Archive for ಏಪ್ರಿಲ್ 22, 2009

ಸಾಮಾನ್ಯವಾಗಿ ನಾನು ಪುಸ್ತಕಗಳ ಪರಿಚಯ ಮಾಡುವಾಗ ಒಂದು ನಿಯಮವನ್ನಿಟ್ಟುಕೊಂಡಿದ್ದೆ. ನಾನು ಓದಿದ ಪುಸ್ತಕಗಳಲ್ಲಿ ನನಗಿಷ್ಟವಾದ ಪುಸ್ತಕಗಳನ್ನು ಬೇರೆಯವರೂ ಸಹಾ ಓದಲಿ ಅನ್ನುವ ಉದ್ದೇಶದಿಂದ ಅಂತಹ ಪುಸ್ತಕಗಳ ಬಗ್ಗೆ ಒಂದು ಪರಿಚಯ ನೀಡುವ ಪರಿಪಾಠವನ್ನಿಟ್ಟುಕೊಂಡಿದ್ದೆ. ವಿಮರ್ಶೆಗಿಮರ್ಶೆ ಬರೆಯಲು ನನಗೆ ಬರುವುದಿಲ್ಲ ಅನ್ನುವುದು ನನಗೆ ನೂರಕ್ಕೆ ನೂರು ಖಾತ್ರಿಯಿದೆಯಾದ್ದರಿಂದ, ಪುಸ್ತಕ ಚೆನ್ನಾಗಿದೆಅದು ನನಗೆ ಯಾಕೆ ಇಷ್ಟವಾಯ್ತು ಅನ್ನೋದನ್ನು ಸಂಕ್ಷಿಪ್ತವಾಗಿ ಒಂದೆರಡು ಸಾಲು ಬರೆದುನೀವೂ ಓದಿ ಅನ್ನುವ ತರಹದ ನಾಲ್ಕು ಸಾಲು ಬರೆಯುತ್ತಿದ್ದೆ. ಈಗ ಆ ನಿಯಮವನ್ನು ಮೀರುತ್ತಿದ್ದೇನೆ. ನನಗೆ ತೀರಾ ಹಿಡಿಸದೇ ಹೋದರೂ ಈ ಪುಸ್ತಕದ ಬಗ್ಗೆ ನಾಲ್ಕು ಮಾತು ಬರೆಯಲು ಕುಳಿತಿದ್ದೇನೆ. ಆ ಪುಸ್ತಕವೇ ಪ್ರಕಟವಾಗುವ ಮೊದಲು ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಕಡಲ ತಡಿಯ ತಲ್ಲಣ.

 

