ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ತನಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿ, ಉಗಾಂಡಾದ ಉದ್ಧಾರದ ಮೂಲಕರ್ತೃ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ತನ್ನ ವಿಚಿತ್ರ ವಿಲಕ್ಷಣ ವ್ಯಕ್ತಿತ್ವದ ದೆಸೆಯಿಂದ ದುರಂತ ನಾಯಕನಾಗಿಬಿಟ್ಟ ಅವನ ಬದುಕು ಗೊಂದಲಗಳ ಮೇರುಕೃತಿಯಂತಾಗಿದ್ದು ಮಾತ್ರ ಆಫ್ರಿಕಾದ ಚರಿತ್ರೆಯ ದುರಂತವೇ ಸರಿ.

ಟಿಪ್ಪಣಿಗಳು
 1. shyamasundara adiga ಹೇಳುತ್ತಾರೆ:

  abbaa roma romavu nillutte krouryada parige.

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  vikaas, sandeep
  thanx…

  rajesh,
  aa film rise and fall of idi amin irbekalwa?

  mahesh,
  next mostly intaddE ondu story bareebeku antiddeeni

 3. ರಾಜೇಶ್ ನಾಯ್ಲ ಹೇಳುತ್ತಾರೆ:

  ಕನ್ನಂತ್,

  ಈದಿ ಅಮೀನ್ ಬಗ್ಗೆ ಆತನ ಹೆಸರಲ್ಲೇ ಚಲನಚಿತ್ರವಿದೆ. ಸಾಧ್ಯವಿದ್ದಲ್ಲಿ ನೋಡಿರಿ. ಆತನ ಬಫೂನ್ ವ್ಯಕ್ತಿತ್ವವನ್ನು ಚೆನ್ನಾಗಿ ತೋರಿಸಲಾಗಿದೆ. ತನ್ನ ಸೈನ್ಯದ ಅಧಿಕಾರಿಯ ನೇಮಕದ ಸಲುವಾಗಿ ದೊಡ್ಡ ಸಮಾರಂಭವೊಂದನ್ನು ಅಮೀನ್ ಏರ್ಪಡಿಸಿದ್ದ. ಈ ಸಮಾರಂಭದಲ್ಲಿ ಅಮೀನ್ ತನ್ನ ಮಗನನ್ನೇ ಸೈನ್ಯದ ಅಧಿಕಾರಿಯನ್ನಾಗಿ ನೇಮಿಸಿ ಎಲ್ಲರನ್ನೂ ದಂಗುಬಡಿಸಿದ. ಏಕೆಂದರೆ ಆತನ ಮಗನ ವಯಸ್ಸು ಇನ್ನೂ ಕೇವಲ ಎಂಟು ವರ್ಷವಾಗಿತ್ತು! ಭಾರತೀಯ ಮೂಲದ ಎಲ್ಲರನ್ನು ಅಲ್ಲಿಂದ ಹೊರದಬ್ಬಿ, ಆ ಅಂಗಡಿಗಳನ್ನು ತನ್ನ ಚೇಲಾಗಳಿಗೆ ಆತ ಹಂಚುವ ದೃಶ್ಯವಂತೂ ಹಾಸ್ಯಾಸ್ಪದವಾಗಿದೆ.

  ಉತ್ತಮ ಲೇಖನ ಸರಣಿ

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s