Archive for ಮಾರ್ಚ್, 2009

ಅಂತೂ ಇಂತೂ ಕುಂಟುತ್ತಾ, ಎಡವುತ್ತಾ ಬ್ಲಾಗಿಗೆ ನಿನ್ನೆ ಒಂದು ವರ್ಷ ತುಂಬಿತು. ಒಂದು ವರ್ಷದಲ್ಲಿ ಸಾಧಿಸಿದ್ದೇನು ಅಂತ ಲೆಕ್ಕ ಹಾಕೋಕೆ ಹೋದ್ರೆ ವರ್ಷ ತುಂಬಿದ್ದು ಬಿಟ್ರೆ ಬೇರೆ ಎಂತದೂ ಕಾಣ್ತಾ ಇಲ್ಲ. ಕಡಿದು ಕಟ್ಟೆ ಹಾಕಿದ್ದು ಏನೇನೂ ಇಲ್ಲ. ಇನ್ನೂ ಅಂಬೆಗಾಲಿಕ್ಕುತಾ ಈಗಷ್ಟೇ ನಡೆಯಲು ಕಲಿಯುತ್ತಿರುವ ನನ್ನಂತವನನ್ನೂ ಈ ಬ್ಲಾಗ್ ಲೋಕ ಹರಸಿದೆ. ಆದರೂ ಎಲ್ಲಕ್ಕಿಂತ ಹೆಚ್ಚಿನ ಖುಷಿಯ ಸಂಗತಿಯೆಂದರೆ ಅನೇಕರ ಪರಿಚಯ ಮಾಡಿ ಕೊಟ್ಟಿದೆ ಈ ಬ್ಲಾಗ್ ಲೋಕ. ಕೆಲವೊಮ್ಮೆ ಬರೆದ ಬರಹಗಳು ನನಗೆ ತೃಪ್ತಿ ನೀಡಿದೆ. ನೀವು ಸುಳ್ಳು ಸುಳ್ಳೇ ಹೊಗಳಿದ್ದು ಕೇಳಿ ಹಿಗ್ಗಿ ಹೀರೆಕಾಯಿ ಆಗಿದ್ದೂ ಉಂಟು. 365 ದಿನಗಳ ಈ ಪಯಣದಲ್ಲಿ 140ಕ್ಕೂ ಹೆಚ್ಚು ಬರಹಗಳನ್ನು ನನ್ನಂತಹ ಪರಮ ಸೋಂಬೇರಿಯ ಕೈಲಿ ಬರೆಸಿದೆಯೆಂದ್ರೆ ಅದು ಬ್ಲಾಗಮ್ಮನ ಮಹಿಮೆಯೇ ಸರಿ. ಈಗ ಸ್ವಲ್ಪ ಕೆಲಸದ ಒತ್ತಡದ ಕಾರಣದಿಂದ ಪೋಸ್ಟ್ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ… ಹಾಗಂತ ಬರೆಯೋ ಆಸಕ್ತಿ ಒಂದಿನಿತೂ ಕುಂದಿಲ್ಲ ಅನ್ನೋದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬರೆದು ಸಾಬೀತು ಪಡಿಸುವ ‘ಭೀಕರ’ ಕ್ರಮದ ಮೂಲಕ ನಿಮ್ಮ ಮೇಲೆ ಮುರಿದುಕೊಂಡು ಬೀಳಲಿದ್ದೇನೆ. ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಅದು ನನ್ನ ತೊದಲು ನುಡಿಯಂತಹ ಬರವಣಿಗೆಗೆ ಒಂದು ಸ್ಪಷ್ಟ ರೂಪ ಕೊಡುವಂತಹ ಸಲಹೆಯಾಗಿರಲಿ ಅನ್ನೋದು ನನ್ನ ಕೋರಿಕೆ. ಹಾಗಾಗಿ ನಿರ್ಭಿಡೆಯಿಂದ ನಿಮ್ಮ ಅಭಿಪ್ರಾಯ ತಿಳಿಸಿ. ಒಂದೆರಡು ಸಾಲು ಗೀಚಿದರೆ ನಾನು ಧನ್ಯ…ಸಧ್ಯಕ್ಕೆ ಇಷ್ಟು ಸಾಕು. ಮತ್ತೊಮ್ಮೆ ಹೊಸ ಬರಹದೊಂದಿಗೆ ಶೀಘ್ರವೇ ನಿಮ್ಮ ಮುಂದಕ್ಕೆ ಬರಲಿದ್ದೇನೆ… ಹಾಗಾಗಲಿ ಅಂತ ಹಾರೈಸುತ್ತೀರಲ್ಲಾ?