ಮೊತ್ತಮೊದಲನೆಯದಾಗಿ ಈ ಪುಸ್ತಕದ ವಿಷಯದಲ್ಲಿ ಹೇಳಬೇಕಾದುದು ಮುದ್ರಣ ದೋಷಗಳ ಕುರಿತು!! ಕನ್ನಡ ಕಾಗುಣಿತ ತೀರಾ ಹೊಸದಾಗಿ ಕಲಿತವರೇನಾದರೂ ಅಪ್ಪಿ ತಪ್ಪಿ ಈ ಪುಸ್ತಕ ಓದಿಬಿಟ್ಟರೆ, ಖಂಡಿತವಾಗಿಯೂ ಅವರಿಗೆ ತಾವು ಕಲಿತ ಅಕ್ಷರಗಳೆಲ್ಲ ಮರೆತು ಹೋಗುವ ಮಟ್ಟಿಗೆ ಅಚ್ಚಿನ ದೋಷಗಳಿವೆ.  ಏಪ್ರಿಲ್ 19ರಂದು ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪುಸ್ತಕ ವಿಮರ್ಶೆಯ ಕಾಲಂನಲ್ಲಿ ಬಂದ ಒಂದು ಸಾಲನ್ನು ಕೊಟ್ಟರೆ ನಿಮಗೆ ಅರ್ಥವಾಗುತ್ತೆ. ಅದರಲ್ಲಿ ಕವನ ಸಂಕಲನವೊಂದರಲ್ಲಿರುವ ಅಕ್ಷರಗಳ ತಪ್ಪನ್ನು ಉಲ್ಲೇಖಿಸುತ್ತ, ಈ ಪುಸ್ತಕದಲ್ಲಿ ಅನೇಕ ಮುದ್ರಣದೋಷಗಳಿದ್ದರೂ ಸಹಾ, ಕಡಲ ತಡಿಯ ತಲ್ಲಣವನ್ನು ಮೀರಿಸುವಷ್ಟಿಲ್ಲ ಅಂದಿದ್ದಾರೆ. ಅಂದರೆ ಮುದ್ರಣ ದೋಷಗಳು ಎಷ್ಟಿದ್ದಾವೋ ಎಂದು ನೀವೆ ಲೆಕ್ಕ ಹಾಕಿ. ( ಅದು ಹತ್ತು ನೂರುಗಳಲ್ಲಿಲ್ಲಸಾವಿರಾರು ಇದೆ). ಇದರಿಂದಾನೇ ಅರ್ಥವಾಗುತ್ತೆ ಎಷ್ಟು ಮುತುವರ್ಜಿಯಿಂದ ಈ ಪುಸ್ತಕಗಳನ್ನು ಹೊರತಂದಿದ್ದಾರೆ ಎಂದು. ಬರೆಯುವಾಗ ಕೆಲವೊಮ್ಮೆ ತಪ್ಪುಗಳಾಗೋದು ಸಹಜ. ನನ್ನ ಬ್ಲಾಗಿನ ಬರಹಗಳಲ್ಲೇ ಲೇಖನವೊಂದರಲ್ಲಿ ತಪ್ಪು ಅಕ್ಷರಗಳು ನುಸುಳುವುದೂ ಉಂಟು.  ತೀರಾ ಆ ಪರಿಯ(ಪುಸ್ತಕ ಪ್ರಕಾಶನದ ಎಲ್ಲಾ ದಾಖಲೆಗಳನ್ನು ಮುರಿಯುವಷ್ಟು) ತಪ್ಪುಗಳಾಗದೇ ಇದ್ದಿದ್ದರೆ ಅದನ್ನು ನಾನೂ ಕೂಡಾ ಮೊದಲಿಗೇ ಪ್ರಸ್ತಾಪಿಸಲು ಬಯಸುತ್ತಿರಲಿಲ್ಲ.

 

ಮುದ್ರಣದೋಷಗಳ ಮಾತು ಪಕ್ಕಕ್ಕಿಟ್ಟು ಪುಸ್ತಕದಲ್ಲಿನ ಲೇಖನಗಳ ವಿಷಯಕ್ಕೆ ಬರೋಣ. ಇಡೀ ಪುಸ್ತಕವು 34 ಬಿಡಿ ಲೇಖನಗಳ ಸಂಗ್ರಹ. ಈ ಲೇಖನಗಳ ವಿಷಯ ವ್ಯಾಪ್ತಿಯು ಕರಾವಳಿಯ ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ, ಪದ್ಧತಿ, ಜನಜೀವನ, ಭಾಷೆ, ಮತ, ಧರ್ಮ, ಇವುಗಳಲ್ಲಾದ ಸ್ಥಿತ್ಯಂತರ, ಕೋಮು ಸಂಘರ್ಷಗಳು, ರಾಜಕೀಯಗಳ ಸುತ್ತ ಸುತ್ತುತ್ತದೆ. ತುಳುನಾಡಿನ ಅನೇಕ ಲೇಖಕರ ಬರಹಗಳು, ಕೆಲವು ಕವನಗಳು, ಕತೆಹೀಗೆ ವಿವಿಧ ಪ್ರಕಾರಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಲ್ಲಿನ ಅನೇಕ ಲೇಖನಗಳು ವಿವಿಧ ಪತ್ರಿಕೆ ಪುಸ್ತಕಗಳಲ್ಲಿ ಈ ಮೊದಲೇ ಪ್ರಕಟವಾಗಿವೆ. ಶಿವರಾಮ ಕಾರಂತರು ಹುಚ್ಚು ಮನಸ್ಸಿನ ಹತ್ತು ಮುಖಗಳು ಪುಸ್ತಕದ ಮುನ್ನುಡಿಯಲ್ಲಿ ಬರೆದ ಸಾಲುಗಳು ಇಲ್ಲಿವೆ. ವಡ್ಡರ್ಸೆ ರಘುರಾಮ ಶೆಟ್ಟರು ದ.. ಜಿಲ್ಲೆ ರಾಜಕೀಯವಾಗಿ ಹೇಗೆ ಮೂಲೆಗುಂಪಾಗುತ್ತಿದೆ ಎಂದು ಎಂಬತ್ತರ ದಶಕದ ಉತ್ತರಾರ್ಧದಲ್ಲಿ ಬರೆದ ಲೇಖನವಿದೆ. ಗಾಯತ್ರಿ ನಾವಡ, ನಾಗವೇಣಿ, ಎಸ್.ಡಿ.ಶೆಟ್ಟಿ, ಎಸ್.ಆರ್.ವಿಜಯಶಂಕರ್, ಪುರುಷೋತ್ತಮ ಬಿಳಿಮಲೆ, ಫಕೀರ್ ಮುಹಮ್ಮದ್ ಕಟ್ಪಾಡಿ, ಬಿ.ಎಂ.ಇಚ್ಲಂಗೋಡು ಮೊದಲಾದರು ತುಳುನಾಡಿನ ಸಂಸ್ಕೃತಿಯ ಮಗ್ಗುಲುಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಶಿಕ್ಷಣ, ಭಾಷೆ, ಬ್ಯಾರಿಗಳು, ವ್ಯಾಪಾರ, ಗೇಣಿವಕ್ಕಲು ವ್ಯವಸ್ಥೆಹೀಗೆ ಜನಜೀವನದ ಅನೇಕ ಮುಖಗಳ ಪರಿಚಯ ನೀಡುವ ಪ್ರಯತ್ನ ಇಲ್ಲಿದೆ. ಜೊತೆಗೆ  ಜಿ.ಎನ್.ಮೋಹನ್, ಕೆ.ವಿ.ತಿರುಮಲೇಶ್, ಯು.ಆರ್.ಅನಂತಮೂರ್ತಿ, ಸಾರಾ ಅಬೂಬಕ್ಕರ್, ವಿ.ಲಕ್ಷ್ಮಿನಾರಾಯಣ, ಶಶಿಧರ ಭಟ್, ಉಷಾ ಕಟ್ಟೆಮನೆ, ಗುಲಾಬಿ ಬಿಳಿಮಲೆ ಮೊದಲಾದವರು ಮಂಗಳೂರು ಉಡುಪಿಯ ಇತ್ತೀಚಿನ ತಲ್ಲಣಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಮಂಡಿಸಿದ್ದಾರೆ.

 

ಇಷ್ಟೆಲ್ಲಾ ಇದ್ದರೂ ಈ ಪುಸ್ತಕ ನನಗಂತೂ ತುಂಬಾ ನಿರಾಸೆಯನ್ನುಂಟು ಮಾಡಿದೆ. ಈ ಪುಸ್ತಕದ ಬಗ್ಗೆ ಇಟ್ಟುಕೊಂಡಿದ್ದ ಅಪಾರ ನಿರೀಕ್ಷೆಗಳು ಈ ನಿರಾಸೆಗೆ ಒಂದು ಕಾರಣವಾಗಿರಬಹುದು. ಆದರೆ ಇನ್ನೂ ಹಲವಾರು ಅಂಶಗಳು ಈ ಪುಸ್ತಕವು ಅಷ್ಟೇನೂ ಸ್ವಾರಸ್ಯಕರವಾಗಿಲ್ಲ ಅನ್ನುವುದನ್ನು ಎತ್ತಿ ತೋರಿಸುತ್ತದೆ.

1. ಮೊದಲನೆಯದಾಗಿ ಇಲ್ಲಿರುವ ವಿಷಯ ವೈವಿಧ್ಯತೆಗಳನ್ನು ಒಂದು ಸೂತ್ರಬದ್ಧ ಅನುಕ್ರಮಣಿಕೆಯಲ್ಲಿ ಪೋಣಿಸಿದ್ದರೆ ಪುಸ್ತಕದ ಧ್ವನಿಗೆ ಇನ್ನಷ್ಟು ಸ್ಪಷ್ಟತೆ ಬರುತ್ತಿತ್ತು. ಬಿಡಿಬಿಡಿಯಾಗಿರುವ ಲೇಖನಗಳನ್ನು ಅವುಗಳ ವಿಷಯಆಶಯಗಳಿಗೆ ತಕ್ಕಂತೆ ವಿಂಗಡಿಸಿ, ಕಾಲಾನುಕ್ರಮದಲ್ಲಿ ಬದಲಾಗುತ್ತಾ ಬಂದ ಕರಾವಳಿಯ ಚಿತ್ರಣ ಕೊಟ್ಟಿದ್ದರೆ ಪುಸ್ತಕದ ಒಟ್ಟು ಸ್ವರೂಪ ಇಷ್ಟು ಅಧ್ವಾನವಾಗಿರುತ್ತಿರಲಿಲ್ಲ

2. ಯಾವುದೇ ಸಮಸ್ಯೆ, ವಿವಾದ, ಘಟನೆವಿಚಾರಗಳನ್ನು ವಿಶ್ಲೇಷಿಸುವಾಗ ಆ ಸಮಸ್ಯೆಯ ಎರಡೂ ಮಗ್ಗುಲುಗಳನ್ನು ಚಿತ್ರಿಸಿ, ಮಂಡಿಸಿದ ವಿಚಾರಕ್ಕೆ ಪೂರಕ ಮಾಹಿತಿಯನ್ನು ಒದಗಿಸಿದಾಗ ಮಾತ್ರ ಓದುಗರಿಗೆ ಸಮಗ್ರ ಚಿತ್ರಣ ಸಿಗುತ್ತದೆ. ಅದರೆ ಇಲ್ಲಿನ ಬಹುಪಾಲು ಲೇಖನಗಳಲ್ಲಿ ಬಿ.ಜೆ.ಪಿ, ಸಂಘ ಪರಿವಾರಗಳಿಂದಾಗಿಯೇ ಈ ಎಲ್ಲಾ ವಿದ್ಯಮಾನಗಳು ನಡೆಯುತ್ತಿವೆ ಅನ್ನುವ ಮೂದಲಿಕೆಯನ್ನೇ ಪ್ರಮುಖವಾಗಿಸಿಕೊಳ್ಳಲಾಗಿದೆ. ಆದರೆ ವಾಸ್ತವದಲ್ಲಿ ಈ ಬೆಂಕಿ ಹೇಗೆ ಹುಟ್ಟಿಕೊಂಡಿತು, ಅದಕ್ಕೆ ಪ್ರತ್ಯಕ್ಷಪರೋಕ್ಷ ಕಾರಣಗಳೇನು ಅನ್ನುವುದನ್ನು, ಸಮಸ್ಯೆಯ ಮೂಲ ಎಲ್ಲಿದೆ ಅನ್ನುವುದನ್ನು ಗಮನಿಸುವ ಗೋಜಿಗೆ ಹೋಗದೆ, ಸಕಲ ಅನಿಷ್ಟಕ್ಕೂ ಶನೀಶ್ವರನೇ ಕಾರಣ ಅನ್ನುವರ್ಥದಲ್ಲಿ ಮಂಡಿಸುವ ವಿಚಾರಧಾರೆಗಳನ್ನು ಎಲ್ಲರೂ ಒಪ್ಪಲು ಸಾಧ್ಯವಾಗದು.

3. ಜಿಲ್ಲೆಯನ್ನು ತೀವ್ರವಾಗಿ ಬಾಧಿಸುತ್ತಿರುವ ಮತಾಂತರದ ಕುರಿತು ಬೆಳಕು ಚೆಲ್ಲುವ ಪ್ರಯತ್ನವನ್ನು ಇಲ್ಲಿನ ಯಾವ ಲೇಖನವೂ ಅಷ್ಟಾಗಿ ಮಾಡದ ಕಾರಣ ಕಡಲ ತಡಿಯ ತಲ್ಲಣವನ್ನು ಗುರುತಿಸುವ ಪುಸ್ತಕದ ಆಶಯವೇ ಪ್ರಶ್ನಾರ್ಥಕವೆನ್ನಿಸುತ್ತದೆ.

4.         ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಮಿಶನನರಿಗಳ ಕೊಡುಗೆಯನ್ನು ಪ್ರಸ್ತಾಪಿಸುತ್ತಾ, ಕ್ರೈಸ್ತರು ಶಾಲೆ ತೆರೆಯದಿದ್ದರೆ ನಾವೆಲ್ಲ ಈಗಲೂ ಸೆಗಣಿ ಹೆಕ್ಕಿಕೊಂಡಿರಬೇಕಾಗಿತ್ತು ಅನ್ನುವ ಮಾತನ್ನು ಪುರುಷೋತ್ತಮ ಬಿಳಿಮಲೆಯವರು ಹೇಳಿದ್ದಾರೆ. ಇಂತಹ ವಿಚಾರಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ನೀವೇ ಯೋಚಿಸಿ.

