ಇದೊಂದು ಪುಸ್ತಕದ ಬಗ್ಗೆ ಹೇಳಿಕೊಂಡಷ್ಟು ರವಿ ಬೆಳಗೆರೆ ಇನ್ಯಾವ ಪುಸ್ತಕದ ಕುರಿತೂ ಹೇಳಿರಲಿಕ್ಕಿಲ್ಲ. ಈಗ ಕೊಡ್ತೀನಿ… ಆಮೇಲೆ ಕೊಡ್ತೀನಿ ಅಂತ ಸುಮಾರು ಆರೇಳು ವರ್ಷಗಳಲ್ಲಿ ಓದುಗರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಕೊನೆಗೂ ಮೊನ್ನೆ ಗಣರಾಜ್ಯೋತ್ಸವದ ಮುನ್ನಾದಿನ ಗಜಗರ್ಭ ಪ್ರಸವವಾಯ್ತು. ಕಾದು ಕಾದು ಬೇಸರಗೊಂಡಿದ್ದ ಓದುಗ ದೊರೆಗಳ ಮುಖ ಪ್ರಸನ್ನವಾಯ್ತು. ಹಿಂದೊಮ್ಮೆ ತಮ್ಮ ಪತ್ರಿಕೆ ‘ಹಾಯ್ ಬೆಂಗಳೂರ್‘ನಲ್ಲಿ ‘ನೀನಾ ಪಾಕಿಸ್ತಾನ‘ ಮಾಲಿಕೆಯನ್ನು ಬೆಳಗೆರೆ ಶುರು ಮಾಡಿದ್ದರು. ಭುಟ್ಟೋ ಮರಣದಂಡನೆಯ ವಿವರಗಳೊಂದಿಗೆ ಪ್ರಾರಂಭವಾದ ಆ ಮಾಲಿಕೆ ಶುರುವಾದ ಕೆಲವೇ ದಿನಗಳಲ್ಲಿ ನಿಂತೂ ಹೋಗಿತ್ತು… ಓದುಗರ ನಿರೀಕ್ಷೆಯ ಕಾವಿಗೆ ಇನ್ನಷ್ಟು ತುಪ್ಪವನ್ನು ಸುರಿದು. ಇದೀಗ ಅಂತೂ ಇಂತೂ ಪುಸ್ತಕ ಹೊರಬಂದಿದೆ. ಪಾಕಿಸ್ತಾನದ ಪತ್ರಕರ್ತ ಅಮೀರ್ ಮೀರ್ ಕೃತಿಯನ್ನಾಧರಿಸಿದ ಈ ಪುಸ್ತಕ ಜೆಹಾದಿ ಜಗತ್ತಿನ ಒಳಹೊರಗುಗಳನ್ನು, ಧರ್ಮಾಂಧತೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ.