ಇವತ್ತಿನ (ಮಾರ್ಚ್ 9, 2009) ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ನನ್ನ ಕೆಲವು ಹಾಯ್ಕುಗಳು ಬಂದಿವೆ…ನೀವು ನೋಡಿಲ್ಲವಾದ್ರೆ ಇಲ್ಲಿವೆ ನೋಡಿ

ನಿನ್ನ ನೆನಪಿಂದ ಹೊಳೆಯುತ್ತಿದ್ದ
ಕಣ್ಣುಗಳೇ ಈಗ
ನಿನ್ನ ನೆನಪಿಂದಲೇ
ಹೊಳೆಯಾಗುತ್ತಿವೆ
—————————-
ನನ್ನ ತೋಳ ತೆಕ್ಕೆಯೊಳಗೆ
ಹುದುಗಿ ಕುಳಿತಿದ್ದ ಹುಡುಗಿ,
ಯಾವ ತೋಳದ ತೆಕ್ಕೆಯೊಳಗೆ
ಕುಳಿತಿರುವಳೋ ಈಗ ಅಡಗಿ
—————————-
ಅವಳ ಕುರಿತು ಕಟ್ಟಿದ
ಕವನ ಶಾಯರಿಗಳಿಗೆ ಲೆಕ್ಕವೇ ಇಲ್ಲ
ಬೇಸರದ ಸಂಗತಿಯೆಂದರೆ
ಅವಳಿಗೂ ಇದ್ಯಾವುದೂ ಲೆಕ್ಕಕ್ಕೇ ಇಲ್ಲ
——————————-
ಅಂದು ಮಳೆಯಾಗಿ
ಭೋರ್ಗರೆಯದೇ ಹೋದ ತಪ್ಪಿಗೆ,
ಇಂದು ಹನಿಹನಿಯಾಗಿ ಸುರಿದು
ಭಾವಗಳ ತಪ್ಪೊಪ್ಪಿಗೆ
——————————
ನನ್ನ ಹನಿಗಳಿಗೇ
ಯಾವ ಹೆಸರಿನ ಹಂಗೂ ಇಲ್ಲ
ಕಣ್ಣ ಹನಿಗಳಿಗೇಕೆ
ನಿನ್ನ ನೆನಪಿನ ಹಂಗು
——————————
ಮದುವೆ ದಲ್ಲಾಳಿಗಳ ಬಳಿಯಿರೋ
ಜಾತಕ ಫೋಟೋಗಳ ಲಿಸ್ಟಲಿ,
ಸಾಫ್ಟ್ವೇರ್ ತಂತ್ರಜ್ಞರೀಗ
ಕುಳಿತಿದ್ದಾರೆ ಲಾಸ್ಟಲಿ

ಆ ದಿನಗಳು ಚಿತ್ರದ ಸಿಹಿಗಾಳಿ ಹಾಡು ಈ ದಿನಗಳಲ್ಲಿ ಬಿಸಿಗಾಳಿಯಾಗಿ ಬದಲಾಗಿದೆ… J

 

ಬಿಸಿಗಾಳಿ…ಬಿಸಿಗಾಳಿ

ಸುಳಿದಾಡಿದೆ ಮನೆಯೊಳಗೆ…

ಬರಿ ಬಿಸಿಲು… ಬರಿ ಬಿಸಿಲು

ಒದ್ದೆಯಾದೆನು ಬೆವರಿನಲಿ

 

ಬನ್ಯನ್ ಒಂದೇ ಸಾಕು…

ಶರ್ಟು ಯಾತಕೆ ಬೇಕು…

ತಣ್ಣೀರ್ ಫ್ರಿಜ್ಜಲಿ ಐತೆ…

ಕುಡಿಯೋಣಾ… ಬಾ…

 

ಬಿಸಿಗಾಳಿ…ಬಿಸಿಗಾಳಿ…||

 

ಬಾಯಾರಿದಾಗ… ಎಳನೀರು ಕುಡಿಯುವ…

ಆಗೀಗ ಒಂದು… ಲಿಂಬು ಸೋಡ ಕುಡಿಯುವ…

ಪಾರ್ಲರ್‌ಗಳಿಗೆ… ಹೋಟ್ಲುಗಳಿಗೆ… ಹೋಗಿ ಜ್ಯೂಸು ಕುಡಿವ…

ಫ್ಯಾನಿನಡಿಗೆ… ಏ.ಸಿ.ಯೊಳಗೆ ಸ್ವಲ್ಪ ಕೂತು ಬರುವ

 

..ನೇ..ನು… ಮಾಡಿದ್ರೂ ವ್ಯರ್ಥವೇ… ತುಂಬಾ ಸೆಕೆಯಲ್ಲವೇ…

ಕರೆಂಟೇ ಇಲ್ದಿದ್ ಮೇಲೆ… ಫ್ಯಾನು, ಏ.ಸಿ. ಯಾಕೆ?

 

ಬಿಸಿಗಾಳಿ…ಬಿಸಿಗಾಳಿ…||