5. ಬರೀ ಬುದ್ಧಿಜೀವಿಗಳ ಅಭಿಪ್ರಾಯವನ್ನು ತುಂಬುವ ಬದಲು, ಜನಸಾಮಾನ್ಯರ ಅಭಿಪ್ರಾಯಗಳನ್ನು, ಅವರ ಒಡಲಿನ ತಲ್ಲಣಗಳನ್ನು ಧ್ವನಿಸುವ ಒಂದೆರಡು ಲೇಖನಗಳಾದರೂ ಇರದೆ ಇದ್ದರೆ ಕಡಲ ತಡಿಯ ತಲ್ಲಣವನ್ನು ಹೇಗೆ ಗುರುತಿಸಿದಂತಾಗುತ್ತದೆ ಅನ್ನುವುದು ಪ್ರಶ್ನೆ

 

ಒಟ್ಟಾರೆಯಾಗಿ ಹೇಳುವುದಾದರೆ ಈ ಪುಸ್ತಕವು, ಪ್ರಸ್ತುತ ಕರಾವಳಿ ತೀರದಲ್ಲಿನ ಕೋಲಾಹಲಗಳ ಬಗ್ಗೆ ಜನರಲ್ಲಿರುವ ಒಂದು ರೀತಿಯ ಕುತೂಹಲದ ಲಾಭವನ್ನು ಪಡೆಯಲು ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದು ಸಿದ್ಧಪಡಿಸಿದ ಬಾಡಿದ ಹೂಗಳ ಹಾರದಂತಿದೆ. ಅಲ್ಲಲ್ಲಿ ಒಂದೆರಡು ಒಳ್ಳೇ ಹೂವಿದ್ದರೂ ಕೂಡಾ ಮಿಕ್ಕಿದ ಬಾಡಿದ ಹೂಗಳ ದೆಸೆಯಿಂದ ಹಾರದ ಒಟ್ಟಂದ ಅಷ್ಟೇನೂ ಚೆನ್ನಾಗಿಲ್ಲ. ನಾನು ಮೊದಲೇ ಹೇಳಿದಂತೆ ಇಲ್ಲಿರುವ ಬುದ್ಧಿಜೀವಿಗಳ ಲೇಖನದ ವಿಮರ್ಶೆ ಮಾಡುವ ಯಾವ ಕನಿಷ್ಟ ಅರ್ಹತೆಯೂ ನನಗಿಲ್ಲವಾದರೂಪುಸ್ತಕ ಓದಿದ ಮೇಲೆ ನನಗನಿಸಿದ್ದು ಹೇಳಿದ್ದೇನೆಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು.

ಮೊನ್ನೆ ಹನ್ನೆರಡನೇ ತಾರೀಕಿಗೆ ಅಣ್ಣಾವ್ರು ಇಲ್ಲವಾಗಿ ಮೂರು ವರ್ಷ ಕಳೆಯಿತು. ನಾಡಿದ್ದು 24ರಂದು ಅಣ್ಣಾವ್ರ ಜನ್ಮದಿನ. ಈ ಸಂದರ್ಭದಲ್ಲಿ ಅಣ್ಣಾವ್ರು ನಟಿಸಿದ/ಹಾಡಿದ/ನಟಿಸಿಹಾಡಿದ ಹಾಡುಗಳನ್ನು ನೆನಪಿಸಿಕೊಳ್ಳುವ ಮೂಲಕ ಆ ಮಹಾನ್ ಚೇತನಕ್ಕೆ ನಮಿಸುವ ಒಂದು ಪ್ರಯತ್ನ ಇಲ್ಲಿದೆ. ಇಲ್ಲಿರುವ ಹತ್ತು ಪ್ರಶ್ನೆಗಳು ತೀರಾ ಸುಲಭವಾಗಿವೆನಿಮಗೆಲ್ಲರಿಗೂ ಉತ್ತರ ಖಂಡಿತವಾಗಿಯೂ ಗೊತ್ತಿರುತ್ತದೆ

 

1.          ಸಂಪತ್ತಿಗೆ ಸವಾಲು ಹಾಕುತ್ತಾ ಅಣ್ಣಾವ್ರು ಎಮ್ಮೆ ಸವಾರಿ ಮಾಡುತ್ತಿರುವ ಈ ಹಾಡನ್ನು ಎಂದಿಗಾದ್ರೂ ಮರೆಯಲಾದೀತೆ?

2.          ದೇವತಾ ಮನುಷ್ಯ ಇಲ್ಲಿ ಮಗಳು ಸುಧಾರಾಣಿಯೊಂದಿಗೆ ರಾಘವೇಂದ್ರರ ಸ್ತುತಿಸುತ್ತಿದ್ದಾರೆ

3.          ಅಶ್ವಮೇಧ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ರೌದ್ರಾವತಾರಕ್ಕೆ ಮೆರುಗನ್ನಿತ್ತ ಅಣ್ಣಾವ್ರ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು

4.          ಈ ನಾಡಲ್ಲಿ ಹುಟ್ಟಿದ ನಾವು ಧನ್ಯ ಅನ್ನಿಸುವಂತೆ ಮಾಡುವ ಈ ಹಾಡು ನಾಡಗೀತೆಗೆ ಪರ್ಯಾಯವೇನೋ ಅನ್ನಿಸುವಷ್ಟು ಜನಪ್ರಿಯ

5.          ಬಹಾದ್ದೂರ್ ಗಂಡಾಗಿ ಸೊಕ್ಕಿದ ರಾಜಕುಮಾರಿ ಜಯಂತಿಯ ಪೊಗರಿಳಿಸುವ ಈ ಮುತ್ತಿನಂತಹ ಹಾಡು

6.          ಏನೇ ಆದರೂ…. ಸದಾ ನಗುತಾ ನಲಿಯುತ್ತಿರು ಅನ್ನುವ ಅರ್ಥ ಕೊಡುವ ಈ ಗೀತೆ ಜೀವನೋತ್ಸಾಹದ ಪಾಠ ಹೇಳ್ತಾ ಇದೆ

7.          ಗಂಧದ ಗುಡಿಯ ಶೀರ್ಷಿಕೆ ಗೀತೆಯಲ್ಲಿ ಕಾಡಲ್ಲಿ ಪ್ರಾಣಿಗಳ ಜೊತೆ ಖುಷಿಯಿಂದ ನಲಿಯುವ ರಾಜ್ಕುಮಾರ್ ನೋಡೋಕೆ ಎರಡು ಕಣ್ಣು ಸಾಲದು

8.          ಭಕ್ತ ಕುಂಬಾರದಲ್ಲಿ ಭಕ್ತಿಯ ಪರಾಕಾಷ್ಟೆಯಲ್ಲಿ ತನ್ಮಯನಾಗಿ ಮಗುವನ್ನೇ ತುಳಿದರೂ ತಿಳಿಯದಷ್ಟು ಮೈಮರೆವಿನಲ್ಲಿ ಹಾಡುವ ಹಾಡು

9.          ಕುರುಬ ಕಾಳಿಮಾತೆಯ ಅನುಗ್ರಹಕ್ಕೆ ಪಾತ್ರನಾಗಿ ಕಾಳಿದಾಸನಾಗುವ ಮೊದಲು ಕುರಿಗಳನ್ನು ಮೇಯಿಸಲು ಹೊರಡುವಾಗ ಹಾಡುವ ಈ ಹಾಡು ಭಾರೀ ಜನಪ್ರಿಯ

10)         ಅಭಿಮಾನಿ ದೇವರುಗಳೇ ಅಂತಲೇ ವಿನಯದಿಂದ ಜನರನ್ನು ಪ್ರೀತಿಸುವ ಅಣ್ಣವ್ರುಅವರಿಂದಲೇ ನಾನು ಮೇಲೆ ಬಂದೆಅವ್ರು ನನ್ನ ಬೆನ್ನ ಹಿಂದೆ ಇದ್ರೆ ಯಾವ ಹೋರಾಟಕ್ಕೂ ಮುನ್ನುಗ್ಗಲು ತಯಾರು ಅನ್ನುತ್ತಿದ್ದಾರೆ

ಉತ್ತರ ನಿಮಗೆ ಗೊತ್ತಿರೋದೆ ಆಗಿರೋದ್ರಿಂದ… ಎಲ್ರೂ ಉತ್ತರ ಕೊಟ್ಟೇ ಕೊಡ್ತೀರ ಬಿಡಿ…