ಇಪ್ಪತ್ತೊಂಬತ್ತು ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ಜೆಹಾದಿಗಳ ಪ್ರಪಂಚದ ಮೂಲೆಮೂಲೆಯತ್ತ ಬೆಳಕು ಚೆಲ್ಲುವ ಈ ಕೃತಿಯ ಆರಂಭದಲ್ಲಿ ಬೆಳಗೆರೆ ಸವಿಸ್ತಾರವಾದ ಮುನ್ನುಡಿಯೊಂದರ ಮೂಲಕ ಧರ್ಮಯುದ್ಧದ ಅಂಗಳಕ್ಕೆ ಓದುಗರನ್ನು ಎಳೆತಂದು ನಿಲ್ಲಿಸುತ್ತಾರೆ. ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ಗೆ ಸಮರ್ಪಿತವಾದ ಈ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಜೆಹಾದಿಗಳ ಕಪಿಮುಷ್ಟಿಯಲ್ಲಿರುವ ಪಾಕಿಸ್ತಾನದ ಚಿತ್ರಣವನ್ನು ಒಂದೊಂದಾಗಿ ಕಟ್ಟಿಕೊಡುತ್ತಾ ಹೋಗುತ್ತದೆ. ಐ.ಎಸ್.ಐ., ಅಲ್-ಕೈದಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯಿಬಾ, ಹರ್ಕತುಲ್ ಮುಜಾಹಿದೀನ್, ಹಿಜ್ಬುಲ್ ಮುಜಾಹಿದೀನ್ ಹೀಗೆ ಬೇರೆಬೇರೆ ಹೆಸರಿನಲ್ಲಿ ಧರ್ಮಯುದ್ಧದ ನೆಪದಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಸಂಘಟನೆಗಳ ಬಗ್ಗೆ ಇಂಚಿಂಚೂ ಬಿಡದೇ ಸಂಗ್ರಹಿಸಿ ಕೊಟ್ಟಿರುವ ಮಾಹಿತಿಯನ್ನು ಓದಿದಾಗ ಇದನ್ನು ಬರೆದು ದಕ್ಕಿಸಿಕೊಂಡಿರುವ ಪಾಕಿಸ್ತಾನಿ ಪತ್ರಕರ್ತನ ಯಮಗುಂಡಿಗೆಯ ಬಗ್ಗೆ ಮೆಚ್ಚುಗೆ ಬೆರೆತ ಆಶ್ಚರ್ಯ ಮೂಡದೇ ಇರದು. ಹಾಗೆಯೇ ಅದನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಬೆಳಗೆರೆಯ ಬರವಣಿಗೆಯ ಚಾತುರ್ಯ, ಶೈಲಿ ಕೂಡಾ ಇಷ್ಟವಾಗುತ್ತದೆ. ನೂರಾರು ಅಪರೂಪದ ಫೋಟೋಗಳು ಪುಟಪುಟಗಳ ಒಟ್ಟಂದಕ್ಕೆ ಇನ್ನಷ್ಟು ಕಳೆಕಟ್ಟುವಂತೆ ಮಾಡಿರುವುದು ಮಾತ್ರವಲ್ಲದೆ, ಅಲ್ಲಿನ ವಿವರಣೆಗೆ ಇನ್ನಷ್ಟು ಇಂಬು ಕೊಡುವಂತಿವೆ.
ಪಾಕಿಸ್ತಾನದ ಮುಸ್ಲಿಂ ಪಂಗಡಗಳ ಒಳಜಗಳಗಳು, ಐ.ಎಸ್.ಐ. ಮತ್ತು ಜೆಹಾದಿಗಳ ಬಿಗಿ ಹಿಡಿತದಲ್ಲಿರುವ ಪಾಕಿ ಸೈನ್ಯ, ಜೆಹಾದಿಗಳ ಹುಟ್ಟಿಗೆ ಅಮೇರಿಕ ಪರೋಕ್ಷವಾಗಿ ಹೇಗೆ ಕಾರಣವಾಯ್ತು, ಅಮೇರಿಕಾದ ಟ್ವಿನ್ ಟವರ್ ದಾಳಿಯ ನಂತರ ಅಮೇರಿಕಾದ ತಾಳಕ್ಕೆ ಅನಿವಾರ್ಯವಾಗಿ ಕುಣಿದ ಮುಷರಫ್ ಜೆಹಾದಿಗಳ ಪ್ರತಿರೋಧಕ್ಕೆ ಸಿಲುಕಿ ಅನುಭವಿಸಿದ ಪ್ರಾಣಭೀತಿ, ಕಂದಹಾರ್ ವಿಮಾನಾಪಹರಣ, ಡೇನಿಯಲ್ ಪರ್ಲ್ ಹತ್ಯೆ… ಹೀಗೆ ಜೆಹಾದಿಗಳ ಲೋಕದೊಳಗೆ ಒಂದು ಸುತ್ತು ತಿರುಗಿದಂತಹ ಅನುಭವವನ್ನು ಪುಸ್ತಕ ನೀಡುವುದಂತೂ ಖಂಡಿತ. ಹೀಗೆ ನಮ್ಮರಿವಿಗೆ ಬರದಂತೆ ಆ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳು, ಆ ಘಟನೆಗಳಿಗೆ ಪ್ರತ್ಯಕ್ಷ-ಪರೋಕ್ಷ ಕಾರಣಗಳು, ಅದರ ಪರಿಣಾಮ ಇವೆಲ್ಲವನ್ನು ಕಣ್ಣಮುಂದೆಯೇ ನಡೆವಂತೆ ಚಿತ್ರಿಸಿದ ಪರಿ ನಿಜಕ್ಕೂ ಶ್ಲಾಘನೀಯ. ಪಾಕಿಸ್ತಾನದ ಮದರಸಾಗಳು ಹೇಗೆ ಜೆಹಾದಿಗಳ ಹುಟ್ಟಿಗೆ ಕಾರಣವಾಗುತ್ತವೆ, ಅಲ್ಲಿ ಎಳೆ ಕಂದಮ್ಮಗಳ ನಿಷ್ಕಲ್ಮಷ ಮನಸ್ಸಿನಲ್ಲಿ ಹೇಗೆ ಧರ್ಮದ್ವೇಷದ ವಿಷಬೀಜವನ್ನು ಬಿತ್ತಲಾಗುತ್ತದೆ, ಮುಂದೆ ಅವರನ್ನು ಹೇಗೆ ಜೀವಂತ ಬಾಂಬ್ ಆಗಿ ತರಬೇತುಗೊಳಿಸಿ ನಮ್ಮ ದೇಶದೊಳಕ್ಕೆ ಬಿಡಲಾಗುತ್ತದೆ ಅನ್ನುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಒಸಾಮ, ದಾವೂದ್, ಮುಲ್ಲಾ ಉಮರ್ ಮೊದಲಾದವರು ಜೆಹಾದಿ ಜಗತ್ತಿನ ಮುಖಂಡರ ಜೊತೆ ಕೈಜೋಡಿಸಿ ಹೇಗೆ ಧರ್ಮದ್ವೇಷದ ಬೆಂಕಿಯಿಂದ ಜಗತ್ತಿನಾದ್ಯಂತ ಭಯೋತ್ಪಾದನೆಯ ಬಿಸಿ ಮುಟ್ಟಿಸುತ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬೇಕಿದ್ದರೆ ನೀನಾ ಪಾಕಿಸ್ತಾನವನ್ನು ಒಮ್ಮೆ ತಪ್ಪದೇ ಓದಿ.
ತನ್ನ ವಿರೋಧಿಗಳನ್ನು ಹಣಿಯಲು ತಾನೇ ವಿಷದ ಹಾಲೂಡಿ ಬೆಳೆಸಿದ ಜೆಹಾದಿಗಳು, ಅಮೇರಿಕವನ್ನೇ ಕಚ್ಚಲು ಮುಂದಾದ ಬಳಿಕವಷ್ಟೇ ಅದು ಹೇಗೆ ಸುಭಗನಂತೆ ಪೋಸು ಕೊಡುತ್ತಾ ಭಯೋತ್ಪಾದನೆ ನಿರ್ಮೂಲನದ ಮಾತಾಡುತ್ತಿದೆಯೋ ನೋಡಿ. ಈಗ ಅವರು ಏನೇ ಬೊಬ್ಬೆ ಹೊಡೆದರೂ, ಪ್ರಾರಂಭದಲ್ಲಿ ರಷ್ಯನ್ನರನ್ನು ಹಣಿಯುವುದಷ್ಟೇ ಪರಮೋದ್ಧೇಶವನ್ನಾಗಿಸಿಕೊಂಡು ಭಯೋತ್ಪಾದನೆಗೆ ತೆರೆಮರೆಯಲ್ಲಿ ಬೆಂಬಲ ನೀಡಿದ್ದು, ಆ ಮೂಲಕ ಸಣ್ಣ ಪ್ರಮಾಣದಲ್ಲಿ ಸಕ್ರಿಯರಾಗಿದ್ದ ಜೆಹಾದಿಗಳು ಈ ಪ್ರಮಾಣದಲ್ಲಿ ಬೆಳೆದು ನಿಲ್ಲುವಲ್ಲಿ ಅಮೇರಿಕ ನಿರ್ವಹಿಸಿದ ಪಾತ್ರ – ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಈಗ ಜೆಹಾದಿಗಳು ಯಾವ ಪರಿ ಬೆಳೆದು ನಿಂತಿದ್ದಾರೆಂದರೆ ಅಮೇರಿಕದ ಮಾತು ಹಾಗಿರಲಿ ಪಾಕಿಸ್ತಾನ ಸರ್ಕಾರದ ಮಾತನ್ನೇ ಅವರು ಕೇಳುವುದಿಲ್ಲ. ಜೆಹಾದಿಗಳು ಈ ಪರಿ ಹೆಚ್ಚಿಕೊಂಡಿರುವುದಕ್ಕೆ ಅಮೇರಿಕಾ ಅವರನ್ನು ಆ ಪರಿ ಹಚ್ಚಿಕೊಂಡಿದ್ದು ಹೇಗೆ ಕಾರಣವಾಯ್ತು ಅನ್ನುವುದರ ಬಗ್ಗೆ ಭರಪೂರ ಮಾಹಿತಿ ಪುಸ್ತಕದುದ್ದಕ್ಕೂ ಸಿಗುತ್ತದೆ. ಪುಸ್ತಕದಲ್ಲಿರುವ ವಿವರಣೆ, ಅದು ಕಟ್ಟಿಕೊಡುವ ಅಪರೂಪದ ಮಾಹಿತಿಗಳ ಅಗಾಧತೆ, ಅಪರೂಪದ ಫೋಟೋಗಳು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಸಂಗ್ರಹಯೋಗ್ಯ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ.
ಆದರೂ ನನ್ನ ಮಟ್ಟಿಗೆ ಹೇಳುವುದಾದರೆ ಈ ಪುಸ್ತಕದಿಂದ ನಾನು ನಿರೀಕ್ಷಿಸಿದ್ದು ನನಗೆ ಸಂಪೂರ್ಣವಾಗಿ ಸಿಗಲಿಲ್ಲವೆಂದೇ ಹೇಳಬೇಕು. ‘ಹಾಯ್‘ನಲ್ಲಿ ಬಂದ ಕೆಲವು ಅಧ್ಯಾಯಗಳನ್ನು ಓದಿದ ನಂತರ ಈ ಪುಸ್ತಕದ ಬಗ್ಗೆ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು. ದೇಶ ವಿಭಜನೆಯ ಬಳಿಕ ಪಾಕಿಸ್ತಾನವೆಂಬ ನಮ್ಮ ನೆರೆಯ ರಾಷ್ಟ್ರದಲ್ಲಾದ ಸಮಗ್ರ ಘಟನಾವಳಿಗಳು, ಭಾರತ ಪಾಕಿಸ್ತಾನ ಯುದ್ಧಗಳ ಇತಿಹಾಸ, ಸೈನ್ಯಾಧಿಕಾರಿಗಳ ಸರ್ವಾಧಿಕಾರದಲ್ಲಿ ಆಳಿಸಿಕೊಂಡ ಪಾಕಿಸ್ತಾನ, ಭಾರತದ ಕುರಿತು ಅಲ್ಲಿನ ಜನಸಾಮಾನ್ಯರಲ್ಲಿ ಇರುವ ನೈಜ ಅಭಿಪ್ರಾಯ, ಆರ್ಥಿಕ ಸಂಕಷ್ಟಗಳ ಅಡಿಯಲ್ಲೂ ಅಡಗದ ಅವರ ರಣೋತ್ಸಾಹ… ಹೀಗೆ ಪಾಕಿಸ್ತಾನದ ಸಮಗ್ರ ಚಿತ್ರಣವೊಂದನ್ನು ನಾನು ನಿರೀಕ್ಷಿಸಿದ್ದೆ. ಬಹುತೇಕ ಜೆಹಾದಿಗಳ ಜಗತ್ತಿನ ಸುತ್ತಲೇ ಸುತ್ತುವ ಪುಸ್ತಕದ ವಿವರಣೆಗಳು ಆ ಜಗತ್ತಿನ ಕರಾಳತೆ, ನಿಗೂಢತೆಯನ್ನು ಸಮಗ್ರವಾಗಿ ಪರಿಚಯಿಸುತ್ತದಾದರೂ ಪುಸ್ತಕದಲ್ಲಿನ ಘಟನೆಗಳು ಪಾಕಿಸ್ತಾನದ ಇತ್ತೀಚಿನ ಇತಿಹಾಸದ ಸುತ್ತಲಷ್ಟೇ ಗಿರಕಿ ಹೊಡೆಯುತ್ತವೆ. ಹಾಗಾಗಿ ಸಮಗ್ರ ಇತಿಹಾಸದ ಚಿತ್ರಣದ ನಿರೀಕ್ಷೆಯಿಟ್ಟುಕೊಂಡ ನನಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಬಹುಶಃ ಅಮಿರ್ ಮೀರ್ ಕೃತಿಯ ವ್ಯಾಪ್ತಿಗಷ್ಟೇ ಪುಸ್ತಕ ಸೀಮಿತಗೊಳ್ಳಬೇಕಾದ ಅನುವಾದಕರ ಅಸಹಾಯಕತೆಯೂ ಇದಕ್ಕೆ ಕಾರಣವಿರಬಹುದು. ಏನೇ ಇರಲಿ, ಪ್ರಸ್ತುತ ಪುಸ್ತಕ ಹೊರತರುತ್ತಿರುವ ಬೆಳಗೆರೆಯ ವೇಗವನ್ನು ಗಮನಿಸಿದರೆ, ಅಂತಹ ಪುಸ್ತಕವೊಂದು ಸಧ್ಯದಲ್ಲೇ ನಮ್ಮ ಕೈ ಸೇರಿದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನುವುದು ನನ್ನ ಆಶಾವಾದ.
ಪುಸ್ತಕ : ನೀನಾ ಪಾಕಿಸ್ತಾನ
ಮೂಲ : ಅಮೀರ್ ಮೀರ್
ಅನುವಾದ : ರವಿ ಬೆಳಗೆರೆ
ಪುಟಗಳು : 277+26
ಪ್ರಕಾಶನ : ಭಾವನಾ ಪ್ರಕಾಶನ
ಬೆಲೆ : 150 ರೂ.
vimarshe chennagi bandide…
hi, Its difficult to get hi bangalore here in Delhi. But I think your writup deserve that. I have already given the link to your blog in my blog http://www.shivaprasadtr.wordpress.com. Please send your mobile no.
The book Subash Savina Sutta is available in all the book stals. Its going for 5th impression now. Also please ready my new book Chandrayaan and give me your feed back.
Don’t forget to give or sms your mobile no.
Thank You
Have a good day.
“Hi Bengaloor” patrikeyalli ee baraha odide Vijay. Super..
ಈ ಲೇಖನ ’ಹಾಯ್ ’ನಲ್ಲಿ ಪ್ರಕಟ ಆಯ್ತಲ್ವ ಕಂಗ್ರಾಟ್ಸ್ !
Dear Vijay Raj, I have republished your writeup about Neena Pakistana in http://www.kannadabook.blogspot.com. I have given the link to your blog there.
I request you to please send any of your writing about the books to http://www.kannadabook.blogspot.com. My e mail: shivaprasadtr@gmail.com
Please SMS your moble No. My No is: 0-99100 13905.
Thank You